ಕಾನೂನ್‌ಸೆನ್ಸ್
ತಿಮ್ಮಣ್ಣ ಭಾಗವತ್
ಭಾರತದ ಅಧ್ಯಕ್ಷತೆಯಲ್ಲಿ ನಡೆದ BRICS ರಾಷ್ಟ್ರಗಳ 18ನೇ ಶೃಂಗ ಸಭೆ ಯಶಸ್ವಿಯಾಗಿ ಸಂಪನ್ನ ಗೊಂಡಿತು. ಧೃಢತೆ, ನಾವೀನ್ಯತೆ, ಸಹಕಾರ, ಸುಸ್ಥಿರತೆಗಳಿಗಾಗಿ ನಿರ್ಮಾಣ’ (Building for Resilience, Innovation, Cooperation and Sustainability) ಎಂಬ ಘೋಷವಾಕ್ಯದೊಂದಿಗೆ ಆರಂಭಿಸಲಾದ ಭಾರತದ ಅಧ್ಯಕ್ಷತೆಯ ಈ ಶೃಂಗ ಸಭೆ, ಜಗತ್ತು ಎದುರಿಸುತ್ತಿರುವ ಯುದ್ಧದ ಸನ್ನಿವೇಶ ಮತ್ತು ಅದರ ಪರಿಣಾಮವಾಗಿ ಉಂಟಾದ ಆರ್ಥಿಕ ವಿಪ್ಲವದ ಸಂದರ್ಭದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಗಮನ ಸೆಳೆಯಿತು.
ಸ್ವತಃ ಪ್ರಧಾನ ಮಂತ್ರಿಗಳು ನಡೆಸಿದ 15ಕ್ಕೂ ಹೆಚ್ಚಿನ ದ್ವಿಪಕ್ಷೀಯ ಸಭೆಗಳ ಜೊತೆಗೆ ವಿದೇಶಾಂಗ ಇಲಾಖೆ ಯ ಸಚಿವರು ಮತ್ತು ಅಧಿಕಾರಿಗಳು ನಡೆಸಿದ ಅನೇಕ ಖಾಸಗಿ ಸಭೆಗಳ ಫಲವಾಗಿ ದೆಹಲಿ ಘೋಷಣೆ ಸರ್ವಾನುಮತದಿಂದ ಅಂಗೀಕಾರವಾಯಿತು. ಅದಕ್ಕಿಂತ ಹೆಚ್ಚಾಗಿ ಆ ಘೋಷಣೆಯಲ್ಲಿ ಭಾರತದ ಹಿತಾಸಕ್ತಿಯ ವಿಷಯವಾದ ಪಹಲ್ಗಾಂವ್ ಹತ್ಯಾಕಾಂಡವನ್ನು ಖಂಡಿಸುವ ನಿರ್ಣಯ ಕೈಗೊಳ್ಳಲಾಗಿರು ವುದು ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ ದೊರೆತ ದೊಡ್ಡ ಗೆಲುವು ಎನ್ನಲಾಗಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಪಾಕಿಸ್ತಾನವನ್ನು ಬೆಂಬಲಿಸುವ ಚೀನಾ, ದುಬೈನಂಥ ರಾಷ್ಟ್ರಗಳು ಕೂಡಾ ಈ ಖಂಡನೆಗೆ ಒಪ್ಪಿವೆ ಎಂಬುದು. ಪಾಕಿಸ್ತಾನದ ನಿರಂತರ ಪ್ರಯತ್ನ ಮತ್ತು ಚೀನಾದ ಬೆಂಬಲದ ಹೊರತಾಗಿಯೂ ಆ ದೇಶಕ್ಕೆ ಬ್ರಿಕ್ಸ್‌ನ ಸದಸ್ಯತ್ವ ದೊರೆಯ ದಿರುವದು ಕೂಡಾ ಒಕ್ಕೂಟದಲ್ಲಿ ಭಾರತ ಮೇಲುಗೈ ಸಾಧಿಸಿರುವದಕ್ಕೆ ಸಾಕ್ಷಿ. ಬ್ರಿಕ್ಸ್ ರಾಷ್ಟ್ರಗಳ 11 ಸದಸ್ಯ ರಾಷ್ಟ್ರಗಳ ಜೊತೆಗೆ, ಆಫ್ರಿಕನ್ ಒಕ್ಕೂಟದ ಅಧ್ಯಕ್ಷರು, ಆಸಿಯಾನ್‌ನ ಅಧ್ಯಕ್ಷರು, ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯ ಮಹಾ ನಿರ್ದೇಶಕರಂಥ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಕೂಡಾ ಭಾಗವಹಿಸಿದ್ದರು.
ಇದನ್ನೂ ಓದಿ: Thimmanna Bhagwath Column: ನ್ಯಾಯದ ಪಂಜರದಿಂದ ಪಾರಾಗಲು ಬಡವರಿಗೆ ರೆಕ್ಕೆಗಳಿಲ್ಲ !
ಪಶ್ಚಿಮ ಏಷ್ಯಾದ ಯುದ್ಧದ ಸನ್ನಿವೇಶದಲ್ಲಿ ಇರಾನ್‌ನಿಂದ ದಾಳಿಗೊಳಗಾದ ದುಬೈನ ರಾಜಕುಮಾರ ಮತ್ತು ಇರಾನ್‌ನ ಅಧ್ಯಕ್ಷರ ನಡುವೆ ಮಾತುಕತೆ ನಡೆಯಲು, ಭಾರತ ಆ ಎರಡು ದೇಶಗಳ ಜೊತೆ ಮುನ್ನಾ ದಿನದ ತಡರಾತ್ರಿಯವರೆಗೂ ನಡೆಸಿದ ಸಂಧಾನ ಸಭೆಗಳ ಯಶಸ್ಸೇ ಕಾರಣ ಎನ್ನಲಾಗಿದೆ. ಭಾರತ ಅಧ್ಯಕ್ಷತೆ ವಹಿಸಿಕೊಂಡ ನಂತರ ಕಳೆದ ಜನವರಿಯಿಂದ ಆರಂಭ ವಾದ ಅನೇಕ ಸಭೆಗಳ ಸರಣಿಯು ತಡೆ, ಬ್ರಿಕ್ಸ್‌ನ ಕಾರ್ಯವೈಖರಿ ಮತ್ತು ದೇಶಗಳ ನಡುವಿನ ಹೊಂದಾಣಿಕೆಯಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ಉಂಟುಮಾಡಿದೆ.
ಮಾನವೀಯತೆ ಮೊದಲು ಎಂಬ ಧ್ಯೇಯ ಮತ್ತು ಜನಕೇಂದ್ರಿತ ಧೋರಣೆಯೊಂದಿಗೆ ಭೌಗೋಳಿಕ ರಾಜಕೀಯ ವ್ಯವಸ್ಥೆ ಹೊಸ ಸ್ವರೂಪ ಪಡೆಯಬೇಕು. ಏಕಪಕ್ಷೀಯ ನಿರ್ಬಂಧ ಹೇರಿಕೆ ಮತ್ತು ಶಿಕ್ಷೆಯ ರೂಪದಲ್ಲಿ ಸುಂಕ ಹೇರಿಕೆಗಳಿಗೆ ಅಡತಡೆಯಿಲ್ಲದ ಪೂರೈಕೆ ಜಾಲದ ಮರುಸ್ಥಾಪನೆ ವಿಶೇಷವಾಗಿ ಶಕ್ತಿ ಮೂಲಗಳ ಪೂರೈಕೆ, ಮೂಲಸೌಕರ್ಯಗಳ ರಕ್ಷಣೆ, ದೇಶಗಳ ನಡುವೆ ವಿಶ್ವಾಸ ಮತ್ತು ಗೌರವಪೂರ್ವಕ ಸಂಬಂಧ ಮತ್ತು ಸಂವಹನ ಮುಂತಾದ ಅನೇಕ ವಿಷಯಗಳ ಕುರಿತು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ವಿಶ್ವದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ಹೊಂದಿರುವ ದಕ್ಷಿಣ ವಿಶ್ವದ ರಾಷ್ಟ್ರ ಗಳು ಜಗತ್ತಿನ ಆಡಳಿತಾತ್ಮಕ ವಿಷಯಗಳಲ್ಲಿ ಕೂಡಾ ಶಕ್ತಿಯುತವಾದ ಧ್ವನಿ ಎತ್ತಬೇಕಾಗಿದೆ ಎಂದು ಭಾರತದ ಪ್ರಧಾನಿ ಹೇಳಿದರು. ಬಹುತೇಕ ಎಲ್ಲಾ ಸದಸ್ಯ ರಾಷ್ಟ್ರಗಳ ಜೊತೆಗೆ ಮಾನ್ಯ ಪ್ರಧಾನಿ ಯವರು ನಡೆಸಿದ ದ್ವಿಪಕ್ಷೀಯ ಸಭೆಗಳು ಆ ರಾಷ್ಟ್ರಗಳ ಜೊತೆ ಭಾರತದ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ವಹಿವಾಟುಗಳ ಕುರಿತ ಕೆಲವು ಮಹತ್ತರ ಬೆಳವಣಿಗೆಗಳಿಗೆ ಕಾರಣವಾಯಿತು.
ಅಮೆರಿಕದ ಎಚ್ಚರಿಕೆಗೆ ಸೆಡ್ಡು ಹೊಡೆಯುವಂತೆ ಇರಾನ್ ಮತ್ತು ರಷ್ಯಾಗಳ ಜೊತೆಗೆ ತೈಲ ಪೂರೈಕೆ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದ್ದಲ್ಲದೆ, ವ್ಯಾಪಾರ ಸಂಬಂಧ ವನ್ನು ಬಲಪಡಿಸುವುದಾಗಿ ಜಂಟಿ ಹೇಳಿಕೆಯನ್ನು ನೀಡಲಾಯಿತು. ರಾಜತಾಂತ್ರಿಕತೆಯಲ್ಲಾಗಲೀ, ರಾಜಕೀಯ ದಲ್ಲಾಗಲೀ, ನಾಯಕರ ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಲ್ಲಿ ವಿವರಿಸಿದಷ್ಟು ಎಲ್ಲವೂ ಸರಳ ವಾಗಿರುವುದಿಲ್ಲ. ಅಲ್ಲಿ ಹೇಳಿದ್ದೆಲ್ಲ ಪೂರ್ತಿ ಸತ್ಯ ಎಂದೋ, ಅವೆಲ್ಲವೂ ಅನುಷ್ಠಾನ ವಾಗುತ್ತವೆ ಎಂದೋ ತಿಳಿಯಲಾಗದು.
ಅನೇಕ ಸಲ ಆಲಿಂಗನ, ಹಸ್ತ-ಲಾಘವಗಳು ಕ್ಯಾಮೆರಾದ ಎದುರಿಗೆ ಮಾತ್ರವಿರುತ್ತವೆ. ಇದೀಗ ಒಗ್ಗಟ್ಟು ಪ್ರದರ್ಶಿಸಿದ ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ನಡುವೆ ಕೂಡಾ ಎಲ್ಲವೂ ಪೂರ್ತಿ ಚೆನ್ನಾಗಿದೆ ಎಂದಲ್ಲ. ಶೃಂಗ ಸಭೆಯ ಯಶಸ್ಸನ್ನು ಸಂಭ್ರಮಿಸುವ ಜೊತೆಗೇ ಮುಂದಿರುವ ಸವಾಲುಗಳನ್ನು ವಿಶ್ಲೇಷಿಸುವುದು ಅತ್ಯಗತ್ಯ. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳಾದ ಯುಎಇ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳ ನಡುವಿನ ಸಂಬಂಧ ಚೆನ್ನಾಗಿಲ್ಲ.
ಭಾರತ ಮತ್ತು ಚೀನಾ ದೇಶಗಳ ನಡುವೆ ತೀವ್ರವಾದ ಗಡಿ ವಿವಾದವಿದೆ. 1962ರಲ್ಲಿ ನಡೆದ ಯುದ್ಧದಲ್ಲಿ ಭಾಯಿಭಾಯಿ ಎನ್ನುತ್ತಲೇ ಭೂಭಾಗವನ್ನು ಹಾಗೂ ಆ ಮೊದಲೇ ಕಾರಾಕೋರಂ ಕಣಿವೆಯನ್ನು ಕಳೆದು ಕೊಂಡಿರುವ ನೋವನ್ನು ಭಾರತ ಮರೆಯುವಂತಿಲ್ಲ. ನಂತರದ ವರ್ಷ ಗಳಲ್ಲೂ ಚೀನಾದೊಂದಿಗೆ ಸಂಘರ್ಷಗಳು ನಡೆಯುತ್ತಲೇ ಇವೆ. ನೇಪಾಳ ಮತ್ತು ಬಾಂಗ್ಲಾ ದೇಶಗಳ ಜೊತೆ ಭಾರತಕ್ಕೆ ಇದ್ದ ಅನ್ಯೋನ್ಯ ಸಂಬಂಧ ಹಾಳಾಗಲು ಚೀನಾದ ಹಸ್ತಕ್ಷೇಪ ಕಾರಣವೆಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಭಾರತದ ಬದ್ಧ ವೈರಿಯಾದ ಪಾಕಿಸ್ತಾನಕ್ಕೆ ಚೀನಾ ಬಹಿರಂಗ ವಾಗಿಯೇ ಬೆಂಬಲ ನೀಡುತ್ತ ಬಂದಿದೆ.
ಕುತಂತ್ರಿ ಚೀನಾ: ಆದರೆ ಚೀನಾಕ್ಕೆ ಭಾರತದ ಮಾರುಕಟ್ಟೆಯ ಲಾಭ ಮಾತ್ರ ಬೇಕಾಗಿದೆ. ಚೀನಾದ ಜೊತೆ ಭಾರತ 112.16 ಬಿಲಿಯನ್ ಡಾಲರ್‌ನಷ್ಟು ಹೆಚ್ಚಿನ ವ್ಯಾಪಾರೀ ಕೊರತೆ ಎದುರಿಸುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ ಮೇಲೆ ಚೀನಾ ಹೆಚ್ಚಿನ ಹಿಡಿತ ಹೊಂದಿದೆ. ಉತ್ಪಾದನೆಯಾದ ವಸ್ತುಗಳು ಮಾರಾಟ ವಾಗದೇ ಆರ್ಥಿಕ ಕುಸಿತ ಎದುರಿಸುತ್ತಿರುವ ಚೀನಾಕ್ಕೆ ಭಾರತದೊಂದಿಗಿನ ಸಂಬಂಧ ಸುದಾರಣೆ ಅನಿವಾರ್ಯವಾಗಿದೆ. ಆದರೆ ಚೀನಾದ ಕುತಂತ್ರಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP)ಎಂಬ ಹೊಸ ಒಪ್ಪಂದದ ಅಡಿಯಲ್ಲಿ ಸದಸ್ಯ ರಾಷ್ಟ್ರ ಗಳು ತಮ್ಮ ನಡುವಿನ ವ್ಯಾಪಾರದ ಮೇಲೆ ಶೂನ್ಯ ಸುಂಕ ಅಥವಾ ಅತೀ ಕಡಿಮೆ ಸುಂಕ ವಿಧಿಸಲು ಒಪ್ಪುವಂತೆ ಮಾಡಿದ ಚೀನಾದ ಹುನ್ನಾರದಿಂದ ಎಚ್ಚೆತ್ತ ಭಾರತ 2019ರಲ್ಲಿ ಆ ಒಕ್ಕೂಟದಿಂದ ಹೊರ ಬಂತು. ASEAN ರಾಷ್ಟ್ರಗಳು ಸದಸ್ಯರಾಗಿರುವ ಈ ಒಪ್ಪಂದದ ಪರಿಣಾಮ ವಾಗಿ ಚೀನಾದಿಂದ ರಫ್ತಾಗುವ ಕಡಿಮೆ ಬೆಲೆಯ ವಸ್ತುಗಳು ಈ ರಾಷ್ಟ್ರಗಳ ಮಾರುಕಟ್ಟೆಗೆ ಅತಿಯಾಗಿ ಪ್ರವೇಶಿಸಿದ ಕಾರಣಕ್ಕೆ ಅವು ಚೀನಾದೊಂದಿಗೆ ತೀವ್ರ ವ್ಯಾಪಾರ ಕೊರತೆ ಎದುರಿಸುತ್ತಿವೆ.
ಬ್ರಿಕ್ಸ್ ವಿಷಯದಲ್ಲಿ ಅತೀ ಆಸಕ್ತಿ ತೋರುತ್ತಿರುವ ಚೀನಾ, ಅದರ ಮೂಲಕ ಅಂಥದ್ದೇ ತಂತ್ರ ಅನುಸರಿಸ ದಂತೆ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ದೆಹಲಿ ಘೋಷಣೆಯ 20 ಮತ್ತು 21ನೇ ಪ್ಯಾರಾಗಳಲ್ಲಿ ವ್ಯಾಪಾರೀ ಸುಂಕಗಳ ವಿಷಯದಲ್ಲಿ ಕೈಗೊಂಡ ನಿರ್ಣಯಗಳನ್ನು ವಿವರಿಸ ಲಾಗಿದೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ತಾರತಮ್ಯ ರಹಿತವಾಗಿರಬೇಕು, ವಿಶ್ವ ವ್ಯಾಪಾರೀ ಸಂಸ್ಥೆಯ ಮೂಲಭೂತ ತತ್ವಗಳಿಗನುಗುಣವಾಗಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳ ನಿಯಮಗಳು ರೂಪಿತವಾಗಬೇಕು ಎನ್ನುತ್ತಲೇ ಅನಿಯಮಿತ, ತಾರತಮ್ಯಯುಕ್ತ ಸುಂಕ ದರಗಳ ಏರಿಕೆ, ವಿವೇಚನೆಯಿಲ್ಲದ ವ್ಯಾಪಾರೀ ನಿರ್ಬಂಧಗಳ ಹೇರಿಕೆ ಮುಂತಾದವುಗಳನ್ನು ಖಂಡಿಸ ಲಾಗಿದೆ. ಇವೆಲ್ಲವೂ ಅಮೆರಿಕದ ಸುಂಕ ಮತ್ತು ವ್ಯಾಪಾರೀ ದುರ್ನೀತಿಯ ವಿರುದ್ಧ ಕೈಗೊಂಡ ನಿರ್ಣಯಗಳು ಎಂದು ಮೇಲ್ನೋಟಕ್ಕೆ ಅನಿಸುತ್ತದೆ.
ಅದು ನಿಜವೂ ಇರಬಹುದು. ಆದರೆ ಚೀನಾದ ಅಗ್ಗದ ಮಾಲುಗಳು ನಮ್ಮ ದೇಶದ ಮಾರುಕಟ್ಟೆಗೆ ಬೇಕಾಬಿಟ್ಟಿಯಾಗಿ ನುಗ್ಗಿ, ನಮ್ಮ ವ್ಯಾಪಾರೀ ಕೊರತೆಯನ್ನು ಹೆಚ್ಚಿಸುವುದರ ಜೊತೆಗೆ ಸ್ವದೇಶೀ ಕೈಗಾರಿಕೆ ಗಳನ್ನು ನಾಶ ಮಾಡಲು ಈ ಕಲಮುಗಳು ಸಹಾಯಕವಾಗಬಾರದು ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಭಾರತಕ್ಕೆ ಇರುವ ಸ್ವಾತಂತ್ರ್ಯಕ್ಕೆ ಈ ಕಲಮುಗಳು ಅಡ್ಡಿಯಾಗ ಬಾರದು.
ಡಾಲರ್ ಗೆ ಪರ್ಯಾಯ ಕರೆನ್ಸಿ ಚಲಾವಣೆಗೆ ತರಬೇಕು, ಹೊಸ ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸ ಬೇಕೆಂಬ ಬ್ರಿಕ್ಸ್‌ನ ಅಜೆಂಡಾ, ಚೀನಾದ ಕರೆನ್ಸಿಯನ್ನು ಸದಸ್ಯ ರಾಷ್ಟ್ರಗಳ ಮೇಲೆ ಹೇರುವ ಕುತಂತ್ರವೆಂಬ ಸಂಶಯ ವಿದೆ. ಹೊಸ ಅಭಿವೃದ್ಧಿ ಬ್ಯಾಂಕನ್ನು ಚೀನಾದ ಶಾಂಘೈನಲ್ಲಿ ಸ್ಥಾಪಿಸಿರು ವುದು ಮತ್ತು ಈಗಾಗಲೇ ಬಾಂಗ್ಲಾದಂಥ ರಾಷ್ಟ್ರಗಳಿಗೆ ಎನ್‌ಡಿಬಿ ಸಾಲ ಕೊಡ ಮಾಡಿರುವುದು ಈ ಸಂಶಯಕ್ಕೆ ಇಂಬು ಕೊಡುವಂತಿದೆ. ಅಮೆರಿಕವನ್ನು ಹಣಿಯಲು ಚೀನಾದ ಜೊತೆ ಕೈಜೋಡಿಸಿ ಬ್ರಿಕ್ಸ್ ಅನ್ನು ಬಲಪಡಿಸ ಹೊರಟರೆ ಬೆಂಕಿಯಿಂದ ಬಾಣಲೆಗೆ ಎಂಬಂತೆ ಚೀನಾದ ಬಲೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ಮುಂದಿನ ವರ್ಷ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಚೀನಾ, ಬ್ರಿಕ್ಸ್‌ನ ಮೇಲೆ ಹಿಡಿತ ಸಾಧಿಸದಂತೆ ನೋಡಿಕೊಂಡರೆ ಮಾತ್ರ ಅದನ್ನು ಬಲಪಡಿಸುವ ಭಾರತದ ಪ್ರಯತ್ನಕ್ಕೆ ನಿಜವಾದ ಬೆಲೆ ಬರಬಹುದು. ದಕ್ಷಿಣ ವಿಶ್ವದ ಸಮಸ್ಯೆಗಳಿಗೆ ಭಾರತ ಧ್ವನಿಯಾಗ ಬೇಕೆಂಬುದು ಸದಸ್ಯ ರಾಷ್ಟ್ರಗಳ ಆಶಯವಾದರೂ, ಬಲಿಷ್ಠ ಚೀನಾದ ಹಂಗಿನಲ್ಲಿರುವ ಕೆಲವು ರಾಷ್ಟ್ರಗಳ ಭಾರತ ಪ್ರೀತಿ ಕೇವಲ ಆಲಿಂಗನ, ಹಸ್ತಲಾಘವಕ್ಕೆ ಸೀಮಿತವಾಗಬಾರದು.
ಬ್ರಿಕ್ಸ್‌ನಲ್ಲಿ ಇರುವ ಇನ್ನೊಂದು ಸಮಸ್ಯೆಯೆಂದರೆ ಸದಸ್ಯ ರಾಷ್ಟ್ರಗಳ ನಡುವಿನ ಆರ್ಥಿಕ ಅಸಮ ತೋಲನ. ಚೀನಾ, ರಷ್ಯಾ, ಬ್ರೆಜಿಲ್, ದುಬೈನಂಥ ರಫ್ತು ಆಧಾರಿತ ಆರ್ಥಿಕತೆಗಳು ಒಂದೆಡೆಯಾದರೆ ಭಾರತ, ಈಜಿಪ್ಟ್‌ನಂಥ ಮದ್ಯಮ ಗಾತ್ರದ ಆರ್ಥಿಕತೆಗಳ ಜೊತೆಗೆ ಇಥಿಯೋಪಿಯಾ ಮುಂತಾದ ಬಡ ರಾಷ್ಟ್ರಗಳೂ ಸೇರಿರುವ ಈ ಒಕ್ಕೂಟ ಆರ್ಥಿಕ ಅಸಮತೋಲನದ ಮಿಶ್ರಣವಾಗಿದೆ.
ಅಮೇರಿಕ, ಯುರೋಪ್‌ನಂಥ ಪಾಶ್ಚಿಮಾತ್ಯ ರಾಷ್ಟ್ರಗಳ ಕುರಿತಾದ ಧೋರಣೆಯ ವಿಷಯದಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಗಣನೀಯ ಭಿನ್ನಾಭಿಪ್ರಾಯವಿದೆ. ಯುದ್ಧದ ಕಾರಣಕ್ಕೆ ಇರಾನ್ ಅಮೆರಿಕವನ್ನು ವಿರೋಧಿಸುತ್ತಿದ್ದರೆ, ಚೀನಾ, ರಷ್ಯಾಗಳು ತಮ್ಮ ಹಿತಾಸಕ್ತಿಯ ಕಾರಣಕ್ಕೆ ಅಮೆರಿಕದ ಪ್ರಾಬಲ್ಯವನ್ನು ಕಡಿಮೆ ಮಾಡಬೇಕೆಂಬ ತೀವ್ರವಾದ ನಿಲುವು ಹೊಂದಿವೆ. ಯುಎಇ, ವಾಸ್ತವದಲ್ಲಿ ಅಮೇರಿಕದ ಕ್ಯಾಂಪ್ ನಲ್ಲೇ ಇದೆ. ಭಾರತ, ಬ್ರೆಜಿಲ್‌ನಂಥ ರಾಷ್ಟ್ರಗಳು ಅಮೇರಿಕ ಮತ್ತು ಯುರೋಪ್ ವಿರೋಧದ ಗುಂಪಿನಲ್ಲಿ ಗುರುತಿಸಿಕೊಳ್ಳದೆ ಕೇವಲ ಆರ್ಥಿಕ ಸಹಕಾರ ವೃದ್ಧಿಗೆ ಆಸಕ್ತಿ ತೋರುತ್ತಿವೆ.
ಭಾರತವು ಈಗಾಗಲೇ ಯುರೋಪ್‌ನ ರಾಷ್ಟ್ರಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಬೇಕಾಗಿದೆ. ತಾಂತ್ರಿಕತೆ, ರಕ್ಷಣಾ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳ ದೃಷ್ಟಿಯಿಂದ ಚೀನಾದಿಂದ ಭಾರತ ಏನನ್ನೂ ನಿರೀಕ್ಷಿಸುವಂತಿಲ್ಲ. ಆದರೆ ಅಮೆರಿಕದೊಂದಿಗಿನ ಸಂಬಂಧ ಈ ದೃಷ್ಟಿಯಲ್ಲಿ ಅತೀ ಮಹತ್ವದ್ದಾಗಿದೆ.
ಭಾರತದ ದೀರ್ಘಕಾಲೀನ ವಿದೇಶಿ ನೀತಿ ಈ ಹಿನ್ನೆಲೆಯಲ್ಲಿ ರೂಪುಗೊಂಡಿದೆ ಎಂಬುದನ್ನು ಮರೆಯುವಂತಿಲ್ಲ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ಗಳು ಸದಸ್ಯರಾಗಿರುವ ಕಿಖಿಅಈನಲ್ಲಿ ಭಾರತವೂ ಸದಸ್ಯ ರಾಷ್ಟ್ರವಾಗಿದೆ ಮತ್ತು ಅದು ತನ್ನ ಸದಸ್ಯತ್ವದಿಂದ ಹೊರ ಬರುವ ಇಂಗಿತ ವನ್ನು ಇದುವರೆಗೆ ವ್ಯಕ್ತಪಡಿಸಿಲ್ಲ. ಈ ಎಲ್ಲ ಸವಾಲುಗಳ ನಡುವೆಯೂ ಬ್ರಿಕ್ಸ್‌ನ ಅಧ್ಯಕ್ಷತೆಯಿಂದ ಭಾರತಕ್ಕೆ ದೊರೆತ ನಿಜವಾದ ಲಾಭವೆಂದರೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರಾಷ್ಟ್ರಗಳಿಗೆ ಭಾರತವನ್ನು ಕಡೆಗಣಿಸಲು ಅಸಾಧ್ಯ ಎಂಬ ಸತ್ಯದ ಅರಿವಾಗಿರುವುದು. ಬಹುಶಕ್ತಿಕೇಂದ್ರಿತ ವಿಶ್ವದಲ್ಲಿ ಭಾರತ ಸೇರಿದಂತೆ ಇತರ ರಾಷ್ಟ್ರಗಳನ್ನು ಯಾವುದೇ ದೇಶ ತಾನು ಹೇಳಿದಂತೆ ಕುಣಿಸಲು ಸಾಧ್ಯವಾಗದು ಎಂಬ ಸ್ಪಷ್ಟ ಸಂದೇಶವನ್ನು ಬ್ರಿಕ್ಸ್-2026 ಶೃಂಗಸಭೆ ನೀಡಿದೆ.
ಅಮೆರಿಕವನ್ನು ಹೆಸರಿಸದಿದ್ದರೂ ದೊಡ್ಡಣ್ಣನಿಗೆ ಗೋಡೆಯ ಮೇಲಿನ ಬರಹವು ಸ್ಪಷ್ಟವಾಗಿ ಕಾಣಿಸುವಂತಿದೆ. ಚರ್ಚಿಸಲು ಇಷ್ಟೊಂದು ಸಂಕೀರ್ಣ ಸಂಗತಿಗಳಿದ್ದರೂ ಕೆಲವರಿಗೆ ಸಸ್ಯಾಹಾರ, ಮಾಂಸಾಹಾರದಂಥ ವಿಷಯಗಳೇ ಪ್ರಮುಖವಾದವು. ದೇಶದ ಹಿತಾಸಕ್ತಿಗೆ ಸಂಬಂಧಪಟ್ಟ ಇತರ ಸಂಗತಿಗಳು ಅರ್ಥವಾಗಲಿಲ್ಲವೋ ಅಥವಾ ಬೇಕಾಗಿಲ್ಲವೋ ಎಂಬುದನ್ನು ಅವರಿಗೇ ಕೇಳಬೇಕು.