ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌Vishweshwar Bhat Column: ಚಕಾರ ಮತ್ತು ಟೆಮರಿಂಡ್

ಹುಣಸೇಹಣ್ಣು ಈ ದೇಶದಿಂದಲೇ ಪಶ್ಚಿಮಕ್ಕೆ ಹೋದದ್ದು. ಒಯ್ದವರೂ ಅರಬರೇ. ಆದರೆ ಹುಣಸೇ ಹಣ್ಣು ನೋಡುವುದಕ್ಕೆ ಅವರ ದೇಶದ ಖರ್ಜೂರದ ಹಣ್ಣಿನ ಹಾಗೇ ಇದೆ. ಖರ್ಜೂರಕ್ಕೆ ಅರಬ್ಬಿ ಭಾಷೆ ಯಲ್ಲಿ ‘ತರ್ಮ’ ಎಂದು ಹೆಸರು. ಅವರು ಹುಣಸೇ ಹಣ್ಣನ್ನು ತರ್ಮಹಿಂದ್- ಹಿಂದುಸ್ತಾನದ ಖರ್ಜೂರ ಎಂದು ಕರೆದರು. ಅದು ಇಂಗ್ಲಿಷರ ಭಾಷೆ ಯಲ್ಲಿ ಟೆಮರಿಂಡ್ (tamarind)ಆಯಿತು

ಸಂಪಾದಕರ ಸದ್ಯಶೋಧನೆ

ಕನ್ನಡದಲ್ಲಿ ಚಕಾರ ಎಂಬ ಪದವಿದೆ. ನಾವು ಅದನ್ನು ನಿತ್ಯಜೀವನದಲ್ಲಿ ಧಾರಾಳವಾಗಿ ಬಳಸು ತ್ತೇವೆ. ‘ಆತನಿಗೆ ಬಾಯಿಗೆ ಬಂದಂತೆ ಬೈದೆ. ಸುಮ್ಮನೆ ಇದ್ದ. ಚಕಾರ ಎತ್ತಲಿಲ್ಲ’ ಎಂದು ಹೇಳುತ್ತೇವೆ. ಅಂದರೆ ಅಷ್ಟು ಬೈದರೂ ತಿರುಗಿ ಮಾತಾಡಲಿಲ್ಲ ಅಥವಾ ಒಂದು ಪದವನ್ನೂ ಹೇಳಲಿಲ್ಲ ಎಂಬುದು ತಾತ್ಪರ್ಯ.

ಈ ‘ಚಕಾರ’ ಎಂಬ ಪದ ಹೇಗೆ ಬಂತು ಎಂದು ಪಾ.ವೆಂ.ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಗ್ರಂಥದ ಪುಟಗಳನ್ನೂ ತಿರುವಿದೆ. ಆಚಾರ್ಯರು ಹೀಗೆ ಬರೆದಿದ್ದರು: ನಾವು ಸಾಮಾನ್ಯವಾಗಿ ಚಕಾರ ಶಬ್ದ ಎತ್ತಲಿಲ್ಲ ಅಥವಾ ಚಕಾರವೆತ್ತಲಿಲ್ಲ ಎನ್ನುತ್ತೇವೆ. ತನ್ನ ಮುಂದೆಯೇ ಚರ್ಚೆ ಎಷ್ಟು ನಡೆದರೂ ಅದು ತನ್ನನ್ನೇ ಕುರಿತಿದ್ದರೂ ಏನೊಂದೂ ಮಾತಾಡಲಿಲ್ಲ, ಉತ್ತರ ಕೊಡಲಿಲ್ಲ ಎನ್ನು ವುದು ತಾತ್ಪರ್ಯ.

ಈ ಮಾತಿನ ಮೂಲ ಕುತೂಹಲಕರವಾಗಿದೆ. ಸಂಸ್ಕೃತದಲ್ಲಿ ‘ಚ’ ಎಂಬೊಂದು ಅವ್ಯಯವಿದೆ. ಅದರ ಸಾಮಾನ್ಯ ಅರ್ಥ ‘ಮತ್ತು’ ಎಂದು. ‘ಅಹಂ ಚ ತ್ವಂ ಚ’ ಎಂದರೆ ‘ನಾನು ಮತ್ತು ನೀನು’. ಆದರೆ ಅದನ್ನು ಸಂಸ್ಕೃತ ಸಾಹಿತ್ಯದಲ್ಲಿ ವಿಪುಲವಾದ ಅರ್ಥಗಳಲ್ಲಿ, ಕೆಲವೊಮ್ಮೆ ಏನೂ ಅರ್ಥವಿಲ್ಲದೆ ಶ್ಲೋಕಗಳಲ್ಲಿ ಕಡಿಮೆ ಬಿದ್ದ ಮಾತ್ರೆಗಳನ್ನು ಭರ್ತಿ ಮಾಡುವುದಕ್ಕೂ ಧಾರಾಳವಾಗಿ ಪ್ರಯೋಗಿಸಿರುವುದು ಕಾಣಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಪ್ರೋಟಿಯಾ ಎಂಬ ಹೂವಿನ ಕುರಿತು

ಅದು ಪಡೆದ ಅನೇಕಾರ್ಥಗಳಲ್ಲಿ ಯಾರಾದರೊಬ್ಬರ ಹೇಳಿಕೆಯನ್ನು ಆಕ್ಷೇಪಿಸುವುದು ಅಥವಾ ತಿದ್ದುಪಡಿ ಮಾಡುವುದು ಕೂಡ ಸೇರಿದೆ. ‘ಅಪಿ ಚ’, ‘ಕಿಂ ಚ’ (ಆದರೆ, ಆದರೂ) ಇತ್ಯಾದಿಗಳನ್ನು ಉದಾಹರಿಸಬಹುದು. ಹೀಗೆ ‘ಚಕಾರ’ ಎಂದರೆ ‘ಚ’ ಎಂಬ ಅಕ್ಷರ ಎಂದೂ, ಸೌಮ್ಯ ವಿರೋಧ ಎಂದೂ ಅರ್ಥವಾಗುತ್ತದೆ. ಚಕಾರವೆತ್ತಲಿಲ್ಲ ಎಂದರೆ ಒಂದೇ ಅಕ್ಷರದಲ್ಲಿ ಕೂಡ ಅಲ್ಲಗಳೆಯಲಿಲ್ಲ.

‘ಚಾಚೂ ತಪ್ಪದೇ ಎಲ್ಲವನ್ನೂ ಹೇಳಿಬಿಟ್ಟ’ ಎನ್ನುವುದೂ ಸಂಸ್ಕೃತದ ಅಪಭ್ರಂಶವೆಂದೇ ತೋರು ತ್ತದೆ. ಸಂಸ್ಕೃತದಲ್ಲಿ ‘ಚ’ದ ಹಾಗೆ ‘ತು’ ಎಂಬ ಅವ್ಯಯವೂ ಇದೆ. ಅದಕ್ಕೆ ಸಾಮಾನ್ಯ ಅರ್ಥ ‘ಅಂತೂ’ (ಅಹಂತು = ನಾನಂತೂ) ಆದರೆ ವಿಶೇಷವಾಗಿ ಯಾವ ನಿಶ್ಚಿತಾರ್ಥವನ್ನೂ ದ್ಯೋತಿಸದೆ ಅಕ್ಷರ ಭರ್ತಿಗೂ ಅದನ್ನು ಬಳಸಿದ್ದು ಹೆಚ್ಚಾಗಿ ಪುರಾಣ ಸಾಹಿತ್ಯದಲ್ಲಿ ಕಾಣಿಸುತ್ತದೆ (ಹೀಗೆ ಬಳಸುವ ಇತರ ಅವ್ಯಯಗಳಲ್ಲಿ ‘ವೈ’ = ನಿಜಕ್ಕೂ, ‘ಓ’, ‘ಹ’ = ಅಂತೆ ಇವನ್ನೂ ಉಲ್ಲೇಖಿಸಬೇಕು).

ಒಟ್ಟಿನಲ್ಲಿ ಚ, ವೈ, ತು, ಹಿ, ಹ ಇತ್ಯಾದಿ ಅವ್ಯಯಗಳು ಅರ್ಥವನ್ನು ವ್ಯತ್ಯಾಸಪಡಿಸುವುದಿಲ್ಲ. ಅವುಗಳಿಗೆ ಮಹತ್ವವಿಲ್ಲ. ಆದ್ದರಿಂದ ‘ಚ-ತು ತಪ್ಪದೆ ಎಲ್ಲವನ್ನು ಹೇಳಿದ’ ಎಂದರೆ ಮುಖ್ಯ ಅಮುಖ್ಯ ಎಣಿಸದೆ ಇದ್ದಕ್ಕಿದ್ದಂತೆ ಹೇಳಿದನೆಂದು ಅರ್ಥ. ಸಂಸ್ಕೃತದ ‘ಚ-ತು’ ಎಂಬವು ಸಾಮಾನ್ಯರ ಬಾಯಲ್ಲಿ ‘ಚ-ಚು’ ಮತ್ತು ಅನಂತರ ‘ಚಾ-ಚೂ’ ಆಗಿರಬೇಕು ಮತ್ತು ಮೂಲ ಮರೆತು ಹೋಗಿರಬೇಕು.

‘ಚರಖಾ ಚಲಾಚಲಾ ಕೇ ಲೇಂಗೇ ಸ್ವರಾಜ್ಯ ಲೇಂಗೇ’ ಎಂದೋ ಚರಖಾದ ಸ್ಥಾನದಲ್ಲಿ ತಕಲಿ ಪದವನಿ ಹಾಡುತ್ತ ನಮ್ಮ ಸ್ವರಾಜ್ಯ ಚಳವಳಿಯಲ್ಲಿ ಪ್ರಭಾತ ಫೇರಿ ತೆಗೆಯುತ್ತಿದ್ದುದುಂಟು. ಈ ಚರಕಾ, ಚರಖಾ ಪದಗಳು ಮಾತ್ರ ಪಾರಸಿ ಭಾಷೆಯಿಂದ ತಂದವು. ಅವು ಸಂಸ್ಕೃತದ ಚಕ್ರ ಗ್ರೀಕಿನ kuklos ಇತ್ಯಾದಿ ಆರ್ಯ ಭಾಷಾ ಶಬ್ದಗಳ ಸಂಬಂಧಿಯಾಗಿವೆಯೆಂಬುದು ನಿಜವಾದರೂ ನೂಲು ತೆಗೆಯುವ ರಾಟೆಯೆಂಬರ್ಥದಲ್ಲಿ ವಿದೇಶೀಯವೇ.

‘ತಕಲಿ’ (ನೂಲು ತೆಗೆಯುವ ಇನ್ನೊಂದು ಸಾಧನ) ಇದಾದರೆ ಶುದ್ಧ ಭಾರತೀಯ ಪದ. ತರ್ಕು ಎಂಬ ಸಂಸ್ಕೃತ ಪದಕ್ಕೆ ನೂಲು ತೆಗೆಯುವ ಸಾಧನ- ಕನ್ನಡದಲ್ಲಿ ಕದಿರು ಎಂದರ್ಥ. ಒಮ್ಮೆ ಆಚಾರ್ಯ ರಿಗೆ, ‘ನಮ್ಮ ಹುಣಸೆಹಣ್ಣು ಇಂಗ್ಲಿಷಿನಲ್ಲಿ Tamarind ಹೇಗಾಯಿತು?’ ಎಂದು ಕೇಳಿದರಂತೆ.

ಅದಕ್ಕೆ ಅವರು ಕೊಟ್ಟ ಉತ್ತರ- “ಹುಣಸೇಹಣ್ಣು ಈ ದೇಶದಿಂದಲೇ ಪಶ್ಚಿಮಕ್ಕೆ ಹೋದದ್ದು. ಒಯ್ದವರೂ ಅರಬರೇ. ಆದರೆ ಹುಣಸೇಹಣ್ಣು ನೋಡುವುದಕ್ಕೆ ಅವರ ದೇಶದ ಖರ್ಜೂರದ ಹಣ್ಣಿನ ಹಾಗೇ ಇದೆ. ಖರ್ಜೂರಕ್ಕೆ ಅರಬ್ಬಿ ಭಾಷೆಯಲ್ಲಿ ‘ತರ್ಮ’ ಎಂದು ಹೆಸರು. ಅವರು ಹುಣಸೇ ಹಣ್ಣನ್ನು ತರ್ಮಹಿಂದ್- ಹಿಂದುಸ್ತಾನದ ಖರ್ಜೂರ ಎಂದು ಕರೆದರು. ಅದು ಇಂಗ್ಲಿಷರ ಭಾಷೆ ಯಲ್ಲಿ ಟೆಮರಿಂಡ್ (tamarind)ಆಯಿತು".

ವಿಶ್ವೇಶ್ವರ ಭಟ್‌

View all posts by this author