ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Thimmanna Bhagwath Column: ಕೃತಕ ಬುದ್ಧಿಮತ್ತೆ: ಸಾಕ್ಷ್ಯಾಧಾರ, ಅಪರಾಧ ಮತ್ತು ವ್ಯಾಜ್ಯಗಳ ನಿರ್ವಹಣೆಯ ಸವಾಲುಗಳು

Legal drafting ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮಾದರಿಯಲ್ಲಿರುತ್ತದೆ. ಮೂಲಭೂತ ವಿವರಗಳನ್ನು ಒದಗಿಸಿದರೆ ಕೆಲವು ‘ಎಐ’ ಆಧಾರಿತ ಆಪ್‌ಗಳು ನೋಟಿಸ್, ಪಿಟಿಶನ್, ಕಂಪ್ಲೇಂಟ್, ಅಫಿಡವಿಟ್‌ನಂಥವುಗಳನ್ನು ತಯಾರಿಸುತ್ತವೆ. ಅದರಂತೆ, ಅಡಮಾನ ಪತ್ರ, ಕ್ರಯ ದಸ್ತಾವೇಜಿನಂಥ ದಾಖಲೆಗಳನ್ನು ಕೂಡಾ ತಯಾರಿ ಸುವ ಆಪ್‌ಗಳಿವೆ. ಅಂಥ ಆಪ್‌ಗಳು ವೇಗವಾಗಿ ಕೆಲಸ ಮುಗಿಸಲು ಸಹಾಯಕ. ಅಗತ್ಯ ಕಾಳಜಿಯೊಂದಿಗೆ ಅವುಗಳನ್ನು ಬಳಸಿದರೆ ಅವು ವಕೀಲಿ ವೃತ್ತಿಗೆ ನಿಜಕ್ಕೂ ಸಹಕಾರಿ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

‘ಎಐ’ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ದಿನೇ ದಿನೆ ಹೊಸ ಆವಿಷ್ಕಾರಗಳು, ಸುಧಾರಣೆ ಗಳು ಹೊರ ಬರುತ್ತಿವೆ. ಅಮೆರಿಕ, ಚೀನಾದಂಥ ರಾಷ್ಟ್ರಗಳು ಪೈಪೋಟಿ ಯಲ್ಲಿ ಹೊಸ ಸಾಧನಗಳನ್ನು ಹೊರ ತರುತ್ತಿವೆ. ಅವುಗಳ ಬಳಕೆಗೆ ತಗಲುವ ವೆಚ್ಚ ದ ವಿಷಯದಲ್ಲೂ ಪೈಪೋಟಿಯಿದೆ. ಆದರೆ ನ್ಯಾಯಾಂಗದಂಥ ಸೂಕ್ಷ್ಮ ವಿಷಯ ದಲ್ಲಿ ಯಾವ ಸಾಧನದ ಬಳಕೆ ಹೆಚ್ಚು ಸುರಕ್ಷಿತ ಎಂಬುದನ್ನು ತಜ್ಞರು ಪ್ರಮಾಣೀ ಕರಿಸಬೇಕು. ಇಲ್ಲವಾದಲ್ಲಿ ದತ್ತಾಂಶ ಮತ್ತು ಡಿಜಿಟಲ್ ದಾಖಲೆಗಳ ಸುರಕ್ಷತೆಗೆ ಅಪಾಯವಾಗಬಹುದು.

‘ಕನಕಾಂಗಿ ಕಲ್ಯಾಣ’ (ಮಾಯಾ ಬಝಾರ್) ಎಂಬ ಯಕ್ಷಗಾನ ಪ್ರಸಂಗದಲ್ಲಿ ಘಟೋ ದ್ಗಜನು ಕೌರವರ ದಿಬ್ಬಣವನ್ನು ಕೃತಕವಾಗಿ ನಿರ್ಮಿಸಿದ ಸನ್ನಿವೇಶ ಬರುತ್ತದೆ. ಆ ಎಲ್ಲಾ ಕೃತಕ ವ್ಯಕ್ತಿಗಳಿಗೆ ತಾವು ಯಾರು, ಏನು ಮಾಡಬೇಕಾಗಿದೆ ಎಂಬೆಲ್ಲ ವಿವರಗಳ ತರಬೇತು ನೀಡಲಾಗುತ್ತದೆ. ಹಾಗೆ ತರಬೇತು ಪಡೆದ ‘ಮಾಯಕ’ದ ದಿಬ್ಬಣ, ಬಲರಾಮ ಹಾಗೂ ಇತರರನ್ನು ವಂಚಿಸಿ ಕನಕಾಂಗಿಯನ್ನು ಅಭಿಮನ್ಯುವಿಗೆ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗುತ್ತದೆ.

ಬಹುಶಃ ಕೃತಕ ಬುದ್ಧಿಮತ್ತೆಗೆ ಇದೊಂದು ಸರಳ ಉದಾಹರಣೆಯಾಗಬಹುದು. ಹಾಗಂತ ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಕೃತಕ ಬುದ್ಧಿಮತ್ತೆಯ ಅನ್ವೇಷಣೆಯಾಗಿತ್ತು ಎಂಬುದು ನನ್ನ ವಾದವಲ್ಲ. ಯಾವುದೇ ಕಾರ್ಯ ಮಾಡುವಾಗ ಅಥವಾ ಸಮಸ್ಯೆಯನ್ನು ಬಗೆಹರಿಸುವಾಗ ಮನುಷ್ಯರು ತಾರ್ಕಿಕವಾಗಿ ತಮ್ಮ ವಿವೇಚನೆಯನ್ನು ಉಪಯೋಗಿಸಿ, ಹಲವು ಆಯ್ಕೆಗಳ ನಡುವೆ ಉತ್ತಮವಾದುದನ್ನು ಆಯ್ದು, ಸರಿಯಾದ ನಿರ್ಣಯ ಕೈಗೊಳ್ಳುತ್ತಾರೆ.

ಆ ಪ್ರಕ್ರಿಯೆಯಲ್ಲಿ ಅವರಿಗೆ ತಮ್ಮ ಜ್ಞಾನದ ಜತೆಗೆ ಅನುಭವ ಅಂದರೆ ಹಳೆಯ ನೆನಪು ಸಹಾಯಕವಾಗುತ್ತದೆ. ಅದೇ ಕಾರ್ಯವನ್ನು ಒಂದು ಕಂಪ್ಯೂಟರ್ ಅಥವಾ ಮಷಿನ್ ಮಾಡಿದರೆ, ಕೆಲವು ಸಲ ಮನುಷ್ಯರಿಗಿಂತ ಹೆಚ್ಚು ವೇಗವಾಗಿ, ಸಮರ್ಥವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲದು.

ಹೀಗೆ ಮಾಡುವಲ್ಲಿ ಆ ಮಷಿನ್‌ಗೆ ಮೊದಲೇ ಅಗತ್ಯ ‘ಡೇಟಾ’ ಮತ್ತು ಪ್ರೋಗ್ರಾಮ್ ಮೂಲಕ ತರಬೇತು ನೀಡಿ ಸಿದ್ಧಪಡಿಸಲಾಗುತ್ತದೆ. ಸಾಮಾನ್ಯರ ಭಾಷೆಯಲ್ಲಿ ಅಂಥ ಪ್ರಕ್ರಿಯೆ ಅಥವಾ ವ್ಯವಸ್ಥೆಯನ್ನು ‘ಕೃತಕ ಬುದ್ಧಿಮತ್ತೆ’ (ಎಐ) ಎನ್ನಬಹುದು. ಸಂಕೀರ್ಣವಾದ ತಾಂತ್ರಿಕ ವಿಷಯಗಳು ನನಗೆ ತಿಳಿದಿಲ್ಲ.

ಇದನ್ನೂ ಓದಿ: Thimmanna Bhagwat Column: ವಿಕೆಟ್‌ ತಲುಪದ ಬಾಲ್‌ʼಗಳು: ಲೋಕಸಭೆಯಲ್ಲಿ ವಿರೋಧ ಪಕ್ಷದ ಅಪ್ರಬುದ್ಧ ನಡವಳಿಕೆ

ಅವು ಇಲ್ಲಿ ಅಪ್ರಸ್ತುತ ಕೂಡಾ. ಜಗತ್ತು ಈಗ ಸ್ವಯಂಚಾಲಿತ (Automation) ವ್ಯವಸ್ಥೆ ಯಲ್ಲಿ ಬದುಕುತ್ತಿದೆ. ದಾರಿ ಹುಡುಕಲು ಗೂಗಲ್ ಮ್ಯಾಪ್, ಹಣ ನೀಡಲು ಯುಪಿಐ, ಮಾಹಿತಿಗೆ ಗೂಗಲ್ ಹೀಗೆ ಮಷಿನ್ ಅಥವಾ ವಿದ್ಯುನ್ಮಾನ ಆಧಾರಿತ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದೆ.

ಅಂಥ ಕೆಲವು ಆಪ್‌ಗಳಲ್ಲಿ ‘ಎಐ’ ಆಧಾರಿತ ತಂತ್ರಜ್ಞಾನದ ಬಳಕೆಯಾಗುತ್ತದೆ. ಅಂಥ ವ್ಯವಸ್ಥೆಯಲ್ಲಿಯೇ ಬದುಕುತ್ತಿರುವ ಸಮಾಜದಲ್ಲಿ ಜರುಗುವ ಅಪರಾಧಗಳು ಅಥವಾ ವ್ಯಾಜ್ಯಗಳಲ್ಲಿ ಕೂಡಾ ಡಿಜಿಟಲ್ ಅಥವಾ ‘ಎಐ’ ಸಂಬಂಧಿತ ಅನೇಕ ಅಂಶಗಳು ಭಾಗಿ ಯಾಗುತ್ತವೆ ಅಥವಾ ಕಾರಣವಾಗುತ್ತವೆ. ಈ ಕಾರಣಕ್ಕೇ ಕಾನೂನಿನ ಕ್ಷೇತ್ರದಲ್ಲಿ ಕೂಡಾ ‘ಎಐ’ ಪ್ರವೇಶಿಸಿ ದಿಗಿಣ ಹೊಡೆಯುತ್ತಿದೆ.

ಸಿವಿಲ್ ವ್ಯಾಜ್ಯಗಳು ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ನಿಯೋಜಿಸುವ ಕೆಲವು ಸಾಕ್ಷ್ಯಾ ಧಾರಗಳು ‘ಎಐ’ ಮೂಲಕ ತಯಾರಾದ (AI Generated) ಡಿಜಿಟಲ್ ಎವಿಡೆನ್ಸ್ ಆಗಿರ ಬೇಕಾದದ್ದು ಅನಿವಾರ್ಯ. ಪೂರ್ವ ನಿದರ್ಶನಗಳ ತೀರ್ಪುಗಳು ಮತ್ತು ಕಾನೂನುಗಳ ಕಲಮುಗಳನ್ನು ಹುಡುಕುವುದು, ವಿವಿಧ ದಸ್ತಾವೇಜುಗಳು, ನೋಟಿಸ್‌ಗಳು, ಕೋರ್ಟಿಗೆ ಸಲ್ಲಿಸುವ ಮನವಿ (Petition), ಪ್ರಾರ್ಥನೆ (Pleadings), ವಾದ (Arguments), ಅಫಿಡವಿಟ್‌ ಗಳು ಮುಂತಾದವುಗಳನ್ನು ರಚಿಸುವುದು (Legal drafting), ವಿವಿಧ ಭಾಷೆಗಳಿಂದ ಭಾಷಾಂತರ, ಮುಂತಾದ ವಿಷಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಮೂಲಕ ಕಾನೂನು ವೃತ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ‘ಎಐ’ ಕಾರಣವಾಗುತ್ತಿದೆ.

ಇವೆಲ್ಲಕ್ಕಿಂತ ಮಿಗಿಲಾಗಿ ಅಪರಾಧಗಳ ತನಿಖೆ, ವಿಚಾರಣೆ, ಸಾಕ್ಷ್ಯ ಸಂಗ್ರಹ, ಸಾಕ್ಷ್ಯ-ವಿಶ್ಲೇಷಣೆಯಂಥ ವಿಷಯಗಳಲ್ಲಿ ‘ಎಐ’ ಬಳಕೆ ಕೋರ್ಟುಗಳ ಕಾರ್ಯನಿರ್ವಹಣೆಯಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿದೆ. ಪ್ರತಿವಾದಿಗಳ ವಾದ ಅಥವಾ ನ್ಯಾಯಮೂರ್ತಿಗಳ ತೀರ್ಪು/ಅವಲೋಕನಗಳನ್ನು ವಿಶ್ಲೇಷಿಸುವ ಸಾಫ್ಟ್‌ʼವೇರ್ ಕೂಡಾ ಇದೆ.

AI-Education ok

Legal drafting ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮಾದರಿಯಲ್ಲಿರುತ್ತದೆ. ಮೂಲಭೂತ ವಿವರಗಳನ್ನು ಒದಗಿಸಿದರೆ ಕೆಲವು ‘ಎಐ’ ಆಧಾರಿತ ಆಪ್‌ಗಳು ನೋಟಿಸ್, ಪಿಟಿಶನ್, ಕಂಪ್ಲೇಂಟ್, ಅಫಿಡವಿಟ್‌ನಂಥವುಗಳನ್ನು ತಯಾರಿಸುತ್ತವೆ. ಅದರಂತೆ, ಅಡಮಾನ ಪತ್ರ, ಕ್ರಯ ದಸ್ತಾವೇಜಿನಂಥ ದಾಖಲೆಗಳನ್ನು ಕೂಡಾ ತಯಾರಿ ಸುವ ಆಪ್‌ಗಳಿವೆ. ಅಂಥ ಆಪ್‌ಗಳು ವೇಗವಾಗಿ ಕೆಲಸ ಮುಗಿಸಲು ಸಹಾಯಕ. ಅಗತ್ಯ ಕಾಳಜಿಯೊಂದಿಗೆ ಅವುಗಳನ್ನು ಬಳಸಿದರೆ ಅವು ವಕೀಲಿ ವೃತ್ತಿಗೆ ನಿಜಕ್ಕೂ ಸಹಕಾರಿ.

ಕೋರ್ಟುಗಳಿಗೆ ವಿಚಾರಣೆಗೆ ಸಲ್ಲಿಸಲಾಗುವ ಅರ್ಜಿಗಳ ಪ್ರಾಥಮಿಕ ಪರಿಶೀಲನೆ ಮಾಡಿ ನೋಂದಣಿ ಹಂತದಲ್ಲೇ ಅನರ್ಹ ಪ್ರಕರಣಗಳನ್ನು ತಿರಸ್ಕರಿಸುವ ಮೂಲಕ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿತಗೊಳಿಸಬಹುದು. ಉದಾಹರಣೆಗೆ ಗ್ರಾಹಕ ಕುಂದು ಕೊರತೆ ವ್ಯಾಜ್ಯಗಳಲ್ಲಿ ಸಂಬಂಧಿತ ಉತ್ಪನ್ನ ಅಥವಾ ಸೇವೆಯ ನ್ಯೂನತೆಯು ಮಾದರಿ ಮಟ್ಟಕ್ಕಿಂತ ಕಡಿಮೆ ಇಲ್ಲದಿದ್ದರೆ ಅಥವಾ ಈಗಾಗಲೇ ಇತ್ಯರ್ಥವಾಗಿರುವ ವಿಷಯಗಳಲ್ಲಿ ( Res-judicata) ಪುನಃ ಪ್ರಕರಣ ದಾಖಲಾದರೆ, ಅಂಥ ಪ್ರಕರಣಗಳನ್ನು ‘ಎಐ’ ಪತ್ತೆ ಹಚ್ಚಬಲ್ಲದು.

ಕೋರ್ಟಿನ ಮುಂದೆ ಹಾಜರುಪಡಿಸಲಾದ ಮನವಿ, ಪ್ಲೀಡಿಂಗ್, ಸಾಕ್ಷಿಗಳ ಸವಾಲು ಮತ್ತು ಪಾಟಿ ಸವಾಲುಗಳು, ಎವಿಡೆನ್ಸ್, ವಾದ-ಪ್ರತಿವಾದಗಳು ಮುಂತಾದವುಗಳ ವಿಶ್ಲೇಷಣೆ ಮಾಡಿ ಸರಿಯಾದ ನ್ಯಾಯನಿರ್ಣಯ ನೀಡಲು ಮತ್ತು ಶಿಕ್ಷೆ ವಿಧಿಸುವ ಇಡೀ ಪ್ರಕ್ರಿಯೆ ಯಲ್ಲಿ ‘ಎಐ’ನ ಸಹಾಯ ಪಡೆಯಬಹುದು.

ಎವಿಡೆನ್ಸ್‌ಗಳಲ್ಲಿರಬಹುದಾದ ವಿರೋಧಾಭಾಸಗಳು, ಸಾಕ್ಷಿಗಳ ಸಾಚಾತನ, ಪಾಟಿ ಸವಾಲಿ ನಲ್ಲಿ ಅವರು ಎಡವಿದ ವಿಷಯಗಳನ್ನೆಲ್ಲ ಎತ್ತಿ ಹೇಳಬಹುದು. ಅಪರಾಧ ತನಿಖೆಯ ವಿವಿಧ ಹಂತಗಳಲ್ಲಿ ‘ಎಐ’ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ತಂತ್ರಜ್ಞಾನ ಆಧಾರಿತ ಅಪರಾಧಗಳ (ಉದಾಹರಣೆಗೆ ಸೈಬರ್ ಅಪರಾಧ) ತಡೆ ಮತ್ತು ತನಿಖೆಗೆ ‘ಎಐ’ ತುಂಬಾ ಸಹಾಯಕವಾಗಬಲ್ಲದು. ಒಂದು ಅಪಘಾತ ಅಥವಾ ಅಪರಾಧ ಸಂಭವಿಸಿದಾಗ ಅಂಥ ಘಟನೆಯ ಮರುಸೃಷ್ಟಿಯನ್ನು ‘ಎಐ’ ಮೂಲಕ ಮಾಡಬಹುದು; ನಿಜವಾದ ತಪ್ಪಿತಸ್ಥರನ್ನು ಕಂಡುಹಿಡಿಯುವಲ್ಲಿ ಅದು ಸಹಕಾರಿಯಾಗುತ್ತದೆ.

ತಪ್ಪಿತಸ್ಥ ವ್ಯಕ್ತಿಗಳ ಮುಖ ಮತ್ತು ಧ್ವನಿ ಗುರುತಿಸುವ ಫಾರೆನ್ಸಿಕ್ ಪ್ರಕ್ರಿಯೆಗಳಲ್ಲಿ ಕೂಡಾ ‘ಎಐ’ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳಂಥ ದುಷ್ಕೃತ್ಯಗಳನ್ನು ಮೊದಲೇ ಗುರುತಿಸಲು ಪೂರ್ವಭಾವಿ ವಿಶ್ಲೇಷಣೆಯ ಮೂಲಕ ಕೆಲವು ಕಾಲಘಟ್ಟಗಳಲ್ಲಿ/ ಪ್ರದೇಶಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸುವ ಪ್ರಯತ್ನಗಳಿಗೆ ಕೂಡಾ ‘ಎಐ’ ಅನ್ನು ಬಳಸಲಾಗುತ್ತಿದೆ ಎನ್ನಲಾಗಿದೆ.

Predictive Policing ಎಂಬ ಪ್ರಕ್ರಿಯೆಯ ಮೂಲಕ ಅಪರಾಧಗಳನ್ನು ಎಸಗುವ ಮನಸ್ಥಿತಿ ಯುಳ್ಳ ವ್ಯಕ್ತಿಗಳನ್ನು ಗುರುತಿಸಲು ಕೂಡಾ ‘ಎಐ’ ತಂತ್ರಜ್ಞಾನವನ್ನು ಅಮೆರಿಕದಂಥ ದೇಶಗಳಲ್ಲಿ ಬಳಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ‘ಮೆಂಡೋನ್ ವರ್ಸಸ್ ಕುಶ್ʼಮೇನ್ ಆಂಡ್ ವೇಕ್‌ ಫೀಲ್ಡ್’ ಪ್ರಕರಣದಲ್ಲಿ ಸಾಕ್ಷಿಯೊಬ್ಬರ ವಿಡಿಯೋವನ್ನು ವೀಕ್ಷಿಸಿದ ನ್ಯಾಯಾಧೀಶರಿಗೆ ಆ ಸಾಕ್ಷಿಯ ಅಸಹಜ ವರ್ತನೆ ಕಂಡುಬಂತು. ಅದನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಅದು ‘ಎಐ’ ತಂತ್ರಜ್ಞಾನದ ಮೂಲಕ ತಯಾರಿಸಿದ ನಕಲಿ ವಿಡಿಯೋ (Deep fake) ಎಂದು ತಿಳಿಯಿತು.

ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬಳ ಮಾಜಿ ಪ್ರಿಯಕರ ಆಕೆಯ ಹೆಸರಿನಲ್ಲಿ ನಕಲಿ ಮೆಸೇಜ್‌ಗಳನ್ನು ಸೃಷ್ಟಿಸಿ ಆಕೆಯನ್ನು ಜೈಲುಪಾಲು ಮಾಡಲು ಕಾರಣನಾದ. ಸೂಪರ್ ಮಾರ್ಕೆಟ್ ಒಂದರ ಸರ್ವೆಲನ್ಸ್ ಕೆಮರಾದ ಇಮೇಜ್‌ಗಳನ್ನು ಗ್ರಾಹಕರ ಐಡಿಗಳ ಜತೆ ತಾಳೆಮಾಡಿ ವ್ಯಕ್ತಿಗಳನ್ನು ಗುರುತಿಸುವ ‘ಎಐ’ ಆಧಾರಿತ ವ್ಯವಸ್ಥೆಯ ದೋಷದಿಂದಾಗಿ ನಿರಪರಾಧಿಯೊಬ್ಬನನ್ನು ವಾಚ್ ಕದ್ದ ಆರೋಪದಲ್ಲಿ ಬಂಧಿಸಿದ ಘಟನೆ ನಡೆಯಿತು.

ಇಂಥ Deep fake ವಿಡಿಯೋಗಳು ಮತ್ತು ನಕಲಿ ದಾಖಲೆಗಳು ಅಪಾಯ ಕಾರಿಯಾಗಿದ್ದು ನ್ಯಾಯನಿರ್ಣಯ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು. Deep fake ಆಧಾರಿತ ನಕಲಿ ವಿಡಿಯೋ ಮತ್ತು ದಾಖಲೆಗಳ ಮೂಲಕ ರಾಜಕಾರಣಿ ಗಳನ್ನು, ಹಣವಂತರನ್ನು ಬ್ಲ್ಯಾಕ್‌ಮೇಲ್ ಮಾಡುವ, ತೇಜೋವಧೆ ಮಾಡುವ ಪ್ರಯತ್ನಗಳೂ ನಡೆದಿವೆ.

‘ಎಐ’ ಮೂಲಕ ಧ್ವನಿಯ ಅನುಕರಣೆ ಮತ್ತು ನಕಲಿ ವಿಡಿಯೋಗಳ ಮೂಲಕ ನಕಲಿ ತಪ್ಪೊಪ್ಪಿಗೆ, ಮರಣ ಹೇಳಿಕೆಗಳು ಕೂಡಾ ಈ ತಂತ್ರಜ್ಞಾನದ ದುರುಪಯೋಗದ ಇನ್ನೊಂದು ಮಜಲು. ಆದರೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಆದ ಸುಧಾರಣೆ ಯಿಂದ Deep fake ವಿಡಿಯೋಗಳನ್ನು ಪತ್ತೆ ಹಚ್ಚುವದು ಸಾಧ್ಯ ಮತ್ತು ಅಂಥ ಅನೇಕ ಪ್ರಯತ್ನಗಳನ್ನು ಬಯಲಿಗೆಳೆಯಲಾಗಿದೆ.

AI generated ದಾಖಲೆಗಳಿಗೆ water marking, barcode ಮುಂತಾದವುಗಳನ್ನು ಅಳವಡಿಸುವ ಮೂಲಕ ನೈಜ ಮತ್ತು ನಕಲಿ ದಾಖಲೆಗಳನ್ನು ಪ್ರತ್ಯೇಕಿಸಬಹುದು.

‘ಎಐ’ ತಂತ್ರಜ್ಞಾನದ ಮೂಲಕ ನಿರ್ವಹಿಸುವ ಕಾರ್ಯಗಳಲ್ಲಿ ಘಟಿಸುವ ತಪ್ಪುಗಳಿಗೆ ಉತ್ತರದಾಯಿತ್ವವನ್ನು ನಿರ್ಧರಿಸುವಾಗ ಇಡೀ ಪ್ರಕ್ರಿಯೆಯ ವಿವರಗಳನ್ನು ಕೋರ್ಟು ಪರಿಶೀಲಿಸಬೇಕಾಗುತ್ತದೆ. ಇದು ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೂ ಅನ್ವಯವಾಗುವು ದಾದರೂ ‘ಎಐ’ ತಂತ್ರಜ್ಞಾನದ ವಿಸ್ತೃತ ಬಳಕೆ, ಸಂಕೀರ್ಣತೆಯನ್ನು ಹೆಚ್ಚಿಸುತ್ತದೆ. ಈ ಕುರಿತು ಸೂಕ್ತ ಕಾನೂನು ಮತ್ತು ನಿಯಮಾವಳಿಗಳ ಅಗತ್ಯವಿದೆ.

ಶತಮಾನಗಳಷ್ಟು ಹಳೆಯ Law of Torts ಆಧಾರದಲ್ಲಿ ನ್ಯಾಯನಿರ್ಣಯ ಮಾಡಿದರೆ ನ್ಯಾಯದ ವಿಫಲತೆಗೆ ( mis carriage of justice)ಎಡೆಮಾಡಬಹುದು. ಇಡೀ ಸಮುದಾಯ ವು ‘ಎಐ’ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವಾಗ ಅಂಥ ತಂತ್ರಜ್ಞಾನವೆಂದ ರೇನು, ಅದರ ಸಾಧ್ಯತೆ ಮತ್ತು ಮಿತಿಗಳೇನು, ತಂತ್ರಜ್ಞಾನ ಬಳಸಿ ಹೇಗೆಲ್ಲ ನಕಲಿ ದಾಖಲೆ ಮತ್ತು ಸಾಕ್ಷ್ಯಾಧಾರಗಳನ್ನು ಸೃಷ್ಟಿ ಮಾಡಬಹುದು ಮತ್ತು ಅದರ ಸರಿಯಾದ ಬಳಕೆಯು ನ್ಯಾಯನಿರ್ಣಯಕ್ಕೆ ಹೇಗೆ ಸಹಕಾರಿ ಎಂಬುದರ ಕುರಿತು ನ್ಯಾಯವಾದಿಗಳಿಗೆ ಹಾಗೂ ನ್ಯಾಯಾಧೀಶರಿಗೆ ಕನಿಷ್ಠಜ್ಞಾನದ ಅಗತ್ಯವಿದೆ.

ಆ ಕುರಿತು ತರಬೇತಿ ನೀಡಬೇಕು ಮತ್ತು ಇನ್ನು ಮುಂದೆ ಕಾನೂನು ವಿದ್ಯಾರ್ಥಿಗಳಿಗೆ ‘ಎಐ ತಂತ್ರಜ್ಞಾನ’ವು ಸೈಬರ್ ಕಾಯಿದೆಯ ಪಠ್ಯಕ್ರಮದಲ್ಲಿ ಅಳವಡಿಸಲ್ಪಡಬೇಕು. ಭಾರತೀಯ ಸಾಕ್ಷ್ಯ ಅಧಿನಿಯಮ 2023ರ 63ನೇ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ 4 ಮತ್ತು 79-ಎ ಕಲಮುಗಳ ಪ್ರಕಾರ, ವಿದ್ಯುನ್ಮಾನ ರೂಪದಲ್ಲಿರುವ ದಾಖಲೆಗಳು ನ್ಯಾಯಾ ಲಯದಲ್ಲಿ ಮಾನ್ಯವಾಗುತ್ತವೆ.

63(4)ರ ಪ್ರಕಾರ ಅಂಥ ದಾಖಲೆಯನ್ನು ಪುರಾವೆಯೆಂದು ಹಾಜರುಪಡಿಸುವಾಗ ಒಂದು ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ 79-ಎ ಕಲಮಿನ ಪ್ರಕಾರ ವಿದ್ಯುನ್ಮಾನ ದಾಖಲೆಗಳನ್ನು ಪರಿಶೀಲಿಸಿ ತಜ್ಞ ವರದಿ ನೀಡುವ ಅಧಿಕಾರವುಳ್ಳ Examiner of Electronic Evidence ಅನ್ನು ನೇಮಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ.

ಅಂಥ ಅಧಿಕಾರಿಗಳು ನೀಡುವ ಪ್ರಮಾಣಪತ್ರವು ಕೋರ್ಟಿನಲ್ಲಿ ಹಾಜರುಪಡಿಸುವ ಡಿಜಿಟಲ್ ಎವಿಡೆನ್ಸ್‌ಗಳಿಗೆ ಮಾನ್ಯತೆಯನ್ನು ದೃಢೀಕರಿಸುತ್ತವೆ. ಎಲ್ಲಾ ಹಂತದ ನ್ಯಾಯಾ ಲಯಗಳಲ್ಲಿ ಇಂಥ ತಂತ್ರಜ್ಞಾನ ಆಧಾರಿತ ಸಾಕ್ಷ್ಯಗಳನ್ನು ಪರಿಶೀಲಿಸಲು ಅಗತ್ಯವಿರುವ ಸುಧಾರಿತ ಡಿಜಿಟಲ್ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ಅಲ್ಲದೆ ಫಾರೆನ್ಸಿಕ್ ಪ್ರಯೋಗಾಲಯಗಳಲ್ಲಿ ‘ಎಐ’ ಮತ್ತು ಡಿಜಿಟಲ್ ಎವಿಡೆನ್ಸ್‌ಗಳ ಪರಿಶೀಲನೆ ಮತ್ತು ಪ್ರಮಾಣೀಕರಣದ ವ್ಯವಸ್ಥೆಯನ್ನು ಅಳವಡಿಸಬೇಕು.

‘ಎಐ’ ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ದಿನೇ ದಿನೆ ಹೊಸ ಆವಿಷ್ಕಾರಗಳು, ಸುಧಾರಣೆಗಳು ಹೊರಬರುತ್ತಿವೆ. ಅಮೆರಿಕ, ಚೀನಾದಂಥ ರಾಷ್ಟ್ರಗಳು ಪೈಪೋಟಿಯಲ್ಲಿ ಹೊಸ ಸಾಧನಗಳನ್ನು ಹೊರತರುತ್ತಿವೆ. ಅವುಗಳ ಬಳಕೆಗೆ ತಗಲುವ ವೆಚ್ಚದ ವಿಷಯ ದಲ್ಲೂ ಪೈಪೋಟಿಯಿದೆ. ಆದರೆ ನ್ಯಾಯಾಂಗದಂಥ ಸೂಕ್ಷ್ಮ ವಿಷಯದಲ್ಲಿ ಯಾವ ಸಾಧನದ ಬಳಕೆ ಹೆಚ್ಚು ಸುರಕ್ಷಿತ ಎಂಬುದನ್ನು ತಜ್ಞರು ಪ್ರಮಾಣೀಕರಿಸಬೇಕು.

ಇಲ್ಲವಾದಲ್ಲಿ ದತ್ತಾಂಶ (ಡೇಟಾ) ಮತ್ತು ಡಿಜಿಟಲ್ ದಾಖಲೆಗಳ ಸುರಕ್ಷತೆಗೆ ಅಪಾಯ ವಾಗಬಹುದು. ಡಿಜಿಟಲ್ ಮತ್ತು ‘ಎಐ’ ಆಧಾರಿತ ಎವಿಡೆನ್ಸ್‌ಗಳನ್ನು ಸ್ವೀಕಾರಾರ್ಹವೆಂದು (admissible) ಪರಿಗಣಿಸುವುದು ಈಗ ಅನಿವಾರ್ಯವಾಗಿದೆ. ಬದಲಾವಣೆ ಮತ್ತು ಸುಧಾ ರಣೆಯ ಈ ಯುಗದಲ್ಲಿ ತಂತ್ರಜ್ಞಾನದ ಜತೆಗೆ ವ್ಯವಸ್ಥೆಗಳು ಬದಲಾಗದಿದ್ದರೆ ಅಪರಾಧ ತನಿಖೆ ಮತ್ತು ನ್ಯಾಯಾಂಗ ವ್ಯವಸ್ಥೆ ನಗೆಪಾಟಲಿಗೀಡಾಗಬಹುದು.

ಹೊಸ ತಂತ್ರಜ್ಞಾನಗಳು ಒಡ್ಡಬಹುದಾದ ಸವಾಲುಗಳಿಗೆ ನಮ್ಮ ಪೊಲೀಸ್ ವ್ಯವಸ್ಥೆ ತನ್ನ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನವನ್ನು ಉನ್ನತೀಕರಿಸಿಕೊಳ್ಳುವ ತುರ್ತು ಅವಶ್ಯಕತೆ ಯಿದೆ. ಇಲ್ಲವಾದರೆ ಮೇಕೆಯ ಬಾಯಿಗೆ ಮೊಸರು ಮೆತ್ತಿ ಮಂಗ ಜಿಗಿದಾಡಬಹುದು. ‘ಎಐ’ ಇರಲಿ ಅಥವಾ ಇನ್ಯಾವುದೋ ತಂತ್ರಜ್ಞಾನವಿರಲಿ ಅಗತ್ಯ ಕಾಳಜಿವಹಿಸದಿದ್ದರೆ ಸೃಷ್ಟಿಸಿದ ಶಿವನನ್ನೇ ಸುಡಲು ಬಂದ ಭಸ್ಮಾಸುರನಂತೆ ಅನಿಯಂತ್ರಿತವಾಗುವ ಅಪಾಯವಿದೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)