ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಒಂದು ಊರಿನ ದೇವಾಲಯದ ಸ್ಥಿತಿ ಅಲ್ಲಿನ ಜನರ ಸಂಸೃತಿ ಮತ್ತು ಸಮೃದ್ಧಿಯನ್ನು ಪ್ರತಿಬಿಂಬಿಸು ತ್ತದೆ. ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ ಸಾಂಸ್ಕೃತಿಕ ಚಟುವಟಿಕೆಗಳ ತಾಣಗಳಾಗಿದ್ದವು. ಸಮುದಾಯದ ಒಗ್ಗೂಡುವಿಕೆಯ ಸಂಕೇತಗಳಾಗಿದ್ದವು. ಆದರೆ ಇತ್ತೀಚೆಗೆ ಹಳ್ಳಿಗಳಲ್ಲಿರುವ ಹಿಂದೂ ದೇವಾಲಯಗಳ ಆಡಳಿತ ಮತ್ತು ನಿರ್ವಹಣೆಯ ವಿಷಯ ಸಂಕೀರ್ಣ ವಾಗುತ್ತಿದೆ.
ಸಾಕಷ್ಟು ಆದಾಯ ತರುತ್ತಿದ್ದ ಕೃಷಿ ಭೂಮಿಗಳು ಭೂಸುಧಾರಣೆ ಕಾನೂನಿನ ಪರಿಣಾಮವಾಗಿ ಸಾಗುವಳಿದಾರರ ಪಾಲಾದವು. ನಗರಗಳಿಗೆ ಜನರು ವಲಸೆ ಹೋಗುವ ಪ್ರಮಾಣ ಹೆಚ್ಚಾದ ಕಾರಣದಿಂದ ದೇವಾಲಯಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮತ್ತು ಕಾಣಿಕೆ ನೀಡುವ ಭಕ್ತರ ಸಂಖ್ಯೆಯೂ ಕಡಿಯಾಗುತ್ತಿದೆ. ಪರಿಣಾಮ ಅರ್ಚಕರ ಮತ್ತು ಸಿಬ್ಬಂದಿಗಳ ವೇತನ, ನಿತ್ಯ ಪೂಜೆ ಮತ್ತು ನಿರ್ವಹಣಾ ವೆಚ್ಚ ಮತ್ತು ಕಾಲಕಾಲಕ್ಕೆ ನಡೆಯಬೇಕಾದ ನೇಮ, ಜಾತ್ರೆ ಉತ್ಸವಗಳಂಥ ಧಾರ್ಮಿಕ ಕಾರ್ಯಗಳ ಮಿತಿ ಮೀರಿದ ವೆಚ್ಚಗಳನ್ನು ನೀಗಿಸುವದೇ ಆಡಳಿತ ಮಂಡಳಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ಕೆಲವು ದೇವಾಲಯಗಳಿಗೆ ಸರಕಾರದಿಂದ ಬರುವ ತಸ್ತೀಕ್ ಮೊತ್ತ ತೀರಾ ಅಲ್ಪವಾಗಿದ್ದು ಯಾವದೇ ವೆಚ್ಚಕ್ಕೆ ಸಾಕಾಗುವದಿಲ್ಲ. ದೇವಾಲಯಗಳ ಆಸ್ತಿಗಳು ಅನ್ಯರ ಪಾಲಾಗಲು ಭೂಸುಧಾರಣೆ ಕಾಯಿದೆ ಯೊಂದೇ ಕಾರಣವಲ್ಲ. ಆಡಳಿತ ನಿರ್ವಹಣೆಯ ಹೊಣೆ ಹೊತ್ತಿದ್ದ ಟ್ರಸ್ಟೀಗಳು ದೇವರ ಆಸ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣ ಅನೇಕರು ಅತಿಕ್ರಮಣ, ಅನಧಿಕೃತ ದಾನ, ಖರೀದಿ, ಲೀಸ್ಗಳ ಮೂಲಕ ಆಸ್ತಿಗಳನ್ನು ಕಬಳಿಸಿದ ಉದಾಹರಣೆಗಳೂ ಸಾಕಷ್ಟಿವೆ.
ಇದನ್ನೂ ಓದಿ: Thimmanna Bhagawat Column: ಟ್ರಂಪ್ ಅತಿರೇಕ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ವಿವೇಕ
ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಕಾಯಿದೆಯಡಿ ಅಂಥ ಆಸ್ತಿಗಳ ಮೋಜಣಿ ಮಾಡಿ ಅತಿಕ್ರಮಣ ಮತ್ತು ಅನಧಿಕೃತ ಪರಭಾರೆಗಳ ತೆರವಿಗೆ ಅವಕಾಶವಿದ್ದರೂ ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆದದ್ದು ಕಂಡುಬಂದಿಲ್ಲ. ಸರ್ವೋಚ್ಛ ನ್ಯಾಯಾಲಯವು ತನ್ನ ಅನೇಕ ತೀರ್ಪುಗಳಲ್ಲಿ ಸ್ಪಷ್ಟವಾಗಿ ಹೇಳಿರುವ ಪ್ರಕಾರ ದೇವಾಲಯಗಳ ಆಸ್ತಿಯ ಮಾಲಿಕ ಆ ದೇವಾಲಯದಲ್ಲಿ ಮೂರ್ತಿ ಸ್ವರೂಪದಲ್ಲಿರುವ ದೇವರೇ ಹೊರತು ಟ್ರಸ್ಟ್ ಕಮಿಟಿ, ಅರ್ಚಕರು ಅಥವಾ ಸರಕಾರ ಅಲ್ಲ. ಅವರು ಕೇವಲ ಆಸ್ತಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕರ್ತವ್ಯ ಹೊಂದಿರುತ್ತಾರೆ ಮತ್ತು ಅವರ್ಯಾರಿಗೂ ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವ ಹಕ್ಕು ಇರುವದಿಲ್ಲ ಮತ್ತು ಅಂಥ ಪರಭಾರೆ ಮೂಲದಲ್ಲೇ ಅಸಿಂಧು ಎನಿಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ.
ದೇವಾಲಯಗಳ ಆಸ್ತಿ ಅಥವಾ ಸಂಪತ್ತಿನ ವಿಷಯದ ಕುರಿತು ನಿರ್ಣಯಿಸುವಾಗ ಅವು ದೇವಾ ಲಯಕ್ಕೆ ಹೇಗೆ ಬಂದಿದ್ದವು ಎಂಬುದನ್ನು ಚಿಂತಿಸಬೇಕು. ರಾಜರುಗಳ ಕಾಲದಲ್ಲಿ ಆಕ್ರಮಣವನ್ನು ಎದುರಿಸುವಾಗ, ಸಂಕಷ್ಟದಲ್ಲಿರುವಾಗ, ರಾಜ್ಯದಲ್ಲಿ ದುರ್ಭಿಕ್ಷೆ, ರೋಗ ರುಜಿನಗಳಂಥ ಕಷ್ಟಗಳ ಸಂದರ್ಭಗಳಲ್ಲಿ ದೇವರಿಗೆ ಹರಕೆ ಹೊತ್ತು ಭೂಮಿಯನ್ನೋ ಸಂಪತ್ತನ್ನೋ ಕಾಣಿಕೆ ನೀಡುತ್ತಿದ್ದರು. ಭಕ್ತರು ಕೂಡಾ ದೇವಾಲಯ ಗಳಿಗೆ ಭೂಮಿಯನ್ನು ದಾನ ನೀಡುವ ಪದ್ಧತಿ ಇತ್ತು.
ಹೀಗೆ ಬಂದ ಭೂಮಿ ಅಥವಾ ಸಂಪತ್ತು ದೇವರಿಗೆ ಸಮರ್ಪಿಸಿದ್ದೇ ಹೊರತು ದೇವಾಲಯದ ಆಡಳಿತ ನೋಡಿಕೊಳ್ಳುವವರಿಗೆ ಸೇರಿದ್ದಲ್ಲ. ಅಂಥ ಆಸ್ತಿಗಳನ್ನು ಪರಭಾರೆ ಮಾಡಿದರೆ ಅವುಗಳನ್ನು ಸಮರ್ಪಿಸಿದ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬುದು ಗಮನಿಸಬೇಕಾದ ವಿಚಾರ. ಗ್ರಾಮೀಣ ಪ್ರದೇಶದ ಕೆಲವು ದೇವಾಲಯಗಳಿಗೆ ಆದಾಯ ಕಡಿಮೆ ಇದ್ದುದರಿಂದ ನಿರ್ವಹಣೆಗೆ ಹಣ ಸಾಕಾಗುತ್ತಿರಲಿಲ್ಲ. ಅರ್ಚಕರಿಗೆ ಸಂಬಳ ನೀಡಲು ಹಣವಿಲ್ಲದ ಕಾರಣಕ್ಕೆ ದೇವಾಲಯದ ಕೃಷಿ ಭೂಮಿಯನ್ನು ಅರ್ಚಕರಿಗೆ ಸಾಗುವಳಿಗೆ ನೀಡಿ ಅದರಿಂದ ಬರುವ ಆದಾಯವನ್ನೇ ಅವರಿಗೆ ನೀಡಬೇಕಾದ ಸಂಭಾವನೆ ಎಂದು ಪರಿಗಣಿಸಲಾಗು ತ್ತಿತ್ತು. ಜೊತೆಗೆ ಭಕ್ತರು ನೀಡುವ ದಕ್ಷಿಣೆ, ಕಾಣಿಕೆಗಳನ್ನು ಪಡೆದು ಅರ್ಚಕರು ತಮ್ಮ ಜೀವನ ನಡೆಸುತ್ತಿದ್ದರು. ಇಂಥದ್ದೇ ವ್ಯವಸ್ಥೆ ಬಹುಶಃ ವಾದ್ಯ ನುಡಿಸುವವರು ಮತ್ತು ಇತರ ಸಿಬ್ಬಂದಿಗಳಿಗೂ ಇದ್ದಿರಬಹುದು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ದೇವಾಲಯದ ಭೂಮಿಯನ್ನು ಅರ್ಚಕರು ಅಥವಾ ಇತರ ಸಿಬ್ಬಂದಿಗಳು ಸಾಗುವಳಿ ಮಾಡುತ್ತಿದ್ದದ್ದು ಅವರ ಸೇವೆಗೆ ನೀಡಬೇಕಾಗಿದ್ದ ವೇತನಕ್ಕೆ ಪರ್ಯಾಯವಾಗಿ ಮಾಡಲಾದ ವ್ಯವಸ್ಥೆಯೇ ಹೊರತು ಕೇವಲ ಸಾಗುವಳಿಗೆ ಭೂಮಿಯನ್ನು ನೀಡಿದ್ದಲ್ಲ ಎಂಬುದು. ಕೆಲವು ಕಡೆ ದೇವಸ್ಥಾನದ ಆಡಳಿತ ನೋಡಿಕೊಳ್ಳುವ ಮೊಕ್ತೇಸರರು ತಮ್ಮ ಜಮೀನಿನ ಜೊತೆಗೆ ದೇವಾಲಯದ ಜಮೀನಿನ ಸಾಗುವಳಿಯನ್ನೂ ನೋಡಿಕೊಂಡು ಅದರಿಂದ ಬರುವ ಆದಾಯದಿಂದ ದೇವಾಲಯದ ನಿರ್ವಹಣೆ ನೋಡಿಕೊಳ್ಳುತ್ತಿದ್ದರು.
ಮೊಕ್ತೇಸರರು ತಮ್ಮ ಹೊಲ ಸಾಗುವಳಿ ಮಾಡುವ ರೈತರಿಗೇ ದೇವಾಲಯದ ಭೂಮಿಯನ್ನು ಸಾಗುವಳಿಗೆ ನೀಡಿದ ಸಂದರ್ಭಗಳೂ ಇದ್ದಿರಬಹುದು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದರ್ಮಾದಾಯ ದತ್ತಿಗಳ ಕಾಯಿದೆ 1997ರ 62ನೇ ಕಲಮಿನ ಪ್ರಕಾರ ದೇವಾಲಯಗಳ ಯಾವದೇ ಆಸ್ತಿಯನ್ನು ಪರಭಾರೆ ಮಾಡಲು ಸರಕಾರದ ಅಧಿಕೃತ ಅಧಿಕಾರಿಯ ಪೂರ್ವಾನುಮತಿ ಅಗತ್ಯ ಮತ್ತು ಅಂಥ ಅನುಮತಿ ಇಲ್ಲದೆ ಮಾಡಲಾದ, ದಾನ, ಲೀಸ್, ಮಾರಾಟ ಅಥವಾ ಇನ್ನಿತರ ಸ್ವರೂಪದ ಪರಭಾರೆ ಅಸಿಂಧುವಾಗುತ್ತದೆ.
2011ರ ತಿದ್ದುಪಡಿ ಕಾಯಿದೆಯಲ್ಲಿ ಈ ಕಲಮಿಗೆ ಯಾವದೇ ತಿದ್ದುಪಡಿಯಾಗಿಲ್ಲ. ಈ ಕಾಯಿದೆಗಿಂತ ಮೊದಲು ಜಾರಿಯಲ್ಲಿದ್ದ 1950ರ ಮುಂಬೈ ಟ್ರಸ್ಟ್ ಕಾಯಿದೆಯ 36ನೇ ಕಲಮಿನ ಪ್ರಕಾರ ಕೂಡಾ ಯಾವದೇ ಪಬ್ಲಿಕ್ ಟ್ರಸ್ಟ್ನ ಸ್ಥಿರಾಸ್ಥಿಗಳ ಪರಭಾರೆ ಮಾಡಲು ಚೆರಿಟಿ ಕಮಿಶನರ್ರವರ ಪೂರ್ವಾನುಮತಿ ಅಗತ್ಯ ಮತ್ತು ಹಾಗೆ ಪೂರ್ವಾನುಮತಿಯಿಲ್ಲದೆ ಮಾಡಲಾದ ಪರಭಾರೆಯು ಅಸಿಂಧುವಾಗುತ್ತದೆ.
1951ರ ಮದ್ರಾಸ್ ಟ್ರಸ್ಟ್ ಕಾಯಿದೆಯ 34ನೇ ಕಲಮು ಕೂಡಾ ಇದನ್ನೇ ಹೇಳುತ್ತದೆ. ಈ ಕಲಮುಗಳ ಅರ್ಥವೆಂದರೆ ಕರ್ನಾಟಕ ಭೂಸುಧಾರಣೆ ಕಾಯಿದೆ ಅಡಿಯಲ್ಲಿ ಮಾಲಕತ್ವ ಪಡೆದ ಗೇಣಿ ಪ್ರಕರಣಗಳಲ್ಲಿ ಅಧಿಕೃತ ಅಧಿಕಾರಿಯ ಪೂರ್ವಾನುಮತಿ ಇಲ್ಲದೆ ಆ ಆಸ್ತಿಗಳನ್ನು ಗೇಣಿಗೆ ಪಡೆದಿರುವದು ಮೂಲದಲ್ಲೇ ಅಸಿಂಧುವಾಗುತ್ತದೆ. ಆ ಕಾರಣಕ್ಕೆ ಅಂಥ ಎಲ್ಲಾ ಆಸ್ತಿಗಳಿಗೆ ಗೇಣಿ ಸಾಗುವಳಿ ಆಧಾರದಲ್ಲಿ ಮಾಲಕತ್ವ ನೀಡಿರುವದು ಕೂಡಾ ಅಸಿಂಧುವಾಗುತ್ತದೆ.
ಕರ್ನಾಟಕ ಭೂಸುದಾರಣೆ 1974ರ ತಿದ್ದುಪಡಿ ಕಾಯಿದೆಯ ಪ್ರಕಾರ ಗೇಣಿ ಆಧಾರದಲ್ಲಿ ಸಾಗುವಳಿ ಯಾಗುತ್ತಿದ್ದ ಎಲ್ಲಾ ಕೃಷಿಭೂಮಿಗಳ ಪಹಣಿ ಪತ್ರದಲ್ಲಿ ಕರ್ನಾಟಕ ಸರಕಾರದ ಹೆಸರು ಮಾಲಿಕ ರೆಂದು ನೋಂದಾಯಿಸಲ್ಪಡುತ್ತದೆ. ಯಾರು ತಾವು ಸಾಗುವಳಿ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಾರೋ ಅವರು ಡಿಕ್ಲರೇಶನ್ ಸಲ್ಲಿಸಬೇಕು. ಮತ್ತು ಭೂನ್ಯಾಯ ಮಂಡಳಿಗಳು ಅದರ ವಿಚಾರಣೆ ನಡೆಸಿ ಅಂಥ ಸಾಗುವಳಿದಾರರಿಗೆ ಭೂಮಾಲಕತ್ವವನ್ನು ಮಂಜೂರಿ ಮಾಡಬೇಕು. ಆದರೆ ದೇವಾಲಯಗಳ ಆಸ್ತಿಯ ಗೇಣಿ ಹಕ್ಕಿನ ಪ್ರಶ್ನೆ ಬಂದಾಗ ಭೂನ್ಯಾಯ ಮಂಡಳಿಗಳು ದೇವರ ಆಸ್ತಿಯ ಕುರಿತಾದ ಸೂಕ್ಷ್ಮ ಪ್ರಶ್ನೆಗಳನ್ನು ಪರಿಗಣಿಸಲಿಲ್ಲ ಎಂಬ ಭಾವನೆ ಅನೇಕ ಭಕ್ತರಲ್ಲಿದೆ.
ದೇವಾಲಯದ ಅರ್ಚಕರು ಅಥವಾ ಸಿಬ್ಬಂದಿಗಳು ತಮ್ಮ ಹೆಸರಿಗೆ ಸಾಗುವಳಿ ಹಕ್ಕನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಾಗ ಅಂಥ ಸಾಗುವಳಿಯನ್ನು ಅವರ ಸೇವೆಗೆ ಸಂದಾಯ ಮಾಡಬೇಕಾದ ವೇತನ ಅಥವಾ ಸಂಭಾವನೆಗೆ ಪರ್ಯಾಯವಾಗಿ ನೀಡಲಾಗಿತ್ತು ಮತ್ತು ಆ ಕಾರಣಕ್ಕೆ ಅದು ವಾಸ್ತವದಲ್ಲಿ ಗೇಣಿಯಾಗಿರಲಿಲ್ಲ ಎಂಬ ಅಂಶವನ್ನು ಮಾನ್ಯ ಭೂನ್ಯಾಯ ಮಂಡಳಿಗಳು ಪರಿಗಣಿಸಬೇಕಿತ್ತು.
ಇನ್ನು ಮೊಕ್ತೇಸರ್ ಅಥವಾ ಸಭಾಹಿತರಿಗೆ (Shebait) ಸಾಗುವಳಿ ಆಧಾರದಲ್ಲಿ ಹಕ್ಕು ಪತ್ರ ನೀಡುವಾಗ ಅವರು ದೇವರ ಆಸ್ತಿಯನ್ನು ರಕ್ಷಿಸಿ ಪರಾಧೀನವಾಗದಂತೆ ತಡೆಯಬೇಕಾದ ಕರ್ತವ್ಯ ಹೊಂದಿದ್ದರು ಮತ್ತು ಅವರು ಸಾಗುವಳಿ ಮಾಡುತ್ತಿದ್ದರೆ ಆ ಕರ್ತವ್ಯದ ಶರತ್ತುಗಳಿಗೆ ಒಳಪಟ್ಟು ಸಾಗುವಳಿ ಮಾಡಿ ಅಂಥ ಸಾಗುವಳಿಯಿಂದ ಬರತಕ್ಕ ಆದಾಯವನ್ನು ದೇವಸ್ಥಾನಕ್ಕೆ ಜಮಾ ಮಾಡಬೇಕಾದ ಬಾಧ್ಯತೆ ಅವರಿಗೆ ಇತ್ತು. ಆ ಕಾರಣಕ್ಕೆ ಅದು ಗೇಣಿ ಆಗಿರಲಿಲ್ಲ. ಬದಲಾಗಿ ಅದು ದೇವಸ್ಥಾನವೇ ಸಾಗುವಳಿ ಮಾಡಿದಂತೆ ಎಂಬ ಕಾಯಿದೆ ಅಂಶವನ್ನು ಪರಿಗಣಿಸಬೇಕಿತ್ತು.
ಸಾಗುವಳಿ ಮಾಡುತ್ತಿದ್ದರು ಎಂದು ಪರಿಭಾವಿಸಿ (Deemed Tenancy) ಹಕ್ಕು ಪತ್ರ ನೀಡಲ್ಪಟ್ಟ ಪ್ರಕರಣಗಳಲ್ಲಿ ಅಂಥ ಸಾಗುವಳಿಗೆ ಸಂಬಂಧಪಟ್ಟ ಅಧಿಕೃತ ಸರಕಾರೀ ಆಧಿಕಾರಿಗಳ ಪೂರ್ವಾ ನುಮತಿ ಪಡೆಯಲಾಗಿರಲಿಲ್ಲ ಎಂಬ ಆಧಾರದಲ್ಲಿ ಅಂಥ ಡೀಮ್ಡ್ ಟೆನೆನ್ಸಿ ಕೂಡಾ ಮೂಲದಲ್ಲೇ ಅಸಿಂಧುವಾಗಿತ್ತು ಎಂಬ ಅಂಶವನ್ನೂ ಪರಿಗಣಿಸಬೇಕಿತ್ತು.
ತಾವು ಪೂಜೆ ಮಾಡುತ್ತಿದ್ದ ದೇವಾಲಯದ ಭೂಮಿಯೊಂದನ್ನು ತಮ್ಮ ಹೆಸರಿಗೆ ಖಾತೆಮಾಡಿಸಿ ಕೊಳ್ಳಲು ಅರ್ಚಕರೊಬ್ಬರು ಅರ್ಜಿ ಸಲ್ಲಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟಿನ ಮುಂದೆ ವಿಚಾರಣೆಗೆ ಬಂತು. ಅರ್ಚಕರಾಗಿದ್ದವರ ಮಕ್ಕಳು ಆಸ್ತಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ತಿರಸ್ಕರಿಸಿದರೂ ಕರ್ನಾಟಕ ಉಚ್ಛನ್ಯಾಯಾಲಯ ಅವರ ವಾದವನ್ನು ಪುರಸ್ಕರಿಸಿತು. ಆ ಆದೇಶದ ವಿರುದ್ಧ ಸಲ್ಲಿಸಲಾದ ಅಪೀಲಿನ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟಿನ ಆದೇಶವನ್ನು ರದ್ದುಗೊಳಿಸಿ ಆದೇಶ ನೀಡಿತು. (ಗಣಪತಿ ದೇವ ಟ್ರಸ್ಟ್ ವರ್ಸಸ್ ಬಾಲಕೃಷ್ಣ ಭಟ್ ಪ್ರಕರಣ). ಈ ಪ್ರಕರಣದಲ್ಲಿ ಮುಖ್ಯ ಆಧಾರವಾಗಿ ಪರಿಗಣಿಸಲ್ಪಟ್ಟ ‘ಬಿಶ್ವನಾಥ್ ಮತ್ತು ಇತರರು ವರ್ಸಸ್ ಶ್ರೀ ಥಾಕೂರ್ ರಾಧಾ ಬಲ್ಲಾಭ್ಜಿ’ ಎಂಬ ಐತಿಹಾಸಿಕ ಪ್ರಕರಣದಲ್ಲಿ ದೇವಾಲಯದ ಆಸ್ತಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟು ವಿವರವಾಗಿ ಚರ್ಚಿಸಿದೆ.
ಮೂರ್ತಿಯಲ್ಲಿ ಇರುವನೆಂದು ನಂಬಲಾದ ದೇವರ ಪರವಾಗಿ ಹಾಗು ಅಂಥ ದೇವಾಲಯದ ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕಾರ್ಯ ನಿರ್ವಹಿಸುವದು ಮೊಕ್ತೇಸರರ ಅಥವಾ ಆಡಳಿತ ನೋಡಿಕೊಳ್ಳುವ ಅರ್ಚಕರು ಅಥವಾ ಇತರ ಸದಸ್ಯರ ಬಾಧ್ಯತೆಯಾಗಿರುತ್ತದೆ. ಅವರು ದೇವಾಲಯದ ಹಿತಾಸಕ್ತಿಯ ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಅಥವಾ ತನ್ನ ವೈಯಕ್ತಿಕ ಹಿತಾಸಕ್ತಿಗೆ ತಮ್ಮ ಅಧಿಕಾರ ಅಥವಾ ದೇವಾಲಯದಲ್ಲಿ ತಾವು ಹೊಂದಿದ ಸ್ಥಾನದ ದುರುಪಯೋಗ ಮಾಡಿಕೊಳ್ಳಲು ಅವಕಾಶವಿಲ್ಲ. ಹಾಗೆ ಮಾಡಿದಾಗ ಭಕ್ತರು ಅಥವಾ ಇನ್ನಾವುದೇ ಆಸಕ್ತ ವ್ಯಕ್ತಿಗಳು ದೇವಾಲಯದ ಹಿತರಕ್ಷಣೆ ಮಾಡಲು ಪ್ರಕರಣ ನಡೆಸುವದನ್ನು ಕೋರ್ಟುಗಳು ಸಮ್ಮತಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತು.
ದೇವಾಲಯಗಳಲ್ಲಿ ಮೂರ್ತಿಯ ಸ್ವರೂಪದಲ್ಲಿರುವ ದೇವರ ಆಸ್ತಿಯ ರಕ್ಷಣೆಯ ವಿಷಯ ಬಂದಾಗ ಅಪ್ರಾಯಸ್ಥರ ಆಸ್ತಿ ರಕ್ಷಣೆಯ ತತ್ವವನ್ನೇ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟು ಅನೇಕ ಪ್ರಕರಣಗಳಲ್ಲಿ ಹೇಳಿದೆ. ಅಂದರೆ ಅಂಥ ಆಸ್ತಿಗಳನ್ನು ಯಾವದೇ ರೂಪದಲ್ಲಿ ಪರಭಾರೆ ಮಾಡಿದರೆ ಅದು ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಅದು ಯಾವಾಗಲೂ ಪ್ರಶ್ನಾರ್ಹವೇ ಅಗಿರುತ್ತದೆ. ಅಪ್ರಾಯಸ್ಥರ ಆಸ್ತಿಯನ್ನು ಪರಭಾರೆ ಮಾಡಲು ಅವರ ರಕ್ಷಕರಿಗೆ ಹೇಗೆ ಅಧಿಕಾರ ವಿಲ್ಲವೋ ಹಾಗೆ ದೇವರ ಆಸ್ತಿಯ ಪರಭಾರೆಯ ಹಕ್ಕು ಕೂಡಾ ಆಡಳಿತ ನಡೆಸುವ ಅರ್ಚಕರು ಅಥವಾ ಮೊಕ್ತೇಸರರಿಗೆ ಇರುವದಿಲ್ಲ. ಕರ್ನಾಟಕ ಭೂಸುಧಾರಣೆ ಕಾಯಿದೆ ಅಥವಾ ಟೆನಾನ್ಸಿ ಕಾಯಿದೆಯನ್ವಯ ಪ್ರಕರಣಗಳು ನಡೆದು ಆಸ್ತಿಗಳು ಸಾಗುವಳಿದಾರರೆನಿಸಿಕೊಂಡವರ ಹೆಸರಿಗೆ ದಾಖಲೆಯಾಗಿ ಹತ್ತಿರ ಹತ್ತಿರ ಅರ್ಧ ಶತಮಾನವೇ ಸಂದಿದೆ. ಈ ಕಾಲಘಟ್ಟದಲ್ಲಿ ಅಂಥ ನಿರ್ಣಯಗಳ ಸಿಂಧುತ್ವವನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸುವದು ಸಾಧ್ಯವಾಗದ ಮಾತು. ಆದರೆ ತಾನೇ ತಂದ ಕಾನೂನಿನ ಕಾರಣಕ್ಕೆ ಆಸ್ತಿಗಳು ಪರರ ಪಾಲಾಗಿ ಆದಾಯವೇ ನಿಂತು ಹೋಗಿರುವ ದೇವಾಲಯಗಳ ನಿರ್ವಹಣೆಯ ವಿಷಯದಲ್ಲಿ ಸರಕಾರಕ್ಕೆ ಉತ್ತರದಾಯಿತ್ವ ಇರತಕ್ಕದ್ದು.
ಅಂಥ ದೇವಾಲಯಗಳ ಅರ್ಚಕರ ಮತ್ತು ಸಿಬ್ಬಂದಿಗಳ ವೇತನ/ ಸಂಭಾವನೆ, ದೈನಂದಿನ ವೆಚ್ಚಗಳ ನಿರ್ವಹಣೆ ಮತ್ತು ಕಾಲಕಾಲಕ್ಕೆ ನಡೆಯಬೇಕಾದ ಜಾತ್ರೆ, ಉತ್ಸವ, ನೇಮ ಹಾಗೂ ಇತರ ಧಾರ್ಮಿಕ ಕಾರ್ಯಗಳು ಅನೂಚಾನವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ಹೊಣೆ ಸರಕಾರದ್ದು.
ವಕ್ಫ್ ಮಂಡಳಿ ಯಾವದೇ ಆಸ್ತಿಯನ್ನು ತನ್ನದೆಂದು ಘೋಷಿಸಬಹುದಾದರೆ ದೇವಾಲಯಗಳು ಕಳಕೊಂಡ ಆಸ್ತಿಗಳನ್ನು ಮರಳಿ ಕೊಡಿಸಲು ಯಾಕೆ ಹೊಸ ಕಾನೂನು ತರಬಾರದು? ಅಥವಾ ಅಂಥ ಹಾನಿಯನ್ನು ತುಂಬಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಸರಕಾರ ಯಾಕೆ ಚಿಂತಿಸುತ್ತಿಲ್ಲ? ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಮಠಾಧೀಶರಂಥ ಧಾರ್ಮಿಕ ಪ್ರತಿನಿಧಿಗಳು ಚಿಂತನೆ ಮತ್ತು ಹೋರಾಟಗಳನ್ನು ಮಾಡಬೇಕಾಗಿದೆ. ಇಲ್ಲವಾದಲ್ಲಿ ಹಳ್ಳಿಗಳಲ್ಲಿರುವ ಅನೇಕ ದೇವಾಲಯಗಳಲ್ಲಿ ದೀಪ ಹಚ್ಚುವ ಎಣ್ಣೆ ತರಲೂ ಹಣ ಉಳಿಯಲಿಕ್ಕಿಲ್ಲ.