ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಪ್ರತಿಯೊಬ್ಬ ಶ್ರೇಷ್ಠ ನಾಯಕನ ಬೆನ್ನ ಹಿಂದೆ ಒಂದು ಅದ್ಭುತ ತಂಡವಿರುತ್ತದೆ !

ಇತಿಹಾಸದ ಹಳೆಯ ಪುಟಗಳನ್ನು ತಿರುವಿ ಕೂರುವ ಬದಲು, ಭವಿಷ್ಯವನ್ನು ವರ್ತಮಾನದ ಬರೆದು ಮುಗಿಸುವ ಅವರ ಛಲಕ್ಕೆ ಸಾಕ್ಷಿಗಳು. ‘ಭವಿಷ್ಯವು ಅದಕ್ಕಾಗಿ ಕಾಯುವವರದ್ದಲ್ಲ, ಅದನ್ನು ಸೃಷ್ಟಿಸು ವವರದ್ದು’ ಎನ್ನುವ ಅವರ ಮಾತುಗಳಲ್ಲಿ ಒಂದು ಬಗೆಯ ನಿರಾಳವಾದ ತೀವ್ರತೆಯಿದೆ. ಆದರೆ ಈ ಗಗನಚುಂಬಿ ಸೌಧಗಳ ಹಿಂದೊಬ್ಬ ಕವಿಯೂ ಇzನೆ ಎಂಬುದು ಅಷ್ಟೇ ಅಚ್ಚರಿಯ ಸಂಗತಿ.

ಇದೇ ಅಂತರಂಗ ಸುದ್ದಿ

ಇತ್ತೀಚೆಗೆ ನಾನು ದುಬೈಯಿಂದ ಜೋರ್ಡನ್‌ಗೆ ಹೋಗುವಾಗ, ದುಬೈ ವಿಮಾನ ನಿಲ್ದಾಣದಲ್ಲಿ Lessons From Life : Part I ಪುಸ್ತಕ ಗಮನ ಸೆಳೆಯಿತು. ಇದನ್ನು ಬರೆದವರು ದುಬೈ ರೂಲರ್ ಶೇಖ್ ಮಹಮದ್ ಬಿನ್ ರಶೀದ್ ಅಲ್ ಮಕ್ತೌಮ್. ನಾನು ಕಳೆದ ಇಪ್ಪತ್ತು ವರ್ಷಗಳಿಂದ ಇವರನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಾ ಬರುತ್ತಿದ್ದೇನೆ. ನನ್ನ ಅಂಕಣಗಳಲ್ಲಿ ಇವರ ಬಗ್ಗೆ ಹತ್ತಾರು ಸಲ ಬರೆದಿದ್ದೇನೆ. ‌

ಮರಳುಗಾಡಿನ ಅಂಚಿನಲ್ಲಿ ನಿಂತು ಸಮುದ್ರದ ಗಾಳಿಯನ್ನು ಉಸಿರಾಡುವಾಗ, ಮನುಷ್ಯನಿಗೆ ಬರೀ ಕಣ್ಣಿಗೆ ಕಾಣುವುದಷ್ಟೇ ನಿಜ ಅನ್ನಿಸುವುದಿಲ್ಲ. ಆ ಮರಳಿನಡಿ ನಿದ್ರಿಸುತ್ತಿರುವ ನೂರಾರು ಸಾಧ್ಯತೆ ಗಳು ಎಚ್ಚರಗೊಳ್ಳುತ್ತವೆ. ಶೇಖ್ ಮಹಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಮನುಷ್ಯನ ಕಣ್ಣುಗಳಲ್ಲಿ ಹೊಳೆದದ್ದು ಅಂಥದ್ದೇ ಒಂದು ಅದಮ್ಯ ಚಡಪಡಿಕೆ.

ಸುಡುವ ಬಿಸಿಲಿನಲ್ಲಿ ಬರೀ ಮರೀಚಿಕೆಯಷ್ಟೇ ಕಾಣುವ ಹಾದಿಯಲ್ಲಿ, ಇಡೀ ಜಗತ್ತೇ ಬೆರಗಾಗಿ ನೋಡು ವಂಥ ಒಂದು ಆಧುನಿಕ ಮಹಾನಗರವನ್ನು ಕಲ್ಪಿಸಿಕೊಳ್ಳುವುದು ಸಾಧಾರಣ ಕನಸಲ್ಲ. ಅದು ಮಣ್ಣಿನ ಮಿತಿಯನ್ನು ಮೀರಿ ಬೆಳೆಯುವ ಅದ್ಭುತ ಹಠ. ಅವರ ಬಾಲ್ಯದ ದಿನಗಳು ಕರಾವಳಿ ಯ ನಾವೆಗಳು, ಮುತ್ತು ಹೆಕ್ಕುವ ಬೆಸ್ತರು ಮತ್ತು ಮರುಭೂಮಿಯ ಮೌನದ ನಡುವೆ ಕರಗಿ ಹೋದವು.

ಇದನ್ನೂ ಓದಿ: ‌Vishweshwar Bhat Column: ಐಕಿಯಾ ಎಫೆಕ್ಟ್ ಎಂದರೇನು ?

ತಂದೆ ಶೇಖ್ ರಶೀದರ ಬೆರಳ ಹಿಡಿದು ದುಬೈ ಕ್ರೀಕ್‌ನ ದಂಡೆಯಲ್ಲಿ ನಿಂತಾಗ, ಈ ಪುಟ್ಟ ಜಲ ಮಾರ್ಗವೇ ನಾಳೆಯ ಜಗತ್ತಿನ ಹೆಬ್ಬಾಗಿಲಾಗಬಹುದೆಂಬ ಅರಿವು ಅವರಲ್ಲಿ ನಿಧಾನವಾಗಿ ಮೊಳಕೆ ಯೊಡೆಯಿತು. ಮನುಷ್ಯನ ನಿಜವಾದ ಸಂಪತ್ತು ಎಣ್ಣೆಯ ಬಾವಿಗಳಲ್ಲಿಲ್ಲ, ಅದು ಆತನ ಕಲ್ಪನಾ ಶಕ್ತಿಯ ಆಳದಲ್ಲಿದೆ ಎಂಬುದನ್ನು ಅವರು ಬಹಳ ಬೇಗ ಗ್ರಹಿಸಿಬಿಟ್ಟರು.

ಅಧಿಕಾರವೆನ್ನುವುದು ಕೇವಲ ಗದ್ದುಗೆಯಲ್ಲ, ಅದೆಂದರೆ ನಾಳಿನ ದಿನಗಳನ್ನು ಇಂದೇ ತಿದ್ದಿ ಬರೆಯುವ ಜವಾಬ್ದಾರಿ ಎಂಬುದು ಅವರ ನಡೆಯಲ್ಲಿತ್ತು. ಆಮೇಲೆ ಶುರುವಾಗಿದ್ದು ಕೇವಲ ಕಟ್ಟಡಗಳ ನಿರ್ಮಾಣ ವಲ್ಲ, ಕನಸುಗಳ ಪಡಿಅಚ್ಚು ಹಾಕುವ ಕೆಲಸ. ಆಕಾಶವನ್ನೇ ಮುಟ್ಟಲು ಹಾರುವ ಬುರ್ಜ್ ಖಲೀಫಾ, ನೀಲಿ ಕಡಲ ಮಡಿಲಿನಲ್ಲಿ ಅರಳಿದ ಪಾಮ್ ಜುಮೇರಾ, ಅಷ್ಟೇ ಏಕೆ, ಜಗತ್ತಿನ ಕಲ್ಪನೆಗೂ ಮೀರಿದ ‘ಮ್ಯೂಸಿಯಂ ಆಫ್ ದಿ ಫ್ಯೂಚರ್’- ಇವೆಲ್ಲವೂ ಕೇವಲ ಸಿಮೆಂಟು-ಗಾಜಿನ ರಚನೆಗಳಲ್ಲ.

ಇತಿಹಾಸದ ಹಳೆಯ ಪುಟಗಳನ್ನು ತಿರುವಿ ಕೂರುವ ಬದಲು, ಭವಿಷ್ಯವನ್ನು ವರ್ತಮಾನದ ಬರೆದು ಮುಗಿಸುವ ಅವರ ಛಲಕ್ಕೆ ಸಾಕ್ಷಿಗಳು. ‘ಭವಿಷ್ಯವು ಅದಕ್ಕಾಗಿ ಕಾಯುವವರದ್ದಲ್ಲ, ಅದನ್ನು ಸೃಷ್ಟಿಸುವವರದ್ದು’ ಎನ್ನುವ ಅವರ ಮಾತುಗಳಲ್ಲಿ ಒಂದು ಬಗೆಯ ನಿರಾಳವಾದ ತೀವ್ರತೆಯಿದೆ. ಆದರೆ ಈ ಗಗನಚುಂಬಿ ಸೌಧಗಳ ಹಿಂದೊಬ್ಬ ಕವಿಯೂ ಇzನೆ ಎಂಬುದು ಅಷ್ಟೇ ಅಚ್ಚರಿಯ ಸಂಗತಿ.

61 ಒಕ

ನಬಾತಿ ಶೈಲಿಯ ಅರಬ್ಬಿ ಕಾವ್ಯದಲ್ಲಿ ಅಲೆಯುವ ಅವರ ಮನಸ್ಸಿಗೆ ಅಶ್ವಗಳ ವೇಗ, ಮರಳುಗಾಡಿನ ತಂಪು ರಾತ್ರಿಗಳು ಮತ್ತು ಮನುಷ್ಯ ಸಂಬಂಧಗಳ ಬೆಚ್ಚಗಿನ ಎಳೆಗಳು ಚೆನ್ನಾಗಿಯೇ ಗೊತ್ತು. ಕುದುರೆಯ ಪಾದದ ಸದ್ದಿನಲ್ಲಿ ಕವಿತೆಯ ಲಯವನ್ನು ಹುಡುಕುವ ಈ ನಾಯಕ, ಆಡಳಿತದ ಬಿಗಿ ಮುಷ್ಟಿಯ ನಡುವೆಯೂ ಕಾವ್ಯದ ಆರ್ದ್ರತೆಯನ್ನು ಉಳಿಸಿಕೊಂಡಿರುವುದು ಅವರ ವ್ಯಕ್ತಿತ್ವ ಕ್ಕೊಂದು ವಿಶಿಷ್ಟವಾದ ಕಾವ್ಯಾತ್ಮಕ ಆಯಾಮವನ್ನು ತಂದುಕೊಡುತ್ತದೆ.

ಕೊನೆಗೂ ಶೇಖ್ ಮಕ್ತೌಮ್ ನಮಗೆ ನೆನಪಾಗುವುದು ಅಸಾಧ್ಯವೆನ್ನುವ ಪದವನ್ನು ನಿಧಾನವಾಗಿ ಅಳಿಸಿಹಾಕಿದ ಒಬ್ಬ ವಾಸ್ತುಶಿಲ್ಪಿಯಂತೆ. ಜನ ಮರುಭೂಮಿಯಲ್ಲಿ ನೆರಳು ಹುಡುಕುತ್ತಿದ್ದಾಗ, ಅವರು ಅಲ್ಲಿ ಬೆಳಕಿನ ಮಹೋತ್ಸವವನ್ನೇ ಕಟ್ಟಿಬಿಟ್ಟರು. ಇತಿಹಾಸವು ಸಾಮಾನ್ಯವಾಗಿ ರಾಜರ ವಿಜಯಗಳನ್ನು ನೆನಪಿಟ್ಟುಕೊಳ್ಳುತ್ತದೆ. ಆದರೆ ಈ ಮನುಷ್ಯನನ್ನು ಕಾಲ ನೆನಪಿಟ್ಟುಕೊಳ್ಳುವುದು, ಕಣ್ಣು ತೆರೆದೇ ಕನಸು ಕಂಡು, ಆ ಕನಸಿನ ಹಾದಿಯಲ್ಲಿ ಜಗತ್ತನ್ನೇ ಕರೆದೊಯ್ದ ಒಬ್ಬ ಅದ್ಭುತ ಕನಸುಗಾರನಾಗಿ.

ಶೇಖ್ ಮಕ್ತೌಮ್ ಬರೆದ ಈ ಪುಸ್ತಕದಲ್ಲಿ ಒಂದು ಅಧ್ಯಾಯವಿದೆ. ಅದರ ಶೀರ್ಷಿಕೆ: ‘ಪ್ರತಿಯೊಬ್ಬ ಶ್ರೇಷ್ಠ ನಾಯಕನ ಬೆನ್ನ ಹಿಂದೆ ಒಂದು ಅದ್ಭುತ ತಂಡವಿರುತ್ತದೆ’. ಇದರಲ್ಲಿ ಅವರು ಬರೆಯುತ್ತಾರೆ- ಸಾಧಿಸಿದ ಯಶಸ್ಸುಗಳ ಬಗ್ಗೆ ಜನರು ನನ್ನನ್ನು ಕೇಳಿದಾಗ, ನಾನು ಯಾವಾಗಲೂ ಹೇಳುವುದು ಒಂದೇ: ಅವು ಕೇವಲ ನನ್ನೊಬ್ಬನ ಸಾಧನೆಗಳಲ್ಲ. ನನ್ನ ದೃಷ್ಟಿಕೋನವನ್ನು ನಂಬಿ, ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ಈ ಪಯಣವನ್ನು ಮುನ್ನಡೆಸುತ್ತಿರುವ ಸಂಪೂರ್ಣ ತಂಡದ ಸಾಧನೆಗಳು ಅವು.

ಯಶಸ್ಸು ಎಂದಿಗೂ ಒಬ್ಬನ ಕೈಯಿಂದ ಮಾತ್ರ ದಕ್ಕುವ ಫಲವಲ್ಲ. ಒಂದೇ ಗುರಿಯೊಂದಿಗೆ ಸಾಮರಸ್ಯದಿಂದ ಒಟ್ಟಾಗಿ ಶ್ರಮಿಸುವ ಅನೇಕ ಕೈಗಳು, ಹೃದಯಗಳು ಮತ್ತು ಮನಸ್ಸುಗಳ ಫಲವದು. ನಾಯಕತ್ವ ಎಂಬುದು ಕೇವಲ ಒಂದು ಹುದ್ದೆ ಅಥವಾ ಸ್ಥಾನಮಾನವಲ್ಲ ಎಂಬು ದನ್ನು ಜೀವನ ನನಗೆ ಕಲಿಸಿದೆ. ಅದು ಒಂದು ತಂಡವನ್ನು ಕಟ್ಟಿ, ಅದಕ್ಕೆ ಶಕ್ತಿ ತುಂಬಿ, ಪ್ರತಿದಿನ ಅದರ ಸಾಮರ್ಥ್ಯವನ್ನು ಹೊರತರುವ ಜವಾಬ್ದಾರಿಯಾಗಿದೆ.

ನಿಜವಾದ ನಾಯಕನ ಅಳತೆಗೋಲು ಆತ ಒಬ್ಬನೇ ಸಾಧಿಸಿದ ವಿಜಯಗಳಲ್ಲ, ಬದಲಿಗೆ ತನ್ನ ತಂಡ ದೊಂದಿಗೆ ಒಟ್ಟಾಗಿ ಗಳಿಸಿದ ಗೆಲುವುಗಳಲ್ಲಿ ಅಡಗಿದೆ. ಒಬ್ಬ ನಾಯಕ ಒಂದು ಸಂಸ್ಥೆ ಅಥವಾ ರಾಷ್ಟ್ರಕ್ಕಾಗಿ ಮಾಡಬಹುದಾದ ಅತ್ಯುನ್ನತ ಹೂಡಿಕೆ ಎಂದರೆ ಬಲಿಷ್ಠ ತಂಡಗಳನ್ನು ಕಟ್ಟುವುದು. ಬಲಿಷ್ಠ ತಂಡವು ಕೇವಲ ಯಶಸ್ಸನ್ನು ರಕ್ಷಿಸುವುದಷ್ಟೇ ಅಲ್ಲ. ಅದು ನಿರಂತರ ಬೆಳವಣಿಗೆಯ ಚಕ್ರವನ್ನು ಬೆಳೆಸುತ್ತದೆ. ಆ ಮೂಲಕ ಆ ದೃಷ್ಟಿಕೋನವು ಕೇವಲ ಉಳಿಯುವುದು ಮಾತ್ರವಲ್ಲ, ಮುಂದಿನ ಪೀಳಿಗೆಗಳೊಂದಿಗೆ ಇನ್ನಷ್ಟು ಪ್ರವರ್ಧಮಾನಕ್ಕೆ ಬರುವುದನ್ನು ಖಚಿತಪಡಿಸುತ್ತದೆ.

ಒಬ್ಬ ನಾಯಕನಿಗೆ ಪ್ರತಿದಿನದ ಅತ್ಯಂತ ಮುಖ್ಯವಾದ ಪ್ರಶ್ನೆ ‘ಇಂದು ನಾನು ಪೂರ್ಣಗೊಳಿಸ ಬೇಕಾದ ಅತ್ಯಂತ ಪ್ರಮುಖ ಕೆಲಸ ಯಾವುದು?’ ಎಂಬುದಲ್ಲ, ಬದಲಿಗೆ ‘ಆ ಅತ್ಯಂತ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಲು ಇಂದು ನಾನು ಯಾರನ್ನು ಆರಿಸಬೇಕು?’ ಎಂಬುದು ಎಂದು ಜೀವನ ನನಗೆ ಕಲಿಸಿದೆ. ಒಬ್ಬ ನಿಜವಾದ ನಾಯಕನ ಪ್ರಾಥಮಿಕ ಕೆಲಸವೇ ಇನ್ನಷ್ಟು ನಾಯಕ ರನ್ನು ಸೃಷ್ಟಿಸುವುದು.

ಏಕೆಂದರೆ ಸಂಸ್ಥೆಗಳು ತಮ್ಮ ಶಕ್ತಿಯನ್ನು ಪಡೆದುಕೊಳ್ಳುವುದು ಅವುಗಳನ್ನು ಮುನ್ನಡೆಸುವ ಜನರಿಂದಲೇ ಹೊರತು, ಅವುಗಳ ಕಟ್ಟಡಗಳು ಅಥವಾ ವ್ಯವಸ್ಥೆಗಳಿಂದಲ್ಲ. ತಂಡವನ್ನು ಆಯ್ಕೆ ಮಾಡುವಾಗ ಕೌಶಲ ಮತ್ತು ವ್ಯಕ್ತಿತ್ವ (ಗುಣನಡತೆ) ಎರಡನ್ನೂ ತೂಗಿ ನೋಡಬೇಕು, ಆದರೆ ವ್ಯಕ್ತಿತ್ವಕ್ಕೇ ಯಾವಾಗಲೂ ಹೆಚ್ಚಿನ ತೂಕವಿರಬೇಕು ಎಂದು ಜೀವನ ನನಗೆ ಕಲಿಸಿದೆ. ನೈತಿಕತೆ ಯಿಲ್ಲದ ಪ್ರತಿಭೆಗಿಂತ ಅಪಾಯಕಾರಿಯಾದದ್ದು ಬಹಳ ಕಡಿಮೆ. ಇದಲ್ಲದೆ, ಕೆಲಸದ ಸ್ಥಳದಲ್ಲಿ ಹಾಸುಹೊಕ್ಕಾಗಿರುವ ಮೌಲ್ಯಗಳೇ ಎಲ್ಲಕ್ಕಿಂತ ಮುಖ್ಯ.

ಆಕರ್ಷಕ ಆಫರ್‌ಗಳು ಆರಂಭದಲ್ಲಿ ಪ್ರತಿಭೆಗಳನ್ನು ಸೆಳೆಯಬಹುದು, ಆದರೆ ಹಂಚಿಕೊಂಡ ಉನ್ನತ ಮೌಲ್ಯಗಳೇ ಬದ್ಧತೆಯನ್ನು ಹೆಚ್ಚಿಸುತ್ತವೆ, ಉತ್ಸಾಹವನ್ನು ಉಳಿಸುತ್ತವೆ ಮತ್ತು ತಂಡ ವನ್ನು ಅದರ ಗುರಿಯೊಂದಿಗೆ ಬೆಸೆಯುತ್ತವೆ. ಕೇವಲ ಇಂದಿನ ಸವಾಲುಗಳಿಗಷ್ಟೇ ಅಲ್ಲ, ನಾಳೆಯ ಯುದ್ಧಗಳಿಗೂ ಸಿದ್ಧವಾಗುವಂತೆ ನನ್ನ ತಂಡವನ್ನು ಆಯ್ಕೆ ಮಾಡಿಕೊಳ್ಳುವುದನ್ನು ಜೀವನ ನನಗೆ ಕಲಿಸಿದೆ.

ಗಮ್ಯಸ್ಥಾನವನ್ನು ನಿರ್ಧರಿಸುವುದು ನನ್ನ ಪಾತ್ರವಾದರೆ, ಅವರ ವಿವೇಕ ಮತ್ತು ಸಾಮರ್ಥ್ಯ ಆ ಹಾದಿ ಯನ್ನು ರೂಪಿಸುತ್ತವೆ. ನಾವು ಇಂದು ಆಚರಿಸುತ್ತಿರುವ ವಿಜಯಗಳು ಹಿಂದೆ ನಾವು ಮಾಡಿದ ಆಯ್ಕೆಗಳು ಮತ್ತು ನಾವು ನಂಬಿದ ಜನರ ಪರಿಣಾಮವೇ ಆಗಿದೆ. ತಪ್ಪು ಆಯ್ಕೆ ಮಾಡಿದರೆ, ನಾವು ವರ್ಷಗಳ ವಿಳಂಬ ಮತ್ತು ಅಸಂಖ್ಯಾತ ಕಳೆದುಹೋದ ಅವಕಾಶಗಳ ಶಾಪಕ್ಕೆ ಗುರಿಯಾಗುತ್ತೇವೆ. ಜಾಣ್ಮೆಯಿಂದ ಆರಿಸಿದರೆ, ನಾವು ಸಮೃದ್ಧವಾಗಿ ಬೆಳೆಯುತ್ತೇವೆ.

ಅಧಿಕಾರ, ಅಕ್ಷರ ಮತ್ತು ಅಂತರಂಗ

ನಗರವೊಂದು ನಡುರಾತ್ರಿಯ ಮೌನಕ್ಕೆ ಜಾರುವ ಹೊತ್ತಿಗೆ, ಅಧಿಕಾರದ ಕಿಟಕಿಗಳಲ್ಲಿ ಉರಿಯುವ ದೀಪಗಳ ಹಿಂದೆ ಸಾಮಾನ್ಯವಾಗಿ ಫೈಲುಗಳ ರಾಶಿ ಇರುತ್ತದೆ. ಇಲ್ಲವೇ ನಾಳಿನ ಲೆಕ್ಕಾಚಾರಗಳ ಚಡಪಡಿಕೆ ಇರುತ್ತದೆ. ಆದರೆ ಆ ಬೆಳಕಿನ ಕೆಳಗೆ ಕುಳಿತು, ಕೈಯಂದು ಪುಸ್ತಕ ಹಿಡಿದು, ಅದರ ಮೃದುವಾದ ಪುಟಗಳ ಸದ್ದಿನಲ್ಲಿ ಜಗತ್ತನ್ನೇ ಮರೆಯುವ ಮುಖಂಡನನ್ನು ಕಲ್ಪಿಸಿಕೊಳ್ಳುವುದು ಇವತ್ತಿನ ಕಾಲಕ್ಕೆ ಒಂದು ಸೋಜಿಗದ ಸಂಗತಿ. ಯಾಕೆಂದರೆ ನಾವು ಅಧಿಕಾರವನ್ನು ಯಾವಾಗಲೂ ಅಬ್ಬರ, ಧಾವಂತ ಮತ್ತು ಘೋಷಣೆಗಳ ಮೂಲಕವೇ ಅಳೆದು ರೂಢಿ ಮಾಡಿಕೊಂಡಿದ್ದೇವೆ.

ಅಧಿಕಾರವೆಂದರೆ ನಿರಂತರ ಮಾತನಾಡುವುದು, ಆಜ್ಞೆ ಮಾಡುವುದು, ಇನ್ನೊಬ್ಬರ ಕಣ್ಣು ಕುಕ್ಕುವುದು ಎಂದೇ ನಂಬಿರುವ ಈ ಲೋಕದಲ್ಲಿ, ಒಳಗಿನ ಕಣ್ಣನ್ನು ತೆರೆದಿಟ್ಟುಕೊಳ್ಳುವ ‘ಓದು’ ಎನ್ನುವ ಶಾಂತ ಕ್ರಿಯೆಗೆ ಜಾಗವೆಲ್ಲಿದೆ? ದುರ್ದೈವವೆಂದರೆ, ನಮ್ಮ ಕಣ್ಣಮುಂದಿರುವ ಬಹುತೇಕ ರಾಜಕಾರಣಿಗಳಿಗೆ ಓದು ಎನ್ನುವುದು ಕಾಲಹರಣದಂತೆ ಕಾಣುತ್ತದೆ.

ಕೈಯಲ್ಲಿ ಮೈಕ್ ಹಿಡಿದು ಅರಚುವ, ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಅಥವಾ ಕೆಮರಾದ ಬೆಳಕಿನಲ್ಲಿ ಕೃತಕವಾಗಿ ನಗುವ ಕಲೆಯಷ್ಟೇ ಅವರ ಬದುಕಾಗುತ್ತದೆ. ಓದುವುದಕ್ಕೆ ಬೇಕಾಗುವ ಆ ನಿಧಾನ ಗತಿ, ಆ ಆಳವಾದ ತಾಳ್ಮೆ ಮತ್ತು ಇನ್ನೊಬ್ಬರ ಆಲೋಚನೆಯನ್ನು ಒಪ್ಪಿಕೊಳ್ಳುವ ನಮ್ರತೆ ಇಂದಿನ ಅಧಿಕಾರಶಾಹಿಯಲ್ಲಿ ಸಂಪೂರ್ಣ ಬತ್ತಿಹೋಗಿದೆ. ಅದಕ್ಕಿಂತಲೂ ದೊಡ್ಡ ದುರಂತ ವೆಂದರೆ, ನಾವು ಮತ ಹಾಕುವಾಗಲೂ ಅಂಥವರನ್ನೇ ಆರಿಸುತ್ತೇವೆ.

ಪುಸ್ತಕ ಮುಟ್ಟದ, ಕಾವ್ಯದ ತೇವವಿಲ್ಲದ, ಬರೀ ಹಣ ಲೆಕ್ಕಾಚಾರದ ಗಟ್ಟಿತನವನ್ನೇ ಪೌರುಷವೆಂದು ನಂಬಿರುವ ಮನುಷ್ಯರೇ ನಮ್ಮ ನಾಯಕರಾಗುತ್ತಾರೆ. ಹೀಗಾಗಿ ನಮ್ಮ ವ್ಯವಸ್ಥೆಯೂ ದಿನೇದಿನೆ ಬರಡಾಗುತ್ತಾ ಸಾಗಿದೆ. ಇಂಥ ಹೊತ್ತಿನಲ್ಲಿ, ಮರುಭೂಮಿಯ ನಡುವೆ ಆಧುನಿಕತೆಯ ಪವಾಡ ವನ್ನೇ ಸೃಷ್ಟಿಸಿದ ದುಬೈನ ದೊರೆ, ಶೇಖ್ ಮಹಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ‘I Read, Therefore I Am’ (ನಾನು ಓದುತ್ತೇನೆ, ಆದ್ದರಿಂದ ನಾನಿದ್ದೇನೆ) ಎಂಬ ಸಾಲುಗಳು ಕಣ್ಣಿಗೆ ಬಿದ್ದಾಗ ಎದೆಯೊಳಗೆ ಏನೋ ಒಂದು ತಂಪಾದ ಎಳೆ ಹರಿದುಹೋಗುತ್ತದೆ.

ಫ್ರೆಂಚ್ ತತ್ವಜ್ಞಾನಿ ದೆಕಾರ್ಟೆಯ ಪ್ರಸಿದ್ಧ ನುಡಿಯನ್ನು ನೆನಪಿಸುವ ಈ ಮಾತು, ಕೇವಲ ಬೌದ್ಧಿಕ ಜಾಣ್ಮೆಯ ನುಡಿಯಲ್ಲ. ಜಗತ್ತಿನ ಅತ್ಯಂತ ಶ್ರೀಮಂತ, ಅತ್ಯಂತ ಪ್ರಭಾವಿ ಮತ್ತು ಬಿಡುವಿಲ್ಲದ ಆಡಳಿತ ಗಾರನೊಬ್ಬ ತನ್ನ ಅಸ್ತಿತ್ವದ ಬೇರುಗಳನ್ನು ಕಂಡುಕೊಂಡಿರುವುದು ಬೃಹತ್ ಕಟ್ಟಡ ಗಳಲ್ಲಲ್ಲ, ತಾನು ಓದುವ ಅಕ್ಷರಗಳ ನಡುವೆ ಎಂದು ಒಪ್ಪಿಕೊಳ್ಳುವ ಮುಗ್ಧತೆ ಅದರಲ್ಲಿ ಅಡಗಿದೆ.

ಒಂದು ದೇಶದ ಚುಕ್ಕಾಣಿ ಹಿಡಿದವನು ಓದಬೇಕು ಎನ್ನುವುದು ಕೇವಲ ಮಾಹಿತಿಯನ್ನು ಕಲೆ ಹಾಕುವು ದಕ್ಕಾಗಿ ಅಲ್ಲ; ಅಂತರಂಗದ ಕನ್ನಡಿ ಮಸಕಾಗದಂತೆ ನೋಡಿಕೊಳ್ಳುವುದಕ್ಕಾಗಿ. ಕವಿತೆ ಯೊಂದು ರಾಜಕಾರಣಿಯ ಕೈಗೆ ಸಿಕ್ಕಾಗ ಆತನಲ್ಲಿ ತಾನೇತಾನಾಗಿ ಒಂದು ಕರುಣೆ ಹುಟ್ಟಿ ಕೊಳ್ಳುತ್ತದೆ.

ರಾಗವೊಂದು ಆತನ ಕಿವಿಗೆ ಬಿದ್ದಾಗ ಕಠಿಣ ನಿರ್ಧಾರಗಳ ಹಿಂದೆ ಇರುವ ಮನುಷ್ಯರ ಮುಖಗಳು ನೆನಪಾಗುತ್ತವೆ. ಕಲೆ, ಸಂಗೀತ, ಸಾಹಿತ್ಯಗಳ ಸ್ಪರ್ಶವಿಲ್ಲದ ರಾಜಕಾರಣಿಯು ಕೇವಲ ಗಡಿಯಾರದ ಮುಳ್ಳುಗಳನ್ನು ತಿರುಗಿಸುವ ಯಂತ್ರವಾಗುತ್ತಾನೆ. ಅವನಲ್ಲಿ ಅಧಿಕಾರ ಇರಬಹುದು, ಆದರೆ ಅಧಿಕಾರದ ಭಾರವನ್ನು ಹೊರುವ ಸೂಕ್ಷ್ಮ ಸಂವೇದನೆ ಇರುವುದಿಲ್ಲ. ಶೇಖ್ ಮಕ್ತೌಮ್ ಅವರ ಇಡೀ ವ್ಯಕ್ತಿತ್ವವೇ ಈ ಸೂಕ್ಷ ತೆ ಮತ್ತು ಗಟ್ಟಿತನದ ನಡುವಿನ ಒಂದು ಅಪರೂಪದ ಸಮತೋಲನ. ಅವರು ತಮ್ಮ ಬರಹದಲ್ಲಿ ಹೇಳುವ ಮಾತುಗಳು ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲ, ದಿನದ ಇಪ್ಪತ್ನಾಲ್ಕು ಗಂಟೆಗಳೂ ಮೊಬೈಲ್ ಪರದೆಯ ಕಳೆದುಹೋಗುವ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಎಚ್ಚರಿಕೆಯ ಗಂಟೆಯಂತೆ ತಟ್ಟುತ್ತವೆ.

‘ಪುಸ್ತಕಗಳಿಲ್ಲದ ಬದುಕು ಬರೀ ದಿನಗಳ ಸರಣಿ ಮಾತ್ರ. ಆದರೆ ಪುಸ್ತಕಗಳಿರುವ ಬದುಕು ಸಾವಿರಾರು ವರ್ಷಗಳ ಅನುಭವದ ಸಂಗ್ರಹ’ ಎನ್ನುತ್ತಾರೆ ಅವರು. ಮನುಷ್ಯನೊಬ್ಬ ತನ್ನ ಜೀವಿತಾವಧಿಯಲ್ಲಿ ಬದುಕಬಲ್ಲದ್ದು ಕೇವಲ ಒಂದು ಜೀವನವನ್ನು ಮಾತ್ರ. ಆದರೆ ಪುಸ್ತಕವೊಂದನ್ನು ಕೈಗೆತ್ತಿ ಕೊಂಡಾಗ, ಆತ ಇತಿಹಾಸದ ಸಾವಿರಾರು ಮುಖಗಳನ್ನು, ಬೇರೆ ಬೇರೆ ದೇಶಗಳ ಏಳುಬೀಳುಗಳನ್ನು, ಅಸಂಖ್ಯಾತ ಮನುಷ್ಯರ ಸಂಕಟಗಳನ್ನು ತನ್ನದೇ ಎದೆಯೊಳಗೆ ಮರುಬದುಕಲು ಸಾಧ್ಯವಾಗುತ್ತದೆ.

ಒಬ್ಬ ಮುಖಂಡನಿಗೆ ಇದಕ್ಕಿಂತ ದೊಡ್ಡ ಶಕ್ತಿ ಬೇರೆ ಯಾವುದು ಬೇಕು? ನಾವು ಸಾಮಾನ್ಯವಾಗಿ ದುಬೈ ಎಂದರೆ ಆಕಾಶ ಮುಟ್ಟುವ ಬುರ್ಜ್ ಖಲೀಫಾ, ನೀಲಿ ಕಡಲ ನಡುವಿನ ದ್ವೀಪಗಳು ಮತ್ತು ಕಣ್ಣು ಕೋರೈಸುವ ಐಷಾರಾಮವನ್ನಷ್ಟೇ ನೋಡುತ್ತೇವೆ. ಆದರೆ ಆ ಗಾಜು ಮತ್ತು ಸಿಮೆಂಟಿನ ಆಚೆಗೆ, ಅರಬ್ಬಿ ಮರಳುಗಾಡಿನಲ್ಲಿ ಅಕ್ಷರಗಳ ಹಬ್ಬವನ್ನು ಕಟ್ಟಿ ಬೆಳೆಸಿದ ಮನುಷ್ಯನೊಬ್ಬನಿದ್ದಾನೆ.

‘ಅರಬ್ ರೀಡಿಂಗ್ ಚಾಲೆಂಜ್’ ಮೂಲಕ ಲಕ್ಷಾಂತರ ಮಕ್ಕಳ ಕೈಗೆ ಪುಸ್ತಕಗಳನ್ನು ಕೊಟ್ಟಿದ್ದು ಇದೇ ಶೇಖ್ ಮಹಮದ್. ‘ಒಂದು ಮಗು ಪುಸ್ತಕವನ್ನು ತೆರೆದಾಗ, ಅದು ಅಜ್ಞಾನದ ಬಾಗಿಲನ್ನು ಮುಚ್ಚು ತ್ತದೆ’ ಎನ್ನುವ ಅವರ ಮಾತಿನಲ್ಲಿ ಆಡಳಿತಗಾರನ ದರ್ಪವಿಲ್ಲ. ಬದಲಿಗೆ ಮುಂದಿನ ತಲೆಮಾರಿನ ಕೈಹಿಡಿದು ಮುನ್ನಡೆಸುವ ಒಬ್ಬ ಪ್ರಬುದ್ಧ ಶಿಕ್ಷಕನ ವಾತ್ಸಲ್ಯವಿದೆ.

ಓದು ಮನುಷ್ಯನನ್ನು ಅಹಂಕಾರದಿಂದ ಮುಕ್ತಗೊಳಿಸುತ್ತದೆ. ತನಗೆ ಎಲ್ಲವೂ ಗೊತ್ತು ಎಂಬ ಭ್ರಮೆಯ ಮೆರೆಯುವ ಅಧಿಕಾರಶಾಹಿಗೆ, ಓದು ತಾನು ಬಲ್ಲದ್ದು ಸಮುದ್ರದ ಒಂದು ಹನಿಯಷ್ಟೇ ಎಂದು ನಿರಂತರ ವಾಗಿ ನೆನಪಿಸುತ್ತಿರುತ್ತದೆ. ಶೇಖ್ ಮಕ್ತೌಮ್ ತಮ್ಮ ಬಿಡುವಿಲ್ಲದ ದಿನಚರಿ ಯಲ್ಲೂ ಓದುವುದಕ್ಕೆ ನಿತ್ಯ ಸಮಯವನ್ನು ಕದಿಯುತ್ತಾರೆ. ಎಷ್ಟೇ ತುರ್ತು ಸಭೆಗಳಿದ್ದರೂ, ರಾತ್ರಿಯ ಹೊತ್ತು ತಮ್ಮ ಮೇಜಿನ ಮೇಲಿರುವ ಪುಸ್ತಕದೊಂದಿಗೆ ಅವರು ಕಳೆಯುವ ಆ ಏಕಾಂತದ ಕ್ಷಣಗಳೇ ಅವರಿಗೆ ಮುಂದಿನ ದಾರಿ ಯನ್ನು ತೋರಿಸುತ್ತವೆ.

ಓದದ ನಾಯಕ ವರ್ತಮಾನದ ಸುಳಿಗೆ ಸಿಲುಕಿ ಒದ್ದಾಡುತ್ತಾನೆ. ಓದುವ ನಾಯಕ ಇತಿಹಾಸದ ಹೆಗಲ ಮೇಲೆ ನಿಂತು ಭವಿಷ್ಯವನ್ನು ನೋಡಬಲ್ಲ ದೂರದೃಷ್ಟಿಯನ್ನು ಪಡೆಯುತ್ತಾನೆ. ಇತ್ತೀಚೆಗೆ ಅವರ ಈ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು ಕೇವಲ ಅದೊಂದು ಪ್ರಸಿದ್ಧ ವ್ಯಕ್ತಿಯ ಪೋ ಆಗಿದ್ದಕ್ಕಲ್ಲ. ಇಡೀ ಜಗತ್ತೇ ಆಳವಿಲ್ಲದ ಆನ್‌ಲೈನ್ ಸ್ಕ್ರೋಲಿಂಗ್‌ಗೆ ಮರುಳಾಗಿ, ಗಮನ ಕಳೆದು ಕೊಂಡು ತೇಲುತ್ತಿರುವ ಹೊತ್ತಿನಲ್ಲಿ, ‘ನಾನು ಓದುತ್ತೇನೆ, ಆದ್ದರಿಂದ ನಾನಿದ್ದೇನೆ’ ಎನ್ನುವ ಘನವಾದ ಮಾತು ಜನರನ್ನು ಹಿತವಾಗಿ ತಟ್ಟಿತು.

ಗಂಟೆಗಟ್ಟಲೆ ರೀಲ್ಸ್‌ಗಳಲ್ಲಿ, ವ್ಯರ್ಥ ರಾಜಕೀಯ ಜಗಳಗಳಲ್ಲಿ ಕಾಲ ಕಳೆಯುವ ಯುವಪೀಳಿಗೆಗೆ, ತನ್ನದೇ ಸಾಮ್ರಾಜ್ಯವನ್ನು ನಡೆಸುವ ಮುಖಂಡನೊಬ್ಬ ಪುಸ್ತಕದ ಮಹತ್ವವನ್ನು ಸಾರಿದ್ದು ಒಂದು ಸಣ್ಣ ಆಘಾತ ದಂತೆಯೂ, ಅಪಾರ ಪ್ರೇರಣೆಯಂತೆಯೂ ಕೆಲಸ ಮಾಡಿತು. ಸಂಗೀತವನ್ನು ಆಲಿಸುವ, ಕಲೆಯ ಸೂಕ್ಷ್ಮತೆಯನ್ನು ಗುರುತಿಸುವ ಗುಣವೂ ಒಬ್ಬ ನಾಯಕನಿಗೆ ಅಷ್ಟೇ ಮುಖ್ಯ. ಶೇಖ್ ಮಹಮದ್ ಕೇವಲ ಆಡಳಿತ ಗಾರನಲ್ಲ, ನಬಾತಿ ಶೈಲಿಯ ಅರಬ್ಬಿ ಕಾವ್ಯವನ್ನು ಬರೆಯುವ ಕವಿಯೂ ಹೌದು. ಕುದುರೆಯ ಓಟದ ಲಯದಲ್ಲಿ, ಮರುಭೂಮಿಯ ರಾತ್ರಿಯ ತಂಪಿನಲ್ಲಿ ಕವಿತೆ ಗಳನ್ನು ಹೆಣೆಯುವ ಅವರ ಮನಸ್ಸಿಗೆ ಮನುಷ್ಯರ ಒಳತೋಟಿಗಳು ಚೆನ್ನಾಗಿಯೇ ಅರ್ಥವಾಗುತ್ತವೆ.

ಕಾವ್ಯದ ಎಳೆಯೊಂದು ಕಣ್ಣೊಳಗಿರುವಾಗ, ಜನರ ಕಣ್ಣೀರು ಬರೀ ಅಂಕಿಅಂಶಗಳಾಗಿ ಕಾಣುವು ದಿಲ್ಲ. ದುರದೃಷ್ಟವಶಾತ್, ನಮ್ಮ ಬಹುತೇಕ ರಾಜಕಾರಣಿಗಳಿಗೆ ಕಲೆ ಎಂದರೆ ಚುನಾವಣಾ ಪ್ರಚಾರ ದಲ್ಲಿ ಬಳಸುವ ಕಟೌಟ್‌ಗಳು ಅಥವಾ ಉತ್ಸವಗಳ ವೇದಿಕೆಯಷ್ಟೇ ಆಗಿ ಹೋಗಿದೆ. ಅದರ ಒಳಗಿರುವ ರಸಾನುಭವ ಅವರ ಸ್ಪರ್ಶಕ್ಕೇ ಸಿಗುವುದಿಲ್ಲ.

ನಮ್ಮ ಪ್ರಜಾಪ್ರಭುತ್ವದ ದೊಡ್ಡ ವಿಪರ್ಯಾಸವೆಂದರೆ, ನಾವು ಓದುವವರನ್ನು ‘ಪುಸ್ತಕದ ಹುಳು’ ಗಳು ಎಂದು ಹೀಯಾಳಿಸಿ, ಅಬ್ಬರಿಸಿ ಬೊಬ್ಬಿರಿಯುವವರನ್ನೇ ನಾಯಕರೆಂದು ನೆತ್ತಿಯ ಮೇಲೆ ಹೊತ್ತು ಮೆರೆಸು ತ್ತೇವೆ. ಲೇಖನಗಳನ್ನು ಬರೆಯುವ, ಗಂಭೀರವಾಗಿ ಚಿಂತಿಸುವ, ಪ್ರಶ್ನೆಗಳಿಗೆ ಮುಖಾಮುಖಿಯಾಗುವ ರಾಜಕಾರಣಿಗಳು ನಮಗೆ ಬೇಡವಾಗಿದ್ದಾರೆ.

ಪರಿಣಾಮವಾಗಿ, ನಮ್ಮ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಗಳು ಸತ್ವ ಕಳೆದುಕೊಂಡು ಕೇವಲ ಗದ್ದಲಗಳಾಗಿ ಬದಲಾಗುತ್ತಿವೆ. ಓದುವ ನಾಯಕ ಸಮಾಜವನ್ನು ಜತೆಯಲ್ಲಿ ಬೆಳೆಸುತ್ತಾನೆ. ಓದದ ನಾಯಕ ಸಮಾಜವನ್ನು ತನ್ನಷ್ಟೇ ಕುಬ್ಜವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಭವಿಷ್ಯವೆನ್ನುವುದು ಅದೃಷ್ಟದಿಂದ ನಿರ್ಮಾಣವಾಗುವುದಿಲ್ಲ, ಅದು ಆಳವಾದ ಜ್ಞಾನದಿಂದ ಮತ್ತು ಕಲ್ಪನೆಯಿಂದ ರೂಪುಗೊಳ್ಳುತ್ತದೆ. ಶೇಖ್ ಮಹಮದ್ ದುಬೈಯನ್ನು ಒಂದು ಮರೀಚಿಕೆ ಯಿಂದ ಜಾಗತಿಕ ಕೇಂದ್ರವನ್ನಾಗಿ ಪರಿವರ್ತಿಸಿದ್ದು ಕೇವಲ ಹಣದಿಂದಲ್ಲ, ಬದಲಿಗೆ ಇತಿಹಾಸ, ವಿಜ್ಞಾನ ಮತ್ತು ಮಾನವೀಯತೆಯ ಪುಸ್ತಕಗಳಿಂದ ಅವರು ಪಡೆದ ಹೊಳಹಿನಿಂದ. ಅವರ ಪ್ರಕಾರ, ಜ್ಞಾನವಿಲ್ಲದ ಬರೀ ಸಂಪತ್ತು ಕ್ಷಣಿಕ. ಆದರೆ ಜ್ಞಾನದ ಅಡಿಪಾಯದ ಮೇಲೆ ನಿಂತ ಸಂಪತ್ತು ಚಿರಂತನ. ಆ ಅರಿವೇ ಅವರನ್ನು ಇವತ್ತಿಗೂ ನಿತ್ಯ ವಿದ್ಯಾರ್ಥಿಯನ್ನಾಗಿ ಇರಿಸಿದೆ.

ಪುಸ್ತಕವನ್ನು ಮುಚ್ಚಿಟ್ಟಾಗ ಜಗತ್ತು ಕತ್ತಲೆಯಾಗುತ್ತದೆ. ಅದನ್ನು ತೆರೆದಾಗಲೆಲ್ಲ ಎದೆಯೊಳಗೆ ಹೊಸ ದೊಂದು ಸೂರ್ಯೋದಯವಾಗುತ್ತದೆ. ಅಧಿಕಾರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಈ ಸೂರ್ಯೋ ದಯವನ್ನು ತನ್ನೊಳಗೆ ಅನುಭವಿಸಬೇಕಾಗಿದೆ. ನಾವು ಕೂಡ, ನಾಳೆ ನಮ್ಮ ಹಣೆಬರಹ ವನ್ನು ನಿರ್ಧರಿಸುವ ನಾಯಕರನ್ನು ಆರಿಸುವಾಗ, ಅವರ ಕಣ್ಣುಗಳಲ್ಲಿ ಕಾವ್ಯದ ತೇವವಿದೆಯೇ, ಅವರ ಕೈಗಳಿಗೆ ಅಕ್ಷರದ ಸ್ಪರ್ಶವಿದೆಯೇ ಎಂದು ನೋಡುವ ಕಾಲ ಬಂದಿದೆ. ಶೇಖ್ ಮಕ್ತೌಮ್ ಹೇಳಿದಂತೆ, ‘ಓದುವುದೇ ಬದುಕುವುದು, ಓದದೆ ಇರುವುದೆಂದರೆ ಉಸಿರಾಡುತ್ತಲೇ ಸತ್ತು ಹೋಗುವುದು.’ ಆ ಮಾತಿನ ಗಾಂಭೀರ್ಯ ವನ್ನು ನಮ್ಮ ಕಾಲದ ರಾಜಕಾರಣ ಅರ್ಥಮಾಡಿ ಕೊಳ್ಳಬೇಕಿದೆ.

ವಿಶ್ವೇಶ್ವರ ಭಟ್‌

View all posts by this author