ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ramanand Sharma Column: ಬದಲಾವಣೆಯ ಪರ್ವದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ

ತಮ್ಮ ಬ್ಯಾಂಕ್ ಕೆಲಸಗಳನ್ನು ಸುಗಮವಾಗಿ, ತ್ವರಿತವಾಗಿ ಮತ್ತು ಬಹುತೇಕ ಸಂದರ್ಭ ದಲ್ಲಿ ಬ್ಯಾಂಕಿಗೆ ಹೋಗದೆ ಮನೆಯಿಂದಲೇ ಅಥವಾ ಕಚೇರಿಯಿಂದಲೇ ಮಾಡಿಕೊಳ್ಳುವ ಗ್ರಾಹಕರಿಗೆ ಈ ಬದಲಾವಣೆಯು ಅರಿವಿಗೆ ಬಂದಿರುತ್ತದೆ. ಹಳೆಯ ತಲೆಮಾರಿನ ಗ್ರಾಹಕರು ಈ ಬದಲಾವಣೆಯನ್ನು ಕಂಡು ಅಚ್ಚರಿಪಟ್ಟಿದ್ದಾರೆ.

ದುಡ್ಡು-ಕಾಸು

ರಮಾನಂದ ಶರ್ಮಾ

ಬದಲಾವಣೆ ಎಂಬುದು ಬದುಕಿನಲ್ಲಿ ಅನಿವಾರ್ಯ. ಅದು ನಿರಂತರ ಪ್ರಕ್ರಿಯೆ ಕೂಡ. ಜೀವನದ ಪ್ರತಿಯೊಂದು ಸ್ತರದಲ್ಲಿಯೂ ಅದು ಎದ್ದು ಕಾಣುತ್ತದೆ. ಅದು ‘ಫ್ಯಾಷನ್’ ಇದ್ದಂತೆ; ನಿನ್ನೆ ಇದ್ದದ್ದು ಇಂದು ಇರುವುದಿಲ್ಲ, ಇಂದಿನದು ನಾಳೆ ಇರುವುದಿಲ್ಲ. ಬಡ ಬೋರೇಗೌಡನ ಕೃಷಿಯೇ ಇರಲಿ ಅಥವಾ ಕಚೇರಿಗಳ ಚಟುವಟಿಕೆಗಳೇ ಇರಲಿ, ಕಾರ್ಯ ವೈಖರಿ ಬದಲಾಗುತ್ತಲೇ ಇರುತ್ತದೆ.

ಅಂತೆಯೇ, ಬ್ಯಾಂಕುಗಳ ಕಾರ್ಯವೈಖರಿಯಲ್ಲೂ ಅಚ್ಚರಿಯ ಬದಲಾವಣೆಯಾಗಿದ್ದು, ಅದು ಇನ್ನೂ ಹೆಚ್ಚು ಗ್ರಾಹಕ-ಸ್ನೇಹಿಯಾಗಿ ನಿರಂತರವಾಗಿ ಬದಲಾಗುತ್ತಿದೆ. ಹಳೆಯ ತಲೆಮಾರಿನ ಗ್ರಾಹಕರಿಗೆ ಇದರ ಅನುಭವ ಆಗುತ್ತಿದ್ದರೆ, ‘ಜೆನ್-ಝೀ’ ಪೀಳಿಗೆಯವರಿಗೆ ಇದು ಅಷ್ಟಾಗಿ ಗೊತ್ತಾಗುತ್ತಿಲ್ಲ.

ತಮ್ಮ ಬ್ಯಾಂಕ್ ಕೆಲಸಗಳನ್ನು ಸುಗಮವಾಗಿ, ತ್ವರಿತವಾಗಿ ಮತ್ತು ಬಹುತೇಕ ಸಂದರ್ಭ ದಲ್ಲಿ ಬ್ಯಾಂಕಿಗೆ ಹೋಗದೆ ಮನೆಯಿಂದಲೇ ಅಥವಾ ಕಚೇರಿಯಿಂದಲೇ ಮಾಡಿಕೊಳ್ಳುವ ಗ್ರಾಹಕರಿಗೆ ಈ ಬದಲಾವಣೆಯು ಅರಿವಿಗೆ ಬಂದಿರುತ್ತದೆ. ಹಳೆಯ ತಲೆಮಾರಿನ ಗ್ರಾಹಕರು ಈ ಬದಲಾವಣೆಯನ್ನು ಕಂಡು ಅಚ್ಚರಿಪಟ್ಟಿದ್ದಾರೆ.

ಇದನ್ನೂ ಓದಿ: Ramanand Sharma Column: ಹೊಸ ಕಾರ್ಮಿಕ ಸಂಹಿತೆ ವರವೋ, ಶಾಪವೋ ?

ಈ ಬದಲಾವಣೆಯ ಪರ್ವ ಆರಂಭವಾಗಿದ್ದು 90ರ ದಶಕದಲ್ಲಿ ಆದ ಬ್ಯಾಂಕ್ ವ್ಯವಹಾರದ ಗಣಕೀಕರಣದ ಘಟ್ಟದಿಂದ. ಅಲ್ಲಿಯವರೆಗೂ, ಬ್ಯಾಂಕಿನಲ್ಲಿ ಮಾಡಲಾಗುವ ವ್ಯವಹಾರ ಗಳನ್ನು ಲೆಡ್ಜರ್ ಪುಸ್ತಕಗಳಲ್ಲಿ ನಮೂದಿಸಲಾಗುತ್ತಿತ್ತು, ಗ್ರಾಹಕರ ಪಾಸ್ʼಬುಕ್ ಅನ್ನು ಕೈಯಲ್ಲಿ ಬರೆದುಕೊಡಲಾಗುತ್ತಿತ್ತು. ಆ ಬರಹವು ಓದಲು ಕಷ್ಟವೆಂದೋ, ನಮೂದಿಸಿದ ವಿವರಗಳು ಅಪೂರ್ಣವಾಗಿವೆಯೆಂದೋ ಗ್ರಾಹಕರು ಗೊಣಗುವುದು ಸಾಮಾನ್ಯವಾಗಿತ್ತು.

ಆದರೆ ಇಂದು ಪಾಸ್‌ಬುಕ್‌ಗಳನ್ನು ಗಣಕಯಂತ್ರದಲ್ಲಿ ಕ್ಷಣಮಾತ್ರದಲ್ಲಿ ಮುದ್ರಿಸಿ ಕೊಡ ಲಾಗುತ್ತಿದೆ, ಅಲ್ಲಿ ಮೂಡುವ ಅಕ್ಷರಗಳನ್ನು ಕಂಡು ಖುಷಿಯಾಗುತ್ತದೆ. ಬ್ಯಾಂಕಿನ ಸಿಬ್ಬಂದಿ ಗಾಗಿ ಕಾಯದೆ, ಕೌಂಟರ್‌ನಲ್ಲಿ ಇರಿಸಿದ ಯಂತ್ರದಲ್ಲಿ ಗ್ರಾಹಕರು ಸ್ವತಃ ಇದನ್ನು ಮುದ್ರಿಸಿ ಕೊಳ್ಳಬಹುದಾಗಿದೆ.

ಖಾತೆಗೆ ಹಣವನ್ನು ಜಮಾಮಾಡಲು ಮೊದಲಿನಂತೆ ಕ್ಯಾಷ್ ಕೌಂಟರ್ ಎದುರು ಸರದಿ ಯಲ್ಲಿ ನಿಲ್ಲಬೇಕಿಲ್ಲ, ‘ಕ್ಯಾಷ್ ಡೆಪಾಸಿಟ್ ಮಷಿನ್’ ಮೂಲಕ ಅದನ್ನು ಕೈಗೊಳ್ಳಬಹುದು. ಹಣ ಬೇಕಿದ್ದರೆ ಬ್ಯಾಂಕಿನ ಶಾಖೆಗೇ ದೌಡಾಯಿಸಬೇಕಿಲ್ಲ, ಮನೆ/ಕಚೇರಿಯ ಸನಿಹದ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಬಳಸಿ ಪಡೆಯಬಹುದು.

ಮತ್ತೊಬ್ಬರಿಗೆ ಹಣವನ್ನು ರವಾನಿಸಲು ಮುಂಚೆ ಮೇಲ್ ಟ್ರಾನ್ಸ್ʼಫರ್, ಡ್ರಾಫ್ಟ್ ಅಥವಾ ಟೆಲಿಗ್ರಫಿಕ್ ಟ್ರಾನ್ಸ್‌ʼಫರ್ ಅನ್ನು ನೆಚ್ಚಬೇಕಿತ್ತು, ಇದು ಒಂದಿಷ್ಟು ಸಮಯವನ್ನು ತೆಗೆದು ಕೊಳ್ಳುತ್ತಿತ್ತು. ಆದರೀಗ NEFT-RTGS ವ್ಯವಸ್ಥೆಯ ಮೂಲಕ ಕ್ಷಣಮಾತ್ರದಲ್ಲಿ ಒಂದು ಸ್ಥಳ ದಿಂದ ಇನ್ನೊಂದು ಸ್ಥಳಕ್ಕೆ, ಬೇರೆ ಬ್ಯಾಂಕಿನಲ್ಲಿರುವ ಖಾತೆಗಳಿಗೆ ಕೂಡ ಹಣವನ್ನು ರವಾನಿಸಬಹುದಾಗಿದೆ.

ಬ್ಯಾಂಕಿಂಗ್ ವ್ಯವಹಾರಕ್ಕೆಂದು ಗ್ರಾಹಕರು ತಮ್ಮ ಖಾತೆಯಿರುವ ಶಾಖೆಗೇ ಹೋಗಬೇಕು ಎಂದೇನಿಲ್ಲ, ‘ಕೋರ್ ಬ್ಯಾಂಕಿಂಗ್’ ವ್ಯವಸ್ಥೆಯಡಿ ಬಹುತೇಕ ವ್ಯವಹಾರಗಳನ್ನು ಅನ್ಯ ಶಾಖೆಗಳಿಂದಲೂ ಮಾಡಬಹುದು. ಅಂತೆಯೇ, ಶಾಖೆಗೆ ಭೇಟಿನೀಡುವ ಹಂಗಿಲ್ಲದೆ ಟೆಲಿ ಫೋನ್, ಮೊಬೈಲ್ ಮತ್ತು ಇಂಟರ್‌ನೆಟ್ ಮೂಲಕ ಬಹುತೇಕ ಬ್ಯಾಂಕಿಂಗ್ ವ್ಯವಹಾರ ಗಳನ್ನು ಮುಗಿಸಿಕೊಳ್ಳಬಹುದಾಗಿದೆ. ನಿಶ್ಚಿತ ಅವಧಿ ಠೇವಣಿ ಅಥವಾ ಉಳಿತಾಯ ಖಾತೆ ಗಳನ್ನು ಗ್ರಾಹಕರು ಸ್ವತಃ ತೆರೆಯಬಹುದು, ಡಿಪಾಸಿಟ್‌ಗಳ ರಸೀದಿ ಯನ್ನೂ ಮುದ್ರಿಸಿ ಕೊಳ್ಳಬಹುದು, ಕಸ್ಟಮರ್ ಕೇರ್ ಫೋನ್ ನಂಬರ್ ನೆರವಿನಿಂದ ಅಗತ್ಯ ಮಾಹಿತಿಯನ್ನು ಪಡೆಯಬಹುದು.

ಇವಕ್ಕಾಗಿ ಬ್ಯಾಂಕಿಗೆ ಭೇಟಿ ನೀಡುವ ಅಗತ್ಯವಿಲ್ಲ. ಚೆಕ್‌ಬುಕ್ ಬೇಕಿದ್ದರೆ ಮೊಬೈಲ್/ನೆಟ್ ಬ್ಯಾಂಕಿಂಗ್/ಎಟಿಎಂ ಮೂಲಕ ಬೇಡಿಕೆಯನ್ನು ನೋಂದಾಯಿಸಿದರೆ, ಗ್ರಾಹಕರ ಮನೆಗೇ ಚೆಕ್‌ಬುಕ್ ಬರುತ್ತದೆ. ಮತ್ತೊಬ್ಬರು ನೀಡಿದ ಚೆಕ್ ಅನ್ನು, ಬ್ಯಾಂಕ್‌ನಲ್ಲಿಟ್ಟಿರುವ ಕಲೆಕ್ಷನ್ ಬಾಕ್ಸ್‌ಗೆ ಹಾಕಿದರೆ ಸಾಕು, ಬ್ಯಾಂಕಿನವರು ಅದನ್ನು ಸಂಬಂಧಪಟ್ಟ ಬ್ಯಾಂಕಿಗೆ ಕಳಿಸಿ ನಿರ್ದಿಷ್ಟ ಅವಧಿಯೊಳಗೆ ಗ್ರಾಹಕರ ಖಾತೆಗೆ ಮೊತ್ತವನ್ನು ಜಮಾ ಮಾಡುತ್ತಾರೆ.

ಒಂದೊಮ್ಮೆ ಚೆಕ್ ಬೌನ್ಸ್ ಆದರೆ, ‘ರಿಟರ್ನ್ ಮೆಮೊ’ (ಚೆಕ್ ರಿಟರ್ನ್ ಆದ ಕಾರಣವನ್ನು ನಮೂದಿಸಿ) ಸಂಗಡ ಚೆಕ್ ನಿಮ್ಮ ಕೈಗೆ ಸಿಗುತ್ತದೆ. ಮೊದಲೆಲ್ಲಾ ಬ್ಯಾಂಕುಗಳು ಹಳ್ಳಿಯ ಸಿನಿಮಾ ಟೆಂಟ್‌ನಷ್ಟು ದೊಡ್ಡದಿರುತ್ತಿದ್ದವು, ಶಾಖೆಯಲ್ಲಿ ಸಿಬ್ಬಂದಿಗಳು ಗಿಜಿಗುಟ್ಟು ತ್ತಿದ್ದರು.

ಈಗ ಸಾಮಾನ್ಯವಾಗಿ 7-8 ಸಿಬ್ಬಂದಿ ಇರುತ್ತಾರೆ. ನಗರ ಮತ್ತು ಪಟ್ಟಣಗಳಿಗಷ್ಟೇ ಸೀಮಿತ ವಾಗಿದ್ದ ಬ್ಯಾಂಕುಗಳು ಇತ್ತೀಚಿನ ವರ್ಷಗಳಲ್ಲಿ, ಕನಿಷ್ಠ ನಾಗರಿಕ ಸೌಲಭ್ಯಗಳೂ ಇಲ್ಲದ ಹಳ್ಳಿಗಳಲ್ಲೂ ತಮ್ಮ ಬೋರ್ಡ್ ಹಾಕಿಕೊಂಡಿವೆ. ‘ಕೃತಕ ಬುದ್ಧಿಮತ್ತೆ’ ಎಂಬ ಮಾಯಾವಿ ಯು ಬ್ಯಾಂಕ್ ಆವರಣವನ್ನು ಇನ್ನೂ ಅಷ್ಟಾಗಿ ಪ್ರವೇಶಿಸಿಲ್ಲ. ಆದರೆ, ‘ಈಗಲೇ ಹೀಗಾದರೆ, ಕೃತಕ ಬುದ್ಧಿಮತ್ತೆಯು ಬ್ಯಾಂಕುಗಳನ್ನು ಪ್ರವೇಶಿಸಿದಾಗ ಹೇಗೆ ಆಗಬಹುದು’ ಎಂಬ ಎಣಿಕೆ ಯಲ್ಲಿ ಗ್ರಾಹಕರು ವ್ಯಸ್ತರಾಗಿದ್ದಾರೆ!

ಒಟ್ಟಾರೆ ಹೇಳುವುದಾದರೆ, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಂಕಿಂಗ್ ಉದ್ಯಮವು ಆಧುನಿಕತೆಯನ್ನು ಅಳವಡಿಸಿಕೊಂಡು, ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಂಡು, ಇನ್ನೂ ಹೆಚ್ಚು ‘ಗ್ರಾಹಕ-ಸ್ನೇಹಿ’ ಆಗಿರುವುದು ಶ್ಲಾಘನೀಯ ಬೆಳವಣಿಗೆ. ಬ್ಯಾಂಕುಗಳಲ್ಲಿನ ಗಣಕೀಕರಣ ಮತ್ತು ಡಿಜಿಟಲೀಕರಣವನ್ನು ನೋಡಿ ಒಂದು ಕಾಲಕ್ಕೆ ‘ಹಳ್ಳಿಯೂರಿಗೆ ಕೊಳ್ಳಿದೀಪ ಸಾಕು’ ಎಂದು ಉದ್ಗರಿಸಿದವರೂ ಉಂಟು. ಅಂಥವರು ಕೂಡ ಈ ಬೆಳವಣಿಗೆ ಯನ್ನು ಸ್ವಾಗತಿಸಿದ್ದಾರೆ.

ತೊಂಬತ್ತರ ದಶಕದಲ್ಲಿ ಬ್ಯಾಂಕುಗಳಲ್ಲಿ ಗಣಕೀಕರಣ ವ್ಯವಸ್ಥೆಗೆ ಮುಂದಾದಾಗ ಸಿಬ್ಬಂದಿ ಗಳು ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದುಂಟು ಮತ್ತು ಇದರಿಂದಾಗಿ ಗಣಕೀಕರಣ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗಿದ್ದುಂಟು. ಬದುಕು ಹಾಗೆಯೇ; ಅಜ್ಜನೆಟ್ಟ ಆಲದ ಮರಕ್ಕೇ ಬಹಳ ಕಾಲದವರೆಗೆ ನೇತುಹಾಕಿಕೊಂಡಿರಲು ಸಾಧ್ಯವಿಲ್ಲ, ಏಕೆಂದರೆ ಬದಲಾವ ಣೆಗೆ ಹೊಂದಿಕೊಳ್ಳುವುದು ಅನಿವಾರ್ಯ.

ಮುಂದಿನ ದಿನಗಳಲ್ಲಿ ‘ಶಾಖೆ ರಹಿತ ಬ್ಯಾಂಕಿಂಗ್ ವ್ಯವಸ್ಥೆ ಬರುತ್ತದೆಯೇನೋ?’ ಎಂಬ ಮಾತು ಕೇಳಿಬರುತ್ತಿದೆ. ‘ಫೋನ್‌ ಪೇ’ ಮತ್ತು ‘ಗೂಗಲ್ ಪೇ’ ವ್ಯವಸ್ಥೆಗಳು ಎಲ್ಲೋ ಒಂದು ಕಡೆ ಕಚೇರಿ ಇರಿಸಿಕೊಂಡು, ಶಾಖೆಗಳ ಜಾಲವಿಲ್ಲದೆ ಕೋಟ್ಯಂತರ ಮೊತ್ತದ ವಹಿವಾಟು/ವ್ಯವಹಾರವನ್ನು ನಡೆಸುತ್ತಿರಬೇಕಾದರೆ, ಬ್ಯಾಂಕಿಂಗ್ ವಲಯವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಒಂದೊಮ್ಮೆ ಅದೂ ಕೈಗೂಡಿದಲ್ಲಿ, ಗ್ರಾಹಕ ರಾದ ನಾವು ಅಂಥ ಬೆಳವಣಿಗೆಗೂ, ಬದಲಾವಣೆಗೂ ಸಜ್ಜಾಗಿರಬೇಕಾಗುತ್ತದೆ...

(ಲೇಖಕರು ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕರು)