ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಇತ್ತೀಚೆಗೆ ನಡೆದ ಪಕ್ಷಾಂತರದ ಕೆಲವು ಘಟನೆಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿವೆ. ಪಶ್ಚಿಮ ಬಂಗಾಳ ವಿಧಾನ ಸಭೆಯ ಪ್ರಮುಖ ವಿರೋಧ ಪಕ್ಷವಾದ ಟಿಎಂಸಿಯ ಟಿಕೆಟ್ ಮೂಲಕ ಚುನಾಯಿತರಾದ 80 ಸದಸ್ಯರ ಪೈಕಿ 58 ವಿಧಾನಸಭಾ ಸದಸ್ಯರ ಗುಂಪು ರಿತಭ್ರತ ಮುಖರ್ಜಿ ಯವರನ್ನು ವಿರೋಧ ಪಕ್ಷದ ನಾಯಕನೆಂದು ಆಯ್ಕೆ ಮಾಡಿತಲ್ಲದೆ ತಮ್ಮದೇ ನಿಜವಾದ ಟಿಎಂಸಿ ಪಕ್ಷವೆಂದು ಘೋಷಿಸಿತು. ಅವರ ಮನವಿಯನ್ನು ವಿಧಾನಸಭೆಯ ಸ್ಪೀಕರ್ ರವರು ಮನ್ನಿಸಿದರು.
ಅದೇ ಟಿಎಂಸಿ ಪಕ್ಷದ 29 ಲೋಕಸಭಾ ಸದಸ್ಯರ ಪೈಕಿ 20 ಸದಸ್ಯರು, ತಾವು ಭಾರತೀಯ ರಾಷ್ಟ್ರೀಯ ನಾಗರಿಕ ಪಕ್ಷಕ್ಕೆ ವಿಲೀನಗೊಂಡಿರುವುದಾಗಿ ಘೋಷಿಸಿ ಅದರಂತೆ ಲೋಕಸಭೆಯಲ್ಲಿ ತಮಗೆ ಪ್ರತ್ಯೇಕ ಸ್ಥಾನ ಕಲ್ಪಿಸುವಂತೆ ಸ್ಪೀಕರ್‌ರವರಿಗೆ ವಿನಂತಿಸಿದ್ದಾರೆ. ಆದರೆ ಲೋಕಸಭಾ ಸ್ಪೀಕರ್ ಇನ್ನೂ ತಮ್ಮ ನಿರ್ಣಯವನ್ನು ನೀಡಿಲ್ಲ. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಶಿವಸೇನಾ ಬಣದ 9 ಲೋಕಸಭಾ ಸದಸ್ಯರ ಪೈಕಿ 6 ಸದಸ್ಯರು ಏಕನಾಥ ಶಿಂಧೆ ಶಿವಸೇನಾ ಬಣಕ್ಕೆ ಸೇರ್ಪಡೆ ಯಾಗುವದಾಗಿ ಹೇಳಿಕೆ ನೀಡಿದ್ದಾರೆ. ಈ ಎಲ್ಲ ಘಟನೆಗಳು ಪಕ್ಷಾಂತರ ನಿಷೇಧ ಮಸೂದೆಯ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಆ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
1985ರ ಮೊದಲು ಯಾವದೇ ಕಾನೂನಿನ ಮಿತಿಯಿಲ್ಲದ್ದರಿಂದ ಜನಪ್ರತಿನಿಧಿಗಳ ಪಕ್ಷಾಂತರಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಕುದುರೆ ವ್ಯಾಪಾರದ ಪರಿಣಾಮವಾಗಿ ನಡೆದ ಅಂಥ ಪಕ್ಷಾಂತರ ಗಳಿಂದಾಗಿ ಸರಕಾರಗಳು ಉರುಳಿ ರಾಜಕೀಯ ಅನಿಶ್ಚಿತತೆ ಉಂಟಾದ ಅನೇಕ ಸಂದರ್ಭಗಳನ್ನು ನೋಡಿದ್ದೇವೆ.
1967ರಲ್ಲಿ ಹರ್ಯಾಣದ ಶಾಸಕ ಗಯಾ ಲಾಲ್ ಎಂಬವರು ಒಂದೇ ದಿನ ೩ ಸಲ ತಮ್ಮ ಪಕ್ಷವನ್ನು ಬದಲಿಸಿದ ಘಟನೆಯ ನಂತರ ಪಕ್ಷಾಂತರಕ್ಕೆ ಆಯಾ ರಾಮ್ ಗಯಾ ರಾಮ್ ಎಂಬ ನುಡಿಗಟ್ಟು ಚಾಲ್ತಿಗೆ ಬಂತು. ಕೋತಿಗಳು ಮರದಿಂದ ಮರಕ್ಕೆ ಹಾರುವಂತಿರುವ ಈ ಪ್ರವೃತ್ತಿಗೆ ಬ್ರೇಕ್ ಹಾಕಲು 1985ರಲ್ಲಿ 52ನೇ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರಿಸಲಾದ 10ನೇ ಅನುಬಂಧದಲ್ಲಿ ಪಕ್ಷಾಂತರ ನಿಷೇಧ ಕಾನೂನು ಎಂದು ಕರೆಯಲ್ಪಡುವ ನಿಯಮಗಳನ್ನು ಜಾರಿಗೆ ತರಲಾಯಿತು.
ಇದನ್ನೂ ಓದಿ: Thimmanna Bhagwat Column: ನಮಸ್ತೇ ಸದಾ ವತ್ಸಲೇ ಎನ್ನಲು ನೋಂದಣಿಯಾಗಬೇಕೆ ?
10ನೇ ಅನುಬಂಧದ ಪ್ರಕಾರ ಪಕ್ಷಾಂತರಕ್ಕೆ (Defection) ಸಂಬಂಧಿಸಿದ ನಿಯಮಗಳ ತಾತ್ಪರ್ಯ ಹೀಗಿದೆ: ಯಾವದೇ ಸದನಗಳ ಸದಸ್ಯ ತಾನು ಟಿಕೆಟ್ ಪಡೆದು ಆರಿಸಿ ಬಂದ ಪಕ್ಷವನ್ನು ತ್ಯಜಿಸಿದರೆ, ಅಥವಾ ಆ ಪಕ್ಷದ ಆದೇಶ/ವಿಪ್ʼಗಳನ್ನು ಉಲ್ಲಂಘಿಸಿ ಸದನದಲ್ಲಿ ಮತದಾನ ಮಾಡಿದರೆ ಅಥವಾ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಆತನ ಸದನದ ಸದಸ್ಯತ್ವ ರದ್ದಾಗುತ್ತದೆ.
4ನೇ ಕಲಮಿನ ಪ್ರಕಾರ, ‘ಮೂಲ’ ( Original ) ರಾಜಕೀಯ ಪಕ್ಷವೊಂದು ತನ್ನ ಸಂಸದೀಯ ಅಥವಾ ಶಾಸಕಾಂಗ ಪಕ್ಷದ ಬಲದ ಮೂರನೇ ಎರಡರಷ್ಟು ಸದಸ್ಯರ ಒಪ್ಪಿಗೆಯೊಂದಿಗೆ ಯಾವದೇ ಇತರ ಪಕ್ಷಕ್ಕೆ ವಿಲೀನವಾದಾಗ, ಹಾಗೆ ವಿಲೀನವಾದ ಪಕ್ಷದ ಸದಸ್ಯನೆಂದು ಆತ ಮತ್ತು ಇತರ ಸದಸ್ಯರು ಹೇಳಿಕೊಂಡರೆ ಆಗ ಅವನ ಸದಸ್ಯತ್ವ ರದ್ದಾಗುವದಿಲ್ಲ.
ಹಾಗೆ ಆದ ವಿಲೀನ ಪ್ರಕ್ರಿಯೆಯಲ್ಲಿ ಅಂಥ ಮೂಲ ರಾಜಕೀಯ ಪಕ್ಷದ ಯಾವದೇ ಸದಸ್ಯ ಅಂಥ ವಿಲೀನವನ್ನು ಒಪ್ಪಿಕೊಳ್ಳದೆ ತಾನು ಪ್ರತ್ಯೇಕವಾಗಿ ಉಳಿಯಬಯಸಿದರೆ ಅವನು ಅಥವಾ ಅಂಥ ಗುಂಪು ಅವನ ಅಥವಾ ಅಂಥ ಗುಂಪಿನ ರಾಜಕೀಯ ಪಕ್ಷವಾಗಿ ಪರಿಗಣಿಸಲ್ಪಡುತ್ತದೆ ಮತ್ತು ಆ ಕಾರಣಕ್ಕೆ ಅಂಥ ಸದಸ್ಯರ ಸದಸ್ಯತ್ವ ರದ್ದಾಗುವದಿಲ್ಲ.
‘ಸಂಸದೀಯ ಅಥವಾ ಶಾಸಕಾಂಗ ಪಕ್ಷದ 1/3ರಷ್ಟು ಸದಸ್ಯರು Split ಅಥವಾ ವಿಭಜನೆ ಗೊಂಡರೆ ಅವರ ಸದಸ್ಯತ್ವ ರದ್ದಾಗುವದಿಲ್ಲ’ ಎಂದು ಹಿಂದೆ ಇದ್ದ ನಿಯಮವನ್ನು 2003ರ 91ನೇ ಸಂವಿಧಾನ ತಿದ್ದುಪಡಿಯ ಮೂಲಕ ತೆಗೆದುಹಾಕಲಾಗಿದೆ. ಸದಸ್ಯತ್ವ ರದ್ದತಿ ಅಥವಾ ಪಕ್ಷಾಂತರ ಕುರಿತು ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಆಯಾ ಸದನದ ಸ್ಪೀಕರ್ ಅಥವಾ ಅಧ್ಯಕ್ಷರಿಗೆ ಇರುತ್ತದೆ. ಆದರೆ ಸ್ಪೀಕರ್ರವರ ಅಂಥ ನಿರ್ಣಯಗಳು ನ್ಯಾಯಾಂಗ ವಿಮರ್ಶೆಗೆ (Judicial Review ) ಒಳಪಡುತ್ತವೆ.
ಪಕ್ಷಾಂತರ ನಿಷೇಧದ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಡೆದ ಶಿವಸೇನೆ ಪ್ರಕರಣ ಮಹತ್ವ ದ್ದಾಗುತ್ತದೆ. ಜೂನ್ 2022ರಲ್ಲಿ ಶಿವಸೇನೆ ಪಕ್ಷದಲ್ಲಾದ ಬಿರುಕಿನ ನಂತರ ಏಕನಾಥ್ ಶಿಂಧೆ ಬಣದ ಸದಸ್ಯರ ಸದಸ್ಯತ್ವ ರದ್ದತಿಗೆ ಉದ್ಧವ್ ಠಾಕ್ರೆ ಬಣದ ಪರವಾಗಿ ಸಭಾಪತಿಯವರಿಗೆ ಅರ್ಜಿ ಸಲ್ಲಿಸ ಲಾಗಿತ್ತು. ಆ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಮಧ್ಯಂತರ ಆದೇಶದ ನಂತರ ರಾಜ್ಯಪಾಲರು ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ಮುಂದೆ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ)ದ ಸರಕಾರ ರಚಿತವಾದದ್ದು ಇತಿಹಾಸ.
ಆದರೆ ಮಾನ್ಯ ರಾಜ್ಯಪಾಲರ ಆದೇಶ ಮತ್ತು ಸದಸ್ಯತ್ವ ರದ್ದತಿ ಮುಂತಾದ ವಿಷಯಗಳ ಕುರಿತು ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆಯಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರ ಚೂಡ್ ಅವರ ಅಧ್ಯಕ್ಷತೆಯ ಪಂಚ-ಸದಸ್ಯ ಸಾಂವಿಧಾನಿಕ ಪೀಠ 141 ಪುಟಗಳ ಐತಿಹಾಸಿಕ ತೀರ್ಪು ನೀಡಿತು.
ಸದಸ್ಯತ್ವ ರದ್ದತಿಯ ಕುರಿತು ಸಭಾಪತಿಯವರು ಯಾವದೇ ನಿರ್ಣಯ ಕೈಗೊಳ್ಳದಿದ್ದರಿಂದ ಆ ವಿಷಯ ಕೋರ್ಟಿನ ವ್ಯಾಪ್ತಿಗೆ ಬರುವದಿಲ್ಲ ಎಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿತು. ಆದರೆ ಯಾವದೇ ಶಾಸಕಾಂಗ ಪಕ್ಷದ ಒಂದು ಗುಂಪು ಕೇವಲ ಸದನದಲ್ಲಿ ತನಗಿರುವ ಬಹುಮತದ ಆಧಾರ ದಲ್ಲಿ ತನ್ನನ್ನು ನಿಜವಾದ ರಾಜಕೀಯ ಪಕ್ಷವೆಂದು ಘೋಷಿಸಿಕೊಳ್ಳಬಹುದೇ ಎಂಬ ವಿಷಯದಲ್ಲಿ ಸುಪ್ರೀಂ ಕೋರ್ಟು ಸುದೀರ್ಘ ಚರ್ಚೆ ನಡೆಸಿತು.
ಶಾಸಕಾಂಗ ಪಕ್ಷ ಅಂದರೆ ಯಾವದೇ ಪಕ್ಷದಿಂದ ಸಂಸತ್ ಅಥವಾ ಶಾಸನ ಸಭೆಗೆ ಚುನಾಯಿತರಾದ ಸದಸ್ಯರ ಸಮೂಹ. ಆದರೆ ಯಾವದೇ ರಾಜಕೀಯ ಪಕ್ಷ ತನ್ನ ಶಾಸಕಾಂಗ ಪಕ್ಷವಲ್ಲದೆ ಇನ್ನೂ ಅನೇಕ ಸದಸ್ಯರನ್ನು ಒಳಗೊಂಡಿರುತ್ತದೆ. ಹಾಗಾಗಿ ಅಂಥ ನಿರ್ಣಯವನ್ನು ಕೈಗೊಳ್ಳಬೇಕಾದದ್ದು ಆಯಾ ರಾಜಕೀಯ ಪಕ್ಷವೇ ಹೊರತು ಶಾಸಕಾಂಗ ಪಕ್ಷವಲ್ಲ. ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯ ಸಚೇತಕರ ನೇಮಕ ಹಾಗೂ ಮತದಾನದ ಕುರಿತು ವಿಪ್ ಆದೇಶ ಕೂಡಾ ರಾಜಕೀಯ ಪಕ್ಷದ ಅಧಿಕಾರವಾಗುತ್ತದೆ ಹೊರತು ಶಾಸಕಾಂಗ ಪಕ್ಷದ್ದಲ್ಲ.
ಶಿವಸೇನೆ ಪಕ್ಷದ ಅಧಿಕೃತ ವಿಪ್ ಉಲ್ಲಂಘನೆ ಕುರಿತು ಆ ಪಕ್ಷದ ಸಂವಿಧಾನವನ್ನು ಅನುಲಕ್ಷಿಸಿ, ಸೂಕ್ತ ವಿಚಾರಣೆ ನಡೆಸಿ ಈ ಆದೇಶದಲ್ಲಿ ಚರ್ಚಿಸಲಾದ ಮೂಲ ತತ್ವಗಳ ಆಧಾರದಲ್ಲಿ ಸಭಾಪತಿ ಗಳು ನಿರ್ಣಯ ತೆಗೆದುಕೊಳ್ಳಬೇಕು. ನಿಜವಾದ ರಾಜಕೀಯ ಪಕ್ಷ ಯಾವುದು? ಎಂದು ತಮ್ಮ ಮುಂದೆ ವಿಚಾರಣೆಗೆ ಬಾಕಿ ಇರುವ ಅರ್ಜಿಗಳ ವಿಷಯದಲ್ಲಿ ಸಭಾಪತಿಗಳು 10ನೇ ಅನುಬಂಧದ ಪ್ರಕಾರ ಹಾಗೂ ಚುನಾವಣಾ ಆಯೋಗ ಚುನಾವಣಾ ಚಿಹ್ನೆ ಆದೇಶದ 15ನೇ ಪ್ಯಾರಾದ ಅನ್ವಯ ಸೂಕ್ತ ನಿರ್ಣಯ ಕೈಗೊಳ್ಳಬೇಕು. 10ನೇ ಅನುಬಂಧದ 3ನೇ ವಿಧಿ ರದ್ದಾದ ನಂತರ ಪಕ್ಷದಲ್ಲಿನ ಒಡಕು (Split) ಸದಸ್ಯತ್ವ ರದ್ದತಿ ತಡೆಯಲು ಸಹಾಯವಾಗುವದಿಲ್ಲ. ಎಂಬದು ಈ ಆದೇಶಗಳ ಸಾರಾಂಶ.
ಪಶ್ಚಿಮ ಬಂಗಾಳದ ಘಟನೆಗಳನ್ನು ಈ ತೀರ್ಪಿನ ಹಿನ್ನೆಲೆಯಲ್ಲಿ ಪರಾಮರ್ಶಿಸಿದರೆ ಇನ್ನೂ ಹೆಚ್ಚಿನ ಗೊಂದಲ ಎದುರಾಗುತ್ತದೆ. ರಿತಭ್ರತ ಮುಖರ್ಜಿಯವರನ್ನು ವಿರೋಧ ಪಕ್ಷದ ನಾಯಕನೆಂದು ಆಯ್ಕೆ ಮಾಡಿರುವದು ಶಾಸಕಾಂಗ ಪಕ್ಷವೇ ಹೊರತು ಟಿಎಂಸಿ ಪಕ್ಷವಲ್ಲ. ತಮ್ಮದೇ ನಿಜವಾದ ಪಕ್ಷ ಎಂದು ಹೇಳಿಕೊಳ್ಳಬೇಕಾದರೆ ಅದು ಪಕ್ಷದ ಸಭೆಯಲ್ಲಿ ನಿರ್ಣಯವಾಗಬೇಕೇ ಹೊರತು ಕೇವಲ ಶಾಸಕಾಂಗ ಪಕ್ಷದ ಸಭೆಯಲ್ಲಲ್ಲ ಎಂಬುದು ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವರ ವಾದ. ಇನ್ನು ಸಂಸದರ ವಿಷಯಕ್ಕೆ ಬರುವದಾದರೆ ಟಿಎಂಸಿ ಪಕ್ಷದ ಸಂಸದೀಯ ಪಕ್ಷದ 29ರ ಪೈಕಿ 20 ಸಂಸದರು ತಾವು ಭಾರತೀಯ ರಾಷ್ಟ್ರೀಯ ನಾಗರಿಕ ಪಕ್ಷಕ್ಕೆ (ಎನ್‌ಸಿಪಿಐ) ವಿಲೀನ ಗೊಂಡಿರುವ ದಾಗಿ ಸಭಾಪತಿಯವರಿಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಅಂದರೆ ತಮ್ಮದೇ ನಿಜವಾದ ಟಿಎಂಸಿ ಪಕ್ಷವೆಂದು ಹೇಳಿಕೊಂಡ ವಿಧಾನ ಸಭಾ ಸದಸ್ಯರ ಗುಂಪಿನ ಜೊತೆ ಈ 20 ಸಂಸದರು ಇಲ್ಲವೆಂದಾಯಿತು. ಹಾಗಾದರೆ ಈ ಸಂಸದರು ಎನ್‌ಸಿಪಿಐಗೆ ವಿಲೀನ ವಾದದ್ದು ಮೂಲ ಟಿಎಂಸಿ ಪಕ್ಷದ ನಿರ್ಣಯವಲ್ಲ ಎಂಬುದು ವಿವಾದಾತೀತ. ಆದ್ದರಿಂದ 10ನೇ ಅನುಬಂಧದ 4ನೇ ಕಲಮಿನಲ್ಲಿ ಹೇಳಲಾದ ಸದಸ್ಯತ್ವದ ರದ್ದತಿಯ ರಕ್ಷಣೆಗೆ ಈ ವಿಲೀನ ಅರ್ಹ ವಾಗುವದಿಲ್ಲ. ಶಿವಸೇನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಸಿಬಾಲ್, ಸಿಂಯಂಥ ನ್ಯಾಯವಾದಿಗಳು ಈ ಎಲ್ಲ ವಾದಗಳನ್ನು ಮಂಡಿಸುವದಿಲ್ಲವೇ? ಅದಕ್ಕೆ ಈ ಸದಸ್ಯರುಗಳು ಯಾವ ಉತ್ತರ ನೀಡುತ್ತಾರೆ ಎಂಬುದು ಕುತೂಹಲ ಕಾರಿ.
ಇನ್ನು ಉದ್ಧವ್ ಠಾಕ್ರೆ ಶಿವಸೇನೆ ಪಕ್ಷದ 6 ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಗೊಳ್ಳುವ ವಿಚಾರ ಕೂಡಾ ಆ ಪಕ್ಷದ ಸಂಸದೀಯ ಸಭೆಯ ನಿರ್ಣಯವಾಗಿದ್ದು ಮೂಲ ರಾಜಕೀಯ ಪಕ್ಷ ವಿಲೀನವಾಗುತ್ತಿಲ್ಲ. ಇದು ಕೂಡಾ ಪುನಃ ನ್ಯಾಯಾಂಗ ವಿಮರ್ಶೆಗೆ ಒಳಪಡಲಿದ್ದು ಅದು ಇನ್ನೊಂದು ಶಿವಸೇನೆ ಪ್ರಕರಣವಾಗಲಿದೆ ಎಂಬುದು ನಿಸ್ಸಂದೇಹ.
ಸಭಾಪತಿಗಳು ಪಕ್ಷಾತೀತರಾಗಿರುತ್ತಾರೆ ಎಂಬುದು ನಿಯಮವಾದರೂ, ಅವರು ತಾವು ಹಿಂದೆ ಸದಸ್ಯರಾಗಿದ್ದ ಪಕ್ಷದ ಹಿತಚಿಂತಕರಾಗಿರುತ್ತಾರೆ ಎಂಬುದು ಕೆಲವರ ಅನುಮಾನ. ಸದಸ್ಯತ್ವದ ರದ್ದತಿಯ ಕುರಿತು ತೀರ್ಪು ನೀಡಲು ಸಭಾಪತಿಗಳು ಅತೀ ದೀರ್ಘ ಅವಧಿಯನ್ನು ತೆಗೆದುಕೊಂಡರೆ ಅದು ರದ್ದತಿಯ ಪರಿಣಾಮವನ್ನೇ ಇಲ್ಲವಾಗಿಸುತ್ತದೆ. ಸಂಸದೀಯ ಪ್ರಕ್ರಿಯೆಯಲ್ಲಿ ಸಭಾಪತಿಗಳ ನಿರ್ಣಯವನ್ನು ಮಾತ್ರ ಪ್ರಶ್ನಿಸಬಹುದಾಗಿದ್ದು ಅವರಿಗೆ ಆದೇಶ ನೀಡುವದು ಕೋರ್ಟುಗಳ ವ್ಯಾಪ್ತಿಗೆ ಬರುವದಿಲ್ಲ.
ಪಕ್ಷಾಂತರದ ಪಿಡುಗಿಗೆ ಕಾನೂನು ತಡೆ ಒಡ್ಡಬಹುದಾದರೂ, ತಮ್ಮ ಅವಕಾಶವಾದ, ಅಧಿಕಾರ ದಾಹ ಮತ್ತು ಹಣದ ಲಾಲಸೆಗಳಿಂದಾಗಿ ರಾಜಕಾರಣಿಗಳು ಕಾನೂನಿನ ಗೋಡೆಯ ಒಳಕಿಂಡಿಗಳ ಲಾಭ ಪಡೆಯುತ್ತಾರೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಯಾವದೇ ಒಂದು ಪಕ್ಷಕ್ಕೆ ಬಹುಮತ ದೊರೆಯದೆ ತೂಗು ಸದನ ನಿರ್ಮಾಣವಾದಾಗಲಂತೂ ಪಕ್ಷಾಂತರದ ವ್ಯಾಖ್ಯೆಯೇ ಬದಲಾಗುತ್ತದೆ. ತತ್ವ ಸಿದ್ದಾಂತಗಳೆಲ್ಲ ಹಳ್ಳ ಹಿಡಿಯುತ್ತವೆ. ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಬೈದುಕೊಂಡ ವರೇ ಅಧಿಕಾರ ಹಿಡಿಯಲು ಒಟ್ಟಾಗುತ್ತಾರೆ.
ಅಂಥ ಸಂದರ್ಭಗಳಲ್ಲಿ ರಾಜ್ಯಪಾಲರು ಮತ್ತು ಸಭಾಪತಿಗಳ ನಿರ್ಣಯಗಳು ಅತೀ ಮಹತ್ವ ದ್ದಾಗುತ್ತವೆ ಮತ್ತು ಜನರು ಅವರಿಂದ ಸಂವಿಧಾನದ ಮೂಲತತ್ವಗಳ ರಕ್ಷಣೆಯನ್ನು ಬಯಸುತ್ತಾರೆ.
ಅತೀ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದರೆ ತಾತ್ವಿಕ ಭಿನ್ನಾಭಿಪ್ರಾಯಕ್ಕೂ ಅವಕಾಶ ವಿರುವದಿಲ್ಲ ಹಾಗೂ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲವಾಗಿ ನಿರಂಕುಶ ಪಕ್ಷ ವ್ಯವಸ್ಥೆಗೆ ದಾರಿಯಾಗುತ್ತದೆ. ಭ್ರಷ್ಟಾಚಾರ, ಗೂಂಡಾಗಿರಿ, ದುರಾಡಳಿತಗಳನ್ನು ವಿರೋಧಿಸುವ ದೃಷ್ಟಿಯಿಂದ ಪಕ್ಷಾಂತರ ನಡೆದರೆ ಅದು ಖಂಡಿತ ಸ್ವಾಗತಾರ್ಹ.
ಅಂಥ ಸಂದರ್ಭಗಳಲ್ಲಿ ಕೇವಲ ಒಬ್ಬ ಶಾಸಕನ ಪಕ್ಷಾಂತರಕ್ಕೂ ಕಾನೂನಿನಲ್ಲಿ ಅವಕಾಶ ವಿರಬೇಕು. ಅತಿ ನಿಯಂತ್ರಣ ಮತ್ತು ಅತೀ ಸಡಿಲಿಕೆಗಳ ಬದಲು ಸಮತೋಲನದ ನಿಯಮಗಳು ಜಾರಿಯಾಗಬೇಕು. ಮತ್ತು ಅಂತಿಮವಾಗಿ ಮತದಾರರು ವಿವೇಚನೆಯಿಂದ ಮತ ಚಲಾಯಿಸಬೇಕು.