ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Janamejaya Umarji Column: ಬಸವಣ್ಣನವರ ಸಪ್ತಶೀಲ: ಅಸಹಿಷ್ಣುತೆ ಗಣಾಚಾರವೇ ?

ಲಿಂಗಾಯತದಲ್ಲಿ ಸೇರಿರುವ ಕೆಲ ಕಮ್ಯುನಿಸ್ಟ್ ಮೂಲಭೂತವಾದಿಗಳು ಅಸಹಿಷ್ಣುತೆಯ ಹರಡುವಿಕೆ ಯನ್ನು ಗಣಾಚಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಈ ಅಸಹಿಷ್ಣುತೆಗೆ ಹಲವು ಉದಾಹರಣೆ ಗಳಿವೆ. ವಚನ ದರ್ಶನ ಪುಸ್ತಕಕ್ಕೆ ವಿರುದ್ಧವಾಗಿ ವಚನ ದರ್ಶನ ಸತ್ಯ-ಮಿಥ್ಯ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

ನೇರನುಡಿ

ಜನಮೇಜಯ ಉಮರ್ಜಿ

ಇತ್ತೀಚೆಗೆ ಸಿಂದಗಿಯಲ್ಲಿ ನಡೆದ ಪ್ರವಚನ ಒಂದರ ಸಂದರ್ಭದಲ್ಲಿ, ತಮ್ಮನ್ನು ಬಸವವಾದಿಗಳು ಎಂದು ಕರೆದುಕೊಳ್ಳುವ ಒಬ್ಬ ಸ್ವಾಮೀಜಿಯವರು ಬಸವಣ್ಣನವರು ಪ್ರತಿಪಾದಿಸಿದ ಸಪ್ತಶೀಲ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮಾತನಾಡಿದ ಕಾರಣ ಸಮಾಜದ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.

ಧರ್ಮದ ಪ್ರತಿನಿಧಿಗಳೆಂದು ತಾವು ಹೇಳಿಕೊಳ್ಳುವ ಸ್ವಾಮೀಜಿಯವರಿಂದ ಸಾರ್ವಜನಿಕ ವೇದಿಕೆ ಯಲ್ಲಿ ಬಳಕೆಯಾದ ಪದಗಳು ಅವರ ನಡೆ-ನುಡಿಗಳ ಅಸಂಗತತೆಯನ್ನು ಬಹಿರಂಗಪಡಿಸಿವೆ. ಆಶ್ಚರ್ಯಕರವಾಗಿ, ಈ ರೀತಿಯ ಪದಬಳಕೆಯನ್ನು ಸಮರ್ಥಿಸಲು ಒಂದು ಗುಂಪು ಮುಂದಾಗಿರು ವುದು ಗಮನಾರ್ಹವಾಗಿದೆ. ಕೆಲವೇ ತಿಂಗಳುಗಳ ಹಿಂದೆ, ಕನ್ಹೇರಿ ಶ್ರೀಗಳು ಬಳಸಿದ ಕೆಲವು ಪದಗಳನ್ನು ಆಧಾರವನ್ನಾಗಿ ಮಾಡಿಕೊಂಡು ಸಚಿವರೊಬ್ಬರ ಆಪ್ತವಲಯವು ವಿಜಯಪುರ ಜಿಲ್ಲೆಯಲ್ಲಿ ಅವರಿಗೆ ನಿರ್ಬಂಧ ವಿಧಿಸುವಲ್ಲಿ ಯಶಸ್ವಿಯಾಗಿದ್ದು, ಅದನ್ನು ಬಾಗಲಕೋಟೆ ಜಿಲ್ಲೆಗೂ ವಿಸ್ತರಿಸಿತು.

ಇದೇ ರೀತಿಯ ಪದಬಳಕೆಗೆ ಆಗಾಗ್ಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದ, ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದ ಅದೇ ಗುಂಪು ಇಂದು ಬಸವ ಬೆಳವಿಯ ಈ ಸ್ವಾಮೀಜಿಯವರನ್ನು ವೀರ ಗಣಾಚಾರಿ ಎಂದು ಹೊಗಳುತ್ತಿರುವುದು ಸ್ಪಷ್ಟವಾದ ಸೆಲೆಕ್ಟೀವ್ ಮನಸ್ಥಿತಿಯನ್ನು ತೋರಿಸುತ್ತದೆ.

ಇದನ್ನೂ ಓದಿ: Janamejaya Umarji Column: ಫ್ರೆಂಚ್‌ ಕ್ರಾಂತಿಯ ಸಮಸಮಾಜ ಮತ್ತು ಶರಣರ ಸಾಮರಸ್ಯ

ಲಿಂಗಾಯತದಲ್ಲಿ ಸೇರಿರುವ ಕೆಲ ಕಮ್ಯುನಿಸ್ಟ್ ಮೂಲಭೂತವಾದಿಗಳು ಅಸಹಿಷ್ಣುತೆಯ ಹರಡುವಿಕೆಯನ್ನು ಗಣಾಚಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಈ ಅಸಹಿಷ್ಣುತೆಗೆ ಹಲವು ಉದಾಹರಣೆಗಳಿವೆ. ವಚನ ದರ್ಶನ ಪುಸ್ತಕಕ್ಕೆ ವಿರುದ್ಧವಾಗಿ ವಚನ ದರ್ಶನ ಸತ್ಯ-ಮಿಥ್ಯ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

ಆ ಸಮಾರಂಭದಲ್ಲಿ ಪ್ರತ್ಯೇಕ ಧರ್ಮಪರ ಜಾಗತಿಕ ನಾಯಕರೊಬ್ಬರು ವೀರಶೈವ ಎಂಬ ಪದ ವನ್ನು ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲವಾಗಿಸುವ ಮಾತನಾಡಿದ್ದರು. ಮುಂದೆ ಬಾಗಲಕೋಟೆ ಯಲ್ಲಿ ಇನ್ನೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತು. ಅಲ್ಲಿ ವೇದಿಕೆ ಮೇಲಿದ್ದ ಸ್ವಾಮಿ ಗಳೊಬ್ಬರಿಗೆ ಸುಖಾ ಸುಮ್ಮನೆ ಕೌಂಟರ್ ಕೊಡಲು, ಲೇಬಲ್ ಚೇಂಜ್ ಸಂಶೋಧಕರೊಬ್ಬರು ತಮಗೆ ಅನುಕೂಲವಲ್ಲದ, ಸನಾತನ ಪರ ಇರುವ ವಚನಗಳನ್ನು ಪ್ರಕ್ಷಿಪ್ತ ಎಂದು ಪರಿಷ್ಕರಿಸಿ ತೆಗೆದು ಹಾಕುವ ಬಗೆ ಮಾತನಾಡಿದ್ದರು.

ಪ್ರತ್ಯೇಕಧರ್ಮದ ಪರವಿರುವ ಗುಂಪು ಇದೇ ರೀತಿ ಅಸಹಿಷ್ಣುತೆಯನ್ನು ಪ್ರದರ್ಶಿಸಿರುವ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ಇದೇ ಹಾದಿಯಲ್ಲಿ ಮಾತನಾಡುವ ಟ್ರ್ಯಾಕ್ ರೆರ್ಕಾಡರ್ ಇರುವ ನಿಜಗುಣಾನಂದ ಸ್ವಾಮಿಗಳು ಬೀದರ ಜಿಯಲ್ಲಿ ಒಂದು ತಿಂಗಳು ಪ್ರವಚನ ಮಾಡಿದ್ದರೂ ಎಲ್ಲಿಯೂ ವಿವಾದಕ್ಕೆ ಆಸ್ಪದವಾಗಿರಲಿಲ್ಲ. ಈ ಬಸವ ಬೆಳವಿಯ ಸ್ವಾಮಿಗಳು ಸಿಂದಗಿಯಲ್ಲಿ ಕೊನೆಯದಿನ ಅ ಸ್ಥಾನ ತುಂಬಿದರೋ ಏನೋ ಗೊತ್ತಿಲ್ಲ.

ವಿಷಯದ ಮೂಲ ಅಂಶ ಇದಲ್ಲ. ತಪ್ಪು ಎಂದರೆ ತಪ್ಪೇ-ಕೆಲವೊಮ್ಮೆ ಬಾಯಿತಪ್ಪಿ ಇಂತಹ ಪದಗಳು ಬಂದಿರಬಹುದು ಎಂದು ಸಹಾನುಭೂತಿಯಿಂದ ನೋಡಬಹುದು. ಆದರೆ ಆ ರೀತಿಯ ಮಾತುಗಳನ್ನು ಗಣಾಚಾರದ ಹೆಸರಿನಲ್ಲಿ ಸಮರ್ಥಿಸುವ ಪ್ರವೃತ್ತಿಯನ್ನು ಸಾತ್ವಿಕವಾಗಿ ಮತ್ತು ತತ್ವಾಧಾರಿತವಾಗಿ ವಿರೋಧಿಸಲೇಬೇಕು. ನಿಜವಾಗಿ ಶಿವಶರಣರು ಪ್ರತಿಪಾದಿಸಿದ ಗಣಾಚಾರ ಯಾವುದು? ಪ್ರತ್ಯೇಕ ಧರ್ಮದ ಪರವಾಗಿ ನಿಂತವರು ಹಿಂದೂ ಧರ್ಮದ ಬಗ್ಗೆ ಅಸಹಿಷ್ಣುತೆಯಿಂದ ಮಾತನಾಡುವುದೇ ಗಣಾಚಾರವೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ವಚನ ಸಾಹಿತ್ಯದತ್ತ ಒಮ್ಮೆ ತಿರುಗಿ ನೋಡುವುದು ಅಗತ್ಯ.

ಅದೇ ಉದ್ದೇಶದಿಂದ ಈ ಲೇಖನ ರೂಪುಗೊಂಡಿದೆ. ಬಸವಣ್ಣವರು ಸಮಾಜವನ್ನು ಧರ್ಮದ ಮಾರ್ಗದಲ್ಲಿ ಸಾಗಿಸಲು ಐದು ಪ್ರಮುಖ ಆಚಾರಗಳನ್ನು ರೂಪಿಸಿದರು; ಇವು ಕೇವಲ ಆಚರಣೆ ಗಳಲ್ಲ, ವ್ಯಕ್ತಿಯನ್ನೂ ಸಮಾಜವನ್ನೂ ಸಂಸ್ಕರಿಸುವ ಮೌಲ್ಯ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯ ಚೆನ್ನಬಸವಣ್ಣನವರ ಒಂದು ವಚನವನ್ನು ಗಮನಿಸುವುದು ಸೂಕ್ತವಾಗಿದೆ.

‘ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆ ಯೆಂತೆಂದಡೆ, ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ. ಅವರೊಕ್ಕುದ ಕೊಂಬುದೆ ಶಿವಾಚಾರ.

ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯ ಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ. ಇಂತಿ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.’(ವ.ಸ 1589) ‘ಲಿಂಗಾಚಾರ’ ಎಂದರೆ ಅಂಗದ ಮೇಲೆ ಲಿಂಗವನ್ನು ಧರಿಸಬೇಕು, ನೋಡುವ ನೋಟ, ಕೊಂಬುವ ಪ್ರಸಾದ ಲೆಲ್ಲವನ್ನು ಲಿಂಗಮುಖವಾಗಿ ತೆಗೆದುಕೊಳ್ಳಬೇಕು.

ಗುರುಲಿಂಗ ಜಂಗಮರಿಗೆ ಅನ್ಯವ ಬಗೆಯದೆ ಸುವಿಚಾರ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು. ‘ಸದಾಚಾರ’ ಎಂದರೆ ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗ ಘಟಸರ್ಪ. ಅಂದರೆ ಸತ್ಯ ಶುದ್ಧ ಕಾಯಕದಿಂದ ಗುರುಲಿಂಗ ಜಂಗಮರ ಸೇವೆಯನ್ನು ಮಾಡುವಲ್ಲಿ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ಧಗೊಂಡು ಲಿಂಗವು ಮೆಚ್ಚುವಂತಾಗುವುದೇ ಸದಾಚಾರವು. ಶಿವಾಚಾರ ಎಂದರೆ ಜಗದ ಜನರೆಲ್ಲರೂ ಶಿವ ಸ್ವರೂಪಿಗಳು ಎಂಬ ಸಮತಾಭಾವ. ಲಿಂಗ, ವರ್ಣ, ವರ್ಗ ಭೇದವಿಲ್ಲದೇ, ಶಿವನ ಕಾಣಲು ಪ್ರತಿ ಯೊಬ್ಬರಿಗೂ ಸಮಾನ ಅವಕಾಶವಿದೆ ಅದಕ್ಕೆ ವರ್ಣ, ಜಾತಿ, ಆಶ್ರಮಗಳಲ್ಲಿಯ ಭೇದಭಾವವಿಲ್ಲ ಎಂದು ಅರಿತು ನಡೆಯುವುದು.

‘ಗಣಾಚಾರ’ ಎಂದರೆ ಶಿವಾಚಾರಿಯಾದವನು ಶಿವನಿಂದೆಯ ಮಾಡಲಾಗದು. ಶಿವನಿಂದೆಯ ಕೇಳಲಾಗದು. ಪರರನ್ನು ನಿಂದಿಸದೆ ಪರಶಿವನ ಮೆಚ್ಚುಗೆಯನ್ನು ಪಡೆಯಬೇಕು. ‘ಭೃತ್ಯಾಚಾರ’ ಎಂದರೆ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂಥ ಹಿರಿಯರಿಲ್ಲ ಎಂಬುದೇ ಭೃತ್ಯಾಚಾರವು. ಆನು ಭಕ್ತ ನೀನು ಸ್ವಾಮಿ ನಾನಿನ್ನ ಕಿಂಕರನು ಎಂಬ ಭಾವ ಬರಬೇಕು.

ಇದೇ ಕಿಂಕರಭಾವ ಇತರ ಸಾಧಕ ಶರಣರಲ್ಲಿಯೂ ಇಟ್ಟುಕೊಳ್ಳಬೇಕು, ಅವರ ಸೇವಿಸಬೇಕು. ಶಿವಭಕ್ತರ ವಿಚಾರದಲ್ಲಿ ವಿನಯಶೀಲನಾಗಿರಬೇಕು. ಶಿವ ನಿಂದೆಯನ್ನು ಮಾಡದೇ ಇರುವುದು, ಶಿವ ನಿಂದೆ ಕೇಳದೇ ಇರುವುದು, ಶಿವ ನಿಂದೆಯನ್ನು ಸಹಿಸದೇ ಇರುವುದು ಗಣಾಚಾರ. ಆದರೆ ಇಂದು ಒಂದು ಗುಂಪು ಗಣಾಚಾರವನ್ನು ತಪ್ಪಾಗಿ ಅರ್ಥೈಸುತ್ತಿದೆ.

ಭಜನೆ ಮತ್ತು ನಿಂದನೆಗಳನ್ನು ಗಣಾಚಾರ ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಉದಾಹರಣೆಯಾಗಿ ವಿಷ ಹಾಕಬೇಕು, ಎಳೆದು ಹೊಡೆಯಬೇಕು ಇನ್ನೂ ಅನೇಕ ಶಬ್ದಗಳು ಬಸವ ಬೆಳವಿಯ ಸ್ವಾಮಿಗಳಿಂದ ಬಂದು ವೈರಲ್ ಆಗಿವೆ. ಗಣಾಚಾರ ಎಂದರೆ ಸಾಮಾನ್ಯವಾಗಿ ಹೋರಾಟ ಎಂದು ಅರ್ಥ ಮಾಡಲಾಗುತ್ತಿದೆ. ಇದು ಕಮ್ಯುನಿಸ್ಟ್‌ರ ವ್ಯಾಖ್ಯಾನ.

ಇವರಿಗೆ ಶಿವಶರಣರ ಪರಂಪರೆ ವರ್ಗ ಹೋರಾಟವಾಗಿ ಕಂಡಿದೆ. ಹೋರಾಟ ಎಂದ ಮೇಲೆ ಉಗ್ರ ವಾಗಿ ಇರಬೇಕು ಎನ್ನುವ ಕಾರಣದಿಂದ ಲಿಂಗಾಯತದಲ್ಲಿ ಹೊಕ್ಕಿರುವ ಕಮ್ಯುನಿಸ್ಟ್‌ರು ಅಸಹಿಷ್ಣುತೆಯನ್ನು ಗಣಾಚಾರ ಎಂಬುದಾಗಿ ಮಾಡಿದ್ದಾರೆ. ಕಮ್ಯುನಿಸಂ ವರ್ಗ ಸಂಘರ್ಷ, ವ್ಯವಸ್ಥೆಯ ಉರುಳಿಸುವಿಕೆ ಮತ್ತು ಹಲವಾರು ಬಾರಿ ಸಂಘರ್ಷಾಧಾರಿತ ಮಾರ್ಗವನ್ನು ಒತ್ತಿ ಹೇಳುತ್ತದೆ.

ಆದರೆ ಗಣಾಚಾರವು ಶಿವ ತತ್ವವನ್ನು ಒಳಗೊಂಡು ಧರ್ಮದ ಗಡಿಯೊಳಗಿದ್ದು ಸಂಸ್ಕಾರಪೂರಿತ ವಾಗಿದೆ. ಗಣಾಚಾರ ಎಂದರೆ ಅನ್ಯಾಯದ ವಿರುದ್ಧ ನಿಲ್ಲುವುದು, ಆದರೆ ಅದು ದ್ವೇಷ ಅಥವಾ ಅಸಹಿಷ್ಣುತೆಯಲ್ಲ, ಬಸವಣ್ಣನವರ ತತ್ವ ಭಕ್ತಿಯ ಆಧಾರಿತವಾಗಿದೆ. ಶಾಂತಿಯ ಆಧಾರಿತವಾಗಿದೆ ಕ್ರಾಂತಿಯ ಭ್ರಮೆಯಿಂದ ಹೊರತಾಗಿದೆ.

ಒಂದು ಪುಡಿಗುಂಪು ಗಣಾಚಾರವನ್ನು ಹೋರಾಟ, ಆಕ್ರೋಶ ಮತ್ತು ಪ್ರತಿಭಟನೆಗಳೊಂದಿಗೆ ಸಮಾನ ವಾಗಿ ತೋರಿಸಲು ಪ್ರಯತ್ನಿಸುತ್ತಿವೆ. ಇದು ಅದರ ಮೂಲ ಅರ್ಥವನ್ನು ವಿಕೃತ ಗೊಳಿಸುತ್ತದೆ. ಇದು ಬಸವಣ್ಣರನ್ನು ಅವರ ಆಧ್ಯಾತ್ಮಿಕ ಮತ್ತು ಸಮನ್ವಯತೆಯ ಸಂದೇಶವನ್ನು ಕಡೆಗಣಿಸಿ ಕೇವಲ ಸಾಮಾಜಿಕ ಕ್ರಾಂತಿಕಾರನಾಗಿ ಸೀಮಿತಗೊಳಿಸುವ ಹುನ್ನಾರದ ಭಾಗವಾಗಿದೆ. ಇದರಿಂದ ಯುವಕರಲ್ಲಿ ಹೋರಾಟವೇ ಧರ್ಮ ಎಂಬ ತಪ್ಪು ಮನೋಭಾವ ಬೆಳೆಸುವ ಅಪಾಯ ವಿದೆ.

ವಚನಗಳಲ್ಲಿರುವ ಶಾಂತಿ, ಸಮಾನತೆ ಮತ್ತು ಆತ್ಮಪರಿಷ್ಕಾರದ ಅಂಶಗಳನ್ನು ಬದಿಗೊತ್ತಿ, ಕೇವಲ ವಿರೋಧದ ಅಂಶವನ್ನು ಮಾತ್ರ ಮುಂದಿಟ್ಟುಕೊಳ್ಳುವುದು ಗಣಾಚಾರದ ಸತ್ಯಸ್ವರೂಪಕ್ಕೆ ವಿರುದ್ಧವಾಗಿದೆ.

ಬಸವಣ್ಣನ ಕ್ರಾಂತಿ ಎಂದರೆ ಸಮಾಜವನ್ನು ಒಡೆಯುವುದು ಅಲ್ಲ, ಅದನ್ನು ಶುದ್ಧೀಕರಿಸಿ ಒಗ್ಗೂಡಿಸುವುದು. ಆದ್ದರಿಂದ ಗಣಾಚಾರವನ್ನು ಕಮ್ಯುನಿ ವಿಚಾರಕ್ಕೆ ಹೊಂದಿಸಿಕೊಳ್ಳುವುದು ಮೂಲತತ್ವದ ಅಪಅರ್ಥೈಸುವಿಕೆ ಎನ್ನಬಹುದು.

ಒಟ್ಟಿನಲ್ಲಿ ನೋಡಿದರೆ, ಅಸಹಿಷ್ಣುತೆ ಎಂದಿಗೂ ಗಣಾಚಾರವಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗಣಾಚಾರವು ಶಿವನಿಂದೆ ತಡೆಯುವ, ಧರ್ಮವನ್ನು ಕಾಪಾಡುವ, ಸಂಯಮಿತ ಮತ್ತು ತತ್ವಾಧಾರಿತ ನಿಲುವಾಗಿದ್ದು, ಅದು ದ್ವೇಷ, ನಿಂದನೆ ಅಥವಾ ಆಕ್ರೋಶದ ಭಾಷೆಯಲ್ಲಿಯೇ ವ್ಯಕ್ತವಾಗುವುದಿಲ್ಲ.

ಇತ್ತೀಚಿನ ಕೆಲವು ಘಟನೆಗಳು ಮತ್ತು ಅವುಗಳನ್ನು ಸಮರ್ಥಿಸುವ ಪ್ರಯತ್ನಗಳು ಗಣಾಚಾರದ ನಿಜಸ್ವರೂಪವನ್ನು ಮಸುಕಾಗಿಸುವ ಅಪಾಯವನ್ನು ಉಂಟುಮಾಡುತ್ತಿವೆ. ಬಸವಣ್ಣನವರ ತತ್ವವನ್ನು ಕಮ್ಯುನಿಸ್ಟ್ ರೀತಿಯ ಹೋರಾಟದ ಚೌಕಟ್ಟಿನಲ್ಲಿ ಸೀಮಿತಗೊಳಿಸುವುದು‌ ಅವರ ಮಹತ್ವವನ್ನು ಕುಗ್ಗಿಸುವುದಷ್ಟೇ ಅಲ್ಲ, ಸಮಾಜದಲ್ಲಿ ತಪ್ಪು ದಿಕ್ಕನ್ನು ನೀಡುವ ಕಾರ್ಯವಾಗಿದೆ.

ನಿಜವಾದ ಗಣಾಚಾರವು ಶಾಂತಿ, ಭಕ್ತಿ, ಸಮಾನತೆ ಮತ್ತು ಆತ್ಮಪರಿಷ್ಕಾರದ ಮಾರ್ಗದಲ್ಲಿ ನಡೆಯುವ ಪ್ರತಿರೋಧವಾಗಿದ್ದು, ಅದು ಸಮಾಜವನ್ನು ಒಡೆಯುವುದಿಲ್ಲ, ಒಗ್ಗೂಡಿಸುತ್ತದೆ. ಆದ್ದರಿಂದ, ಗಣಾಚಾರದ ಹೆಸರಿನಲ್ಲಿ ಅಸಹಿಷ್ಣುತೆಯನ್ನು ಸಮರ್ಥಿಸುವ ಬದಲು, ಬಸವಣ್ಣನವರ ವಚನಗಳ ಬೆಳಕಿನಲ್ಲಿ ಅದರ ಶುದ್ಧ ಅರ್ಥವನ್ನು ಅರಿತು ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.