ಜ್ಞಾನಗಂಗೆ
ಮಾಯಾ ಬಾಲಚಂದ್ರ
ಕೆಲವು ಕಾವ್ಯಗಳೇ ಹಾಗೆ. ಓದಿದಷ್ಟು ಬಾರಿಯೂ ಹೊಸ ಹೊಳಹುಗಳನ್ನು ನೀಡುತ್ತಾ, ಕಾಲ ಕಳೆದಂತೆ ಹೆಚ್ಚು ಪ್ರಕಾಶಿಸುತ್ತಾ ಸಾಗುವ ರೀತಿ, ಆ ಕವನದ ಗಟ್ಟಿತನವನ್ನು ತೋರಿಸುತ್ತವೆ. ‘ದ.ರಾ. ಬೇಂದ್ರೆ’ ಎಂದೇ ಕರೆಸಿಕೊಳ್ಳುವ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನ ಗಳಂತೂ ವಿಸ್ಮಯವೇ. ಹತ್ತು ಜನರು, ಬೇಂದ್ರೆಯವರ ಒಂದೇ ಕವನವನ್ನು ಒಮ್ಮೆಲೇ ಓದಿದಾಗ, ಆ ಹತ್ತು ಜನರ ಆಲೋಚನೆಯಲ್ಲಿ ಹತ್ತು ವಿಭಿನ್ನ ಅರ್ಥಗಳು ಮೂಡಿದರೆ, ಬೇರೆ ಬೇರೆ ಕಾಲಮಾನ ದಲ್ಲಿ, ಅವರ ಒಂದೇ ಕವನವನ್ನು ಒಬ್ಬ ವ್ಯಕ್ತಿ ಹತ್ತು ಬಾರಿ ಓದಿದರೆ, ಹತ್ತು ರೀತಿಯ ಚಿತ್ರಣಗಳು ಮನದಲ್ಲಿ ಮೂಡಬಹುದಾದ ಅಗಾಧ ಸಾಧ್ಯತೆಯಿದೆ.
ಬೇಂದ್ರೆಯವರ ಕವನವನ್ನು ಓದುವ ಮೊದಲು ಅವರ ಮಾತುಗಳ ಕಡೆಗೆ, ಅವರ ಬದುಕಿನ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿದರೆ, ಅವರ ಬರಹವನ್ನು ಅರ್ಥೈಸಿಕೊಳ್ಳಲು ಕೆಲ ಹೊಳಹುಗಳು ಸಿಗಬಹುದು. ಒಮ್ಮೆ ಅವರ ಕವನವೊಂದರ ಅರ್ಥವನ್ನು, ಅವರ ಬಳಿಯೇ ಕೇಳಿದಾಗ “ನಿಮಗೆ ಅಂಬಿಕಾತನಯದತ್ತನ ಅರ್ಥ ಬೇಕೋ? ಅಥವಾ ಬೇಂದ್ರೆಯ ಅರ್ಥ ಬೇಕೋ?" ಅಂತ ಪ್ರಶ್ನಿಸಿದ ರಂತೆ.
ಮತ್ತೆ ಅವರೇ ಮುಂದುವರಿದು “ಅಂಬಿಕಾತನಯದತ್ತ, ಇದನ್ನು ಬರೆದು ಸತ್ತ. ಈಗ ಬೇಂದ್ರೆ ಹೇಳುವ ಅರ್ಥ, ತಪ್ಪಿದ್ದರೂ ಇರಬಹುದು" ಎಂದರಂತೆ. ಆ ಸಮಯದಲ್ಲಿ, ಕವಿಮನದಲ್ಲಿ ಮೂಡಿದ ಭಾವ, ಕಾವ್ಯದ ಮೂಲಕ ವ್ಯಕ್ತವಾಗಿದೆ. ಕವಿಮನ ಅಲ್ಲಿಯೇ ನಿಂತಿಲ್ಲ. ಆ ನೆಲೆಯನ್ನು ದಾಟಿ ಮುಂದೆ ಸಾಗಿದೆ. “ಬೇಂದ್ರೆ ಕವನವನ್ನು, ಬೇಂದ್ರೆ ಹೇಗೆ ಅರ್ಥೈಸ್ತಾರೆ ಅನ್ನೋದಕ್ಕಿಂತ, ಅದನ್ನು ಓದಿದವರಿಗೆ ಹೇಗೆ ಅರ್ಥ ಆಯ್ತು ಅನ್ನೋದು ಮುಖ್ಯ" ಎಂದು ವಿವರಣೆ ಮುಗಿಸಿದರಂತೆ.
ಅವರು ಮುಂದೆ ಸಾಗುತ್ತಾ, ಹಿಂದಿನದೆಲ್ಲವನ್ನು ಕಳಚಿಕೊಳ್ಳುತ್ತಾ, ಭೂತಕ್ಕೆ ಅಂಟಿಕೊಳ್ಳದೆ, ಭವಿಷ್ಯದಲ್ಲಿಯೂ ಆಸಕ್ತರಾಗದೆ, ವರ್ತಮಾನದ ಕ್ಷಣಗಳಿಗಷ್ಟೇ ತೆರೆದುಕೊಂಡು, ಅಲ್ಲಿಂದಲೇ ಎಲ್ಲವನ್ನು ತೂರಿ, ಮೇಲೆ ಏರುವ ಪರಿ ಅದ್ಭುತ. ಇದು ಎಲ್ಲರಿಂದಲೂ ಸಾಧ್ಯವಿಲ್ಲ.
ಇದನ್ನೂ ಓದಿ:Maya Balachandra Column: ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ
ಕುವೆಂಪು ಹೇಳಿದ “ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯೆಂದು ಮುಟ್ಟದಿರು, ಓ ಅನಂತವಾಗಿರು. ಓ ನನ್ನ ಚೇತನ, ಆಗು ನೀ ಅನಿಕೇತನ" ಎನ್ನುವ ಅನನ್ಯ ಸಿದ್ಧಾಂತವನ್ನು ಜೀವಿಸಿದ ಜೀವ ದ.ರಾ. ಬೇಂದ್ರೆ. ಬೇಂದ್ರೆಯವರು ಜೀವನವನ್ನು ಅರ್ಥೈಸಿದ ರೀತಿಯು ಬೆರಗು ಮೂಡಿಸಿದಂತೆಯೇ, ಮಾತುಗಳನ್ನು ಅರ್ಥೈಸಿದ ಬಗೆ ಸಹ ಆಶ್ಚರ್ಯ ಹುಟ್ಟಿಸುತ್ತದೆ.
ಯಾರಾದರೂ ‘ನೋಡು’ ಎಂದು ಹೇಳಿದರೆ ಅದರ ಅರ್ಥ ಏನಿದ್ದೀತು? ಅವರಿಗದು ಕೇವಲ ನೋಟ ವಲ್ಲ. KNOW and DO; First KNOW it, then DO it ಎಂದು ಅರ್ಥೈಸುತ್ತಾರೆ. ಅವರು ಬೇರೆ ಬೇರೆ ಭಾಷೆಗಳ ಮೂಲಕ ಆ ಪದವನ್ನು ನೋಡಿ, ಒಡೆದು, ವಿಶೇಷ ಅರ್ಥಗಳನ್ನು ಹೆಕ್ಕಿ ಹೇಳುತ್ತಿದ್ದ ರೀತಿ ಬಹಳ ವಿಶಿಷ್ಟವಾದದ್ದು. ಪದಗಳನ್ನು ಒಡೆದು ಅದರ ಆಳಕ್ಕಿಳಿಯುವುದು ಬೇಂದ್ರೆಯವರ ರೀತಿ.
‘ನಾಮ’ ಕವನವು ‘ನಾಕುತಂತಿ’ ಕವನ ಸಂಕಲನದ್ದೇ. ‘ನಾಮ’.. ಈಶಾರ್ಪಿತವೆಲ್ಲ ಎನ್ನುವ ಅರ್ಥ ದಲ್ಲಿ ಹೇಳುತ್ತಾರೆ. ‘ನಾ’ ಎನ್ನುವುದು ‘ಮ’ ಆಗಬೇಕು. ಆಗ ಈಶಾರ್ಪಿತವಾಗಲು ಸಿದ್ಧ ಎನ್ನುವ ಚಿಂತನೆ ಅವರದ್ದು. ‘ನಾನು’ ಎನ್ನುವುದು ಮರಣಿಸಿದಾಗ ಮಾತ್ರ ಈಶ್ವರ ಅನುಸಂಧಾನ ಸಾಧ್ಯ ಎನ್ನುತ್ತಾರೆ.
ಬೇಂದ್ರೆಯವರ ಸಾಲುಗಳನ್ನು ನಾವು ಪದಕೋಶ ನೋಡಿ ಅರ್ಥೈಸಲು ಸಾಧ್ಯವೇ ಇಲ್ಲ. ಆ ಸಾಲುಗಳ ಹಿಂದೆ ಹೋಗಿ, ಭಾವವನ್ನು ಹಿಡಿದಾಗ, ಆ ಸಾಲುಗಳೇ ನಮ್ಮನ್ನು ಗಮ್ಯಕ್ಕೆ ಕರೆದು ಕೊಂಡು ಹೋಗುತ್ತವೆ. ಅದಕ್ಕೇ ಅವರು ಹೇಳುವುದು “ನಕ್ಷೆ ನೋಡಿ ತಡಕಾಡಬ್ಯಾಡ ನಕ್ಷತ್ರ ಮಾರ್ಗವನ್ನ" ಅಂತ.
ಭಾರತೀಯ ತತ್ವ ಚಿಂತನೆಯ ಪ್ರಕಾರ, ಸದಾ ಆನಂದವಾಗಿರಲು ಬಾಹ್ಯದ ಪರಿಕರಗಳ ಅಗತ್ಯ ವಿಲ್ಲ. ಅದು ಮನಸ್ಸಿಗೆ ಸಂಬಂಧಿಸಿದ ವಿಚಾರ. ಆನಂದ ಅಂತರಾಳದಿಂದ ಹೊಮ್ಮು ವಂಥದ್ದು. ಅದು ಹೊರಗಿನ ಆಗುಹೋಗುಗಳನ್ನು ಆಧರಿಸಿರುವಂಥದ್ದಲ್ಲ.
ನೋವು-ನಲಿವುಗಳೆಲ್ಲವೂ ‘ಸತ್-ಚಿತ್-ಆನಂದ’ ಸ್ವರೂಪವನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಬೇಂದ್ರೆ ಕಟ್ಟಿಕೊಡುವ ರೀತಿ ಹೀಗೆ: “ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ, ಹಾಲ್ಜೇನು ಸುರಿಯೋಣು ಕುಣಿಯೋಣು ಬಾ". ಇರುವುದರಲ್ಲಿ ನೆಮ್ಮದಿ ಕಾಣು ಎಂಬ ನುಡಿ ಯನ್ನು ಮೀರಿದ ಮಾತಿದು. ಇದ್ದದ್ದನ್ನೂ ಮರೆತು ಆನಂದವಾಗಿರುವ ಸ್ಥಿತಿಯನ್ನು ಬೇಂದ್ರೆ ನಿರೂಪಿಸುತ್ತಾರೆ.
ಬದುಕು ಸಾಹಿತ್ಯಕ್ಕೆ ಮೂಲದ್ರವ್ಯ. ಸಾಹಿತ್ಯವು ಬದುಕಿನ ಪ್ರತಿಬಿಂಬ, ಪ್ರತಿಧ್ವನಿ ಆದಾಗ ಒಳಗಿರುವ ಅಂತಃಸತ್ವ, ಸ್ವತ್ವ, ಸಾಹಿತ್ಯವಾಗಿ ಸುರಿಸುತ್ತವೆ ಎನ್ನುವುದಕ್ಕೆ ಈ ಆರ್ಷದರ್ಶನದ ಕವಿ ನಿದರ್ಶನ. ನಿರೂಪಣೆಯಲ್ಲಿ ರಸಾವಿಷ್ಕರಣ ಆಗಬೇಕಾದರೆ, ಸಹಜವಾದ ನ್ಯೂನತೆಗಳಿರಬೇಕು ಎನ್ನುವುದನ್ನು ಸಹ, ಕೃತಕತೆಗೆ ದೂರವಾದ ತಮ್ಮ ನೈಜ ಬರಹದಿಂದ ಅವರು ನಿರೂಪಿಸಿದ್ದಾರೆ.
‘ಆವು ಈವಿನ ನಾವು ನೀವಿಗೆ’ ಕವನದ ಕೆಲ ಸಾಲುಗಳನ್ನು ಗಮನಿಸುವುದಾದರೆ ಆವು (ಗೋವು), ಈವಿನ (ಈದದ್ದರಿಂದ), ಬಂದಂಥ ನಾವು, ನೀವು ಎಲ್ಲರಿಗೂ, ಆನು (ಆಧಾರ) ಆದಂಥ ಚೈತನ್ಯ ಸ್ವರೂಪದ ಬಗೆಗಿರುವ ನಂಬಿಕೆ, ಜೀವನಕ್ಕೆ ಸಂಗೀತದ ತಾನವನ್ನು ಒದಗಿಸುತ್ತದೆ.
‘ನಾನು ನೀನಿನ ಈ ನೀನಾನಿಗೆ ಬೇನೆ ಏನೋ ಜಾಣೆ ನಾ ನಿಜವಾದ ನಾವು’- ಬೇರೆಯವರು ನಮ್ಮನ್ನು ಅಂದುಕೊಂಡ ರೀತಿ ಎರಡೂ ಬೇರೆ ಬೇರೆ ಆದಾಗ, ಆಂತರ್ಯದಲ್ಲಿ ನಾವಿರುವುದಕ್ಕೂ, ಪ್ರಪಂಚಕ್ಕೆ ನಾವು ಕಾಣಿಸಿಕೊಳ್ಳುತ್ತಿರುವ ರೀತಿಗೂ ಭಿನ್ನತೆ ಕಂಡುಬಂದಾಗ, ಅದೊಂದು ನೋವು (ಬೇನೆ)...‘ಚಾರುತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ’- ಇವು ಚಾರುತಂತ್ರಿ ಅಂದರೆ, ಸುಂದರವಾದ ತಂತಿಯೂ ಹೌದು, ನಾಲ್ಕು ತಂತಿಯೂ ಹೌದು, ನಾಲ್ಕು ಧ್ವನಿಗಳೂ ಹೌದು.
ಆ ನಾಲ್ಕು ಧ್ವನಿಗಳು ಚತುರ ಧ್ವನಿಗಳೂ ಹೌದು. ಮುಂದೆ ಷಡ್ ಚಕ್ರಗಳ ಚಿತ್ರಣವಿದೆ. ಸಾಧನೆ ಎನ್ನುವುದು ಹಂತ ಹಂತವಾಗಿ ನಡೆಯುವಂಥದ್ದು. ಊರ್ಧ್ವಮುಖವಾಗಿ ಚಲಿಸುತ್ತಾ, ಗಳಿಸಿದ ಜ್ಞಾನವನ್ನು ಮನನ ಮಾಡಿಕೊಳ್ಳುತ್ತಾ, ಆತ್ಮೋನ್ನತಿಯೆಡೆಗೆ ಸಾಗುವುದನ್ನು ಬೇಂದ್ರೆ ಸಾಂಕೇತಿಕ ವಾಗಿ ಹೇಳಿದ್ದಾರೆ.
‘ಚಿತ್ತೀ ಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ’- ಎಡೆಬಿಡದೆ ಸುರಿವ ಮಳೆಯಂತೆ ಆದ ಜ್ಞಾನಾರ್ಜನೆ, ಇನ್ನಷ್ಟು ಚಿಂತನೆಗೆ ದಾರಿ ಮಾಡಿಕೊಟ್ಟು, ಮತ್ತಷ್ಟು ಜ್ಞಾನದ ಮುತ್ತುಗಳ ಹುಟ್ಟಿಗೆ ಕಾರಣವಾಗುತ್ತಿದೆ. ಒಮ್ಮೆ ಮುತ್ತಾದ ಮಳೆಹನಿ, ಮತ್ತೆ ನೀರಿನ ಸಂಪರ್ಕವಾದರೂ ಕರಗಿ ನೀರಾಗ ಲಾರದು.
ಸಾಮಾನ್ಯರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಜಿಗಿಯುತ್ತಾ, ಮರಳಿ, ಪ್ರಾಪಂಚಿಕವನ್ನೇ ಸೇರಬಹುದು. ಆದರೆ ಬೇಂದ್ರೆಯವರು ಅನಾವರಣಗೊಳಿಸಿದ, ದರ್ಶನ ಪಡೆದ ಯೋಗಿ, ಲೌಕಿಕದಲ್ಲಿದ್ದರೂ, ಲೌಕಿಕದ ಸೋಂಕಿಗೆ ಬಲಿಯಾಗದೆ, ಸ್ವಾತಿ ಮುತ್ತಿನಂತೆ ಕರಗದೆ ಇರಬಲ್ಲ ಧೀರ (ಕಶ್ಚಿತ್ ಧೀರಃ). ಸ್ವಾತಿ ಮಳೆಹನಿಯು, ತನ್ನ ನೀರಿನ ಸ್ವಭಾವವನ್ನು ಸಂಪೂರ್ಣವಾಗಿ ಕಳೆದುಕೊಂಡು, ಮುತ್ತಾಗುವ ಹಾಗೆ, ‘ನಾನು’ ಎನ್ನುವ ಅಹಂಭಾವ ಕಳೆದು, ಆತ್ಮೋನ್ನತಿ ಹೊಂದುವುದರ ಸಂಕೇತ ಇದು.
ಸತ್ತಿಯೋ ಮಗನಾ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ ಸಾವಿ ಮಗಳು (ಭೂತ), ಭಾವಿ ಮಗಳು (ಭವಿಷ್ಯ), ಇವುಗಳ ಅಂಟು-ನಂಟುಗಳಿಂದ ದೂರಾಗಿ, ‘ಸತ್-ಚಿತ್-ಆನಂದ’ದಲ್ಲಿ ಸತ್ ಆಗುವ ಪರಿ ಇದು.
‘ನಾನು, ನೀನು, ಆನು, ತಾನು, ನಾಕು ನಾಕೇ ತಂತಿ’- ನಾನು ಎಂದರೆ ಅಹಂ, ನೀನು ಎಂದರೆ ದೇಹ, ತಾನು ಎಂದರೆ ಆತ್ಮ, ಆನು ಎಂದರೆ ಪರಮಾತ್ಮ ಎಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಶ್ರೀ ಶಂಕರ ಮಹಾಮನನ ಕೃತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಒಂದೇ ವ್ಯಕ್ತಿತ್ವದ ನಾಲ್ಕು ಆಯಾಮಗಳನ್ನು ‘ನಾಕು ತಂತಿ’ ಎಂದು ಸಹ ಭಾವಿಸಬಹುದು. ಒಂದು- ನಾನು ಭ್ರಮಿಸಿದ ನನ್ನ ವ್ಯಕ್ತಿತ್ವ; ಇನ್ನೊಂದು- ಇನ್ನೊಬ್ಬರು ನಾನು ಹೇಗಿದ್ದೇನೆ ಎಂದು ಭಾವಿಸಿ, ಕಲ್ಪಿಸಿ ಹೇಳುವ ಇನ್ನೊಂದು ಮುಖ (ಇದು ಸಹ ಭ್ರಮೆಯೇ); ಮತ್ತೊಂದು- ನನ್ನ ನಿಜವಾದ ಮುಖ; ಮಗದೊಂದು- ಚೈತನ್ಯ ಸ್ವರೂಪದ ಮುಖ.
ಬೀಜಾಕ್ಷರ ರೂಪದ ಶ್ರುತಿಕಾವ್ಯ ಇದು. ಒಂದೇ ಅಕ್ಷರದ ಮೇಲೆ ಕೇಂದ್ರೀಕೃತ ಕೃತಿ- ‘ನಾಕುತಂತಿ’. ತಮ್ಮ ಬರಹದ ಪ್ರಾರಂಭದ ದಿನಗಳಲ್ಲಿ ಕನಸುಗಾರರಾಗಿದ್ದ ಬೇಂದ್ರೆಯ ಕಲ್ಪನೆಯ ಹೆಣ್ಣು, ಮುಂದೆ ‘ನಾಕುತಂತಿ’ಯಲ್ಲಿ ಜ್ಞಾನಕನ್ಯೆಯಾಗಿ ಕಣ್ತೆರೆಸುತ್ತಾಳೆ.
ಬೇಂದ್ರೆಯವರು ಪಡೆದದ್ದು ಸತ್ಯದ ಮಿಣುಕು ಬೆಳಕನ್ನಲ್ಲ. ‘ಸತ್ತಿಯೋ ಮಗನ’ ಎನ್ನುವ ಪೂರ್ಣ ಸತ್ಯವನ್ನು ಧರಿಸಿಕೊಂಡವರು ಇವರು. ಸಾಮಾನ್ಯರು ಸತ್ಯದೆಡೆಗೆ ನಡೆವಾಗ, ಅಲ್ಲಲ್ಲಿ ಕಾಣುವ ಮಿಂಚಿನ ಬೆಳಕೇ ಅರಿವು ಎಂದು ಭ್ರಮಿಸಿ, ಕೆಲಕಾಲ ನೆಲವನ್ನು ಬಿಟ್ಟು ಮೇಲೇರಿ, ಕೆಲ ಕಣಗಳಲ್ಲಿ ಮಾತ್ರ ಪರಿಭ್ರಮಿಸಿ, ಮತ್ತೆ ನೆಲವನ್ನೇ ತಲುಪಿಬಿಡುತ್ತಾರೆ. ಆದರೆ ಬೇಂದ್ರೆ ಹೇಳುವ ದರ್ಶನ ಹಾಗಲ್ಲ.
ಶ್ರೀ ಅರವಿಂದರ ಸಂಸರ್ಗವಾದ ಮೇಲೆ ಇವರ ಬರಹಗಳಲ್ಲಿ ಜ್ಞಾನಗಂಗೆಯ ನಿನಾದ ಪ್ರಾರಂಭ ವಾಗಿ, ಆ ನಾದವು ‘ನಾಕುತಂತಿ’ಗಳಲ್ಲಿ ಮಿಡಿದು, ‘ಇಡೀ ಜೀವನರಹಸ್ಯ ನಾಕೇ ನಾಕುತಂತಿ’ ಎನ್ನುವ ಪ್ರಜ್ಞಾಪೂರ್ವಕ ನೆಲೆಗೆ ಬಂದು ತಲುಪುವ ರೀತಿ ವಿಸ್ಮಯ ಮೂಡಿಸುತ್ತದೆ. ಜಗತ್ತಿನ ಕವಿಗಳೆಲ್ಲ ಕನಸುಗಾರರೇ.
ಅವರಿಗೆಲ್ಲ ಗಾಢ ಕನಸಿನಲ್ಲಿ ಜೀವನದ ಸತ್ಯದ ಕೆಲ ಹೊಳಹುಗಳು ಸಿಕ್ಕಿವೆ. ಹಾಗೆ ಒಂದೊಂದು ಹೊಳಹಿನ ಕಿಡಿ ತಾಕಿದಾಗ ಉದಿಸಿದ್ದು ಕಾಳಿದಾಸ, ಷೇಕ್ಸ್‌ಪಿಯರ್, ಟ್ಯಾಗೋರ್‌ರಂಥ ಜಗತ್ಪ್ರಸಿದ್ಧ ಕವಿಗಳು. ಇವರಿಗೆಲ್ಲ ಸತ್ಯದ ಬಾಗಿಲಿನಿಂದ ಹೊರಬಿದ್ದ ಕೋಲ್ಮಿಂಚಿನ ಬೆಳಕು, ಜೀವನದ ಮೂಲ ಸತ್ಯದ ಎಳೆಯನ್ನು ತಾಕಿಸಿ, ಹಾಗೆಯೇ ಅಜ್ಞಾತವಾಗಿ ಉಳಿದುಬಿಟ್ಟವು.
ಅವರೆಲ್ಲ ಸತ್ಯಸ್ವರೂಪವನ್ನು ತಲುಪುವ ಬಗೆ ತಿಳಿಯದೆ, ಸಿಕ್ಕಷ್ಟನ್ನು ಧಕ್ಕಿಸಿಕೊಂಡರು. ಪ್ರಾರಂಭ ದಲ್ಲಿ ಬೇಂದ್ರೆಯವರು ಸಹ, ಶ್ರೀ ಶಂಕರ ಭಗವತ್ಪಾದರು, ಲಕ್ಷ್ಮೀಶ, ಖಲೀಲ್ ಗಿಬ್ರಾನ್, ಟ್ಯಾಗೋರ್, ಪಂಪ, ರನ್ನರ ಕೃತಿಗಳಿಂದಲೇ ಪ್ರೇರಿತರಾಗಿ ಕೃತಿ-ಕಾವ್ಯ ರಚನೆಯಲ್ಲಿ ತಮ್ಮದೇ ಛಾಪು ಮೂಡಿ ಸುತ್ತಾ ಮುಂದಡಿ ಇಟ್ಟವರು.
ಮುಂದೆ ಸ್ವ ಪ್ರಜ್ಞೆಯಿಂದ ರಚಿಸಿದ ಕೃತಿಗಳು, ಅವರೇ ಪಡೆದ ದರ್ಶನದ ಬೆಳಕು. ಮಂಜಿನ ಹನಿಯೊಂದರಲ್ಲಿ ಅಡಗಿರುವ ಮಹಾಸಾಗರದಂತೆ, ‘ನಾಕುತಂತಿ’ ಕವನದಲ್ಲಿ ಮಹಾಜ್ಞಾನ ಅಡಗಿದೆ. ಒಬ್ಬೊಬ್ಬರಿಗೆ ಒಂದೊಂದು ಭಾವಸುರಣಕ್ಕೆ ಕಾರಣವಾಗುವ ಕಾವ್ಯವಿದು. ಎಲ್ಲಿ ನಿಂತು ನೋಡಿದರೂ ಅದರಲ್ಲೊಂದು ಭವ್ಯರೂಪ ಕಣ್ಮುಂದೆ ಬರುವುದು ಇದರ ಹಿರಿಮೆ. ಅದು ಬೇಂದ್ರೆಯವರ ಗರಿಮೆಯೂ ಹೌದು.
(ಲೇಖಕಿ, ಕೋಲಾರ ಜಿಲ್ಲಾ ನ್ಯಾಯಾಲಯದ ಕಾನೂನು ಅರಿವು ಜಾಗೃತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ)