ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ಕೋಟ್ಯಧಿಪತಿಯಾಗುವುದು ತೀರಾ ಅಸಾಧ್ಯ ಮಾತೇನಲ್ಲ!

ಇಂದು ರೂ.1 ಕೋಟಿ ಎಂದರೆ ದೊಡ್ಡ ಮೊತ್ತವಾಗಿ ಕಾಣಬಹುದು. ಆದರೆ ಮುಂದಿನ 15-20 ವರ್ಷ ಗಳಲ್ಲಿ ಹಣದುಬ್ಬರದಿಂದಾಗಿ ಇದರ ಮೌಲ್ಯ ಕಡಿಮೆಯಾಗುತ್ತದೆ. ಆದ್ದರಿಂದ, ಕೇವಲ ರೂ.1 ಕೋಟಿ ಸಂಖ್ಯೆಯನ್ನು ಗುರಿಯಾಗಿಸದೆ, ನಿವೃತ್ತಿಯ ನಂತರವೂ ಜೀವನಶೈಲಿಯನ್ನು ಕಾಪಾಡಿಕೊಳ್ಳಬಲ್ಲಷ್ಟು ದೊಡ್ಡ ಮೊತ್ತವನ್ನು ಗುರಿಯಾಗಿಸಿಕೊಳ್ಳಬೇಕು.

ಮನಿಮೈಂಡೆಡ್

ಇಂದಿನ ದಿನಗಳಲ್ಲಿ ’ಕೋಟ್ಯಧಿಪತಿ’ (Millionaire) ಎಂಬ ಪದದ ಅರ್ಥವು ಹಿಂದಿನ ದಶಕ ಗಳಿಗಿಂತ ಸಾಕಷ್ಟು ಬದಲಾಗಿದೆ. ಆರ್ಥಿಕವಾಗಿ ನೋಡಿದರೆ, ಕೇವಲ ರೂ.1 ಕೋಟಿ ರೂಪಾಯಿ ಆಸ್ತಿ ಹೊಂದಿರುವುದು ಈಗ ಅಸಾಧ್ಯದ ಮಾತೇನಲ್ಲ. ಇದನ್ನು ಸಾಧಿಸುವುದು ಅಷ್ಟು ಕಠಿಣವಲ್ಲ, ಆದರೆ ಅದಕ್ಕೆ ಸರಿಯಾದ ದೃಷ್ಟಿಕೋನ (Mindset ) ಮತ್ತು ಯೋಜನೆ (Planning ) ಬೇಕು. ಇದನ್ನು ವಿಶ್ಲೇಷಿಸುವ ಕೆಲವು ಅಂಶಗಳು ಇಲ್ಲಿವೆ:

ಮೊದಲನೆಯದಾಗಿ ‘ಆಸ್ತಿ’ಯ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳಬೇಕು. ನಮ್ಮಲ್ಲಿ ಅನೇಕರು ಸ್ವಂತ ಮನೆ, ಕಾರು ಅಥವಾ ದೈನಂದಿನ ಬಳಕೆಯ ವಸ್ತುಗಳನ್ನು ಆಸ್ತಿ ಎಂದು ಭಾವಿಸುತ್ತಾರೆ. ಆದರೆ ಹಣಕಾಸಿನ ಭಾಷೆಯಲ್ಲಿ ದೈನಂದಿನ ಬಳಕೆಯ ವಸ್ತುಗಳು ನಿಜವಾದ ಆಸ್ತಿಯಲ್ಲ!

ಹಣಕಾಸು ಪರಿಭಾಷೆಯಲ್ಲಿ ನಿಜವಾದ ಆಸ್ತಿ (Asset) ಯಾವುದೆಂದರೆ, ನಿಮ್ಮ ಜೇಬಿಗೆ ಹಣ ತಂದು ಕೊಡುವ ವಸ್ತುಗಳು ಉದಾಹರಣೆಗೆ ಷೇರುಗಳು, ಮ್ಯೂಚುವಲ್ ಫಂಡ್, ಬಾಡಿಗೆ ಬರುವ ಮನೆ, ಚಿನ್ನ, ಬೆಳ್ಳಿ. ನಿಮ್ಮ ಜೇಬಿನಿಂದ ಹಣವನ್ನು ಹೊರಗೆ ತೆಗೆಯುವ ವಸ್ತುಗಳೂ ಬೇಕಾದಷ್ಟಿವೆ. ಉದಾಹರಣೆಗೆ ಸ್ವಂತ ಉಪಯೋಗದ ಕಾರು, ಲಕ್ಸುರಿ ಬೈಕ್, ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ಸ್ ಸಾಧನಗಳು. ಕೋಟ್ಯಧಿಪತಿಯಾಗಲು ನಿಜವಾದ ಆಸ್ತಿಗಳನ್ನು ಹೊಂದಲು ಗಮನ ಕೊಡಬೇಕು.

ಇಂದು ರೂ.1 ಕೋಟಿ ಎಂದರೆ ದೊಡ್ಡ ಮೊತ್ತವಾಗಿ ಕಾಣಬಹುದು. ಆದರೆ ಮುಂದಿನ 15-20 ವರ್ಷಗಳಲ್ಲಿ ಹಣದುಬ್ಬರದಿಂದಾಗಿ ಇದರ ಮೌಲ್ಯ ಕಡಿಮೆಯಾಗುತ್ತದೆ. ಆದ್ದರಿಂದ, ಕೇವಲ ರೂ.1 ಕೋಟಿ ಸಂಖ್ಯೆಯನ್ನು ಗುರಿಯಾಗಿಸದೆ, ನಿವೃತ್ತಿಯ ನಂತರವೂ ಜೀವನಶೈಲಿಯನ್ನು ಕಾಪಾಡಿ ಕೊಳ್ಳಬಲ್ಲಷ್ಟು ದೊಡ್ಡ ಮೊತ್ತವನ್ನು ಗುರಿಯಾಗಿಸಿಕೊಳ್ಳಬೇಕು.

ಇದನ್ನೂ ಓದಿ: Keshava Prasad B Column: ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಇಂದು ನಿಮ್ಮ ಬಳಿ ಇರುವ ರೂ.1 ಕೋಟಿಯ ಮೌಲ್ಯವು 10 ವರ್ಷಗಳ ನಂತರ ಎಷ್ಟಿರಬಹುದು? ಎಂಬುದನ್ನು ತಕ್ಕಮಟ್ಟಿಗೆ ಲೆಕ್ಕಾಚಾರ ಮಾಡಬಹುದು. ಭಾರತದಲ್ಲಿ ಸಾಮಾನ್ಯವಾಗಿ ಹಣದುಬ್ಬರವು ವಾರ್ಷಿಕ ಸರಾಸರಿ 5 ರಿಂದ 6 ಪರ್ಸೆಂಟ್ ಇರುತ್ತದೆ. ನೀವು ಇಂದಿನ 1 ಕೋಟಿ ರುಪಾಯಿಯನ್ನು 10 ವರ್ಷಗಳ ನಂತರದ ಮೌಲ್ಯಕ್ಕೆ ಹೋಲಿಸಿದರೆ, 5 ಪರ್ಸೆಂಟ್ ಹಣದುಬ್ಬರ ದರದಲ್ಲಿ ರೂ.1 ಕೋಟಿಯ ಕೊಳ್ಳುವ ಶಕ್ತಿಯು ಸುಮಾರು 61.4 ಲಕ್ಷಗಳಿಗೆ ಕುಸಿಯುತ್ತದೆ.

6 ಪರ್ಸೆಂಟ್ ಹಣದುಬ್ಬರ ದರದಲ್ಲಿ 10 ವರ್ಷಗಳ ನಂತರ ಇಂದಿನ 1 ಕೋಟಿಯ ಕೊಳ್ಳುವ ಶಕ್ತಿಯು ಸುಮಾರು 55.8 ಲಕ್ಷಗಳಿಗೆ ಇಳಿಯುತ್ತದೆ. ಅಂದರೆ, ಇಂದು 1 ಕೋಟಿಯಲ್ಲಿ ನೀವು ಏನು ಖರೀದಿಸಬಲ್ಲಿರೋ, ಅದೇ ವಸ್ತು ಅಥವಾ ಸೇವೆಯನ್ನು 10 ವರ್ಷಗಳ ನಂತರ ಖರೀದಿಸಲು ನಿಮಗೆ ಸುಮಾರು 1.6 ಕೋಟಿಯಿಂದ 1.8 ಕೋಟಿಯ ಅಗತ್ಯವಿರುತ್ತದೆ.

ಹಣದುಬ್ಬರ ಎಂದರೆ ವಸ್ತುಗಳ ಬೆಲೆ ಏರಿಕೆ. ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡದೆ ಸುಮ್ಮನೆ ಕೂಡಿಟ್ಟರೆ, ಅದರ ನೈಜ ಮೌಲ್ಯ ಕಾಲದೊಂದಿಗೆ ಕಡಿಮೆಯಾಗುತ್ತದೆ. ನಿಮ್ಮ ಹಣದ ಮೌಲ್ಯವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು, ಅದನ್ನು ಹಣದುಬ್ಬರದ ದರಕ್ಕಿಂತ ಹೆಚ್ಚು ಪ್ರತಿ-ಲ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅನಿವಾರ್ಯ. ಉದಾಹರಣೆಗೆ, ನೀವು ಹೂಡಿಕೆ ಮಾಡಿದ ಹಣಕ್ಕೆ 12 ಪರ್ಸೆಂಟ್ ವಾರ್ಷಿಕ ಆದಾಯ ಸಿಗುತ್ತಿದ್ದರೆ, ನಿಮ್ಮ ಆಸ್ತಿ ಹಣದುಬ್ಬರವನ್ನು ಮೀರಿ ಬೆಳೆಯುತ್ತದೆ. ಸಾಮಾನ್ಯ ಹಣದುಬ್ಬರ ಶೇಕಡಾ ೫ ಇರಬಹುದು, ಆದರೆ ಶಿಕ್ಷಣ, ಆರೋಗ್ಯ ಮತ್ತು ವೈಯಕ್ತಿಕ ಸೇವೆಗಳ ಬೆಲೆಗಳು ಅದಕ್ಕಿಂತ ವೇಗವಾಗಿ (೮-೧೨ ಪರ್ಸೆಂಟ) ಏರುತ್ತಿರುತ್ತವೆ ಎಂಬುದನ್ನು ಗಮನಿಸಬೇಕು.

712 ok

ನಿಮ್ಮ ರೂ.1 ಕೋಟಿಯ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳಲು, ಕೇವಲ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದರೆ ಸಾಲದು. ಅದನ್ನು ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡಬೇಕು. ಮ್ಯೂಚುವಲ್ ಫಂಡ್, ಸ್ಟಾಕ್ಸ್, ರಿಯಲ್ ಎಸ್ಟೇಟ್, ಚಿನ್ನವನ್ನು ಆಯ್ಕೆ ಮಾಡಬಹುದು.

ಶಿಸ್ತುಬದ್ಧ ಹೂಡಿಕೆಗೆ ಅದ್ಭುತವಾದ ಶಕ್ತಿ ಇದೆ. ನೀವು ತಿಂಗಳಿಗೆ ಕೇವಲ 10000‌ ರಿಂದ 15000 ರುಪಾಯಿ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿದ್ದರೆ, ಶಿಸ್ತುಬದ್ಧ ಹೂಡಿಕೆ ನಿಮ್ಮನ್ನು ಕೋಟ್ಯಧಿಪತಿಯನ್ನಾಗಿ ಮಾಡಬಲ್ಲದು. 12 ಪರ್ಸೆಂಟ್ ವಾರ್ಷಿಕ ರಿಟರ್ನ್ ನೀಡುವ ಮ್ಯೂಚು ವಲ್ ಫಂಡ್‌ನಲ್ಲಿ ತಿಂಗಳಿಗೆ 15000 ರುಪಾಯಿ ಹೂಡಿಕೆ ಮಾಡಿದರೆ, ಸುಮಾರು 20 ವರ್ಷಗಳಲ್ಲಿ ನೀವು 1 ಕೋಟಿಗಿಂತ ಹೆಚ್ಚು ಸಂಪತ್ತನ್ನು ಗಳಿಸಬಹುದು. ಇದು ನಿಮ್ಮ ಆದಾಯದ ಒಂದು ಭಾಗವಷ್ಟೇ ಆಗಿದ್ದರೆ, ಇನ್ನೂ ಬೇಗನೆ ಸಾಧಿಸಬಹುದು.

ಶಿಸ್ತುಬದ್ಧ ಆರ್ಥಿಕ ಯೋಜನೆ ಮತ್ತು ತಾಳ್ಮೆಯಿಂದ ಕೋಟ್ಯಧಿಪತಿಗಳಾಗುವ ಗುರಿಯನ್ನು ಖಂಡಿತವಾಗಿಯೂ ತಲುಪಬಹುದು. ಇದಕ್ಕಾಗಿ ವೈಜ್ಞಾನಿಕ ಮತ್ತು ವ್ಯವಸ್ಥಿತವಾದ ಹೂಡಿಕೆಯ ವಿಧಾನಗಳೂ ಇವೆ.

ಮೊದಲನೆಯದಾಗಿ, ಹೂಡಿಕೆಯನ್ನು ಎಷ್ಟು ಬೇಗ ಆರಂಭಿಸುತ್ತೀರೋ, ಅಷ್ಟು ವೇಗವಾಗಿ ನಿಮ್ಮ ಹಣ ಬೆಳೆಯುತ್ತದೆ. ಕಾಂಪೌಂಡಿಂಗ್ (ಚಕ್ರಬಡ್ಡಿ) ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಸಣ್ಣ ಮೊತ್ತದ ಹೂಡಿಕೆಯೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗಿ ಪರಿವರ್ತನೆಗೊಳ್ಳುತ್ತದೆ. ಎರಡನೆಯದಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಹೂಡಿಕೆ ಮಾಡುವುದು ಮಧ್ಯಮ ವರ್ಗದವರಿಗೆ ಅತ್ಯಂತ ಪರಿಣಾಮಕಾರಿ ಮಾರ್ಗ ವಾಗಿದೆ.

ಮಾಸಿಕ ಆದಾಯದ ಕನಿಷ್ಠ 15-20ರಷ್ಟು ಮೊತ್ತವನ್ನು ಹೂಡಿಕೆ ಮಾಡಲು ಪ್ರಯತ್ನಿಸಿ. ಪ್ರತಿ ವರ್ಷ ನಿಮ್ಮ ಆದಾಯ ಹೆಚ್ಚಾದಂತೆ, ಹೂಡಿಕೆಯ ಮೊತ್ತವನ್ನೂ ಹೆಚ್ಚಿಸುತ್ತಾ ಹೋಗಿ. ಇದು ನಿಮ್ಮ ಗುರಿಯನ್ನು ಬೇಗ ತಲುಪಲು ಸಹಾಯ ಮಾಡುತ್ತದೆ.

ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬೇಡಿ. ಅಪಾಯವನ್ನು ಕಡಿಮೆ ಮಾಡಲು ಹೂಡಿಕೆಯನ್ನು ಹೀಗೆ ವಿಭಜಿಸಿ- ಇಕ್ವಿಟಿ ಮ್ಯೂಚುವಲ್ ಫಂಡ್ಸ್: ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭಕ್ಕಾಗಿ (10-15 ವರ್ಷಗಳಿಗಿಂತ ಹೆಚ್ಚು). ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಸಾರ್ವಜನಿಕ ಭವಿಷ್ಯ ನಿಧಿ): ಇದು ಸರಕಾರಿ ಬೆಂಬಲಿತ ಮತ್ತು ಸುರಕ್ಷಿತ ಹೂಡಿಕೆ. ತೆರಿಗೆ ಉಳಿತಾಯಕ್ಕೂ ಇದು ಉತ್ತಮ. ಚಿನ್ನ, ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ).

ಕ್ರೆಡಿಟ್ ಕಾರ್ಡ್ ಸಾಲ ಅಥವಾ ಅತಿಯಾದ ಬಡ್ಡಿಯ ಸಾಲಗಳನ್ನು ಸಾಧ್ಯವಾದಷ್ಟು ಬೇಗ ತೀರಿಸಿ. ಸಾಲದ ಮೇಲಿನ ಬಡ್ಡಿಯು ನಿಮ್ಮ ಸಂಪತ್ತಿನ ಬೆಳವಣಿಗೆಯನ್ನು ತಡೆಯುತ್ತದೆ. ಸಂಬಳ ಹೆಚ್ಚಾದ ತಕ್ಷಣ ಐಷಾರಾಮಿ ಖರ್ಚುಗಳನ್ನು ಹೆಚ್ಚಿಸಬೇಡಿ. ಉಳಿತಾಯದ ಗುರಿಯನ್ನು ತಲುಪುವವರೆಗೆ ನಿಮ್ಮ ಜೀವನಶೈಲಿಯನ್ನು ಸರಳವಾಗಿ ಇಟ್ಟುಕೊಳ್ಳಿ. ಕನಿಷ್ಠ 6 ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವನ್ನು ತುರ್ತು ನಿಧಿಯಾಗಿ ಮೀಸಲಿಡಿ (ಉದಾಹರಣೆಗೆ ಲಿಕ್ವಿಡ್ ಫಂಡ್ ಅಥವಾ ಉಳಿತಾಯ ಖಾತೆ). ಇದು ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ದೀರ್ಘಕಾಲೀನ ಹೂಡಿಕೆಯನ್ನು ಮುರಿಯದಂತೆ ನೋಡಿಕೊಳ್ಳುತ್ತದೆ. ವಾರೆನ್ ಬಫೆಟ್ ಹೇಳುವಂತೆ, ನೀವೇ ನಿಮ್ಮ ಅತ್ಯುತ್ತಮ ಹೂಡಿಕೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ, ಇದರಿಂದ ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗುತ್ತವೆ. ಆದಾಯ ಹೆಚ್ಚಾದಷ್ಟು ಹೂಡಿಕೆ ಮಾಡುವ ಸಾಮರ್ಥ್ಯವೂ ಹೆಚ್ಚುತ್ತದೆ.

‘ಚಕ್ರಬಡ್ಡಿಯು ವಿಶ್ವದ ಎಂಟನೇ ಅದ್ಭುತ’ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದರು. ಇದು ಖಂಡಿತವಾಗಿಯೂ ಉತ್ಪ್ರೇಕ್ಷೆಯಲ್ಲ. ಬದಲಾಗಿ ಗಣಿತದ ಒಂದು ಅದ್ಭುತ ಸತ್ಯ. ಒಬ್ಬ ವ್ಯಕ್ತಿಯು ತನ್ನ ಹಣಕಾಸಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ತಿಳಿದುಕೊಳ್ಳಬೇಕಾದ ಅತಿ ಮುಖ್ಯವಾದ ವಿಷಯವೆಂದರೆ ‘ಚಕ್ರಬಡ್ಡಿ’ (Compounding). ಚಕ್ರಬಡ್ಡಿ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಸಣ್ಣ ಉಳಿತಾಯವು ಹೇಗೆ ದೀರ್ಘಾವಧಿಯಲ್ಲಿ ಕೋಟಿ ಗಟ್ಟಲೆ ಸಂಪತ್ತನ್ನು ಸೃಷ್ಟಿಸುತ್ತದೆ ಎಂಬುದನ್ನು ನೋಡೋಣ.

ಸರಳವಾಗಿ ಹೇಳುವುದಾದರೆ, ಚಕ್ರಬಡ್ಡಿ ಎಂದರೆ ಬಡ್ಡಿಯ ಮೇಲೆ ಬಡ್ಡಿ ಪಡೆಯುವುದು. ಸರಳ ಬಡ್ಡಿ( Simple Interest) ಎಂದರೆ ನೀವು ಹೂಡಿದ ಮೂಲ ಹಣದ ಮೇಲೆ ಮಾತ್ರ ಪ್ರತಿ ವರ್ಷ ಬಡ್ಡಿ ಸಿಗುತ್ತದೆ. ಆದರೆ ಚಕ್ರಬಡ್ಡಿ ಇದ್ದಲ್ಲಿ ನೀವು ಹೂಡಿದ ಮೂಲ ಹಣದ ಮೇಲೆ ಬಡ್ಡಿ ಸಿಗುತ್ತದೆ. ಪ್ರತಿ ವರ್ಷ ಅಥವಾ ಪ್ರತಿ ಅವಽಯಲ್ಲಿ ಸಿಗುವ ಆ ಬಡ್ಡಿಯು ನಿಮ್ಮ ಮೂಲ ಹಣದ ಜೊತೆಗೆ ಸೇರಿ ಕೊಳ್ಳುತ್ತದೆ. ಮರುದಿನದಿಂದ, ಆ ಹೊಸ ಮೊತ್ತದ ಮೇಲೆ (ಅಂದರೆ ಅಸಲು + ಹಿಂದಿನ ಬಡ್ಡಿ) ಮತ್ತೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿ ದಾಗ, ನಿಮ್ಮ ಹಣವು ಆರಂಭದಲ್ಲಿ ನಿಧಾನವಾಗಿ ಬೆಳೆದರೂ, ಸಮಯ ಕಳೆದಂತೆ ಅತ್ಯಂತ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಕಂಪೌಂಡಿಂಗ್‌ನಿಂದ ಹೆಚ್ಚು ಲಾಭ ಪಡೆಯಲು 3 ಸೂತ್ರಗಳನ್ನು ಪಾಲಿಸಬೇಕು. ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ, ಅಷ್ಟು ಹೆಚ್ಚು ಸಮಯ ನಿಮ್ಮ ಹಣಕ್ಕೆ ಬೆಳೆಯಲು ಸಿಗುತ್ತದೆ. ಕಂಪೌಂಡಿಂಗ್‌ನ ಮೊದಲ ಕೆಲವು ವರ್ಷಗಳಲ್ಲಿ ಬೆಳವಣಿಗೆ ನಿಧಾನವಾಗಿ ಕಾಣಿಸುತ್ತದೆ. ಆದರೆ 10-15 ವರ್ಷಗಳ ನಂತರ ಅದು ವೇಗವಾಗಿ ಏರುತ್ತದೆ. ಅದನ್ನು ‘ಟಿಪ್ಪಿಂಗ್ ಪಾಯಿಂಟ್’ ಎನ್ನಲಾಗುತ್ತದೆ. ‌

ಮಾರುಕಟ್ಟೆ ಮೇಲೆ-ಕೆಳಗೆ ಹೋದರೂ ಸಿಪ್ ಮುಂದುವರಿಸುವುದು ಬಹಳ ಮುಖ್ಯ. ಕಂಪೌಂಡಿಂಗ್ ಎಂಬುದು ಬೆಳೆಯುತ್ತಿರುವ ಮರದಂತೆ. ಮೊದಲ ಕೆಲವು ವರ್ಷಗಳು ಬೇರು ಬಿಡಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಒಮ್ಮೆ ಮರ ದೊಡ್ಡದಾದ ಮೇಲೆ ಅದು ತಾನಾಗಿಯೇ ಹಣ್ಣುಗಳನ್ನು ನೀಡುತ್ತಾ ಹೋಗುತ್ತದೆ. ನೀವು ಕೇವಲ ಹೂಡಿಕೆಯನ್ನು ನಿಲ್ಲಿಸಬಾರದು, ಅಷ್ಟೇ! ಸರಳ ಬಡ್ಡಿಯನ್ನು ಕೇವಲ ನೀವು ಹೂಡಿಕೆ ಮಾಡಿದ ಮೂಲ ಹಣದ (Principal) ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ. ಪ್ರತಿ ವರ್ಷವೂ ಬಡ್ಡಿಯ ಮೊತ್ತ ಒಂದೇ ಆಗಿರುತ್ತದೆ. ಆದರೆ ಚಕ್ರ ಬಡ್ಡಿ ಯಲ್ಲಿ, ಪ್ರತಿ ವರ್ಷ ಸಿಗುವ ಬಡ್ಡಿಯನ್ನು ಮೂಲ ಹಣಕ್ಕೆ ಸೇರಿಸಲಾಗುತ್ತದೆ. ಮುಂದಿನ ವರ್ಷದ ಬಡ್ಡಿಯು ಹಳೆಯ ಬಡ್ಡಿಯನ್ನೂ ಒಳಗೊಂಡಿರುವ ಹೊಸ ಮೊತ್ತದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದನ್ನೇ ‘ಬಡ್ಡಿಯ ಮೇಲೆ ಬಡ್ಡಿ’ ಎನ್ನುತ್ತಾರೆ. ಈ ಕಾರಣಕ್ಕಾಗಿ ಇದರಲ್ಲಿ ದೀರ್ಘಾವಧಿಯ ಹೂಡಿಕೆ ಯಿಂದ ಸಂಪತ್ತು ಗಳಿಸಬಹುದು.

ಸಾರ್ವಜನಿಕ ಭವಿಷ್ಯನಿಧಿಯಲ್ಲಿ ಚಕ್ರಬಡ್ಡಿ ಸಿಗುತ್ತದೆ. ಇದರಲ್ಲಿ ನೀವು ವರ್ಷಕ್ಕೆ ರೂ.1.5 ಲಕ್ಷ ಹೂಡಿಕೆ ಮಾಡುತ್ತಾ ಬಂದರೆ ಮತ್ತು ಸರಾಸರಿ 7.1 ಪರ್ಸೆಂಟ್ ಬಡ್ಡಿ ಸಿಗುತ್ತಿದೆ ಎಂದುಕೊಂಡರೆ, 15 ವರ್ಷಗಳ ನಂತರ ಚಕ್ರಬಡ್ಡಿಯ ಕಾರಣದಿಂದಾಗಿ ನಿಮ್ಮ ಒಟ್ಟು ಹೂಡಿಕೆ (ರೂ.22.5 ಲಕ್ಷ) ಸುಮಾರು ರೂ.40 ಲಕ್ಷಕ್ಕೂ ಹೆಚ್ಚು ಮೊತ್ತವಾಗಿ ಬೆಳೆದಿರುತ್ತದೆ. ಮ್ಯೂಚುವಲ್ ಫಂಡ್ಸ್‌ ಅಥವಾ ಇಂಡೆಕ್ಸ್ ‌ ಫಂಡ್ಸ್‌ʼನಲ್ಲಿ ದೀರ್ಘಾವಧಿಯ ಹೂಡಿಕೆ ಮೂಲಕ ಸರಳವಾಗಿ ಹೆಚ್ಚಿನ ಲಾಭ ಪಡೆಯ ಬಹುದು. ಆದರೆ ರಾತ್ರೋರಾತ್ರಿ ಶ್ರೀಮಂತರಾಗುವ ಭ್ರಮೆಯಿಂದ ಹೊರಬರುವುದು ಮುಖ್ಯ. ಚಕ್ರಬಡ್ಡಿಯ ನಿಜವಾದ ಲಾಭ ಕಾಣಬೇಕಾದರೆ ಕನಿಷ್ಠ 10 ರಿಂದ 20 ವರ್ಷಗಳ ಕಾಲ ಕಾಯುವ ತಾಳ್ಮೆ ಇರಲೇಬೇಕು.

ಕೇಶವ ಪ್ರಸಾದ್​ ಬಿ

View all posts by this author