ಅಭಿಮತ
ದೇವು ಹನೆಹಳ್ಳಿ, ಉಡುಪಿ
ಮಕ್ಕಳು ರಚ್ಚೆ ಹಿಡಿದು ರಗಳೆ, ರಂಪ, ಕಿರಿಕಿರಿ, ತಂಟೆ ಮಾಡಬಾರದು ಎಂದು ಚಾಕೋಲೆಟ್ ಕೊಟ್ಟು ಕೂರಿಸುವುದು ತಾಯಂದಿರ ಮಾಮೂಲಿ ಕ್ರಮ. ಅನಂತರ ಅದು ಅಭ್ಯಾಸವಾಗುತ್ತದೆ; ಚಾಕೋಲೆಟ್ ಪಡೆಯುವುದು ಆ ಮಗುವಿನ ಹಕ್ಕಾಗುತ್ತದೆ. ಕೊಡುವುದು ತಾಯಿಗೆ ಅನಿವಾರ್ಯ ವಾಗುತ್ತದೆ. ಮತ್ತೆ ಚಾಕೋಲೆಟ್‌ಗಾಗಿಯೇ ರಂಪ ಎಬ್ಬಿಸುತ್ತವೆ.
ಕರ್ನಾಟಕದಲ್ಲಿ ಹೀಗೆ ಲೇಟೆಸ್ಟ್ ಆಗಿ ಮೂಡಿ ಬಂದ ಚಾಕೋಲೆಟ್ ಎಂದರೆ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಂಚಿದ ಕ್ಯಾಬಿನೆಟ್ ಚಾಕೋಲೆಟ್. ಈ ಚಾಕೋಲೆಟ್ ಒಂದೇ ಅಲ್ಲ. ಇದು ಕಾಲಕಾಲಕ್ಕೆ, ಸಮಯ-ಸಂದರ್ಭಕ್ಕೆ ಬದಲಾಗುತ್ತವೆ. ಅಂದರೆ ಹತ್ತು, ನೂರು ಬಗೆಯ ಚಾಕೋಲೆಟ್ ಗಳಿವೆ. ಹಲವು ಸ್ತರಗಳ (ಗ್ರಾಮ, ಜಿಲ್ಲೆ, ರಾಜ್ಯ, ಲೋಕ) ಚುನಾವಣಾ ಸೀಟುಗಳೆಂಬ ಬಿರ್ಯಾನಿ, ನಿಗಮ-ಮಂಡಳಿಗಳೆಂಬ ಗಂಜಿಕೇಂದ್ರಗಳು, ದುಡ್ಡು ರಾಶಿ ಬೀಳುವ ದೇವಸ್ಥಾನಗಳ ಮೊಕ್ತೇಸರಿಕೆ ಮತ್ತು ಸಮಿತಿ. ಇನ್ನು ಅಸಂಖ್ಯ ಪ್ರಶಸ್ತಿಗಳು, ಪೀಠಗಳು, ಸಿಂಡಿಕೇಟ್ ಇತ್ಯಾದಿ.
ಅದು ತಮ್ಮದೇ ಜನ್ಮಜಾತ ಹಕ್ಕು ಎಂದು ಎಲ್ಲ ಪ್ರಬಲ ಜಾತಿಗಳು ಮುಗ್ಧವಾಗಿ ತಿಳಿದುಕೊಂಡಿವೆ; ಹಾಗೆಯೇ ವರ್ತಿಸುತ್ತವೆ. ‘ನಾವು ಮುಂಡಾಸು ಧರಿಸಲೆಂದೇ ಹುಟ್ಟಿದವರು. ನೀವು?! ನೀವು ಮುಟ್ಟಾಳೆ ಧರಿಸಲೆಂದೇ ಹುಟ್ಟಿದ ಮುಠ್ಠಾಳರು! ಅಗ್ರಪೂಜೆ, ಅಗ್ರತಾಂಬೂಲ ನಮಗೆ, ಅಗ್ರಪೂಜೆ ಯ ಅನಂತರ ಆರತಿ ಬಿಸಿಯನ್ನು ಬೇಕಾದರೆ ಹಿಡಿಸಿಕೊಳ್ಳಿ! ತಾಂಬೂಲ ಜಗಿದು ಉಳಿದದ್ದು ನಿಮಗೆ! ಇದಕ್ಕೆ ಸೆರಗು, ಜುಟ್ಟು ಇರುವ ಎಲ್ಲ ಅಮ್ಮಂದಿರೂ ಬಗ್ಗುತ್ತಾರೆ.
ಇದನ್ನೂ ಓದಿ: Surendra Pai Column: ದಿಮಾಗಿ ನಕ್ಸಲ್: ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು
ಕೆಲವು ಮಕ್ಕಳು ಒಮ್ಮೆ ರಚ್ಚೆ ಹಿಡಿದು ಸುಮ್ಮನಾಗುವುದಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಚಾಕೋಲೆಟ್ ಡಬ್ಬಿ (ಕ್ಯಾಬಿನೆಟ್!) ಹಿಡಿದ ಅಮ್ಮನ ಸೆರಗು ಹಿಡಿದು ಎಳೆಯುತ್ತವೆ, ಮುಂಗೈ ಹಿಡಿದು ತಿರುಚುತ್ತವೆ, ಜುಟ್ಟು ಹಿಡಿದು ಎಳೆಯುತ್ತವೆ; ಚಾಕೋಲೆಟ್ ಸಿಕ್ಕಿದ ಮಕ್ಕಳೂ ಕೂಡಾ ರಂಪ ಕಡಿಮೆ ಮಾಡುವುದಿಲ್ಲ. ಕೊಟ್ಟದ್ದು ಕಡಿಮೆಯಾಯಿತು ಎಂದು ಅಮ್ಮನ ಕಾಲಿಗೆ ತೊಡರು ಬೀಳುತ್ತವೆ. ‘ಮನೆ ಬಿಟ್ಟು ಹೋಗುತ್ತೇವೆ ಎಂದು ಬೊಬ್ಬೆ ಹಾಕುತ್ತವೆ.
ಅಂತೂ ಡಿಕೆಶಿಯವರ ಜುಟ್ಟಂತೂ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಕ್ರಿಶ್ಚಿಯನ್, ಕುರುಬರ ಕೈಗೆ ಸಿಕ್ಕು ಸಿಕ್ಕುಸಿಕ್ಕಾಯಿತು. (ಕರಾವಳಿಯ ನಾಡವ ಯಾನೆ ಬಂಟರ ಸ್ಥಿತಿ ಸ್ವಲ್ಪ ಭಿನ್ನ. ಇವರಿಗೆ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಕ್ರಿಶ್ಚಿಯನ್, ಕುರುಬ ಮತ್ತು ವಾಲ್ಮೀಕಿ ನಾಯಕರಂತೆ ರಾಜ್ಯ ವ್ಯಾಪೀ ‘ರಚ್ಚೆಶಕ್ತಿ ಇಲ್ಲದಿದ್ದರೂ ಲೋಕಲ್ ಗರಡಿಯಲ್ಲಿ ರಚ್ಚೆ ಕಡಿಮೆಯೇನೂ ಇಲ್ಲ.) ಇಲ್ಲಿ ಬ್ರಾಹ್ಮಣರದು ವಿಚಿತ್ರ ಸ್ಥಿತಿ. ರಚ್ಚೆ ಮಾಡುವ ಮನಸ್ಸಿದೆ; ಆದರೆ ದಾಕ್ಷಿಣ್ಯ. ಅಲ್ಪಸ್ವಲ್ಪ ಮಾಡಿ ದರೂ ಆ ರಚ್ಚೆಗೆ ಬಲವಿಲ್ಲ. “ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸ್ಥಾನವಿಲ್ಲವಾಯಿತು; ಪ್ರಾತಿನಿಧ್ಯವಿಲ್ಲವಾಯಿತು" ಎಂದು ಗೋಳಾಡುತ್ತಿದ್ದಾರೆ.
ಇನ್ನೂ ಬೀಭತ್ಸವೆಂದರೆ ಇಲ್ಲಿಯತನಕ ‘ಕಾಂಗ್ರೆಸಿನಲ್ಲಿರುವ ಅವನೆಂತಹ ಬ್ರಾಹ್ಮಣ?! ಮುಸ್ಲಿಂ ಹುಡುಗಿ ಯನ್ನು ಮದುವೆಯಾಗಿರುವ ಅವನೆಂತಹ ಬ್ರಾಹ್ಮಣ?! ಎಂಬಿತ್ಯಾದಿಯಾಗಿ ಅವರನ್ನು ತೆಗಳುತ್ತಿದ್ದ ಬ್ರಾಹ್ಮಣರು ಕೂಡಾ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಚಾಕೋಲೆಟ್ ಸಿಗಬೇಕಾ ಗಿತ್ತು ಎಂದು ಅಲವತ್ತುಕೊಳ್ಳುತ್ತಿದ್ದಾರೆ! (ಅವರೇ ಅದನ್ನು ಹೇಳಲು ಯಾಕೋ ದಾಕ್ಷಿಣ್ಯಪಡುತ್ತಿದ್ದಾರೆ.) ಅಂದರೆ ಇವರ್ಯಾರಿಗೂ ದೇಶ, ರಾಜ್ಯ, ನೆಲ, ಜಲ, ಭಾಷೆ, ಸರಕಾರ, ಜನಹಿತ, ಪ್ರಜಾಪ್ರಭುತ್ವ ಯಾವುದೂ ಮುಖ್ಯವಲ್ಲ; ಜಾತಿ ಮಾತ್ರ ಮುಖ್ಯ. ಜಾತಿ ವೋಟ್ ಬ್ಯಾಂಕ್ ಆಯಿತೇ ವಿನಃ ಪ್ರಜಾಪ್ರಭುತ್ವದ ಮೌಲ್ಯಗಳು ವೋಟ್ ಬ್ಯಾಂಕ್ ಆಗಲಿಲ್ಲ. ಬ್ಯಾಂಕುಗಳಿಗಿಂತ ಮೊದಲು ಜಾತಿ ನ್ಯಾಷನಲೈಸ್ ಆಯಿತು, ರ್ಯಾಷನಲೈಸ್ ಆಯಿತು!
ರಚ್ಚೆ ಹಿಡಿಯುವ ಮಕ್ಕಳ ಪಾಲಿಗೆ ಎಂಜಲು ತಾಗಿದರೆ ಮೂರು ಮುಕ್ಕಾಲು ಗಳಿಗೆ ಬಿಡಿ, ಮೂರು ಸೆಕೆಂಡಿ ನಲ್ಲಿ ಕರಗಿ ಹೋಗುವ ಚಾಕೋಲೆಟೇ ಮುಖ್ಯ. ಅದಕ್ಕಾಗಿ ಎಲ್ಲ ಮಕ್ಕಳೂ ಎಂಜಲು ಸುರಿಸುವುದು! ವೇದಿಕೆ ಯಲ್ಲಿ ಮಾತ್ರ ಎಲ್ಲರೂ ದೇಶಕ್ಕಾಗಿ ರಕ್ತ, ಬೆವರು, ಕಣ್ಣೀರು ಸುರಿಸುವವರೇ! ಕೊಡುವ ದೊಡ್ಡಸ್ತಿಕೆ, ಪಡೆಯುವ ದೈನ್ಯತೆ, ಕಿತ್ತುಕೊಳ್ಳುವ ದರ್ಪದ ಊಳಿಗಮಾನ್ಯ ಪದ್ಧತಿಯು ‘ಪ್ರಜಾಪ್ರಭುತ್ವವೆಂಬ ಬಣ್ಣದ ಬೋರ್ಡಿನಡಿ’ಯಲ್ಲಿ ಮುಂದುವರಿಯಿತು. ಈ ರಂಪಾಟದಲ್ಲಿ ಅವರಾಗಲೀ, ಪ್ರೇಕ್ಷಕರಾದ ನಾವಾಗಲೀ ಒಂದು ಮಾತನ್ನು ಕೇಳುವುದಿಲ್ಲ.
ನಮಗೆ ಬೇಕು, ಇನ್ನೂ ಬೇಕು, ಕೊಟ್ಟಷ್ಟೂ ಸಾಲದು ಎನ್ನುವ ಗದ್ದಲದಲ್ಲಿ ‘ಕೊರಗ, ಮೇರ, ದಾಸ, ಸೇರೆಗಾರ, ಪಾಣ, ಹಕ್ಕಿಪಿಕ್ಕಿ, ಕೊರಚ, ಕೊರವ, ಉಪ್ಪಾರ, ಸಫಲಿಗ, ಒಡ್ಡ, ಮುಂಡಾಲ, ಸೋಲಿಗ, ಜೇನುಕುರುಬ, ಯರವ, ಗುನಗ, ಕುಲಾಲ, ಕಮ್ಮಾರ... ಇವರಿಗೆಲ್ಲಾ ಏನಾದರೂ ಸಿಕ್ಕಿತೇ? ಎಂದು ಕೇಳಿದ್ದೇವೆಯೇ? ಇಲ್ಲ. (ಮೀಸಲಾತಿಯಲ್ಲದಿದ್ದರೆ ಅಂಗಾರ, ಭಾಗೀರಥಿ, ಛಲವಾದಿ...ಯವರಿಗೂ ಶಾಶ್ವತ ಮೀಸಲಾತಿಯವರ ಭರಾಟೆಯಲ್ಲಿ ಅದೂ ಸಿಗುತ್ತಿರಲಿಲ್ಲ. ಹಾಗೆ ಸಿಕ್ಕಿದವರಲ್ಲಿ ಹೆಚ್ಚಿನವರು ಶಾಶ್ವತ ಮೀಸಲಾತಿ ಪಡೆದ ಪ್ರಬಲ ಕೋಮು, ಜಾತಿಯವರ ಅಡಿಯಾಳಾಗಿರುವುದೇ ಹೆಚ್ಚು.)
ಇಲ್ಲಿ ಬ್ರಾಹ್ಮಣರ ಸಂಕಟವೇ ಬೇರೆ. ಪ್ರತಿಭೆ, ವಿದ್ಯೆ, ಸಾಹಿತ್ಯ, ಶ್ರೇಷ್ಠತೆ ಇತ್ಯಾದಿ ತಮ್ಮ ಜನ್ಮಜಾತ ಹಕ್ಕು ಮತ್ತು ಇವೇ ನಮಗೆ ಇದುವರೆಗೆ ಶಾಶ್ವತ ಮೀಸಲಾತಿ ಕಲ್ಪಿಸಿವೆ; ಇನ್ನೂ ಸಿಗಬೇಕು ಎಂಬ ಮನೋಭಾವ. ಮೇಲೆಡೆ ನಮಗೇ ಸಿಗಬೇಕು. ಚಾಕೋಲೆಟ್ ಬೇಕು; ದೊಡ್ಡದೇ ಬೇಕು. ಅದರಲ್ಲಿ ನಾವು ಕೇಳುವುದೇನು ಬಂತು?! ಕೇಳದೇ ಕೊಡಬೇಕು. ಅದು ನಿಮ್ಮ ಜವಾಬ್ದಾರಿ. ರಚ್ಚೆ ಹಿಡಿಯುವುದಿಲ್ಲ; ಹಿಡಿಯಬಾರದು. (ಹಿಡಿದರೆ ಕಿಮ್ಮತ್ತು ಕೊಡುವವರು ಯಾರು?!) ಶ್ರೇಷ್ಠತೆಯ ವ್ಯಸನ.
ಇಷ್ಟೆಲ್ಲಾ ಹಂತಗಳಲ್ಲಿ ಚಾಕೋಲೆಟ್ ಹಂಚಿಕೆಯಾಗುತ್ತದಲ್ಲಾ? ಅಲ್ಲೆಲ್ಲಾ ಚಾಕೋಲೆಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೇ ಸೋಲುವ, ರಚ್ಚೆ ಹಿಡಿಯುವ ರಟ್ಟೆ ಮತ್ತು ದೊಂಡೆ ಶಕ್ತಿ ಇಲ್ಲದ ಚಳ್ಳೆಪಿಳ್ಳೆ ಮಕ್ಕಳು ವರ್ತಿಸುವ ರೀತಿ ಬೇರೆಯದೇ ಆಗಿರುತ್ತದೆ. ತಮ್ಮಲ್ಲಿಯೇ ಒಬ್ಬರಿಗೆ ಚಾಕೋಲೆಟ್ ಸಿಕ್ಕಿದರೆ ಅವರಿಗದು ಸಹ್ಯವಾಗುವುದಿಲ್ಲ. ತಮಗೆ ಸಿಗದಿದ್ದರೂ ಪರವಾಗಿಲ್ಲ, ತಮ್ಮಂತೆಯೇ ಇರುವ ಇನ್ನೊಬ್ಬನಿಗೆ ಸಿಗಬಾರದು. ‘ಯಜಮಾನರಾಗಿಯೇ ಹುಟ್ಟಿದ ಜಾತಿಗಳಿಗೆ ಇರಲಿ, ನಮಗ್ಯಾಕೆ ಎನ್ನುವ ಮನಸ್ಥಿತಿ. ಇದು ಬಹು ಆಳಕ್ಕೆ ಬೇರೂರಿರುವ ಊಳಿಗಮಾನ್ಯ ಗುಲಾಮೀಬುದ್ಧಿ. ಪ್ರಬಲ ಜಾತಿ, ಕೋಮುಗಳ ಯಾಜಮಾನ್ಯವನ್ನು ಹಲವು ಹಂತಗಳಲ್ಲಿ ಅವರು ಒಪ್ಪಿಕೊಂಡವರೇ.
ಅವರಲ್ಲಿ ಹೆಚ್ಚಿನವರು ಚಾಕೋಲೆಟ್ ಗಳ ಗಮನ, ಗುರಿ ಏನೂ ಇಲ್ಲದೆ, ಏಕೆ-ಏನು ಎಂದು ತಿಳಿಯದೆ ತಮ್ಮತಮ್ಮಲ್ಲಿಯೇ ಗುದ್ದಾಡಿಕೊಳ್ಳುತ್ತಾ ಬಿದ್ದಿರುತ್ತಾರೆ; ರಚ್ಚೆಹಿಡಿದು ಗಿಟ್ಟಿಸಿಕೊಂಡವರು ಎಸೆಯುವ £wbtthw ಗೇ ತೃಪ್ತಿಪಟ್ಟುಕೊಳ್ಳುತ್ತಾರೆ. ಅದು ರಚ್ಚೆ ಹಿಡಿದು ಗಿಟ್ಟಿಸಿಕೊಳ್ಳುವವರಿಗೆ ಅನುಕೂಲ. ಬೇರೆ ಹೊತ್ತಿನಲ್ಲಿ, ಅಂದರೆ ವೇದಿಕೆಯ ಮೇಲೆ, ನಿಮ್ನ ವರ್ಗಗಳ, ದಮನಿತ ಜಾತಿಗಳ ಪರವಾಗಿ ಕಣ್ಣೀರು ಸುರಿಸುವ ಈ ಪ್ರಬಲ ಜಾತಿಗಳ ಬುದ್ಧಿಜೀವಿಗಳು ಚಾಕೋಲೆಟ್ ವಿಚಾರ ಬಂದಾಗ ಮೌನವಾಗಿ ತಮ್ಮತಮ್ಮ ಜಾತಿಯ ಪರ ಲಾಬಿ ಶುರುಮಾಡುತ್ತಾರೆ. ಅವರೆಲ್ಲ ಒಟ್ಟಾಗಿ ಮುಗಿಬೀಳುವುದು ಬ್ರಾಹ್ಮಣರ ಮೇಲೆ. ಇದು ಬ್ರಾಹ್ಮಣರ ಸಂಕಷ್ಟ.
ಚಾಕೋಲೆಟ್ ಸಿಗದ ಬ್ರಾಹ್ಮಣರ ಕೊರಗು ರಚ್ಚೆಯಾಗುವುದೇ ಇಲ್ಲ. ಎಲ್ಲ ಚಾಕೋಲೆಟ್‌ಗಳನ್ನು ಕದ್ದುತಿಂದ ಅಪರಾಧವನ್ನು ಅವರು ಹೊತ್ತುಕೊಂಡಾಗಿದೆ. ಆ ಅಪರಾಧಿ ಭಾವದಲ್ಲಿ ಮುಳುಗಿ ಬಿಟ್ಟಿದ್ದಾರೆ. ಕ್ರೈಸ್ತ ವಸಾಹತುಶಾಹೀ ನಿರ್ವಚನದಲ್ಲಿ ಭಾರತೀಯ ಸಮಾಜದ ಎಲ್ಲ ಅನಿಷ್ಟಗಳಿಗೂ ಅವನೊಬ್ಬನೇ ಹೊಣೆಯಾದ ಭಾರ. ಜಾತಿಪದ್ಧತಿ, ಅಸ್ಪೃಶ್ಯತೆ, ಅವಕಾಶವಂಚನೆ, ಅಕ್ಷರವಂಚನೆ ಇತ್ಯಾದಿ. ಅವನೊಬ್ಬನೇ ‘ಪುರೋಹಿತಶಾಹಿ ಅಪರಾಧಿ’ ಎನ್ನಿಸಿದ್ದರಿಂದ ಉಳಿದವರೆಲ್ಲರೂ ಅವನಿಗೆ ವಿರೋಧಿಗಳಾಗಿಬಿಟ್ಟರು, ಅವನಿಂದ ದಮನಿಸಲ್ಪಟ್ಟವರು ಮತ್ತು ಅವನಷ್ಟೇ ದಮನಕಾರಿಗಳು ಸುಲಭದಲ್ಲಿ ಸುಭಗರೂ, ಮುಗ್ಧರೂ ಆಗಿಬಿಟ್ಟರು.
ಹೊಣೆಗಾರಿಕೆಯನ್ನು ಬ್ರಾಹ್ಮಣರೂ ಅನಿವಾರ್ಯವಾಗಿ, ಸಂತೋಷದಿಂದ ಹೊತ್ತುಬಿಟ್ಟರು. ಬ್ರಾಹ್ಮಣರ ಈ ‘ಶಾಶ್ವತ ‘ಅಪರಾಧಿತನ’ ನಮಗೆ ಎಷ್ಟು ಒಗ್ಗಿಹೋಗಿದೆಯೆಂದರೆ ಬೇರೆ ಯಾವ ಪ್ರಬಲ ಜಾತಿ ಈ ರಚ್ಚೆ-ರಂಪ ಮಾಡಿದರೂ ಅದು ನಮಗೆ ತಪ್ಪಾಗಿ ಕಾಣಿಸುವುದಿಲ್ಲ; ಅದು ಸಾಮಾಜಿಕ ನ್ಯಾಯದ ಹೋರಾಟವಾಗಿಯೇ ಕಾಣಿಸುತ್ತದೆ. (ಅದನ್ನು ಆ ಜಾತಿಗಳ ಬುದ್ಧಿಜೀವಿಗಳು ಆ ರೀತಿಯಲ್ಲಿ ಬಿಂಬಿಸುತ್ತಾರೆ.) ಬ್ರಾಹ್ಮಣರು ಮಾಡಿದರೆ ಅದು ಅಸಹ್ಯ, ಅಪಹಾಸ್ಯವಾಗಿ ಕಾಣಿಸುತ್ತದೆ.
ಬ್ರಾಹ್ಮಣನೊಬ್ಬನೇ ಅಪರಾಧಿ ಎಂದಾದ ಸನ್ನಿವೇಶದಿಂದ ಇತರ ದಮನಿತ ವರ್ಗಗಳ ಬವಣೆ ಏನೂ ಕಡಿಮೆಯಾಗದಿದ್ದರೂ ಬ್ರಾಹ್ಮಣನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಶೋಷಕ ವರ್ಗಗಳಿಗೆ ಇದರಿಂದಾಗಿ ಅಪಾರ ಲಾಭವಾಗಿದೆ. ಅವರಿಂದ ಶೋಷಣೆ ಮುಂದುವರಿಯಿತು.
ಇವತ್ತಿಗೂ ಬ್ರಾಹ್ಮಣರನ್ನು ಟೀಕಿಸುವ, ಹೀಗಳೆಯುವ ಬೌದ್ಧಿಕ ವ್ಯಾಯಾಮದಲ್ಲಿ ತೊಡಗಿರುವವರಲ್ಲಿ ಒಕ್ಕಲಿಗ, ಲಿಂಗಾಯತ, ಬಂಟ, ಕ್ರಿಶ್ಚಿಯನ್, ಮುಸ್ಲಿಂ ಬುದ್ಧಿಜೀವಿಗಳೇ ಅಧಿಕ; ಹಿಂದುಳಿದ, ದಲಿತ ವರ್ಗದವರು ಬಲು ಕಡಿಮೆ. ಏಕೆಂದರೆ ಬ್ರಾಹ್ಮಣರೊಂದಿಗೆ ಪೈಪೋಟಿಯಲ್ಲಿರುವವರು ಮತ್ತು ಅದರಿಂದ ಲಾಭ ಪಡೆಯುತ್ತಿರುವವರು ಅವರೇ (ಪ್ರಬಲರು). ಏಕೆಂದರೆ ಎಷ್ಟೇ ಜಿದ್ದು, ರೊಚ್ಚು ಕಟ್ಟಿದರೂ ಹಲವು ರಂಗಗಳಲ್ಲಿ ಬ್ರಾಹ್ಮಣರ ಯಾಜಮಾನ್ಯ, ಪ್ರಾಬಲ್ಯ ಮತ್ತು ಪ್ರಾಮುಖ್ಯವನ್ನು ಅಲುಗಾಡಿಸಲು ಅವರಿಂದ ಸಾಧ್ಯವಾಗಲಿಲ್ಲ.
ದಮನಿತರಿಗೆ, ಹಿಂದುಳಿದವರಿಗೆ ಇವರೆಲ್ಲರೂ ಒಂದೇ. ತರ-ತಮ ಭಾವನೆಯಲ್ಲಿ ಎಲ್ಲ ಜಾತಿಯವರೂ ಒಂದೇ. ಪ್ರತಿಯೊಂದು ಜಾತಿಯೂ ತಲೆತಗ್ಗಿಸಬೇಕಾದ ಮೇಲ್ಜಾತಿಯೊಂದಿರುತ್ತದೆ; ತನಗೆ ತಲೆ ತಗ್ಗಿಸಬೇಕಾದ ಕೆಳಜಾತಿಯೊಂದಿರುತ್ತದೆ. ಮೇಲಾರೂ ಇಲ್ಲದ ಬ್ರಾಹ್ಮಣ ಗರಿಷ್ಠ ಅಪರಾಧಿ; ಕೆಳಗಾರೂ ಇಲ್ಲದ ಕೊರಗ ಸಜ್ಜನ ಅಷ್ಟೇ. ಬ್ರಾಹ್ಮಣರೊಳಗೇ ತರ-ತಮವಿದೆ. ದಲಿತರೊಳಗೂ ತರ-ತಮವಿದೆ.
ತಲೆಯೊಳಗಿದ್ದದ್ದು ಈಗ ಎಡಗೈ-ಬಲಗೈಗೂ ಬಂದು ಈ ಚಾಕೋಲೆಟ್ ವಿತರಣೆಯಲ್ಲಿಯೂ ಹಣಿಕಿಕ್ಕಿದೆ. ಎಲ್ಲ ಜಾತಿಯವರಿಗೂ ಹಿಂಸೆ ಮಾಡಿಯಾದರೂ ಕಾಪಾಡಿಕೊಳ್ಳಬೇಕಾದ ‘ಮರ್ಯಾದೆ’ ಇರುತ್ತದೆ. ಅಲ್ಲಲ್ಲಿನ ಲಾಭ, ಆ ಹೊತ್ತಿನ ಅನುಕೂಲ ನೋಡಿಕೊಳ್ಳುವುದೇ ಮುಖ್ಯವಾಗುವುದರಿಂದ ಇದು ಒಟ್ಟಾರೆ ಜಾತಿಪದ್ಧತಿಯಲ್ಲಿರುವ ದೋಷವೆಂದು ಮನಗಾಣುವುದು ಯಾರಿಗೂ ಬೇಡವಾಗಿದೆ.
ರಾಜಕೀಯ ಪ್ರಾತಿನಿಧ್ಯಕ್ಕಾಗಿ (ಅಥವಾ ಚುನಾಯಿತ ಸದನದಲ್ಲಿ ಮತ್ತು ಸದನದ ಭಾಗಗಳಲ್ಲಿ ಪ್ರಾತಿನಿಧ್ಯ) ಹೋರಾಡಬೇಕಾದ, ಸಿಗದಿದ್ದಕ್ಕೆ ದುಃಖಿಸಬೇಕಾದ ಹೀನಾಯ ಸ್ಥಿತಿಯಲ್ಲಿ ಬ್ರಾಹ್ಮಣರಿಲ್ಲ. ಇಷ್ಟೆಲ್ಲ ವಾಸ್ತವ, ಕಲ್ಪಿತ ದೂಷಣೆಗಳಿಗೆ ಈಡಾದರೂ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮುಂದಿನ ಸಾಲಿನಲ್ಲಿಯೇ ಇದ್ದಾರೆ. ಶೋಷಕ, ಮುಂದುವರಿದ ಜಾತಿ, ಕೋಮುಗಳ ಪ್ರಾಬಲ್ಯದ ಸ್ವರೂಪಗಳಲ್ಲಿ ವ್ಯತ್ಯಾಸಗಳಿರುತ್ತವೆ.
ಲಿಂಗಾಯತ, ಒಕ್ಕಲಿಗ, ಕುರುಬ, ಬಂಟ ಜಾತಿಯವರು ಅನುಭವಿಸುತ್ತಿರುವ ಪ್ರಾಬಲ್ಯದ ಸ್ವರೂಪ ಒಂದಾದರೆ ಬ್ರಾಹ್ಮಣರ ವರ್ಚಸ್ಸು ಬೇರೆಯದೇ ತೆರನಾದದ್ದು. ಇನ್ನು ಕ್ರೈಸ್ತ ಮತ್ತು ಮುಸ್ಲಿಮರ ಪ್ರಾಬಲ್ಯವು ಇವರೆಲ್ಲರನ್ನು ನಿವಾಳಿಸುವಂತಾದ್ದು. ಎಷ್ಟೇ ನಿರಾಕರಿಸಿದರೂ ಅದು ವಾಸ್ತವ. ಸದನದಲ್ಲಿ, ಸಚಿವ ಸಂಪುಟದಲ್ಲಿ ಬ್ರಾಹ್ಮಣರು (ಹಾಗೆಯೇ ಕ್ರೈಸ್ತರು, ನಾಡವರು) ಇಲ್ಲವೆಂದಾಕ್ಷಣ ಅವರು ಮುಂದುವರಿದವರಲ್ಲ, ಅವಕಾಶವಂಚಿತರು ಎಂದಾಗುವುದಿಲ್ಲ.
ಬ್ರಾಹ್ಮಣರಲ್ಲಿ, ಕ್ರೈಸ್ತರಲ್ಲಿ ಬಡವರು, ಅವಿದ್ಯಾವಂತರು ಇಲ್ಲವೆಂಬಷ್ಟು ಕಡಿಮೆ. ಸದನದಲ್ಲಿ ಮುಸ್ಲಿಮರು ಇಲ್ಲವೆಂದಾಕ್ಷಣ ಅವರು ದುರ್ಬಲರು ಎಂದಾಗುವುದಿಲ್ಲ. ಶಾಸನಸಭೆಯಲ್ಲಿ ತಮ್ಮ ಜಾತಿಯವರೊಬ್ಬರಿಗೆ ಅವಕಾಶ ಸಿಗುವುದು ಮಾತ್ರ ಪ್ರಗತಿಯ ದ್ಯೋತಕವಲ್ಲ. ತಮಾಷೆಯೆಂದರೆ ಮುಂದುವರಿದವರು ಮತ್ತು ಪ್ರಬಲರು ತಮ್ಮ ಇಂತಹ ಅವಿವೇಕದ ಬೇಡಿಕೆಗಳನ್ನು ಪ್ರಜಾಪ್ರಭುತ್ವದ ಪರಿಭಾಷೆಯಲ್ಲಿಯೇ, ಘೋಷಣೆಯಲ್ಲಿಯೇ ತೋಡಿಕೊಳ್ಳುವುದು! ಹೆಚ್ಚಿನ ಬಾರಿ ಈ ನಾಯಕರು ತಮ್ಮ ಸ್ವಂತ ದುರಾಸೆಯನ್ನು, ಅತೃಪ್ತಿಯನ್ನು ಸಮುದಾಯದ ಅತೃಪ್ತಿಯೆಂದು ಬಿಂಬಿಸುತ್ತಾರೆ. ಆ ರೀತಿ ಬಿಂಬಿಸಲು ಅವರ ಜಾತಿಯ ‘ಜಾತ್ಯತೀತ’ ಬುದ್ಧಿಜೀವಿಗಳು ಸದಾ ಸಹಕರಿಸುತ್ತಾರೆ. ಅದನ್ನು ನಂಬಿ ಅನುಯಾಯಿಗಳು ಸೋಲುತ್ತಾರೆ. ಅವರಿಗೆ ಹೆಚ್ಚೆಂದರೆ ಸಿಗುವುದು ವರ್ಷಕ್ಕೊಂದು ಬಾಡೂಟ; ಕಿತ್ತ ಮೇಲೆ ಮನೆಯಲ್ಲಿ ಹಾಸಲು ಹರಿದ -ಕ್ಸ್, ಬ್ಯಾನರ್! ತೋರಿಕೆಯ ಪ್ರಾತಿನಿಧ್ಯವಿರಲಿ, ಏನೂ ಸಿಗದ ಜನವರ್ಗಗಳು ಅದೆಷ್ಟಿಲ್ಲ? ಹಾಗೆಲ್ಲಾದರೂ ಬ್ರಾಹ್ಮಣರು ತಮ್ಮಲ್ಲಿ ಕೊರತೆಗಳಿವೆ, ಸಮಸ್ಯೆಗಳಿವೆ ಎಂದರೆ ಅದು ಅವರಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ; ಬದಲಾಗಿ ಎಲ್ಲ ಹಿಂದೂ ಜಾತಿಗಳಿಗೆ ಸಮಾನವಾದ ಸಮಸ್ಯೆ ಎಂದರ್ಥ.
ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದವರ ದನಿಗೂ (ಉಳಿದದ್ದೆಲ್ಲ ಮತ್ತೆ) ಕಿವಿ ಸಿಗುವಂತಾಗುವುದು ಯಾವಾಗ? ಹಾಗೆ ‘ಅವರಿಗೂ ಸಿಗಬೇಕು ಎಂಬ ಭಾವ ಪ್ರಬಲರಲ್ಲಿ ಮೂಡುವುದೇ ಪ್ರಜಾಪ್ರಭುತ್ವವಲ್ಲವೇ? ಈ ಭಾವವನ್ನು ಮೂಡಿಸುವಲ್ಲಿ ಎಲ್ಲ ಪ್ರಬಲ ಜಾತಿಗಳ ಬುದ್ಧಿಜೀವಿಗಳು ಮತ್ತು ನೇತಾರರು ಪ್ರಜ್ಞಾಪೂರ್ವಕವಾಗಿ, ಅಪ್ರಜ್ಞಾಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಸೋತದ್ದು ಸ್ಪಷ್ಟವಲ್ಲವೇ? ಆದರೆ ರಚ್ಚೆಹಿಡಿಯುವ ಗಂಟಲ ಶಕ್ತಿಯೇ, ಪರರ ಕೈ ತಿರುಚುವ ಶಕ್ತಿಯೇ, ಕಲ್ಲು ಎಸೆಯುವ, ಟಯರಿಗೆ ಬೆಂಕಿ ಹಚ್ಚುವ ಶಕ್ತಿಯೇ ದನಿ, ಪ್ರಗತಿ, ನಮಗೆ ಸಲ್ಲಬೇಕಾದ ನ್ಯಾಯ, ಸಾಮಾಜಿಕ ನ್ಯಾಯ ಎಂದೆನ್ನಿಸುವ ಅಪಾಯ ಇದೆ. ಅದು ಸಧ್ಯದ ಜಾಗತಿಕ ವಿದ್ಯಮಾನ. ಏನೂ ಮಾಡುವಂತಿಲ್ಲ. (“ಕಿರುಕುಳ ನೀಡುವ ಶಕ್ತಿಯೇ ಅಧಿಕಾರದ ಮಾನದಂಡ" - ದಿವಂಗತ ಕೆರೆಮನೆ ಮಹಾಬಲ ಹೆಗಡೆ.)