ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯೋಗಿ ಅದಿತ್ಯನಾಥರ ಕನಸು ನನಸಾಗಬಹುದೇ?

ಸರಕಾರಿ ಅಥವಾ ಖಾಸಗಿ ವಾಹನಗಳಲ್ಲಿ ಜಾತಿಯ ಹೆಸರು ಎದ್ದು ಕಾಣುವಂಥ ಫಲಕವನ್ನು ಹಾಕಿ ಕೊಂಡಿದ್ದರೆ ಅದನ್ನೂ ತೆಗೆಸಬೇಕು; ಅಕಸ್ಮಾತ್ ಹಾಗೆ ಜಾತಿ ಹೆಸರನ್ನು ಬಳಸಿದರೆ, ಮೋಟಾರ್ ವಾಹನ ಗಳ ಕಾಯ್ದೆಯ ಪ್ರಕಾರ ದಂಡವನ್ನು ವಿಧಿಸಲಾಗುವುದು. ಇನ್ನು, ಬಂಧನ ಮತ್ತು ಜಪ್ತಿ ಆದೇಶ ನೀಡುವ ಸಂದರ್ಭದಲ್ಲಿ ಜಾತಿ ಮಾಹಿತಿಗಳನ್ನು ಕೇಳುವಂತಿಲ್ಲ.

ಯಕ್ಷ ಪ್ರಶ್ನೆ

ರಮಾನಂದ ಶರ್ಮಾ

ಸಮಾಜ ಸುಧಾರಕರು, ಪ್ರಗತಿಪರರು, ಬುದ್ಧಿಜೀವಿಗಳು, ಎಡಪಂಥೀಯ ಚಿಂತಕರು ಎಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡವರು ಅವಕಾಶ ಸಿಕ್ಕಿದಾಗಲೆಲ್ಲಾ ಜಾತಿ ಮೇಲಾಟದ ನಿಯಂತ್ರಣದ ಬಗ್ಗೆ ಮಾತನಾಡುವುದು ನಮ್ಮ ದೇಶದಲ್ಲಿ ಕಾಣಬರುವ ಪರಿಪಾಠ. ಜಾತಿ, ಜಾತಿ ಮೇಲಾಟ, ರಾಜಕಾರಣ ಮುಂತಾದವು ಈ ದೇಶದ ಪ್ರಗತಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಇವರು ಮನಮುಟ್ಟುವಂತೆ ವಿವರಿಸುತ್ತಾರೆ.

ಈ ಪಿಡುಗುಗಳ ನಿರ್ಮೂಲನವಾಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಆದರೆ, ಅವರು ಈ ನಿಟ್ಟಿನಲ್ಲಿ ಏನಾದರೂ ಮಾಡಿದ್ದಾರೆಯೇ? ಹೆಜ್ಜೆ ಇಟ್ಟಿದ್ದಾರೆಯೇ? ಎಂದು ಅವಲೋಕಿಸಿದರೆ ನಿರಾಶೆ ಕಟ್ಟಿಟ್ಟಬುತ್ತಿ.

ಸಲಹೆ-ಸೂಚನೆ ನೀಡುವವರು, ಬುದ್ಧಿ ಹೇಳುವವರು ಅವನ್ನು ಸ್ವತಃ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ವಿರಳ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ ಈ ಅನಿಸಿಕೆ ಗಳಿಗೆ ಅಪವಾದವೆಂಬಂತೆ ನಡೆದುಕೊಳ್ಳುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಜಾತಿ ಮತ್ತು ಜಾತಿ ಮೇಲಾಟದ ನಿಯಂತ್ರಣದ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಯನ್ನಿಟ್ಟಿದ್ದಾರೆ.

ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನದ ಬಲದ ಮೇಲೆ ಅವರ ಸರಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇದರನ್ವಯ, ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂಥ, ಜಾತಿ ಆಧಾರಿತ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸುವಂತಿಲ್ಲ,

ಇದನ್ನೂ ಓದಿ: Ramanand Sharma Column: ಹೊಸ ಕಾರ್ಮಿಕ ಸಂಹಿತೆ ವರವೋ, ಶಾಪವೋ ?

ಪೊಲೀಸ್ ಎಫ್‌ʼಐಆರ್‌ಗಳಲ್ಲಿ ಜಾತಿಯ ಹೆಸರನ್ನು ನಮೂದಿಸುವಂತಿಲ್ಲ; ವಾರಂಟ್ ನೀಡುವಾಗ ಜಾತಿಯ ಹೆಸರನ್ನು ಬಳಸದೇ, ಅಪ್ಪ-ಅಮ್ಮನ ಹೆಸರನ್ನು ಗುರುತಿಗಾಗಿ ಬಳಸಬೇಕು. ಠಾಣೆಗಳಲ್ಲಿನ ದಾಖಲೆಗಳಲ್ಲಿ ಜಾತಿ ಕಾಲಂ ಅನ್ನೇ ತೆಗೆಯಬೇಕು. ಜಾತಿಗಳನ್ನು ವೈಭವೀಕರಿಸುವಂಥ ನಾಮ ಫಲಕಗಳು, ಅಂದರೆ ‘ಇದು ಇಂಥ ಜಾತಿಗೆ ಸೇರಿದ ಊರು/ಈ ಜಾತಿಯ ಜಹಗೀರು’ ಎಂಬಂಥ ಫಲಕಗಳಿದ್ದರೆ ಕೂಡಲೇ ತೆಗೆಯಬೇಕು.

ಸರಕಾರಿ ಅಥವಾ ಖಾಸಗಿ ವಾಹನಗಳಲ್ಲಿ ಜಾತಿಯ ಹೆಸರು ಎದ್ದು ಕಾಣುವಂಥ ಫಲಕವನ್ನು ಹಾಕಿಕೊಂಡಿದ್ದರೆ ಅದನ್ನೂ ತೆಗೆಸಬೇಕು; ಅಕಸ್ಮಾತ್ ಹಾಗೆ ಜಾತಿ ಹೆಸರನ್ನು ಬಳಸಿದರೆ, ಮೋಟಾರ್ ವಾಹನಗಳ ಕಾಯ್ದೆಯ ಪ್ರಕಾರ ದಂಡವನ್ನು ವಿಧಿಸಲಾಗುವುದು. ಇನ್ನು, ಬಂಧನ ಮತ್ತು ಜಪ್ತಿ ಆದೇಶ ನೀಡುವ ಸಂದರ್ಭದಲ್ಲಿ ಜಾತಿ ಮಾಹಿತಿಗಳನ್ನು ಕೇಳುವಂತಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ (ಎನ್‌ಸಿಆರ್‌ಬಿ) ತನ್ನ ಅಪರಾಧ ಮತ್ತು ನಿಗಾ ದಾಖಲೆ ಗಳಲ್ಲಿ ಜಾತಿ ವಿಭಾಗವನ್ನು ತೆಗೆಯಬೇಕು; ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯಿದೆ ಅಡಿ ಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಮಾತ್ರ ಜಾತಿಯ ಉಲ್ಲೇಖಕ್ಕೆ ಅವಕಾಶ ನೀಡಬಹುದು. ಜಾತಿಗಳನ್ನು ವೈಭವೀಕರಿಸುವ ಅಥವಾ ನಿಂದಿಸುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ವಿರುದ್ಧ 2024ರ ಐಟಿ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಈ ಆದೇಶ ಜಾರಿ ಯಾಗುವವರೆಗೆ ಸರಕಾರಿ ದಾಖಲೆಗಳಲ್ಲಿ ಜಾತಿ ಅಂಕಣವನ್ನು ಖಾಲಿ ಇಡಬೇಕು.

ಇವಿಷ್ಟು ಉತ್ತರ ಪ್ರದೇಶ ಸರಕಾರದ ಆದೇಶದಲ್ಲಿ ಉಲ್ಲೇಖವಾಗಿರುವ ಸೂಚನೆಗಳು. ಜಾತಿಯ ಗುರುತು ಎಂಬುದು ರಾಷ್ಟ್ರೀಯ ಏಕತೆ ಮತ್ತು ಸಾರ್ವಜನಿಕ ಸುಸ್ಥಿತಿಗೆ ಮಾರಕವಾಗಿರುವುದರಿಂದ ಇಂಥ ಆದೇಶವನ್ನು ಹೊರಡಿಸಲಾಗಿದೆ ಎಂದು ಯೋಗಿ ಆದಿತ್ಯನಾಥರು ಸ್ಪಷ್ಟೀಕರಣವನ್ನು ನೀಡಿದ್ದಾರಂತೆ. ಈ ಆದೇಶ ಹೊರ ಬಿದ್ದು ತಿಂಗಳುಗಳಾಗಿದ್ದು, ಉತ್ತರ ಪ್ರದೇಶದಲ್ಲಿ ಅದು ಉಂಟು ಮಾಡಿರುವ ಪರಿಣಾಮವೇನು ಎಂಬುದರ ಬಗ್ಗೆ ಇನ್ನೂ ವರದಿ ಬರಬೇಕಾಗಿದೆ.

ನಮ್ಮ ದೇಶದಲ್ಲಿ ಜಾತಿಪಿಡುಗು ತೀರಾ ಸಾಮಾನ್ಯವಾದ ಮತ್ತು ಆಳವಾಗಿ ಬೇರೂರಿದ ಸಾಮಾಜಿಕ ವ್ಯಾಽಯಾಗಿಬಿಟ್ಟಿದೆ. ಇದಕ್ಕೆ ಲಗಾಮು ಹಾಕದ ಹೊರತು ದೇಶ ಉದ್ಧಾರವಾಗದು ಎಂಬ ಮಾತನ್ನು ಹಾಗೂ ಘೋಷಣೆಯನ್ನು ದೇಶದ ಜನರು ದಶಕದಿಂದಲೂ ಕೇಳುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡಲು ಯಾವುದೇ ರಾಜಕಾರಣಿಗಳಾಗಲೀ, ಸಮಾಜ ಸುಧಾರಕರು, ಪ್ರಗತಿಪರರು ಎಂಬ ಲೇಬಲ್ ಹಾಕಿಕೊಂಡವರಾಗಲೀ ಮುಂದೆ ಬಂದಿಲ್ಲ ಎನ್ನುವುದು ಸತ್ಯ.

ಹೀಗಾಗಿ ಯೋಗಿ ಆದಿತ್ಯನಾಥರ ಈ ದಿಟ್ಟಹೆಜ್ಜೆಯನ್ನು ದೇಶಾದ್ಯಂತ ಶ್ಲಾಘಿಸಲಾಗುತ್ತಿದೆ. ಕೆಲವು ಸಾಮಾಜಿಕ ವ್ಯಾಧಿಗಳನ್ನು ಕಾನೂನಿನ ಭಯದಿಂದ ಸರಿಪಡಿಸಲು ಸಾಧ್ಯವಿಲ್ಲ. ಹಾಗೆ ನೋಡಿದರೆ, ‘ಸತಿ ಸಹಗಮನ’ ಪದ್ಧತಿಯ ಹೊರತಾಗಿ ಬೇರಾವುದೇ ಸಾಮಾಜಿಕ ಪಿಡುಗನ್ನು ಪರಿಣಾಮಕಾರಿ ಯಾಗಿ ಗುಣಪಡಿಸಲು ಸಾಧ್ಯವಾಗಿಲ್ಲ ಎನ್ನಬೇಕು.

ದೇಶಕ್ಕೆ ಸ್ವಾತಂತ್ರ್ಯ ದಕ್ಕಿ 7 ದಶಕಗಳು ಕಳೆದಿದ್ದರೂ, ಕಠಿಣ ಕಾನೂನುಗಳಿದ್ದರೂ ಬಾಲ್ಯವಿವಾಹ, ವರದಕ್ಷಿಣೆಯಂಥ ಪಿಡುಗುಗಳು ಇನ್ನೂ ಕೆಲವೆಡೆ ಅಸ್ತಿತ್ವದಲ್ಲಿವೆ. ಎಲ್ಲಕ್ಕಿಂತ ಮಿಗಿಲಾಗಿ, ಜನರಿಗೆ ಜಾತಿಯ ಜಂಜಾಟ ಬೇಡವಾದರೂ, ನಮ್ಮ ರಾಜಕಾರಣಿಗಳಿಗೆ ತಮ್ಮ ಅಸ್ತಿತ್ವವನ್ನು ಕಾಯ್ದು ಕೊಳ್ಳಲು, ರಾಜಕೀಯದ ಏಣಿಯಲ್ಲಿ ಮೇಲೇರಲು ಜಾತಿ ಅತ್ಯವಶ್ಯಕವಾಗಿದೆ.

ಹೀಗಾಗಿ ಅವರು ಆದಿತ್ಯನಾಥರ ಈ ‘ಧ್ಯೇಯ’ಕ್ಕೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಅಡ್ಡಗಾಲು ಹಾಕುವುದನ್ನು ಅಲ್ಲಗಳೆಯಲಾಗದು! ಹೀಗಾಗಿ, ‘ಜಾತಿ ಮೇಲಾಟವನ್ನು ನಿಯಂತ್ರಿ ಸುವ’ ಆದಿತ್ಯನಾಥರ ಈ ಮಿಷನ್ ಕೂಡ ಮಿಕ್ಕ ಆದೇಶಗಳಿಗೆ ಒದಗಿದ ಸ್ಥಿತಿಯನ್ನೇ ತಂದುಕೊಳ್ಳು ವುದೇ? ಎಂಬುದು ಕೆಲವರಲ್ಲಿ ಮಡುಗಟ್ಟಿರುವ ಪ್ರಶ್ನೆ.

‘ಜಾತಿ’ ಎಂಬ ಹಣೆಪಟ್ಟಿಯನ್ನು ಸುತ್ತುವರಿದಿರುವ ಹಲವು ಸಂಗತಿಗಳು (ತಾರತಮ್ಯ, ಮೇಲುಗೈ, ಅಸ್ಪೃಶ್ಯತೆ ಇತ್ಯಾದಿ) ದೇಶದೆಲ್ಲೆಡೆ ಇದ್ದರೂ, ಉತ್ತರ ಪ್ರದೇಶದಲ್ಲಿ ಅವು ತುಸು ಹೆಚ್ಚೇ ಎನ್ನುವ ಮಾತಿದೆ. ಆದಿತ್ಯನಾಥರ ಸರಕಾರದ ಆದೇಶವನ್ನು ಓದಿದರೆ ಇದು ಸ್ಪಷ್ಟವಾಗುತ್ತದೆ.

ಉತ್ತರ ಪ್ರದೇಶದಲ್ಲಿ ‘ಜಾತಿ ನೋಡಿ ಮಣೆ ಹಾಕು’ ಎಂಬ ಗಾದೆಮಾತು ಚಾಲ್ತಿಯಲ್ಲಿದೆ ಎನ್ನುತ್ತಾರೆ ಕೆಲವು ಸಮಾಜವಿಜ್ಞಾನಿಗಳು. ಚುನಾವಣಾ ರಾಜಕಾರಣದಲ್ಲಿ ಜಾತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ನಮ್ಮ ದೇಶದಲ್ಲಿ ಕಾಣುವ ಬಹಿರಂಗ ಸತ್ಯ. ಆದರೆ ಉತ್ತರ ಪ್ರದೇಶ ದಲ್ಲಂತೂ ಈ ಪರಿಪಾಠವು ಸ್ಫುಟವಾಗಿ/ಬಹಿರಂಗವಾಗಿ ಗೋಚರಿಸುತ್ತದೆ ಎಂಬುದು ಚುನಾವಣಾ ವಿಶ್ಲೇಷಕರು ಬರೆಯುವ ಷರಾ. ದೇಶದ ಮಿಕ್ಕ ರಾಜ್ಯಗಳಲ್ಲಿ ‘ನಿಮ್ಮ ಜಾತಿ ಯಾವುದು?’ ಎಂದು ಅಪರಿಚಿತರನ್ನು ಪ್ರಶ್ನಿಸಲು ಸಂಕೋಚಪಟ್ಟರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಯಾವುದೇ ಸಂಕೋಚ/ಮುಜುಗರ ಇಲ್ಲದೆಯೇ ಹಾಗೆ ನಿರಾಳವಾಗಿ ಪ್ರಶ್ನಿಸುತ್ತಾರಂತೆ.

ತಮ್ಮ ವಾಹನಗಳ ಮೇಲೆ ತಮ್ಮ ಜಾತಿಯ ಹೆಸರನ್ನು ದೊಡ್ಡದಾಗಿ ಬರೆಯುವುದು, ಈ ಊರಿನಲ್ಲಿ ಯಾವ ಜಾತಿಯವರ ಜಹಗೀರು ನಡೆಯುತ್ತದೆ ಎಂದೆಲ್ಲಾ ಹೇಳುವುದು ತೀರಾ ಮಾಮೂಲು ಎನ್ನಲಾಗುತ್ತದೆ. ಯೋಗಿ ಆದಿತ್ಯನಾಥರು ಇವೆಲ್ಲ ಅಂಶಗಳನ್ನೂ ತಮ್ಮ ಆದೇಶದಲ್ಲಿ ಉಲ್ಲೇಖಿಸ ಬೇಕಿದ್ದರೆ, ಇವು ಕೇವಲ ಆರೋಪವಾಗಿರದೆ ಕಹಿಸತ್ಯವಾಗಿರಲೇಬೇಕು ಎನಿಸುತ್ತದೆ.

ಈ ಭೂಮಿಗೆ ಬರುವಾಗ ಯಾರೂ ಜಾತಿಯನ್ನು ಕೇಳಿ, ಪಡೆದುಕೊಂಡು ಬರುವುದಿಲ್ಲ. ‘ಇದು ಭಗವಂತನ ಕೊಡುಗೆ’ ಎನ್ನುತ್ತಾರೆ. ಅಂತೆಯೇ ಒಬ್ಬರನ್ನು ಜಾತಿಯ ಹೆಸರಿನಲ್ಲಿ ದೂಷಿಸುವುದು, ಕೀಳಾಗಿ ನೋಡುವುದು ಅಥವಾ ಒಂದು ಜಾತಿಯನ್ನು ವೈಭವೀಕರಿಸುವುದು ಅಕ್ಷಮ್ಯ.

ಹಾಗೆಯೇ ಈ ಜಾತಿಪದ್ಧತಿಗೆ ಸುದೀರ್ಘ ಇತಿಹಾಸವಿದ್ದು, ಜನರು ಅದರೊಳಗೆ ಹುಟ್ಟಿ, ಬೆಳೆದು, ಬದುಕುತ್ತಿರುವಾಗ, ಯಾರೋ ಹೇಳಿದರು ಅಂತ ಅದನ್ನು ಬಿಡುವುದೂ ಸುಲಭದ ಮಾತಲ್ಲ. ‘ಜೀವ ಬಿಟ್ಟೇವು, ಆದರೆ ಜಾತಿಯನ್ನು ಬಿಡುವುದಿಲ್ಲ’ ಎನ್ನುವವರೂ ಈ ದೇಶದಲ್ಲಿ ಇಲ್ಲದಿಲ್ಲ. ಅಂತೆಯೇ ಈ ಜಾತಿವ್ಯವಸ್ಥೆಯನ್ನು ಬುಡಸಹಿತ ಕಿತ್ತುಹಾಕುತ್ತೇವೆ ಎನ್ನುವುದು ಅಸಾಧ್ಯದ ಮಾತು.

ಅದು ಮನೆಯ ನಾಲ್ಕು ಗೋಡೆಯ ಒಳಗಿರಲಿ, ಅವರವರ ಸಾಮಾಜಿಕ-ಧಾರ್ಮಿಕ ಆಚರಣೆಗೆ ಸೀಮಿತವಾಗಿರಲಿ, ಅದು ಮನೆಯಿಂದ ಹೊರಗೆ ಬೀದಿಗೆ ಬಂದು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸ ದಿರಲಿ. ಜನರು ಎಷ್ಟೇ ವಿದ್ಯಾವಂತರಿರಲಿ, ಸುಸಂಸ್ಕೃತರಾಗಿರಲಿ, ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಮೇಲುಸ್ತರದಲ್ಲಿರಲಿ, ಅವರಲ್ಲಿ ‘ಜಾತಿಪ್ರಜ್ಞೆ’ ಎಂಬುದು ಇದ್ದೇ ಇರುತ್ತದೆ ಎಂಬುದು ಜನರೇ ಒಪ್ಪಿಕೊಂಡ ಸತ್ಯ.

ದೇಶದಲ್ಲಿ ‘ಜಾತಿ’ ಎಂಬುದು ಎಷ್ಟು ಆಳವಾಗಿ ಬೇರೂರಿದೆ; ಅದನ್ನು ಬಿಟ್ಟು ನಮ್ಮ ಬದುಕಾಗಲೀ, ರಾಜಕೀಯ ವ್ಯವಸ್ಥೆಯಾಗಲೀ ಮುಂದೆ ಸಾಗದು ಎಂಬುದಕ್ಕೆ ಇಷ್ಟು ಸಾಕಲ್ಲವೇ?!

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)