ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಸಾಲಮನ್ನಾ,ನೀರಾವರಿ ಸೌಲಭ್ಯಗಳ ವಿಸ್ತರಣೆ, ಇವುಗಳಿ ಗಾಗಿ ಯಡಿಯೂರಪ್ಪನವರು ಅನೇಕ ಬಾರಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ನಿಂತಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ, ರೈತಪರ ನೀತಿಗಳನ್ನು ಜಾರಿಗೆ ತರುವತ್ತ ವಿಶೇಷ ಗಮನ ಹರಿಸಿದರು.

ವೀಕೆಂಡ್‌ ವಿತ್‌ ಮೋಹನ್

ರೈತರಿಗಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟ ಕರ್ನಾಟಕದ ನಾಯಕರಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡಾ ಒಬ್ಬರು. ಬೆಳೆಗಳಿಗೆ ನ್ಯಾಯಯುತ ಬೆಲೆ, ಸಾಲ ಮನ್ನಾ, ನೀರಾ ವರಿ ಸೌಲಭ್ಯದಂಥ ಸಮಸ್ಯೆಗಳಿಗಾಗಿ ಹೋರಾಡಿ, ಸಿಎಂ ಆದಾಗ ರೈತಪರ ನೀತಿ ಜಾರಿಗೆ ತಂದಿದ್ದರು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ರೈತಪರ ಹೋರಾಟ ಮತ್ತು ರೈತಪರ ಯೋಜನೆಗಳ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಎಂಬ ಹೆಸರಿಗೆ ವಿಶೇಷ ಸ್ಥಾನವಿದೆ. ತಮ್ಮ ರಾಜಕೀಯ ಜೀವನದ ಬಹುಪಾಲು ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡು ಹೋರಾಡಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದು ಬಂದ ಅವರು, ರೈತರ ಬದುಕಿನ ಕಷ್ಟಗಳನ್ನು ನೇರವಾಗಿ ಅನುಭವಿಸಿದ ಹಿನ್ನೆಲೆ ಅವರ ರಾಜಕೀಯ ದಿಕ್ಕನ್ನು ಸ್ಪಷ್ಟವಾಗಿ ರೂಪಿಸಿತ್ತು. ಯಡಿಯೂರಪ್ಪ ನವರ ಹೋರಾಟದ ಆರಂಭವೇ ರೈತರ ಸಮಸ್ಯೆಗಳ ವಿರುದ್ಧದ ಚಳುವಳಿಗಳಿಂದ ಪ್ರಾರಂಭ‌ ವಾಗಿತ್ತು.

ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಸಾಲಮನ್ನಾ, ನೀರಾವರಿ ಸೌಲಭ್ಯಗಳ ವಿಸ್ತರಣೆ, ಇವು ಗಳಿಗಾಗಿ ಯಡಿಯೂರಪ್ಪನವರು ಅನೇಕ ಬಾರಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ನಿಂತಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ, ರೈತಪರ ನೀತಿಗಳನ್ನು ಜಾರಿಗೆ ತರುವತ್ತ ವಿಶೇಷ ಗಮನ ಹರಿಸಿದರು.

ವಿಶೇಷವಾಗಿ ಅಂಕಿ ಅಂಶಗಳ ಮೂಲಕ ನೋಡಿದರೆ, ಅವರ ಆಡಳಿತದ ಪರಿಣಾಮ ಮತ್ತಷ್ಟು ಸ್ಪಷ್ಟವಾಗುತ್ತದೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಮೂರು ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಪ್ರತಿ ವರ್ಷ 10 ರಿಂದ 12 ಲಕ್ಷ ರೈತರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದರು, ಯಡಿಯೂರಪ್ಪನವರ ಈ ಯೋಜನೆಯಿಂದ ರೈತರ ಖಾಸಗಿ ಸಾಲಗಾರರ ಅವಲಂಬನೆ ದೊಡ್ಡಮಟ್ಟದಲ್ಲಿ ಕಡಿಮೆಯಾಗಿತ್ತು.

ಇದನ್ನೂ ಓದಿ: Mohan Vishwa Column: ಸೋಲಿನ ಹತಾಶೆ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ

‘ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆ’ ಜೊತೆಗೆ ರಾಜ್ಯ ಮಟ್ಟದ ಯೋಜನೆಗಳಡಿಯಲ್ಲಿ ಯಡಿಯೂರಪ್ಪ ಸರ್ಕಾರ ? 20000 ಕೋಟಿಗೂ ಹೆಚ್ಚು ಮೊತ್ತವನ್ನು ನೀರಾವರಿ ಯೋಜನೆಗಳಿಗೆ ಮೀಸಲಿಟ್ಟಿತು. ಇದರಿಂದ ಉತ್ತರ ಕರ್ನಾಟಕದ ಹಲವು ಬರಪೀಡಿತ ತಾಲ್ಲೂಕುಗಳಲ್ಲಿ ನೀರಾವರಿ ವ್ಯಾಪ್ತಿ ವಿಸ್ತರಿಸಿತು. ‘ಪ್ರಧಾಮಂತ್ರಿ ಫಸಲ್ ಭೀಮ’ ಯೋಜನೆಯಡಿ ಕರ್ನಾಟಕದಲ್ಲಿ ನೋಂದಾ ಯಿತ ರೈತರ ಸಂಖ್ಯೆ 30 -35 ಲಕ್ಷಕ್ಕೆ ಹೆಚ್ಚಾಯಿತು.

ಬರ ಮತ್ತು ಅತಿವೃಷ್ಠಿಯಿಂದ ನಷ್ಟವಾದ ಬೆಳೆಗಳಿಗೆ ಸಾವಿರಾರು ಕೋಟಿ ರೂಪಾಯಿ ಪರಿಹಾರ ವಿತರಿಸಲಾಯಿತು. 2019ರಲ್ಲಿ ಸಂಪೂರ್ಣ ಸಚಿವ ಸಂಪುಟ ರಚನೆಯಾಗುವ ಮುನ್ನವೇ ಯಡಿಯೂರಪ್ಪನವರು ಒಂಟಿಯಾಗಿ, ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ವಾರಗಟ್ಟಲೆ ಭೇಟಿ ನೀಡಿ ಅಧಿಕಾರಿಗಳ ಸಭೆ ಕರೆದು ಸ್ಥಳದಲ್ಲಿ ಪರಿಹಾರ ಘೋಷಿಸಿದ್ದರು.

ಕೋವಿಡ್ ಮಹಾಮಾರಿ ಜಗತ್ತಿನಾದ್ಯಂತ ಆರ್ಥಿಕ ವ್ಯವಸ್ಥೆಗಳಿಗೆ ಭಾರೀ ಹೊಡೆತ ನೀಡಿದಂತೆಯೇ, ಕರ್ನಾಟಕದಲ್ಲಿಯೂ ಅನೇಕ ವಲಯಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದವು. ಈ ಸಂದರ್ಭದಲ್ಲಿ ಅತ್ಯಂತ ಹಾನಿಗೊಳಗಾದವರಲ್ಲಿ ರೈತರು, ವಿಶೇಷವಾಗಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು.

ಸರಕು ಸಾಗಣೆ ಅಡಚಣೆ, ಮಾರುಕಟ್ಟೆಗಳ ಮುಚ್ಚುವಿಕೆ ಮತ್ತು ಬೇಡಿಕೆಯ ಕುಸಿತದಿಂದ ಅವರ ಆದಾಯ ಬಹಳ ಮಟ್ಟಿಗೆ ಕುಗ್ಗಿತು. ಇಂತಹ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರೈತರ ನೆರವಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು.

ಹೂವು ಹಾಗೂ ತೋಟಗಾರಿಕೆ ಬೆಳೆಗಾರರು ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು, ಪ್ರತಿ ಹೆಕ್ಟೇರ್‌ಗೆ 10000 ರು. ಪರಿಹಾರ ಘೋಷಿಸಲಾಯಿತು. ಮದುವೆ, ಸಮಾರಂಭಗಳು ನಿಲ್ಲುವು ದರಿಂದ ಹೂಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಮಾರುಕಟ್ಟೆ ವ್ಯವಸ್ಥೆ ಕುಸಿದ ಕಾರಣದಿಂದ ಸಾವಿರಾರು ರೈತರು ನಷ್ಟ ಅನುಭವಿಸಿದ್ದರು.

ಈ ನೆರವು ಅವರಿಗೆ ತಾತ್ಕಾಲಿಕ ಆರ್ಥಿಕ ನೆಮ್ಮದಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.ಇದರ ಜೊತೆಗೆ, ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಹಲವು ಪರಿಹಾರ ಪ್ಯಾಕೇಜುಗಳನ್ನು ಘೋಷಿಸಲಾಗಿತ್ತು. 2020ರಲ್ಲಿ 1610 ಕೋಟಿ ರು. ಮೊತ್ತದ ಸಮಗ್ರ ಪರಿಹಾರ ಪ್ಯಾಕೇಜು ಪ್ರಕಟಿಸಲಾಗಿತ್ತು.

ರೈತರು ಸೇರಿದಂತೆ ವಿವಿಧ ವಲಯಗಳಿಗೆ ಸಹಾಯ ನೀಡಲಾಯಿತು. 2021ರಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ 1250 ರು. ಕೋಟಿ ಮೊತ್ತದ ಮತ್ತೊಂದು ಪ್ಯಾಕೇಜು ಘೋಷಿಸಲಾಯಿತು. ಈ ಪ್ಯಾಕೇಜುಗಳಲ್ಲಿ ರೈತರು ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿಶೇಷ ಆದ್ಯತೆ ನೀಡಲಾ ಗಿತ್ತು.

ರೈತರ ಮೇಲೆ ಬಿದ್ದಿದ್ದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಸಾಲ ಸೌಲಭ್ಯಗಳಲ್ಲಿ ಕೂಡ ಯಡಿಯೂರಪ್ಪನವರ ಸರ್ಕಾರ ಸಡಿಲಿಕೆ ನೀಡಿತು. ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಪಾವತಿ ಅವಧಿಯನ್ನು ವಿಸ್ತರಿಸಲಾಗಿತ್ತು. ಹಣ್ಣು ಮತ್ತು ತರಕಾರಿ ಬೆಳೆಗಾರರು ಎದುರಿಸಿದ ವಿಶೇಷ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ವಿಶೇಷ ಪರಿಹಾರ ಕ್ರಮ ಗಳನ್ನು ಜಾರಿಗೆ ತಂದಿತ್ತು.

ಬೇಗ ಹಾಳಾಗುವ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ರೈತರು ನಷ್ಟ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಇಂತಹ ಬೆಳೆಗಾರರಿಗೆ ವಿಶೇಷ ಆರ್ಥಿಕ ನೆರವು ಘೋಷಿಸ ಲಾಗಿತ್ತು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರ 6000 ರು. ರೂಪಾಯಿ ನೇರವಾಗಿ ಖಾತೆಗೆ ಜಮೆ ಮಾಡಿದರೆ, ಯಡಿಯೂರಪ್ಪನವರ ಸರ್ಕಾರ 4000 ರು. ರೂಪಾಯಿ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಮೂಲಕ ರೈತರ ಹಣಕಾಸಿನ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ರೈತರಿಗೆ ಅಗತ್ಯವಿರುವ ಟ್ರಾಕ್ಟರ್‌ ಮತ್ತು ಹಾರ್ವೆಸ್ಟರ್ ಸೇರಿದಂತೆ ವಿವಿಧ ಕೃಷಿ ಉಪಕರಣಗಳ ಖರೀದಿಗೆ ಶೇ.40 ರಿಂದ 60ರವರೆಗೆ ಸಬ್ಸಿಡಿ ನೀಡುವ ಯೋಜನೆಗಳನ್ನು ಜಾರಿಗೆ ತಂದದ್ದು ಯಡಿಯೂರಪ್ಪನವರು. ಕೆರೆ ಮತ್ತು ಕೊಳಗಳ ಪುನಶ್ಚೇತನ ಯೋಜನೆ ‘ಕೆರೆ ಸಂಜೀವಿನಿ’, ರಾಜ್ಯದ ಸಾವಿರಾರು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿ 5000ಕ್ಕೂ ಹೆಚ್ಚು ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಯಿತು.

ಇದರಿಂದ ಭೂಗರ್ಭದ ಜಲಮಟ್ಟ ಹೆಚ್ಚಲು ಸಹಾಯವಾಯಿತು. ಈ ಎಲ್ಲಾ ಅಂಕಿ ಅಂಶಗಳು ಯಡಿಯೂರಪ್ಪನವರ ರೈತಪರ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತವೆ. ಯಡಿಯೂರಪ್ಪನವರ ಅವಽಯಲ್ಲಿ ರೈತಪರ ಯೋಜನೆಗಳ ಜೊತೆಗೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು, ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶಾಲಾ ಸಮವಸ್ತ್ರ, ಮತ್ತು ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಶಿಕ್ಷಣದ ಪ್ರವೇಶವನ್ನು ಸುಲಭಗೊಳಿಸಿತು.

ಹೆಣ್ಣುಮಕ್ಕಳ ಸಬಲೀಕರಣದ ವಿಷಯದಲ್ಲಿಯೂ ಯಡಿಯೂರಪ್ಪನವರ ಆಡಳಿತ ವಿಶೇಷ ಗಮನ ಹರಿಸಿತ್ತು. ‘ಭಾಗ್ಯಲಕ್ಷ್ಮಿ ಯೋಜನೆ’ ಮೂಲಕ, ಬಡ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳ ಭವಿಷ್ಯದ ಭದ್ರತೆಗಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ ಹೆಣ್ಣುಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟು, ಅವರ ಶಿಕ್ಷಣ ಹಾಗೂ ವಿವಾಹದ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲಾಗುತ್ತದೆ.ಯಡಿಯೂರಪ್ಪನವರ ಮೊದಲನೇ ಅವಧಿ ಯಲ್ಲಿ ಈ ಯೋಜನೆಯಲ್ಲಿ ನೋಂದಾಯಿಸಿದ ಫಲಾನುಭವಿಗಳಿಗೆ ಇಂದು ಬಾಂಡ್ ಗಳ ಮೂಲಕ ಆರ್ಥಿಕ ಸಹಾಯ ದೊರಕಿದ್ದು, ಅನೇಕ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ ಅನುಕೂಲವಾಗಿರುವ ಉದಾಹರಣೆಗಳು ಕಣ್ಣ ಮುಂದಿವೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೂಡ ಒತ್ತು ನೀಡಲಾಯಿತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ, ಸುರಕ್ಷಿತ ಪರಿಸರ ಮತ್ತು ಸೈಕಲ್ ವಿತರಣೆ ಕಾರ್ಯಕ್ರಮಗಳು ಹೆಣ್ಣುಮಕ್ಕಳ ಶಾಲಾ ಹಾಜರಾತಿಯನ್ನು ಹೆಚ್ಚಿಸಲು ನೆರವಾಗಿದ್ದವು.

ಮಹಿಳೆಯರ ಸ್ವಾವಲಂಬನೆಗಾಗಿ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಮತ್ತು ಸಬ್ಸಿಡಿ ನೀಡುವ ಯೋಜನೆಗಳನ್ನು ಯಡಿಯೂರಪ್ಪನವರ ಅವಧಿಯಲ್ಲಿ ಮತ್ತಷ್ಟು ಬಲಪಡಿಸಲಾಯಿತು.ಈ ಕ್ರಮಗಳಿಂದ ಸಾವಿರಾರು ಮಹಿಳೆಯರು ಸಣ್ಣ ಉದ್ಯಮಗಳನ್ನು ಆರಂಭಿಸಲು ಸಾಧ್ಯವಾಯಿತು.

ಗ್ರಾಮೀಣ ಪ್ರದೇಶದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸಲು ಈ ಯೋಜನೆಗಳು ಸಹಾಯ ಮಾಡಿದವು. ಆರೋಗ್ಯ ಕ್ಷೇತ್ರದಲ್ಲಿಯೂ ಹೆಣ್ಣುಮಕ್ಕಳಿಗಾಗಿ ಕೆಲವು ಮಹತ್ವದ ಕ್ರಮ ಗಳನ್ನು ಕೈಗೊಳ್ಳಲಾಯಿತು. ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆ ಗಳನ್ನು ಒದಗಿಸುವ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಯಿತು.

ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸೂಚ್ಯಂಕಗಳಲ್ಲಿ ಸುಧಾರಣೆ ಕಂಡಿರುವ ವರದಿ ಗಳಿವೆ. ಯಡಿಯೂರಪ್ಪನವರ ನಾಯಕತ್ವದ ಮತ್ತೊಂದು ವಿಶೇಷತೆ ಎಂದರೆ ಅವರು ನೆಲಮಟ್ಟದ ಹೋರಾಟಗಾರರಾಗಿದ್ದರು. ರೈತರ ಪ್ರತಿಭಟನೆಗಳಲ್ಲಿ ನೇರವಾಗಿ ಭಾಗವಹಿಸುವುದು, ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದು ಮತ್ತು ಸ್ಥಳದ ಪರಿಹಾರ ಹುಡುಕುವ ಪ್ರಯತ್ನ ಮಾಡುವುದು ಅವರ ಕಾರ್ಯಶೈಲಿಯಾಗಿದೆ. ಅವರ ಈ ಗುಣದಿಂದ ರೈತರ ವಿಶ್ವಾಸವನ್ನು ಗಳಿಸಿದ್ದರು.

ಅವಶ್ಯಕವಾಗಿದ್ದಾಗ ಸರ್ಕಾರದ ಕೆಲವು ನೀತಿಗಳ ವಿರುದ್ಧವೂ ಅವರು ಧ್ವನಿ ಎತ್ತಿದ ಅನೇಕ ಉದಾಹರಣೆಗಳಿವೆ. ರೈತರಿಗೆ ಅನಾನುಕೂಲಕರವಾಗಿರುವ ನೀತಿಗಳನ್ನು ವಿರೋಧಿಸುವಲ್ಲಿ ಅವರು ಹಿಂದೇಟು ಹಾಕಲಿಲ್ಲ. ಯಡಿಯೂರಪ್ಪನವರು ರೈತರ ಸಮಸ್ಯೆಗಳಿಗೆ ಧ್ವನಿಯಾದ ನಾಯಕರೆಂಬು ದನ್ನು, ವಿರೋಧಪಕ್ಷದಲ್ಲಿದ್ದಾಗ ಅವರು ಕೈಗೊಂಡ ಹೋರಾಟಗಳು ಮತ್ತು ಅವರ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳ ಅನುಷ್ಠಾನದ ಅಂಕಿ ಅಂಶಗಳ ಮೂಲಕ ಪರಿಣಾಮಕಾರಿಯಾಗಿ ಹೇಳಬಹುದು. ಅವರ ಆಡಳಿತದಲ್ಲಿ ಜಾರಿಗೆ ಬಂದ ಅನೇಕ ಯೋಜನೆಗಳು ತಾತ್ಕಾಲಿಕ ಪರಿಹಾರ ಮಾತ್ರವಲ್ಲದೆ, ಕೃಷಿ ಕ್ಷೇತ್ರದ ಸ್ಥಿರತೆಗೆ ದಾರಿ ತೆರೆದಿವೆ ಎಂಬುದು ಸತ್ಯ.

ರೈತರ ಯೋಜನೆಗಳ ಜೊತೆಗೆ, ವಿದ್ಯಾರ್ಥಿಗಳು ಮತ್ತು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಒತ್ತು ನೀಡಿ ಆಡಳಿತ ನೀಡಿದ ನಾಯಕರೆಂಬ ಗುರುತು ಯಡಿಯೂರಪ್ಪನವರಿಗೆ ಲಭಿಸಿದೆ.

ಮೋಹನ್‌ ವಿಶ್ವ

View all posts by this author