ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

ಯತೀಂದ್ರ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮೆಚ್ಚಿಸಲು ಹೇಳಿದರೋ ಅಥವಾ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕನ್ಯಾರು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿದರೋ ಅಥವಾ ಅವರೇ ಸಮರ್ಥಿಸಿಕೊಂಡಂತೆ ಸೈದ್ಧಾಂತಿಕ ನಾಯಕತ್ವದ ಬಗ್ಗೆ ಮಾತನಾಡಿದರೋ, ಇಲ್ಲವೇ ರಾಜ್ಯಾದ್ಯಂತ ಸದ್ದಾಗುತ್ತಿರುವಂತೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿ ದರೋ ಗೊತ್ತಿಲ್ಲ

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

-

ಅಶ್ವತ್ಥಕಟ್ಟೆ

ranjith.hoskere@gmail.com

ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘ ಪರಿವಾರ ರಾಜ್ಯಾದ್ಯಂತ ಪಥ ಸಂಚಲನ ನಡೆಸಿ ದ್ದರೂ ಚಿತ್ತಾಪುರದಲ್ಲಿನ ಪಥಸಂಚಲನದ ಗದ್ದಲ ದೇಶಾದ್ಯಂತ ಚರ್ಚೆಗೆ ಕಾರಣವಾಗಿ, ಆಡಳಿತ ಪಕ್ಷ-ಪ್ರತಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. ಈ ಗೊಂದಲವನ್ನು ಮೀರಿಸುವಂತೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ, ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹಕ್ಕೆ ತುಪ್ಪ ಸುರಿದಿರುವ ವಿಷಯವೆಂದರೆ ಅದು ‘ಉತ್ತರಾಧಿಕಾರಿ’ಯ ಗೊಂದಲ.

ಹೌದು, ಸಿದ್ದರಾಮಯ್ಯ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಹೊತ್ತಿಸಿದ ಕಿಡಿ ಇದೀಗ ರಾಜ್ಯ ಕಾಂಗ್ರೆಸ್‌ನಲ್ಲಿರುವ ನಾಯಕತ್ವ ಕಿತ್ತಾಟವನ್ನು ಬಹಿರಂಗಗೊಳಿಸಿದೆ. ಯತೀಂದ್ರ ಹೇಳಿಕೆಯನ್ನು ಸೈದ್ಧಾಂತಿಕ ನಾಯಕತ್ವದ ವಿಷಯದಲ್ಲಿ ನೋಡಬೇಕೆಂದು ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರೂ ಅದು ಅಲ್ಲಿಗೇ ನಿಂತಿಲ್ಲ.

ಇದರೊಂದಿಗೆ ಈ ವಿಷಯದಲ್ಲಿ ಪರ-ವಿರೋಧ ಚರ್ಚೆ ಮೀರಿದ ರಾಜಕೀಯ ‘ಬೆಳವಣಿಗೆ’ಗಳಿಗೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳು ಬಿಹಾರ ಚುನಾವಣೆ ಬಳಿಕ ‘ರಂಗು’ ಪಡೆಯ ಲಿವೆ ಎಂದು ಅನೇಕರು ಭಾವಿಸಿದ್ದರು. ಆದರೆ ಸತೀಶ್ ಜಾರಕಿಹೊಳಿ ಅವರನ್ನು ಉತ್ತರಾಧಿಕಾರಿ ಸ್ಥಾನದಲ್ಲಿ ಕೂರಿಸುವ ಮಾತುಗಳನ್ನು ಯತೀಂದ್ರ ಹೇಳುತ್ತಿದ್ದಂತೆ ರಾಜ್ಯ ರಾಜಕೀಯ ಲೆಕ್ಕಾಚಾರ ಗಳೇ ತಲೆಕೆಳಗಾಗುವಂತೆ ಅದು ಮಾಡಿದೆ.

ಇದನ್ನೂ ಓದಿ: Ranjith H Ashwath Column: ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ಯತೀಂದ್ರ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮೆಚ್ಚಿಸಲು ಹೇಳಿದರೋ ಅಥವಾ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕನ್ಯಾರು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿದರೋ ಅಥವಾ ಅವರೇ ಸಮರ್ಥಿಸಿಕೊಂಡಂತೆ ಸೈದ್ಧಾಂತಿಕ ನಾಯಕತ್ವದ ಬಗ್ಗೆ ಮಾತನಾಡಿದರೋ, ಇಲ್ಲವೇ ರಾಜ್ಯಾದ್ಯಂತ ಸದ್ದಾಗುತ್ತಿರುವಂತೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿದರೋ ಗೊತ್ತಿಲ್ಲ. ಆದರೆ ಯತೀಂದ್ರ ಹೇಳಿಕೆಯು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ನಾಟಿದ್ದಂತೂ ಸುಳ್ಳಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ‘ಅಧಿಕಾರ’ಕ್ಕೆ ಸಂಬಂಧಿಸಿದಂತೆ ಒಂದಿ ಲ್ಲೊಂದು ಗೊಂದಲಗಳು ಸೃಷ್ಟಿಯಾಗಿವೆ. ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ಎನ್ನುವುದು ಗೊತ್ತಿದ್ದರೂ, ಸದ್ಯ ಬಿಹಾರ ವಿಧಾನಸಭಾ ಚುನಾವಣೆಯ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಲ್ಲಿರುವ ಎಲ್ಲಾ ಗೊಂದಲಗಳಿಗೂ ಆ ಚುನಾವಣೆಯನ್ನು ತೋರಿಸಿ ‘ಸಂತೈಸುವ’ ಕಾರ್ಯವನ್ನು ದೆಹಲಿ ನಾಯಕರು ಮಾಡುತ್ತಿದ್ದಾರೆ.

ಇದರೊಂದಿಗೆ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರಿಗೆ ಯಾವುದೇ ರೀತಿಯ ಹೇಳಿಕೆ ನೀಡುವಂತಿಲ್ಲ ಎನ್ನುವ ಕಟ್ಟಾಜ್ಞೆ ಮಾಡಿರುವುದರಿಂದ, ಸದ್ಯ ಅಲ್ಲಲ್ಲಿ ಹೇಳಿಕೆಗಳು ಬಂದರೂ ಗಂಭೀರವಾಗಿ ಪರಿಗಣಿಸಬೇಕೆಂದಿಲ್ಲ. ಆದರೆ ಬಿಹಾರದಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ, ಕರ್ನಾಟಕದಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ನಿಭಾಯಿಸಲು ಹೈಕಮಾಂಡ್ ಈಗಿನಿಂದಲೇ ಸಜ್ಜಾಗುತ್ತಿದ್ದರೂ ಅಚ್ಚರಿಯಿಲ್ಲ.

Congress

ಬೂದಿ ಮುಚ್ಚಿದ ಕೆಂಡವಾಗಿದ್ದ ಕರ್ನಾಟಕ ಕಾಂಗ್ರೆಸ್ ನಲ್ಲಿ ಸ್ಪೋಟಕ್ಕೆ ಕಾರಣವಾಗಿದ್ದು ಯತೀಂದ್ರ ಅವರ ಹೇಳಿಕೆ. ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಘೋಷಿಸಿದ ಮಾತ್ರಕ್ಕೆ ಅದು ಜಾರಿ ಬರುತ್ತದೆ ಎನ್ನಲಾಗುವುದಿಲ್ಲ.

ಆರಂಭದಲ್ಲಿ ಸಿದ್ದರಾಮಯ್ಯ ಅವರ ಬಳಿಕ ಸತೀಶ್ ಸಿಎಂ ಗಾದಿ ಮೇಲೆ ಕೂರುತ್ತಾರೆ ಎನ್ನುವ ಅರ್ಥದಲ್ಲಿ ಹೇಳಿದ್ದರೂ, ಬಳಿಕ ‘ಸೈದ್ಧಾಂತಿಕ’ ಉತ್ತರಾಧಿಕಾರಿ, ಅಹಿಂದ ಸಮುದಾಯದ ನಾಯಕ ಎನ್ನುವ ರೀತಿಯಲ್ಲಿ ಹೇಳಿದ್ದು ಎಂದು ಹೇಳಿ ಸಮರ್ಥಿಸಿಕೊಂಡರು. ಆದರೆ ಸತೀಶ್ ಜಾರಕಿಹೊಳಿ ಅವರಿಗೆ, ಸಿದ್ದರಾಮಯ್ಯನವರ ಸೈದ್ಧಾಂತಿಕ ಉತ್ತರಾಧಿಕಾರಿಯಾಗುವುದಕ್ಕಿಂತ ಮುಖ್ಯಮಂತ್ರಿ ಕುರ್ಚಿಯ ಉತ್ತರಾಧಿಕಾರಿಯಾಗುವುದು ಸುಲಭ ಎನ್ನುವುದು ವಾಸ್ತವ.

ಕೆಲವೊಂದಷ್ಟು ಮಂದಿ ‘ಇವರು ಅಹಿಂದ ಸಮುದಾಯದ ನಾಯಕ’ ಎಂದು ಘೋಷಿಸಿದ ಮಾತ್ರಕ್ಕೆ ಇಡೀ ಸಮುದಾಯವನ್ನು ನಾಯಕನಾಗಿ ಸ್ವೀಕರಿಸುವುದಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಘೋಷಿಸಿದರೂ, ಸಮುದಾಯ ಒಪ್ಪಿಕೊಳ್ಳುತ್ತದೆ ಎನ್ನುವ ನಂಬಿಕೆ ಯಾರಿಗೂ ಇಲ್ಲ. ಸಿದ್ದರಾಮಯ್ಯ ಅವರಿಗೆ ಅಹಿಂದ ಸಮುದಾಯದ ನಾಯಕನ ಪಟ್ಟ ಬಂದಿರುವುದಾಗಲಿ, ಒಂದು ಸಿದ್ಧಾಂತವನ್ನು ಸಿದ್ದರಾಮಯ್ಯ ಅವರು ‘ಮುನ್ನಡೆಸುತ್ತಿರುವುದು’ ಅವರ ಸ್ವಂತ ಬಲದಿಂದಲೇ ಹೊರತು ಮತ್ತೊಬ್ಬರಿಂದ ಬಂದ ಉಡುಗೊರೆಯಿಂದ ಅಲ್ಲ ಎನ್ನುವುದನ್ನು ಯಾರೂ ಮರೆಯ ಬಾರದು. ಹಾಗೆಂದ ಮಾತ್ರಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ ಸಾಮರ್ಥ್ಯವಿಲ್ಲ ಎನ್ನುತ್ತಿಲ್ಲ.

ಬದಲಿಗೆ ಅವರೂ ‘ಸೈಕಲ್’ ಹೊಡೆಯುವುದು ತುಂಬಾಯಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತೀಶ್ ಅವರು ಈಗಾಗಲೇ ‘ಅಹಿಂದ’ ನಾಯಕನಾಗಿ ಬೆಳೆದಿರಬಹುದು. ಆದರೆ ಮಧ್ಯ ಕರ್ನಾಟಕ, ಕರಾವಳಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಈಗಲೂ ಸತೀಶ್ ಅವರನ್ನು ನಾಯಕನನ್ನಾಗಿ ಜನ ಒಪ್ಪಿಲ್ಲ.

ಜನ ಒಪ್ಪಿಲ್ಲ ಎನ್ನುವುದಕ್ಕಿಂತ ಸತೀಶ್ ಈ ಭಾಗದಲ್ಲಿ ಹೆಚ್ಚು ‘ಓಡಾಡಿಲ್ಲ’. ಹೀಗಿರುವಾಗ ಸಿದ್ದರಾಮಯ್ಯ ಅವರ ಆಪ್ತ ಎನ್ನುವ ಕಾರಣಕ್ಕೆ ಸತೀಶ್ ಅವರನ್ನು ಇಡೀ ರಾಜ್ಯದ ಅಹಿಂದ ಸಮುದಾಯ ಒಪ್ಪಬೇಕೆಂದಿಲ್ಲವಲ್ಲ!

ಆದರೆ ಸಿದ್ದರಾಮಯ್ಯ ಅವರ ಅಹಿಂದ ಬಲವನ್ನು ಪಕ್ಷದ ಬಲವಾಗಿ ವರ್ಗಾಯಿಸಿಕೊಳ್ಳಲೇ ಬೇಕಾದ ಅನಿರ್ವಾಯತೆಯಲ್ಲಿ ಕಾಂಗ್ರೆಸ್ ಇದೆ. ಹಾಗೆ ನೋಡಿದರೆ, ಕೇವಲ ಕಾಂಗ್ರೆಸ್ ಮಾತ್ರವಲ್ಲ ಮಾಸ್ ನಾಯಕರ ಈ ಮತಬ್ಯಾಂಕ್ ಅನ್ನು ಮುಂದೆ ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವ ಗೊಂದಲ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರರಲ್ಲಿಯೂ ಇದೆ.

ಜೆಡಿಎಸ್ ವರಿಷ್ಠ ದೇವೇಗೌಡ ಅವರ ಬಳಿಕ ಆ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ಕುಮಾರ ಸ್ವಾಮಿ ತುಂಬದಿದ್ದರೂ ‘ಮ್ಯಾನೇಜ್’ ಮಾಡುತ್ತಿದ್ದಾರೆ. ಆದರೆ ಅವರ ನಂತರ ಯಾರೂ ಎನ್ನುವ ಪ್ರಶ್ನೆಗೆ ಜೆಡಿಎಸ್ ಬಳಿ ಉತ್ತರವಿಲ್ಲ. ಇದೇ ರೀತಿ ‘ಮಾಸ್ ನಾಯಕ’ನ ವಿಷಯದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಆ ಸ್ಥಾನ ತುಂಬುವ ಹತ್ತಿರಕ್ಕೂ ಯಾರೂ ಕಾಣಿಸುತ್ತಿಲ್ಲ.

ಕರ್ನಾಟಕ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇಲ್ಲದಿದ್ದರೂ ಸಿದ್ದರಾಮಯ್ಯ ಬಳಿಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಅಹಿಂದ ಸಮುದಾಯದ ಮತಬ್ಯಾಂಕ್ ಬಲ ಹಾಗೂ ಸಿದ್ದರಾಮಯ್ಯ ಅವರಿಗೆ ಈ ವರ್ಗದ ಮೇಲಿರುವ ಹಿಡಿತದ ಸ್ಪಷ್ಟ ಚಿತ್ರಣ ಕಾಂಗ್ರೆಸ್ ಹೈಕಮಾಂಡ್‌ ಗಿದೆ. ಈ ಕಾರಣಕ್ಕಾಗಿಯೇ, 2013ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಹುಮತ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸುವ ತೀರ್ಮಾನ ವನ್ನು ಅದು ತೆಗೆದುಕೊಂಡಿತ್ತು.

ಆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರು, ಮುಖ್ಯಮಂತ್ರಿಯಾಗಲು ಅಪೇಕ್ಷಿಸಿ ದ್ದರೂ ಅವರೇ ಸೋತಿದ್ದರಿಂದ ಕ್ಲೇಮ್ ಮಾಡಲು ಹೋಗಲಿಲ್ಲ. ಆದರೆ ಈ ಬಾರಿ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಅವರಷ್ಟೇ ಡಿ.ಕೆ.ಶಿವಕುಮಾರ್ ಅವರು ‘ಶ್ರಮ’ ಹಾಕಿದ್ದರು. ಕಾಂಗ್ರೆಸ್ ಪಕ್ಷ ಹಾಗೂ ಗಾಂಽ ಕುಟುಂಬದ ಬಗ್ಗೆ ‘ಡಿಕೆ’ಗಿರುವ ‘ನಿಷ್ಠೆ’ ಹಾಗೂ ರಾಜ್ಯ ರಾಜಕಾರಣ ದಲ್ಲಿನ ಹಿಡಿತದಿಂದಾಗಿ, ಈ ಬಾರಿ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದ್ದು ಸುಳ್ಳಲ್ಲ. ಇಷ್ಟಾದರೂ ಅಲ್ಲಲ್ಲಿ, ಪವರ್ ಶೇರಿಂಗ್, ಬದಲಾವಣೆಯ ಮಾತುಗಳು ಬಂದಾಗ ಪರಸ್ಪರ ದೂರು ಗಳನ್ನು ನೀಡಿದರೂ, ಯಾರ ಪರ ನಿಲ್ಲಬೇಕು ಎನ್ನುವ ಗೊಂದಲದಿಂದ ಹೈಕಮಾಂಡ್ ಈವರೆಗೆ ಹೊರ ಬಂದಿಲ್ಲ ಎನ್ನುವುದು ಸ್ಪಷ್ಟ.

ಈ ಎಲ್ಲ ಗೊಂದಲ, ಗೋಜಲಿನ ನಡುವೆಯೂ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರಿಗೆ ಬಿಹಾರ ಚುನಾವಣೆವರೆಗೆ ಮೌನವಾಗಿರಿ ಎನ್ನುವ ಸಂದೇಶವನ್ನು ರವಾನಿಸಿದ್ದಾರಂತೆ. ಮುಖ್ಯಮಂತ್ರಿ ಪಟ್ಟವನ್ನು ಪಡೆಯಲೇಬೇಕು. ಈ ಸನ್ನಿವೇಶದಲ್ಲಿ ಎಲ್ಲಿಯಾದರೂ ಆಯತಪ್ಪಿ ಒಂದು ಹೇಳಿಕೆ ಹೊರಬಂದರೂ ಅದರಿಂದ ತಮ್ಮ ಮಹಾತಪಸ್ಸಿಗೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ‘ಮಹಾಮೌನ’ಕ್ಕೆ ಡಿಕೆಶಿ ಜಾರಿದ್ದಾರೆ.

ಸಿದ್ದರಾಮಯ್ಯ ಅವರಿಂದ ಸಿಎಂ ಸ್ಥಾನ ಹಿಂಪಡೆಯುವುದು ಸುಲಭಸಾಧ್ಯವಲ್ಲ ಎನ್ನುವ ವಿಷಯ ಗೊತ್ತಿದ್ದರೂ ಈ ಪ್ರಯತ್ನವನ್ನು ಅವರು ನಿರಂತರವಾಗಿ ನಡೆಸುತ್ತಿರುವುದಕ್ಕೂ ಒಂದು ಕಾರಣ ವಿದೆ. ಅದೇನೆಂದರೆ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ನವರ ಪಾತ್ರದಷ್ಟೇ, ‘ಡಿಕೆ’ ಪಾತ್ರವೂ ಇದೆ.

ಇದರೊಂದಿಗೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ನೋಡಿದರೆ ಯಾವುದೇ ಪಕ್ಷ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವುದು ತೀರಾ ಕಷ್ಟ. ಆದ್ದರಿಂದ 2028ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ‘ಪೂರ್ಣ’ ವಿಶ್ವಾಸ ಕೈ ನಾಯಕರಿಗೆ ಇಲ್ಲ. ಒಂದು ವೇಳೆ ಹಾಗಾದರೆ, 2033ರವರೆಗೆ ಕಾಯಬೇಕಾಗುತ್ತದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಅವರಿಗೆ 63 ವರ್ಷ ವಾಗಿದೆ.

ಇನ್ನೂ ಏಳುವರೆ ವರ್ಷವೆಂದರೆ ಅವರು 70ರ ಆಸುಪಾಸಿನಲ್ಲಿರುತ್ತಾರೆ. ಆ ಸಮಯದಲ್ಲಿ ಈಗಿರು ವಷ್ಟು ಉತ್ಸಾಹ ಉಳಿದಿರುವುದಿಲ್ಲ. ಇದರೊಂದಿಗೆ 2028ರ ಚುನಾವಣೆ ಕಳೆದರೆ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಯನ್ನು ಕ್ಲೇಮ್ ಮಾಡುವ ಹತ್ತಾರು ನಾಯಕರು ಹುಟ್ಟಿಕೊಳ್ಳುವುದು ಸ್ಪಷ್ಟ.

ಆದ್ದರಿಂದ ಮುಖ್ಯಮಂತ್ರಿಯಾಗುವುದಕ್ಕೆ ಇರುವ ‘ಸುವರ್ಣ’ ಅವಕಾಶವನ್ನು ಈಗ ತಪ್ಪಿಸಿಕೊಂಡು ಆಮೇಲೆ ಪಶ್ಚಾತ್ತಾಪ ಪಡುವುದು ಬೇಡ ಎನ್ನುವುದು ‘ಡಿಕೆ’ ಲೆಕ್ಕವಾಗಿದೆ. ಆದರೆ ರಾಜಕೀಯ ಪಟ್ಟುಗಳನ್ನು ಅರಿತಿರುವ ಡಿ.ಕೆ. ಶಿವಕುಮಾರ್ ಈ ವಿಷಯದಲ್ಲಿ ಕ್ರಾಂತಿಗಿಂತ ಶಾಂತಿಯಿಂದಿದ್ದರೆ ಲಾಭ ಹೆಚ್ಚು ಎನ್ನುವುದನ್ನು ಅರಿತಿದ್ದಾರೆ. ಆದ್ದರಿಂದಲೇ ಸಿದ್ದರಾಮಯ್ಯ ಬಣದ ಕಡೆಯಿಂದ ‘ಉತ್ತರಾಧಿಕಾರಿ’ ಕೂಗು ಬಂದರೂ ಡಿಕೆ ‘ನಿರ್ಲಿಪ್ತ’ರಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಆಪ್ತರು ‘ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕು’ ಎನ್ನುವ ಕೂಗನ್ನು ಶುರು ಮಾಡಿದರೂ, ಅದಕ್ಕೂ ಬ್ರೇಕ್ ಹಾಕಿಸಿದ್ದಾರೆ. ಅಽಕಾರಕ್ಕೆ ಬಂದ ದಿನದಿಂದಲೂ ಇರುವ ‘ಪವರ್ ಶೇರಿಂಗ್’ ಚರ್ಚಾವಿಷಯದಲ್ಲಿ ಈಗಲೂ ಗೊಂದಲವಿರುವುದು ಸ್ಪಷ್ಟ. ಆದರೆ ಸಿದ್ದರಾಮಯ್ಯ ಅವರೊಂದಿಗೆ ‘ಸಂಘರ್ಷ’ ಮಾಡಿಕೊಂಡು ಪಟ್ಟ ಬದಲಾಯಿಸುವ ಮನಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಇಲ್ಲ.

ಏಕೆಂದರೆ, ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ನೀಡಿರುವ ಕಾಂಗ್ರೆಸ್, ಸಿದ್ದರಾಮಯ್ಯ ಜತೆಯಿರುವ ‘ಅಹಿಂದ’ ಮತಬ್ಯಾಂಕ್ ಅನ್ನು ಸುಲಭವಾಗಿ ಇನ್ನೊಬ್ಬರ ಪಾಲಾಗಲು ಬಿಡುವುದಿಲ್ಲ. ಈ ಎಲ್ಲ ರಾಜಕೀಯ ಲೆಕ್ಕಾಚಾರದ ನಡುವೆ ‘ಉತ್ತರಾಧಿಕಾರಿ’ ವಿವಾದದ ಬೆನ್ನಲ್ಲೇ ಸಚಿವ ಸಂಪುಟ ಪುನಾ ರಚನೆಯಾಗುವುದು ಖಾತ್ರಿಯಾಗಿದೆ.

ಪುನಾರಚನೆಯಾದರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬಹುತೇಕ ಸ್ಪಷ್ಟವಾಗಿದೆ. ಈಗಾಗಲೇ ಹಲವು ಶಾಸಕರು ಸಂಪುಟಕ್ಕೆ ಸೇರಲು ಸಜ್ಜಾಗಿ ‘ಕೋಟನ್ನು’ ಹೊಲಿಸಿಕೊಂಡಿದ್ದರೆ, ಸಂಪುಟದಿಂದ ಹೊರಬರುವ ಸುಳಿವು ಸಿಕ್ಕಿರುವ ಸಚಿವರು ಯಾವ ರೀತಿ ಸ್ಥಾನ ಭದ್ರಪಡಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ದೆಹಲಿ ಪರೇಡ್‌ಗೆ ಸಜ್ಜಾಗಿದ್ದಾರೆ. ಈ ಎಲ್ಲಕ್ಕೂ ಬಿಹಾರ ಚುನಾವಣಾ ಫಲಿತಾಂಶದ ಹೊರಬಿದ್ದ ಒಂದು ವಾರದಲ್ಲಿ ಉತ್ತರ ಸಿಗುವುದು ಸ್ಪಷ್ಟ.