ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಸರಕಾರದಿಂದ ಬರುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದು ಮುಂದೆ 16ನೇ ಹಣಕಾಸು ಆಯೋಗದ ಅನುದಾನ ಸಿಗುವುದೂ ಮರೀಚಿಕೆಯಾಗಿದೆ.

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

-

Ashok Nayak Ashok Nayak Sep 18, 2025 8:09 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಪಂಚಾಯತಿಗಳಿಗೆ ಚುನಾವಣೆ ನಡೆದು ಆಗಲೇ ನಾಲ್ಕು ವರ್ಷ

ಕೇಂದ್ರ ಅನುದಾನಕ್ಕೂ ಕುತ್ತು

ರಾಜ್ಯ ಸರಕಾರ ಯಶಸ್ವಿ ಗ್ಯಾರಂಟಿಗಳ ಮೂಲಕ ಕಂಗೊಳಿಸುತ್ತಿದ್ದರೆ, ಇತ್ತ ಸ್ಥಳೀಯ ಸರಕಾರಗಳು ಎನಿಸಿರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳು ಕಾಸಿಲ್ಲದೆ ಕಣ್ಣೀರು ಹಾಕು ತ್ತಿವೆ. ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದು ನಾಲ್ಕೂವರೆ ವರ್ಷಗಳೇ ಸಮೀಪಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರಗಳು ಎಂದು ನಮೂದಿಸಲ್ಪಟ್ಟಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯದೆ ಜನಪ್ರತಿನಿಧಿಗಳ ದರ್ಬಾರೇ ಸುದೀರ್ಘವಾಗಿ ನಡೆಯುತ್ತಿರುವುದು ರಾಜ್ಯದ ಇತಿಹಾಸ ದಲ್ಲಿ ಇದು ಪ್ರಥಮ.

ಅಷ್ಟೇ ಏಕೆ? ಚುನಾವಣೆಯನ್ನು ಇಷ್ಟೂ ಅತಿಯಾಗಿ ಮುಂದೂಡಿರುವುದು ದಕ್ಷಿಣ ರಾಜ್ಯಗಳಲ್ಲೇ ಇದೇ ಮೊದಲು. ಇದರೊಂದಿಗೆ ರಾಜ್ಯದಲ್ಲಿ ಸಂವಿಧಾನದ 73ನೇ ತಿದ್ದುಪಡಿಯ ಸ್ಥಳೀಯ ಸರಕಾರದ ಆಡಳಿತ ಎನ್ನುವ ಆಶಯಕ್ಕೆ ನಿಧಾನವಾಗಿ ಧಕ್ಕೆ ಆಗಲಾರಂಭಿಸಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Vishweshwar Bhat Column: ಪೈಲಟ್‌ ಮತ್ತು ಪರಿಮಳ ದ್ರವ್ಯ

ಈ ಮಧ್ಯೆ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಸರಕಾರದಿಂದ ಬರುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದು ಮುಂದೆ 16ನೇ ಹಣಕಾಸು ಆಯೋಗದ ಅನುದಾನ ಸಿಗುವುದೂ ಮರೀಚಿಕೆಯಾಗಿದೆ.

ಇನ್ನು ರಾಜ್ಯ ಸರಕಾರ ನೀಡುತ್ತಿದ್ದ ಅನುದಾನ ಹಾಗೂ ವಿಶೇಷ ಅನುದಾನಗಳಲ್ಲೂ ಸಾಕಷ್ಟು ಖೋತ ಆಗಿದ್ದು ಸ್ಥಳಿಯ ಆಡಳಿತಗಳು ಸಣ್ಣಪುಟ್ಟ ಕಾಮಗಾರಿಗಳಿಗೂ ಕಾಸಿಲ್ಲದೆ ಪರದಾಡುವಂತೆ ಆಗಿದೆ. ಇದೆ ವೇಳೆ ರಾಜ್ಯ ಸರಕಾರ ಮಾಡುತ್ತಿರುವ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದರೂ ಸರಕಾರ ತನ್ನ ವಿಳಂಬ ಧೋರಣೆ ನಿಲ್ಲಿಸಿಲ್ಲ. ಹೀಗಾಗಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ತುಂಬಾ ಕ್ಷೀಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೊಡ್ಡ ಸಮಸ್ಯೆ ?

ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ರಾಜ್ಯ ಸರಕಾರದ ಆಡಳಿತವನ್ನು ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕರಿಸಲು ಹೊಸ ಕಾಯ್ದೆ ರೂಪಿಸಲಾಗಿತ್ತು. ಅದರಂತೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತಿಗಳು ರಚನೆಯಾಗಿ ಅವುಗಳಿಗೆ ಪ್ರತಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ಅಭಿವೃದ್ಧಿ ಆಡಳಿತ ಅಧಿಕಾರ ನೀಡಲಾಗಿತ್ತು. ಆದರೆ ಕೊಂಚ ಸಮಯ ವ್ಯತ್ಯಾಸದ ನಡುವೆಯೂ 2021ರ ವರೆಗೂ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತಾ ಬಂದಿದ್ದವು. ಆದರೆ 2021ರ ನಂತರ ಪಂಚಾಯಿತಿ ಚುನಾವಣೆಗೆ ಗ್ರಹಣ ಹಿಡಿಯಿತು. ಅಂದರೆ ಅಂದಿನ ಬಿಜೆಪಿ ಆಡಳಿತ ಪಂಚಾಯತಿ ಗಳ ಕ್ಷೇತ್ರ ಪುನರ್ವಿಂಗಡಣೆ ಹೆಸರಿನಲ್ಲಿ ಚುನಾವಣೆಯನ್ನು ಮುಂದೂಡಿತ್ತು. ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ನಂತರ ಚುನಾವಣಾ ಆಯೋಗ ಮತ್ತು ಸರಕಾರದ ನಡುವೆ ಜಟಾಪಟಿ ನಡೆದು ಸದ್ಯ ನ್ಯಾಯಾಂಗ ನಿಂದನೆ ಹಂತಕ್ಕೆ ಬಂದು ನಿಂತಿದೆ. ಸರಕಾರದ ಅಧಿಸೂಚನೆ ಪ್ರಕಾರ ಸದ್ಯ 1130 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಹಾಗೂ 3671 ತಾಲೂಕು ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ ಸಿದ್ಧವಾಗಿರುವ ಮೀಸಲಾತಿ ಪಟ್ಟಿ ಇನ್ನು ಸಚಿವರ ಕೊಠಡಿ ಯಲ್ಲಿ ಕೊಳೆಯುತ್ತಿದ್ದು ಅದಕ್ಕೆ ಸದ್ಯಕ್ಕೆ ಬಿಡುಗಡೆ ಸಿಗುವ ಸಾಧ್ಯತೆ ಇಲ್ಲ ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ಪಂಚಾಯತಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನಗಳ ಕೊರತೆ ಎದುರಾಗಿದ್ದು ಅಲ್ಲಿ ವೇತನ ಬಿಟ್ಟರೆ ಉಳಿದ ಕಾಮಗಾರಿಗಳಿಗೆ ಕಾಸಿಲ್ಲದಂತಾಗಿದೆ. ಅದರಲ್ಲೂ ಕೆಲವು ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಅನ್ಯಮಾರ್ಗ ಹಿಡಿಯುತ್ತಿದ್ದಾರೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಬಿಜೆಪಿ ಕೊಡುಗೆಯೇ?

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ಮಾಡುವ ಅಧಿಕಾರ ಈ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. 2021ರಲ್ಲಿ ಅಂದಿನ ಬಿಜೆಪಿ ಸರಕಾರ ಈ ಎರಡೂ ಅಧಿಕಾರಗಳನ್ನು ಚುನಾವಣಾ ಆಯೋಗದಿಂದ ಕಸಿದುಕೊಂಡಿತ್ತು. ಆನಂತರ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತಾ ಬಂದಿತ್ತು. ಇದರ ಪರಿಣಾಮವಾಗಿ ಚುನಾವಣೆ ಮುಂದಕ್ಕೆ ಹೋಗಿ ಇದೀಗ ಐದು ವರ್ಷ ಪೂರೈಸುವ ಹಂತ ಸಮೀಪಿಸುತ್ತಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ

*

ಹೌದು. ಪಂಚಾಯಿತಿ ಚುನಾವಣೆಗಳು ವಿಳಂಬ ಆಗಿರುವುದು ನಿಜ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಅದೇ ರೀತಿ ಸರ್ಕಾರ ಕೂಡ ತ್ವರಿತ ನಿರ್ಧಾರ ಕೈಗೊಂಡು ಮೀಸಲು ಪಟ್ಟಿ ಪ್ರಕಟಿಸಬೇಕಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ.

- ಜಿ.ಎಸ್.ಸಂಗ್ರೇಶಿ

ರಾಜ್ಯ ಮುಖ್ಯ ಚುನಾವಣಾ ಆಯುಕ್ತರು