ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ವಿಶ್ವಗುರುವಾಗಿ ಭಾರತ ರೂಪುಗೊಳ್ಳಲು ಬ್ರಿಕ್ಸ್‌ ಅಡಿಪಾಯ

ಪಾಕಿಸ್ತಾನ ಮುಂತಾದ ದೇಶಗಳ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಖಂಡಿಸುವ ಭಾರತದ ನಿಲುವಿಗೆ ರಷ್ಯಾ, ಬ್ರೆಜಿಲ್ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿದವು. ಉಗ್ರರಿಗೆ ಆಶ್ರಯ ನೀಡುವ ಮತ್ತು ಆರ್ಥಿಕ ನೆರವು ಒದಗಿಸುವ ಜಾಲಗಳನ್ನು ಜಂಟಿಯಾಗಿ ಎದುರಿಸುವ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

ರಾಜತಂತ್ರ

ರವೀ ಸಜಂಗದ್ದೆ

ಹನ್ನೊಂದು ದೇಶಗಳ ಒಕ್ಕೂಟವಾದ ‘ಬ್ರಿಕ್ಸ್’ನ 18ನೆಯ ಶೃಂಗಸಭೆಯು ಇದೇ ಸೆಪ್ಟೆಂಬರ್ 12, 13ರಂದು ಭಾರತದ ಆತಿಥ್ಯದಲ್ಲಿ ನವದೆಹಲಿಯಲ್ಲಿ ಅಚ್ಚುಕಟ್ಟಾಗಿ, ಭವ್ಯವಾಗಿ ಸಂಪನ್ನ ವಾಯಿತು. ಜಾಗತಿಕ ರಾಜಕಾರಣದಲ್ಲಿ ಭಾರತ ಹೊಂದಿರುವ ಸದೃಢ ಪ್ರಭಾವಲಯವನ್ನು ಈ ಶೃಂಗ ಮತ್ತೊಮ್ಮೆ ವಿಶ್ವಕ್ಕೆ ದೃಢಪಡಿಸಿತು. ಜಗದಗಲದ ಹಲವಾರು ಬಿಕ್ಕಟ್ಟು-ಸಮರಗಳ ನಡುವೆ ಯೂ ಎಲ್ಲಾ ಸದಸ್ಯ ರಾಷ್ಟ್ರ ಗಳನ್ನು ಒಗ್ಗೂಡಿಸಿ, ಹಲವಾರು ಒಮ್ಮತದ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಭಾರತ ಅನುಸರಿಸಿದ ರಾಜತಾಂತ್ರಿಕ ನಡೆ ಸಂಪೂರ್ಣ ಯಶಸ್ವಿಯಾಗಿದೆ.

‘ಎಲ್ಲರನ್ನೂ ಒಳಗೊಳ್ಳುವ’ ಮತ್ತು ‘ಎಲ್ಲರ ಅಭಿವೃದ್ಧಿ’ ಎಂಬ ಭಾರತದ ಮೂಲ ಮಂತ್ರಕ್ಕೆ ಬ್ರಿಕ್ಸ್ ವೇದಿಕೆಯು ಧ್ವನಿಯಾಯಿತು. ಜಾಗತಿಕ ಮಟ್ಟದಲ್ಲಿ ಪರಸ್ಪರ ಭಿನ್ನ ನಿಲುವುಗಳನ್ನು ಹೊಂದಿರುವ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವಲ್ಲಿ ಭಾರತದ ನಾಯಕತ್ವ ಮಹತ್ವದ ಪಾತ್ರವಹಿಸಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಳ ಹೊರತಾಗಿಯೂ ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳನ್ನು ಸಮಾನ ಅಜೆಂಡಾದಡಿ ಒಗ್ಗೂಡಿಸಿ, ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿದ್ದು ಭಾರತದ ವಿದೇಶಾಂಗ ನೀತಿಯ ಬಲುದೊಡ್ಡ ವಿಜಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಭಾರತವು ತನ್ನ ‘ವಸುಧೈವ ಕುಟುಂಬಕಂ’ ಸಿದ್ಧಾಂತವನ್ನು ಜಾಗತಿಕ ವೇದಿಕೆಯಲ್ಲಿ ಸಮರ್ಥವಾಗಿ ಮಂಡಿಸಿದೆ. ‌

ಯಾವುದೇ ನಿರ್ದಿಷ್ಟ ಗುಂಪಿಗೆ ಸೀಮಿತವಾಗದೆ, ಜಗತ್ತಿನ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿ ಯಾಗಿ ಭಾರತ ಹೊರಹೊಮ್ಮಿರುವುದು ಈ ಶೃಂಗಸಭೆಯ ಹೈಲೈಟ್ಸ್. ಶೃಂಗಸಭೆಯ ಪ್ರಮುಖ ನಿರ್ಣಯ ಗಳು ಭವಿಷ್ಯದಲ್ಲಿ ಬಂದೊದಗಬಹುದಾದ ಜಾಗತಿಕ ಸವಾಲುಗಳನ್ನು ಎದುರಿಸಲು ಹಲವು ಮಹತ್ವದ ನಿರ್ಣಯಗಳನ್ನು ಈ ಬಾರಿಯ ಬ್ರಿಕ್ಸ್ ಶೃಂಗಸಭೆ ಅಂಗೀಕರಿಸಿದೆ. ಈ ಒಪ್ಪಂದ ಗಳು ಸದಸ್ಯ ರಾಷ್ಟ್ರಗಳ ಪರಿವ್ಯಾಪ್ತಿಗೆ ಮಾತ್ರ ಸೀಮಿತವಾಗಿರದೆ, ಅಭಿವೃದ್ಧಿಶೀಲ ಜಗತ್ತಿಗೆ ದೀವಟಿಗೆ-ದಿಕ್ಸೂಚಿಯಾಗಿವೆ.

ಇದನ್ನೂ ಓದಿ: Ravi Sajangadde Column: ಕೆಂಪುಕೋಟೆಯಿಂದ ಮೊಳಗಲಿದೆ ವಂದೇ ಮಾತರಂ

ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ: ಭಯೋತ್ಪಾದನೆಗೆ ಯಾವುದೇ ರೀತಿಯ ಬೆಂಬಲ ನೀಡದಿರುವುದು ಮತ್ತು ಭಯೋತ್ಪಾದಕ ಜಾಲಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ‘ಬ್ರಿಕ್ಸ್ ಕೌಂಟರ್ ಟೆರರಿಸಂ ಆಕ್ಷನ್ ಪ್ಲಾನ್’ಗೆ ಶೃಂಗಸಭೆ ಬದ್ಧತೆ ತೋರಿತು. ‌

ಪಾಕಿಸ್ತಾನ ಮುಂತಾದ ದೇಶಗಳ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಖಂಡಿಸುವ ಭಾರತದ ನಿಲುವಿಗೆ ರಷ್ಯಾ, ಬ್ರೆಜಿಲ್ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿದವು. ಉಗ್ರರಿಗೆ ಆಶ್ರಯ ನೀಡುವ ಮತ್ತು ಆರ್ಥಿಕ ನೆರವು ಒದಗಿಸುವ ಜಾಲಗಳನ್ನು ಜಂಟಿಯಾಗಿ ಎದುರಿಸುವ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆಗೆ ಆಗ್ರಹ: ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಎಂಎಫ್ ಸೇರಿದಂತೆ ಪ್ರಮುಖ ಜಾಗತಿಕ ಸಂಸ್ಥೆಗಳಲ್ಲಿ ಕ್ರಾಂತಿಕಾರಿ ಸುಧಾರಣೆ ತರುವ ಅಗತ್ಯವನ್ನು ಈ ಬಾರಿಯ ಶೃಂಗಸಭೆ ಪ್ರತಿಪಾದಿಸಿತು. ‌21ನೆಯ ಶತಮಾನದ ವಾಸ್ತವಗಳಿಗೆ ತಕ್ಕಂತೆ ಈ ಸಂಸ್ಥೆ ಗಳು ಬದಲಾಗಬೇಕು, ನೀತಿ ನಿಯಮಗಳನ್ನು ಪರಿಷ್ಕರಿಸಬೇಕು ಮತ್ತು ಅಭಿವೃದ್ಧಿಶೀಲ ರಾಷ್ಟ್ರ ಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನುವ ಭಾರತದ ಬಹುಕಾಲದ ಬೇಡಿಕೆಗೆ ಬ್ರಿಕ್ಸ್ ವೇದಿಕೆ ಅಧಿಕೃತ ಮುದ್ರೆ ಒತ್ತಿದೆ. ಇದು ಭಾರತದ ಅತಿದೊಡ್ಡ ರಾಜತಾಂತ್ರಿಕ ಗೆಲುವು! ‌

BRICS ok

ಆರ್ಥಿಕ ಸಹಕಾರ ಮತ್ತು ಎನ್‌ಡಿಬಿ ವಿಸ್ತರಣೆ: ಬ್ರಿಕ್ಸ್ ರಾಷ್ಟ್ರಗಳ ನಡುವೆ ಆಂತರಿಕ-ಪರಸ್ಪರ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು, ಕಸ್ಟಮ್ಸ ಸಹಕಾರವನ್ನು ವಿಸ್ತರಿಸಲು ನಿರ್ಣಯಿಸ ಲಾಯಿತು. ‘ನವೀನ ಅಭಿವೃದ್ಧಿ ಬ್ಯಾಂಕ್’ (New Development Bank) ಮೂಲಕ ಮೂಲ ಸೌಕರ್ಯ, ಸ್ವಚ್ಛ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವ ಒಪ್ಪಂದಗಳು ಈ ಶೃಂಗಸಭೆಯ ಆರ್ಥಿಕ ಸಾಧನೆಗಳಲ್ಲಿ ಪ್ರಮುಖವಾದವು. ಈ ಬ್ಯಾಂಕಿನ ಸದಸ್ಯತ್ವವನ್ನು ವಿಸ್ತರಿಸುವ ಮೂಲಕ, ಜಾಗತಿಕ ಮಟ್ಟದಲ್ಲಿ ಅದರ ವ್ಯಾಪ್ತಿ ಮತ್ತು ಪ್ರಭಾವವನ್ನು ವೃದ್ಧಿಸಲು ನಿರ್ಧರಿಸಲಾಯಿತು. ‌

ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಒಪ್ಪಂದಗಳು: ಬ್ರಿಕ್ಸ್ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ನಡುವೆ ‘ರಿಮೋಟ್ ಸೆನ್ಸಿಂಗ್’ ಉಪಗ್ರಹ ದತ್ತಾಂಶ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಿಂದಾಗಿ ಹವಾಮಾನ ಮುನ್ಸೂಚನೆ, ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ತಂತ್ರಜ್ಞಾನವನ್ನು ಮಾನವನ ಸರ್ವತೋಮುಖ ಕಲ್ಯಾಣಕ್ಕೆ ಬಳಸುವ ಭಾರತದ ಆಶಯ ಇಲ್ಲಿ ಸ್ಪಷ್ಟವಾಗಿ ಸಾಕಾರಗೊಂಡಿದೆ. ಬ್ರಿಕ್ಸ್ ವೇದಿಕೆಯು ಕೇವಲ ಆರ್ಥಿಕ ಸಾಮರ್ಥ್ಯದ ಒಕ್ಕೂಟ ಮಾತ್ರವಲ್ಲ!‌

ಭಾರತ ದೃಷ್ಟಿಯಿಂದ ಅದು ಜಾಗತಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ಕಾವಲುಗಾರ. ಈ ಅಂಶ ವನ್ನು ಉಳಿದ ರಾಷ್ಟ್ರಗಳ ಅವಗಾಹನೆಗೆ ತಂದು ಬ್ರಿಕ್ಸ್‌ನ ಧ್ಯೇಯೋದ್ದೇಶಗಳನ್ನು ಬಹುಪಾಲು ವಿಸ್ತರಿಸಲು-ಪರಿವರ್ತಿಸಲು ಭಾರತದ ಶ್ರಮಕ್ಕೆ ಒಂದಷ್ಟು ಜಯವೂ ಲಭಿಸಿದಂತೆ ಕಾಣುತ್ತಿದೆ. ಭಾರತವು ಮಂಡಿಸಿದ ವಿಚಾರಗಳು ಅಭಿವೃದ್ಧಿಶೀಲ ಜಗತ್ತಿನ ವಾಸ್ತವಿಕ ಅಗತ್ಯಗಳನ್ನು ಪ್ರತಿನಿಧಿಸಿದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಡೀ ಜಗತ್ತಿಗೆ ತಿಳಿದಿರುವಂತೆ ಡಿಜಿಟಲ್ ಆಡಳಿತ ಮತ್ತು ಹಣಕಾಸು ತಂತ್ರಜ್ಞಾನದ ಬಳಕೆಯಲ್ಲಿ ಭಾರತ ಇಂದು ಎಲ್ಲರಿಗೂ ಮಾದರಿಯಾಗಿದೆ.

ಆಧಾರ್, ಯುಪಿಐ ಮತ್ತು ಕೋವಿನ್‌ನಂತಹ ಯಶಸ್ವಿ ಡಿಜಿಟಲ್ ಪಾವತಿ ಮತ್ತು ಆರೋಗ್ಯ ವ್ಯವಸ್ಥೆಯ ‘ಪ್ಲಾಟ್ʼಫಾರ್ಮ್’ಗಳನ್ನು ಅಭಿವೃದ್ಧಿಶೀಲ ಮತ್ತು ಸಮಾನಮನಸ್ಕ ರಾಷ್ಟ್ರಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ಭಾರತದ ಉದಾರ ನಿಲುವಿಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು ತೀವ್ರ ಮೆಚ್ಚುಗೆ-ಸಂತಸ ವ್ಯಕ್ತಪಡಿಸಿದ್ದಾರೆ.

‘ಮಾಹಿತಿ, ಸಂವಹನ ಮಾಧ್ಯಮ ಮತ್ತು ತಂತ್ರಜ್ಞಾನದ ಮೂಲಕ ಜನಸಾಮಾನ್ಯರ ಸಬಲೀಕರಣ ವೇ ಭಾರತದ ಗುರಿ’ ಎಂಬುದನ್ನು ಶೃಂಗಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರಕೃತಿಯ ಮೇಲೆ ಮಾನವನ ನಿರಂತರ ದಾಳಿಯಿಂದ ಆಗುತ್ತಿರುವ ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅತಿಯಾದ ಹೊರೆ-ಒತ್ತಡ ಹೇರಬಾರದು ಎಂಬುದು ಭಾರತದ ದೃಢವಾದ ನಿಲುವು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಐತಿಹಾಸಿಕ, ಸಾಮಾಜಿಕ ಜವಾಬ್ದಾರಿಯನ್ನರಿತು, ತಂತ್ರಜ್ಞಾನ ಮತ್ತು ಆರ್ಥಿಕ ನೆರವು ನೀಡಬೇಕೆಂಬ ಭಾರತದ ವಾದವನ್ನು ಬ್ರಿಕ್ಸ್ ನಿರ್ಣಯಗಳು ಎತ್ತಿ ಹಿಡಿದಿವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ ದಂತಹ ವಿಶಿಷ್ಟ ಉಪಕ್ರಮಗಳಿಗೆ ಬ್ರಿಕ್ಸ್ ರಾಷ್ಟ್ರಗಳ ಬೆಂಬಲ ಕೋರಲಾಗಿದ್ದು ಮುಂದಿನ ದಿನಗಳಲ್ಲಿ ಅದೂ ಸಾಕಾರಗೊಳ್ಳಲಿದೆ. ರಷ್ಯಾ-ಉಕ್ರೇನ್, ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಗಳೂ ಸೇರಿದಂತೆ ಯಾವುದೇ ಜಾಗತಿಕ ಸಂಘರ್ಷಗಳನ್ನು ಶ‌ಸ್ತ್ರಾಸ್ತ್ರಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ; ಬದಲಾಗಿ ಮಾತುಕತೆ ಮತ್ತು ವಿಶಾಲ ಆಲೋಚನೆಯ ರಾಜತಾಂತ್ರಿಕ ನಿಲುವು ಮಾತ್ರವೇ ಪರಿಹಾರ ಎಂಬ ಭಾರತದ ದೃಢ ನಿಲುವನ್ನು ಶೃಂಗಸಭೆ ಒಪ್ಪಿಕೊಂಡಿದೆ.

ವಿಶ್ವಸಂಸ್ಥೆಯ ಸನ್ನದು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕೆಂಬ ಭಾರತದ ಪ್ರತಿಪಾದನೆಯನ್ನು ಬ್ರಿಕ್ಸ್ ಘೋಷಣಾಪತ್ರದಲ್ಲಿ ಅಳವಡಿಸಲಾಗಿದೆ. ಸಾಂಕ್ರಾಮಿಕ ರೋಗಗಳ ನಂತರದ ಕಾಲಘಟ್ಟದಲ್ಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಭಾರತ ಒತ್ತು ನೀಡಿದೆ. ‌

ರೋಗನಿರೋಧಕ ಲಸಿಕೆಗಳ ಸಮಾನ ಹಂಚಿಕೆ ಮತ್ತು ಬ್ರಿಕ್ಸ್ ಸಾಂಪ್ರದಾಯಿಕ ಔಷಧಗಳ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಒತ್ತು ನೀಡಲಾಗಿದೆ. ಇದು ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳನ್ನು ಸಜ್ಜುಗೊಳಿಸಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಬ್ರಿಕ್ಸ್ ಸಮ್ಮೇಳನದಿಂದ ಎಷ್ಟು-ಏನನ್ನು ಸಾಧಿಸಿದ್ದಾರೆ ಎಂದು ಒಮ್ಮೆ ಸೂಕ್ಷ್ಮವಾಗಿ ಕಣ್ಣು ಹಾಯಿಸೋಣ!

ಇರಾನ್ ಅಧ್ಯಕ್ಷರು, ರಷ್ಯಾ ಅಧ್ಯಕ್ಷರು, ಚೀನಾದ ಉನ್ನತ ನಾಯಕ, ಯುಎಇ ಯುವರಾಜ, ಸೌದಿ ವಿದೇಶಾಂಗ ಸಚಿವರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಮತ್ತು ಇನ್ನೂ ಅನೇಕ ಪ್ರಮುಖರು ಬ್ರಿಕ್ಸ್ ಶೃಂಗಸಭೆ ಹೆಸರಿನ ಒಂದೇ ವೇದಿಕೆಯಲ್ಲಿ ಭಾಗವಹಿಸಿದರು. ಯಾರು ಯಾರ ಮೇಲೆ ಬಾಂಬ್ ದಾಳಿ ನಡೆಸುತ್ತಿzರೆ; ಯಾರು ಯಾರ ವಿರುದ್ಧ ಹೋರಾಡುತ್ತಿದ್ದಾರೆ, ಯಾರು ಯಾರ ಶತ್ರು, ಯಾರು ಯಾರ ಮಿತ್ರ ಎಂದೇ ಗೊತ್ತಾಗದ ಸದ್ಯದ ಪ್ರತಿಕೂಲ ಯುದ್ಧೋನ್ಮಾದದ ಪರಿಸ್ಥಿತಿಯನ್ನು ಗಮನಿಸಿದರೆ ಇದು ನಂಬಲು ಕಷ್ಟಸಾಧ್ಯವಾದ ವಿಚಾರ! ಭಾರತವು ಅಮೆರಿಕ ನೇತೃತ್ವದ ‘ಕ್ವಾಡ್’ ಮೈತ್ರಿಕೂಟದಲ್ಲಿದೆ, ಅಮೆರಿಕದ ಸೆಮಿಕಂಡಕ್ಟರ್ ಮೈತ್ರಿ ಕೂಟದಲ್ಲಿದೆ, ರಷ್ಯಾದಿಂದ ತೈಲವನ್ನು ಖರೀದಿಸುತ್ತಲೇ ಇದೆ, ಇರಾನ್‌ನಲ್ಲಿನ ಬಂದರು ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಿದೆ, ಇಸ್ರೇಲ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ, ಚೀನಾ ನೇತೃತ್ವದ ಎಸ್ಸಿಒ ಮೈತ್ರಿ ಕೂಟದಲ್ಲೂ ಇದೆ.

ಅಮೆರಿಕವು ಜಗತ್ತಿನ ಎಲ್ಲ ದೇಶಗಳು ಯಾವುದಾದರೂ ಒಂದು ಬದಿಯನ್ನು/ತಂಡವನ್ನು ಆರಿಸಿಕೊಳ್ಳ ಬೇಕೆಂದು ಬಯಸಿತ್ತು. ಆದರೆ ಭಾರತ ಅದನ್ನು ಸಂಪೂರ್ಣವಾಗಿ ನಿರಾಕರಿಸಿತು! ಇಂದು ಜಗತ್ತಿನ ಬೇರೆ ಯಾವುದೇ ದೇಶಕ್ಕೂ ಇಂತಹ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ! ಇದು ನಮ್ಮ ಚಾಣಾಕ್ಷ ರಾಜತಾಂತ್ರಿಕ ನಿಲುವು-ಗೆಲುವು!

ದೇಶದ ಮುಂದೆ ಸವಾಲುಗಳು ಬ್ರಿಕ್ಸ್ ಯಶಸ್ವಿಯಾಗಿದ್ದರೂ ಜಾಗತಿಕ ಭೌಗೋಳಿಕ -ರಾಜಕೀಯ ಉದ್ವಿಗ್ನತೆ ಗಳು ಹಲವಾರು ನಿರಂತರ ಸವಾಲುಗಳನ್ನು ಒಡ್ಡುತ್ತಲೇ ಇವೆ. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ರಷ್ಯಾ-ಚೀನಾ ಬಣದ ನಡುವೆ ಉಂಟಾಗಿರುವ ಶೀತಲ ಸಮರದಂತಹ ಪರಿಸ್ಥಿತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಭಾರತಕ್ಕೆ ಕಠಿಣ ಸವಾಲಾ ಗಿತ್ತು. ಆದಾಗ್ಯೂ, ಭಾರತವು ತನ್ನ ‘ವ್ಯೂಹಾತ್ಮಕ ಸ್ವಾಯತ್ತತೆ’ ನೀತಿಯನ್ನು ಅತ್ಯಂತ ಯಶಸ್ವಿ ಯಾಗಿ ನಿಭಾಯಿಸಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ‘ಕ್ವಾಡ್’ನಂತಹ ಕೂಟದಲ್ಲಿ ಸಕ್ರಿಯವಾಗಿರುವಂತೆಯೇ, ‘ಬ್ರಿಕ್ಸ್’ ವೇದಿಕೆಯಲ್ಲೂ ಪ್ರಭಾವಶಾಲಿ ನಾಯಕನಾಗಿ ಹೊರಹೊಮ್ಮಿರುವುದು ಭಾರತದ ಜಾಣ್ಮೆಗೆ, ವಿಶ್ವಗುರು ದೂರಾಲೋಚನೆಗೆ ಸ್ಪಷ್ಟ ಸಾಕ್ಷಿ. ಯಾವ ಗುಂಪಿಗೂ ಅಡಿಯಾಳಾಗದೆ, ಯಾರ ಪರ-ವಿರೋಧ ನಿಲುವು ತಾಳದೆ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದರ ಒಟ್ಟೊಟ್ಟಿಗೆ ಜಾಗತಿಕ ಒಳಿತಿಗಾಗಿ ಶ್ರಮಿಸುವ ಭಾರತದ ವಿಶಿಷ್ಟ ಮತ್ತು ಸ್ವತಂತ್ರ ವಿದೇಶಾಂಗ ನೀತಿಯು ಈ ಶೃಂಗಸಭೆಯಲ್ಲಿ ಅನಾವರಣಗೊಂಡಿದೆ.

ಚೀನಾದ ವಿಸ್ತರಣಾವಾದಿ ಆರ್ಥಿಕ ನೀತಿಗಳಿಗೆ ಪರ್ಯಾಯವಾಗಿ, ಪಾರದರ್ಶಕ ಮತ್ತು ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಭಾರತ ಮುಂದಿಟ್ಟಿದೆ. ಈ ಬ್ರಿಕ್ಸ್ ಶೃಂಗಸಭೆಯು ಭಾರತದ ರಾಜತಾಂತ್ರಿಕ ಪಕ್ವತೆಯನ್ನು, ಸಂಧಾನ ಕೌಶಲ್ಯವನ್ನು, ಚೌಕಾಶಿ ವಿಧಾನವನ್ನು, ಪರಿಪಕ್ವ ಸಮಾಲೋಚನಾ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ. ಎಲ್ಲಾ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಗತ್ತಿನ ದಕ್ಷಿಣದ ಭಾಗದ ದೇಶಗಳ ಕಳವಳಗಳಿಗೆ ಸ್ಪಂದಿಸುವ ಮೂಲಕ, ‘ಬಹುಧ್ರುವೀಯ ಜಗತ್ತಿನಲ್ಲಿ’ ಭಾರತವು ಅನಿವಾರ್ಯ ಆಧಾರಸ್ತಂಭವಾಗಿ ರೂಪುಗೊಳ್ಳುತ್ತಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ದೇಶೀಯ ತತ್ವವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಯಶಸ್ವಿಯಾಗಿ ಕೊಂಡೊಯ್ಯು ವಲ್ಲಿ ಈ ಶೃಂಗಸಭೆ ಮಹತ್ವದ ಮೈಲಿಗಗಿದೆ. ‘ವಿಶ್ವಗುರು’ ಸಂಕಲ್ಪ ಸಾಕಾರವಾಗಲಿ. ಭರವಸೆಯ ನಾಳೆಗಳು ನಮ್ಮದೆನಿಸಿವೆ.