ಧರ್ಮದಂಗಲ್
ಟಿ.ಎನ್.ವಾಸುದೇವ ಮೂರ್ತಿ
ಸನಾತನ ಧರ್ಮ ಸರ್ವನಾಶವಾಗಬೇಕು ಎಂದು ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಎರಡನೆಯ ಸಲ ಪುನರುಚ್ಚರಿಸಿದಾಗ ಹಿಂದುತ್ವವಾದಿಗಳು ಮೊದಲ ಸಲದಷ್ಟು ತೀವ್ರ ವಾಗಿ ಪ್ರತಿಕ್ರಿಯಿಸಲಿಲ್ಲ. ಯಾರೋ ಹೇಳುತ್ತಾರೆಂದ ಮಾತ್ರಕ್ಕೆ ಅದು ಸರ್ವನಾಶ ವಾಗುವುದಿಲ್ಲ ಎಂದು ಅವರ ಹೇಳಿಕೆಯನ್ನು ನಿರ್ಲಕ್ಷಿಸಿದರು.
ಸನಾತನವೆಂದರೆ ಶಾಶ್ವತವಾದುದು, ಎಂದಿಗೂ ಅಳಿಯದಂತಹುದು ಎಂಬ ಅರ್ಥವಿದೆ. ಈ ವಿಶ್ವಕ್ರಮದಲ್ಲಿ ಕೆಲವು ಸತ್ಯಗಳಿಗೆ ಸಾವಿಲ್ಲ. ನ್ಯೂಟನ್ನಿನ ನಿಯಮಗಳು ಹೇಗೆ ನ್ಯೂಟನ್ ಹುಟ್ಟುವ ಮುಂಚೆಯೂ ಇದ್ದವೋ, ಅವನು ಸತ್ತ ಮೇಲೆಯೂ ಇದ್ದೇ ಇದೆಯೋ ಹಾಗೆ. ‘ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್’ (ಎಲ್ಲದಕ್ಕೂ ಯಾವುದು ಆಧಾರ ವಾಗಿದೆಯೋ ಅದು ಅವಿನಾಶಿಯಾದುದು) ಎಂದು ಗೀತೆಯಲ್ಲಿ (2.17) ಶ್ರೀಕೃಷ್ಣ ನುಡಿದಿದ್ದಾನೆ.
ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ್ದಷ್ಟೇ ಅಲ್ಲ; ಎಲ್ಲ ಧರ್ಮಗಳ ಆಂತರಿಕ ಸತ್ಯಗಳೂ ಅವಿನಾಶಿಯಾದುದಾಗಿದೆ, ಸನಾತನವಾದುದಾಗಿದೆ. ಏಕೆಂದರೆ ಎಲ್ಲ ಧರ್ಮಗಳೂ ಮೂಲ ಭೂತವಾಗಿ ಒಂದೇ ಸತ್ಯವನ್ನು ವಿವಿಧ ಭಾಷೆಗಳಲ್ಲಿ, ವಿವಿಧ ವಿಧಾನಗಳಲ್ಲಿ ಸಾರುತ್ತಿವೆ (ಏಕಂ ಸತ್ ವಿಪ್ರಾಃ ಬಹುಧಾ ವದಂತಿ). ವೈದಿಕ ಋಷಿಗಳ ಮಾತುಗಳಷ್ಟೇ ಅಲ್ಲ, ಕ್ರಿಸ್ತ, ಪೈಗಂಬರ್, ಬುದ್ಧ ಮುಂತಾದ ಧರ್ಮಪ್ರವರ್ತಕರ ಬೋಧನೆಗಳೂ ಸಹ ಸನಾತನವೇ.
ಆದ್ದರಿಂದಲೇ ಮಹಾತ್ಮ ಗಾಂಽಜಿ ಎಲ್ಲ ಧರ್ಮ ಗ್ರಂಥಗಳಲ್ಲಿ ಕಂಡುಬರುವ ಏಕಸೂತ್ರತೆ ಯನ್ನು, ಏಕತೆಯ ಅಂಶಗಳನ್ನು, ಏಕರೂಪದ ಬೋಧನೆಗಳನ್ನು ಶೋಧಿಸುತ್ತಿದ್ದರು, ಅಂತಹ ವಾಕ್ಯಗಳನ್ನು ತಮ್ಮ ದೈನಂದಿನ ಪ್ರಾರ್ಥನಾ ಸಭೆಗಳಲ್ಲಿ ಪಠಿಸುತ್ತಿದ್ದರು.
ಇದನ್ನೂ ಓದಿ: Dr T N Vasudevamurthy Column: ಕೃತಕ ಬುದ್ಧಿಮತ್ತೆ: ದ್ವಿತೀಯ ದರ್ಜೆಯ ಸ್ವೋಪಜ್ಞತೆ
‘ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ’ (ಅರ್ಜುನ, ಸೂತ್ರದೊಳಗೆ ಮಣಿಗಳು ಪೋಣಿಸಿದಂತೆ ಎಲ್ಲವೂ ನನ್ನೊಳಗೆ ಪೋಣಿಸಲ್ಪಟ್ಟಿವೆ) ಎಂದು ಶ್ರೀಕೃಷ್ಣ (ಗೀತೆ 7.7) ಉಪದೇಶಿಸಿದ್ದಾನೆ. ತೋರಿಕೆಯ ಬಾಹ್ಯ ಆಚರಣೆಗಳು ಹೊರಗೆ ಕಾಣಿಸುವ ಮಣಿಗಳಿದ್ದಂತೆ.
ಮಣಿಗಳು ಹಲವು ಗಾತ್ರಗಳಲ್ಲಿ, ರೂಪಗಳಲ್ಲಿ, ಬಣ್ಣಗಳಲ್ಲಿ ಕಂಡು ಬರುತ್ತದೆ. ಆದರೆ ಅವೆಲ್ಲವನ್ನೂ ಧರಿಸಿಕೊಂಡಿರುವ ಸೂತ್ರ ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಧರ್ಮಗಳ ಆಂತರಿಕ ಸತ್ಯ ಸೂತ್ರದಂತೆ ಒಂದೇ; ಆದರೆ ಬಾಹ್ಯ ಆಚರಣೆಗಳು ಮಣಿಗಳಂತೆ ವಿಭಿನ್ನ ವಾದುದು, ಕೆಲವು ಸಲ ವೈರುದ್ಧ್ಯಕರವಾದುದು. ಈ ಆಚರಣೆಗಳು ಮೇಲ್ನೋಟಕ್ಕೆ ಧಾರ್ಮಿಕ ಆಚರಣೆಗಳಂತೆ ತೋರಿದರೂ ಇವು ಆಯಾ ಕಾಲದ ನೈತಿಕ, ಸಾಮಾಜಿಕ ವಿದ್ಯಮಾನಗಳಿಂದ ಪ್ರಭಾವಿತವಾಗಿರುತ್ತವೆ.
ಧರ್ಮಗಳ ಆಂತರ್ಯದ ಸನಾತನ ತತ್ವಗಳನ್ನು ಪರಿಗಣಿಸುವುದಾದರೆ ಈ ಜನಿವಾರ, ಶಿವದಾರ, ಹಿಜಾಬ್, ಶಿಲುಬೆ ಮುಂತಾದ ಬಾಹ್ಯ ಆಚರಣೆ, ಆಡಂಬರಗಳು ಅತ್ಯಂತ ಗೌಣವಾದುದು, ಉಪೇಕ್ಷೆಗೆ ಅರ್ಹವಾದುದು. ಆದ್ದರಿಂದಲೇ ಶ್ರೀರಾಮ ಕೃಷ್ಣರು ಜನಿವಾರ ವನ್ನು ಕಿತ್ತೆಸೆದು ಸಾಧನೆಗೆ ತೊಡಗಿಕೊಂಡುದು, ಅಲ್ಲಮನನ್ನೂ ಒಳಗೊಂಡಂತೆ ನಮ್ಮ ಹಲವಾರು ಶಿವಶರಣರು ಪರಮಸತ್ಯದ ಬಾಹ್ಯ ಕುರುಹಾಗಿರುವ ಇಷ್ಟಲಿಂಗದ ಪೂಜೆಯನ್ನು ವಿಡಂಬಿಸಿದ್ದು. ‘ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ಬೇಟದ ಮರುಳಗೆ ಲಜ್ಜೆ ಮುನ್ನುಂಟೆ? ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ ದಂದುಗವೇಕೆ? ಮಿಸುನಿ ಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ? ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?’ ಎಂದು ಅಲ್ಲಮ ಪರಮಸತ್ಯಕ್ಕೆ ಕುರುಹುಂಟೇ ಎಂದು ಕೇಳುತ್ತಾನೆ.
ನಮ್ಮ ಶರಣರ ಸಾಹಿತ್ಯದಲ್ಲಿ ಇಂತಹ ಹಲವು ವಚನಗಳನ್ನು ಕಾಣಬಹುದು. ಆದರೆ ರಾಜಕಾರಣಿಗಳ ಅನಗತ್ಯ ಹಸ್ತಕ್ಷೇಪದಿಂದಾಗಿ ಧರ್ಮದ ವಿಷಯದಲ್ಲಿ ಎಷ್ಟೋ ಸಲ ಪ್ರಧಾನವಾದುದು ಗೌಣವಾಗುತ್ತದೆ ಮತ್ತು ಗೌಣವಾದುದು ತನಗೆ ಸಲ್ಲದ ಬೆಲೆಯನ್ನು ಪಡೆದುಕೊಳ್ಳುತ್ತದೆ.
ಉದಾಹರಣೆಗೆ, ಪರೀಕ್ಷಾ ಅಧಿಕಾರಿಗಳು ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದರೆಂಬ ಕಾರಣಕ್ಕೆ ರಾಜ್ಯದ ಹಲವೆಡೆಗಳಲ್ಲಿ ಬ್ರಾಹ್ಮಣ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾರ್ಯಕರ್ತರ ಆಕ್ರೋಶವನ್ನು ಸ್ವಲ್ಪ ಬದಿಗಿರಿಸಿ ಸಂಪ್ರದಾಯಸ್ಥ ಬ್ರಾಹ್ಮಣ ರನ್ನು ಈ ವಿವಾದದ ಕುರಿತು ಕೇಳಿದರೆ ಅವರು ಹೇಳುವ ಕತೆಯೇ ಬೇರೆ. ಓರ್ವ ಹಿರಿಯ ಬ್ರಾಹ್ಮಣ ವಿದ್ವಾಂಸರನ್ನು ಈ ಕುರಿತು ಪ್ರಶ್ನಿಸಿದಾಗ ಅವರು ಯಾವುದೇ ರೋಷಾವೇಶ ಹೊರಹಾಕದೇ ಲೋಕಾಭಿರಾಮವಾಗಿ ಹೀಗೆಂದಿದ್ದರು: ಪರೀಕ್ಷಾ ಸಿಬ್ಬಂದಿ ಕತ್ತರಿಸುವು ದಲ್ಲ, ಅವರು ಕೈಯಿಂದ ಮುಟ್ಟಿದರೂ ಸಾಕು; ಜನಿವಾರ ಮೈಲಿಗೆಯಾಗುತ್ತದೆ, ಮನೆಗೆ ಬಂದ ಕೂಡಲೆ ನಾವೇ ಅದನ್ನು ಕತ್ತರಿಸಿ ಶುಚಿರ್ಭೂತರಾಗಿ ಶಾಸ್ತ್ರೋಕ್ತ ರೀತಿಯಲ್ಲಿ ಬೇರೆ ಜನಿವಾರ ಹಾಕಿಕೊಳ್ಳುತ್ತೇವೆ. ಅವರು ನಮ್ಮ ಜನಿವಾರಕ್ಕೆ ಹಾನಿ ಮಾಡ ಬಹುದು, ಆದರೆ ನಮ್ಮ ಗಾಯತ್ರೀ ಮಂತ್ರಜಪ ಸಾಧನೆಗೆ ಹಾನಿ ಮಾಡಿಯಾರೇ? ಎಂದು ಅವರೇ ಮರುಪ್ರಶ್ನೆ ಮಾಡಿದ್ದರು.
ಧರ್ಮದ ಹೆಸರಿನಲ್ಲಿ ಅಬ್ಬರಿಸುವವರಿಗೆ ಈ ತಣ್ಣನೆಯ ವಿವೇಕ ಅತ್ಯಗತ್ಯ. ಇಲ್ಲವಾದರೆ ದುರುಳ ರಾಜಕಾರಣಿಗಳು ತಮ್ಮ ಹಿತಾಸಕ್ತಿಗಾಗಿ ಧರ್ಮವನ್ನು ತಮ್ಮ ಪಾಲಿನ ಆಡುಂಬೊಲವಾಗಿಸಿಕೊಳ್ಳುತ್ತಾರೆ. ಹಿಜಾಬ್, ಬುರ್ಖಾ ಮುಂತಾದವು ಧಾರ್ಮಿಕ ಸಂಕೇತವೇ ಅಲ್ಲವೇ ಎಂದು ಮೊದಲು ಮುಸ್ಲಿಂ ಸಮುದಾಯ ಸ್ಪಷ್ಟಪಡಿಸಿಕೊಳ್ಳಬೇಕು.
ಏಕೆಂದರೆ ಭಾರತದ ಚಿಂತಕರು ಹಾಗು ಬುದ್ಧಿಜೀವಿಗಳು ಅವರ ನಂಬಿಕೆಗೆ ವ್ಯತಿರಿಕ್ತ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಡಾ.ಅಂಬೇಡ್ಕರ್ ಹಿಜಾಬ್ ಕುರಿತು ಹೀಗೆ ನುಡಿದಿದ್ದಾರೆ. ಹೆಂಗಸರು ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸಿ ಓಡಾಡುವ ದೃಶ್ಯ ಭಾರತದ ಬೀದಿಗಳಲ್ಲಿ ಕಾಣಸಿಗುವ ಅತ್ಯಂತ ಅಸಹ್ಯಕರ ದೃಶ್ಯ. ಹೀಗೆ ಹೊರ ಜಗತ್ತಿ ನೊಂದಿಗೆ ಮಡಿವಂತಿಕೆಯಿಂದ ವರ್ತಿಸುವ ಹೆಣ್ಣುಮಕ್ಕಳು ತಮ್ಮ ಶಾರೀರಕ ಸಮತೋಲನ ಕಳೆದುಕೊಳ್ಳುತ್ತಾರೆ.
ರಕ್ತಹೀನತೆ, ಕ್ಷಯ ಮುಂತಾದ ಗಂಭೀರ ಕಾಯಿಲೆಗಳಿಂದ ನರಳುತ್ತಾರೆ. ಅವರ ಮೂಳೆಗಳು ದುರ್ಬಲವಾಗುತ್ತವೆ. ಬುರ್ಖಾ ಮುಸ್ಲಿಂ ಹೆಂಗಸರ ಮಾನಸಿಕ, ನೈತಿಕ ಸತ್ವವನ್ನು ನಾಶ ಮಾಡುತ್ತದೆ. ಆರೋಗ್ಯಪೂರ್ಣ ಸಾಮಾಜಿಕ ಸಂಬಂಧ ಹೊಂದಿರದ ವ್ಯಕ್ತಿಗಳು ನೈತಿಕ ವಾಗಿ ಪತನವಾಗುತ್ತಾರೆ.
ವಿಶಾಲವಾದ ಹೊರಜಗತ್ತಿನಿಂದ ಪ್ರತ್ಯೇಕಗೊಂಡವರು ಕ್ಷುಲ್ಲಕವಾದ ಕೌಟುಂಬಿಕ ಕಲಹದಲ್ಲಿ ಮುಳುಗುತ್ತಾರೆ. ತತ್ಪರಿಣಾಮವಾಗಿ ಅವರ ಜೀವನ ದೃಷ್ಟಿಯೇ ಸಂಕುಚಿತ ವಾಗುತ್ತದೆ. ಬುರ್ಖಾಧಾರಿಗಳು ಇತರೆ ಸಮುದಾಯಗಳ ತಮ್ಮ ಸೋದರಿಯರಿಗಿಂತ ಎಲ್ಲ ವಿಷಯದಲ್ಲೂ ಹಿಂದುಳಿಯುತ್ತಾರೆ. ಹೊರಗಿನ ಯಾವ ಚಟುವಟಿಕೆಯಲ್ಲೂ ಕ್ರಿಯಾಶೀಲ ರಾಗದವರು ಮಾನಸಿಕ ಗುಲಾಮತನದಿಂದ, ಕೀಳರಿಮೆಯಿಂದ ಕುಗ್ಗಿ ಹೋಗುತ್ತಾರೆ.
ಅವರಲ್ಲಿ eನದಾಹ ಇರುವುದಿಲ್ಲ. ಮನೆಯ ನಾಲ್ಕು ಗೋಡೆಯಿಂದ ಹೊರಗಿರುವ ಯಾವ eನವಿಷಯದಲ್ಲೂ ಆಸಕ್ತಿ ತಳೆಯಬಾರದೆಂದು ಅವರಿಗೆ ಕಲಿಸಲಾಗುತ್ತದೆ. ಬುರ್ಖಾಧಾರಿ ಗಳು ಅಸಹಾಯಕರಾಗುತ್ತಾರೆ, ಯಾವುದೇ ಸವಾಲನ್ನು ಎದುರಿಸುವಲ್ಲಿ ಅಸಮರ್ಥ ರಾಗುತ್ತಾರೆ. ಕಾಮದ ವಿಷಯದಲ್ಲಿ ಗಂಡು ಹೆಣ್ಣುಗಳು ತಮ್ಮತಮ್ಮ ಬೆಳೆಸಿಕೊಂಡಿರುವ ಅನುಮಾನವೇ ಈ ಬುರ್ಖಾಧಾರಣೆಯ ಮೂಲವಾಗಿದೆ.
ಪರಸ್ಪರರ ಮೇಲೆ ನಿಗಾ ಇಡುವ ಉದ್ದೇಶದ್ದಾಗಿದೆ. ಆದರೆ ಈ ಪದ್ಧತಿ ಅನುಸರಿಸುವು ದರಿಂದ ಆ ಉದ್ದೇಶ ಸಾಧನೆ ಉಂಟಾಗಲಿಲ್ಲ, ಬದಲಾಗಿ ಅವರ ನೈತಿಕತೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾದವು. ಮುಸ್ಲಿಂ ಪುರುಷರಿಗೆ ತಮ್ಮ ಕುಟುಂಬದ ಹೊರಗಿನ ಹೆಣ್ಣುಮಕ್ಕಳೊಂದಿಗೆ ಸಂವಹನವೇ ಅಸಾಧ್ಯವಾಯಿತು.
ಗಂಡು ಹೆಣ್ಣುಗಳನ್ನು ಲಿಂಗಾಧಾರಿತವಾಗಿ ಪ್ರತ್ಯೇಕಿಸುವ ಸಮಾಜದಲ್ಲಿ ಅನಾರೋಗ್ಯಕರ ಲೈಂಗಿಕ ವರ್ತನೆ, ಅಸಹಜ ಹವ್ಯಾಸಗಳು ಮತ್ತು ರೋಗಗ್ರಸ್ತ ಪ್ರವೃತ್ತಿಗಳು ಹುಟ್ಟಿ ಕೊಳ್ಳುತ್ತವೆ. ಇದನ್ನೆಲ್ಲ ವಿವರಿಸಲು ಮನೋವಿeನಿಗಳು ಬೇಕಾಗಿಲ್ಲ. ನಮ್ಮ ಸಾಮಾನ್ಯ ಬುದ್ಧಿಗೇ ಅರ್ಥವಾಗುತ್ತದೆ. ಹಿಂದೂ ಸಮುದಾಯದಲ್ಲೂ ಪರ್ದಾ ಪದ್ಧತಿ ಇದೆ,
ಅಲ್ಲಿ ಅದರ ದುಷ್ಪರಿಣಾಮವೂ ಉಂಟಾಗುತ್ತಿದೆ. ಆದರೆ ಒಂದು ವ್ಯತ್ಯಾಸವಿದೆ. ಮುಸ್ಲಿಮರು ಬುರ್ಖಾ ಪದ್ಧತಿಗೆ ಧಾರ್ಮಿಕತೆಯ ಲೇಪನ ನೀಡುತ್ತಾರೆ. ಆದರೆ ಹಿಂದೂ ಗಳಲ್ಲಿ ಆ ಬಗೆಯ ನಂಬಿಕೆ ಇಲ್ಲ. ಪರ್ದಾ ಹಿಂದೂಗಳಿಗಿಂತಲೂ ಮುಸ್ಲಿಮರಲ್ಲಿ ಆಳವಾಗಿ ಬೇರೂರಿದೆ, ಇದನ್ನು ತೊಡೆದು ಹಾಕಬೇಕೆಂದರೆ ಧಾರ್ಮಿಕ ನಿಯಮಗಳು ಹಾಗೂ ಸಾಮಾಜಿಕ ಅಗತ್ಯಗಳ ನಡುವೆ ಘರ್ಷಣೆ ಏರ್ಪಡಬೇಕಾಗುತ್ತದೆ.
ಹಿಂದೂಗಳು ಅಷ್ಟರ ಮಟ್ಟಿಗೆ ಈ ಪದ್ಧತಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಮುಸ್ಲಿಮರಲ್ಲಿ ಇದರ ಮೇಲೆ ನಿಷೇಧ ಹೇರಬೇಕೆಂಬ ಪ್ರಯತ್ನ ನಡೆದ ಯಾವ ಸ್ಪಷ್ಟ ರುಜುವಾತೂ ಕಾಣಸಿಗುವುದಿಲ್ಲ (ಪಾಕಿಸ್ತಾನ ಅಥವಾ ಭಾರತದ ವಿಭಜನೆ, 1945, ಪುಟ 230-231).
ಇನ್ನು ತಸ್ಲಿಮಾ ನಸ್ರೀನ್ ಹೀಗೆನ್ನುತ್ತಾರೆ: ಈ ಪದ್ಧತಿ 7ನೇ ಶತಮಾನದ ಕೆಲವು ಪುರುಷ ದುರಭಿಮಾನಿಗಳಿಂದ ಹುಟ್ಟಿಕೊಂಡಿತು. ಏಕೆಂದರೆ ಆ ಕಾಲಮಾನದಲ್ಲಿ ಹೆಂಗಸರನ್ನು ಕೇವಲ ಲೈಂಗಿಕ ಸುಖದ ವಸ್ತುವಿನಂತೆ ಕಾಣಲಾಗುತ್ತಿತ್ತು. ಹೆಣ್ಣಿನ ಸೌಂದರ್ಯ ನೋಡಿದರೆ ಗಂಡಿನಲ್ಲಿ ಕಾಮೋದ್ರೇಕವಾಗುತ್ತದಂತೆ. ಆದ್ದರಿಂದ ಹೆಂಗಸರು ಬುರ್ಖಾ ಹಿಜಾಬ್ ಧರಿಸಲೇ ಬೇಕು ಎಂದು ಅವರು ಕಟ್ಟಲೆ ಮಾಡಿದರು.
21ನೇ ಶತಮಾನದ ನಾವು ಹಿಜಾಬ್, ಬುರ್ಖಾ ಇತ್ಯಾದಿಗಳು ಹೆಣ್ಣಿನ ಮೇಲೆ ನಡೆಸುವ ದಬ್ಬಾಳಿಕೆಯ ಸಂಕೇತವೆಂದು ಭಾವಿಸುತ್ತೇವೆ. ಬುರ್ಖಾ ಹೆಣ್ಣನ್ನು ಒಂದು ಕಾಮದ ವಸ್ತುವಿನ ಮಟ್ಟಕ್ಕೆ ಇಳಿಸುತ್ತದೆ ಎಂಬುದು ನನ್ನ ಸ್ಪಷ್ಟ ಅಭಿಮತ. ಇದು ಹೆಂಗಸರಿಗೂ, ಹಾಗೆಯೇ ಗಂಡಸರಿಗೂ, ಅವಮಾನಕರವಾದ ಸಂಕೇತವಾಗಿದೆ.
ಧರ್ಮಕ್ಕಿಂತ ಶಿಕ್ಷಣ ಮುಖ್ಯ. ಒಂದು ಸೆಕ್ಯೂಲರ್ ವ್ಯವಸ್ಥೆಯಲ್ಲಿ ಸೆಕ್ಯೂಲರ್ ವಸ್ತ್ರಸಂಹಿತೆ ಇರತಕ್ಕದ್ದು. ಅವರು ಬೇಕಿದ್ದರೆ ತಮ್ಮ ತಮ್ಮ ಮನೆ-ಮಠಗಳಲ್ಲಿ ತಮ್ಮ ನಂಬಿಕೆಯನ್ನು ಆಚರಿಸಿಕೊಳ್ಳಲಿ. ಆದರೆ ಒಂದು ಸೆಕ್ಯೂಲರ್ ಶಿಕ್ಷಣ ಸಂಸ್ಥೆಯಲ್ಲಲ್ಲ.
ಎಲ್ಲಕ್ಕಿಂತ ಮಿಗಿಲಾಗಿ ಸಾರಾ ಅಬೂಬಕರ್, ಬಾನು ಮುಷ್ತಾಕ್, ಕೆ.ಷರೀಫ್ ಮುಂತಾದ ನಮ್ಮ ಕನ್ನಡದ ಯಾವ ಪ್ರಮುಖ ಮುಸ್ಲಿಂ ಚಿಂತಕಿಯರು ಬುರ್ಖಾಧಾರಿಗಳಲ್ಲ ಎಂಬುದು ಗಮನಾರ್ಹ. ಪ್ರಮುಖ ಚಿಂತಕರು ಹಾಗು ಲೇಖಕರು ಸಹ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಹೀಗೆ ಬುರ್ಖಾ ಸೆರೆಮನೆಯೊಳಗೆ ಬಂದಿಗಳನ್ನಾಗಿಸಿಲ್ಲ. ಸಾರಾ ಅಂತೂ ಬುರ್ಖಾಧಾರಣೆಯನ್ನು ತೀವ್ರವಾಗಿ ವಿರೋಧಿಸಿ ಲೇಖನವನ್ನೇ ಬರೆದಿದ್ದಾರೆ.
ನನ್ನ ಮಗಳನ್ನು ಶಾಲೆಗೆ ಕಳಿಸುತ್ತೇನೆ, ಯಾವ ಕಾರಣಕ್ಕೂ ಅವಳಿಗೆ ಬುರ್ಖಾ ತೊಡಿಸುವು ದಿಲ್ಲ ಎಂದು ನನ್ನ ತಂದೆ ನಿರ್ಧರಿಸಿದಾಗ ಅವರು ಸ್ಥಳೀಯ ಮುಸ್ಲಿಂ ನಾಯಕರ ವಿರೋಧ ಎದುರಿಸಬೇಕಾಯಿತು. ಆದರೂ ಅವರು ಧೃತಿಗೆಡಲಿಲ್ಲ ಎಂದು ತಮ್ಮ ಒಂದು ಲೇಖನದಲ್ಲಿ ಬರೆದುಕೊಂಡಿದ್ದಾರೆ.
ಇರಾನ್‌ನಂತಹ ದೇಶಗಳ ಹೆಂಗಸರು ಹಿಜಾಬನ್ನು ವಿರೋಧಿಸಿ ಅದನ್ನು ಬೆಂಕಿಗೆ ಹಾಕುತ್ತಿರುವಾಗ ಇಲ್ಲಿನ ಮುಸ್ಲಿಮರು ಬುರ್ಖಾಧಾರಣೆ ನಮ್ಮ ಪವಿತ್ರವಾದ ಧಾರ್ಮಿಕ ಆಚರಣೆ, ಯಾವ ಕಾರಣಕ್ಕೂ ಅದನ್ನು ಬಿಡುವುದಿಲ್ಲವೆಂದು ಹಟಕ್ಕೆ ಬಿದ್ದರೆ ಇನ್ನೇನು ಮಾಡಲಾದೀತು? ಅವರು ನಂಬಿರುವ ದೇವರೇ ಅವರಿಗೆ ಸದಸದ್ವಿವೇಕ ನೀಡಲಿ ಎಂದು ಪ್ರಾರ್ಥಿಸಬಹುದು ಅಷ್ಟೇ. ಆದರೆ ಕರ್ನಾಟಕದಲ್ಲಿನ ಹಿಜಾಬ್ ವಿವಾದ ಜಗತ್ತಿನ ಇತರೆ ಭಾಗಗಳಲ್ಲಿ ಕಂಡುಬರುವ ಹಿಜಾಬ್ ವಿರೋಧಕ್ಕಿಂತಲೂ ವಿಭಿನ್ನವಾದುದು.
ಇದನ್ನು ಜಗತ್ತಿನ ಇತರೆ ಹಿಜಾಬ್ ವಿವಾದದೊಂದಿಗೆ ಹೋಲಿಸಲಾಗದು, ಹೋಲಿಸಲೂ ಕೂಡದು. ಕೆಲವು ಕಾಲೇಜು ವಿದ್ಯಾರ್ಥಿಗಳು ಹಿಜಾಬನ್ನು ಪ್ರತಿಭಟಿಸಿ ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾಗಿದ್ದರು. ಒಂದು ಹೆಣ್ಣು ಮೈಯೆಲ್ಲ ಮುಚ್ಚಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದರೆ ಆಕೆ ಹೊರಗಿನ ಪುರುಷ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿರುತ್ತಾಳೆ? ಈ ಸಮಾಜದ ಗಂಡಸರು ಕಾಮ ಪಿಪಾಸುಗಳು, ಅತ್ಯಾಚಾರಿ ಗಳು ಆದ್ದರಿಂದ ನನ್ನ ಜಾಗರೂಕತೆಯಲ್ಲಿ ನಾನಿದ್ದೇನೆ ಎಂಬ ಸಂದೇಶವನ್ನಲ್ಲವೇ? ಸಭ್ಯ ಸಮಾಜದಲ್ಲಿ ಯಾವ ಪುರುಷನೂ ಇಂತಹ ಮಿಥ್ಯಾರೋಪ ಸಹಿಸುವುದಿಲ್ಲ.
ತನ್ನನ್ನು ನೀಚನೆಂದು ಕಾಣುವ ಮನಸ್ಥಿತಿಯನ್ನು ವಿರೋಧಿಸಿಯೇ ತೀರುತ್ತಾನೆ. ಅದರಲ್ಲೂ ವರ್ಷಗಟ್ಟಲೆ ಜೊತೆಯಾಗಿಯೇ ಕಲಿಯುವ ತನ್ನ ಸಹಪಾಠಿಯೇ ತನ್ನ ಬಗ್ಗೆ ಹೀಗೆ ಸಂಕುಚಿತವಾಗಿ ಆಲೋಚಿಸಿದರೆ, ಆ ಆಲೋಚನೆಯ ಸಂಕೇತವನ್ನು ಮೈಮೇಲೆ ಧರಿಸಿದರೆ, ಸಹಜವಾಗಿಯೇ ಇಂದಿನ ತರುಣರು ಅದನ್ನು ತಮ್ಮ ಘನತೆ, ನೈತಿಕತೆ, ಸಂಯಮಕ್ಕೆ ಅವಮಾನವೆಂದೇ ಭಾವಿಸುವುದು.
ಆದ್ದರಿಂದ ಕರ್ನಾಟಕದ ಹಿಜಾಬ್ ವಿವಾದವನ್ನು ಧಾರ್ಮಿಕ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ನೋಡದೇ ಒಂದು ಪ್ರತ್ಯೇಕ ಘಟನೆಯನ್ನಾಗಿ, ಯುವಸಮುದಾಯದಲ್ಲಿ ಇತ್ತೀಚೆಗೆ ಬೆಳೆದಿರುವ ಒಂದು ಮನೋ ವೈಜ್ಞಾನಿಕ ಪ್ರಕರಣವನ್ನಾಗಿ ನೋಡಬೇಕಾಗುತ್ತದೆ. ಯಾವುದೇ ಧಾರ್ಮಿಕ ಸಂಕೇತ ಕೆಡುಕೂ ಅಲ್ಲ, ಒಳಿತೂ ಅಲ್ಲ. ಅದು ನಮ್ಮ ಮತ್ತು ಸಮಾಜದ ನಡುವೆ ಯಾವ ಸಂಬಂಧ ಏರ್ಪಡಿಸುತ್ತದೆ ಎಂಬುದನ್ನು ಅವಲಂಬಿಸಿದೆ.
ನಮ್ಮನ್ನು ಎಲ್ಲರೊಂದಿಗೆ ಒಬ್ಬರನ್ನಾಗಿ ಮಾಡುವ ಎಲ್ಲ ಸಂಕೇತಗಳೂ ಧಾರ್ಮಿಕ ಸಂಕೇತಗಳೇ. ಹಾಗಲ್ಲದೇ ಅದು ನಮ್ಮನ್ನು ಸಮಾಜದ ಇತರರಿಗಿಂತ ಮೇಲ್ದರ್ಜೆಯ ವರೆಂದು ಅಥವಾ ಸಮಾಜದ ಇತರರು ನೀಚರು, ಕಾಮುಕರು ಎಂಬ ಸಂದೇಶ ನೀಡು ತ್ತಿದ್ದಲ್ಲಿ ಅದನ್ನು ಕೇಡಿನ ಸಂಕೇತವೆಂದು ಭಾವಿಸಬೇಕಲ್ಲದೇ ಧಾರ್ಮಿಕ ಸಂಕೇತವೆಂದು ತಪ್ಪಾಗಿ ಭಾವಿಸಬಾರದು.