ಧರ್ಮ ಸಂವಾದ
ಡಾ. ರವೀಶ ಎನ್.ಎಸ್.
ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ ಎಂಬ ಮಾತು ಇಂದು ಸಮಾಜದಲ್ಲಿ ಪದೇ ಪದೆ ಕೇಳಿ ಬರುತ್ತಿದೆ. ಕೆಲವರು ಅದನ್ನು ತಮಾಷೆ ಹಾಗೂ ವ್ಯಂಗ್ಯವಾಗಿ ಹೇಳಿದರೆ, ಇನ್ನು ಕೆಲವರು ಅದನ್ನೇ ಸಮಾಜ ವನ್ನು ಮತ್ತಷ್ಟು ಒಡೆಯುವ ಆಸವನ್ನಾಗಿ ಬಳಸುತ್ತಿzರೆ. ಆದರೆ, ಇದು ಪರಸ್ಪರರ ಮೇಲೆ ಕೆಸರೆರಚಾಟ ಮಾಡುವ ಅಥವಾ ಹೀಯಾಳಿಸುವ ಸಮಯವಲ್ಲ. ಬದಲಿಗೆ ತಣ್ಣಗೆ ಕುಳಿತು ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳ ಬೇಕಾದ ನಿರ್ಣಾಯಕ ಸಂದರ್ಭವಾಗಿದೆ.
ಇಡೀ ಬ್ರಾಹ್ಮಣ ಸಮಾಜವು ಹತ್ತುಹಲವು ಆಂತರಿಕ ಹಾಗೂ ಬಾಹ್ಯ ಸವಾಲುಗಳನ್ನು ಎದುರಿಸು ತ್ತಿದೆ. ಅನೇಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ, ಯುವ ಪೀಳಿಗೆಯಲ್ಲಿ ಸಾಂಪ್ರದಾಯಿಕ ವಿದ್ಯೆ ಮತ್ತು ಸನಾತನ ಜೀವನಶೈಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸರಕಾರಿ ಉದ್ಯೋಗದ ಅವಕಾಶಗಳು ಆಗಲೇ ಮಸುಕಾಗಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ರನ್ನು ನಿಂದಿಸುವುದು ನಮ್ಮನ್ನು ನಾವೇ ಮತ್ತಷ್ಟು ದುರ್ಬಲಗೊಳಿಸಿಕೊಂಡಂತೆ ಎಂಬ ಸತ್ಯವನ್ನು ನಾವಿಂದು ಅರಿಯಬೇಕಾಗಿದೆ.
ಶ್ರೀ ಶಂಕರ ಭಗವತ್ಪಾದರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀಮದಾನಂದತೀರ್ಥ ಭಗವಾನರೆಂಬ ತ್ರಯಾಚಾರ್ಯರು ಪ್ರತಿಪಾದಿಸಿದ ಮಹೋನ್ನತ ದರ್ಶನಗಳು ಕೇವಲ ಒಂದು ನಿರ್ದಿಷ್ಟ ಪಂಗಡ ಅಥವಾ ಜಾತಿಗೆ ಸೀಮಿತವಾದವುಗಳಲ್ಲ. ಅವರ ಜ್ಞಾನಬೋಧೆ ಇಡೀ ಮನುಕುಲದ ಒಳಿತಿಗಾಗಿ, ಧರ್ಮದ ಪುನರುತ್ಥಾನಕ್ಕಾಗಿ ಮತ್ತು ಭಗವತ್ ಸಾಕ್ಷಾತ್ಕಾರಕ್ಕಾಗಿ ರೂಪುಗೊಂಡ ಉನ್ನತ ಚಿಂತನೆಗಳಾಗಿವೆ. ಈ ಮಹೋನ್ನತ eನ ಪರಂಪರೆಯನ್ನು ಯುಗ ಯುಗಾಂತರಗಳಿಂದ ಜೀವಂತವಾಗಿ ಇಟ್ಟಿರುವುದು ನಮ್ಮ ಹೆಮ್ಮೆಯ ಮಠಗಳು ಮತ್ತು ಪೀಠಗಳೇ ಆಗಿವೆ.
ಇದನ್ನೂ ಓದಿ:Dr Raveesh N S Column: ಬದಲಾಗಬೇಕಾಗಿರುವುದು ನೀಟ್ ಅಲ್ಲ, ನಿಯತ್ತು
ಶ್ರೀ ಶಂಕರ ಭಗವತ್ಪಾದರು ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ಸೃಷ್ಟಿಸಿದ ನಾಲ್ಕು ಆಮ್ನಾಯ ಪೀಠಗಳಾದ ಶೃಂಗೇರಿ, ದ್ವಾರಕಾ, ಪುರಿ ಮತ್ತು ಜ್ಯೋತಿರ್ಮಠಗಳು ಇಂದಿಗೂ ಸನಾತನ ಧರ್ಮದ ರಕ್ಷಣಾ ಕವಚಗಳಾಗಿವೆ. ಜ್ಞಾನ, ವೈರಾಗ್ಯ ಮತ್ತು ತಪಸ್ಸಿನ ಧ್ರುವತಾರೆ ಯಾಗಿರುವ ಉತ್ತರಾಧಿಮಠ, ಆಧ್ಯಾತ್ಮಿಕ ಪರಂಪರೆಯ ಮೇರುಶಿಖರವಾಗಿರುವ ವ್ಯಾಸರಾಜ ಮಠ ಮತ್ತು ಕಲಿಯುಗದ ಕಾಮಧೇನುಗಳಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ಪ್ರಮುಖ ಮಠಗಳು ಜ್ಞಾನದ ದಾಹವನ್ನು ತಣಿಸುತ್ತಾ ಬಂದಿವೆ.
ಕೃಷ್ಣ ಭಕ್ತಿಯ ಮಹಾಪೂರವನ್ನೇ ಹರಿಸಿದ ಉಡುಪಿಯ ಅಷ್ಟಮಠಗಳು ಹಾಗೂ ಸಮಾಜದ ಜಾಗೃತಿ ಮತ್ತು ಧರ್ಮರಕ್ಷಣೆಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಪೇಜಾವರ ಮಠದ ಪೂಜ್ಯ ಯತಿವರೇಣ್ಯರ ಪರಂಪರೆ ನಮ್ಮ ಹೆಮ್ಮೆಯಾಗಿದೆ. ವೈಯಕ್ತಿಕ ಸುಖ ಭೋಗಗಳನ್ನು ತ್ಯಜಿಸಿ, ಇಡೀ ಸಮಾಜದ ಉದ್ಧಾರಕ್ಕಾಗಿ ಸನ್ಯಾಸ ಸ್ವೀಕರಿಸಿದ ಇಂತಹ ಮಹಾ ತಪಸ್ವಿಗಳ ಬಗ್ಗೆ ಮಾತನಾಡುವಾಗ ನಮ್ಮ ನಾಲಿಗೆ ಮತ್ತು ಲೇಖನಿಯ ಮೇಲೆ ಪರಮ ಸಂಯಮ ಇರಬೇಕು. ಸಾಮಾಜಿಕ ಜಾಲತಾಣದಲ್ಲಿ ಉಚಿತ ಖಾತೆ ಇದೆ ಎಂದಮಾತ್ರಕ್ಕೆ ಏನು ಬೇಕಾದರೂ ಬರೆಯುವುದು ಜ್ಞಾನದ ಲಕ್ಷಣವಲ್ಲ, ಅದು ಅಜ್ಞಾನದ ಪರಮಾವಧಿಯಾಗಿದೆ.
ವಾಸ್ತವದಲ್ಲಿ, ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳು ಮೂಡಿಬಂದದ್ದೇ ಜಗತ್ತಿಗೆ ಪರಮ ಕಲ್ಯಾಣವನ್ನುಂಟು ಮಾಡುವ ಭಕ್ತಿ ಮಾರ್ಗವನ್ನು ಮತ್ತಷ್ಟು ಚಂದಗೊಳಿಸಿ ಉದ್ಧರಿಸಲು ಆಚಾರ್ಯರು ಪಟ್ಟ ಶ್ರಮದ ಫಲವಾಗಿ. ಸೂರ್ಯನಿಗೆ ರವಿ ಎಂದು ಕರೆಯಬಹುದು, ಆದಿತ್ಯ ನೆಂದು ಕರೆಯಬಹುದು ಅಥವಾ ಇನ್ಯಾವುದೋ ನಾಮಗಳಿಂದ ಆರಾಧಿಸಬಹುದು, ಆದರೆ ಆ ಸೂರ್ಯನ ಪ್ರಭೆ ಮತ್ತು ಪ್ರಕಾಶ ಇಡೀ ಜಗತ್ತಿಗೆ ಹೇಗೆ ಸಮಾನವೋ, ಹಾಗೆಯೇ ಪರಮಾತ್ಮನ ತತ್ತ ವೂ ಒಂದೇ ಆಗಿದೆ. ಭಗವಂತನು ಒಬ್ಬೊಬ್ಬರ ದೃಷ್ಟಿಗೆ ಒಂದೊಂದು ರೂಪದಲ್ಲಿ ಸಾಕ್ಷಾತ್ಕಾರ ಗೊಳ್ಳಬಹುದು ಮತ್ತು ಅವರ ಆರಾಧನಾ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಈ ಮೂರೂ ವೇದಾಂತ ತತ್ವಗಳು ಅಂತಿಮವಾಗಿ ಭಗವಂತನನ್ನೇ ಸೇರುವ ವಿಭಿನ್ನ ದಾರಿಗಳನ್ನು ಹೇಳಿವೆಯೇ ಹೊರತು ಬೇರೆಯನ್ನಲ್ಲ.
ಆಚಾರ್ಯರ ಸಿದ್ಧಾಂತಗಳು ಕೇವಲ ಯಾವುದೋ ಒಂದೆರಡು ಭೌತಿಕ ಪುಸ್ತಕಗಳಲ್ಲಿ ಅಡಗಿಲ್ಲ; ಅವುಗಳನ್ನು ಅವರು ತಮ್ಮ ಅಪೌರುಷೇಯ ಕೃತಿಗಳಲ್ಲಿ, ಆಧ್ಯಾತ್ಮಿಕ ಅನುಭೂತಿಯಲ್ಲಿ ಸ್ಥಾಪಿಸಿ ದ್ದಾರೆ. ಭಕ್ತಿಯನ್ನು ಜಾಗೃತಗೊಳಿಸಲು ಹಾಗೂ ಬದುಕನ್ನು ಭಗವತ್ ಪ್ರೇಮದಲ್ಲಿ ಉನ್ಮತ್ತ ಗೊಳಿಸಲು ಆಚಾರ್ಯರು ನಿರ್ಮಿಸಿಕೊಟ್ಟಿರುವ ಸಾಧನ ಮಾರ್ಗಗಳೆಂಬ ಮೆಟ್ಟಿಲುಗಳ ವಿನ್ಯಾಸದ ಬಗ್ಗೆ ನಾವು ಕಚ್ಚಾಡಬಾರದು, ಬದಲಿಗೆ ಆ ಮೆಟ್ಟಿಲುಗಳ ತುದಿಯಲ್ಲಿರುವ ಭಗವಂತನ ಪರಮ ಪಾದಸ್ಪರ್ಶದ ಬಗ್ಗೆ ಮಾತ್ರ ನಾವಿಂದು ಯೋಚಿಸಬೇಕಾಗಿದೆ.
ನಮ್ಮ ಸನಾತನ ಧರ್ಮದ ಅತ್ಯಂತ ಉದಾತ್ತ ಸೌಂದರ್ಯವೇ ಇಲ್ಲಿದೆ. ಅದ್ವೈತ ಮತವನ್ನು ಅನುಸರಿಸುವ ಸಾಧಕನಿಗೆ ಒಂದಲ್ಲ ಒಂದು ದಿನ ದ್ವೆ ತ ಸಿದ್ಧಾಂತದ ಭಕ್ತಿ ಮಾರ್ಗವು ಹೆಚ್ಚು ಆಪ್ತವಾಗಬಹುದು. ಹಾಗೆಯೇ ದ್ವೈತ ಮತದ ಚಿಂತಕನಿಗೆ ವಿಶಿಷ್ಟಾದ್ವೈತವು ಸರಿ ಎನಿಸಬಹುದು ಮತ್ತು ವಿಶಿಷ್ಟಾದ್ವೈತದ ಹಾದಿಯಲ್ಲಿ ನಡೆಯುವವನಿಗೆ ಅಂತಿಮವಾಗಿ ಅದ್ವೆ ತದ ಅಖಂಡ ತತ್ತ್ವವು ಹೃದಯಕ್ಕೆ ಹತ್ತಿರವಾಗಬಹುದು. ಈ ಮೂರೂ ವೈದಾಂತಿಕ ತತ್ವಗಳು ಒಂದೇ ಸಮಾಜದ, ಒಂದೇ ಸನಾತನ ವೃಕ್ಷದ ಮೂಲ ಬೇರಿನಿಂದ ಚಿಗುರೊಡೆದಿರುವ ಎಲೆಗಳಾಗಿವೆ.
ಹಾಗೆಂದ ಮಾತ್ರಕ್ಕೆ, ಯಾರೋ ಒಬ್ಬರು ತಮ್ಮ ಆಂತರಿಕ ಜ್ಞಾನದ ಹುಡುಕಾಟದಲ್ಲಿ ಒಂದು ತತ್ತ್ವದಿಂದ ಮತ್ತೊಂದಕ್ಕೆ ಆಕರ್ಷಿತರಾದಾಗ, ಅದನ್ನು ‘ಮತಾಂತರ’ ಎಂದೋ ಅಥವಾ ‘ಜಾತಿ ಬಿಟ್ಟವ ರೆಂದೋ’ ಹೀಯಾಳಿಸುವುದು ಯಾವ ಮಟ್ಟಿಗೆ ಸರಿ? ಇದು ಮತಾಂತರವಲ್ಲ; ಇದು ಅತ್ಯಂತ ಶುಭ್ರವಾದ ಪಾಂಡಿತ್ಯದ ಜ್ಞಾನ ಮತ್ತು ಸನಾತನ ಸತ್ಯದ ವಿಕಾಸವಾಗಿದೆ. ಇದಕ್ಕೆ ಇತಿಹಾಸದಲ್ಲಿ ಅದ್ಭುತ ಉದಾಹರಣೆಗಳಿವೆ.
ಅದ್ವೈತ ವೇದಾಂತದ ಪರಮ ಪಂಡಿತರಾದ ಶ್ರೀ ಮಧುಸೂದನ ಸರಸ್ವತಿಗಳು ಭಕ್ತಿಯ ಪರಾಕಾಷ್ಠೆ ತಲುಪಿದಾಗ, ಅದ್ವೈತ ಸಾಮ್ರಾಜ್ಯದ ಸುಖಕ್ಕಿಂತ ತಮಗೆ ಮುರಳಿಲೋಲನಾದ ಶ್ರೀಕೃಷ್ಣನ ದ್ವೈತ ಭಕ್ತಿಯೇ ಮಿಗಿಲು ಎಂದು ಕೊಂಡಾಡಿದರು. ಹಾಗೆಯೇ ಪ್ರಖರ ಅದ್ವೈತ ಪಂಡಿತರಾಗಿದ್ದ ಜಗನ್ನಾಥ ದಾಸರು ನಂತರದ ದಿನಗಳಲ್ಲಿ ಹರಿದಾಸ ಪರಂಪರೆಗೆ ಆಕರ್ಷಿತರಾಗಿ ದ್ವೈತ ಸಿದ್ಧಾಂತದ ಶ್ರೇಷ್ಠ ಗ್ರಂಥ ‘ಹರಿಕಥಾಮೃತಸಾರ’ವನ್ನು ಜಗತ್ತಿಗೆ ನೀಡಿದರು.
ತಾಯಿಯಾದವಳು ತನ್ನ ಮಕ್ಕಳ ರುಚಿಗೆ ತಕ್ಕಂತೆ ಒಬ್ಬನಿಗೆ ರೊಟ್ಟಿ, ಇನ್ನೊಬ್ಬನಿಗೆ ಅನ್ನ ನೀಡಿದಂತೆ, ಭಗವಂತನೆಂಬ ತಾಯಿಯು ತನ್ನ ಮಕ್ಕಳ ಆಧ್ಯಾತ್ಮಿಕ ಹಸಿವಿಗೆ ತಕ್ಕಂತೆ ನೀಡಿದ ವಿಭಿನ್ನ ರುಚಿಯ ಜ್ಞಾನದ ಭಿಕ್ಷೆಯಿದು ಎಂಬುದನ್ನು ನಾವು ಅರಿಯಬೇಕಾಗಿದೆ.
ಒಂದು ವೈವಿಧ್ಯಮಯ ಸಮಾಜದಲ್ಲಿ ಅಭಿಪ್ರಾಯ ಭೇದಗಳು ಅಥವಾ ಸಿದ್ಧಾಂತಗಳ ಗೊಂದಲ ಗಳು ಉಂಟಾಗುವುದು ಸಹಜ. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ನಮ್ಮ ಪರಂಪರೆಯಲ್ಲಿ ‘ಸಂವಾದ’ ಎಂಬ ಅತ್ಯಂತ ಸುಂದರ ಹಾಗೂ ಶಾಸ್ತ್ರೋಕ್ತವಾದ ಮಾರ್ಗವಿದೆ. ಸಮಾಜದ ಹಿರಿಯರು, ಪೂಜ್ಯ ಮಠಾಧೀಶರು ಮತ್ತು ವಿದ್ವತ್ ಜ್ಞಾನಿಗಳು ಒಂದೆಡೆ ಕುಳಿತು ಸೌಹಾರ್ದ ಯುತವಾಗಿ ಚರ್ಚಿಸಬೇಕು. ತ್ರಯಾಚಾರ್ಯರ ಇಡೀ ಪರಂಪರೆಯೇ ಶಾಸ್ತ್ರಾರ್ಥ ಮತ್ತು ಸತ್ಸಂ ವಾದದ ಉದಾತ್ತ ಬುನಾದಿಯ ಮೇಲೆ ನಿಂತಿದೆ. ಅದನ್ನು ಬಿಟ್ಟು ನಾನೇ ಸರಿ, ನೀನೇ ತಪ್ಪು ಎನ್ನುವ ಮೊಂಡುತನದ ಮನೋಭಾವವು ಯಾವ ಸಮಸ್ಯೆಯನ್ನೂ ಬಗೆಹರಿಸುವುದಿಲ್ಲ; ಬದಲಿಗೆ ಅದು ಕೇವಲ ಅಹಂಕಾರವನ್ನು ಪೋಷಿಸಿ ಸಮಾಜದಲ್ಲಿ ಹೊಸ ಬಿಕ್ಕಟ್ಟುಗಳನ್ನು ಮಾತ್ರ ಸೃಷ್ಟಿಸುತ್ತದೆ.
ನಮ್ಮ ಸಿದ್ಧಾಂತಗಳು ಶ್ರೇಷ್ಠವೋ ಅಥವಾ ನಿಮ್ಮದು ಶ್ರೇಷ್ಠವೋ ಎಂಬ ನಿರರ್ಥಕ ಚರ್ಚೆಗಳಲ್ಲಿ ಮುಳುಗಿರುವ ನಾವು, ಕಣ್ಣೆದುರೇ ಇರುವ ವಾಸ್ತವಿಕ ಸವಾಲುಗಳನ್ನು ಸಂಪೂರ್ಣವಾಗಿ ಮರೆಯು ತ್ತಿದ್ದೇವೆ. ವೃದ್ಧಾಶ್ರಮಗಳತ್ತ ಹೆಜ್ಜೆ ಇಡುತ್ತಿರುವ ಹಿರಿಯ ಪೋಷಕರು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿಚ್ಛೇದನಗಳು, ಒಡೆಯುತ್ತಿರುವ ಜಂಟಿ ಕುಟುಂಬಗಳು, ಸೂಕ್ತ ಹೊಂದಾಣಿಕೆ ಯಾಗದೆ ವಿವಾಹವಾಗದೆ ಭವಿಷ್ಯದ ಆತಂಕದಲ್ಲಿರುವ ಸಾವಿರಾರು ಯುವಕ-ಯುವತಿಯರು ಹಾಗೂ ಮುಂದಿನ ಪೀಳಿಗೆಯಲ್ಲಿ ಮಾಯವಾಗುತ್ತಿರುವ ಸಂಸ್ಕಾರ, ನೈತಿಕತೆ ಮತ್ತು ಜೀವನ ಮೌಲ್ಯಗಳು ಇಂದಿನ ಜ್ವಲಂತ ಸಮಸ್ಯೆಗಳಾಗಿವೆ. ಇವುಗಳ ಬಗ್ಗೆ ನಾವೆಲ್ಲರೂ ಒಟ್ಟಾಗಿ ಕುಳಿತು ಆಳವಾಗಿ ಯೋಚಿಸಬೇಕಾದ ಸಮಯ ದಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಇಂದು ಬೀದಿಯಲ್ಲಿ ಅಥವಾ ಅಂತರ್ಜಾಲದಲ್ಲಿ ಜಗಳವಾಡುವುದು ಇಡೀ ಸಮಾಜಕ್ಕೆ ಮಾಡುವ ದ್ರೋಹವಲ್ಲವೇ ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.
ಸಣ್ಣತನದಿಂದ ಯಾರೂ ಎಂದಿಗೂ ಇತಿಹಾಸದಲ್ಲಿ ದೊಡ್ಡವರಾಗಲು ಸಾಧ್ಯವಿಲ್ಲ ಮತ್ತು ಇನ್ನೊಬ್ಬರನ್ನು ಕೀಳಾಗಿ ತೋರಿಸಿ ನಾವು ಎತ್ತರಕ್ಕೆ ಬೆಳೆಯುತ್ತೇವೆ ಅಂದುಕೊಳ್ಳುವುದು ಕೇವಲ ಭ್ರಮೆಯಾಗಿದೆ. ನಿಜವಾದ ಬೆಳವಣಿಗೆ ಎಂದರೆ ಪರಸ್ಪರರನ್ನು ಗೌರವಿಸುವುದು, ನಮ್ಮ ತಪ್ಪು ಗಳನ್ನು ತಿದ್ದಿಕೊಂಡು ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಸುವುದಾಗಿದೆ. ಆದ್ದರಿಂದ, ತ್ರಯಾ ಚಾರ್ಯರನ್ನು ಹಾಗೂ ಎಲ್ಲಾ ಮಠ-ಪೀಠಗಳ ಮಹಾನ್ ಯತಿವರ್ಯರನ್ನು ವಿವಾದದ ದಾಳ ವಾಗಿ ಸದೆ, ನಮ್ಮ ಜೀವನದ ಪ್ರೇರಣೆಯ ಮೂಲವಾಗಿಸಿಕೊಳ್ಳೋಣ. ವೈವಿಧ್ಯಮಯ ಚಿಂತನೆ ಗಳನ್ನು ಗೌರವಿಸುತ್ತಲೇ ಸಮಾಜದ ಅಖಂಡತೆಯನ್ನು ಕಾಪಾಡಿಕೊಳ್ಳೋಣ. ಪರಸ್ಪರ ಗೌರವವೇ ನಮ್ಮ ಸಂಸ್ಕೃತಿ, ಒಗ್ಗಟ್ಟೇ ನಮ್ಮ ಶಕ್ತಿಯಾಗಿದೆ.
ಮುಂದಿನ ಪೀಳಿಗೆಗೆ ನಾವು ಸಿದ್ಧಾಂತಗಳ ಹೆಸರಿನಲ್ಲಿ ಒಡೆದ ಸಮಾಜವನ್ನು ಕೊಡುವುದಕ್ಕಿಂತ, ಪ್ರೀತಿ ಮತ್ತು ಸಾಮರಸ್ಯದಿಂದ ಕಟ್ಟಿದ ಸದೃಢ ಪರಂಪರೆಯನ್ನು ಅತ್ಯುತ್ತಮ ಕೊಡುಗೆಯಾಗಿ ನೀಡೋಣ.