Chethana Rajahamsa Column: ಕುಂಭಮೇಳವನ್ನು ಟೀಕಿಸುವುದು ತರವಲ್ಲ
ಕುಂಭಮೇಳ ಕ್ಕಾಗಿ ಖರ್ಚುಮಾಡುವ ಹಣದ ಬಗ್ಗೆ ಹೆಚ್ಚಿನ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕಾರ್ಯ ಕ್ರಮಕ್ಕಾಗಿ ಸರಕಾರ ಅಧಿಕ ಹಣವನ್ನು ಖರ್ಚುಮಾಡುತ್ತಿದ್ದು, ಇದನ್ನೇ ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ಮೂಲನೆಯಂಥ ಇತರ ಬಾಬತ್ತುಗಳಿಗೆ ವಿನಿಯೋಗಿಸಬಹುದಿತ್ತಲ್ಲ ಎಂದು ಕೇಳು ವವರಿದ್ದಾರೆ


ಬುದ್ದಿಮಾತು
ಚೇತನ ರಾಜಹಂಸ
ಕುಂಭಮೇಳಕ್ಕೆ ಮಹಾಕುಂಭ ಎಂದೂ ಕರೆಯುತ್ತಾರೆ. ಇದು ಭಾರತೀಯ ಸಂಸ್ಕೃತಿ ಮತ್ತು ಧರ್ಮ ದ ಶ್ರೇಷ್ಠತೆಯ ಪ್ರತೀಕವಾಗಿದೆ. ಇದು ಕೇವಲ ಒಂದು ಧಾರ್ಮಿಕ ಆಯೋಜನೆಯಲ್ಲ, ಬದಲಾಗಿ ಆಧ್ಯಾತ್ಮಿಕ ಸಮ್ಮೇಳನ, ಮಹಾಸತ್ಸಂಗ ಮತ್ತು ಸಾಂಸ್ಕೃತಿಕ ಪರಂಪರೆಯ ಭವ್ಯ ಸಮ್ಮಿಲನವಾಗಿದೆ.
ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿರುವ ಈ ಮೇಳವು ಹಿಂದೂ ಧರ್ಮ ದಲ್ಲಿ ವಿಶಿಷ್ಟ ಪ್ರಾಮುಖ್ಯವನ್ನು ಹೊಂದಿದೆ. ಕೋಟ್ಯಂತರ ಭಕ್ತರ ಉಪಸ್ಥಿತಿ ಮತ್ತು ಶ್ರದ್ಧಾಭಕ್ತಿ ಯಿಂದ ಕೂಡಿದ ಅವರ ಆಚರಣೆಗಳ ಕಾರಣದಿಂದ ಈ ಮೇಳವು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವೆಂದು ಪರಿಗಣಿಸಲ್ಪಟ್ಟಿದೆ. ಆದರೆ, ಹಿಂದೂಗಳ ಇಂಥ ಕಾರ್ಯಕ್ರಮಗಳ ಬಗ್ಗೆಯೇ ಪ್ರಶ್ನೆಗಳು ಎದುರಾಗುತ್ತಿವೆ. ಕುಂಭಮೇಳ ಕ್ಕಾಗಿ ಖರ್ಚುಮಾಡುವ ಹಣದ ಬಗ್ಗೆ ಹೆಚ್ಚಿನ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕಾರ್ಯಕ್ರಮಕ್ಕಾಗಿ ಸರಕಾರ ಅಧಿಕ ಹಣವನ್ನು ಖರ್ಚುಮಾಡುತ್ತಿದ್ದು, ಇದನ್ನೇ ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ಮೂಲನೆಯಂಥ ಇತರ ಬಾಬತ್ತುಗಳಿಗೆ ವಿನಿ ಯೋಗಿಸಬಹುದಿತ್ತಲ್ಲ ಎಂದು ಕೇಳುವವರಿದ್ದಾರೆ.
ಇದನ್ನೂ ಓದಿ: Srinivas Raghavendra Column: ಮಡಿದ ಮಹಾತ್ಮನಿಗೆ ಮಿಡಿದ ಸ್ವಾಮಿಗಳು!
ವಿಶೇಷವಾಗಿ, ನಾಗಾ ಸಾಧುಗಳು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ವೆಚ್ಚದ ಬಗ್ಗೆ ಪ್ರಶ್ನೆ ಗಳು ಎದ್ದಿವೆ. ಆದಾಗ್ಯೂ, ಇತರ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳಿಗೂ ಸರಕಾರ ವೆಚ್ಚ ಮಾಡುತ್ತದೆ ಎಂಬುದನ್ನು ಗಮನಿಸುವುದು ಅವಶ್ಯವಾಗಿದೆ. ಉದಾಹರಣೆಗೆ, ಮುಸ್ಲಿಂ ಸಮುದಾ ಯದ ಹಜ್ ಯಾತ್ರೆಯ ಆಯೋಜನೆಯ ಸಂದರ್ಭದಲ್ಲೂ ಸರಕಾರವು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವೆಚ್ಚಮಾಡುತ್ತದೆ. ಆದರೆ ಆಗ ಯಾರೂ ಪ್ರಶ್ನಿಸುವುದಿಲ್ಲ.
ಹೀಗಿರುವಾಗ, ಕೇವಲ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗಳ ವಿಷಯದಲ್ಲಿ ಮಾತ್ರವೇ ಪ್ರಶ್ನಿಸುವುದು ಸೂಕ್ತವಲ್ಲ ಎಂದು ತೋರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ಕುಂಭಮೇಳ ಕ್ಕಿರುವ ಮಹತ್ವದ ಕಡೆಗೊಮ್ಮೆ ಗಮನ ಹರಿಸೋಣ. 2019ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರಕಾರವು 4200 ಕೋಟಿ ರುಪಾಯಿಗಳನ್ನು ಖರ್ಚುಮಾಡಿತು. ಈ ಮೊತ್ತವನ್ನು ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ, ಭದ್ರತೆ, ನೈರ್ಮಲ್ಯ ಮತ್ತು ಇತರ ಅಗತ್ಯ ಸೇವೆಗಳಿಗೆ ವಿನಿಯೋಗಿಸಲಾಗಿದೆ. ಈ ಆಯೋಜನೆಯಿಂದ ರಾಜ್ಯಕ್ಕೆ 1.2 ಲಕ್ಷ ಕೋಟಿ ರುಪಾಯಿ ಯಷ್ಟು ಆರ್ಥಿಕ ಲಾಭವಾಯಿತು ಮತ್ತು ಈ ಲಾಭವು ಪ್ರವಾಸೋದ್ಯಮ, ವ್ಯಾಪಾರ ಹಾಗೂ ಇದರ ಮಾರ್ಗೋಪಾಯಗಳ ಮೂಲಕ ಹರಿದುಬಂತು.
ಕುಂಭಮೇಳದ ಸಮಯದಲ್ಲಿ ತಾತ್ಕಾಲಿಕ ನಗರವನ್ನು ನಿರ್ಮಿಸಲಾಗುತ್ತದೆ. ಇದು ರಸ್ತೆಗಳು, ಸೇತುವೆಗಳು, ಸಂಚಾರ ವ್ಯವಸ್ಥೆಗಳು, ನೀರು ಸರಬರಾಜು, ವಿದ್ಯುತ್ ಮತ್ತು ವ್ಯಾಪಕವಾದ ನೈರ್ಮ ಲ್ಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದು ಕೇವಲ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸು ವುದಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ಒದಗಿಸುತ್ತದೆ.
ಇನ್ನು ಕುಂಭಮೇಳಕ್ಕಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕಡೆಗೊಮ್ಮೆ ದೃಷ್ಟಿ ಹಾಯಿ ಸೋಣ. ಕುಂಭಮೇಳವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ;ಬದಲಿಗೆ ಇದು ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನವೂ ಆಗಿದೆ. ಈ ಆಯೋ ಜನೆಯು ಸಾಂಪ್ರದಾಯಿಕ ವೃತ್ತಿಗಳಾದ ಕರಕುಶಲ ವಸ್ತುಗಳು, ಜವಳಿ ಉತ್ಪಾದನೆ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುತ್ತದೆ. ಕುಂಭಮೇಳದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಕಲೆಗಳು ಜಾಗತಿಕವಾಗಿ ಪ್ರಚಾರಗೊಳ್ಳುವುದಕ್ಕೆ ಮತ್ತು ಪ್ರಸಾರಗೊಳ್ಳುವುದಕ್ಕೆ ಸಾಧ್ಯ ವಾಗುತ್ತದೆ.
ಕುಂಭಮೇಳವು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಇದು ಧಾರ್ಮಿಕ, ಸಾಂಸ್ಕೃ ತಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ಅತ್ಯಂತ ಮಹತ್ವಪೂರ್ಣವಾದುದಾಗಿದೆ. ಹೀಗಾಗಿ ಇದರ ಆಯೋಜನೆಯನ್ನು ಅಪವ್ಯಯವೆಂದು ಕರೆಯುವುದು ಸೂಕ್ತವಲ್ಲ. ಈ ಮೇಳವು ದೇಶದ ಸಾಂಸ್ಕೃ ತಿಕ ಪರಂಪರೆಯನ್ನು ರಕ್ಷಿಸುವುದರ ಜತೆಗೆ ಸಮಾಜದಲ್ಲಿ ಏಕತೆ, ಸಾಮರಸ್ಯ ಮತ್ತು ಸಹೋದ ರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ.
ಹೀಗಾಗಿ ಟೀಕೆಗಳನ್ನು ಒತ್ತಟ್ಟಿಗಿಟ್ಟು, ಕುಂಭಮೇಳವು ಭಾರತೀಯ ಸಂಸ್ಕೃತಿಯ ಆಳ ಮತ್ತು ವೈವಿ ಧ್ಯವನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮ ಎಂಬುದನ್ನು ಒಪ್ಪಿಕೊಳ್ಳುವುದು ಅವಶ್ಯಕವಾಗಿದೆ. ಅದನ್ನು ಅಪವ್ಯಯವೆಂದು ತಿಳಿಯದೇ ಭಾರತೀಯ ಸಮಾಜದ ಉನ್ನತಿ ಹಾಗೂ ಅಭಿವೃದ್ಧಿಯ ಒಂದು ಮಾಧ್ಯಮವೆಂದು ಪರಿಗಣಿಸಬೇಕು.
ಭಕ್ತರಿಗೆ ಸುವರ್ಣಾವಕಾಶವನ್ನು ಒದಗಿಸುವ ಸಂದರ್ಭವೂ ಹೌದು ಈ ಕುಂಭಮೇಳ. ಸನಾತನ ಸಂಸ್ಥೆಯು ಹಲವು ವರ್ಷಗಳಿಂದ ಕುಂಭಮೇಳದಲ್ಲಿ ವಿವಿಧ ಮಾಧ್ಯಮಗಳ ಮೂಲಕ ಸಾಧನೆ ಯನ್ನು ಉತ್ತಮಗೊಳಿಸಲು ಮಾರ್ಗದರ್ಶನ ಮಾಡುತ್ತಿದೆ. ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆ ಯುತ್ತಿರುವ ಮಹಾಕುಂಭಮೇಳದಲ್ಲಿ ಸಾಧನಾ ಸತ್ಸಂಗ, ನಾಮಸ್ಮರಣೆ ಇತ್ಯಾದಿಗಳ ಮೂಲಕ ವ್ಯಾಪಕ ಪ್ರಚಾರ-ಪ್ರಸಾರವನ್ನು ಆಯೋಜಿಸಲಾಗಿದೆ.
ಭಕ್ತರು ಸಾಧನೆಯ ಆನಂದವನ್ನು ಪಡೆಯಲು ಮತ್ತು ಇತರರಿಗೆ ಅದನ್ನು ತಲುಪಿಸಲು ಈ ಸುವ ರ್ಣಾವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು.
(ಲೇಖಕರು ವಕ್ತಾರರು, ಸನಾತನ ಸಂಸ್ಥೆ)