ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರದ ‘ಲಡ್ಕಿ ಬಹಿನ್’ ಯೋಜನೆಯಡಿ ಫಲಾನುಭವಿಗಳಾದ ಪುರುಷರು! ಸರ್ಕಾರದ ಬೊಕ್ಕಸಕ್ಕೆ ಕೋಟಿ-ಕೋಟಿ ರೂ. ನಷ್ಟ

Ladki Bahin Scheme: ಮಹಾರಾಷ್ಟ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಉದ್ದೇಶಿಸಲಾದ ಲಡ್ಕಿ ಬಹಿನ್ ಯೋಜನೆಯಡಿ 14,000ಕ್ಕೂ ಹೆಚ್ಚು ಪುರುಷರು ವಂಚನೆ ಮೂಲಕ ಆರ್ಥಿಕ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಡಬ್ಲ್ಯುಸಿಡಿ ನಡೆಸಿದ ಲೆಕ್ಕ ಪರಿಶೋಧನೆಯಲ್ಲಿ 14,298 ಪುರುಷರಿಗೆ 21.44 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ‘ಲಡ್ಕಿ ಬಹಿನ್’ ಯೋಜನೆಯಡಿ ಫಲಾನುಭವಿಗಳಾದ ಪುರುಷರು

Priyanka P Priyanka P Jul 27, 2025 8:49 PM

ಮುಂಬೈ: ಮಹಾರಾಷ್ಟ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಉದ್ದೇಶಿಸಲಾದ ಲಡ್ಕಿ ಬಹಿನ್ ಯೋಜನೆಯಡಿ (Ladki Bahin Scheme) 14,000ಕ್ಕೂ ಹೆಚ್ಚು ಪುರುಷರು ವಂಚನೆ ಮೂಲಕ ಆರ್ಥಿಕ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಪ್ರಾರಂಭಿಸಲಾದ ಈ ಯೋಜನೆಯು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮಾಸಿಕ ಹಣಕಾಸು ನೆರವನ್ನು ನೀಡುವ ಉದ್ದೇಶ ಹೊಂದಿದೆ. ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ 21ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡುವ ಭರವಸೆಯ ಯೋಜನೆ ಇದಾಗಿದೆ. ಈ ಯೋಜನೆಯನ್ನು 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಅನುಷ್ಠಾನಗೊಳಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ನಡೆಸಿದ ಲೆಕ್ಕಪರಿಶೋಧನೆಯಲ್ಲಿ 14,298 ಪುರುಷರಿಗೆ 21.44 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ. ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಕುಶಲತೆಯಿಂದ ಬಳಸಿಕೊಂಡು ತಮ್ಮನ್ನು ಮಹಿಳಾ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಯೋಜನೆ ಪ್ರಾರಂಭವಾದ ಸುಮಾರು 10 ತಿಂಗಳ ನಂತರ ಈ ದುರುಪಯೋಗ ಬೆಳಕಿಗೆ ಬಂದಿತು.

ಬಡ ಮಹಿಳೆಯರಿಗೆ ಸಹಾಯ ಮಾಡಲು ಲಡ್ಕಿ ಬಹಿನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಪುರುಷರು ಅದರ ಫಲಾನುಭವ ಪಡೆದಿರುವುದು ತಿಳಿದುಬಂದಿದೆ. ಅವರಿಗೆ ನೀಡಿದ ಹಣವನ್ನು ನಾವು ಮರುಪಡೆಯುತ್ತೇವೆ. ಅವರು ಸಹಕರಿಸದಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದರು.

ದೊಡ್ಡ ಪ್ರಮಾಣದ ಅನರ್ಹ ದಾಖಲಾತಿಗಳಿಂದಾಗಿ ಈ ಯೋಜನೆಯು ತನ್ನ ಮೊದಲ ವರ್ಷದಲ್ಲಿ 1,640 ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡಿದೆ ಎಂದು ಅಂದಾಜಿಸಲಾಗಿದೆ. ಒಂದೇ ಕುಟುಂಬದ ಮೂವರು ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಲಾಗಿದೆ. 7.97 ಲಕ್ಷಕ್ಕೂ ಹೆಚ್ಚು ಮಹಿಳೆಯರಿಂದ ಅತಿದೊಡ್ಡ ದುರುಪಯೋಗ ನಡೆದಿದೆ ಎನ್ನಲಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೆ ಗರಿಷ್ಠ ಇಬ್ಬರು ಮಹಿಳೆಯರು ಮಾತ್ರ ಪ್ರಯೋಜನ ಪಡೆಯಬಹುದು. ಈ ಉಲ್ಲಂಘನೆಯಿಂದ ಬೊಕ್ಕಸಕ್ಕೆ 1,196 ಕೋಟಿ ರೂ.ಗಳಷ್ಟು ನಷ್ಟವಾಗಿದೆ.

ಅಷ್ಟೇ ಅಲ್ಲ, ಅರ್ಹತೆಯ ವಯಸ್ಸಿನ ಮಿತಿಯನ್ನು 65 ವರ್ಷಕ್ಕೆ ನಿಗದಿಪಡಿಸಲಾಗಿದ್ದರೂ, 65 ವರ್ಷಕ್ಕಿಂತ ಮೇಲ್ಪಟ್ಟ 2.87 ಲಕ್ಷ ಮಹಿಳೆಯರು ಈ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಅಧಿಕ ವಯಸ್ಸಿನ ಫಲಾನುಭವಿಗಳಿಂದಾಗಿ ರಾಜ್ಯವು ಸುಮಾರು 431.7 ಕೋಟಿ ರೂ.ಗಳಷ್ಟು ನಷ್ಟ ಹೊಂದಿದೆ.

ಇದಲ್ಲದೆ ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವ ಮನೆಗಳ 1.62 ಲಕ್ಷ ಮಹಿಳೆಯರನ್ನು ಸಹ ಫಲಾನುಭವಿಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಯೋಜನೆಯ ನಿಯಮಗಳ ಪ್ರಕಾರ, ಅಂತಹ ಕುಟುಂಬಗಳು ಆರ್ಥಿಕ ಸಹಾಯಕ್ಕೆ ಅರ್ಹರಲ್ಲ.

ಇನ್ನು ಈ ಪ್ರಕರಣ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ತನಿಖೆಗೆ ಒತ್ತಾಯಿಸಲಾಗುತ್ತಿದೆ. ಈ ವ್ಯಕ್ತಿಗಳು ಫಾರ್ಮ್‌ಗಳನ್ನು ಹೇಗೆ ಭರ್ತಿ ಮಾಡಿದರು? ಅವರಿಗೆ ಯಾರು ಸಹಾಯ ಮಾಡಿದರು? ನೋಂದಣಿಗಾಗಿ ಯಾವ ಕಂಪನಿಗೆ ಒಪ್ಪಂದವನ್ನು ನೀಡಲಾಯಿತು? ಇದರ ಹಿಂದೆ ದೊಡ್ಡ ಪಿತೂರಿ ಇದೆ. ಕಂಪನಿಯ ಬಗ್ಗೆ ತನಿಖೆ ನಡೆಸಬೇಕು ಮತ್ತು ಈ ವಿಷಯವನ್ನು ಎಸ್‌ಐಟಿ ಅಥವಾ ಇಡಿ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದರು.