ತಿಳಿರುತೋರಣ
ಅವರು ಒಳ್ಳೊಳ್ಳೆಯ ಕವನಗಳನ್ನು ಬರೀತಾರೆ, ಇವರು ಎಂಥ ಚಂದದ ಕತೆಗಳನ್ನು ಬರೀತಾರೆ! ಇನ್ನೊಬ್ಬರು ಹಾಸ್ಯನಾಟಕಗಳನ್ನು ಬರೀತಾರೆ, ಮಗದೊಬ್ಬರು ವಿಚಾರ ಪ್ರಚೋದಕ ಲೇಖನಗಳನ್ನು ಬರೀತಾರೆ... They are all gifted writers!'' ಎಂಬಂಥ ಮಾತುಗಳನ್ನು ಪರಿಚಯ ಸಂಭಾಷಣೆಗಳಲ್ಲಿ ನೀವು ಕೇಳಿರುತ್ತೀರಿ.
ಕತೆ-ಕವಿತೆ-ಪ್ರಬಂಧ- ನಾಟಕ ಬರಿಯುವವರಿಗೇ ಹೆಚ್ಚಾಗಿ Gifted writer ಹಣೆಪಟ್ಟಿ ಬಂದಿರುತ್ತದೆ. ಯಾಕೆ? ಬೇರೆಯವರು ಬರಿಯುವವರಿಲ್ಲವೇ? ಅವರೆಲ್ಲ ಚೆನ್ನಾಗಿ ಬರಿಯುವುದಿಲ್ಲವೇ? ಹಾಗೆ ನೋಡಿದರೆ, ಬರಿವವ್ರು ಬೇರೆಬೇರೆ ಕ್ಷೇತ್ರಗಳವರು, ಬೇರೆ ಬೇರೆ ಅಭಿರುಚಿಗಳವರು, ಸಾಧನೆಯ ಗುರಿಯಿಟ್ಟುಕೊಂಡವರು ತುಂಬ ಮಂದಿ ನಮಗೆ ಸಿಗುತ್ತಾರೆ.
ಉದಾಹರಣೆಗೆ, ನನಗೆ ಪರ್ಸನಲಿ ಗೊತ್ತಿರುವ ವಿಚಿತ್ರಾನ್ನ-ಓದುಗರಲ್ಲೇ Technical writers ಇದ್ದಾರೆ. ಉಪಕರಣಗಳ, ತಂತ್ರಾಂಶಗಳ ಯೂಸರ್ -ಮಾನ್ಯುವಲ್ಸ್ ಬರೆಯುವುದು ಅವರ ಕೆಲಸಗಳಲ್ಲೊಂದು. ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರಿಯುವ ಆ ಕೆಲಸ ಸುಲಭ ದ್ದೇನಲ್ಲ. ಮತ್ತೆ ಕೆಲವರು ಪಿಎಚ್‌ಡಿ ಪದವಿಗಾಗಿ ಥೀಸಿಸ್ ಬರಿಯುತ್ತಿರುವವರು ಇದ್ದಾರೆ.
ಸುಖ-ದುಃಖಗಳ ಸ್ವಗತದ ಡೈರಿ ಬರಿಯುವ ಒಳ್ಳೆಯ ಅಭ್ಯಾಸ ಇಟ್ಟುಕೊಂಡವರಿದ್ದಾರೆ. ಇನ್ನು ತಮ್ಮತಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರಿಯುವುದಂತೂ ಎಲ್ಲರಿಗೂ ಇದ್ದೇ ಇರುತ್ತದೆ. ನಿಜ ಹೇಳಬೇಕೆಂದರೆ ಎಲ್ಲರೂ Gifted writers. ಅಷ್ಟೇಅಲ್ಲ, ಯಾರು ಏನು ಬರಿಯಬೇಕೆಂಬುದೂ ಮೊದಲೇ ಬರಿಯಲ್ಪಟ್ಟಿರುತ್ತದೆ (ವಿಧಿಲಿಖಿತವಾಗಿರುತ್ತದೆ). ಈ ವಾರ, ‘ಬರಿ’ಯುವವರ ಸುತ್ತಮುತ್ತ ಒಂದು ಹಾಸ್ಯಲಹರಿ. ಬರೀ ಬರಿ ಬರಿ... ಬರಿಯುತ್ತ ಬರಿ!
ಇದನ್ನೂ ಓದಿ: Srivathsa Joshi Column: ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?
ಹುಟ್ಟು-ಬಾಳು-ಸಾವುಗಳ ಬಗ್ಗೆ:
ಬ್ರಹ್ಮ ನೀನು ಹಣೆಬರಹ ಬರಿ
ಚಿತ್ರಗುಪ್ತ ಆಯುಷ್ಯದ ಲೆಕ್ಕ ಬರಿ
ಡಾಕ್ಟರನೇ ನೀ ಪ್ರಿಸ್ಕ್ರಿಪ್ಷನ್ನು ಬರಿ
ರಿಪೋರ್ಟರ ನೀನು ನಿಧನವಾರ್ತೆ ಬರಿ
ವೃತ್ತಿ-ಪ್ರವೃತ್ತಿಗಳ ಬಗೆಗೆ:
ಶಾನುಭೋಗ ಭೂಮಿ ಮೋಜಣಿ ಮಾಡಿ ಬರಿ
ಟೈಲರ ಶರ್ಟು-ಪ್ಯಾಂಟಿನ ಅಳತೆ ಬರಿ
ಆಡಿಟರ ಆಯವ್ಯಯ ಪತ್ರಕೆ ಷರಾ ಬರಿ
ಕಂಡಕ್ಟರ ಟಿಕೆಟ್ ಹಿಂಬದಿಯಲ್ಲಿ ಚಿಲ್ರೆ ಬರಿ
ಗುಮಾಸ್ತ ಗಿಡ್ಡಕೈ(ಶಾರ್ಟ್‌ಹ್ಯಾಂಡ್) ನೋಟ್ಸ್ ಬರಿ
ಆಫೀಸರ ಉದ್ದಕೈ ಚಾಚಿ ಲಂಚ ಪಡೆದೇ ಬರಿ
ಸಾಹಿತ್ಯ-ಸಂಗೀತದ ಬಗ್ಗೆ:
ಕಾರಂತ ನೀನು ವಿಶ್ವಕೋಶ ಬರಿ
ಕಾರ್ನಾಡ ಹಯವದನ ನಾಟಕ ಬರಿ
ಬೇಂದ್ರೆ ನಾಕುತಂತಿಯ ಚಲೋದಾಗಿ ಬರಿ
ಕುವೆಂಪುಗೆ ಎಸೈನಾದದ್ದು ಕಾದಂಬರಿ
ಬಸವಣ್ಣ ನೀಟಾಗಿ ವಚನಗಳ ಬರಿ
ದಾಸ ಪುರಂದರ ನೀನು ಕೀರ್ತನೆ ಬರಿ
ಮಲ್ಲಿಗೆಕವಿ ದಾಂಪತ್ಯ ಗೀತೆಯ ಬರಿ
ಹಂಸಲೇಖ ಮ್ಯೂಸಿಕ್ಕೂ ಕೊಡು ಸಾಂಗ್ಸೂ ಬರಿ
ಪುರಾಣೇತಿಹಾಸಗಳ ಬಗ್ಗೆ:
ಮರಿವಾಲ್ಮೀಕಿ ರಾಮಾಯಣದೊಂದು ಅಂಕ ಬರಿ
ಆಯ್ದುಕೋ ಒಂದು ಪಾತ್ರ ಅದಾಗಿರಲಿ ಶಬರಿ
ಚಿತ್ರಿಸು ಬಿಳಿನಾರಮಡಿಯನುಟ್ಟ ಶ್ವೇತಾಂಬರಿ
ಕೂದಲ ಹೆರಳಿಗೆ ಬಳಸು ಸಿನೋನಿಮ್ಮು ಕಬರಿ
ಗಣಪನೇ ವ್ಯಾಸರ ಡಿಕ್ಟೇಷನ್ ಸರಿಯಾಗಿ ಕೇಳಿಸ್ಕೊಂಡು ಬರಿ
ರಾಹಿ ಮಾಸೂಮ್ ರೇಜಾ ಟಿವಿ ಮಹಾಭಾರತಕ್ಕೆ ಸ್ಕ್ರಿಪ್ಟು ಬರಿ
ಶಿಕ್ಷಣ, ರಾಜಕಾರಣ, ಸಹಿಷ್ಣುತೆ ಇತ್ಯಾದಿ:
ವಿದ್ಯಾರ್ಥಿ ಶಿಸ್ತಿನಿಂದ ಹೋಂವರ್ಕ್ ಬರಿ
ಪರೀಕ್ಷೆಯಲಿ ಉರುಹೊಡೆದ ಪ್ರಮೇಯ ಬರಿ
ನೆನಪು ಕೈಕೊಟ್ಟಾಗ ಚೀಟಿ ನೋಡಿ ಬರಿ
ಇನ್ವಿಜಿಲೇಟರನೆ ಈ ಕಾಪಿರೈಟರನ ಬಗ್ಗೆ ದೂರು ಬರಿ
ಅಧ್ಯಾಪಕ ಪೇಪರ್ ತಿದ್ದಿ ಮಾರ್ಕ್ಸ್‌ಕಾರ್ಡ್ ಬರಿ
ಹೆತ್ತವಳೇ(ನೇ) ಪ್ರೋಗ್ರೆಸ್ ರಿಪೋರ್ಟಲಿ ಸಿಗ್ನೇಚರ್ ಬರಿ
ರಾಜಕಾರಣಿಯ ಕುರಿತು ವ್ಯಕ್ತಿಚಿತ್ರ ಬರಿ
ಆಯ್ದುಕೋ ಒಬ್ಬ ವ್ಯಕ್ತಿ ಆಕೆಯಾಗಿರಲಿ ರಾಬರಿ
ಲಲ್ಲೂಪ್ರಸಾದನ ಮುಗುದೆ ಮಡದಿಯ ವಿವರ ಬರಿ
ಬಿಹಾರವೆಂದರೆ ಅದು ಬ್ರಾಡ್-ಡೇಲೈಟ್-ರಾಬರಿ!
ಸರ್ವಧರ್ಮ ಸಮನ್ವಯದ ಬಗ್ಗೆ ಲೇಖನ ಬರಿ
ರಾಮಮಂದಿರದ ಪಕ್ದಲ್ಲೇ ಇರಲಿ ಮಸೀದಿ ಬಾಬರಿ
ಪ್ರೇಮಾಯಣ ಮತ್ತು ನವವಧುವಿಗೆ ಕಿವಿಮಾತು:
ವಸಂತ ಋತುವೇ ಚಿಗುರಿದೆಲೆಮೇಲೆ ಒಲವಿನೋಲೆ ಬರಿ
ಗುಲ್ಜಾರ ನೀನು ಪ್ರೇಮಿಗಳಿಗೆ ಮುದ ನೀಡುವ ಕವಿತೆ ಬರಿ
ಪ್ರಿಯಕರನೆ ನಿನ್ನ ಪ್ರಿಯತಮೆಗೆ ಲವ್‌ಲೆಟರೊಂದ ಬರಿ
ಮ್ಯಾರೇಜ್ ಫಿಕ್ಸಾದೊಡೆ ಇನ್ವಿಟೇಷನ್‌ಕಾರ್ಡಿಗೆ ಎಡ್ರೆಸು ಬರಿ
ಬೇರಾರದೇ ಮರೆತರೂ ನನ್ನ ಹೆಸರಂತೂ ತಪ್ಪದೇ ಬರಿ
ನವವಧುವೇ ಅಡುಗೆ ಬರೋದಿಲ್ಲೆಂದು ಪಡಬೇಡ ಗಾಬರಿ
ರೆಸಿಪಿಯಿಲ್ಲಿದೆ ನೋಡು ಬಳಸಿದ ಮೇಲೊಂದು ಥಾಂಕ್ಯೂ ಬರಿ
ಸಿಹಿ-ಉಪ್ಪು-ಹುಳಿ-ಖಾರ ಎಲ್ಲ ಸೇರಿರಲಿ ಬರೋಬರಿ
ಮಂಗ್ಳೂರ ಕಡೆಯವ್ಳಾದ್ರೆ ಜಾಸ್ತಿಯಿರಲಿ ತುರಿದ ಕೊಬ್ಬರಿ
ವಿದೇಶವಾಸಿ ಕನ್ನಡಿತಿ ಗೃಹಿಣಿಗೆ:
ವೀಕ್ಲಿ ಗ್ರೋಸರಿ ಏನೇನು ಬೇಕೆಂದು ಲಿಸ್ಟ್ ಬರಿ
ವೀಕೆಂಡ್ ಪಾರ್ಟಿಗಳ ಗುರುತು ಕ್ಯಾಲೆಂಡರಲ್ಲಿ ಬರಿ
ವರಮಹಾಲಕ್ಷ್ಮಿ ಯಾವಾಗೆಂದೂ ನೆನಪಿಂದ ಬರಿ
ವಿರಾಮದ ವೇಳೆಯಲ್ಲಿ ಯಾಹೂ ಚಾಟೋಕ್ತಿ ಬರಿ
ತವರೂರ ನೆನಪಾದಾಗ ಅಮ್ಮನಿಗೊಂದು ಈಮೈಲ್ ಬರಿ
ಮಗನ ಎಚೀವ್‌ಮೆಂಟ್ಸ್ ಬಗ್ಗೆ ಇದ್ದುದಕಿಂತ ಉದ್ದ ಬರಿ
ಅರೆರೆ! ನೋಡುತ್ತಿದ್ದಂತೆಯೇ ಈ ಸಲದ ವಿಚಿತ್ರಾನ್ನವೆಲ್ಲ ಬರೀ ಕಾವ್ಯಮಯವಾಯ್ತಲ್ಲ! ಬರಿ ಬರಿ ಎಂದುಕೊಳ್ಳುತ್ತಲೇ ಓದುವ ನಿಮ್ಮ ತಾಳ್ಮೆ ಬರಿದಾಗಬಾರದಲ್ಲ? ಬೇಡಪ್ಪಾ, ಈ ಕವಿತೆಗಳ ಸಹವಾಸ. ನನಗೇಕೆ ಪದ್ಯ ಗಿದ್ಯ ಬರೆಯುವ ಇಲ್ಲದ ಉಸಾಬರಿ ವಿಚಿತ್ರಾನ್ನದ ಗಾರ್ನಿಷಿಂಗಿಗೆ ತರಬೇಕು ಕೊತ್ತಂಬರಿ ಅದೂ ಅಲ್ದೇ ಇಂದು ಶ್ರೀರಾಮನವಮಿ ಹಾಗಾಗಿ ಪಾನಕ ಮಾಡಿಡಬೇಕು ನಿಮಗೆಲ್ಲ ದೊಡ್ಡದೊಂದು ಡಬರಿ ಮತ್ತು ಜತೆಯಲ್ಲೇ, ಹೆಸ್ರುಬೇಳೆ ಹಸಿಮೆಣ್ಸು ಕ್ಯಾರೆಟ್ ಮುಳ್ಸೌತೆ ಕೋಸಂಬರಿ!
***
ಮೇಲಿನದು, ಇಪ್ಪತ್ತೆರಡು ವರ್ಷಗಳ ಹಿಂದೆ, ಅಂದರೆ 2004ರ ಮಾರ್ಚ್ 30ರಂದು ಮಂಗಳವಾರ ದಟ್ಸ್‌ಕನ್ನಡ ಅಂತರಜಾಲ ಪತ್ರಿಕೆಯಲ್ಲಿ ನನ್ನ ‘ವಿಚಿತ್ರಾನ್ನ’ ಅಂಕಣದಲ್ಲಿ ಪ್ರಕಟವಾಗಿದ್ದ ಒಂದು ಲಹರಿ. ಆವತ್ತೇ ರಾಮನವಮಿ ಹಬ್ಬ ಇತ್ತು. ನೀವು ಈಗಾಗಲೇ ಗಮನಿಸಿರಬಹುದಾದಂತೆ ಇದರಲ್ಲಿ ಕೆಲವೆಲ್ಲ ವಿಚಾರಗಳು ಸಾರ್ವಕಾಲಿಕ.
ಕೆಲವು ಮಾತ್ರ ಎರಡು ದಶಕಗಳ ಹಿಂದಿನ ಕಾಲಕ್ಕಷ್ಟೇ ಸಲ್ಲುವಂಥವು. ಉದಾಹರಣೆಗೆ ಈಗ ಬಸ್ ಕಂಡಕ್ಟರರಿಗೆ, ಕನಿಷ್ಠ ಕೆಎಸ್ಸಾರ್ಟಿಸಿಯವರಿಗೆ, ಟಿಕೆಟ್ ಹಿಂಬದಿಯಲ್ಲಿ ಚಿಲ್ರೆ ವಾಪಸಾತಿ ವಿವರ ಬರಿಯುವ ಅಗತ್ಯ ಬೀಳುವುದಿಲ್ಲ. ಮಹಿಳೆಯರಿಗೆ ಹೇಗೂ ಉಚಿತ ಪ್ರಯಾಣ; ಗಂಡಸರೂ ಯುಪಿಐ ಬಳಸಬಹುದಾದ್ದರಿಂದ ಚಿಲ್ರೆ ಸಮಸ್ಯೆ ಇಲ್ಲ.
ಹಂಸಲೇಖ ಸಾಹಿತ್ಯವೂ ಸಂಗೀತವೂ ಈಗ ಹಳಸಲು. ಈಗೇನಿದ್ದರೂ ಪ್ರೇಮ್‌ನ “ಸನಿಸೆಸ..." ಉದ್ರೇಕದ ಅತಿರೇಕ ಗೀತಸಂಗೀತ. ಹಾಗೆಯೇ ಲಲ್ಲೂ-ರಾಬರಿಗಳೆಲ್ಲ ಈಗ ಒಬ್ಸೊಲೀಟ್. ಸೋ ಆಲ್ಸೋ ಯಾಹೂ ಮೆಸೆಂಜರ್ ಚಾಟಿಂಗ್ ಮತ್ತು ಈಮೇಲ್.
ಈಗೇನಿದ್ದರೂ ವಾಟ್ಸಾಪು, ಫೇಸ್‌ಬುಕ್ಕು, ಇನ್ಸ್‌ಟಾಗ್ರಾಮು, ಎಕ್ಸ್, ಎಟ್‌ಸೆಟಿರಾ. ಇನ್ನೊಂದು ಬದಲಾವಣೆಯೆಂದರೆ ಬಹಳಷ್ಟು ಜನರಿಗೆ ಕಾಗದ-ಪೆನ್ನು ಬಳಸಿ ಕೈಯಿಂದ ಬರಿಯುವ ಅಭ್ಯಾಸ ಮರೆತೇಹೋಗಿದೆ; ಈಗೇನಿದ್ದರೂ ಕೀಲಿಮಣೆಯಲ್ಲಿ ಕುಟ್ಟಿಂಗು, ಎರಡೂ ಹೆಬ್ಬೆರಳುಗಳನ್ನು ಬಳಸಿ ಮೊಬೈಲ್ʼನಲ್ಲಿ ಟೈಪ್ ಮಾಡುವವರಿಂದ ಹೆಬ್ಬೆಟ್ಟು ಸಾಹಿತ್ಯ. ಅಕ್ಷರಗಳನ್ನು ಪರದೆಯಲ್ಲಿ ಮೂಡಿಸಲಿಕ್ಕೂ ಉದಾಸೀನ ಇರುವವರಿಗೆ ಇವೆಯಲ್ಲ ಬೊಗಸೆತುಂಬ ಮನಮುದ್ರೆ(ಇಮೋಜಿ)ಗಳು.
ಅದಿರಲಿ, ‘ಬರೆ’ ಎಂದಲ್ಲವೇ ಸರಿಯಾದ ಕ್ರಿಯಾಪದ? ಬರೆಯುವುದು, ಬರೆಯುವವರು, ಬರೆಯುತ್ತೇನೆ, ಬರೆದೆನು, ಬರೆದೆ ನೀನು ನಿನ್ನ ಹೆಸರ... ಅಂತೆಲ್ಲ ಹೇಳುತ್ತೇವೆಯೇ ಹೊರತು ಇದೆಂಥದು ‘ಬರಿ’ಯುವುದು? ಇದೆ, ಆಡುಮಾತಿನಲ್ಲಿ ‘ಬರಿ’ ಎಂಬ ರೂಪವೂ ಇದೆ; ಮತ್ತು ಇದಕ್ಕೆ ಕಿಟ್ಟೆಲ್ ಕೋಶದ ಅನುಮೋದನೆಯೂ ಇದೆ.
ಬರಿ ಕೂಡ ಬರೆ ಎಂಬರ್ಥದಲ್ಲೇ ಬಳಕೆಯಾಗುವ ಕ್ರಿಯಾಪದ ಎನ್ನಲಾಗಿದೆ; ಅದರಲ್ಲೂ ಇನ್ನೊಬ್ಬರಿಗೆ ಆಜ್ಞಾರ್ಥಕವಾಗಿ ಹೇಳುವಾಗ ‘ಬರಿ’ಯೇ ಹೆಚ್ಚು ಸೂಕ್ತವೆನಿಸುವುದು. ಅಲ್ಲದೇ ಬರೆ ಬಳಸಿದ್ದರೆ ಅಷ್ಟೊಂದು ಪ್ರಾಸಗಳನ್ನು ಹೆಣೆಯುವುದಕ್ಕೆ ನನ್ನಿಂದಂತೂ ಆಗುತ್ತಿರಲಿಲ್ಲ, ಬರಿ ಬಳಸಿದ್ದರಿಂದ ಬರೋಬ್ಬರಿ ಎನಿಸಿದೆ.
ಅಂದ ಹಾಗೆ ವಿಚಿತ್ರಾನ್ನದ ಆ ಅಂಕಣಬರಹ ಕೋಸಂಬರಿಯೊಂದಿಗೆ ಮುಕ್ತಾಯ ವಾಗಿತ್ತಲ್ಲವೇ? ಕೋಸಂಬರಿಯನ್ನೇ ಇನ್ನಷ್ಟು ಹಿಗ್ಗಿಸಿ ಬರಿಯೋಣವೆನಿಸಿತು. ಹೇಗೂ ಈ ವಾರವೇ ರಾಮನವಮಿಯೂ ಬರುತ್ತಿದೆ. ಕೋಸಂಬರಿ ಪ್ರಸ್ತುತವೇ ಆಗುತ್ತದೆ. ಯುದ್ಧದ ಗಲಾಟೆಯಲ್ಲಿ ಗ್ಯಾಸ್ ಬಳಸದೆ ಅಡುಗೆ ಮಾಡಬೇಕಿರುವ ಪರಿಸ್ಥಿತಿಯಲ್ಲಿ ಕೋಸಂಬರಿ ಮತ್ತಷ್ಟು ಪ್ರಸ್ತುತ.
ಆದರೂ, ಕೋಸಂಬರಿಯ ಬಗ್ಗೆ ಏನೆಂದು ಬರೆಯುವುದು? ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಅಂತೆಲ್ಲ ರೆಸಿಪಿ ರೀತಿಯಲ್ಲಿ ಬರೆಯುವುದಕ್ಕೆ ಕೋಸಂಬರಿ ಯೇನೂ ಹೊಸ ರುಚಿ ಅಲ್ಲ. ಶತಮಾನಗಳಿಂದಲೂ ಕನ್ನಡಿಗರಿಗೆ ಚಿರಪರಿಚಿತವೇ.
“ಶ್ರೀ ರಾಮನವಮಿಯ ದಿವಸ ರಾಮನಾಮಾಮೃತವೆ| ಪಾನಕ ಪನಿವಾರ ಕೋಸಂಬರಿ..." ಎಂದು ಅಡಿಗರು ಬರೆದಿರುವುದಷ್ಟೇ ಅಲ್ಲ, “ಸಾಸಿವೆ ತಾಳುಗಳು ರುಚಿಕರ| ಕೋಸಂಬರಿಯವಿಲು| ತೋಷದಿ ಬಹಳ ವಿ| ಶೇಷದಿ ಸಭೆಗೆ ವಿ| ಲಾಸದೊಳಿಕ್ಕಲು| ಬೇಸರಗೊಳ್ಳದೆ" ಎಂದು ಹಳಗನ್ನಡ-ನಡುಗನ್ನಡ ಕಾಲಘಟ್ಟದಲ್ಲೂ ಕೋಸಂಬರಿ ಬರುತ್ತದೆ. ಒಟ್ಟಾರೆಯಾಗಿ ಶಿಷ್ಟ ಸಾಹಿತ್ಯದಲ್ಲೂ ಕೋಸಂಬರಿ ಮೈಲಿಗೆಯೇನಲ್ಲ.
ಅಷ್ಟೇಕೆ, ಅಮೆರಿಕನ್ನಡಿಗ ಸಾಹಿತಿ ಡಾ.ಮೈ.ಶ್ರೀ. ನಟರಾಜ ಅವರು ತಮ್ಮದೊಂದು ಪುಸ್ತಕಕ್ಕೆ ‘ಕರಗಿಸುವ ಕಡಾಯಿ... ಕೋಸುಂಬರಿ ಕುಕ್ಕೆ’ ಎಂದೇ ಹೆಸರಿಟ್ಟಿದ್ದಾರೆ. ಅದೇನೂ ಅಡುಗೆ ಪುಸ್ತಕವಲ್ಲ, ವೈಚಾರಿಕ ಪ್ರಬಂಧಗಳ ಸಂಕಲನ. ಪುಸ್ತಕಕ್ಕೆ ಆ ಹೆಸರೇಕೆ ಎಂಬು ದನ್ನೂ ಪ್ರಸ್ತಾವನೆಯಲ್ಲಿ ಬರೆದುಕೊಂಡಿದ್ದಾರೆ: “ಬದುಕಿನ ಆರಂಭದ ಇಪ್ಪತ್ತೈದೇ ವರ್ಷ ಭಾರತದಲ್ಲಿ ಕಳೆದಿದ್ದಾದರೂ ಅಲ್ಲಿನ ಬೇರು ಇನ್ನೂ ಬಲವಾಗೇ ಉಳಿದುಕೊಂಡಿದೆ.
ಅಮೆರಿಕ ಜೀವನದ ಐದಾರು ದಶಕಗಳಲ್ಲಿ ಮರವಾಗಿ ಬೆಳೆದು ಪೂರ್ವ-ಪಶ್ಚಿಮಗಳ ಜೀವನಶೈಲಿಯ ಮಿಶ್ರಣವೊಂದನ್ನು ಕಂಡುಕೊಂಡು ಆರಾಮಾಗಿದ್ದೇನೆ. ಅಮೆರಿಕದ ‘ಕರಗಿಸುವ ಕಡಾಯಿ’ (ಮೆಲ್ಟಿಂಗ್ ಪಾಟ್) ಎಷ್ಟು ಶಕ್ತಿಶಾಲಿ ಎಂಬುದು ಅದರಲ್ಲಿಗೆ ಬಿದ್ದವರಿಗೇ ಗೊತ್ತು! ಆದರೆ ಭಾರತದ ಬೇರು ಸಹ ಅಷ್ಟೇ ಶಕ್ತಿಶಾಲಿ ಎಂಬುದು ನನ್ನ ಮಟ್ಟಿಗಂತೂ ನಿಜವಾಗಿದೆ.
ಹೀಗಾಗಿ, ನನ್ನತನವನ್ನು ಉಳಿಸಿಕೊಂಡಿದ್ದೇನೆ. ಕರಗಿಸುವ ಕಡಾಯಿಯಲ್ಲಿ ಬಿದ್ದರೂ ಸಂಪೂರ್ಣವಾಗಿ ಕರಗದೇ ಉಳಿದಿದ್ದೇನೆ. ಕುದಿಯುವ ಕಡಾಯಿಯನ್ನು ತಣ್ಣನೆಯ ‘ಕೋಸುಂಬರಿ ಕುಕ್ಕೆ’ (ಸ್ಯಾಲಡ್ ಬೌಲ್) ಆಗಿಸಿದ್ದೇನೆ. ಬೆರೆತೂ ಬೆರೆಯದೇ, ಕರಗಿಯೂ ಕೊರಗದೇ ಅಲ್ಲಿಯ ಬೇರು ಇಲ್ಲಿಯ ಕಾಂಡಗಳನ್ನು ಕೂಡಿಸಿ ಮರವನ್ನು ಕಸಿ ಮಾಡಿ ಹಸಿರಾಗಿಟ್ಟುಕೊಂಡಿದ್ದೇನೆ...".
ಈ ಪುಸ್ತಕಕ್ಕೆ ಖ್ಯಾತ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರ ಚಂದದ ಮುನ್ನುಡಿಯ ‘ಡ್ರೆಸ್ಸಿಂಗ್’ ಇದೆ. ನಟರಾಜರ ಮನದಾಳದ ಮಾತುಗಳು ನನ್ನನ್ನೂ ಸೇರಿಸಿದಂತೆ ಇನ್ನೂ ಹಲವು ವಲಸಿಗರ ಮಾತೂ ಹೌದು.
ಅಷ್ಟಾಗಿ ಕೋಸಂಬರಿಯು ಕರ್ನಾಟಕ ಮೂಲದ್ದೇ ಇರಬಹುದಾದರೂ ಅದರ ಕೀರ್ತಿ ಕರ್ನಾಟಕದಿಂದ ಹೊರಗೆ ವಿಶ್ವದೆಲ್ಲೆಡೆಯೂ ಹಬ್ಬಿದೆ. ಉತ್ತರಭಾರತದವರು ಸವಿಯುವ ‘ಕಚುಂಬರ್’, ಆಫ್ರಿಕಾ ಖಂಡದ ಕೆಲ ಜನಾಂಗಗಳು ಮೆಲ್ಲುವ ‘ಕಚುಂಬರಿ’ಗಳೆಲ್ಲ ಕೋಸಂಬರಿಯ ಸ್ವದೇಶಿ/ವಿದೇಶಿ ಕಸಿನ್ ಗಳೇ. ಮರಾಠಿಯ ‘ಕೋಶಿಂಬೀರ’ವಂತೂ ಕರ್ನಾಟಕದ್ದೇ ಕೊಡುಗೆ ಎನ್ನುವುದರಲ್ಲಿ ಸಂಶಯವಿಲ್ಲ.
ನಾವಾಡುವ ಚಿತ್ಪಾವನಿ ಮರಾಠಿಯಲ್ಲಿ ‘ಕೋಶಿಂಭಿರಿ’ ಎನ್ನುತ್ತೇವೆ. ಇಲ್ಲಿ ನನಗೊಂದು ಚೂರ್ಣಿಕೆ ಶ್ಲೋಕವೂ ನೆನಪಾಗುತ್ತಿದೆ, ಸಮಾರಂಭಗಳಲ್ಲಿ ಪಂಕ್ತಿಯೂಟದ ವೇಳೆ ಭೋಜನಕಾಲೇ ಗೋವಿಂದನಾಮ ಸಂಕೀರ್ತನ ಉದ್ದೇಶದಿಂದ ಹೇಳುವಂಥದ್ದು. ಅದು ಹೀಗಿದೆ:
ಪೋಳೀ ಮಾಧವ ಭಾತು ವಾಮನ ವಡಾ ಶ್ರೀಕೃಷ್ಣ ಶಾಕಾಹರೀ|
ಘಾರೀ ತೂಪ ವರೀ ರಘೂ ನರಹರೀ ಗೋವಿಂದ ಕೋಶಿಂಭಿರೀ|
ಖೀರೀ ಗೋಪತಿ ತೂ ಪತೇ ಯದುಪತೇ ಸೀತಾಪತೇ ಶರ್ಕರಾ|
ಐಸೇ ಜ಼ೇವಣ ಜ಼ೇವುನೀ ಮುನಿವರಾ ಶ್ರೀರಂಗನಾಥ ಸ್ಮರಾ||
ಇದರಲ್ಲಿ ಹೆಚ್ಚಿನೆಲ್ಲ ಪದಗಳು ಅರ್ಥವಾಗುವಂತೆಯೇ ಇವೆ. ಪೋಳೀ ಎಂದರೆ ಹೋಳಿಗೆ; ಭಾತು ಎಂದರೆ ಅನ್ನ; ಘಾರೀ ತೂಪ ವರೀ ಎಂದರೆ ಗಾರಿಗೆ ಮೇಲೆ ಬಡಿಸಿದ ತುಪ್ಪ; ಖೀರಿ ಎಂದರೆ ಪಾಯಸ; ಐಸೇ ಜ಼ೇವಣ ಜ಼ೇವುನೀ ಎಂದರೆ ಈ ರೀತಿಯ ಭೋಜನವನ್ನುಂಡು. ಶಾರ್ದೂಲವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿರುವ ಈ ಚಂದದ ಶ್ಲೋಕವನ್ನು ರಚಿಸಿದವ ರಾರೆಂದು ನನಗೆ ಗೊತ್ತಿಲ್ಲ. ನನ್ನ ಅಜ್ಜನಮನೆಯಲ್ಲಿ ನಾನಿದನ್ನು ಮೊದಲಿಗೆ ಕೇಳಿದ್ದು.
ಇದರಲ್ಲಿ ಔತಣದ ಒಂದೊಂದು ಭಕ್ಷ್ಯಕ್ಕೂ ಭಗವಂತನ ಒಂದೊಂದು ನಾಮವನ್ನು ಅಳವಡಿಸಿದೆ. ಆಯಾ ಭಕ್ಷ್ಯಗಳ ಹೆಸರುಗಳನ್ನು ಹೇಳುವಾಗ ಆಯಾ ನಾಮಸ್ಮರಣೆ ಆಗುತ್ತದೆಂಬ ಆಶಯ. ಕೋಸಂಬರಿಯನ್ನು ಗೋವಿಂದನಾಮಕ್ಕೆ ಸಮವಾಗಿಸಿದ್ದು ಬಹಳ ಸಂತೋಷದ ಸಂಗತಿ. ಸಾಂಪ್ರದಾಯಿಕವಾಗಿ ಕೋಸಂಬರಿಯನ್ನು ಹೆಸರುಬೇಳೆ ಅಥವಾ ಕಡಲೆಬೇಳೆಯನ್ನು ನೀರಲ್ಲಿ ನೆನೆಸಿ ಮೆದುವಾಗುವಂತೆ ಮಾಡಿ ತೆಗೆದು ಇತರೇ ಪದಾರ್ಥಗಳನ್ನು ಸೇರಿಸಿ ಮಾಡುವುದು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಹ “ಕೋಸಂಬರಿ = ಕಡಲೆಬೇಳೆ ಅಥವಾ ಹೆಸರು ಬೇಳೆಯನ್ನು ನೀರಲ್ಲಿ ನೆನೆಸಿ, ಸೌತೆ ಕಾಯಿ, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆಹಣ್ಣಿನ ರಸ, ಉಪ್ಪು ಇವುಗಳನ್ನು ಕೂಡಿಸಿ ಒಗ್ಗರಣೆ ಹಾಕಿ ತಯಾರಿಸುವ ಒಂದು ಬಗೆಯ ತಿನಿಸು" ಎಂದೇ ವಿವರಿಸಿದೆ.
ಆದರೆ ಈಗಿನ ಕಾಲದ ಪಾಕಪ್ರಯೋಗಚತುರರು ಸ್ವೀಟ್ ಕಾರ್ನ್-ದಾಳಿಂಬೆ ಕೋಸಂಬರಿ, ರಾಜ್ಮಾ ಕೋಸಂಬರಿ, ಮೊಳಕೆಯೊಡೆದ ಹೆಸರುಕಾಳಿನ ಕೋಸಂಬರಿ, ಬಾಳೆದಿಂಡಿನ ಕೋಸಂಬರಿ, ಈರುಳ್ಳಿಸೊಪ್ಪಿನ ಕೋಸಂಬರಿ ಅಂತೆಲ್ಲ ವಿವಿಧ ಬಗೆಗಳನ್ನು ಕಂಡುಕೊಂಡಿದ್ದಾರೆ.
ಕೋಸಂಬರಿ ಎಂದು ಕನ್ನಡದಲ್ಲಿ ಹೇಳಿದರೆ ಪ್ರತಿಷ್ಠೆಗೆ ಕಮ್ಮಿ, ಆದ್ದರಿಂದ ‘ಸ್ಯಾಲಡ್’, ‘ಸಲಾಡ್’ ಅಂತೆಲ್ಲ ಹೇಳಿ ಸ್ಟೈಲ್ ಮಾಡುವ ಕನ್ನಡಿಗರೂ ಇದ್ದಾರೆ. ಕೊನೆಯಲ್ಲಿ, ತಿಳಿರುತೋರಣ ಅಂಕಣದಲ್ಲಿ ಹಿಂದೊಮ್ಮೆ “ನಾಲ್ಕಕ್ಷರದ ಇಪ್ಪತ್ತು ತಿಂಡಿ-ತಿನಸಿನ ಹೆಸರುಗಳು ಉತ್ತರಗಳಾಗುವಂತೆ ರಸಪ್ರಶ್ನೆ" ಕೇಳಿದ್ದಾಗ ಕೋಸಂಬರಿ ಎಂಬ ಉತ್ತರ ಬಯಸಿದ್ದ ಪ್ರಶ್ನೆ ಹೇಗಿತ್ತು ನೋಡಿ: ರಾಮಾಯಣದಲ್ಲಿ ನಡೆಯಿತೆನ್ನಲಾದ ಒಂದು ಕಪೋಲಕಲ್ಪಿತ ಪ್ರಸಂಗ, ಆಧುನಿಕ ಕಾಲಕ್ಕೆ ಸರಿಹೊಂದುವಂತೆ ನಿರೂಪಣೆ.
ಏನೆಂದರೆ, ರಾಮನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಪಾನಕ ಮತ್ತೇನು ಮಾಡಲಿ ಎಂದು ಸೀತೆಯು ಶ್ರೀರಾಮನ ಬಳಿ ಕೇಳಿದಳಂತೆ. ಬೇರೆ ಏನು ಬೇಕಿದ್ದರೂ ಮಾಡು ಬಿಡು. ಆದರೆ ನನ್ನ ಫೇವರಿಟ್ ಸಲಾಡ್ ಮಾತ್ರ ಮರೆಯಬೇಡ. ಸಾಮಗ್ರಿಗಳು ಏನೇನು ಬೇಕೆಂದು ಲಿಸ್ಟ್ ಬರಿ. ಗ್ರೋಸರಿ ಸ್ಟೋರ್‌ಗೆ ಹೋಗಿ ತರುತ್ತೇನೆ, ಅನ್ನಿ ಪನುಲು ಚೇಸ್ತಾನು ನೀ ಕೋಸಂ ಎಂದನಾ ಕನ್ನಡ-ತೆಲುಗು ಮಾತಾಡಬಲ್ಲ ಅನಿವಾಸಿ ರಘುರಾಮ. ಅವನ ಉತ್ತರದಲ್ಲೇ ಉತ್ತರವಿರುವುದು ಸೀತೆಗೆ ಗೊತ್ತಾಗದಿರುತ್ತದೆಯೇ? ಹೆಸರುಬೇಳೆ, ಕ್ಯಾರೆಟ್, ಮುಳ್ಳುಸೌತೆ, ಹಸಿಮೆಣಸು, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು... ಅಂತ ಪಟ್ಟಿ ಮಾಡತೊಡಗಿದಳು. ಯಾವುದದು ಶ್ರೀರಾಮ ಮೆಚ್ಚುವ ಸಲಾಡ್?
ಇಪ್ಪತ್ತೂ ರಸಪ್ರಶ್ನೆಗಳ ಉತ್ತರಗಳನ್ನು ಲಿಮರಿಕ್ (ಪಂಚಪದಿ ಅಥವಾ ಪಂಚ್‌ಪದಿ) ಶೈಲಿಯಲ್ಲಿ ಬರೆದಿದ್ದ ಕವಯಿತ್ರಿ ಮೋಹಿನಿ ದಾಮ್ಲೆ ‘ಕೋಸಂಬರಿ’ಯನ್ನು ಹೇಗೆ ಸಿಂಗರಿಸಿದ್ದರು ನೋಡಿ:
ಬರೆದಷ್ಟು ಇಹುದು ಅಡುಗೆ ಕಾದಂಬರಿ
ರಾಮಾಯಣಕೂ ನಂಟು ಇದೆ ನಂಬಿರಿ;
ಕಂಡಳೆಮಗಲ್ಲಿ
ಪಂಚವಟಿಯಲ್ಲಿ
ಕೋಸಲೇಶನಿಗೆ ಪ್ರಿಯೆ ಕೋಸಂಬರಿ!