Kiran Kumar Vivekavamshi Column: ಸಂಘ ಸಂಸ್ಕಾರದಿಂದಲೇ ರಾಜಕಾರಣವನ್ನು ಸಂಸ್ಕರಿಸಿದ ಅಟಲ್ ಜೀ
ನಾನು ವಿರೋಧ ಪಕ್ಷದ ನಾಯಕನಾಗಿದ್ದರೂ ಪ್ರಧಾನಿಯಾಗಿದ್ದ ನರಸಿಂಹರಾವ್ ದೇಶದ ಪರವಾಗಿ ನನ್ನನ್ನು ಜಿನೇವಾಕ್ಕೆ ಕಳುಹಿಸಿದ್ದರು. ನನ್ನನ್ನು ನೋಡಿ ಪಾಕಿಸ್ತಾನಿಯರೇ ಬೆರಗಾಗಿ ದ್ದರು. ಅವರು ಹೇಳಿದರು, ಅರೇ, ಇವರು ಎಲ್ಲಿಂದ ಬಂದರು? ಎಂದು. ಏಕೆಂದರೆ ಅಲ್ಲಿನ ವಿರೋಧ ಪಕ್ಷದ ನಾಯಕರು ಯಾವಾಗಲೂ ಆಳುವ ಸರಕಾರವನ್ನು ಕೆಡಹುವ ಕೆಲಸದಲ್ಲಿ ನಿರತರಾಗಿರುತ್ತಾರೆ, ದೇಶ ಕಟ್ಟುವ ಕೆಲಸದಲ್ಲಿ ಅಲ್ಲ
-
ಧೀರೋದಾತ್ತ
ಕಿರಣಕುಮಾರ ವಿವೇಕವಂಶಿ
ಅವರು ಸಂಘವನ್ನು ಬಳಸಿಕೊಂಡು ರಾಜಕಾರಣಕ್ಕೆ ಬಂದವರಲ್ಲ. ಸಂಘ ಸಂಸ್ಕಾರ ದಿಂದಲೇ ರಾಜಕಾರಣವನ್ನು ಸಂಸ್ಕರಿಸಿದವರು. “ರಾಜಕೀಯದ ಆಟವಾಡಲು ನಾವಿಲ್ಲಿಗೆ ಬಂದಿಲ್ಲ. ಅಧಿಕಾರದ ಆಟ ನಡೆಯುತ್ತಲೇ ಇರುತ್ತದೆ. ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಪಕ್ಷಗಳು ರಚನೆಯಾಗುತ್ತವೆ ಮತ್ತು ನಾಶವಾಗುತ್ತವೆ; ಆದರೆ ಈ ದೇಶ ಉಳಿಯಬೇಕು, ಇಲ್ಲಿನ ಪ್ರಜಾಪ್ರಭುತ್ವವು ಅಮರವಾಗಿರಬೇಕು" ಎಂದು ನುಡಿದು 161 ಸ್ಥಾನಗಳನ್ನು ಗೆದ್ದ ಏಕೈಕ ದೊಡ್ಡ ಪಕ್ಷದ ನಾಯಕನಾಗಿ ಪ್ರಧಾನಿ ಪಟ್ಟಕ್ಕೇರಿದರು ಅವರು.
ಆದರೆ, ಹದಿಮೂರೇ ದಿನಗಳಿಗೆ ರಾಜೀನಾಮೆ ಕೊಟ್ಟು ಹೊರನಡೆಯಬೇಕಾದಾಗ ಯಾವ ರಾಜಕೀಯ ಮೇಲಾಟಗಳನ್ನೂ ಆಡದೇ ಮೋಸದ ರಾಜಕಾರಣಕ್ಕೆ ಧಿಕ್ಕಾರ ಕೂಗಿ ಮುಲಾ ಜಿಲ್ಲದೆ ಸ್ಪಷ್ಟ ಜನಾದೇಶದೊಂದಿಗೆ ಮತ್ತೆ ಬರುತ್ತೇವೆ ಎಂದು ಅಧಿಕಾರದ ಗದ್ದುಗೆಯಿಂದ ಎದ್ದು ನಡೆದಿದ್ದವರು ಅಟಲ್ ಬಿಹಾರಿ ವಾಜಪೇಯಿ. ಈ ತಾಕತ್ತು, ಧೈರ್ಯ, ನಿರ್ಮೋಹಿತ್ವ ಗಳು ಸಂಘದ ನಿತ್ಯಶಾಖೆಯನ್ನು ಬಿಟ್ಟರೆ ಇನ್ನೆಲ್ಲಿಂದ ಬರಲಿಕ್ಕೆ ಸಾಧ್ಯ?
1998ರಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು, “ದೇಶ ಇಂದು ಸಂಕಟಗಳಿಂದ ಬಿದ್ದು ಹೋಗಿದೆ, ಈ ಸಂಕಟವನ್ನು ನಾವು ಹುಟ್ಟು ಹಾಕಿಲ್ಲ. ಯಾವಾಗೆ ಅಗತ್ಯವಿತ್ತೋ ಆವಾಗೆಲ್ಲ ನಾವು ಸರಕಾರಗಳೊಂದಿಗೆ ಸಹಾಯಕ್ಕೆ ನಿಂತಿದ್ದೇವೆ.
ಇದನ್ನೂ ಓದಿ: Kiran Kumar Vivekavamshi Column: ತಾಲಿಬಾನ್‌ಗೆ ಆರೆಸ್ಸೆಸ್ ಹೋಲಿಕೆ: ಹಿಂದೂ ದ್ವೇಷಕ್ಕೆ ಹಿಡಿದ ಕನ್ನಡಿ
ನಾನು ವಿರೋಧ ಪಕ್ಷದ ನಾಯಕನಾಗಿದ್ದರೂ ಪ್ರಧಾನಿಯಾಗಿದ್ದ ನರಸಿಂಹರಾವ್ ದೇಶದ ಪರವಾಗಿ ನನ್ನನ್ನು ಜಿನೇವಾಕ್ಕೆ ಕಳುಹಿಸಿದ್ದರು. ನನ್ನನ್ನು ನೋಡಿ ಪಾಕಿಸ್ತಾನಿಯರೇ ಬೆರಗಾಗಿದ್ದರು. ಅವರು ಹೇಳಿದರು, ಅರೇ, ಇವರು ಎಲ್ಲಿಂದ ಬಂದರು? ಎಂದು. ಏಕೆಂದರೆ ಅಲ್ಲಿನ ವಿರೋಧ ಪಕ್ಷದ ನಾಯಕರು ಯಾವಾಗಲೂ ಆಳುವ ಸರಕಾರವನ್ನು ಕೆಡಹುವ ಕೆಲಸದಲ್ಲಿ ನಿರತರಾಗಿರುತ್ತಾರೆ, ದೇಶ ಕಟ್ಟುವ ಕೆಲಸದಲ್ಲಿ ಅಲ್ಲ. ಆದರೆ, ಇದು ನಮ್ಮ ಪರಂಪರೆಯೂ ಅಲ್ಲ, ನಮ್ಮ ಪ್ರಕೃತಿಯೂ ಅಲ್ಲ. ನಮ್ಮ ಪರಂಪರೆ ಹಾಗೂ ಪ್ರಕೃತಿ ಯಾವಾಗಲೂ ಜೋಡಿಸುವಿಕೆಯಲ್ಲಿ ಮತ್ತು ಕಟ್ಟುವಿಕೆಯಲ್ಲಿದೆ. ಅದು ಹೀಗೇ ಇರಲಿ ಎಂದು ನಾನು ಬಯಸುತ್ತೇನೆ" ಎಂದಿದ್ದರು. ತಮ್ಮ ಈ ಸಂಸ್ಕಾರ ಭರಿತ ಮಾತುಗಳಿಂದ ಸಮಕಾಲೀನ ಭಾರತೀಯ ರಾಜಕಾರಣದ ಕುರಿತು ಭಾವನಾತ್ಮಕವಾಗಿ ಅರಿವು ಮೂಡಿಸಿ, ಪದತ್ಯಾಗ ಮಾಡಿದ ಅಟಲ್ ಜೀ ರಾಜಕೀಯವನ್ನು ಎಂದೂ ಜೂಜಿನಂತೆ ನೋಡಿದವ ರಲ್ಲ. ಅದೊಂದು ರಾಷ್ಟ್ರ ಕಾರ್ಯದ ತಪಸ್ಸು ಎಂದು ಅವರು ಭಾವಿಸಿದ್ದವರು.
ರಾಜಕೀಯಕ್ಕೆ ಬರುವುದರಿಂದ ಅನೇಕರಿಗೆ ಗೌರವ ದೊರಕುತ್ತದೆ; ಆದರೆ ಅಟಲ್ ಜೀ ಅವರಂಥ ಮೇರು ರಾಜನೀತಿಜ್ಞರಿಂದ ರಾಜಕೀಯಕ್ಕೇ ಗೌರವ ಬಂದಿದೆ ಎಂದರೆ ತಪ್ಪಾಗ ಲಿಕ್ಕಿಲ್ಲ. ಅಂಥ ಶ್ರೇಷ್ಠ ರಾಜನೀತಿಯ ದಾರ್ಶನಿಕ, ನವಭಾರತದ ನಿರ್ಮಾತೃ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ರೂಪುಗೊಂಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಎಂಬುದು ವಾಸ್ತವ. ಸಾತ್ವಿಕ ರಾಜಕೀಯದ ಕನಸು ಕಾಣುತ್ತಿರುವ ನಮ್ಮಂಥ ಯುವಪೀಳಿಗೆಗೆ ಇಂದು ಅರ್ಥವಾಗ ಬೇಕಿರುವ ಸಂಗತಿ ಇದುವೇ!
ವ್ಯಕ್ತಿತ್ವ ನಿರ್ಮಾಣದ ಪ್ರಯೋಗಶಾಲೆ: ವಾಜಪೇಯಿಯವರ ಸಾರ್ವಜನಿಕ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ಅವರ ಸ್ವಯಂಸೇವಕ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಮಂತ್ರಿ ಸ್ಥಾನ, ಅಂತಾರಾಷ್ಟ್ರೀಯ ವೇದಿಕೆ, ಸಂಸತ್ತಿನ ಭಾಷಣಗಳು- ಇವೆಲ್ಲಕ್ಕಿಂತ ಮುಂಚೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಾಮಾನ್ಯ ಸ್ವಯಂ ಸೇವಕರಾಗಿದ್ದರು. ಅವರ ನಾಯಕತ್ವದ ಬೇರುಗಳು ಅಧಿಕಾರದಲ್ಲಿರಲಿಲ್ಲ; ಅವು ಸಂಘದ ನಿತ್ಯಶಾಖೆಯ ಮಣ್ಣಿನಲ್ಲಿ ಗಟ್ಟಿಯಾಗಿ ರೂಪು ಗೊಂಡಿದ್ದವು.
ಆರೆಸ್ಸೆಸ್ ಶಾಖೆ ಎಂದರೆ ಕೇವಲ ವ್ಯಾಯಾಮ, ಪ್ರಾರ್ಥನೆ, ಅಮೃತ ವಚನ, ಸಂಚಲನ ಸೇರಿ ಒಂದು ಗಂಟೆಯ ಅವಧಿಯ ಹಲವು ಚಟುವಟಿಕೆಗಳಲ್ಲ; ಅದು ವ್ಯಕ್ತಿತ್ವ ನಿರ್ಮಾಣದ ಪ್ರಯೋಗಶಾಲೆ. ವಾಜಪೇಯಿಯವರು ಈ ಶಾಖೆಯ ಉತ್ಪನ್ನ.
ಗ್ವಾಲಿಯರ್‌ನಲ್ಲಿ ವಿದ್ಯಾರ್ಥಿ ದಿನಗಳಿಂದಲೇ (12ನೇ ವಯಸ್ಸು) ಅಟಲ್ ಜೀ ಸಂಘದ ಶಾಖೆಗೆ ಹೋಗುತ್ತಿದ್ದರು. ಸಂಘವೇ ನಡೆಸುತ್ತಿದ್ದ ಆರ್ಯಕುಮಾರ ಸಭಾದ ಸಕ್ರಿಯ ಸದಸ್ಯರಾಗಿದ್ದರು. ಅಲ್ಲಿ ಕಲಿತ ವ್ಯಾಯಾಮ, ಬೌದ್ಧಿಕ ಪಾಠ, ಸಮೂಹಗೀತೆ, ಮಹಾ ಪುರುಷರ ಜೀವನ ಕಥೆಗಳು, ಶಿಸ್ತು- ಇವುಗಳ ಮೂಲಕ ಅವರ ವ್ಯಕ್ತಿತ್ವ ರೂಪುಗೊಂಡಿತು.
ಇದೇ ವೇಳೆಯಲ್ಲಿ ಅವರು 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ 24 ದಿನಗಳ ಸೆರೆವಾಸವನ್ನು ಅನುಭವಿಸಿದರು. ವಾಜಪೇಯಿಯವರು ದೇಶವೇ ಮೆಚ್ಚುವಂಥ ನಾಯಕರಾಗಲು ಪ್ರೇರಣೆಯಾದದ್ದು ಸಂಘವು ಕಲಿಸಿಕೊಟ್ಟ ‘ನಾಯಕತ್ವವು ಸ್ಥಾನ ದಿಂದಲ್ಲ, ಸೇವೆಯಿಂದ ಹುಟ್ಟುತ್ತದೆ’ ಎಂಬ ಸ್ವಯಂಸೇವಕತ್ವದ ಪಾಠ. ಅದಕ್ಕಾಗಿಯೇ ಅವರು ಅಧಿಕಾರದಲ್ಲಿದ್ದರೂ ಎಂದಿಗೂ ಅಹಂಕಾರಿಗಳಾಗಲಿಲ್ಲ.
ಆರೆಸ್ಸೆಸ್ ತ್ಯಾಗಮಾರ್ಗ: ಅದು 1947, ವಾಜಪೇಯಿ ಯುವಕರಾಗಿದ್ದ ಕಾಲ. ಭಾರತದ ಸ್ವಾತಂತ್ರ್ಯಾ ನಂತರ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗಕ್ಕೆ ಸೇರಿಕೊಂಡ ಅವರು ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೀವನದ ಅತ್ಯಂತ ಅಮೂಲ್ಯ ಸಮಯವನ್ನು ಆರೆಸ್ಸೆಸ್‌ನ ಪ್ರಚಾರಕರಾಗಿ ರಾಷ್ಟ್ರಸೇವೆಗೆ ಅರ್ಪಿಸಿದರು. ಸಂಬಳವಿಲ್ಲ, ಸ್ಥಾನವಿಲ್ಲ, ಖ್ಯಾತಿಯಿಲ್ಲ, ವಿಶ್ರಾಂತಿಯಿಲ್ಲ, ರಜೆಗಳಿಲ್ಲ- ಆದರೆ ಸ್ಪಷ್ಟ ಗುರಿ ಇತ್ತು. ಅದುವೇ ರಾಷ್ಟ್ರಜಾಗೃತಿ.
ಗ್ರಾಮಗಳಿಂದ ನಗರಗಳವರೆಗೆ ಸಂಚರಿಸುತ್ತಾ, ಸಮಾಜದ ನೋವು-ನಂಬಿಕೆಗಳನ್ನು ನೇರವಾಗಿ ನೋಡಿದ ಅನುಭವವೇ, ಮುಂದೆ ಅವರನ್ನು ಭಾರತದ ಬದುಕನ್ನು ಸಂಪೂರ್ಣ ವಾಗಿ ಅರ್ಥಮಾಡಿ ಕೊಂಡ ನಾಯಕನನ್ನಾಗಿ ರೂಪಿಸಿತು. ಕಾರ್ಯಕರ್ತರಿಂದ ಬೌದ್ಧಿಕ ವಲಯದವರೆಗೆ ಅವರು ಸಂಘದ ವಿಚಾರವನ್ನು ತಲುಪಿಸಿದರು. ಈ ಅನುಭವ ಅವರನ್ನು ರಾಷ್ಟ್ರದ ಭೌಗೋಳಿಕ-ಸಾಂಸ್ಕೃತಿಕ ವೈವಿಧ್ಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಮುಂದಾಳುವಾಗಿ ರೂಪಿಸಿತು. ಇದು ಕೇವಲ ಪುಸ್ತಕಗಳನ್ನು ಓದಿದ ಜ್ಞಾನ ವಾಗಿರಲಿಲ್ಲ; ಬದಲಿಗೆ ಸಂಘದ ಮೂಸೆಯ ಮೂಲಕ ದೊರೆತ ಅನುಭವಜನ್ಯ ಲೋಕಜ್ಞಾನವಾಗಿತ್ತು.
ಮೈಗೂಡಿದ ಸ್ವಯಂಸೇವಕ ಸಂಸ್ಕಾರ: 1951ರಲ್ಲಿ, ವಾಜಪೇಯಿಯವರು ಶ್ಯಾಮ್ ಪ್ರಸಾದ್ ಮುಖರ್ಜಿ ನೇತೃತ್ವದಲ್ಲಿ ಭಾರತೀಯ ಜನಸಂಘವನ್ನು ಸೇರಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಯಾದತು ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಎನಿಸಿಕೊಂಡರು. 1968 ರಲ್ಲಿ ದೀನದಯಾಳ್ ಉಪಾಧ್ಯಾಯರ ಮರಣದ ನಂತರ, ಅವರು ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾದರು. ಅವರು ಸುಮಾರು 5 ದಶಕಗಳ ಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, 1957ರಿಂದ 6 ವಿಭಿನ್ನ ಕ್ಷೇತ್ರಗಳನ್ನು ಪ್ರತಿನಿಧಿಸುವ ಮೂಲಕ ಲೋಕ ಸಭೆಗೆ 10 ಬಾರಿ ಆಯ್ಕೆಯಾಗಿದ್ದು ಇತಿಹಾಸ!
ವಾಜಪೇಯಿಯವರು ರಾಜಕಾರಣಕ್ಕೆ ಬಂದಾಗಲೂ ಸಂಘದ ಸಂಸ್ಕಾರವನ್ನು ಕಳೆದು ಕೊಳ್ಳಲಿಲ್ಲ. ಅವರ ರಾಜಕೀಯ ಶೈಲಿ ಸಂಘದ ಸಂಸ್ಕಾರದ ಪ್ರತಿಬಿಂಬವಾಗಿತ್ತು. ಅವರಲ್ಲಿನ ಶಿಸ್ತು ಆಡಳಿತದಲ್ಲಿ ಸ್ಥಿರತೆ ತರಲು, ಸಮೂಹ ಮನೋಭಾವನೆಯು ಮೈತ್ರಿ ಸರಕಾರವನ್ನು ಯಶಸ್ವಿಯಾಗಿ ನಡೆಸಲು ಅನುವುಮಾಡಿಕೊಟ್ಟಿತು.
ಅವರಲ್ಲಿ ಕೆನೆಗಟ್ಟಿದ್ದ ತ್ಯಾಗ ಭಾವನೆಯು ಅಧಿಕಾರದ ಆಸಕ್ತಿಯಿಲ್ಲದ ನಾಯಕತ್ವ ರೂಪಿಸಲು, ರಾಷ್ಟ್ರ ಮೊದಲು ಎನ್ನುವ ಚಿಂತನೆಯು ರಾಜಕೀಯಕ್ಕಿಂತ ಉನ್ನತ ದೃಷ್ಟಿ ಎಂಬ ಭಾವ ಮೊಳೆಯಲು ಕಾರಣವಾದವು. ಸಂಯಮ, ಸೌಜನ್ಯ ಮತ್ತು ನೈತಿಕತೆ ಇವೆಲ್ಲವೂ ಅವರ ಸ್ವಯಂಸೇವಕ ಜೀವನದ ಪ್ರತಿಫಲಗಳೇ.
ಸಂಘದೊಂದಿಗೆ ಮೌನದ ನಿಷ್ಠೆ: 1996ರ ಸಾರ್ವತ್ರಿಕ ಚುನಾವಣೆಗಳ ನಂತರ ಭಾರತದ 10ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು, ಅಲ್ಲಿ ಬಿಜೆಪಿ ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರಕಾರವು ಇತರ ಪಕ್ಷಗಳಿಂದ ಬೆಂಬಲವನ್ನು ಪಡೆಯಲು ಸಾಧ್ಯವಾಗದ ಕಾರಣ ಪ್ರಧಾನಿಯಾಗಿ ಅವರ ಮೊದಲ ಅವಧಿ ಕೇವಲ 13 ದಿನಗಳಿಗೆ ಕೊನೆಗೊಂಡಿತು.
ನಂತರದ ಚುನಾವಣೆಯಲ್ಲಿ, ಬಿಜೆಪಿ ಮತ್ತೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಎನ್‌ಡಿಎ ಸರಕಾರವು ಕೇವಲ ಒಂದು ಮತದಿಂದ ವಿಶ್ವಾಸ ನಿರ್ಣಯವನ್ನು ಕಳೆದುಕೊಂಡ ಕಾರಣ 13 ತಿಂಗಳಿಗೆ ಅಂತ್ಯಗೊಂಡಿತು. 1999 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಲೋಕಸಭೆಯಲ್ಲಿ ಬಹುಮತದ ಸ್ಥಾನಗಳನ್ನು ಗಳಿಸಿತು ಮತ್ತು ವಾಜಪೇಯಿ 3ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿ, ಅವಧಿಯನ್ನು ಪೂರ್ಣಗೊಳಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು!
ಈ ಅವಧಿಯಲ್ಲಿ ವಾಜಪೇಯಿಯವರು ಎಂದಿಗೂ ತಮ್ಮನ್ನು ಸಂಘದ ನಾಯಕ ಎಂದು ಘೋಷಿಸಿಕೊಂಡಿಲ್ಲ. ಅವರು ತಮ್ಮ ನಿಷ್ಠೆಯನ್ನು ಘೋಷಣೆಗಳ ಮೂಲಕ ಅಲ್ಲ, ಆಚರಣೆಗಳ ಮೂಲಕ ತೋರಿಸಿದರು. ಪ್ರಧಾನಿಯಾಗಿದ್ದರೂ ಸಂಘದ ಹಿರಿಯರನ್ನು ಗೌರವದಿಂದ ಕಾಣು ತ್ತಿದ್ದರು, ಅವರ ಮಾರ್ಗದರ್ಶನವನ್ನು ಮೌನವಾಗಿ ಸ್ವೀಕರಿಸು ತ್ತಿದ್ದರು. ಸ್ವಯಂಸೇವಕನ ಇಂಥ ವಿನಯವು ವಾಜಪೇಯಿಯವರಲ್ಲಿತ್ತು. ಸಂಘವನ್ನು ಶಕ್ತಿಕೇಂದ್ರವಲ್ಲ, ಸಂಸ್ಕಾರಕೇಂದ್ರವೆಂದು ನೋಡುವ ದೃಷ್ಟಿ ಅವರನ್ನು ಭಿನ್ನವಾಗಿ ನಿಲ್ಲುವಂತೆ ಮಾಡಿತು.
ದಕ್ಕಿತು ಅಜಾತಶತ್ರು ಪಟ್ಟ: ರಾಜಕಾರಣದಲ್ಲಿ ಶಾಶ್ವತವಾಗಿ ಯಾರಿಗ್ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಆದರೆ, ಇರುವಾಗ ತಾತ್ಕಾಲಿಕ ಶತ್ರುತ್ವವನ್ನು ಅನೇಕರು ಕಟ್ಟಿಕೊಳ್ಳುವುದುಂಟು. ಆದರೆ ವಾಜಪೇಯಿ ಇದಕ್ಕೆ ಹೊರತಾಗಿ ನಿಂತವರು, ಯಾರೊಂದಿಗೂ ವೈರತ್ವವನ್ನು ಕಟ್ಟಿಕೊಳ್ಳದೆ ಎಲ್ಲರೊಂದಿಗೂ ಮಿತ್ರನಂತೆ ಇದ್ದವರು. ವಾಜಪೇಯಿಯವರು ತಮ್ಮ ಬಹುತೇಕ ರಾಜಕೀಯ ಜೀವನವನ್ನು ವಿರೋಧ ಪಕ್ಷದ ಕಳೆದರಾದರೂ ಅವರ ವಿರೋಧ ಎಂದಿಗೂ ವ್ಯಕ್ತಿಕೇಂದ್ರಿತವಾಗಿರಲಿಲ್ಲ, ಅದು ವಿಚಾರ ಕೇಂದ್ರಿತವಾಗಿತ್ತು. ಅವರು ಸದಾ ಹೇಳುತ್ತಿದ್ದರು- “ನಾವು ಸರಕಾರದ ವಿರುದ್ಧವಲ್ಲ; ತಪ್ಪು ನೀತಿಗಳ ವಿರುದ್ಧ" ಎಂದು.
1964ರಲ್ಲಿ ಜವಾಹರಲಾಲ್ ನೆಹರು ಅವರ ನಿಧನದ ನಂತರ, ಭಾರತದ ಪರವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಪ್ರತಿನಿಧಿ ತಂಡವನ್ನು ಕಳುಹಿಸುವ ಪ್ರಶ್ನೆ ಉದ್ಭವಿಸಿತು. ಆ ಸಮಯದಲ್ಲಿ ವಿರೋಧ ಪಕ್ಷದ ಸಂಸದರಾದ ವಾಜಪೇಯಿಯವರನ್ನು ಭಾರತದ ಅಧಿಕೃತ ಪ್ರತಿನಿಧಿ ತಂಡದಲ್ಲಿ ಕಳಿಸಲಾಯಿತು.
ಇದು ರಾಜಕೀಯ ತಂತ್ರವಲ್ಲ, ಬದಲಿಗೆ ವಾಜಪೇಯಿಯವರ ಮೇಲಿದ್ದ ರಾಷ್ಟ್ರೀಯ ನಂಬಿಕೆ. ಅರೆ! ಇದು ಹೇಗೆ ಸಾಧ್ಯ? ಎಂದು ಅನೇಕರಿಗೆ ಅನ್ನಿಸಬಹುದು; ಆದರೆ ಸಂಘದಲ್ಲಿ ಪಳಗಿದವರಿಗೆ ಈ ಗುಣ ರಕ್ತಗತವಾಗಿರುತ್ತದೆ. ಸೈದ್ಧಾಂತಿಕ ಭಿನ್ನತೆಯ ಆಚೆಗೆ ಉತ್ತಮ ಬಾಂಧವ್ಯ ಹೊಂದುವುದು ರಾಷ್ಟ್ರಕಾರ್ಯದ ಅಗತ್ಯ ಸಂಗತಿ. ಹೀಗಾಗಿ ಅಟಲ್ ಜೀ ಅಜಾತಶತ್ರುವಾಗಲು ಮತು, ವೈಚಾರಿಕ ವಿರೋಧಿಗಳೊಂದಿಗೆ ರಾಷ್ಟ್ರ ಕಾರ್ಯಕ್ಕೆ ಅಣಿಯಾಗಲು ಸಾಧ್ಯವಾಯಿತು.
ಸಂಘಜೀವನ ಕಲಿಸಿದ ವಾಕ್ಪಟುತ್ವ: ವಾಜಪೇಯಿ ಅವರು ಭಾಷಣ ಮಾಡಲು ಬರುತ್ತಾರೆ ಎಂದರೆ ಅಲ್ಲಿ ಅಪಾರ ಜನಸ್ತೋಮವೇ ನೆರೆದಿರುತ್ತಿತ್ತು. ಯಾದವರಾವ್ ಜೋಶಿ ಅವರ ನಂತರ ಯಾರಾದರೂ ಪ್ರಚಾರಕರ ಭಾಷಣ ಕೇಳಲು ಬೃಹತ್ ಸಂಖ್ಯೆಯ ಜನ ಸೇರುತ್ತಿದ್ದರು ಎಂದರೆ ಅದು ವಾಜಪೇಯಿ ಅವರದ್ದೇ! ಹರಿವ ನದಿಯಂತೆ ನಿರರ್ಗಳವಾಗಿ ಭೋರ್ಗರೆಯುತ್ತಿದ್ದ ವಾಗ್ಝರಿ, ಮಾತಿನ ನಡುವೆ ಸಿಡಿಲಿನಂತೆ ಮೊಳೆಯುತ್ತಿದ್ದ ಕವಿತೆಗಳು, ಸಮುದ್ರದ ಅಲೆಗಳಂತೆ ಧ್ವನಿಯ ಏರಿಳಿತ, ಅಬ್ಬಬ್ಬಾ!
ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನಿಸುವ ರಾಷ್ಟ್ರಹಿತದ ಭಾಷಣ. ಇದೆಲ್ಲದಕ್ಕೆ ಬುನಾದಿ ಹಾಕಿದ್ದು ಅವರ ಸ್ವಯಂಸೇವಕ ಹಾಗೂ ಪ್ರಚಾರಕ ಜೀವನದ ತರಬೇತಿ.
ನೆಹರು ಮೆಚ್ಚಿದ ಸಂಸದೀಯ ಪಟು: ವಾಜಪೇಯಿಯವರ ಸಂಸದೀಯ ಪಟುತ್ವಕ್ಕೆ ಮೊದಲ ಮೆಚ್ಚುಗೆ ದಕ್ಕಿದ್ದು ಜವಾಹರಲಾಲ್ ನೆಹರುರಿಂದಲೇ! ವಾಜಪೇಯಿ ಅವರ ಭಾಷಣದ ನಂತರ ನೆಹರು, “ಈ ಯುವಕ ಒಂದು ದಿನ ಭಾರತದ ಪ್ರಧಾನಿಯಾಗುತ್ತಾನೆ" ಎಂದಿದ್ದರು. ವಿಚಾರಧಾರೆ ಯಲ್ಲಿ ಭಿನ್ನತೆ ಇದ್ದರೂ, ನೆಹರು ಅವರು ವಾಜಪೇಯಿಯವರ ವಾಕ್-ಸಾಮರ್ಥ್ಯವನ್ನು ಗೌರವಿಸಿದ್ದರು.
ಇದು ಅವರಿಗೆ ದಕ್ಕಿದ ರಾಜಕೀಯ ಸಂಸ್ಕಾರದ ಮೊದಲ ರಾಷ್ಟ್ರೀಯ ಪ್ರಮಾಣಪತ್ರ. ನಂತರದ ದಿನಗಳಲ್ಲಿ ವಾಜಪೇಯಿಯವರು ಹಲವು ಬಾರಿ ವಿರೋಧ ಪಕ್ಷದ ನಾಯಕರಾಗಿ, ಸಂಸತ್ತಿನ ಅಽನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಸಂಸದೀಯ ಪ್ರಶ್ನೆಗಳಿಗೆ ನೀಡುತ್ತಿದ್ದ ಗಂಭೀರ ಉತ್ತರ, ಸುದೀರ್ಘ ಚರ್ಚೆ, ವಿರೋಧ ಪಕ್ಷದ ಮಾತನ್ನು ತಾಳ್ಮೆ ಯಿಂದ ಕೇಳುತ್ತಿದ್ದ ಶೈಲಿ- ಇವೆಲ್ಲವೂ ಅವರ ಗೌರವವನ್ನು ಹೆಚ್ಚಿಸಿತು, ಅವರನ್ನು ಉತ್ತಮ ಸಂಸದೀಯ ವಾಕ್ಪಟುವನ್ನಾಗಿಸಿತು.
ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕೆಲವೇ ಕೆಲವರು ತಮ್ಮ ಭಾಷಣಗಳ ಮೂಲಕ ರಾಜಕೀಯ ವನ್ನು ಸಂಸ್ಕರಿಸಿzರೆ. ಅಂಥ ಅಪರೂಪದ ವರ್ಗಕ್ಕೆ ಸೇರಿದವರು ವಾಜಪೇಯಿ. ಅವರು ಸಂಸತ್ತನ್ನು ಕೇವಲ ಕಾನೂನು ರೂಪಿಸುವ ವೇದಿಕೆಯಾಗಿ ನೋಡಲಿಲ್ಲ; ಬದಲಿಗೆ ಅದನ್ನು ರಾಷ್ಟ್ರದ ಅಂತರಾತ್ಮ ಮಾತನಾಡುವ ಸ್ಥಳವೆಂದು ಭಾವಿಸಿದರು.
ಸ್ವಯಂಸೇವಕತ್ವ ಮತ್ತು ರಾಷ್ಟ್ರ ನಾಯಕತ್ವ: ವಾಜಪೇಯಿಯವರ ಆಡಳಿತದ ಶಾಶ್ವತ ಕೊಡುಗೆ ಎಂದರೆ ಭಾರತದ ಭೌತಿಕ ಏಕತೆ. ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯ ಮೂಲಕ ದೆಹಲಿ-ಮುಂಬೈ-ಚೆನ್ನೈ-ಕೊಲ್ಕತ್ತಾ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಜಾಲ ನಿರ್ಮಾಣ ಆರಂಭವಾಯಿತು. ಇದು ಕೇವಲ ರಸ್ತೆ ನಿರ್ಮಾಣವಾಗಿರಲಿಲ್ಲ, ರೈತನ ಉತ್ಪನ್ನಕ್ಕೆ ಮಾರುಕಟ್ಟೆ, ಯುವಕರಿಗೆ ಉದ್ಯೋಗದ ಅವಕಾಶ, ದೇಶದ ಒಳಗಿನ ವ್ಯಾಪಾರಕ್ಕೆ ವೇಗ ನೀಡುವ ಚಿಂತನೆ ಯಾಗಿತ್ತು. ಸಂಘವು ಕಟ್ಟಿಕೊಟ್ಟ ರಾಷ್ಟ್ರದ ಏಕತೆಯ ಕಲ್ಪನೆ ಇಲ್ಲಿ ಭೌತಿಕ ರೂಪ ಪಡೆದುಕೊಂಡಿತು.
ವಾಜಪೇಯಿಯವರು ಅಭಿವೃದ್ಧಿಯನ್ನು ಕಟ್ಟಡಗಳಲ್ಲಷ್ಟೇ ನೋಡದೆ, ಅದನ್ನು ಮಾನವ ನೊಳಗೆ ಕಂಡರು. 2001ರಲ್ಲಿ ಆರಂಭವಾದ ಸರ್ವಶಿಕ್ಷಾ ಅಭಿಯಾನ ಪ್ರತಿಯೊಬ್ಬ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ತಲುಪಿಸುವ ರಾಷ್ಟ್ರಮಟ್ಟದ ಪ್ರಯತ್ನವಾಗಿತ್ತು. ಇದು ಸಂಘದ ಮೂಲ ಚಿಂತನೆಯಾದ ‘ಸಬಲ ಸಮಾಜವೇ ಸಶಕ್ತ ರಾಷ್ಟ್ರ’ ಎಂಬ ನಂಬಿಕೆಯ ಆಡಳಿತ ರೂಪ ಎನ್ನಬಹುದು.
ವಾಜಪೇಯಿಯವರ ಆರ್ಥಿಕ ದೃಷ್ಟಿಕೋನ ‘ಉಗ್ರ ಲಿಬರಲಿಸಂ’ ಅಲ್ಲ, ಸ್ತಬ್ಧ ಸಮಾಜ ವಾದವೂ ಅಲ್ಲ. ಅವರು ನಂಬಿದ್ದು- ಖಾಸಗಿ ವಲಯಕ್ಕೆ ಅವಕಾಶ, ರಾಷ್ಟ್ರಹಿತಕ್ಕೆ ರಕ್ಷಣಾ ಬೇಲಿ, ಆರ್ಥಿಕ ಶಿಸ್ತು, ಟೆಲಿಕಾಂ ಕ್ಷೇತ್ರದ ಸುಧಾರಣೆ, ಖಜಾನೆ ಶಿಸ್ತಿಗಾಗಿ ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ. ಇವು ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಅಡಿಪಾಯ ಹಾಕಿದವು. ಈ ಸ್ಥಿರತೆಯ ಮೂಲವೇ ಆರೆಸ್ಸೆಸ್ ಹೇಳಿಕೊಟ್ಟ ಆರ್ಥಿಕ ಶುಚಿತ್ವದ ಪಾಠ!
1998ರ ಪೋಖ್ರಾನ್ ಅಣು ಪರೀಕ್ಷೆಗಳು ಭಾರತವನ್ನು ಆತ್ಮವಿಶ್ವಾಸದ ರಾಷ್ಟ್ರವಾಗಿ ಘೋಷಿಸಿದವು. ಇದು ಸಂಘದ ಸ್ವಾಭಿಮಾನಿ ರಾಷ್ಟ್ರ ಕಲ್ಪನೆಯ ರಾಜಕೀಯ ಅಭಿವ್ಯಕ್ತಿ. ವಾಜಪೇಯಿಯವರ ಆಡಳಿತದಲ್ಲಿ ಆರೆಸ್ಸೆಸ್ ನೇರ ನೀತಿ ನಿರ್ದೇಶಕನಾಗಿ ಕೆಲಸ ಮಾಡಲಿಲ್ಲ. ಆದರೆ, ಆಡಳಿತದ ಸ್ವಭಾವವನ್ನು, ನಿರ್ಧಾರಗಳ ನೈತಿಕತೆಯನ್ನು, ರಾಷ್ಟ್ರವೇ ಪ್ರಥಮ ಎನ್ನುವ ದೃಷ್ಟಿಯನ್ನು ನಿರಂತರವಾಗಿ ಅವರಲ್ಲಿ ಪೋಷಿಸಿತು.
ಸಂಘವು ವಾಜಪೇಯಿ ಅವರಿಗೆ ಕೊಟ್ಟದ್ದು ಆeಪತ್ರವಲ್ಲ, ಆತ್ಮವಿಶ್ವಾಸ. ಒಟ್ಟಾರೆ ಹೇಳುವುದಾದರೆ ಸ್ಥಿರ ಸರಕಾರ, ಧೈರ್ಯದ ನಿರ್ಣಯಗಳು (ಪೋಖ್ರಾನ್), ಶಾಂತಿಯ ಪ್ರಯತ್ನ (ಲಾಹೋರ್ ಒಪ್ಪಂದ), ಅಭಿವೃದ್ಧಿಯ ದೃಷ್ಟಿ (ರಸ್ತೆಗಳು, ಸಂಪರ್ಕ) ಮತ್ತು ಸಂವಿಧಾನದ ಗೌರವ- ಇವು ಅವರ ಆಡಳಿತಾವಧಿಯಲ್ಲಿ ಸಂಘದ ಮೌಲ್ಯಗಳಿಗೆ ಸಿಕ್ಕ ರಾಷ್ಟ್ರೀಯ ಮಾನ್ಯತೆ.
ಯುವಕರಿಗೆ ಸಂದೇಶ: ಇಂದಿನ ಯುವಕರು ರಾಜಕಾರಣವನ್ನು ಶೀಘ್ರ ಯಶಸ್ಸಿನ ದಾರಿ ಎಂದು ನೋಡುವಾಗ, ವಾಜಪೇಯಿಯವರ ಸ್ವಯಂಸೇವಕ ಜೀವನವು ‘ಸ್ವಯಂಸೇವಕತ್ವ ಎಂದರೆ ಅಧಿಕಾರಕ್ಕೆ ಮೆಟ್ಟಿಲಲ್ಲ, ಅದು ಜೀವನಪಥ’ ಎಂಬ ಸಂದೇಶವನ್ನು ನಮಗೆ ನೀಡುತ್ತದೆ. ಅವರ ಸ್ವಯಂಸೇವಕ ಜೀವನ ನಮಗೆ ಸುದೀರ್ಘ ಪಾಠವೊಂದನ್ನು ಹೇಳು ತ್ತದೆ. ಅದುವೇ- ‘ಮೊದಲು ಶಿಸ್ತು ಕಲಿಯಿರಿ, ತ್ಯಾಗ ಮತ್ತು ಸೇವೆಯನ್ನು ಆದರ್ಶ ವಾಗಿಸಿ ಕೊಳ್ಳಿ, ರಾಷ್ಟ್ರ ಜೀವನವನ್ನು ಚೆನ್ನಾಗಿ ಅರಿತುಕೊಳ್ಳಿ, ಜೀವನವನ್ನು ಸಮಾಜಕ್ಕಾಗಿ ಸಮಿಧೆಯಂತೆ ದಹಿಸಿ, ಅದಾದ ಬಳಿಕ ಮಾತ್ರ ನಾಯಕತ್ವದ ಕನಸು ಕಾಣಿರಿ’ ಎಂಬುದು. ಸ್ವಯಂಸೇವಕತ್ವವು ವ್ಯಕ್ತಿಯನ್ನು ವಿನಯವಂತನನ್ನಾಗಿಸುತ್ತದೆ,
ರಾಷ್ಟ್ರವನ್ನು ಶ್ರೇಷ್ಠವಾಗಿ ಮಾಡುತ್ತದೆ. ನಿಜವಾದ ನಾಯಕತ್ವವು ಮಾತುಗಳಿಂದಲ್ಲ, ಸಂಸ್ಕಾರ ದಿಂದ ರೂಪುಗೊಳ್ಳುತ್ತದೆ. ಅದಕ್ಕಾಗಿ ವಾಜಪೇಯಿಯವರು ಒಬ್ಬ ಶ್ರೇಷ್ಠ ಪ್ರಧಾನಿಯಷ್ಟೇ ಅಲ್ಲ, ಒಬ್ಬ ಆದರ್ಶ ಸ್ವಯಂಸೇವಕನೂ ಹೌದು. ಅವರು ಕೇವಲ ಶ್ರೇಷ್ಠ ಪ್ರಧಾನಿಯಲ್ಲ, ಆರೆಸ್ಸೆಸ್ ಪ್ರೇರಿತ ರಾಷ್ಟ್ರನಾಯಕತ್ವದ ಜೀವಂತ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ...
(ಲೇಖಕರು ಯುವ ಚಿಂತಕರು)