ಪ್ರಸ್ತುತ
ಸನ್ಮತಿ ಹೆಗಡೆ
ಮಲೆನಾಡಿನ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದವಳು ನಾನು. ಇದೀಗ ಉನ್ನತ ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟು ದೂರದ ಸ್ಥಳಕ್ಕೆ ಬಂದಿದ್ದೇನೆ. ಓದಿ, ಆ ನಂತರ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳುವ ಪ್ರಯತ್ನಗಳ ದಾರಿಯಲ್ಲಿದ್ದೇನೆ. ಅಂಥ ಒಂದು ಬದುಕು ರೂಪಿತವಾದ ನಂತರ, ಒಂದು ದಿನ ನನ್ನ ಊರಿಗೆ ತೆರಳಿ ಅಲ್ಲಿನ ಬದುಕಿಗೆ ಸ್ಪಂದಿಸುವ ಕನಸೂ ನನ್ನಲ್ಲಿದೆ. ಆದರೆ ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ನಾನು ಮರಳುವ ಹೊತ್ತಿಗೆ ಮಲೆನಾಡಿನ ನನ್ನ ಮೂಲನೆಲ ಹಾಗೆಯೇ ಉಳಿದಿರುತ್ತದೆಯೇ? ಸಹ್ಯಾದ್ರಿ ಶ್ರೇಣಿಯ ನನ್ನ ಬಾಲ್ಯದ ನೆನಪುಗಳೆಂದರೆ, ಉತ್ತರ ಕನ್ನಡದಲ್ಲಿನ ರಸ್ತೆಗಳು, ಕಟ್ಟಡಗಳು ಅಥವಾ ನಗರಗಳಲ್ಲ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಬೇಡ್ತಿ, ಅಘನಾಶಿನಿಯಂತಹ ನದಿಗಳು, ಹಸಿರು ಬೆಟ್ಟಗಳು, ಕಾಡಿನೊಳಗಿನ ಹೊಳೆತೊರೆಗಳು.
ಅಂತೆಯೇ, ನಾನು ಹುಟ್ಟಿಬೆಳೆದ ಹಳ್ಳಿಗಾಡಿನ ಅಡಿಕೆ, ಕಾಳುಮೆಣಸು, ಏಲಕ್ಕಿಯ ತೋಟಗಳು. ಜಾಯಿಕಾಯಿ, ಮುರಗಲು, ಲವಂಗ, ಅರಿಶಿನದಂಥ ಬೆಳೆಗಳು. ಅ ಪಕ್ಕದ ಕಾಡಿನಲ್ಲಿ ಸಿಗುವ ಕಾಡುಜೇನು, ನೆಲ್ಲಿಕಾಯಿ ಹಾಗೂ ಹೆಸರು ತಿಳಿಯದ ಅಜ್ಜಿ-ಅಮ್ಮ ಎಲ್ಲ ಬಳಸುವ ಅಸಂಖ್ಯ ಔಷಧಿ ಗಿಡಗಳು.
ಇದನ್ನೂ ಓದಿ; Shashidhara Halady Column: ನಮ್ಮ ಮನೆಗೆ ಬಂದ ಸಲೀಂ ಅಲಿ
ನಮ್ಮೂರಿನ ತೇರು-ಜಾತ್ರೆಗಳು. ಹಳ್ಳಿಹಾಡು, ರಂಗೋಲಿ, ಗೋಡೆಯ ಮೇಲಿನ ಹಸೆ ಇತ್ಯಾದಿ ಗಳೊಂದಿಗೆ ಬೆಸೆದುಕೊಡಿರುವ ನಮ್ಮೂರಿನ ಹಬ್ಬಹರಿದಿನಗಳ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಜನಜೀವನ, ಇವೆಲ್ಲವೂ ನಾನು ಬೆಳೆದ ಮಲೆನಾಡು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಪರಿಸರ ಹಾಗೂ ಜನಜೀವನವನ್ನು ಘಾಸಿಮಾಡುವ ಹಲವು ಬಗೆಯ ಸಂಗತಿಗಳು ಒಮ್ಮೆಲೇ ಘಟಿಸುತ್ತಿವೆ.
ಈ ನೆಲದ ಭವಿಷ್ಯದ ಬಗ್ಗೆಯೇ ನನಗೆ ಆತಂಕ ಹುಟ್ಟಿಸಿರುವುದು ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳು. ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಪ್ರಸ್ತಾಪಿಸಿರುವ ಬೇಡ್ತಿ-ವರದಾ ಯೋಜನೆಯ ಮೂಲಕ, ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯನ್ನು ಪೂರ್ವಕ್ಕೆ ಹರಿಯುವ ವರದಾ ನದಿಗೆ ಜೋಡಿಸಿ ಸುಮಾರು 18.55 ಟಿಎಂಸಿ ನೀರನ್ನು ಬಯಲುನಾಡಿನ ನೀರಾವರಿಗೆ ಒಯ್ಯಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಮೂರು ಅಣೆಕಟ್ಟುಗಳು, ನೀರು ಸಾಗಣೆ ಕಾಲುವೆಗಳು, ಹಲವೆಡೆ ಸುರಂಗಗಳು ಇವೆಲ್ಲ ನಿರ್ಮಾಣವಾಗಲಿವೆಯಂತೆ. ಇವೆಲ್ಲವೂ ನಾನು ಮಾಧ್ಯಮಗಳಲ್ಲಿ ಓದಿ ಹಾಗೂ ಊರಿನ ಹಿರಿಯರಿಂದ ಕೇಳಿತಿಳಿದ ಆತಂಕಕಾರಿ ಅಂಕಿ-ಅಂಶಗಳು. ಆದರೆ, ನಮ್ಮಂತಹ ಯುವಜನತೆಗೆ ಅವುಗಳ ಹಿಂದೆ ಕಾಣುವುದು ಇನ್ನೊಂದು ಚಿತ್ರ. ಅಣೆಕಟ್ಟು ಎಂದರೆ ಕೇವಲ ಕಾಂಕ್ರೀಟ್ ಗೋಡೆಯಷ್ಟೇ ಅಲ್ಲ. ಅದರ ಜಲಾಶಯದಲ್ಲಿ ಮುಳುಗುವ ಭೂಮಿ ಇದೆ. ಕತ್ತರಿಸಲ್ಪಡುವ ಕಾಡು ಇದೆ. ಬದಲಾಗುವ ನದಿಯ ಹರಿವು ಇದೆ. ಸ್ಥಳಾಂತರಗೊಳ್ಳುವ ಜನರ ಬದುಕು ಇದೆ. ತುಂಡಾಗುವ ವನ್ಯಜೀವಿ ಆವಾಸಗಳಿವೆ. ತಲೆಮಾರುಗಳಿಂದ ಬೆಳೆಸಿಕೊಂಡಿರುವ ತೋಟಗಳು ಮತ್ತು ಸಂಸ್ಕೃತಿಯಿವೆ.
ಬೇಡ್ತಿ ಜಲಾನಯನ ಪ್ರದೇಶ ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದೆಂದು ವಿದ್ಯಾಭ್ಯಾಸದುದ್ದಕ್ಕೂ ಪಠ್ಯಪುಸ್ತಕಗಳಲ್ಲಿ ಓದಿದ್ದೇನೆ. ಇಲ್ಲಿ ನದಿ ಎಂದರೆ ಕೇವಲ ನೀರಿನ ಹರಿವು ಅಲ್ಲ, ಅದು ಕಾಡು, ಮಣ್ಣು, ಮೀನು, ಕೀಟ, ಪಕ್ಷಿ, ಪ್ರಾಣಿ, ಸಸ್ಯ ಮತ್ತು ಮನುಷ್ಯರನ್ನು ಜೋಡಿಸುವ ಜೀವನಾಡಿ. ಇದೇ ಆತಂಕ ಈಗ ಅಘನಾಶಿನಿ-ವೇದಾವತಿ ಯೋಜನೆಯ ವಿಚಾರದಲ್ಲೂ ಎದುರಾಗುತ್ತಿದೆ.
ಈ ಯೋಜನೆಯ ಪ್ರಸ್ತಾವದಲ್ಲಿ, ಸಿದ್ದಾಪುರ ತಾಲ್ಲೂಕಿನಲ್ಲಿ ಅಣೆಕಟ್ಟು ನಿರ್ಮಿಸಿ ಅಘನಾಶಿನಿಯ ಹರಿವನ್ನು ವೇದಾವತಿ ಜಲಾನಯನ ಪ್ರದೇಶಕ್ಕೆ ವರ್ಗಾಯಿಸುವ ಉದ್ದೇಶವಿದೆ. ಇಂತಹ ಯೋಜನೆಗಳು ಜಾರಿಯಾಗುವಾಗ, ಅದು ಹುಟ್ಟಿಹಾಕುವ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಗಂಭೀರವಾಗಿ ಯೋಚಿಸಬೇಕಲ್ಲವೇ? ಬೇಡ್ತಿ ಹಾಗೂ ಅಘನಾಶಿನಿ ನದಿಗಳು ಕೇವಲ ನಮ್ಮೂರಿಗೆ ಮಾತ್ರ ನೀರುಣಿಸುವದಿಲ್ಲ. ಅದು ನಮ್ಮ ಮಲೆನಾಡು ಹಾಗೂ ಕರಾವಳಿಯ ಜನರ ಬದುಕನ್ನು ಪೋಷಿಸುತ್ತಿರುವ ಜೀವನಾಡಿ. ಅದರ ನದಿ ತೀರ, ಕಣಿವೆ, ಕೃಷಿಭೂಮಿ, ಮೀನುಗಾರಿಕೆ, ಸಣ್ಣ ಕೈಗಾರಿಕೆಗಳು ಮತ್ತು ಸುತ್ತಲಿನ ಜೀವವೈವಿಧ್ಯ-ಇವೆಲ್ಲವೂ ಪರಸ್ಪರ ಅವಲಂಬಿತವಾಗಿವೆ. ಈ ಪರಿಸರ ದುರ್ಬಲವಾದರೆ ಅದರ ಪರಿಣಾಮ ನಮ್ಮ ಹಳ್ಳಿಗೆ ಮಾತ್ರವಲ್ಲ, ನಮ್ಮ ನಾಡಿನ ಕೃಷಿ ಆರ್ಥಿಕತೆಗೂ ತಟ್ಟದಿರುತ್ತದೆಯೇ. ವಿeನ ಮತ್ತು ತಂತ್ರeನದಲ್ಲಿ ಅತೀವ ಆಸಕ್ತಿ ಹೊಂದಿ ಅದರಲ್ಲಿಯೇ ಪ್ರಾವೀಣ್ಯ ಪಡೆಯುತ್ತಿರುವ ನವ ತಲೆಮಾರು ನಮ್ಮದು. ಆದರೆ, ಭವಿಷ್ಯದ ದಾರಿಯಲ್ಲಿ ನಾವು ಧಾವಂತದಲ್ಲಿ ಸಾಗುತ್ತಿದ್ದರೆ, ಇತ್ತ ಅಮೂಲ್ಯ ಇತಿಹಾಸ ಇರುವ ನಮ್ಮ ಊರಿನ ಅಸ್ತಿತ್ವವೇ ನಾಶವಾಗುತ್ತಿದೆಯಲ್ಲ!
ಕಳೆದು ಹೋದ ಕಾಡನ್ನು, ಒಣಗಿದ ನದಿಯನ್ನು ಅಥವಾ ನಾಶವಾದ ಜೀವವೈವಿಧ್ಯವನ್ನು ಸುಲಭವಾಗಿ ಮರಳಿ ನಿರ್ಮಿಸಲು ಸಾಧ್ಯವೇ? ಬರಪೀಡಿತ ಪ್ರದೇಶಗಳಿಗೆ ನೀರು ಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಒಂದು ಪ್ರದೇಶದ ನೀರಿನ ಸಮಸ್ಯೆಯನ್ನು ಪರಿಹರಿಸಲು ಮತ್ತೊಂದು ಪ್ರದೇಶದ ನೈಸರ್ಗಿಕ ಸಂಪತ್ತನ್ನೇ ಬಲಿಕೊಡುವುದು ಸರಿಯಾದ ಅಭಿವೃದ್ಧಿಯೇ? ಮೊದಲು ಹೆಚ್ಚುವರಿ ನೀರು ನಿಜವಾಗಿಯೂ ಎಷ್ಟಿದೆ ಎಂಬುದನ್ನು ಈಗ ಲಭ್ಯವಿರುವ ಅತ್ಯಾಧುನಿಕ ವಿeನ ಮತ್ತು ತಂತ್ರeನ ಬಳಸಿ ಅಧ್ಯಯನಮಾಡಬೇಕಿದೆ. ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಇಂಥ ಯೋಜನೆಗಳು ಭವಿಷ್ಯದಲ್ಲಿ ಉಂಟುಮಾಡಬಹುದಾದ ಪರಿಣಾಮಗಳನ್ನು ಸಿಮ್ಯುಲೇಷನ್ ಅಧ್ಯಯನಗಳ ಮೂಲಕ ಅರಿಯಬೇಕಾದ ಅಗತ್ಯವಿದೆ. ನನ್ನ ಪೀಳಿಗೆ ಅಭಿವೃದ್ಧಿಗೆ ವಿರೋಧಿಯಲ್ಲ. ಅದರೆ, ಅವು ನಮ್ಮ ಭವಿಷ್ಯ ವನ್ನು ನಾಶಮಾಡುವ ಅವಿವೇಕವಾಗಬಾರದು ಎಂಬುದಷ್ಟೇ ನಮ್ಮ ಕಾಳಜಿ.
ನಾನು ಓದು ಮುಗಿಸಿ ಉದ್ಯೋಗ ಪಡೆದು ಊರಿಗೆ ಮರಳುವಾಗ, ನನ್ನ ಬಾಲ್ಯದ ಬೇಡ್ತಿ ಹಾಗೂ ಅಘನಾಶಿನಿ ನದಿ ಕಣಿವೆಗಳು ನದಿ ಕೇವಲ ನೆನಪಾಗಿ ಉಳಿಯಬಾರದು. ನನ್ನ ಹೆತ್ತವರು ಕಂಡ ಹಸಿರು ಕಾಡು, ತೋಟಗಳು, ಹಳ್ಳಿಗಳು ಮತ್ತು ಜೀವಜಾಲಗಳು ನನ್ನ ಪೀಳಿಗೆಗೂ ಇರಲಿ ಎಂಬುದಷ್ಟೇ ನನ್ನ ತೀವೃ ಹಾರೈಕೆ. ಸಹ್ಯಾದ್ರಿಶ್ರೇಣಿಯ ನಮ್ಮೂರು ನಮಗೆ ಕೇವಲ ಹುಟ್ಟಿದ ಸ್ಥಳವಲ್ಲ. ಅದು ನಮ್ಮ ಬೇರು. ನಾನು ಊರಿಗೆ ಮರಳುವ ಹೊತ್ತಿಗೆ ಆ ಬೇರುಗಳು ಉಳಿದಿರಲಿ, ನನ್ನಂಥ ಲಕ್ಷಾಂತರ ಎಳೆಯರ ಭವಿಷ್ಯದ ಕನಸುಗಳನ್ನು ನನಸಾಗಿಸುವ ಶಕ್ತಿ ಅವು ಉಳಿಸಿಕೊಳ್ಳಲಿ.
(ಲೇಖಕಿ ಬಿ.ಟೆಕ್ ವಿದ್ಯಾರ್ಥಿನಿ)