ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ವೆಂಕಟೇಶ ಸುಪ್ರಭಾತದ ಹಿನ್ನೆಲೆ

ಇಲ್ಲಿ ವಿಶ್ವಾಮಿತ್ರ ಋಷಿಯು ಕಾಡಿನಲ್ಲಿ ಮಲಗಿದ್ದ ದಶರಥ ನಂದನ ರಾಮನನ್ನು ಸುಪ್ರಭಾತ ಹೇಳು ತ್ತಾ ಎಬ್ಬಿಸುತ್ತಿದ್ದಾನೆ. ರಾಮ ನೇಕೆ ಕಾಡಿನಲ್ಲಿ ಮಲಗಿದ್ದ? ವಿಶ್ವಾಮಿತ್ರರೇಕೆ ಅವನನ್ನು ಎಬ್ಬಿಸಿದರು? ಎನ್ನುವುದಕ್ಕೆ ಒಂದು ಹಿನ್ನೆಲೆಯಿದೆ. ವಿಶ್ವಾಮಿತ್ರ ಋಷಿ ತನ್ನ ಯಾಗ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಕಳುಹಿಸುವಂತೆ ದಶರಥ ನಲ್ಲಿ ಕೇಳುತ್ತಾನೆ.

ಒಂದೊಳ್ಳೆ ಮಾತು

rgururaj628@gmail.com

ನಮ್ಮಲ್ಲಿ ಇಂದಿಗೂ ಎಲ್ಲರ ಮನೆಗಳಲ್ಲೂ ಬೆಳಗಾಗುವುದೇ ಭಾರತರತ್ನ, ಸಂಗೀತದ ಮೇರುಪರ್ವತ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಅಪೂರ್ವ ಗಾಯನದಲ್ಲಿ ಮೂಡಿ ಬರುವ ವೆಂಕಟೇಶ್ವರ ಸುಪ್ರಭಾತ ದಿಂದ. ಆದರೆ ಈ ವೆಂಕಟೇಶ ಸುಪ್ರಭಾತದಲ್ಲಿ ಕೌಶಲ್ಯ ಸುಪ್ರಜಾ ರಾಮ ಎಂದು ಏಕೆ ರಾಮನನ್ನು ಸಂಭೋದಿಸಲಾಗಿದೆ ಅನಿಸದೆ ಇರುವುದಿಲ್ಲ:

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ

ಸಂಧ್ಯಾಯಾ ಪ್ರವರ್ತತೇ|

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ

ದೈವಮಾಹ್ನಿಕಂ || ಎಂದು ಹಾಡುತ್ತಾರೆ.

‘ಕೌಸಲ್ಯೆಯ ಸತ್ಪುತ್ರನಾದ ರಾಮನೇ, ಪೂರ್ವದಿಕ್ಕಿನಲ್ಲಿ ಪ್ರಾತಃಕಾಲ ಕಾಣುತ್ತಿದೆ, ಏಳು, ಎಲೈ ನರಶ್ರೇಷ್ಠನೆ, ದೇವತಾರಾಧನೆ ಮೊದಲಾದ ಕಾರ್ಯಗಳನ್ನು ಮಾಡು’ ಎಂಬ ಅರ್ಥ ಬರುವ ಸುಪ್ರಭಾತದ ಈ ಶ್ಲೋಕಗಳು ರಾಮಾಯಣ ಬಾಲಕಾಂಡದಲ್ಲಿ ಸಿಗುತ್ತವೆ.

ಇಲ್ಲಿ ವಿಶ್ವಾಮಿತ್ರ ಋಷಿಯು ಕಾಡಿನಲ್ಲಿ ಮಲಗಿದ್ದ ದಶರಥ ನಂದನ ರಾಮನನ್ನು ಸುಪ್ರಭಾತ ಹೇಳುತ್ತಾ ಎಬ್ಬಿಸುತ್ತಿದ್ದಾನೆ. ರಾಮನೇಕೆ ಕಾಡಿನಲ್ಲಿ ಮಲಗಿದ್ದ? ವಿಶ್ವಾಮಿತ್ರರೇಕೆ ಅವನನ್ನು ಎಬ್ಬಿಸಿದರು? ಎನ್ನುವುದಕ್ಕೆ ಒಂದು ಹಿನ್ನೆಲೆಯಿದೆ. ವಿಶ್ವಾಮಿತ್ರ ಋಷಿ ತನ್ನ ಯಾಗ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಕಳುಹಿಸುವಂತೆ ದಶರಥನಲ್ಲಿ ಕೇಳುತ್ತಾನೆ.

ಇದನ್ನೂ ಓದಿ: Roopa Gururaj Column: ನಂಬುವುದಾದರೆ ಸಂಪೂರ್ಣ ನಂಬು ಎನ್ನುವ ಶ್ರೀಕೃಷ್ಣ

ಯಾಗ ನೆರವೇರಿಸಿ, ರಾಮ ನನ್ನು ಸೀತಾಸ್ವಯಂವರಕ್ಕೆ ಕರೆದೊಯ್ಯುವುದು ವಿಶ್ವಾಮಿತ್ರನ ಒಳ ಉದ್ದೇಶ. ದಶರಥ ಮೊದಲು ನಿರಾಕರಿಸಿದರೂ ವಿಶ್ವಾಮಿತ್ರನಿಗೆ ಎದುರಾಡಿ ಉಳಿಯುವುದುಂಟೆ? ಸಾಧ್ಯವಿಲ್ಲ ಎಂದು ಕೊಂಡು ಒಲ್ಲದ ಮನಸಿನಿಂದಲೇ ತನ್ನ ಮಕ್ಕಳನ್ನು ಕಳುಹಿಸಿಕೊಡುತ್ತಾನೆ.

ಹೀಗೆ ರಾಮಲಕ್ಷ್ಮಣರನ್ನು ಕರೆದುಕೊಂಡು, ಅವರಿಗೆ ಬಲ ಅತಿಬಲ ಮಂತ್ರಗಳನ್ನು ಉಪದೇಶಿಸಿದ ವಿಶ್ವಾಮಿತ್ರ ಅರಣ್ಯ ಪ್ರವೇಶಿಸುತ್ತಾನೆ. ರಾತ್ರಿ ವೇಳೆ ಅಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ರಾಮ ಲಕ್ಷ್ಮಣರು ಅರಮನೆಯಲ್ಲಿ ಬೆಳೆದ ರಾಜಕುಮಾರರು. ಅವರಿಗೆ ಪ್ರಾತಃ ಸಂಧ್ಯಾಕಾಲದಲ್ಲಿ ತಾವಾ ಗಿಯೇ ಎದ್ದು ರೂಢಿಯೇ ಇಲ್ಲ!

ಆದ್ದರಿಂದಲೇ ಅವರನ್ನು ಎಬ್ಬಿಸಲು ವಿಶ್ವಾಮಿತ್ರ ಮೇಲಿನಂತೆ ಸುಪ್ರಭಾತ ಹೇಳುವುದು. ಈಗ ನಾವು ಕೇಳುವ ಕೌಸಲ್ಯಾ ಸುಪ್ರಜಾ ರಾಮ ಎಂದು ಆರಂಭವಾಗುವ ವೆಂಕಟೇಶ ಸುಪ್ರಭಾತ ಸಂಪೂರ್ಣವಾಗಿ ವಿಶ್ವಾಮಿತ್ರನಿಂದ ಹೇಳಲ್ಪಟ್ಟಿದ್ದು ಅಥವಾ ವಾಲ್ಮೀಕಿಯಿಂದ ರಚಿಸಲ್ಪಟ್ಟಿದ್ದಲ್ಲ. ಬಾಲ ರಾಮಾಯಣದ ಒಂದಷ್ಟು ಶ್ಲೋಕಗಳನ್ನು ಮುಂದುವರಿಸುತ್ತಾ ಈ ಸುಪ್ರಭಾತವನ್ನು ಸುಮಾರು 15ನೇ ಶತಮಾನದಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣಾಚಾರ್ಯರು ರಚಿಸಿದ್ದಾರೆ.

ಅವರನ್ನು ಹಸ್ತಗಿರಿ ನಾಥ ಅಣ್ಣ ಅಥವಾ ಅಣ್ಣನ್ ಎಂದೂ ಕರೆಯುತ್ತಾರೆ. ಪ್ರತಿವಾದಿ ಭಯಂಕರ ಹಸ್ತಗಿರಿ ಅನಂತಾರ್ ಅಣ್ಣ, ಶ್ರೀನಿವಾಸನ ದರ್ಶನಕ್ಕಾಗಿ ತಿರುಪತಿಗೆ ತೆರಳುತ್ತಾರೆ. ಅಲ್ಲಿ ವೆಂಕಟೇಶ್ವರನ ಸೇವಕರಾಗಿದ್ದ ಸ್ವಾಮಿ ಅನಂತಪಿಳ್ಳೈ ಅವ ರೊಂದಿಗೆ ವೆಂಕಟೇಶ್ವರ ಸ್ವಾಮಿಯ ಸೇವೆಗೆ ಮುಂದಾಗುತ್ತಾರೆ.

ಪ್ರತಿದಿನ ವೆಂಕಟೇಶ್ವರ ಸ್ವಾಮಿಯ ಪೂಜೆಗೆ ಅಗತ್ಯವಿರುವ ಆಕಾಶ ಗಂಗೆಯಿಂದ ನೀರನ್ನು ತರುವ ಜವಾಬ್ದಾರಿ ಹೊತ್ತಿದ್ದ ಹಸ್ತಗಿರಿ ಅಣ್ಣಾಚಾರ್ಯರಿಗೆ ಒಂದು ದಿನ ಅಚ್ಚರಿ ಎದುರಾಗುತ್ತೆ.

ಶ್ರೀರಂಗಂನಿಂದ ಬಂದ ಸ್ವಾಮಿ ಮನವಾಳ ಮಾಮುನೆಗಳ್ ನೀರು ತರುತ್ತಿದ್ದ ಇವರಿಗೆ ಎದುರಾಗು ತ್ತಾರೆ. ಹಸ್ತಗಿರಿಯೊಂದಿಗೆ ಮಾತನಾಡುತ್ತಾ ಶ್ರೀರಂಗಂನ ಭಕ್ತರು ಅಲ್ಲಿ ಸಾಕಷ್ಟು ಸೇವೆಗಳನ್ನು ಮಾಡಿ ರಾಮಾನುಜಾಚಾರ್ಯರ ತತ್ವವನ್ನು ಚಾಚೂ ತಪ್ಪದೇ ಅನುಸರಿಸುತ್ತಿರುವ ಮಾಮುನಿಗಳ್ ಸ್ವಾಮಿಗಳ ಬಗ್ಗೆ ಹೇಳಲು ಪ್ರಾರಂಭಿಸುತ್ತಾರೆ.

ಇದರಲ್ಲೆ ತಲ್ಲೀನರಾದ ಹಸ್ತಗಿರಿ ವೆಂಕಟೇಶ್ವರ ಸ್ವಾಮಿಯ ಪೂಜಾ ಕೈಂಕರ್ಯಕ್ಕೆ ನೀರು ಕೊಂಡೊ ಯ್ಯುವುದನ್ನೂ ಮರೆತುಹೋಗುತ್ತಾರೆ. ಕೆಲವು ಸಮಯದ ನಂತರ ದೇವಾಲಯದವರೇ ಹಸ್ತಗಿರಿ ಯನ್ನು ಹುಡುಕಿಕೊಂಡು ಬಂದು ನೀರನ್ನು ಪಡೆದು ಹೋಗುತ್ತಾರೆ. ಆದರೆ ಅದಕ್ಕೆ ಸುಗಂಧ ವಸ್ತುಗಳನ್ನು ಸೇರಿಸುವುದಕ್ಕೆ ಹಸ್ತಗಿರಿ ಮರೆತಿರುತ್ತಾರೆ.

ಇದನ್ನು ಹೇಳುವಷ್ಟರಲ್ಲಿ ಪೂಜೆಯೂ ಮುಕ್ತಾಯಗೊಂಡಿರುತ್ತದೆ. ಮಾಡಿದ ತಪ್ಪಿಗೆ ದೇವರ ಬಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಹಸ್ತಗಿರಿಯೊಂದಿಗೆ ಸ್ವತಃ ವೆಂಕಟೇಶ್ವರನೇ ಮಾತನಾಡಲು ಪ್ರಾರಂಭಿಸಿ, ನೀರು ಸುಗಂಧ ಭರಿತವಾಗಿತ್ತೆಂದೂ ಪಶ್ಚಾತ್ತಾಪ ಪಡದಂತೆಯೂ ಹೇಳುತ್ತಾರೆ. ಇದನ್ನು ಸ್ವಾಮಿ ಮನವಾಳ ಮಾಮುನಿಗಳ್‌ರ ಕೃಪೆ ಎಂದೇ ಪರಿಗಣಿಸಿದ ಹಸ್ತಗಿರಿ ಅವರನ್ನು ಭೇಟಿ ಮಾಡಲು ಶ್ರೀರಂಗಂಗೆ ತೆರಳುತ್ತಾರೆ.

ಇದಾದ ನಂತರ ಶ್ರೀರಂಗಂನಿಂದ ಹಸ್ತಗಿರಿ ಹಾಗೂ ಸ್ವಾಮಿ ಮಾಮುನಿಗಳ್ ಇಬ್ಬರೂ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಭೇಟಿ ವೇಳೆ ವೆಂಕಟೇಶ್ವರ ಸ್ವಾಮಿಯ ವೈಭವ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಕೀರ್ತನೆ ರಚಿಸುವಂತೆ ಸ್ವಾಮಿ ಮಾಮುನಿಗಳ್ ಹಸ್ತಗಿರಿ ಆಚಾರ್ಯರಿಗೆ ಸೂಚಿಸುತ್ತಾರೆ.

ಅದರಂತೆಯೇ ಹಸ್ತಗಿರಿ ಅನಂತಾರ್ ಆಚಾರ್ಯರು 11 ಸ್ತೋತ್ರ, 16 ಪ್ರಪತ್ತಿ ಹಾಗೂ 14 ಮಂಗಳಗಳನ್ನುಳ್ಳ ಬೆಳಗಿನ ಸುಪ್ರಭಾತವನ್ನು ರಚಿಸುತ್ತಾರೆ.

ರೂಪಾ ಗುರುರಾಜ್

View all posts by this author