Dr Karaveera Prabhu Kyalakonda Column: ಕ್ಯಾನ್ಸರ್ ಎಂಬ ಮಾರಿ: ಬದಲಾದ ಜೀವನಶೈಲಿಯ ಪ್ರತಿಬಿಂಬ
ಮೂವತ್ತೆರಡು ವಯಸ್ಸಿನ ಸಿನಿ ನಟಿ ಪೂನಂ ಪಾಂಡೆ ಕಳೆದ ವರ್ಷ ಇದೇ ದಿನ ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಆದರೆ ಮರುದಿನ, ತಾನು ಸತ್ತಿಲ್ಲ, ಬದುಕಿದ್ದೇನೆ. ಗರ್ಭಗೊರಳಿನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಈ ರೀತಿಯ ಸುದ್ದಿ ಹರಡಿದ್ದಾಗಿ ಹೇಳಿಕೊಂಡಿದ್ದಳು
ತನ್ನಿಮಿತ್ತ
ಡಾ.ಕರವೀರಪ್ರಭು ಕ್ಯಾಲಕೊಂಡ
Cancer is that lawful word we all fear when we go to the doctor for a physical exam ,but in that dark moment we hear it the world we live in and the people we share it with begin to illuminate things we did not even pay attention to " ---B.P.Philips
ಮೂವತ್ತೆರಡು ವಯಸ್ಸಿನ ಸಿನಿ ನಟಿ ಪೂನಂ ಪಾಂಡೆ ಕಳೆದ ವರ್ಷ ಇದೇ ದಿನ ಮೃತಪಟ್ಟಿರುವು ದಾಗಿ ಸುದ್ದಿಯಾಗಿತ್ತು. ಆದರೆ ಮರುದಿನ, ತಾನು ಸತ್ತಿಲ್ಲ, ಬದುಕಿದ್ದೇನೆ. ಗರ್ಭಗೊರಳಿನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಈ ರೀತಿಯ ಸುದ್ದಿ ಹರಡಿದ್ದಾಗಿ ಹೇಳಿಕೊಂಡಿದ್ದಳು. ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಾದಕ ನಟಿ ಪೂನಂ ಪಾಂಡೆ ವಿವಾದಾತ್ಮಕ ಹೇಳಿಕೆಗಳಿಂದಲೇ ಖ್ಯಾತಿ ಪಡೆದಿದ್ದಳು.
ಆದರೆ ಆಕೆಯ ಈ ‘ಪ್ರಹಸನ’ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತ ವಾಗಿತ್ತು. ಇದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಈ ಕ್ಯಾನ್ಸರ್ ನೂರಾರು ಜನರನ್ನು ಬಲಿ ತೆಗೆದು ಕೊಂಡಿದೆ. ಇನೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ , ಸಂಸದೆ ಸುಧಾಮೂರ್ತಿ ಅವರು ಈ ಕ್ಯಾನ್ಸರ್ ಬರದಂತೆ ತಡೆಯಲು ದೇಶಾದ್ಯಂತ ಉಚಿತವಾಗಿ ಲಸಿಕೆ ನೀಡಬೇಕೆಂದು ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ ಒತ್ತಾಯಿಸಿದ್ದರು.
ಇದನ್ನೂ ಓದಿ: Dr Karaveera Prabhu Kyalakonda Column: ಕ್ಯಾನ್ಸರ್ ಎಂಬ ಮಾರಿ: ಬದಲಾದ ಜೀವನಶೈಲಿಯ ಪ್ರತಿಬಿಂಬ
ಫೆ.4 ವಿಶ್ವ ಕ್ಯಾನ್ಸರ್ ಜಾಗೃತಿ ದಿನ : ಕ್ಯಾನ್ಸರ್ ರೋಗ ಮನುಕುಲದ ದೊಡ್ಡ ಶತ್ರು. ಅನಾದಿ ಕಾಲ ದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಕ್ಯಾನ್ಸರ್ ಎಂದರೆ ಭಯ. ಕ್ಯಾನ್ಸರ್ ಎಂದರೆ ಸಾವು ಎಂಬ ನಂಬಿಕೆಗಳು ಜನರಲ್ಲಿ. ಆದರೆ,ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದೆ. ವಿಜ್ಞಾನ ನಾಗಾಲೋಟದಿಂದ ಮುನ್ನಡೆಯುತ್ತಿದೆ.
ದಿನ ಬೆಳಗಾದರೆ ಹೊಸ ಹೊಸ ಆವಿಷ್ಕಾರಗಳು ಮನುಕುಲದ ಒಳಿತಿಗಾಗಿ ಬರುತ್ತಿವೆ. ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರವರಿ ೪ ರಂದು ವಿಶ್ವ ಕ್ಯಾನ್ಸರ್ ಜಾಗೃತಿದಿನ ಎಂದು ಆಚರಿಸಲಾಗುತ್ತಿದೆ. ಅಂತರ್ ರಾಷ್ಟ್ರೀಯ ಕ್ಯಾನ್ಸರ್ ತಡೆ ಒಕ್ಕೂಟ ಈ ದಿನಾಚರಣೆಯನ್ನು 2000 ದಿಂದ ಜಾರಿಗೆ ತಂದಿದೆ. ಯುನೆಸ್ಕೊ ಮಹಾನಿರ್ದೆಶಕರು, ಫ್ರೆಂಚ್ ಅಧ್ಯಕ್ಷರಾಗಿದ್ದ ಜಾಕಸ್ ಚಿರಾಕ್ ಪ್ಯಾರಿಸ್ ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದರು. ದಿನೇ ದಿನೇ ಹೆಚ್ಚುತ್ತಿರುವ ಕ್ಯಾನ್ಸರ್ ರೋಗವನ್ನು ತಡೆಗಟ್ಟುವುದರ ಬಗ್ಗೆ, ಆರಂಭಿಕ ಹಂತದಲ್ಲಿ ಗುರುತಿಸುವ ಬಗ್ಗೆ ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿ, ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಕಲ್ಪನೆ ಗಳನ್ನು ಹೋಗಲಾಡಿಸುವ ಮಹದಾಸೆಯನ್ನು ಈ ಆಚರಣೆ ಹೊಂದಿದೆ.
ಬಹುತೇಕ ಎಲ್ಲ ಕ್ಯಾನ್ಸರ್ ಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಪರೀಕ್ಷೆಗಳು ಇಂದು ಲಭ್ಯವಾಗಿವೆ. ಕ್ಯಾನ್ಸರ್ ರೋಗವನ್ನು ಕೂಡಾ ಗೆಲ್ಲಲು ಸಾಧ್ಯವಿದೆ ಎಂಬ ಧನಾತ್ಮಕ ಸಂದೇಶವನ್ನು ಸಮಾಕ್ಕೆ ತಲುಪಿಸುವ ಗುರುತರವಾದ ಗುರಿಯನ್ನು ಈ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಹೊಂದಿದೆ.
ಕ್ಯಾನ್ಸರ್ ಪ್ರತಿ ವರ್ಷ 2 ಕೋಟಿ ಹೊಸ ರೋಗಿಗಳ ಉಡುಗೊರೆಯನ್ನು ಜಗತ್ತಿಗೆ ನೀಡುತ್ತಿದೆ. ಸದ್ಯ ಪ್ರತಿ ವರ್ಷ ಒಂದು ಕೋಟಿ ರೋಗಿಗಳ ಪ್ರಾಣ ಪಕ್ಷಿ ತೆಗೆಯುವ ಕ್ಯಾನ್ಸರ್ 2030 ರ ವೇಳೆಗೆ 1.3 ಕೋಟಿ ರೋಗಿಗಳನ್ನು ನುಂಗಿ ನೀರು ಕುಡಿಯಲಿದೆ. ಶೇ.10ರಷ್ಟು ರೋಗಿಗಳು ಅನುವಂಶಿಕ ರೂಪಾಂತರದಿಂದಾಗಿ ಮತ್ತು ಶೇ.27ರಷ್ಟು ಕ್ಯಾನ್ಸರ್ ಸಾವುಗಳನ್ನು ತಡೆಹಿಡಿಯಬಹುದಾದ ಕಾರಣಗಳಿಂದ ಸಂಭವಿಸುವವು. ಅವುಗಳೆಂದರೆ ತಂಬಾಕು ಸೇವನೆ ಮತ್ತು ಮದ್ಯಪಾನ.
ಭಾರತದಲ್ಲಿ ಪುಪ್ಪುಸ ಮತ್ತು ಸ್ತನಗಳಲ್ಲಿ ಉಂಟಾಗುವ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದ್ದು , ರೋಗ ನಿದಾನ ಮಾಡಿದಾಗ 57% ಸ್ತನ ಕ್ಯಾನ್ಸರ್, 60% ಸರ್ವೈಕಲ್ ಕ್ಯಾನ್ಸರ್, 66.6% ತಲೆ ಮತ್ತು ಕತ್ತಿನ ಕ್ಯಾನ್ಸರ್, 50.8% ಹೊಟ್ಟೆಯ ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಇರುತ್ತವೆ. 2020ರಲ್ಲಿ ಹಾವಳಿ ಗಿಂತ 1208% ಹೆಚ್ಚು ಕ್ಯಾನ್ಸರ್ ಹಾವಳಿ 2025 ರಲ್ಲಿ ಹೆಚ್ಚಾಗಿರುವುದು ಅಧ್ಯಯನ ಗಳಿಂದ ಕಂಡು ಬಂದಿದೆ.
ಈಗ ಕ್ಯಾನ್ಸರ್ ನ್ನು ಜೀವನ ಶೈಲಿಯ ರೋಗ ಎಂದು ಪರಿಗಣಿಸಲಾಗಿದೆ. 2025ರಿಂದ 2027 ರವರೆಗಿನ ಸಾಲಿನ ವಿಶ್ವ ಕ್ಯಾನ್ಸರ್ ದಿನದ ಘೋಷ ವಾಕ್ಯ ‘ United by Unique ’. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ವೈಯಕ್ತಿಕಗೊಳಿಸಿದ, ರೋಗಿಯ ಕೇಂದ್ರಿತ ಆರೈಕೆಯ ನಿರ್ಣಾಯಕ ಪಾತ್ರವನ್ನು ವ್ಯಾಖ್ಯಾನಿಸುತ್ತದೆ .ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಕ್ಯಾನ್ಸರ್ ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿಸುತ್ತದೆ.
ಕ್ಯಾನ್ಸರ್ ಅಂದರೆ ಸಾವಲ್ಲ: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ 2ನೆಯ ಅಗ್ರಸ್ಥಾನ ವನ್ನು (ಮೊದಲನೆ ಸ್ಥಾನ ಹೃದಯಾಘಾತ ) ಅಲಂಕರಿಸಿದೆ. ಈ ಭಯಾನಕ ಕಾಯಿಲೆಗೆ ತುತ್ತಾದ ರೋಗಿ ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ಹಿಂದಿನ ಕಾಲದಲ್ಲಿ ಪರಿಣಿತ ವೈದ್ಯರ ಸೇವೆ, ಅತ್ಯಾಧುನಿಕ ತಂತ್ರಜ್ಞಾನ ದುರ್ಲಭವಾಗಿತ್ತು. ಬಡತನ, ಅನಕ್ಷರತೆ, ಅಜ್ಞಾನ, ಮಡುಗಟ್ಟಿ ನಿಂತ ಮೂಢನಂಬಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು.
ಈ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತ್ತು. ತಂತ್ರಜ್ಞಾನದ ಕ್ರಾಂತಿ, ಪರಿಣಿತ ವೈದ್ಯರ ಲಭ್ಯತೆ, ಏರಿದ ಜನರ ತಿಳಿವಳಿಕೆ ಮಟ್ಟದಿಂದ ಕ್ಯಾನ್ಸರ್
ರೋಗವನ್ನು ಮಟ್ಟ ಹಾಕಲು ಇಂದು ಸಾಧ್ಯವಾಗಿದೆ. ಇದು ಗರ್ಭ ಗೊರಳಿನ ಕ್ಯಾನ್ಸರ್ ವಿಷಯ ದಲ್ಲಂತೂ ನೂರಕ್ಕೆ ನೂರು ಸತ್ಯ.
ಇಂದು ಪ್ರಪಂಚದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಷ್ಟೇ ಅಲ್ಲ, ಸಂಪದ್ಭರಿತ ಮುಂದು ವರೆದ ರಾಷ್ಟ್ರಗಳಲ್ಲೂ, ಮಾಯವಾಗಿದ್ದ ಸೋಂಕು ರೋಗಗಳ ಪುನರಾಗಮನವಾಗಿ ಅವು ಜನಾ ರೋಗ್ಯ ಸಮಸ್ಯೆಗಳಾಗುವ ಸಂಭವ ಇರುವಂತೆಯೇ, ಇಂದು ಅಸಾಂಕ್ರಾಮಿಕ ರೋಗಗಳ ಅಟ್ಟ ಹಾಸ ಹೆಚ್ಚುತ್ತಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಕ್ಯಾನ್ಸರ್ ರೋಗದ ವಿರುದ್ಧದ ಲಸಿಕೆಯ ಬಳಕೆಯಲ್ಲಿ ಕಂಡು ಬಂದಿರುವ ಯಶಸ್ಸು ಕಡಿಮೆ ಪ್ರಮಾಣದ್ದಾದರೂ, ಪ್ರಯತ್ನಗಳು ಅವ್ಯಾಹತವಾಗಿ ಮುಂದುವರೆದಿವೆ.
ಇಂದು ಗರ್ಭಗೊರಳಿನ ಕ್ಯಾನ್ಸರ್‌ಗೆ ಕಡಿವಾಣ ಹಾಕುವ ಲಸಿಕೆ ಲಭ್ಯವಾಗಿದೆ. ಎಚ್.ಪಿ.ವಿ . ಮೂಲಕ ಗರ್ಭಗೊರಳಿನ ಕ್ಯಾನ್ಸರ್ ಉಂಟುಮಾಡುವ ಸೋಂಕನ್ನು ತಡೆಯಲು ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಬಹಳಷ್ಟು ಕ್ಯಾನ್ಸರ್ ಗಳಂತೆ ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗುವವರೆಗೂ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ಮಹಿಳೆಯರನ್ನು ಹೆಚ್ಚು ಕಾಡುವ ಕ್ಯಾನ್ಸರ್ ಗಳಲ್ಲಿ ಇದು ನಾಲ್ಕನೆಯ ಸ್ಥಾನದಲ್ಲಿದೆ. ಶೇ. 99ರಷ್ಟು ಪ್ರಕಣಗಳಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಎಚ್ .ಪಿ.ವಿ.(ಹ್ಯೂಮನ್ ಪ್ಯಾಪಿಲೋಮ ವೈರಸ) ಯಿಂದ ಈ ಕ್ಯಾನ್ಸರ್ ಉಂಟಾಗುತ್ತದೆ.
ಕಿಬ್ಬೊಟ್ಟೆಯಲ್ಲಿ ನೋವು, ಯೋನಿಯ ಮೂಲಕ ಸತತ ನೀರಿನಂತಹ ಸೋರಿಕೆ ಕಂದು ಅಥವಾ ಕೆಂಪು ಬಣ್ಣದ್ದಿರಬಹುದು. ಕೆಲವೊಮ್ಮೆ ಕೆಟ್ಟ ವಾಸನೆ ಬರಬಹುದು. ಋತುಚಕ್ರಗಳ ನಡುವೆ ಅಸಹಜ ರಕ್ತಸ್ರಾವ, ಸಂಭೋಗದ ಸಂದರ್ಭ ಅಥವಾ ನಂತರ ರಕ್ತಸ್ರಾವ ಸಂಭವಿಸಬಹುದು. ಅಲ್ಲದೆ ಹರ್ಪಿಸ್ ಅಥವಾ ಎಚ್.ಪಿ.ವಿ.ನಂತರ ಉಂಟಾಗುವ ಸೋಂಕು ಗರ್ಭಗೊರಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು.
ಇಂತಹ ಮುನ್ಸೂಚನೆಗಳು ಕಂಡುಬಂದ ಸ್ತ್ರೀಯರಿಗೆ ಎಚ್.ಪಿ.ವಿ.ಡಿಎಎನ್‌ಎ ಪರೀಕ್ಷೆ ನಡೆಸಿದರೆ ಈ ರೋಗದ ಬೆಳವಣಿಗೆ ಕುರಿತು ವಿಶ್ವಾಸಾರ್ಹ ಮಾಹಿತಿ ದೊರೆಯುತ್ತದೆ. ಉಪಚಾರ: ಗರ್ಭ ಗೊರ ಳಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಥವಾ ಕಿಮೊ-ರೇಡಿಯೋ ಥೆರಪಿಗಳಿಲ್ಲದೆ ನಿಯಂತ್ರಿಸ ಬಹುದಾದ ರೋಗವಾಗಿದೆ.
ಪ್ರಾಥಮಿಕ ನಿಯಂತ್ರಣ ಕ್ರಮಗಳೆಂದರೆ ವ್ಯಾಕ್ಸಿನೇಶನ್ ಮತ್ತು ಸಾಮಾಜಿಕ ಶಿಕ್ಷಣ, ಎಚ್.ಪಿ.ವಿ. ಸೋಂಕಿಗೆ ತೆರೆದುಕೊಳ್ಳುವ ಸಾಧ್ಯತೆ ಕಡಿಮೆಗೊಳಿಸುವುದು ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ಕಾಂಡೋಮ್ ಬಳಕೆಯಿಂದ ತಡೆಯುವುದು. ಆದರೆ, ಕಾಂಡೋಮ್ ಬಳಕೆ ಎಚ್.ಪಿ.ವಿ.ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸುವುದಿಲ್ಲ. ರೋಗ ವೃದ್ಧಿಯಾಗುವ ಮುನ್ನ ಚಿಕಿತ್ಸೆ ಪಡೆಯುವುದು. ಅದಕ್ಕೆ ಸರ್ವೈಕಲ್ ಸೈಟಾಲಾಜಿ ಅಥವಾ ಎಚ್.ಪಿ.ವಿ.ಪರೀಕ್ಷೆ ರೋಗ ನಿರ್ಧರಿಸಲು ಅಗತ್ಯ.
ಭಾರತದಲ್ಲಿ ಗರ್ಭಗೊರಳಿನ ಕ್ಯಾನ್ಸರ್ ನಿಂದ ಉಂಟಾಗುವ ಮರಣ ಸಂಖ್ಯೆ ಕಳೆದ ಹತ್ತು ವರ್ಷ ಗಳಿಂದ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಕ್ಯಾನ್ಸರ್ ಪೂರ್ವ ಹಂತದಲ್ಲಿ ಗರ್ಭಗೊರಳಿನ ಪರೀಕ್ಷೆ ನಡೆಸಿ ಅದರಲ್ಲಿ ಆಗುವ ಬದಲಾವಣೆಗಳನ್ನು ಪತ್ತೆ ಮಾಡುತ್ತಿರುವುದು.ಅಸಹಜ ಜೀವ ಕೋಶಗಳನ್ನು ಮುಂಚೆಯೇ ಪತ್ತೆ ಮಾಡಿದರೆ ಕ್ಯಾನ್ಸರ್ ನಿಯಂತ್ರಣ ಅಥವಾ ಚಿಕಿತ್ಸೆ ನೀಡ ಬಹುದು .ಎಚ್.ಪಿ.ವಿ. ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದರೂ, ರೋಗ ಪರೀಕ್ಷೆ ಬಹಳ ಮುಖ್ಯವಾದದ್ದು ಎಂಬುದನ್ನು ಮರೆಯುವಂತಿಲ್ಲ.
ಗರ್ಭಗೊರಳ ಕ್ಯಾನ್ಸರ್ ಆಳ - ಅಗಲ : ಈಗಿನ ಅಂದಾಜಿನ ಪ್ರಕಾರ, ಪ್ರತಿ ವರ್ಷ 1 ಲಕ್ಷದ 32 ಸಾವಿರ ಮಹಿಳೆಯರಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಪತ್ತೆಯಾಗುತ್ತಿದೆ. 74 ಸಾವಿರ ಈ ಕಾಯಿಲೆ ಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಗರ್ಭಗೊರಳಿನ ಕ್ಯಾನ್ಸರ್ ಬರುವ ಅಪಾಯ ಶೇ.2.4ರಷ್ಟಿದೆ.
ವಿಶ್ವದಲ್ಲಿ ಈ ಪ್ರಮಾಣ ಶೇ.1.3 .ಶೇ.84ರಷ್ಟು ಗರ್ಭಗೊರಳಿನ ಕ್ಯಾನ್ಸರ್ ರೋಗಿಗಳು 30 - 64 ವಯೋಮಾನದವರು. ದಕ್ಷಿಣ ಏಷ್ಯಾದಲ್ಲಿ ಪ್ರತಿ ಒಂದು ಗಂಟೆಗೆ ಈ ಕ್ಯಾನ್ಸರ್ ನಿಂದ ಸಾಯು ತ್ತಿರುವ ಪ್ರತಿ 10 ಮಹಿಳೆಯರಲ್ಲಿ 8 ಮಂದಿ ಭಾರತಕ್ಕೆ ಸೇರಿದವರಾಗಿರುತ್ತಾರೆ ಎಂಬುದು ಹೆಚ್ಚು ಆತಂಕಕಾರಿ.
ಕ್ಯಾನ್ಸರ್ ಗೆ ಕಾರಣ : ಬಹುತೇಕ ಗರ್ಭಗೊರಳಿನ ಕ್ಯಾನ್ಸರಿಗೆ ಎಚ್.ಪಿ.ವಿ. ಕಾರಣ. ಮಾನವರ ದೇಹದಲ್ಲಿ ಎಚ್.ಪಿ.ವಿ ಇದ್ದೇ ಇರುತ್ತದೆ. ಎಚ್.ಪಿ.ವಿಯ 16 ಹಾಗೂ 18 ನೇ ಮಾದರಿ ಶೇ.70ರಷ್ಟು ಈ ಕ್ಯಾನ್ಸರ್ ಪ್ರಕರಣಗಳಿಗೆ ಮೂಲ ಕಾರಣ. ಜೀವಕ್ಕೆ ಬೆದರಿಕೆ ಒಡ್ಡುವ ಕಾಯಿಲೆ ಇದು. ಭಾರತದಲ್ಲಿ ಮಹಿಳೆಯರಿಗೆ ಬರುವ ಕ್ಯಾನ್ಸರ್ ಗಳಲ್ಲಿ ಇದಕ್ಕೆ ಪ್ರಥಮ ಸ್ಥಾನ. ಆದರೆ ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಪ್ರಚಾರ ಇದೆ. ಗರ್ಭಗೊರಳಿನ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲ. ಹೀಗಾಗಿ ಭಾರತ ದಲ್ಲಿ ಹೆಚ್ಚಿನ ಮಹಿಳೆಯರಿಗೆ ಈ ಬಗ್ಗೆ ಅರಿವಿರುವುದೇ ಇಲ್ಲ. ಆಸ್ಪತ್ರೆಗೆ ಬರುವ ವೇಳೆಗೆ ತಡವಾಗಿ ಹೋಗಿರುತ್ತದೆ. ಬದುಕಿಸುವುದು ಕಷ್ಟ ಎನ್ನುವ ಹಂತದಲ್ಲಿ ಇರುತ್ತಾರೆ.
ಕ್ಯಾನ್ಸರ್ ಗೂ ಬಂತು ಲಸಿಕೆ : ಈಗ ಈ ಕ್ಯಾನ್ಸರ್‌ಗೆ ಲಸಿಕೆ ಬಂದಿದೆ. ಅಮೆರಿಕ, ಯುರೋಪ್ ಹಾಗೂ ಕೆಲವು ಏಷ್ಯನ್ ರಾಷ್ಟ್ರಗಳಲ್ಲೂ ಈ ಲಸಿಕೆ ಪ್ರಚಲಿತವಿದೆ. ಈ ಲಸಿಕೆ ಭಾರತದ ಮಾರು ಕಟ್ಟೆಯನ್ನೂ ಪ್ರವೇಶಿಸಿದೆ. ಹುಡುಗಿಯರಿಗೆ 9 ವರ್ಷದ ನಂತರ ಈ ಲಸಿಕೆ ನೀಡಬಹುದು. 6 ತಿಂಗಳ ಅವಧಿಯಲ್ಲಿ 3 ಡೋಸ್ ಗಳಲ್ಲಿ ಈ ಲಸಿಕೆ ನೀಡಲಾಗುತ್ತದೆ. ಲೈಂಗಿಕ ಚಟುವಟಿಕೆ ಆರಂಭಕ್ಕೆ ಮುಂಚೆ ನೀಡಿದರೆ ಇದು ಹೆಚ್ಚು ಪರಿಣಾಮಕಾರಿ ಎಂದು ಸ್ತ್ರೀರೋಗ ತಜ್ಞರು ಹೇಳುತ್ತಾರೆ.
ಲಸಿಕೆ ಹಾಕಿಸಿಕೊಂಡರೂ, ಮಹಿಳೆಯರು ಪ್ಯಾಪ್ ಸ್ಮಿಯರ್/ ಎಚ್.ಪಿ.ವಿ- ಡಿಎಎನ್‌ಎ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ಯಾಪ್ ಸ್ಮಿಯರ್ ಪರೀಕ್ಷೆಯನ್ನು 21 ವರ್ಷಕ್ಕಿಂತ ಮೇಲ್ಪಟ್ಟ, ಲೈಂಗಿಕವಾಗಿ ಸಕ್ರಿಯವಾಗಿ ಇರುವ ಮಹಿಳೆಯರಲ್ಲಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ 65 ವರ್ಷ ವಯಸ್ಸಿ ನವರೆಗೂ ಮಾಡಿಸಬೇಕಾಗುತ್ತದೆ. ಇದೇ ರೀತಿ 5 ವರ್ಷಗಳಿಗೊಮ್ಮೆ ಎಚ್. ಪಿ.ವಿ- ಡಿಎಎನ್‌ಎ ಪರೀಕ್ಷೆ ಸಹ ಮಾಡಿಸಬಹುದು.
ಬಜೆಟ್ ತಂದ ಭಾಗ್ಯ : ನಿರ್ಮಲಾ ಸೀತಾರಾಮನ್ ಅವರುಕಳೆದ ವರ್ಷ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಗರ್ಭಗೊರಳ ಕ್ಯಾನ್ಸರ್ ತಡೆಗೆ 9 ರಿಂದ 14 ವರ್ಷದ ಬಾಲಕಿಯರಿಗೆ ಉಚಿತ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ. ದೇಶದ ಕಡುಬಡವರಿಗೆ ಲಸಿಕೆಯ ವೆಚ್ಚ ಭರಿಸುವುದು ದುಸ್ತರವಾಗಿತ್ತು. ಈ ಲಸಿಕೆಯನ್ನು ‘ಇಂಧ್ರ ಧನುಷ್’ ಯೋಜನೆಯ ಮೂಲಕ ವಿಶ್ವಸಂಸ್ಥೆ ಯೋಜನೆಯಡಿ ನೀಡಿ ಗರ್ಭ ಗೊರಳಿನ ಕ್ಯಾನ್ಸರ್ ತಡೆಗೆ ಸಮರ ಸಾರಿರುವುದು ಸೂಕ್ತ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಬಂಧಿಸಬಹುದಾದ, ಮಹಿಳೆಯರನ್ನು ಕಾಡುವ ಗರ್ಭಗೊರಳಿನ ಕ್ಯಾನ್ಸರ್‌ನತ್ತ ಗಮನ ಹರಿಸಿರುವುದೊಂದು ಆರೋಗ್ಯಕರ ಬೆಳವಣಿಗೆಯೇ ಸೈ ಇದು ವಿಕಸಿತ ಭಾರತದ ಆಧಾರಸ್ಥಂಭಗಳಬ್ಬರಾದ ಮಹಿಳೆಯರಿಗೆ ನೀಡಿದ ಅಮೂಲ್ಯ ಉಡು ಗೊರೆ.
ಕೊನೆಯ ಮಾತು
ಕ್ಯಾನ್ಸರ್ ಈಗ ಗೆಲ್ಲುವ ಕಾಯಿಲೆಯಾಗುತ್ತಿದೆ. ಮೊದಲ ಹಜ್ಜೆಯಾಗಿ ಗರ್ಭಗೊರಳಿನ ಕ್ಯಾನ್ಸರಿಗೆ ಲಸಿಕೆ ಬಂದಿದೆ. ಮುಂಬರುವ ದಿನಗಳಲ್ಲಿ ವೈದ್ಯವಿeನಿಗಳ ಪರಿಶ್ರಮದಿಂದ ಎಲ್ಲಾ ಕ್ಯಾನ್ಸರಿಗೂ ಕಡಿವಾಣ ಹಾಕಲು ಸಾಧ್ಯವಾಗಬಹುದು. ಎಲ್ಲರೂ ಕೈ ಜೋಡಿಸೋಣ. ಕ್ಯಾನ್ಸರ್ ಕಟ್ಟಿ ಹಾಕೋಣ. Cancer may have started the fight , but I will finish it ಎಂಬ ಜೋಸೆಫ್ ಕ್ಯಾಂಪೆಲ್ ರ ಅರ್ಥ ಪೂರ್ಣ ಮಾತು ನಮಗೆಲ್ಲ ಸ್ಪೂರ್ತಿ ನೀಡಲಿ. ಅಂತಿಮ ಜಯ ಮನುಕುಲದ್ದಾಗಲಿ.
ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು,
ಕ್ಯಾಲಕೊಂಡ ಆಸ್ಪತ್ರೆ