ರೈತ ಭಾರತ
ಪ್ರಹ್ಲಾದ್ ಜೋಶಿ & ಶಿವರಾಜ್ ಸಿಂಗ್ ಚೌಹಾಣ್
ವಿಕಸಿತ ಭಾರತದತ್ತ ಸಾಗುವ ನಮ್ಮ ಪಯಣವು ಹಳ್ಳಿಗಳ ಸಮೃದ್ಧಿಯನ್ನು ಆಧರಿಸಿರಬೇಕು. ದೇಶಕ್ಕೆ ಆಹಾರ ಒದಗಿಸುವ ರೈತರು, ಆರ್ಥಿಕ ಬೆಳವಣಿಗೆಯಿಂದ ಸೃಷ್ಟಿಯಾಗುವ ಅವಕಾಶಗಳಲ್ಲಿ ಪೂರ್ಣ ಪಾಲು ಪಡೆಯಲು ಅರ್ಹರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅನ್ನದಾತರನ್ನು ಸಬಲಗೊಳಿಸುವುದು ಆಡಳಿತದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
‘ಅಗ್ರಿ-ಪಿವಿ’ ಎಂದೂ ಕರೆಯಲಾಗುವ ಅಗ್ರಿ ವೋಲ್ಟಾಯಿಕ್ಸ್, ರೈತರು ತಮ್ಮ ಜಮೀನಿನಲ್ಲಿ ಕೃಷಿಯನ್ನು ಮುಂದುವರಿಸುತ್ತಲೇ ಶುದ್ಧ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ಮೂಲಕ ಆ ಉದ್ದೇಶವನ್ನು ಮುನ್ನಡೆಸುವ ಅವಕಾಶವನ್ನು ಒದಗಿಸುತ್ತದೆ.
ದ್ಯುತಿವಿದ್ಯುಜ್ಜನಕ (ಫೋಟೋವೋಲ್ಟಾಯಿಕ್) ರಚನೆಗಳು ವಾತಾವರಣದಲ್ಲಿ ತೇವಾಂಶದ ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ಬೆಳೆಗಳ ಮೇಲ್ಭಾಗದ ಉಷ್ಣತೆಯನ್ನು, ಸಸ್ಯಗಳ ಮೂಲಕ ನೀರಿನ ಆವಿಯಾಗುವಿಕೆಯ ಬೇಡಿಕೆಯನ್ನು ಹಾಗೂ ಮಣ್ಣಿನ ತೇವಾಂಶದ ನಷ್ಟವನ್ನು ಕಡಿಮೆ ಮಾಡುತ್ತವೆ. ಇದರಿಂದ ಬೆಳೆಗಳಿಗೆ ಅನುಕೂಲಕರವಾದ ಸೂಕ್ಷ್ಮ ಹವಾಮಾನ ಸೃಷ್ಟಿಯಾಗುತ್ತದೆ.
ವಾಸ್ತವವಾಗಿ, 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸುವತ್ತ ಭಾರತ ಸಾಗುತ್ತಿರುವ ಸಂದರ್ಭದಲ್ಲಿ, ಕೃಷಿ ಕ್ಷೇತ್ರವು ಕೃಷಿ ಭೂಮಿಗಳಲ್ಲಿಯೇ ಸೌರಶಕ್ತಿಯನ್ನು ಬಳಸಿಕೊಳ್ಳುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಇದೇ ವೇಳೆ, ಭಾರತ ಸರ್ಕಾರದ ಪಿಎಂ-ಕುಸುಮ್ ಯೋಜನೆಯಡಿ ಕೈಗೊಂಡಿರುವ ಯಶಸ್ವಿ ಪ್ರಯತ್ನಗಳು ಈಗಾಗಲೇ ನೀರಾವರಿಯನ್ನು ಸೌರಶಕ್ತಿಗೆ ಪರಿವರ್ತಿಸುವ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಇದನ್ನೂ ಓದಿ: Shashidhara Halady Column: ಮನೆಯ ಸುತ್ತಮುತ್ತ ಮುದ ನೀಡುವ ಮರಗಳು !
ಇದರಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುವುದರ ಜೊತೆಗೆ ಪರಿಸರಸ್ನೇಹಿ ಮತ್ತು ಸುಸ್ಥಿರ ಪದ್ಧತಿಗಳಿಗೆ ಉತ್ತೇಜನ ದೊರೆಯುತ್ತಿದೆ. 2026ರ ಅಕ್ಟೋಬರ್ 21ರಿಂದ 23ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಏಳನೇ ಅಗ್ರಿವೋಲ್ಟಾಯಿಕ್ಸ್ ವಿಶ್ವ ಸಮ್ಮೇಳನವನ್ನು ಭಾರತ ಆಯೋಜಿಸಲಿದೆ.
‘ಜಾಗತಿಕ ದಕ್ಷಿಣಕ್ಕೆ ಶಕ್ತಿ ತುಂಬುವಿಕೆ’ ಎಂಬ ಸಮ್ಮೇಳನದ ವಿಷಯವು ಭಾರತ ವಹಿಸಲು ಸಿದ್ಧವಾಗಿರುವ ಜವಾಬ್ದಾರಿಯನ್ನು ನೇರವಾಗಿ ಪ್ರತಿಬಿಂಬಿಸುತ್ತದೆ. ಕೃಷಿ ನಾವೀನ್ಯತೆ ಮತ್ತು ಇಂಧನ ಪರಿವರ್ತನೆಯ ಪ್ರಯೋಜನಗಳು ಭಾರತದ ಒಟ್ಟು ರೈತರಲ್ಲಿ ಸುಮಾರು ಶೇ. 86ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ.
ಭಾರತದ ಹಳ್ಳಿಗಳಿಗೆ ಅನುಕೂಲವಾಗುವ ಹಾಗೂ ಜಗತ್ತಿನಾದ್ಯಂತದ ಅಭಿವೃದ್ಧಿಶೀಲ ದೇಶಗಳಿಗೆ ಪ್ರಾಯೋಗಿಕ ಪಾಠಗಳನ್ನು ಒದಗಿಸುವ ಮಾರ್ಗವನ್ನು ರೂಪಿಸಲು ಈ ಸಮ್ಮೇಳನ ನೆರವಾಗುತ್ತದೆ. ಕೃಷಿಗೆ ಸೂಕ್ತವಾದ ರಚನೆಗಳು ಮತ್ತು ಅಂತರ ವ್ಯವಸ್ಥೆಗಳ ಮೂಲಕ ಒಂದೇ ಭೂಮಿಯಲ್ಲಿ ಬೆಳೆ ಬೆಳೆಯುವುದರ ಜೊತೆಗೆ ಸೌರ ವಿದ್ಯುತ್ ಉತ್ಪಾದಿಸುವುದೇ ಅಗ್ರಿವೋಲ್ಟಾಯಿಕ್ಸ್ನ ಉದ್ದೇಶವಾಗಿದೆ.
ಇದರಿಂದ ಕೃಷಿಕರಿಗೆ ವಿದ್ಯುತ್ ಮಾರಾಟದ ಮೂಲಕ ಹೆಚ್ಚುವರಿ ಆದಾಯದ ಮೂಲ ದೊರೆಯು ತ್ತದೆ. ಸೌರಶಕ್ತಿಯು ಡೀಸೆಲ್ ಅಥವಾ ಖರೀದಿಸಿದ ವಿದ್ಯುತ್ಗೆ ಪರ್ಯಾಯವಾದಾಗ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಯಡಿ ಸೃಷ್ಟಿಯಾಗುವ ಅನುಕೂಲಕರ ಸೂಕ್ಷ್ಮ ಹವಾಮಾನವು ಅತಿಯಾದ ಶಾಖ, ಬರ, ತೀವ್ರ ಸೌರ ವಿಕಿರಣ ಮತ್ತು ಆಲಿಕಲ್ಲು ಮಳೆಯ ಪರಿಣಾಮಗಳಿಂದ ಬೆಳೆಗಳಿಗೆ ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.
ಭಾರತದ ಇಂಧನ ಸಂಪತ್ತಿನ ಸೃಷ್ಟಿಯಲ್ಲಿ ರೈತರು ಪಾಲ್ಗೊಳ್ಳಬೇಕು ಮತ್ತು ಅದರ ಪ್ರಯೋಜನ ಪಡೆಯಬೇಕು. ಈ ಮಹತ್ವಾಕಾಂಕ್ಷೆಯು ಆತ್ಮನಿರ್ಭರ ಭಾರತದ ವಿಶಾಲ ದೃಷ್ಟಿಕೋನದ ಭಾಗ ವಾಗಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ವಿಸ್ತರಣೆಯು, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ಮತ್ತು ನಾವೀನ್ಯತೆಗೆ ಪ್ರೋತ್ಸಾಹ ನೀಡುವ ನೀತಿಗಳೊಂದಿಗೆ ಸ್ಥಿರ ರಾಜಕೀಯ ನಾಯಕತ್ವ ಕೈಜೋಡಿಸಿದಾಗ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿದೆ.
ದೇಶೀಯ ಉತ್ಪಾದನೆ, ಪಾರದರ್ಶಕ ಖರೀದಿ ಪ್ರಕ್ರಿಯೆಗಳು ಮತ್ತು ಇಂಧನ ಮೂಲಸೌಕರ್ಯದಲ್ಲಿನ ಹೂಡಿಕೆಗಳು ಮುಂದಿನ ಬೆಳವಣಿಗೆಗೆ ಭದ್ರ ಬುನಾದಿ ಹಾಕಿವೆ. ಅಗ್ರಿವೋಲ್ಟಾಯಿಕ್ಸ್ ಮೂಲಕ ಈ ಅವಕಾಶಗಳನ್ನು ಗ್ರಾಮೀಣ ಆರ್ಥಿಕತೆಯ ಇನ್ನಷ್ಟು ವಲಯಗಳಿಗೆ ವಿಸ್ತರಿಸಬಹುದು. ಇದರಲ್ಲಿ ಸೌರ ವ್ಯವಸ್ಥೆಗಳ ಅಳವಡಿಕೆ, ನಿರ್ವಹಣೆ ಮತ್ತು ಕೃಷಿ ಸೇವೆಗಳ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶ ಗಳೂ ಸೇರಿವೆ.
ಭಾರತದಲ್ಲಿ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಸೂಕ್ತ ಬೆಳೆಗಳ ಆಯ್ಕೆ ಅತ್ಯಗತ್ಯವಾಗಿದೆ. ಆದ್ದರಿಂದ, ಬೆಳೆಗಳ ಆಯ್ಕೆಯಲ್ಲಿ ನೆರಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ, ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ರೂಪರಚನೆಯನ್ನು ಬದಲಾಯಿಸಿಕೊಳ್ಳುವ ಗುಣ ಮತ್ತು ಸೂರ್ಯನ ಬೆಳಕು ಮಧ್ಯಂತರವಾಗಿ ದೊರೆಯುವ ಸಂದರ್ಭದಲ್ಲಿಯೂ ಸ್ಥಿರ ಇಳುವರಿ ನೀಡುವ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು.
ಸಾಲುಗಳ ನಡುವಿನ ಜಾಗವನ್ನು ಬಳಸಿಕೊಂಡು ಬೆಳೆ ಬೆಳೆಯುವುದು, ಸಾಕಷ್ಟು ನೀರಾವರಿ ಮತ್ತು ಪೋಷಕಾಂಶಗಳನ್ನು ಒದಗಿಸುವುದು ಹಾಗೂ ಸೂಕ್ತ ಬೆಳೆ ಪರಿವರ್ತನೆ ಪದ್ಧತಿಗಳನ್ನು ಅನುಸರಿಸು ವುದು ಸೇರಿದಂತೆ ಸಮರ್ಪಕ ಕೃಷಿ ನಿರ್ವಹಣೆಯು, ಉತ್ಪಾದಕತೆಯನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ಅಗ್ರಿವೋಲ್ಟಾಯಿಕ್ಸ್ ವಿನ್ಯಾಸಗಳಲ್ಲಿ ಸಾಮಾನ್ಯವಾಗಿ ಬೆಳೆಗಳ ಮೇಲ್ಭಾಗಕ್ಕೆ ತಲುಪುವ ನೈಸರ್ಗಿಕ ಸೂರ್ಯನ ಬೆಳಕಿನ ಶೇ.70ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಉಳಿಸಿಕೊಳ್ಳುವ ಗುರಿ ಇರಬೇಕು. ಬೆಳಕಿನ ಬದಲಾವಣೆಗಳಿಗೆ ಸೂಕ್ಷ್ಮವಾಗಿರುವ ಬೆಳವಣಿಗೆಯ ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಸೌರ ಫಲಕಗಳು ಹೆಚ್ಚುವರಿ ನಮ್ಯತೆಯನ್ನು ಒದಗಿಸಬಹುದು.
ಒಂದು ಗ್ರಾಮಕ್ಕೆ ಉತ್ಪಾದಕ ಕೃಷಿ ಭೂಮಿ, ವಿಶ್ವಾಸಾರ್ಹ ಇಂಧನ ಮತ್ತು ಮಾರುಕಟ್ಟೆ ಸಂಪರ್ಕ ಅಗತ್ಯ. ಆದ್ದರಿಂದ, ರಾಜ್ಯ ಸರ್ಕಾರಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗ ದೊಂದಿಗೆ ಕೃಷಿ ಮತ್ತು ಇಂಧನ ಇಲಾಖೆಗಳು ಒಟ್ಟಾಗಿ ಯೋಜನೆ ರೂಪಿಸಬೇಕು. ಈ ಎಲ್ಲ ನಿರ್ಧಾರಗಳ ಫಲಿತಾಂಶವನ್ನು ರೈತರು ತಮ್ಮದೇ ಜಮೀನಿನಲ್ಲಿ ಅನುಭವಿಸುತ್ತಾರೆ. ನಮ್ಮ ಸಂಸ್ಥೆಗಳೂ ಇದೇ ರೀತಿಯ ಸಮನ್ವಯ ಮನೋಭಾವದಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.
ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮದಲ್ಲಿ, ಪಿಎಂ-ಕುಸುಮ್ ಯೋಜನೆಯ ಮುಂದಿನ ಹಂತವು ಅಗ್ರಿವೋಲ್ಟಾಯಿಕ್ಸ್ಗಾಗಿ ಮೀಸಲಾದ ಘಟಕವೊಂದನ್ನು ಹೊಂದಿರುವುದಾಗಿ ಘೋಷಿಸ ಲಾಯಿತು. ಇದರ ಉದ್ದೇಶ ಸ್ಪಷ್ಟವಾಗಿದೆ: ಈ ಉದಯೋನ್ಮುಖ ಕ್ಷೇತ್ರದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವಕಾಶ ದೊರೆಯಬೇಕು. ಹೀಗಾಗಿ, ಅಗ್ರಿವೋಲ್ಟಾಯಿಕ್ಸ್ಗೆ ಸೂಕ್ತವಾದ ಸಣ್ಣ ಮತ್ತು ಅತಿ ಸಣ್ಣ ರೈತರ ಗುಂಪುಗಳ ಜಂಟಿ ಅಥವಾ ಸಾಮಾನ್ಯ ಕೃಷಿ ಭೂಮಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಾಗಿದೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳು, ಸಹಕಾರ ಸಂಘಗಳು ಮತ್ತು ಪಂಚಾಯತ್ ಗಳನ್ನು ಸಜ್ಜುಗೊಳಿಸಿ ಸಬಲಗೊಳಿಸಬೇಕು. ಈ ಉದ್ದೇಶವನ್ನು ಕಾರ್ಯಸಾಧ್ಯ ಯೋಜನೆಗಳಾಗಿ ಪರಿವರ್ತಿಸಲು ಕೈಗೆಟುಕುವ ಹಣಕಾಸು ನೆರವು, ಸೂಕ್ತ ವಿದ್ಯುತ್ ಸಂಪರ್ಕ ವ್ಯವಸ್ಥೆಗಳು ಮತ್ತು ವಿದ್ಯುತ್ ಮಾರಾಟಕ್ಕೆ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳು ಅಗತ್ಯವಿದೆ.
ಪ್ರತಿಯೊಂದು ಹಂತದಲ್ಲಿಯೂ ರೈತರ ವಿಶ್ವಾಸವೇ ಮಾರ್ಗದರ್ಶಿಯಾಗಿರಬೇಕು. ಭೂಮಿ ಎಂಬುದು ಜೀವನೋಪಾಯದ ಮೂಲ ಮಾತ್ರವಲ್ಲ; ಅದು ಭದ್ರತೆ ಮತ್ತು ಸ್ವಂತದ ಭಾವನೆಯ ಸಂಕೇತವೂ ಹೌದು. ರೈತರು ಒಪ್ಪಂದದ ಷರತ್ತುಗಳನ್ನು ಅರ್ಥಮಾಡಿಕೊಳ್ಳಲು, ತಮಗೆ ಎಷ್ಟು ಆದಾಯ ದೊರೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಮತ್ತು ಪ್ರತಿಯೊಂದು ಜವಾಬ್ದಾರಿ ಯನ್ನು ಯಾರು ನಿರ್ವಹಿಸುತ್ತಾರೆ ಎಂಬು ದನ್ನು ಅರಿಯಲು ಸಾಧ್ಯವಾಗಬೇಕು. ಭೂಮಿಯ ಮಾಲೀಕತ್ವಕ್ಕೆ ಯಾವುದೇ ಧಕ್ಕೆಯಾಗಬಾರದು.
ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತರು ಮತ್ತು ಮಹಿಳಾ ರೈತರಿಗೂ ಯೋಜನೆಗಳ ವಿನ್ಯಾಸ ಹಾಗೂ ಪ್ರಯೋಜನಗಳ ಹಂಚಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ದೊರೆಯ ಬೇಕು. ರೈತರಿಗೆ ಈ ಯೋಜನೆಗಳಲ್ಲಿ ತಮಗೂ ನ್ಯಾಯಯುತ ಪಾಲಿದೆ ಎಂಬುದು ಸ್ಪಷ್ಟವಾದಾಗ ಮಾತ್ರ ಹೂಡಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡುತ್ತದೆ. ಕೃಷಿ ಮುಂದುವರಿಯುವುದು ಈ ವಿಶ್ವಾಸಕ್ಕೆ ಅತ್ಯಗತ್ಯ. ಅಗ್ರಿವೋಲ್ಟಾಯಿP ಯೋಜನೆ ಎಂದು ಹೇಳಿಕೊಳ್ಳುವ ಯಾವುದೇ ಯೋಜನೆಯು ಕೃಷಿಯನ್ನು ಸುಸ್ಥಿರವಾಗಿಡಬೇಕು. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ರಚನೆಗಳನ್ನು ವಿನ್ಯಾಸಗೊಳಿಸ ಬೇಕು.
ಸೌರ ಫಲಕಗಳ ಆಯ್ಕೆ ಮತ್ತು ಅವುಗಳ ನಡುವಿನ ಅಂತರವು ಬೆಳೆಗಳ ಅಗತ್ಯಗಳಿಗೆ ಅನುಗುಣ ವಾಗಿರಬೇಕು. ಸೌರ ಫಲಕಗಳ ವಿನ್ಯಾಸ ಮತ್ತು ಅವು ಆಕ್ರಮಿಸುವ ಜಾಗದ ಪ್ರಮಾಣವನ್ನು ಆಧರಿಸಿ ಕೃಷಿ ಪದ್ಧತಿಗಳ ಸಮಗ್ರ ಮಾರ್ಗಸೂಚಿಯನ್ನು ಪ್ರಮಾಣೀಕರಿಸಬೇಕು. ಬೆಳೆಗಳ ನಡುವಿನ ಅಂತರದಲ್ಲಿ ಕೈಗೊಳ್ಳುವ ಕೃಷಿ ಕಾರ್ಯಗಳಿಗೆ ಕಡಿಮೆ ತೆರವು ಜಾಗ ಸಾಕಾಗುವಂತಹ ಸುಧಾರಿತ ಮತ್ತು ಸಣ್ಣ ಕೃಷಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಅನುಕೂಲ ಕಲ್ಪಿಸಬೇಕು.
ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಸೂಕ್ತವಾಗಿ ವಿನ್ಯಾಸಗೊಳಿಸಿದ ನೆರಳು ಕೆಲವು ಬೆಳೆಗಳು ಶಾಖ ಮತ್ತು ನೀರಿನ ಕೊರತೆಯ ಒತ್ತಡವನ್ನು ಎದುರಿಸಲು ನೆರವಾಗುತ್ತದೆ. ಅದೇ ವೇಳೆ, ಸೂಕ್ತವಲ್ಲದ ನೆರಳು ಬೆಳೆ ಇಳುವರಿಯನ್ನು ಕಡಿಮೆ ಮಾಡುತ್ತದೆ. ಜವಾಬ್ದಾರಿಯುತ ನಾಯಕತ್ವವೆಂದರೆ ಈ ಎರಡೂ ಸಂಗತಿ ಗಳನ್ನು ಒಪ್ಪಿಕೊಂಡು, ಸ್ಥಳೀಯ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲ್ಪಟ್ಟ ವ್ಯವಸ್ಥೆ ಗಳನ್ನು ಶಿಫಾರಸು ಮಾಡುವುದಾಗಿದೆ.
ಭಾರತದಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈಗಾಗಲೇ ಅಮೂಲ್ಯ ಅನುಭವ ಗಳಿವೆ. ಜೋಧಪುರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಸೆಂಟ್ರಲ್ ಅರಿಡ್ ಝೋನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೌರ ವಿದ್ಯುತ್ ಉತ್ಪಾದನೆ ಮತ್ತು ಮಳೆನೀರು ಕೊಯ್ಲಿನ ಜೊತೆಗೆ ಕೃಷಿ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಿದೆ. ಪುಣೆಯಲ್ಲಿರುವ ಬಿಎಐಎಫ್ʼನ ರೂರಲ್ ಇನ್ನೋವೇಶನ್ ಸೆಂಟರ್ ವಿವಿಧ ಬೆಳೆಗಳಲ್ಲಿ ವಿಭಿನ್ನ ವಿನ್ಯಾಸಗಳನ್ನು ಪರೀಕ್ಷಿಸುತ್ತಿದೆ.
ಭಾರತ ಸರ್ಕಾರವು 2025ರಲ್ಲಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿ 100 ಕಿಲೋವ್ಯಾಟ್ ಸಾಮರ್ಥ್ಯದ ಅಗ್ರಿ-ಫೋಟೋವೋಲ್ಟಾಯಿಕ್ಸ್ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅಗ್ರಿವೋಲ್ಟಾಯಿಕ್ಸ್ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಂಶೋಧನಾ ಕಾರ್ಯಕ್ರಮ ವನ್ನು ಆರಂಭಿಸುವ ಉಪಕ್ರಮ ಕೈಗೊಂಡಿದೆ. ಈ ಉತ್ಕೃಷ್ಟತಾ ಕೇಂದ್ರವು ಹೊಸ ಮತ್ತು ನವೀಕರಿಸಬಹು ದಾದ ಇಂಧನ ಸಚಿವಾಲಯದ ಮಾರ್ಗದರ್ಶನದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (ಎನ್ಐಎಸ್ಇ) ಜಂಟಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಕೇಂದ್ರವು ಸೂಕ್ತ ಬೆಳೆಗಳು ಮತ್ತು ಸೌರ ಫಲಕಗಳ ಅತ್ಯುತ್ತಮ ಸಂಯೋಜನೆಯನ್ನು ಗುರುತಿಸಲು, ಇಳುವರಿ ನಷ್ಟವನ್ನು ಕನಿಷ್ಠ ಮಟ್ಟದಲ್ಲಿಡುವ ಬೆಳೆಗಳ ಪಟ್ಟಿಯನ್ನು ರೂಪಿಸಲು ಹಾಗೂ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಗೆ ಹೊಂದಿಕೊಳ್ಳುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತಿದೆ. ಈ ಸಂಶೋಧನಾ ಪ್ರಯೋಗಗಳಲ್ಲಿ ಹೂಕೋಸು, ಮೂಲಂಗಿ, ಪಡವಲಕಾಯಿ, ಪಾಲಕ್ ಸೊಪ್ಪು, ಸೋರೇಕಾಯಿ ಮತ್ತು ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಬಳಸಲಾಗುತ್ತಿದೆ.
ಮುಂದಿನ ಎರಡು ವರ್ಷಗಳಲ್ಲಿ ಈ ಉತ್ಕೃಷ್ಟತಾ ಕೇಂದ್ರದಿಂದ ಸಂಗ್ರಹವಾಗುವ ದತ್ತಾಂಶವು ಭಾರತದ ಪ್ರಮುಖ ಸಂಭಾವ್ಯ ಪ್ರದೇಶಗಳಲ್ಲಿ ಯಾವ ಬೆಳೆಗಳು ಸೂಕ್ತವಾಗಿವೆ, ಯಾವ ಪರಿಸ್ಥಿತಿ ಗಳನ್ನು ಪಾಲಿಸಬೇಕು ಮತ್ತು ಕೃಷಿ ಭೂಮಿ ಹಾಗೂ ಸೌರ ಫಲಕಗಳನ್ನು ಹೇಗೆ ಅತ್ಯುತ್ತಮವಾಗಿ ಸಂಯೋಜಿಸಬೇಕು ಎಂಬುದರ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಲು ನೆರವಾಗಲಿದೆ. ಇದಲ್ಲದೆ, ಭಾರತದಲ್ಲಿ ಅಗ್ರಿವೋಲ್ಟಾಯಿP ವ್ಯವಸ್ಥೆಗಳ ಕಾರ್ಯಾಚರಣೆಗೆ ಸದೃಢ ಚೌಕಟ್ಟನ್ನು ರೂಪಿಸಲು ಈ ಕೇಂದ್ರ ನೆರವಾಗಲಿದೆ. ಭಾರತದ ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಅಗ್ರಿವೋಲ್ಟಾಯಿP ವ್ಯವಸ್ಥೆಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅಗತ್ಯವಾದ ಮಾಹಿತಿಗಳು, ಮಾರ್ಗಸೂಚಿಗಳು ಮತ್ತು ತರಬೇತಿ ಅವಕಾಶಗಳನ್ನು ಒದಗಿಸುವ ಮೂಲಕ ರೈತರ ನಿವ್ವಳ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಭಾರತ ಸರ್ಕಾರದ ಕೃಷಿ ಸಂಶೋಧನಾ ಮಂಡಳಿಯ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿeನ ಕೇಂದ್ರಗಳು ಈ ಸಂಶೋಧನಾ ಕಾರ್ಯವನ್ನು ವಿವಿಧ ಕೃಷಿ-ಹವಾಮಾನ ವಲಯಗಳಿಗೆ ವಿಸ್ತರಿಸಲು ನೆರವಾಗಬಹುದು. ಸಂಶೋಧನೆಯಿಂದ ದೊರೆಯುವ ಫಲಿತಾಂಶಗಳು ರೈತರಿಗೆ ಸುಲಭವಾಗಿ ಅರ್ಥವಾಗುವ ಮತ್ತು ಅನುಷ್ಠಾನಗೊಳಿಸಬಹುದಾದ ರೂಪದಲ್ಲಿ ತಲುಪಬೇಕು. ಈ ಯೋಜನೆಗಳ ಯಶಸ್ಸನ್ನು ಅಳೆಯುವಾಗ ರೈತರ ನಿವ್ವಳ ಆದಾಯ ಮತ್ತು ಕೃಷಿ ಉತ್ಪಾದನೆಯ ಜೊತೆಗೆ ಉತ್ಪಾದನೆಯಾದ ವಿದ್ಯುತ್ ಪ್ರಮಾಣವನ್ನೂ ಪರಿಗಣಿಸಬೇಕು.
ಜಾಗತಿಕ ದಕ್ಷಿಣದ ದೇಶಗಳೊಂದಿಗಿನ ಭಾರತದ ಸಹಭಾಗಿತ್ವವನ್ನು ಮತ್ತಷ್ಟು ಗಾಢಗೊಳಿಸಲು ಇದೊಂದು ಅವಕಾಶವೂ ಹೌದು. ಭಾರತ ಮತ್ತು - ಜಂಟಿಯಾಗಿ ಆರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸೌರಶಕ್ತಿ ಕ್ಷೇತ್ರದಲ್ಲಿ ಸಹಕಾರಕ್ಕೆ ಈಗಾಗಲೇ ಭದ್ರ ಬುನಾದಿಯನ್ನು ಒದಗಿಸಿದೆ. ಅಗ್ರಿವೋಲ್ಟಾಯಿP ಮೂಲಕ ಜಂಟಿ ಕ್ಷೇತ್ರ ಸಂಶೋಧನೆ, ತರಬೇತಿ ಮತ್ತು ಪ್ರಾಯೋಗಿಕ ಅನುಭವಗಳ ವಿನಿಮಯಕ್ಕೆ ಮತ್ತಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ.
ಭೂಮಿ, ನೀರು ಮತ್ತು ಗ್ರಾಮೀಣ ಆದಾಯದ ಮೇಲಿನ ಒತ್ತಡವನ್ನು ಎದುರಿಸುತ್ತಿರುವ ದೇಶಗಳಿಗೆ ತಮ್ಮ ಪರಿಸ್ಥಿತಿಗೆ ಹೊಂದುವ ಪರಿಹಾರಗಳು ಲಭ್ಯವಾಗಬೇಕು. ಸಂಶೋಧನಾ ಪುರಾವೆಗಳು ಮತ್ತು ಬೇಡಿಕೆ ಹೆಚ್ಚಿದಂತೆ ಭಾರತದ ವಿಜ್ಞಾನಿಗಳು, ತಯಾರಕರು ಮತ್ತು ಗ್ರಾಮೀಣ ಉದ್ಯಮಿಗಳು ಈ ಪ್ರಯತ್ನಕ್ಕೆ ಕೊಡುಗೆ ನೀಡಬಹುದು.
(ಲೇಖಕರು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು)