ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Srinivas Raghavendra Column: ಮಡಿದ ಮಹಾತ್ಮನಿಗೆ ಮಿಡಿದ ಸ್ವಾಮಿಗಳು!

ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗಿತ್ತು. ಬ್ರಾಹ್ಮಣ ಯುವಕನೊಬ್ಬನಿಂದ ಗಾಂಧೀಜಿ ಹತ್ಯೆ ಯಾಗಿದ್ದು ಕಂಡು ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಯಾಗಿತ್ತು. ಬ್ರಾಹ್ಮಣ ಸಮಾಜವು ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿ ಮಹಾವಿಪ್ಲವದಂಥ ಪರಿಸ್ಥಿತಿ ರೂಪುಗೊಂಡಿತ್ತು

Srinivas Raghavendra Column: ಮಡಿದ ಮಹಾತ್ಮನಿಗೆ ಮಿಡಿದ ಸ್ವಾಮಿಗಳು!

Profile Ashok Nayak Jan 30, 2025 1:38 PM

ನೆನಪಿನ ದೋಣಿ

ಶ್ರೀನಿವಾಸ್‌ ರಾಘವೇಂದ್ರ, ಮೈಸೂರು

ನಟನಾ ಕೌಶಲ ಇದ್ದವರು ಜೀವನದಲ್ಲಿ ಎದುರಾಗುವ ಫಜೀತಿಗಳನ್ನು ನಿವಾರಿಸಿಕೊಳ್ಳಬಲ್ಲರು. ಊಟ ಮಾಡುವ ದೃಶ್ಯದ ಚಿತ್ರೀಕರಣದಲ್ಲಿ ಭಾಗವಹಿಸಿರುವ ಕಲಾವಿದರು, ಬಡಿಸಿದ ಖಾದ್ಯವು ತಮಗಿಷ್ಟವಿಲ್ಲದಿದ್ದರೂ ಪ್ರೇಕ್ಷಕರ ಸಲುವಾಗಿ ಕೆಲವೊಂದು ತುತ್ತುಗಳನ್ನು ಬಾಯಿಗಿಳಿಸಿ ಸಂತೃಪ್ತ ರಾದವರಂತೆ ನಟಿಸುತ್ತಾರೆ.

ಆದರೆ, ಉಡುಪಿ ಮಠದ ಸ್ವಾಮಿಗಳೊಬ್ಬರು ರಥಬೀದಿಯ ಮಠದಲ್ಲೋ, ಇಲ್ಲವೇ ಚೌಕಿ ಭೋಜನ ಶಾಲೆಯಲ್ಲೋ, ಸುತ್ತಲೂ ನೆರೆಯುವ ಭಕ್ತರ ಎದುರಿಗೆ ಎಲೆ ಮುಂದೆ ಕುಳಿತು, ಪಂಚಭಕ್ಷ್ಯ ಪರಮಾ ನ್ನವು ಅದರ ಮೇಲೆ ಕಾಣುತ್ತಿರುವಾಗ ಜಿಹ್ವಾಚಾಪಲ್ಯದ ಒಂದಿಷ್ಟೂ ಸೋಂಕಿಲ್ಲದೆ, ಪರಿಶೇಚನ ವನ್ನು ಮಾಡಿ, ಒಂದು ಅಗಳು ಸಹಿತ ಬಾಯೊಳಗೆ ಹೋಗದಂತೆ ಎಚ್ಚರ ವಹಿಸಿ, ಆದರೂ ನೋಡು ವವರಿಗೆ ‘ಭಿಕ್ಷಾ’ (ಸನ್ಯಾ ಸಿಗಳ ಊಟದ ಪದ್ಧತಿ) ತೆಗೆದುಕೊಂಡಂತೆ ಬಿಂಬಿಸಲು ಸಾಧ್ಯವೇ? ಅಂದಿನ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾ ದರು ಇದನ್ನು ಸಾಧ್ಯ ಮಾಡಿ ತೋರಿಸಿ ರಾಷ್ಟ್ರಪ್ರೇಮವನ್ನು ಮೆರೆದಿದ್ದುಂಟು!

ಅಂದು, 1948ರ ಜನವರಿ 30. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯಾದ ದಿನ. ಅಂದು ಸರ್ವಜಿತ್ ಸಂವತ್ಸರದ ಪುಷ್ಯ ಬಹುಳ ಪಂಚಮಿ! ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗಿತ್ತು. ಬ್ರಾಹ್ಮಣ ಯುವಕನೊಬ್ಬನಿಂದ ಗಾಂಧೀಜಿ ಹತ್ಯೆಯಾಗಿದ್ದು ಕಂಡು ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಯಾಗಿತ್ತು. ಬ್ರಾಹ್ಮಣ ಸಮಾಜವು ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿ ಮಹಾವಿಪ್ಲವದಂಥ ಪರಿಸ್ಥಿತಿ ರೂಪುಗೊಂಡಿತ್ತು.

ಆಗ ಪೇಜಾವರ ಶ್ರೀಗಳಿಗೆ 17ರ ತಾರುಣ್ಯ (ಹುಟ್ಟಿದ್ದು 1931ರಲ್ಲಿ). ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕದಿದ್ದರೂ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಶ್ರೀಗಳು ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತಿದ್ದರು. ಗಾಂಧಿ, ನೆಹರು, ವಲ್ಲಭಭಾಯಿ ಪಟೇಲ್ ಮೊದಲಾದವರ ಬಗ್ಗೆ ಸ್ವಾಮಿಗಳಿಗೆ ಎಲ್ಲಿಲ್ಲದ ಅಭಿಮಾನವಿತ್ತು.

ಹೀಗಿರುವಾಗ, ಗಾಂಧೀಜಿ ಹತ್ಯೆ ಶ್ರೀಗಳನ್ನು ಮಮ್ಮಲ ಮರುಗುವಂತೆ ಮಾಡಿತ್ತು. ಅದಕ್ಕಾಗಿ ಒಂದು ದಿನದ ಅಶನ ನಿರಸನ (ಕಟ್ಟುನಿಟ್ಟು ಉಪವಾಸ) ನಿರ್ಧಾರಕ್ಕೆ ಶ್ರೀಗಳು ಬಂದಿದ್ದರು. ಏಕಾದಶಿ, ಗ್ರಹಣ, ಉತ್ತರಾಯಣ-ದಕ್ಷಿಣಾಯಣ ಪರ್ವಕಾಲ ಹೊರತುಪಡಿಸಿ ಬೇರೆ ದಿನಗಳಲ್ಲಿ ಶ್ರೀಗಳು ‘ಭಿಕ್ಷಾ’ವನ್ನು ಸ್ವೀಕರಿಸಲೇಬೇಕು. ಆದರೆ ಸ್ವಾಮಿಗಳು ಗಾಂಧಿಯವರ ಸಲುವಾಗಿನ ತಮ್ಮ ಒಂದು ದಿನದ ಉಪವಾಸವನ್ನು ಮಠದ ಪಡಸಾಲೆಯಲ್ಲಿ ‘ಘಂಟಾ ಘೋಷವಾಗಿ’ ಘೋಷಿಸಲು ಸಾಧ್ಯವೇ? ಸನಾತನಿಗಳು ಗಾಂಧಿಯ ವರನ್ನು ‘ಕಲಿಯ ಅವತಾರ’ ಎಂಬ ಭಾವಿಸಿದ್ದ ಕಾಲದಲ್ಲಿ, ಗಾಂಧಿ ಎಂದರೆ ಸಿಡಿದೇಳುವ ಮಂದಿ ಸುತ್ತಲಿರುವಾಗ, ಮಠದ ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಲು ಶ್ರೀಗಳಿಗೆ ಸಾಧ್ಯವಾಗುವಂತಿರಲಿಲ್ಲ. ಅದಕ್ಕೇ ಅವರು ಊಟ ಮಾಡುವಂತೆ ನಟಿಸಿದ್ದು! ಮಠದ ಸಿಬ್ಬಂದಿಗಳಿಗೆ ಗೊತ್ತಾಗಿದ್ದಿದ್ದರೆ, ಸ್ವಾಮಿಗಳ ಆಕ್ಷೇಪಾರ್ಹ ಉಪವಾಸದ ಸುದ್ದಿಯ ಬಗ್ಗೆ ರಥಬೀದಿಯಲ್ಲೆಲ್ಲ ಬೊಬ್ಬೆ ಹೊಡೆಯು ತ್ತಿದ್ದರು, ಡಂಗುರ ಬಾರಿಸಿಬಿಡುತ್ತಿದ್ದರು!

ಅದು ಶ್ರೀಗಳ ಪಾಲಿಗೆ ಇರಿಸು-ಮುರಿಸಿನ ಪ್ರಸಂಗವಾಗಿ ಬಿಡುತ್ತಿತ್ತು. ಆದರೆ ಶ್ರೀಗಳು ಉಪವಾಸದ ಬಗ್ಗೆ ಯಾರಿಗೂ ಸುಳಿವು ಬಿಟ್ಟುಕೊಡದಷ್ಟು ಚಾಕಚಕ್ಯತೆ ತೋರಿದ್ದರು. ಊಟದೆಲೆಯ ಮೇಲೆ ವಿವಿಧ ಭಕ್ಷ್ಯಗಳನ್ನು ಬಡಿಸಿದ ನಂತರ, ಸಂಪ್ರದಾಯದಂತೆ ಪರಿಶೇಚನೆ ಮಾಡಿದರೇ ವಿನಾ, ಆಹಾರ ವನ್ನು ಸೇವಿಸಲಿಲ್ಲ. ಇದನ್ನು ಕಂಡ ಶಿಷ್ಯರಿಗೆ ಅರೆಕ್ಷಣ ಅಚ್ಚರಿಯಾಗಿರ ಬಹುದಾದರೂ, ‘ಬಹುಶಃ ಸ್ವಾಮಿಗಳಿಗೆ ದೇಹಾಲಸ್ಯವಾಗಿರಬಹುದು, ಹೀಗಾಗಿ ಅವರಿಗೆ ಊಟ ಸೇರುತ್ತಿಲ್ಲ’ ಎಂದೋ, ‘ಲಂಘ ನಂ ಪರಮೌಷಧಂ’ ಎಂಬ ಮಾತಿನಂತೆ ಸ್ವಾಮಿಗಳು ತಮ್ಮ ಅನಾರೋಗ್ಯಕ್ಕೆ ಔಷಧವಾಗಿ ಊಟ ಬಿಟ್ಟಿರಬಹುದು’ ಎಂದೋ ಆ ಶಿಷ್ಯರು ಭಾವಿಸಿ ಸುಮ್ಮನಾದರು ಅಂತ ಕಾಣುತ್ತೆ!

ಹೀಗೆ, ಆ ಒಂದು ದಿನದ ಉಪವಾಸ ಮಾಡುವ ಮೂಲಕ, ನಿಜವಾದ ರಾಷ್ಟ್ರೀಯ ಶೋಕವನ್ನು ಆಚರಿಸಿದ ಪ್ರಸಂಗವನ್ನು ಶ್ರೀಗಳು ಎಷ್ಟೋ ವರ್ಷಗಳ ತರುವಾಯ ಸಂದರ್ಶನಗಳಲ್ಲಿ ಹೇಳಿ ಕೊಂಡ ರೆನ್ನಿ!

(ಲೇಖಕರು ಹವ್ಯಾಸಿ ಬರಹಗಾರರು)