ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

G N Bhat Column: ಭೈರಪ್ಪನವರ ಚಿಂತನೆ ಮತ್ತು ವಿಚಾರಧಾರೆಗಳು: ಯಥಾರ್ಥವಾದಿಗಳಿಗೆ ಸುಗ್ಗಿ

ಭೈರಪ್ಪನವರು ತಮ್ಮ ಪಾಡಿಗೆ ತಾವು ಕಾದಂಬರಿ ಬರೆಯುತ್ತಾ ಅದೇ ಪ್ರಪಂಚದಲ್ಲಿ ಮುಳುಗಿ ಹೋಗ ಲಿಲ್ಲ. ಬದಲಿಗೆ ದೈನಂದಿನ ಜೀವನಕ್ಕೆ, ಲೋಕವ್ಯವಹಾರಕ್ಕೆ, ಪ್ರಸ್ತುತ ರಾಜಕಾರಣಕ್ಕೆ, ಸಾಹಿತ್ಯಕ ಗುಂಪುಗಾರಿಕೆಗಳಿಗೆ, ಅವರ ಪಂಥಗಳಿಗೆ ಸ್ಪಂದಿಸುತ್ತಾ, ಕೆಲವೊಮ್ಮೆ ತೀವ್ರವಾಗಿ ಸ್ಪಂದಿಸುತ್ತಾ ತಮ್ಮ ಖಡ್ಗವನ್ನು ಝಳಪಿಸಿದರು. ಅಲ್ಲಲ್ಲಿ ಅವರಿಗೆ ಉತ್ತರ ಕೊಡುತ್ತಲೇ ತಾನೇನು ಎನ್ನುವುದನ್ನು ಸಾಬೀತು ಪಡಿಸುತ್ತಾ ಹೋದರು. ಹಾಗೆ ತೆರೆದುಕೊಂಡ ಅವರ ಚಿಂತನ- ಮಂಥನಗಳಲ್ಲಿ ಕೆಲವನ್ನು ತಮ್ಮ ಮುಂದೆ ಸಾದರಪಡಿಸುತ್ತಿದ್ದೇನೆ.

ಭೈರಪ್ಪ ನೆನಪು

ಗ.ನಾ.ಭಟ್ಟ

ಸಹಜಶೂರರೂ, ಮಹಾವಿಕ್ರಮಿಗಳೂ, ನೀತಿವಂತರೂ, ಸತ್ಯವಂತರೂ, ಧರ್ಮವಂತರೂ ಆದ ಪಾಂಡವರ ಅಭ್ಯುದಯ, ಉತ್ಕರ್ಷವನ್ನು ಸಹಿಸಲಾಗದ ದುರ್ಯೋಧನ ಸದಾ ಹೊಟ್ಟೆ ಉರಿಯಿಂದ ನಲುಗಿ ಹೋದ. ಅವರನ್ನು ಮುಖಾಮುಖಿಯಾಗಿ ಎದುರಿಸಲಾಗದೆ ಅಡ್ಡಹಾದಿ ಯಿಂದ ಅವರನ್ನು ಮುಗಿಸಲು ಯತ್ನಿಸಿದ. ಆದರೆ, ಅವು ಒಂದೂ ಯಶಸ್ವಿಯಾಗದೆ ಕೊನೆಗೆ ತಾನೇ ಮಣ್ಣುಮುಕ್ಕಿ, ಸರ್ವನಾಶವನ್ನು ಹೊಂದಿದ. ಅವನ ಸರ್ವನಾಶಕ್ಕೆ ಮೂಲ ಕಾರಣ ಹೊಟ್ಟೆ ಉರಿ.

ಈ ಹೊಟ್ಟೆ ಉರಿ ಜಠರಾಗ್ನಿಯೂ ಹೌದು. ಅಸೂಯೆಯೂ ಹೌದು. ಜಠರಾಗ್ನಿ ಹಸಿವೆಗೆ ಸಂಬಂಧಿಸಿದ್ದು. ಅದನ್ನು ಹೇಗೋ ನೀಗಿಸಿ ಬಿಡಬಹುದು. ಆದರೆ, ಅಸೂಯೆಯನ್ನು ಅಳಿಸುವುದು ಕಷ್ಟ. ಅದು ಹೃದಯಸಮುದ್ರವನ್ನು ಶೋಷಿಸಿ ಬಿಡುವ ಬಡಬಾನಲ. ಬಾಹ್ಯದಾರಿದ್ರ್ಯಕ್ಕಿಂತ ಭಯಂಕರವಾದುದು ಈ ಹೃದಯದಾರಿದ್ರ್ಯ.

ಇಂತಹ ಹೃದಯ ದಾರಿದ್ರ್ಯವಿದ್ದ ಒಂದು ಸಾಹಿತ್ಯಕ ಗುಂಪು ಸುಮಾರು ಐವತ್ತು ವರ್ಷಗಳ ಹಿಂದೆ ಮಹಾ ಕಾದಂಬರಿಕಾರ, ಪ್ರಖರ ಚಿಂತಕ, ತೀಕ್ಷ್ಣ ವಿಮರ್ಶಕ ಡಾ.ಎಸ್.ಎಲ್.ಭೈರಪ್ಪನವರ ಜನಪ್ರಿಯತೆಯನ್ನೂ, ಅವರ ಕಾದಂಬರಿಯ ವೈವಿಧ್ಯತೆ ಮತ್ತು ಸೊಗಸನ್ನೂ, ಆನೆ ನಡೆದದ್ದೇ ದಾರಿ ಎಂಬಂತೆ ನಡೆದುಕೊಂಡ ಅವರ ಧೀಮಂತಿಕೆಯನ್ನೂ, ಕ್ಷುಲ್ಲಕರಿಗೆ ಸೊಪ್ಪು ಹಾಕದ ದಿಟ್ಟತನವನ್ನೂ ನೋಡಿ ಸಹಿಸಲಾಗದೆ ಹೊಟ್ಟೆ ಉರಿಯಿಂದ ಅವರ ಬಗ್ಗೆ ಇಲ್ಲ-ಸಲ್ಲದ ಮಾತು ಗಳನ್ನಾಡುತ್ತಾ, ಅವರ ಧೃತಿಗೆಡಿಸುವ ಕೆಲಸವನ್ನು ಒಂದಿಷ್ಟು ವರ್ಷಗಳ ಕಾಲ ಅವ್ಯಾಹತವಾಗಿ ಮಾಡಿಕೊಂಡು ಬಂದರು.

ಆದರೆ, ಅದು ನಡೆಯಲೇ ಇಲ್ಲ. ಭೈರಪ್ಪನವರು ತಮ್ಮ ಅಧ್ಯಯನಶೀಲತೆಯಿಂದಲೇ ಉತ್ತರ ಕೊಡುತ್ತಾ, ನೆಗ್ಗಸು ಉಕ್ಕಿ ಹರಿಯುವಂತೆ ಒಂದರ ಮೇಲೊಂದು ಕಾದಂಬರಿ ಬರೆಯುತ್ತಾ, ತಮ್ಮ ವೈಚಾರಿಕ ವೈಮರ್ಶಿಕ ಬರಹಗಳ ಮೂಲಕ (ನಾನೇಕೆ ಬರೆಯುತ್ತೇನೆ, ಭಿತ್ತಿ, ಸಂದರ್ಭ-ಸಂವಾದ, ಚಿಂತನ-ಮಂಥನ) ಅವರ ಜನ್ಮ ಜಾಲಾಡುತ್ತಾ, ಅವರ ಬಣ್ಣವನ್ನು ಬಯಲಿಗೆಳೆಯುತ್ತಾ ಕೀರ್ತಿ ಶಿಖರವನ್ನು ಏರಿ ನಿಂತರು.

ಭೈರಪ್ಪನವರು ತಮ್ಮ ಪಾಡಿಗೆ ತಾವು ಕಾದಂಬರಿ ಬರೆಯುತ್ತಾ ಅದೇ ಪ್ರಪಂಚದಲ್ಲಿ ಮುಳುಗಿ ಹೋಗಲಿಲ್ಲ. ಬದಲಿಗೆ ದೈನಂದಿನ ಜೀವನಕ್ಕೆ, ಲೋಕವ್ಯವಹಾರಕ್ಕೆ, ಪ್ರಸ್ತುತ ರಾಜಕಾರಣಕ್ಕೆ, ಸಾಹಿತ್ಯಕ ಗುಂಪುಗಾರಿಕೆಗಳಿಗೆ, ಅವರ ಪಂಥಗಳಿಗೆ ಸ್ಪಂದಿಸುತ್ತಾ, ಕೆಲವೊಮ್ಮೆ ತೀವ್ರವಾಗಿ ಸ್ಪಂದಿಸುತ್ತಾ ತಮ್ಮ ಖಡ್ಗವನ್ನು ಝಳಪಿಸಿದರು. ಅಲ್ಲಲ್ಲಿ ಅವರಿಗೆ ಉತ್ತರ ಕೊಡುತ್ತಲೇ ತಾನೇನು ಎನ್ನುವುದನ್ನು ಸಾಬೀತುಪಡಿಸುತ್ತಾ ಹೋದರು. ಹಾಗೆ ತೆರೆದುಕೊಂಡ ಅವರ ಚಿಂತನ- ಮಂಥನ ಗಳಲ್ಲಿ ಕೆಲವನ್ನು ತಮ್ಮ ಮುಂದೆ ಸಾದರಪಡಿಸುತ್ತಿದ್ದೇನೆ.

ಇದನ್ನೂ ಓದಿ: S L Byrappa: ಇಂದು ಭೈರಪ್ಪ ಪ್ರತಿಷ್ಠಾನ ಉದ್ಘಾಟನೆ

ಭೈರಪ್ಪನವರು ದೇಶದ ಅಭ್ಯುದಯ, ಉತ್ಕರ್ಷದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು. ಮೌಲ್ಯಗಳ ಬಗ್ಗೆ ಸದಾ ತುಡಿಯುವ ಮನಸ್ಸು ಅವರದಾಗಿತ್ತು. ದೇಶದ ಅಭಿವೃದ್ಧಿಗಾಗಿ ದುಡಿದ ವಿಶ್ವೇಶ್ವರಯ್ಯನವರ ಧ್ಯೇಯವನ್ನು ಅವರು ಕೊಂಡಾಡುತ್ತಾರೆ. ಹಾಗೆಯೇ ಡಿವಿಜಿಯವರ ನೈತಿಕ ನೈಷ್ಠುರ್ಯವನ್ನೂ ಕೊಂಡಾಡುತ್ತಾರೆ.

ವಿಶ್ವೇಶ್ವರಯ್ಯನವರಿಗೆ ನಮ್ಮ ದೇಶದ ಬಡತನದ ಅರಿವಿತ್ತು. ಅದಕ್ಕಾಗಿ ಅವರು ಬರೀ ಕೃಷಿ ಯೊಂದನ್ನೇ ನೆಚ್ಚಿಕೊಂಡರೆ ಸಾಲದೆಂದು ಆಲೋಚಿಸಿ ಕನ್ನಂಬಾಡಿಕಟ್ಟೆಯನ್ನು ಕಟ್ಟಿಸಿದರು. ಹಲವಾರು ಕೆರೆಕಟ್ಟೆಗಳನ್ನು ಕಟ್ಟಿಸಿದರು. ಗಂಧದೆಣ್ಣೆ-ಕಬ್ಬಿಣದ ಕಾರ್ಖಾನೆಗಳನ್ನು ಸ್ಥಾಪಿಸಿದರು. ಗೃಹಕೈಗಾರಿಕೆ, ಮಾದರಿ ಹೋಟೆಲ್ಲು, ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್ ಮೊದಲಾದವನ್ನು ಸ್ಥಾಪಿಸಿದರು. ಅಂದರೆ ದುಡಿಮೆಯನ್ನು ಸೃಷ್ಟಿಸಿದರು.

ಕಷ್ಟಪಟ್ಟು ದುಡಿಯಿರಿ ಎಂಬ ಸಂದೇಶವನ್ನು ಸಾರಿದರು. ರಾಜ್ಯವಾಳುವವರಿಗೆ ಸಮಗ್ರವಾದ ಮೌಲ್ಯದೃಷ್ಟಿಯಿದ್ದರೆ ಬಡತನವನ್ನು ಸುಲಭವಾಗಿ ನಿವಾರಿಸಬಹುದು ಎನ್ನುತ್ತಾರೆ. ಇಂದು ರಾಜ್ಯ ವಾಳುವವರಿಗೆ ದಿಟವಾದ ಧ್ಯೇಯವೇ ಇಲ್ಲ. ಅನ್ನ-ವಸ್ತ್ರ-ಗೃಹಗಳನ್ನು ಪೂರೈಸಿದ ಮಾತ್ರಕ್ಕೆ ಬಡತನ ನೀಗುವುದಿಲ್ಲ. ಅದು ಅವರ ಆದಿಮ ಕರ್ತವ್ಯ. ಅದಕ್ಕಿಂತ ಮಿಗಿಲಾಗಿ ಸರಕಾರ ಬಡವರು ದುಡಿದು ತಿನ್ನುವುದನ್ನು ಕಲಿಸಬೇಕು.

ಅವರ ಸಾಲ ಮನ್ನಾ ಮಾಡಬಾರದು. ಅದು ನಿಜಕ್ಕೂ ಮೌಲ್ಯಪತನ, ನೀತಿಯ ಪತನ, Ethical Degradation ಎಂದು ಹೇಳುತ್ತಾರೆ. ಕೊಟ್ಟವನ ಗಂಟನ್ನು ಮುಳುಗಿಸಬಾರದು. ಅದನ್ನು ಹಿಂತಿರು ಗಿಸಬೇಕು ಎಂಬ ಮನೋಭಾವವನ್ನು ಸರಕಾರ ಹುಟ್ಟಿಸಬೇಕು. ಸಾಲವನ್ನು ಹಿಂತಿರುಗಿಸ ಬೇಕಿಲ್ಲ ಎಂಬ ಮನೋಭಾವವೇ ವಿಶ್ವಾಸಘಾತಕತನ.

ಸಾಲವನ್ನು ತೀರಿಸುವುದೆಂದರೆ ಪ್ರಾಮಾಣಿಕನಾಗಿರುವುದು ಎಂದರ್ಥ. ಪ್ರಾಮಾಣಿಕತೆಯೇ ಒಂದು ಮೌಲ್ಯ ಎಂದು ಭೈರಪ್ಪ ಸಾರುತ್ತಾರೆ. ಇಂದು ಸಾಹಿತಿಗಳಲ್ಲಿ ಎಷ್ಟು ಮಂದಿಗೆ ಇಂತಹ ಕಾಳಜಿ ಇದೆ ಎಂದು ಕೇಳಿದರೆ ಡಿವಿಜಿ, ವಿಶ್ವೇಶ್ವರಯ್ಯ ಮೊದಲಾದ ಕೆಲವೇ ಮಂದಿಗೆ ಎಂದು ಹೇಳಬೇಕಾಗುತ್ತದೆ. ಅಂತಹವರಲ್ಲಿ ಭೈರಪ್ಪ ಒಬ್ಬರು.

ಇಂದು ಅದೆಷ್ಟೋ ರಾಜ್ಯಗಳು ಸಾರ್ವಜನಿಕರಿಗೆ ಪುಕ್ಕಟೆ ಭಾಗ್ಯಗಳನ್ನು ಸೃಷ್ಟಿಸಿ, ಅವರನ್ನು ವೋಟ್ ಬ್ಯಾಂಕಾಗಿ ಪರಿವರ್ತಿಸಿ ಹಾದಿ ತಪ್ಪಿಸುತ್ತಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ. ಇದನ್ನು ಕಂಡಾಗ ಭೈರಪ್ಪನವರ ಮಾತು ಅದೆಷ್ಟು ಮೌಲ್ಯಯುತವಾದುದು, ದೇಶಾಭಿವೃದ್ಧಿ ಪರವಾದುದು ಎಂಬ ಅರಿವು ಬರದೆ ಇರುವುದಿಲ್ಲ.

ಬೈರಪ್ಪ ಇಂತಹ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ದೇಶದ ಜನ ಸುಧಾರಿಸದೆ ದೇಶ ಸುಧಾರಿಸುವುದಿಲ್ಲ ಎಂದು ಭೈರಪ್ಪ ಒಂದು ಉದಾಹರಣೆ ಮೂಲಕ ಸ್ಪಷ್ಟ ಪಡಿಸುತ್ತಾರೆ. ಸ್ವಚ್ಛಭಾರತ ಎಂಬ ಕಾರ್ಯಕ್ರಮವನ್ನು ಮೋದಿ ಆರಂಭಿಸಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ರೈಲು ನಿಲ್ದಾಣ, ಬಸ್‌ನಿಲ್ದಾಣ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಚಿಕ್ಕ ಮಗುವೂ ಕೂಡಾ ಪುಟ್ಟಪುಟ್ಟ ಹೆಜ್ಜೆಯಿಟ್ಟುಕೊಂಡು ಚಾಕೋಲೇಟ್ ಕಾಗದವನ್ನು ಕಸದ ಬುಟ್ಟಿಯೊಳಕ್ಕೆ ಹಾಕುತ್ತದೆ.

ಹಾಗೆ ಮಾಡು ಎಂದು ತಂದೆ-ತಾಯಿಯರು ಹೇಳಬೇಕಾದ್ದೇ ಇಲ್ಲ. ಮಗು ಹುಟ್ಟಿದಾರಭ್ಯ ಕಾಣುವುದು ಆ ಓರಣವನ್ನೇ. ಇದನ್ನು ಕಲಿಸದೆಲೆ, ಬರಿದೆ ಗಣ್ಯವ್ಯಕ್ತಿಗಳು ಕಸಗುಡಿಸುವುದನ್ನು ಟಿವಿಯಲ್ಲಿ ತೋರಿಸಿಬಿಟ್ಟರಾಯಿತೆ? ಎಂದು ಕೇಳುತ್ತಾರೆ. ನಮ್ಮ ದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು, ಕ್ಯಾಕರಿಸಿ ಗಿಯುವುದನ್ನು, ಮೂತ್ರ ವಿಸರ್ಜಿಸುವುದನ್ನು, ನದಿಗಳಲ್ಲಿ ಮಲಿನ ಪದಾರ್ಥ ಎಸೆಯುವುದನ್ನು ಕಾಣುತ್ತಿರುತ್ತೇವೆ.

ದೇಶದ ಸ್ವಚ್ಛತೆಯ ಬಗ್ಗೆ ನಮಗೆ ಅರಿವೇ ಇಲ್ಲದಂತೆ ವರ್ತಿಸುತ್ತೇವೆ. ಬೇರೆಯವರಿಗೊಂದು ನೀತಿ, ನಮಗೊಂದು ನೀತಿ ಎಂಬುದನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತೇವೆ. ನಮ್ಮ ಮನೆ, ನಮ್ಮ ಮನೆಯ ಬೀದಿ ಮಾತ್ರ ಸ್ವಚ್ಛವಿದ್ದರೆ ಸಾಕು ಉಳಿದವರು ಹೇಗಾದರೂ ಇದ್ದುಕೊಳ್ಳಲಿ ಎಂಬುದು ನಮ್ಮ ಜೀವನಪದ್ಧತಿಯೇ ಆಗಿಹೋಗಿದೆ. ಅದನ್ನೇ ನೈತಿಕತೆ ಎಂದು ಭಾವಿಸುತ್ತೇವೆ.

ಇನ್ನು ದೇಶದ ಬಗ್ಗೆ ಕೇಳುವುದೇ ಬೇಡ. ಅದು ಹೇಗಾದರೂ ಇದ್ದುಕೊಳ್ಳಲಿ. ನಮಗೆ ಪುಕ್ಕಟೆ ಸೌಲಭ್ಯ, ಸೌಕರ್ಯ, ಭಾಗ್ಯಗಳು ಸಿಕ್ಕಿದರೆ ಸಾಕು ಎಂಬ ಮನೋಭಾವದವರು ನಾವು. ಇದನ್ನು ಬರೆಯುವಾಗ ಡಿವಿಜಿ ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ. “ನಮ್ಮ ದೇಶದಲ್ಲಿ ಯಾರನ್ನು ಕೇಳಿದರೂ ಅವರ ಬಾಯಿಯಿಂದ ದೇವರು, ಧರ್ಮ, ಭಕ್ತಿ, ಕರ್ಮ, ಪರಮಾತ್ಮ, ಸತ್ಯ, ಅಹಿಂಸೆ-ಇಂಥಾ ಮಾತುಗಳು ಘಳಿಗೆಗೆ ಹತ್ತು ಸಲ ನುಗ್ಗಿ ಬರುತ್ತವೆ.

ಎಲ್ಲರೂ ಭಗವದ್ಗೀತೆಯನ್ನು ಹೇಳುವವರೇ. ನಮ್ಮ ಬಾಳನ್ನು ನೋಡಿದರೆ ಮಾತ್ರ ಈ ಭಾರೀ ಮಾತುಗಳ ಅರ್ಥವೇನೂ ರುಜುವಾತಿಗೆ ಬರುತ್ತಿಲ್ಲ" ಎಂದು ತಮ್ಮ ‘ಬಾಳಿಗೊಂದು ನಂಬಿಕೆ’ ಕೃತಿಯಲ್ಲಿ (ಪುಟ-25)ಬರೆದಿದ್ದಾರೆ.

ಇದನ್ನು ಭೈರಪ್ಪನವರು ಪಾಶ್ಚಾತ್ಯ ಮಕ್ಕಳ ಬಗ್ಗೆ ಹೇಳಿದ್ದಕ್ಕೆ ಹೋಲಿಸಿ ನೋಡಿದರೆ ಅದರ ಯಾಥಾರ್ಥ್ಯವು ಗೋಚರಕ್ಕೆ ಬರುತ್ತದೆ. ಭೈರಪ್ಪನವರ ಅನುಭವ ಭಂಡಾರದಲ್ಲಿ ಇಂಥಹವು ಎಷ್ಟೋ ಇವೆ. ನಮ್ಮ ದೇಶದ ರಾಜಕಾರಣಿಗಳು ನಮ್ಮ ದೇಶವನ್ನು ಎಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದರೆ-ಒಮ್ಮೆ ಅವರು ಇಂಗ್ಲೆಂಡಿನ ಸಮುದ್ರ ತೀರವೊಂದರಲ್ಲಿ ಕೂತು ಅದರ ಅಲೆಗಳನ್ನು ವೀಕ್ಷಿಸುತ್ತಿದ್ದಾಗ ಒಬ್ಬ ವೃದ್ಧೆ ಅವರ ಬಳಿ ಬಂದು “ನೀವು ಯಾರು?" ಎಂದು ಕೇಳುತ್ತಾಳೆ.

ತಾನು ಭಾರತದಲ್ಲಿ, ಯೂನಿವರ್ಸಿಟಿಯೊಂದರಲ್ಲಿ ಪ್ರೊಫೆಸರ್ ಎಂದು ಹೇಳುತ್ತಾರೆ. ಅದಕ್ಕೆ ಅವಳು “ನಿಮ್ಮ ಯೂನಿವರ್ಸಿಟಿಯಲ್ಲಿ ಒಬ್ಬ ಗಣಿತ ಅಧ್ಯಾಪಕ ರೋಗದಿಂದಲೋ ಅಥವಾ ಹಠಾತ್ತಾಗಿಯೋ ಮೃತನಾದರೆ ಅವರ ಹೆಂಡತಿಗೆ ಅನಾಮತ್ತಾಗಿ ಆ ಹುದ್ದೆಯನ್ನು ಕೊಡುತ್ತಾರೆ ಯೇ?" ಎಂದು ಕೇಳುತ್ತಾಳೆ. ಅದಕ್ಕೆ ಭೈರಪ್ಪ “ಅದು ಹೇಗೆ ಸಾಧ್ಯ?" ಎಂದು ಮರುಪ್ರಶ್ನೆ ಹಾಕುತ್ತಾರೆ.

“ಹಾಗಾದರೆ ಮಂತ್ರಿಯೊಬ್ಬನು ಸತ್ತಾಗ ಅವನ ಹೆಂಡತಿಯನ್ನು ಅನಾಮತ್ತಾಗಿ ಮಂತ್ರಿ ಮಾಡಿ ಬಿಡುತ್ತೀರಲ್ಲ! ಸಂಸದನೊಬ್ಬ ಸತ್ತರೆ ಅವನ ಹೆಂಡತಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಬಿಡುತ್ತೀರಲ್ಲ! ಇದು ಹೇಗೆ ಸಾಧ್ಯ?" ಎಂದು ಕೇಳುತ್ತಾಳೆ. ಇಂತಹ ವಿರೋಧಾಭಾಸದ ದೇಶ ನಮ್ಮದು. ನಮ್ಮ ಇಂತಹ ವ್ಯವಸ್ಥೆಯನ್ನು ನೋಡಿ ಇತರ ದೇಶದವರು ಕುಹಕವಾಡಿ ನಗುತ್ತಾರೆ. ನಮಗೆ ಇದರ ಅರಿವೇ ಇಲ್ಲ" ಎಂದು ಭೈರಪ್ಪ ವಿಷಾದ ವ್ಯಕ್ತಪಡಿಸುತ್ತಾರೆ.

ಮುಂದುವರಿದು ಅವರು “ನಮ್ಮ ಪ್ರಜಾಪ್ರಭುತ್ವವು ಇನ್ನೂ ಅಪಕ್ವವಾಗಿಯೇ ಇದೆ. ಪಾಶ್ಚಾತ್ಯ ದೇಶಗಳ ಪ್ರಜಾಪ್ರಭುತ್ವದಲ್ಲಿನ ಪಕ್ವತೆ ನಮ್ಮ ದೇಶದಲ್ಲಿ ಸ್ವಲ್ಪವೂ ಇಲ್ಲ. ಇದರ ಪರಿಣಾಮ ವೆಂದರೆ- ನೀತಿ-ಸದಾಚಾರಗಳಿಗೆ (Ethics and Morality) ಸಲ್ಲಬೇಕಾದ ಪ್ರಾಶಸ್ತ್ಯವು ಜಾತಿ, ವಂಶ ಇತ್ಯಾದಿ ಅನ್ಯವಿಚಾರಗಳಗೆ ಸಲ್ಲುತ್ತಿದೆ. ಅಪ್ಪ ಸತ್ತಮೆಲೆ ಅಪ್ಪನ ಆಸ್ತಿಯ ಹಕ್ಕು ಮಗನಿಗಲ್ಲವೇ? ಗಂಡ ಸತ್ತಮೇಲೆ ಗಂಡನ ಆಸ್ತಿಯ ಹಕ್ಕು ಹೆಂಡತಿಗಲ್ಲವೇ? ಹಾಗೆಯೇ ಆ ಸ್ಥಾನಕ್ಕೆ (ಸಂಸದ ಅಥವಾ ಶಾಸಕನ ಸ್ಥಾನಕ್ಕೆ) ಅವಳು ಬಂದಿದ್ದಾಳೆ.

ತಪ್ಪೇನು? ಎಂಬ ಭಾವವು ಜನದ ಮನಸ್ಸಿನಲ್ಲಿ ಮೂಡಿದೆ. ರಾಜಕಾರಣವೂ ಒಂದು ಆಸ್ತಿ, ಕುಟುಂಬದ ಆಸ್ತಿ ಎಂದು ಮತ ಕೊಡುವ ಜನಗಳೇ ಮನ್ನಿಸಿರುವಾಗ ಏನು ಮಾಡುವುದಕ್ಕಾಗುತ್ತೆ? ಹಾಗಾಗಿ ಇದಕ್ಕೆ ಕಾನೂನು ರೀತ್ಯಾ ಪರಿಹಾರ ಆಗಬೇಕಿದೆ. ಆದರೆ ಬಹಿಷ್ಕೃತರಾಗಬೇಕಾದವರೇ ಸಂಸತ್ತು-ವಿಧಾನಸಭೆಗಳಲ್ಲಿ ತುಂಬಿರುವುದು ನಮ್ಮ ದೇಶದ ದುರಂತ ಎಂದು ಅಸಹಾಯಕರಾಗಿ ಕೈಚೆಲ್ಲುತ್ತಾರೆ.

ಇದು ಭೈರಪ್ಪನವರಿಗೆ ದೇಶದ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ. ಅವರ ಚಿಂತನಪೂರ್ಣ ವೈಚಾ ರಿಕ ಸಾಹಿತ್ಯ ಕೃತಿಗಳಲ್ಲಿ ನಮ್ಮನ್ನು ಎಚ್ಚರಿಸುವ ಇಂತಹ ಅನೇಕ ಸಂಗತಿಗಳು ಬರುತ್ತವೆ. ಕಾದಂಬರಿಗಳಲ್ಲೂ ಅಲ್ಲಲ್ಲಿ ಬರುತ್ತವೆ. ಭಾರತೀಯ ಪುರಾಣ ಸಾಹಿತ್ಯಗಳಲ್ಲಿ ಅಪಾರ ಪ್ರೇಮ ವಿರುವ ಭೈರಪ್ಪನರು ಅಲ್ಲಿಯೂ ಕೂಡಾ ಚಿಂತನೆಗೆ ಹಚ್ಚುವ ಮಾತುಗಳನ್ನು ಆಡುತ್ತಾರೆ. ತಥಾಕಥಿತ ಹೇಳಿಕೆಗಳಿಗೆ ಅವರು ಮರುಳಾಗುವುದಿಲ್ಲ. ಅಲ್ಲಿಯೂ ಕೂಡಾ ತಮ್ಮದೇ ಚಿಂತನೆಯ ಮುದ್ರೆಯೊತ್ತುತ್ತಾರೆ.

ಉದಾಹರಣೆಗೆ,“ಧರ್ಮರಾಜ ಯಮ ಧರ್ಮರಾಯನ ಮಗ ಎಂಬ ಕಾರಣಕ್ಕೆ ಅವನು ಮಾಡಿ ದ್ದೆಲ್ಲವೂ ಧರ್ಮ ಎಂದು ಭಾವಿಸಿಬಿಡುವ ಭೋಳೆತನ ನಮ್ಮಲ್ಲಿ ಇದೆ. ಅವನ ಅವ್ಯಾವಹಾರಿಕತೆ, ಮೂರ್ಖತನ, ಎಡಬಿಡಂಗಿತನ, ಅವನ ಚರ್ಯೆ ಯಾವುದನ್ನೂ ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ ನಾವು."

“ಪಾಂಡವರು ವನವಾಸದಲ್ಲಿದ್ದಾಗ ಜಯದ್ರಥ ದ್ರೌಪದಿಯನ್ನು ಅಪಹರಿಸಿಕೊಂಡು ಹೋಗು ತ್ತಿದ್ದಾಗ ಭೀಮಸೇನ ಅವನನ್ನು ಹಿಡಿದೆಳೆದು ತಂದು ಧರ್ಮರಾಜನ ಕಾಲಿಗೆ ಕೆಡಹುತ್ತಾನೆ. ಅದಕ್ಕೆ ಮರುಗಿದ ಧರ್ಮರಾಜ, “ಭೀಮ, ನೀನು ಎಂತಹ ತಪ್ಪು ಕೆಲಸ ಮಾಡಿಬಿಟ್ಟೆ. ಇವನು ನಮ್ಮ ಭಾವನಲ್ಲವೆ? ಇವನನ್ನು ಹೀಗೆ ಕಟ್ಟಿ ತಂದರೆ ತಂಗಿ ದುಃಶಲೆಗೆ ಬೇಸರವಾಗುವುದಿಲ್ಲವೇ? ದೊಡ್ಡಮ್ಮ ಗಾಂಧಾರಿ ದುಃಖಿಸುವುದಿಲ್ಲವೇ? ಅವನ ಕಟ್ಟನ್ನು ಬಿಚ್ಚು" ಎನ್ನುತ್ತಾನೆ.

ಇದರಿಂದ ದ್ರೌಪದಿಯ ಮನಸ್ಸಿನಲ್ಲಿ ಎಂತಹ ಭಾವ ಹುಟ್ಟಬಹುದು ಎಂದು ಧರ್ಮರಾಜ ಯೋಚಿಸುವುದೇ ಇಲ್ಲ. ನಮ್ಮ ದೇಶದಲ್ಲಿನ Extremity of Ideals ಅಂದರೆ ಇದೇನೇ. ಆದರ್ಶಗಳನ್ನು ಅತಿರೇಕಕ್ಕೆ ಒಯ್ಯಬಾರದು. ವ್ಯಾವಹಾರಿಕ ಪರಿಹಾರವೊಂದಿರುತ್ತದೆ. (Practical Solution or common sence ) ಅದನ್ನು ಮೀರಿ ಅತಿರೇಕಕ್ಕೆ ಒಯ್ಯಬಾರದು.

ನಮ್ಮ ದೇಶದಲ್ಲಿ ಎಲ್ಲವೂ ಅತಿರೇಕವೇ. ಯಾರು ಯಾರನ್ನು ಹೀರೋಗಳು ಎಂದು ಪರಿಗಣಿಸಿರು ವೆವೋ ಅವರೆಲ್ಲರೂ ಅತಿರೇಕದವರೇ. ಧರ್ಮರಾಜ, ರಾಮ, ಹರಿಶ್ಚಂದ್ರ, ಗಾಂಧಿ!. ಹೀಗೆ ಇವರೆಲ್ಲ ರನ್ನೂ ಒಂದೇ ತೆಕ್ಕೆಗೆ ತೆಗೆದುಕೊಂಡು ಅವರನ್ನು ಪರಾಮರ್ಶಿಸುತ್ತಾರೆ. ತಥಾಕಥಿತ ಯೋಚನಾ ಲಹರಿಯಿಂದ ಬಿಡಿಸಿಕೊಂಡು ಒಂದು ಕ್ಷಣ ಯೋಚಿಸಿದರೆ ಭೈರಪ್ಪ ಹೇಳಿದ್ದರಲ್ಲಿ ಸತ್ಯಾಂಶ ಕಾಣದೇ ಇರುವುದಿಲ್ಲ.

ಭೈರಪ್ಪನವರು ಒಂದು ತತ್ತ್ವ, ಸಿದ್ಧಾಂತಕ್ಕೊಳಪಟ್ಟು ಬದುಕಿದವರು. ನುಡಿದಂತೆ ನಡೆದವರು ಮತ್ತು ನಡೆದಂತೆ ನುಡಿದವರು. ಇಂತಹವರು ಸಮಾಜದಲ್ಲಿ ತುಂಬಾ ವಿರಳ. ಧರ್ಮ, ನೀತಿ, ಪ್ರಾಮಾಣಿಕತೆ, ಸತ್ಯಸಂಧತೆ ಅವರಲ್ಲಿ ಎರಕಗೊಂಡಿದ್ದವು. ಧರ್ಮದ ಬಗ್ಗೆ ಅವರು ಅವರದ್ದೇ ಆದ ನಿಲುವನ್ನು ಹೊಂದಿದ್ದರು. ಒಬ್ಬ ಉದ್ಯಮಿ ಅಪಾರ ಹಣ ಸಂಪಾದಿಸಿರುತ್ತಾನೆ.

ಅದಕ್ಕೆ ಸಂಬಂಧೊಸಿದ ಕರವನ್ನು ಕಟ್ಟಿ, ಆಮೇಲೆ ಉಳಿದ ಹಣದಲ್ಲಿ ಆತ ದಾನ-ಧರ್ಮ ಮಾಡಬೇಕೆಂದು ಭೈರಪ್ಪ ಬಯಸುತ್ತಿದ್ದರು. ತಂದೆಯ ಹೆಸರಲ್ಲೋ, ತಾಯಿಯ ಹೆಸರಲ್ಲೋ ಒಂದು ಆಸ್ಪತ್ರೆಯನ್ನೋ, ಶಾಲೆಯನ್ನೋ ಕಟ್ಟಿಸಬೇಕೆಂದು ಅವರು ಹೇಳುತ್ತಿದ್ದರು. ಹಾಗೆ ನಡೆದು ಕೊಂಡವರ ಬಗ್ಗೆ ಅವರಿಗೆ ಅಪರಿಮಿತ ಗೌರವವಿತ್ತು. ಅದಕ್ಕೆ ಮಾದರಿ ಅವರಿಗೆ ಬಿಲ್ ಗೇಟ್ಸ್ ಆಗಿದ್ದ. ಡಿ.ವಿ. ಗುಂಡಪ್ಪನವರಾಗಿದ್ದರು.

ಬಿಲ್ ಗೇಟ್ಸ್ ತನ್ನ ಅಪರಿಮಿತ ಗಳಿಕೆಯಲ್ಲಿ ಒಂದಂಶವನ್ನು ಮಕ್ಕಳಿಗೆ ನೀಡಿ ಉಳಿದದ್ದನ್ನು ದಾನ-ಧರ್ಮ ಮಾಡಿಬಿಟ್ಟ. ಅದೇ ಧರ್ಮಬುದ್ಧಿ ಎಂದು ಭೈರಪ್ಪ ಹೇಳುತ್ತಾರೆ. ಡಿವಿಜಿ ಬಡತನದಲ್ಲೇ ಇದ್ದರೂ ಹಂಗಿನ ಹಣಕ್ಕೆ ಸ್ವಲ್ಪವೂ ಆಸೆ ಪಡುತ್ತಿರಲಿಲ್ಲ. ಆಲೋಚನಾ ಸ್ವಾತಂತ್ರ್ಯವಿಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ.

ಅದನ್ನು ಉಳಿಸಿಕೊಂಡವರು ಡಿವಿಜಿಯವರು. ಅಂತಹವರ ವ್ಯಕ್ತಿತ್ವ ಸದಾ ಮಾದರಿಯೆಂದು ಭೈರಪ್ಪ ಸ್ಮರಿಸಿಕೊಳ್ಳುತ್ತಾರೆ.ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸಿಗಳು ಪಾಕಿಸ್ತಾನದೊಂದಿಗೆ ಯುದ್ಧವುಂಟಾದಾಗ “ದೇಶದಲ್ಲಿ ಅನ್ನಕ್ಕೆ ಸ್ವಲ್ಪ ಅಭಾವ ಉಂಟಾಗಿದೆ. ವಾರಕ್ಕೆ ಒಂದು ಒಪ್ಪತ್ತಿನ ಊಟ, ಸೋಮವಾರ ಸಾಯಂಕಾಲ ನಾನು ಉಪವಾಸವಿರುತ್ತೇನೆ.

ನೀವೂ ವಾರಕ್ಕೆ ಒಪ್ಪೊತ್ತು ಆಹಾರವನ್ನು ಬಿಡಿ" ಎಂದು ದೇಶಕ್ಕೆ ಕರೆ ಕೊಟ್ಟರು. ಇಡೀ ದೇಶವೇ ಒಪ್ಪೊತ್ತಿನ ಊಟ ಬಿಟ್ಟಿತು. ಅವರ ಮಾತಿಗೇಕೆ ಅಷ್ಟು ಬೆಲೆ ಸಂದಿತು? ಆವರು ಆಚರಿಸಿ ತೋರಿಸಿದ್ದರಿಂದ. ‘ರಾಜಾ ಕಾಲಸ್ಯ ಕಾರಣಮ್’- ದೇಶದ ಒಳಿತಿಗೆ ಅಥವಾ ಕೆಡುಕಿಗೆ ರಾಜನೇ ಕಾರಣ ಎಂದು ಇದರ ಅರ್ಥ.

ಲಾಲ್ ಬಹದ್ದೂರ್ ಶಾಸ್ತ್ರಿಗಳು ಇದನ್ನು ಮಾಡಿ ತೋರಿಸಿದರು. ಒಳಿತನ್ನು ಹೇಗೆ ಮಾಡಬೇಕೆಂದು ಜಗತ್ತಿಗೆ ತೋರಿಸಿ ಕೊಟ್ಟರು. ಇಂಥಾದ್ದು ಆಳುಗರಿಗೆ ಮೇಲ್ಪಂಕ್ತಿಯಾಗಬೇಕು ಎಂದು ಹೇಳುತ್ತಾ ಭೈರಪ್ಪ ಶಾಸ್ತ್ರಿಗಳ ಆದರ್ಶವನ್ನು ಎತ್ತಿ ಹಿಡಿಯುತ್ತಾರೆ. ಮಾತ್ರವಲ್ಲ. ಅಂತಹ ಆದರ್ಶವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಕೋಟ್ಯಂತರ ರುಪಾಯಿಗಳನ್ನು ದಾನ- ಧರ್ಮ ಮಾಡಿದರು.

ಬಡಬಗ್ಗರಿಗೆ, ಅನಾಥ ಅರ್ಹ ವಿದ್ಯಾರ್ಥಿ ಗಳಿಗೆ, ಅನೇಕ ಸಂಘ-ಸಂಸ್ಥೆಗಳಿಗೆ, ಅರ್ಹ ಸಾಹಿತಿಗಳಿಗೆ, ರೋಗಿಗಳಿಗೆ ಆರ್ಥಿಕ ನೆರವು ನೀಡಿದರು. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಆವರ ಆಪ್ತವಲಯದಲ್ಲಿರುವ ಕೆಲವರಿಗೆ ಮಾತ್ರ ಅದು ಗೊತ್ತು. ಇಂಥಾದ್ದು ಡಾ.ಎಸ್.ಎಲ್.ಭೈರಪ್ಪ ನವರ ಜೀವನಾದರ್ಶ.

ಇಂತಹ ಉದಾರ ಹೃದಯದ ಖ್ಯಾತ ಕಾದಂಬರಿಕಾರ ಮತ್ತು ಪ್ರಖರ ಚಿಂತಕ ಡಾ.ಎಸ್.ಎಲ್. ಭೈರಪ್ಪನವರ ಧರ್ಮಶ್ರೀ ಕಾದಂಬರಿಗೆ 65 ವರ್ಷ ತುಂಬುತ್ತಿರುವ ಈ ಶುಭಾವಸರದಲ್ಲಿ ಅದನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವೊಂದನ್ನು ಡಾ.ಎಸ್.ಎಲ್.ಭೈರಪ್ಪ ಪ್ರತಿಷ್ಠಾನ, ಬೆಂಗಳೂರು ಇದೇ ಬರುವ 18-04-2026, ಶನಿವಾರ ಸಂಜೆ 05.00 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದೆ.