Thimmanna Bhagwat Column: ಜನಗಣತಿ ಅಥವಾ ಜಾತಿಗಣತಿಯ ಗಣಿತ ಮತ್ತು ಮೀಸಲಾತಿಯ ತಿಗಣಿ
ಚಾಣಕ್ಯನ ‘ಅರ್ಥಶಾಸ್ತ್ರ’ದಲ್ಲಿ ಕರಾಕರಣೆಯ ಸಲುವಾಗಿ ರಾಜನು ಜನಸಂಖ್ಯೆಯ ಅಂಕಿ-ಆಂಶ ಗಳನ್ನು ಸಂಗ್ರಹಿಸಬೇಕೆಂದು ಹೇಳಲಾಗಿದೆ. ಬ್ರಿಟಿಷ್ ಭಾರತದಲ್ಲಿ ಅನೇಕ ಜನಗಣತಿಗಳು ನಡೆದಿ ದ್ದರೂ ಅವೆಲ್ಲ ಆಡಳಿತಾತ್ಮಕ ಅವಶ್ಯಕತೆಗಳಿಗಾಗಿ ನಡೆದಿದ್ದವು. ದೇಶ ಸ್ವತಂತ್ರವಾದ ಬಳಿಕ ‘ಭಾರತದ ಜನಗಣತಿ ಕಾಯಿದೆ 1948’ನ್ನು ಜಾರಿಗೆ ತರಲಾಯಿತು.


ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
“ಏಕ್ ಸೌ ಚಾಲೀಸ್ ಕರೋಡ್ ದೇಶವಾಸಿಯೋಂ"- ನಮ್ಮ ಪ್ರಧಾನ ಮಂತ್ರಿಗಳು ಹೆಮ್ಮೆಯಿಂದ ಹೇಳುವ ಶಬ್ದಗಳಿವು. 2011ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆ ಅಧಿಕೃತವಾಗಿ 126 ಕೋಟಿ. ಆದರೆ ಈ 140 ಕೋಟಿಗೆ ಅಂದಾಜಿನ ಗಣಿತವೇ ಆಧಾರ. WORLDOMETER ಎಂಬ ಅಂತ ರ್ಜಾಲ ತಾಣದ ಪ್ರಕಾರ ಜಗತ್ತಿನ ಈ ಕ್ಷಣದ ಜನಸಂಖ್ಯೆ ಅಂದಾಜು 822.05 ಕೋಟಿ. ಆ ಪೈಕಿ ನಮ್ಮದು 146.17 ಕೋಟಿ, ಅಂದರೆ ಜಗತ್ತಿನ ಜನಸಂಖ್ಯೆಯ 17.78 ಪ್ರತಿಶತ.
ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂ 1. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಯನ್ನು ಕೋವಿಡ್ ಪಿಡುಗಿನ ಕಾರಣದಿಂದ 2021ರಲ್ಲಿ ನಡೆಸಲಾಗಲಿಲ್ಲ. ಈಗ 2031ರ ಜನಗಣತಿಗೆ ಕ್ಷಣಗಣನೆ ಶುರುವಾಗಿದೆ. ಆದರೆ ಜನಗಣತಿಗಿಂತ ಈಗ ಜಾತಿಗಣತಿಯದ್ದೇ ಹವಾ! ಜನಗಣತಿಗೆ ಸುದೀರ್ಘ ಇತಿಹಾಸವಿದೆ.
ಚಾಣಕ್ಯನ ‘ಅರ್ಥಶಾಸ್ತ್ರ’ದಲ್ಲಿ ಕರಾಕರಣೆಯ ಸಲುವಾಗಿ ರಾಜನು ಜನಸಂಖ್ಯೆಯ ಅಂಕಿ-ಆಂಶ ಗಳನ್ನು ಸಂಗ್ರಹಿಸಬೇಕೆಂದು ಹೇಳಲಾಗಿದೆ. ಬ್ರಿಟಿಷ್ ಭಾರತದಲ್ಲಿ ಅನೇಕ ಜನಗಣತಿಗಳು ನಡೆದಿ ದ್ದರೂ ಅವೆಲ್ಲ ಆಡಳಿತಾತ್ಮಕ ಅವಶ್ಯಕತೆಗಳಿಗಾಗಿ ನಡೆದಿದ್ದವು. ದೇಶ ಸ್ವತಂತ್ರವಾದ ಬಳಿಕ ‘ಭಾರತದ ಜನಗಣತಿ ಕಾಯಿದೆ 1948’ನ್ನು ಜಾರಿಗೆ ತರಲಾಯಿತು.
1990ರಲ್ಲಿ ಜನಗಣತಿ ನಿಯಮಗಳನ್ನೂ ಜಾರಿಗೆ ತರಲಾಯಿತು. ಈ ಕಾಯಿದೆಯ 3ನೇ ಕಲಮಿನ ಪ್ರಕಾರ ಕೇಂದ್ರ ಸರಕಾರಕ್ಕೆ ಮಾತ್ರ ಜನಗಣತಿ ಕೈಗೊಳ್ಳುವ ಅಧಿಕಾರವಿದೆ. ಭಾರತದ ರೆಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಹಾಗೂ ರಾಜ್ಯಗಳ ಜನಗಣತಿ ನಿರ್ದೇಶಕರುಗಳನ್ನು ನೇಮಿಸುವ ಅಧಿಕಾರ ಕೂಡಾ ಕೇಂದ್ರ ಸರಕಾರಕ್ಕೇ ಇದೆ.
ಗಣತಿ ಮಾಡುವ ಪ್ರಕ್ರಿಯೆಯಲ್ಲಿ ಸೆನ್ಸಸ್ ಅಧಿಕಾರಿಗಳು ಜನರಿಗೆ ಕೇಳಬೇಕಾದ ಪ್ರಶ್ನಾವಳಿಯನ್ನು ಗಣತಿ ಕಾಯಿದೆಯ 8ನೇ ಕಲಮಿನ ಪ್ರಕಾರ ಕೇಂದ್ರ ಸರಕಾರ ಗೆಝೆಟ್ ಮೂಲಕ ಅಧಿಸೂಚನೆ ಮಾಡಬೇಕು. ಈ ಕಾಯಿದೆಯ 11ನೇ ಕಲಮಿನ ಪ್ರಕಾರ ಗಣತಿ ಅಧಿಕಾರಿಗಳು ಕೇಳಿದ ಮಾಹಿತಿ ಯನ್ನು ನೀಡಲು ನಿರಾಕರಿಸಿದರೆ ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ (ಇದೇ ಕಲಮಿನ ಪ್ರಕಾರ ಯಾವುದೇ ಮಹಿಳೆಗೆ ಆಕೆಯ ಗಂಡನ ಹೆಸರು ಹೇಳುವಂತೆ ಒತ್ತಾಯಪಡಿಸುವಂತಿಲ್ಲ!- ಜನಿವಾರ, ಮಂಗಲಸೂತ್ರ ತೆಗೆಸುವವರು ಇದನ್ನು ಗಮನಿಸಬೇಕು).
ಭೌಗೋಳಿಕವಾಗಿ ಬಹುವಿಸ್ತಾರ ವಾಗಿರುವ ಹಾಗೂ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ವೈವಿಧ್ಯ ವನ್ನು ಹೊಂದಿರುವ ಭಾರತದ ಅಗಾಧ ಜನಸಂಖ್ಯೆಯನ್ನು ಮನೆ ಮನೆಗೆ ಹೋಗಿ ಎಣಿಸುವುದರ ಜತೆಗೆ ಅವರ ಆರ್ಥಿಕ ಸ್ಥಿತಿ, ಉದ್ಯೋಗ, ಮನೆ, ಆಸ್ತಿ, ಭಾಷೆ ಮುಂತಾದ ಅನೇಕ ಅಂಕಿ-ಅಂಶಗಳ ಗಣನೆ ಹಾಗೂ ಅವುಗಳ ಅರ್ಥಪೂರ್ಣ ಕ್ರೋಡೀಕರಣ ಈಗಿನ ಡಿಜಿಟಲ್ ಯುಗದಲ್ಲೂ ಸವಾಲಿನ ಕೆಲಸ.
ಇದೀಗ ಕೇಂದ್ರ ಸರಕಾರವು ಜನಗಣತಿಯ ಜತೆ ಜಾತಿಯ ಅಂಕಿ-ಅಂಶಗಳನ್ನೂ ಸಂಗ್ರಹಿಸುವುದಾಗಿ ಹೇಳಿರುವುದು ಗಣತಿಯ ಕಾರ್ಯವನ್ನು ಹಿಂದೆಂದಿಗಿಂತ ಸಂಕೀರ್ಣಗೊಳಿಸಲಿದೆ. ಬ್ರಿಟಿಷರ ಕಾಲದ 1931ರ ನಂತರ ಭಾರತದಲ್ಲಿ ಜಾತಿಗಣತಿ ನಡೆಯಲಿಲ್ಲ. ಹೀಗಾಗಿ ಎಲ್ಲಾ ರಾಜಕಾರಣಿಗಳಿಗೆ ಜಾತಿ ಗಣತಿಯ ಕುರಿತು ತೀವ್ರ ಆಸಕ್ತಿ. ಜಾತಿವಾರು ಲೆಕ್ಕಕಿಂತ ಹೆಚ್ಚಾಗಿ ಅಂಥ ಗಣತಿಯ ಆಧಾರ ದಲ್ಲಿ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸುವುದು ಅವರಲ್ಲಿ ಕೆಲವರ ಅಜೆಂಡಾ ಆಗಿದೆ.
ಕೆಲವರಂತೂ “ಮೆರಿಟ್ ಎಂಬುದೇ ಅನ್ಯಾಯ, ಮೀಸಲಾತಿಗೆ ಇರುವ 50 ಪ್ರತಿಶತ ಮಿತಿಯನ್ನು ತೆಗೆಯಬೇಕು" ಎಂದೆಲ್ಲ ಆಗ್ರಹಿಸುತ್ತಿದ್ದಾರೆ.
ಕಾಕಾ ಕಾಲೇಕರ್ ಆಯೋಗ ಮತ್ತು ಮಂಡಲ ಆಯೋಗ: ಜಾತಿಗಣತಿ ಅಂದ ಕೂಡಲೇ ನೆನಪಿಗೆ ಬರುವುದು ಜಾತಿ ಆಧಾರಿತ ಮೀಸಲಾತಿ ಹಾಗೂ ವಿವಾದಾತ್ಮಕವೆನಿಸಿದ ಮಂಡಲ್ ಆಯೋಗದ ವರದಿ. ಆದರೆ 1955ರಲ್ಲೇ ರಚಿತವಾಗಿದ್ದ ಕಾಲೇಕರ್ ಸಮಿತಿ ಹಲವರಿಗೆ ತಿಳಿದಿರ ಲಿಕ್ಕಿಲ್ಲ.
2399 ಹಿಂದುಳಿದ ಜಾತಿಗಳು ಮತ್ತು ಆ ಪೈಕಿ 837 ಅತಿ ಹಿಂದುಳಿದ ಜಾತಿಗಳ ಯಾದಿಯನ್ನು ತಯಾರಿಸಿದ ಈ ಸಮಿತಿಯ ಅಧ್ಯಕ್ಷರಾದ ಕಾಲೇಕರ್‌ರವರೇ ವರದಿಯ ಜತೆಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಪತ್ರದಲ್ಲಿ “ಜಾತಿ ಎಂಬ ಸಿದ್ಧಾಂತವನ್ನೇ ತ್ಯಜಿಸದ ಹೊರತು ಎಲ್ಲಾ ಸಮುದಾಯ ಗಳಲ್ಲಿರುವ ಬಡವರು ಮತ್ತು ಅರ್ಹರಿಗೆ ಸಹಾಯ ಮಾಡಲು ಸಾಧ್ಯವಿಲ್ಲ" ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಆ ವರದಿಯ ಕುರಿತು 1956ರಲ್ಲಿ ಭಾರತ ಸರಕಾರವು “ಜಾತಿ ವ್ಯವಸ್ಥೆಯು ದೇಶದ ಪ್ರಗತಿಯ ಹಾದಿ ಯಲ್ಲಿರುವ ದೊಡ್ಡ ಬಂಡೆಯಾಗಿದ್ದು ಕೆಲವು ಜಾತಿಗಳನ್ನು ಹಿಂದುಳಿದ ಜಾತಿಗಳು ಎಂದು ಪರಿಗಣಿಸಿದರೆ ಜಾತಿ ವ್ಯವಸ್ಥೆಯನ್ನು ಪೋಷಿಸಿ ಬೆಳೆಸಿದಂತಾಗುತ್ತದೆ. ಆದ್ದರಿಂದ ಹೆಚ್ಚು ವ್ಯವಸ್ಥಿತ ಹಾಗೂ ವಿಸ್ತೃತವಾದ ತಳಹದಿಯ ಆಧಾರದಲ್ಲಿ ಹಿಂದುಳಿಯುವಿಕೆಯನ್ನು ಗುರುತಿಸುವುದು ಅಗತ್ಯ" ಎಂದು ಲೋಕಸಭೆಗೆ ವರದಿ ಸಲ್ಲಿಸಿತು (ಆಧಾರ: ಇಂದ್ರಾ ಸಾವನಿ ಪ್ರಕರಣದ ತೀರ್ಪು).
1978ರಲ್ಲಿ ಮೊರಾರ್ಜಿ ದೇಸಾಯಿ ಸರಕಾರ ರಚಿಸಿದ ಮಂಡಲ ಆಯೋಗಕ್ಕೆ “ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವ್ಯಾಖ್ಯಾನಿಸಲು ಮಾನದಂಡವನ್ನು ನಿಗದಿ ಪಡಿಸುವುದು ಮತ್ತು ಹಾಗೆ ಗುರುತಿಸಲ್ಪಟ್ಟ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡುವುದು" ಎಂಬ ಕಾರ್ಯಸೂಚಿಯನ್ನು ನಿಗದಿ ಪಡಿಸಲಾಗಿತ್ತು.
ಮಂಡಲ ಆಯೋಗ ತನ್ನ ವರದಿಯಲ್ಲಿ ಹಿಂದುಳಿಯುವಿಕೆಯನ್ನು ಪರಿಗಣಿಸಲು ಜಾತಿಯೇ ಆಧಾರವಾಗಬೇಕು ಎಂದು ಹೇಳಿತಲ್ಲದೆ ಸರಕಾರದ ಹುದ್ದೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದು ಅವರ ಉನ್ನತಿಗೆ ಸೂಕ್ತವೆಂಬ ಶಿಫಾರಸು ಮಾಡಿತು.
ಹಿಂದುಳಿಯುವಿಕೆಯನ್ನು ಗುರುತಿಸಲು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವೆಂಬ ಮೂರು ಅಂಶಗಳನ್ನು ಪರಿಗಣಿಸಿತು. ಆಯೋಗ ನಿಗದಿಪಡಿಸಿದ ಸೂತ್ರಗಳ ಪ್ರಕಾರ, ಸಾಮಾಜಿಕವಾಗಿ ಹಿಂದುಳಿದ ಜಾತಿಯೆಂದರೆ ಆ ಜಾತಿಯ ಜನ ತಮ್ಮ ಜೀವನಕ್ಕಾಗಿ ಕೂಲಿಯನ್ನೇ ಆಧರಿಸಿರಬೇಕು; ರಾಜ್ಯ ಸರಾಸರಿಗಿಂತ ಶೇ. 25ಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸದಲ್ಲಿ ತೊಡಗಿರಬೇಕು ಮತ್ತು 17 ವರ್ಷಕ್ಕಿಂತ ಮೊದಲೇ ಮದುವೆಯಾದವರ ಪ್ರಮಾಣ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಲ್ಲಿ ರಾಜ್ಯದ ಸರಾಸರಿಗಿಂತ ಅನುಕ್ರಮವಾಗಿ 25 ಮತ್ತು 10 ಪ್ರತಿಶತಕ್ಕಿಂತ ಹೆಚ್ಚಿಗೆ ಇರಬೇಕು.
ಶೈಕ್ಷಣಿಕವಾಗಿ ಹಿಂದುಳಿದವರೆಂದರೆ ಆ ಜಾತಿಯಲ್ಲಿ 5 ರಿಂದ 15 ವರ್ಷ ವಯಸ್ಸಿನ ಮಕ್ಕಳು ಶಾಲೆಗೆ ಹೋಗದಿರುವ ಅಥವಾ ಅರ್ಧದಲ್ಲಿ ಶಾಲೆ ಬಿಡುವವರ ಪ್ರಮಾಣ ರಾಜ್ಯ ಸರಾಸರಿಗಿಂತ ಕನಿಷ್ಠಪಕ್ಷ 25 ಪ್ರತಿಶತ ಹೆಚ್ಚಿರಬೇಕು ಮತ್ತು ಮೆಟ್ರಿಕ್ಯುಲೇಶನ್ ಮುಗಿಸಿದವರ ಸಂಖ್ಯೆ ರಾಜ್ಯ ಸರಾಸರಿಗಿಂತ 25 ಪ್ರತಿಶತ ಕಡಿಮೆ ಇರಬೇಕು.
ಆರ್ಥಿಕವಾಗಿ ಹಿಂದುಳಿದವರೆಂದರೆ ಆ ಜಾತಿಯ ಕುಟುಂಬಗಳ ಸರಾಸರಿ ಆಸ್ತಿ ಮೌಲ್ಯ ರಾಜ್ಯದ ಸರಾಸರಿಗಿಂತ ಕನಿಷ್ಠಪಕ್ಷ 25 ಪ್ರತಿಶತ ಕಡಿಮೆ ಇರಬೇಕು; ರಾಜ್ಯ ಸರಾಸರಿಯ 25 ಪ್ರತಿಶತಕ್ಕಿಂತ ಹೆಚ್ಚು ಜನರು ಕಚ್ಚಾ ಮನೆಗಳಲ್ಲಿ ವಾಸವಿರಬೇಕು; ಕನಿಷ್ಠಪಕ್ಷ 50 ಪ್ರತಿಶತ ಕುಟುಂಬಗಳಿಗೆ ಕುಡಿಯುವ ನೀರಿನ ಲಭ್ಯತೆ ಅರ್ಧ ಕಿ.ಮೀ. ಗಿಂತ ಹೆಚ್ಚು ದೂರದಲ್ಲಿರಬೇಕು ಮತ್ತು ಬಳಕೆ ಸಾಲ ಪಡೆದಿರುವವರ ಪ್ರಮಾಣ ರಾಜ್ಯದ ಸರಾಸರಿಗಿಂತ 25 ಪ್ರತಿಶತ ಹೆಚ್ಚಿರಬೇಕು. ಈ ಎಲ್ಲ ಮಾನ ದಂಡಗಳ ಆಧಾರದಲ್ಲಿ ವಿವಿಧ ಜಾತಿಗಳನ್ನು ‘ಹಿಂದುಳಿದ ಜಾತಿಗಳು’ ಎಂದು ಗುರುತಿಸಿತು.
ಆನಂತರ ನಡೆದ “ಇಂದ್ರಾ ಸಾವನಿ ವರ್ಸಸ್ ಭಾರತ ಸರಕಾರ" ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪು ನೀಡಿ ಹಿಂದುಳಿಯುವಿಕೆಯನ್ನು ಜಾತಿಯ ಆಧಾರದಲ್ಲಿ ಪರಿಗಣಿಸುವುದನ್ನು ಎತ್ತಿಹಿಡಿಯಿತಾದರೂ ಒಟ್ಟೂ ಮೀಸಲಾತಿಯ ಮಿತಿಯನ್ನು 50 ಪ್ರತಿಶತಕ್ಕೆ ನಿರ್ಬಂಧಿಸಿ ‘ಒಬಿಸಿ’ ಮೀಸಲಾತಿಯಲ್ಲಿ ಆರ್ಥಿಕವಾಗಿ ಸಶಕ್ತರಾದವರನ್ನು ಹೊರಗಿಡುವ ಕೆನೆಪದರದ ನಿಯಮವನ್ನು ಆದೇಶಿಸಿತು. ಈಗ ಕೇಂದ್ರ ಸರಕಾರ ಮಾಡಹೊರಟಿರುವ ಜಾತಿಗಣತಿಯ ಉದ್ದೇಶ ಏನೇ ಇದ್ದರೂ ಅಂತಿಮವಾಗಿ ಅದರ ಪರಿಣಾಮ ಮೀಸಲಾತಿಯ ಮೇಲೆ ಆಗುತ್ತದೆ. ಜಾತಿ ಆಧಾರಿತ ಮೀಸಲಾತಿಗೆ ಇಂದ್ರಾ ಸಾವನಿ ಪ್ರಕರಣದ ತೀರ್ಪು ಬಹುತೇಕ ಅಂತಿಮವಾಗಿದೆ.
ಒಂದು ವೇಳೆ ಒಬಿಸಿ ಮೀಸಲಾತಿಯನ್ನು ಜಾತಿಗಣತಿ ಆಧಾರದಲ್ಲಿ ಪರಿಷ್ಕರಿಸುವುದಾದರೆ ಮಂಡಲ ಆಯೋಗ ಹಿಂದುಳಿದ ಜಾತಿಗಳನ್ನು ಗುರುತಿಸಲು ಪರಿಗಣಿಸಿದ ಈ ಮೇಲಿನ ಅಂಶಗಳ ಆಧಾರದಲ್ಲೇ ಜಾತಿಗಳನ್ನು ಪುನಃ ವರ್ಗೀಕರಿಸಬೇಕಾಗುತ್ತದೆ. ಆಧಾರ ಸೂತ್ರಗಳು ಬದಲಾದರೆ ಅದು ಪುನಃ ನ್ಯಾಯಾಲಯದ ವಿಮರ್ಶೆಗೆ ಒಳಪಡಬೇಕಾಗುತ್ತದೆ.
ಹಾಗಾಗಿ ಜಾತಿಗಣತಿ ಮಾಡುವುದಾದಲ್ಲಿ ಮಂಡಲ ಆಯೋಗ ಅಳವಡಿಸಿಕೊಂಡಿದ್ದ ಸೂತ್ರಗಳಿಗೆ ಅಗತ್ಯವಾದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಬೇಕು. ಹಾಗಾದಾಗ ಮಾತ್ರ ಜಾತಿಗಣತಿ ಆಧಾರಿತ ಮೀಸಲಾತಿ ಪರಿಷ್ಕರಣೆ ಕಾಯಿದೆಬದ್ಧವಾಗುತ್ತದೆ ಮತ್ತು ಜಾತಿಗಣತಿಯು ಹಿಂದುಳಿಯುವಿಕೆಯ ವೈಜ್ಞಾನಿಕ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ.
ಶತಮಾನದ ನಂತರ ನಡೆಸಲ್ಪಡುವ ಜಾತಿಗಣತಿ ಅನೇಕ ಗೊಂದಲಗಳನ್ನು ಎದುರಿಸಬೇಕಾಗ ಬಹುದು. ದೇಶದ ಎಲ್ಲಾ ಕಡೆ ಇರಬಹುದಾದ ಅಕ್ರಮ ವಲಸೆಗಾರರನ್ನು ಗಣತಿಯಿಂದ ಪ್ರತ್ಯೇಕಿ ಸಲು ದಾಖಲೆಗಳನ್ನು ಸಂಗ್ರಹಿಸತೊಡಗಿದರೆ ಹಮ್ ಕಾಗಜ್ ನಹೀ ದೇಂಗೇ" ಎನ್ನುವವರನ್ನು ನಿಭಾಯಿಸುವುದು ಸಮಸ್ಯೆಯಾಗಬಹುದು.
ಆಸ್ಸಾಂ ಸರಕಾರ ಈಗಾಗಲೇ ಅಲ್ಲಿನ ಮೂಲನಿವಾಸಿ ಮುಸ್ಲಿಮ್ ಅಲ್ಪಸಂಖ್ಯಾತರು ಮತ್ತು ವಲಸಿಗರನ್ನು ಪ್ರತ್ಯೇಕಿಸುವ ಉದ್ದೇಶದಿಂದ ಜಾತಿಗಣತಿಯಂಥ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕರ್ನಾಟಕ ಸರಕಾರದ ಜಾತಿಗಣತಿಯೆಂಬ ಪ್ರಹಸನ ಈಗ ಒಳಮೀಸಲಾತಿಯ ಕಡೆ ವಾಲಿದೆ. ಬಿಹಾರ ಸರಕಾರದ ಜಾತಿಗಣತಿಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಅಕ್ರಮ ವಲಸೆ ಕುರಿತು ಪಶ್ಚಿಮ ಬಂಗಾಳ ಸರಕಾರ ಸೌಮ್ಯ ನಿಲುವು ಹೊಂದಿದೆ ಎನ್ನಲಾಗಿದೆ. ಈ ಎಲ್ಲ ವಿಷಯ ಗಳ ಸಂತುಲನ ಮುಂಬರುವ ಗಣತಿಗೆ ದೊಡ್ಡ ಸವಾಲಾಗಬಹುದು.
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಗಳು ಅರ್ಥಪೂರ್ಣವಾಗಬೇಕಾದರೆ ಜನರಿಂದ ಪಡೆದ ಮಾಹಿತಿಗಳನ್ನು ಆಧಾರ ದತ್ತಾಂಶ, ಭೂಮಿ ಅಂತರ್ಜಾಲ, ಜಿಎಸ್‌ಟಿ, ಆಯಕರ ದಾಖಲೆ ಗಳು, ಕಂದಾಯ ಇಲಾಖೆಯ ದಾಖಲೆಗಳು ಮುಂತಾದ ಇತರ ಮೂಲಗಳ ಜತೆ ಪರಿಶೀಲಿಸು ವುದು ಅಗತ್ಯ. ಇಲ್ಲವಾದಲ್ಲಿ ಗಣತಿಯು ದಾರಿತಪ್ಪಿಸುವ ಅಥವಾ ಸುಳ್ಳು ಮಾಹಿತಿಗಳಿಂದ ತುಂಬಿದ ಗೊಬ್ಬರಗುಂಡಿಯಾಗಬಹುದು. ಇನ್ನು ಜಾತಿ, ಉಪಜಾತಿಗಳ ವಿಷಯದಲ್ಲಿ ಅನೇಕ ಗೊಂದಲ ಗಳಿವೆ. ಉದಾಹರಣೆಗೆ: ಕರ್ನಾಟಕದಲ್ಲಿ ಲಿಂಗಾಯತ ಅಥವಾ ವೀರಶೈವ ಅಂದರೆ ಜಾತಿಯೋ ಧರ್ಮವೋ ಎಂಬುದು ಒಂದು ವಿವಾದಾತ್ಮಕ ವಿಷಯವಾದರೆ ಅವರಲ್ಲಿರುವ ಉಪಜಾತಿಗಳದ್ದೂ ವಿವಾದವಿದೆ.
ಲಿಂಗಾಯತರಲ್ಲಿರುವ ಉಪಜಾತಿಗಳು ಇತರ ಹಿಂದೂಗಳಲ್ಲಿಯೂ ಇವೆ. ಅದರಂತೆ ಕುರುಬ, ಒಕ್ಕಲಿಗ ಮುಂತಾದ ಜಾತಿಗಳಲ್ಲೂ ಉಪಜಾತಿಗಳಿವೆ. ಇದಕ್ಕಿಂತ ದೊಡ್ಡ ಗೊಂದಲ ಹಿಂದೂ ಯೇತರರಲ್ಲಿರುವ ಜಾತಿಗಳದ್ದು. ಮುಸಲ್ಮಾನ ಮತ್ತು ಕ್ರೈಸ್ತರಲ್ಲಿ ಕೂಡಾ ಜಾತಿಗಳಿವೆ ಎಂಬುದನ್ನು ಮಂಡಲ ಆಯೋಗವೇ ವರದಿ ಮಾಡಿದೆ ಮತ್ತು ಅಂಥ ಜಾತಿಗಳಿಗೆ ಕೆಲವು ಷರತ್ತುಗಳಿಗೊಳಪಟ್ಟು ಮೀಸಲಾತಿ ನೀಡುವ ಶಿಫಾರಸು ಕೂಡಾ ಮಾಡಿದೆ.
ಒಟ್ಟಾರೆ ೨೦೩೧ರ ಜನಗಣತಿಯ ಜತೆ ಜಾತಿಯ ಗಣನೆ ಕಣಜ ಕೀಟದ ಗೂಡಿಗೇ ಕೈಹಚ್ಚಿದಂತಾಗ ಬಹುದು. ತಂತ್ರಜ್ಞಾನದ ಬಳಕೆಯ ಜತೆ ಸಂಬಂಧಪಟ್ಟ ಎರ ಪೂರ್ಣ ಸಹಯೋಗದಿಂದ ಮಾತ್ರ ಇದೊಂದು ಅರ್ಥಪೂರ್ಣ ಕಾರ್ಯವಾಗಬಹುದು. ಇಲ್ಲವಾದಲ್ಲಿ ಗೊಂದಲದ ಗೂಡಾಗಿ ಹೊಸ ವಿವಾದಗಳಿಗೆ, ಗದ್ದಲಕ್ಕೆ ಕಾರಣವಾಗಬಹುದು.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ
ಬ್ಯಾಂಕ್‌ನ ನಿವೃತ್ತ ಎಜಿಎಂ)