ಸ್ವಚ್ಛ ಸಮಾಜ
ಸುರೇಂದ್ರ ಪೈ, ಭಟ್ಕಳ
ಇತ್ತೀಚಿಗೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನನ್ನ ಕನಸಿನ ಭಾರತ ಎಂಬ ವಿಷಯದ ಕುರಿತು ಮಾತನಾಡುತ್ತಾ ಒಬ್ಬ ವಿದ್ಯಾರ್ಥಿ ನಮ್ಮ ದೇಶವು ಇನ್ನೂ ತನಕವು ಅಭಿವೃದ್ಧಿ ಶೀಲ ರಾಷ್ಟ್ರ ವಾಗದೇ, ಅಭಿವೃದ್ಧಿ ಪಥದ ಸಾಗುತ್ತಿರುವ ರಾಷ್ಟ್ರವಾಗಿಯೇ ಉಳಿಯಲು ಬಹು ಮುಖ್ಯ ಕಾರಣ ನಮ್ಮ ಜನರಲ್ಲಿ ನಾಗರಿಕ ಪ್ರಜ್ಞೆ ಅಂದರೆ ಸಿವಿಕ್ ಸೆನ್ಸ್ ಇನ್ನೂ ಜಾಗೃತವಾಗಿಲ್ಲ ದಿರುವಿಕೆ ಎಂಬ ಅಭಿಪ್ರಾಯ ಹಂಚಿಕೊಂಡನು.
ವಿದ್ಯಾರ್ಥಿಯ ಮಾತು ಕೇಳಿ ಬಹಳ ಆಶ್ಚರ್ಯವು, ಸಂತೋಷವು ಆಯಿತು. ಬಳಿಕ ಆ ವಿದ್ಯಾರ್ಥಿಯ ಬಳಿ ‘ಸಿವಿಕ್ ಸೆನ್ಸ್’ ಬಗ್ಗೆ ಯಾರು ಹೇಳಿಕೊಟ್ಟರು, ಏನಾಯಿತು ಎಂದು ಕೇಳಿದೆ. ಸರ್, ಪುರಸಭೆ ಯವರು ನಿತ್ಯ ಬೆಳಿಗ್ಗೆ ಎಲ್ಲರ ಮನೆಯ ಮುಂದೆ ಕಸದ ಗಾಡಿ ಕಳುಹಿಸುತ್ತಾರೆ. ಕಸ ವಿಂಗಡನೆಯ ಬಗ್ಗೆ ಮಾಹಿತಿ ಇದ್ದರೂ ಬಹಳಷ್ಟು ವಿದ್ಯಾವಂತರೇ ಅನಾಗರಿಕರಂತೆ ವರ್ತಿಸಿ ವಾದಕ್ಕೆ ಇಳಿಯು ತ್ತಾರೆ. ಎಲ್ಲಾ ಕಸವನ್ನು ಒಂದರಲ್ಲೇ ತುಂಬಿಸುತ್ತಾರೆ. ನಮ್ಮ ಅಪ್ಪ ಒಬ್ಬ ಪೌರ ಕಾರ್ಮಿಕ, ನಿತ್ಯವೂ ಜನರ ಈ ವರ್ತನೆಯನ್ನು ಕಂಡು ನಮ್ಮ ಜನರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ ಎಂದನು.
ಅಷ್ಟಕ್ಕೇ ಸುಮ್ಮನಾಗದೇ ಅದೇ ನೋಡಿ ಸರ್ ಇತ್ತೀಚೆಗೆ ಫಿಫಾ ವಿಶ್ವಕಪ್‌ನಲ್ಲಿ ಜಪಾನ್ ತಂಡ ಸೋತರು ಸಹ ಆ ದೇಶದ ಜನ ಪಂದ್ಯ ಮುಗಿದ ಬಳಿಕ, ಇಡೀ ಸ್ಟೇಡಿಯಂ ಅನ್ನು ಸ್ವಚ್ಛಗೊಳಿಸಿ ದರು. ಹಾಗಾಗಿ ನನ್ನ ಕನಸಿನ ಭಾರತದಲ್ಲಿ ಜನರಲ್ಲಿ ಸ್ವಯಂ ಪ್ರೇರಿತವಾಗಿ ನಾಗರಿಕ ಪ್ರಜ್ಞೆ ಮೂಡಬೇಕು ಅದುವೇ ನನ್ನ ಕನಸು ಎಂದನು. ಹೌದಲ್ಲವೇ, ಆ ವಿದ್ಯಾರ್ಥಿ ಹೇಳಿದ್ದು? ನಮ್ಮದು ವಿಶ್ವದ ಅತಿದೊಡ್ಡ ಸಂವಿಧಾನ ಹೊಂದಿರುವ ದೇಶ.
ಇದನ್ನೂ ಓದಿ: Surendra Pai Column: ಮನೆ ಬೆಳಗುವ ದೀಪಕ್ಕೆ ಬೇಕಿದೆ ಸಂಸ್ಕಾರದ ಎಣ್ಣೆ
ಪ್ರತಿ ವಿಷಯದಲ್ಲೂ ನೂರಾರು, ಸಾವಿರಾರು ಕಾನೂನಾತ್ಮಕ ನೀತಿ, ನಿರೂಪಣೆಗಳಿವೆ. ಸರಿ ತಪ್ಪುಗಳ ಬಗ್ಗೆ ಕಲ್ಪನೆ ಇದೆ. ಆದರೂ ನಮ್ಮಲ್ಲಿ ನಾಗರಿಕ ಪ್ರಜ್ಞೆ ಮಾತ್ರ ಶೂನ್ಯಕ್ಕೆ ಸಮ. ಬೇಕಿದ್ದರೆ ಒಂದು ಸುತ್ತ ಹೊರಗಡೆ ಹೋಗಿ ಬನ್ನಿ. ರಸ್ತೆಯಲ್ಲಿ ಕಸ ಎಸೆಯುವುದು, ಸಂಚಾರಿ ನಿಯಮ ಉಲ್ಲಂಘನೆ ಮಾಡುವುದು, ಪಾದಚಾರಿ ಮಾರ್ಗದಲ್ಲೂ ವಾಹನಗಳನ್ನು ಚಲಾಯಿಸುವುದು, ಬಸ್‌ಗಳ ಸೀಟುಗಳನ್ನು ಹರಿಯುವುದು, ಗೋಡೆಗಳ ಮೇಲೆ ಕರಪತ್ರಗಳನ್ನು ಅಂಟಿಸುವುದು, ರೈಲಿನ ಅಡುಗೆ ಮಾಡುವುದು, ಚಲಿಸುತ್ತಿರುವ ರೈಲಿನ ಗಾಜು ಒಡೆಯುವುದು, ಎಂದರಲ್ಲಿ ಊಗುಳುವುದು, ಮಲ ಮೂತ್ರವಿಸರ್ಜನೆ ಮಾಡುವುದು ಹೀಗೆ ನಾಗರಿಕ ಸಮಾಜದಲ್ಲಿ ಸಾಕಷ್ಟು ಅನಾಗರಿಕ ವರ್ತನೆಯ ನಿದರ್ಶಗಳು ಕಾಣಸಿಗುತ್ತವೆ.
ಈ ಸಿವಿಕ್ ಸೆನ್ಸ್ ಎಂಬುದು ಸಾರ್ವಜನಿಕ ಸ್ವತ್ತಿಗೆ ಮಾತ್ರ ಸೀಮಿತವಲ್ಲ, ಇದು ನಾಗರಿಕ ಸಮಾಜಕ್ಕೆ ಅನ್ವಯಿಸುವ ವಿಷಯ. ಸರಳವಾಗಿ ಹೇಳುವುದಾದರೆ ಸಿವಿಕ್ ಸೆನ್ಸ್ ಎಂಬುದು ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ಸಾಮಾನ್ಯ ಪ್ರಜ್ಞೆ, ಜವಾಬ್ದಾರಿ ಮತ್ತು ಶಿಸ್ತು. ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ, ಅದೇ ಕಾಳಜಿಯನ್ನು ನಮ್ಮ ಊರು, ರಸ್ತೆ, ಸಾರ್ವಜನಿಕ ಆಸ್ತಿ ಮತ್ತು ಇತರ ನಾಗರಿಕರ ಹಕ್ಕುಗಳ ಮೇಲೂ ತೋರುವುದೇ ನಿಜವಾದ ಸಿವಿಕ್ ಸೆನ್ಸ್.
ಇದು ಕೇವಲ ಕಾನೂನುಗಳನ್ನು ಪಾಲಿಸುವುದಷ್ಟೇ ಅಲ್ಲ, ಬದಲಿಗೆ ನಮ್ಮಿಂದ ಮತ್ತೊಬ್ಬರಿಗೆ ಯಾವುದೇ ತೊಂದರೆಯಾಗಬಾರದು ಎಂಬ ವಿವೇಚನೆ. ನಮ್ಮಲ್ಲಿ ಒಳ್ಳೆಯ ಸಂಸ್ಕೃತಿ ಮತ್ತು ಮೌಲ್ಯಗಳಿದ್ದರೂ, ಸಾರ್ವಜನಿಕ ಜೀವನದಲ್ಲಿ ಶಿಸ್ತು ಕಡಿಮೆ ಇರಲು ಪ್ರಮುಖ ಕಾರಣ ನಾನು, ನಮ್ಮದು ಎಂಬ ಸಂಕುಚಿತ ಹಿತಾಸಕ್ತಿ.
ನಾಗರಿಕ ಪ್ರಜ್ಞೆ ಎಂದ ಕೂಡಲೇ ನೆನಪಿಗೆ ಬರುವ ಮೊದಲ ದೇಶ ಜಪಾನ್. ಇಲ್ಲಿನ ಜನರ ಶಿಸ್ತು ಜಗತ್ಪ್ರಸಿದ್ಧ. ಜಪಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಗಳೇ ಇಲ್ಲವಂತೆ. ಆದರೂ ಜನ ತಮ್ಮ ಕಸವನ್ನು ತಮ್ಮೊಂದಿಗೆ ಕೊಂಡೊಯ್ದು ಮನೆಯ ವಿಲೇವಾರಿ ಮಾಡುತ್ತಾರೆ ಹೊರತು ಎಂದರಲ್ಲಿ ಎಸೆಯುವುದಿಲ್ಲ.
ನೀವು ಯಾವುದೋ ಒಂದು ವಿಳಾಸ ಹುಡುಕುತ್ತಾ ದಾರಿ ತಪ್ಪಿ, ಸರಿಯಾದ ವಿಳಾಸವನ್ನು ಅಲ್ಲಿಯ ಜನರ ಬಳಿ ಕೇಳಿದರೆ ಅವರು ನಿಮ್ಮೊಂದಿಗೆ ನಾಲ್ಕು ಹೆಜ್ಜೆ ನಡೆದು ನೀವು ಹೋಗಬೇಕಾದ ದಾರಿ ಯನ್ನು ತೋರಿಸುತ್ತಾರೆ. ನಿಗದಿತ ಸಮಯಕ್ಕೆ ರೈಲು ತಲುಪದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಾಗುತ್ತದೆ. ಅಲ್ಲಿ ಮಕ್ಕಳಿಗೆ ಪ್ರೌಢಶಾಲೆಯ ಹಂತ ತಲುಪುವವರೆಗೆ ಯಾವುದೇ ಕಠಿಣ ಪರೀಕ್ಷೆ ಗಳಿಲ್ಲ, ಬದಲಿಗೆ ‘ನಡವಳಿಕೆ, ನೈತಿಕತೆ ಮತ್ತು ಸ್ವಚ್ಛತೆ’ಯನ್ನು ಪ್ರಮುಖ ಪಾಠವಾಗಿ ಕಲಿಸಲಾಗುತ್ತದೆ.
ಶಾಲೆಗಳಲ್ಲಿ ಮಕ್ಕಳೇ ತಮ್ಮ ತರಗತಿಗಳನ್ನು ಮತ್ತು ಶೌಚಾಲಯಗಳನ್ನು ಗುಡಿಸಿ ಸ್ವಚ್ಛಗೊಳಿಸು ತ್ತಾರೆ. ಅದುವೇ ಇಂದಿನ ಭಾರತದಲ್ಲಿ ಏನಾದರೂ ಮಕ್ಕಳಿಂದ ಶಾಲೆಯಲ್ಲಿ ವೈಯಕ್ತಿಕ ಸ್ವಚ್ಛತೆ ಕಲಿಸಲು ಇಂತಹ ಕ್ರಮ ಕೈಗೊಂಡರೆ ಶಾಲೆಯ ಮುಖ್ಯೋಪಾಧ್ಯಾಯರು ಜೈಲಿಗೆ ಸೇರಿರುತ್ತಾರೆ. ಸುದ್ದಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ.
ಜಪಾನ್ ಮತ್ರವಲ್ಲ, ಸಿಂಗಾಪುರ, ಸ್ವಿಟ್ಜರ್ ಲ್ಯಾಂಡ್ ಮತ್ತು ನಾರ್ಡಿಕ್ ದೇಶಗಳು (ನಾರ್ವೆ, ಡೆನ್ಮಾರ್ಕ್, ಫಿನ್‌ಲ್ಯಾಂಡ್) ಇಂತಹ ನಾಗರಿಕ ಪ್ರಜ್ಞೆ ಹಾಗೂ ಕಟ್ಟುನಿಟ್ಟಿನ ಕಾನೂನು ಪಾಲನೆಯ ಮೂಲಕ ಅತಿ ಕಡಿಮೆ ಸಮಯದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ. ನಾಗರಿಕ ಪ್ರಜ್ಞೆ ಎನ್ನುವುದು ಕೇವಲ ನಿಯಮಗಳ ಕಟ್ಟುಪಾಡಲ್ಲ, ಅದು ವ್ಯಕ್ತಿಯ ಒಳಮನಸ್ಸಿನಿಂದ ಬರಬೇಕಾದ ಜವಾಬ್ದಾರಿ.
ನಮ್ಮ ಸಮಾಜದಲ್ಲಿ ಸಿವಿಕ್ ಸೆನ್ಸ್ ಕೊರತೆ ಇದೆ ಎಂದು ಕೊರಗುವುದಕ್ಕಿಂತ, ಅದನ್ನು ಹೇಗೆ ಬೆಳೆಸಿಕೊಳ್ಳ ಬಹುದು ಎಂಬುದರ ಬಗ್ಗೆ ಯೋಚಿಸುವುದು ಹೆಚ್ಚು ಮುಖ್ಯ. ಬಾಲ್ಯದಿಂದಲೇ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ದೊರಕಬೇಕು. ಶಾಲೆಗಳಲ್ಲಿ ಕೇವಲ ಪುಸ್ತಕದ ಪಾಠಗಳಲ್ಲದೆ, ಕಸ ವಿಲೇವಾರಿ ಮಾಡುವುದು ಹೇಗೆ, ಸಾರ್ವಜನಿಕ ಆಸ್ತಿಯನ್ನು ಹೇಗೆ ಕಾಪಾಡಬೇಕು ಮತ್ತು ಇತರರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಕಲಿಸಬೇಕು. ಮಕ್ಕಳು ದೊಡ್ಡವರು ಹೇಳಿದ್ದನ್ನು ಕೇಳುವುದಕ್ಕಿಂತ, ಅವರು ಮಾಡುವುದನ್ನು ನೋಡಿ ಕಲಿಯುತ್ತಾರೆ. ಪೋಷಕರು ಮತ್ತು ಶಿಕ್ಷಕರು ಮೊದಲು ತಾವೇ ಸಿವಿಕ್ ಸೆನ್ಸ್ ಪಾಲಿಸುವ ಮೂಲಕ ಮಕ್ಕಳಿಗೆ ಜೀವಂತ ಮಾದರಿಯಾಗಬೇಕು.
ಇನ್ನೂ ಬೆರಳೆಣಿಕೆಯಷ್ಟು ಜನರಿಗೆ ಸ್ವಯಂಪ್ರೇರಣೆ ಇದ್ದರೂ, ಬಹುಪಾಲು ಜನರಿಗೆ ಕಾನೂನಿನ ಭಯವಿದ್ದರೆ ಮಾತ್ರ ಶಿಸ್ತು ಬರುತ್ತದೆ. ನಮ್ಮಲ್ಲಿ ಕಾನೂನು ಪಾಲನೆಯ ನಿಷ್ಪಕ್ಷಪಾತವಾಗಿ ಅನುಷ್ಠಾನ ಗೊಳ್ಳಬೇಕು. ರಾಜಕಾರಣಿಗಳು ಅಥವಾ ಶ್ರೀಮಂತರು ಎನ್ನುವ ಕಾರಣಕ್ಕೆ ಯಾರಿಗೂ ವಿನಾಯಿತಿ ಸಿಗಬಾರದು. ಮೂಲಭೂತ ಸೌಕರ್ಯಗಳ ಸುಧಾರಣೆಯಾಗಬೇಕು.
ಜನರಲ್ಲಿ ಶಿಸ್ತು ಇರಬೇಕಾದರೆ, ಸರ್ಕಾರವೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು. ಪ್ರತಿ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಗಳು, ಸುಲಭವಾಗಿ ಸಿಗುವ ಸಾರ್ವಜನಿಕ ಶೌಚಾಲಯಗಳು ಮತ್ತು ವ್ಯವಸ್ಥಿತ ಕಸ ವಿಲೇವಾರಿ ಘಟಕಗಳು ಇರಬೇಕು. ಸೌಲಭ್ಯಗಳೇ ಇಲ್ಲದ ಕಡೆ ಜನರಿಂದ ಸಂಪೂರ್ಣ ಶಿಸ್ತು ನಿರೀಕ್ಷಿಸುವುದು ಕಷ್ಟ.
ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರ ಮೇಲೆ ಅಗಾಧವಾದ ಪ್ರಭಾವ ಬೀರುತ್ತವೆ. ಟಿವಿ ಮತ್ತು ಮೊಬೈಲ್‌ಗಳಲ್ಲಿ ಬರುವ ಸಣ್ಣಪುಟ್ಟ ಜಾಹೀರಾತುಗಳು ಅಥವಾ ಕಿರುಚಿತ್ರಗಳು ಸಿವಿಕ್ ಸೆನ್ಸ್ ಮಹತ್ವವನ್ನು ಹಾಸ್ಯದ ಮೂಲಕ ಅಥವಾ ಗಂಭೀರವಾಗಿ ಮನವರಿಕೆ ಮಾಡಿಕೊಡುವಂತಿರಬೇಕು.
ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ವಿಮರ್ಶಿಸುವುದರ ಜೊತೆಗೆ, ಸಣ್ಣದೊಂದು ಒಳ್ಳೆಯ ಕೆಲಸ ಮಾಡಿದವರನ್ನು (ಉದಾಹರಣೆಗೆ: ರಸ್ತೆ ಬದಿ ಬಿದ್ದ ಕಸವನ್ನು ತೆಗೆದು ಕಸದ ಬುಟ್ಟಿಗೆ ಹಾಕುವವರು) ಮೆಚ್ಚಿ ಪ್ರೋತ್ಸಾಹಿಸುವ ಸಂಸ್ಕೃತಿ ಬೆಳೆಯಬೇಕು. ಬದಲಾವಣೆ ಬೇರೆಯವರಿಂದ ಆರಂಭವಾಗಲಿ ಎಂದು ಕಾಯದೆ, ನಾವೇ ಮೊದಲ ಹೆಜ್ಜೆ ಇಡಬೇಕು. ನಾಗರಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ಬಹುತೇಕ ಜನರಿಗೆ ತಿಳಿದಿಲ್ಲ.
ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಾಪಾಡುವುದು ರಾಷ್ಟ್ರೀಯ ಸಂಪತ್ತನ್ನು ಉಳಿಸುವುದಕ್ಕೆ ಸಮ. ಬಸ್ ಸೀಟುಗಳನ್ನು ಹರಿಯುವುದು, ಸರ್ಕಾರದ ಆಸ್ತಿಗಳನ್ನು ಹಾನಿ ಮಾಡುವುದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ತೆರಿಗೆ ಹಣ ವ್ಯರ್ಥವಾಗುತ್ತದೆ. ನಾಗರಿಕ ಪ್ರe ಹೆಚ್ಚಿದಾಗ ಈ ರೀತಿಯ ಹಾನಿ ತಪ್ಪುತ್ತದೆ. ಆಗ ಸರ್ಕಾರಿ ಹಣವು ವಿನಾಶದ ದುರಸ್ತಿಗೆ ಬಳಕೆಯಾಗದೆ, ಶಿಕ್ಷಣ, ಆರೋಗ್ಯ ಮತ್ತು ಬಡವರ ಕಲ್ಯಾಣದಂತಹ ರಚನಾತ್ಮಕ ಅಭಿವೃದ್ಧಿ ಕಾರ್ಯಗಳಿಗೆ ನೇರವಾಗಿ ಬಳಕೆ ಯಾಗುತ್ತದೆ.
ಸಂಚಾರ ನಿಯಮಗಳನ್ನು ಪಾಲಿಸುವುದು, ಸಾಲಿನಲ್ಲಿ ನಿಲ್ಲುವ ಸಂಸ್ಕೃತಿ ಮತ್ತು ಕಚೇರಿಗಳಲ್ಲಿ ಶಿಸ್ತು ಕಾಪಾಡುವುದು ಸಮಾಜದ ದೈನಂದಿನ ಕಾರ್ಯಚಟುವಟಿಕೆಯನ್ನು ವೇಗಗೊಳಿಸುತ್ತದೆ. ರಸ್ತೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಎಲ್ಲರೂ ಪಾಲಿಸಿದರೆ ಅನಗತ್ಯ ಜಾಮ್ ಉಂಟಾಗುವುದಿಲ್ಲ, ಇಂಧನ ಉಳಿಯುತ್ತದೆ ಮತ್ತು ಲಕ್ಷಾಂತರ ಜನರ ಅಮೂಲ್ಯ ಸಮಯ ವ್ಯರ್ಥವಾಗುವುದ ತಪ್ಪುತ್ತದೆ.
ಸಮಯದ ಉಳಿತಾಯ ಮತ್ತು ಉತ್ಪಾದಕತೆ ಹೆಚ್ಚಿದಂತೆ, ದೇಶದ ಆರ್ಥಿಕ ಚಕ್ರವು ಸರಾಗವಾಗಿ ಹಾಗೂ ವೇಗವಾಗಿ ತಿರುಗುತ್ತದೆ. ಯಾವುದೇ ದೇಶದ ಪ್ರಗತಿಗೆ ಪ್ರವಾಸೋದ್ಯಮ ಪ್ರಮುಖ ಆಧಾರಸ್ತಂಭ. ವಿದೇಶಿ ಪ್ರವಾಸಿ ಗರು ಅಥವಾ ಹೂಡಿಕೆದಾರರು ನಮ್ಮ ದೇಶಕ್ಕೆ ಬಂದಾಗ, ಇಲ್ಲಿನ ಸ್ವಚ್ಛತೆ, ರಸ್ತೆ ಶಿಸ್ತು ಮತ್ತು ಜನಸಾಮಾನ್ಯರ ಸಭ್ಯತೆಯನ್ನು ಗಮನಿಸುತ್ತಾರೆ.
ಸ್ವಚ್ಛ ಹಾಗೂ ಶಿಸ್ತುಬದ್ಧ ವಾತಾವರಣವಿದ್ದರೆ ವಿದೇಶಿ ನೇರ ಹೂಡಿಕೆ (ಎಫ್ʼಡಿಐ) ಹೆಚ್ಚಾಗುತ್ತದೆ, ಪ್ರವಾಸೋದ್ಯಮ ಬೆಳೆಯುತ್ತದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಮೇಲಿನ ಗೌರವ ಇಮ್ಮಡಿಯಾಗುತ್ತದೆ. ಕಸವನ್ನು ಎಂದರಲ್ಲಿ ಎಸೆಯದೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡು ವುದು ನೇರವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ರೋಗಗಳು ಹರಡುವುದು ಕಡಿಮೆಯಾದಂತೆ, ನಾಗರಿಕರ ಆರೋಗ್ಯ ಸುಧಾರಿಸುತ್ತದೆ.
ಹೀಗೆ ನಮ್ಮ ಸಣ್ಣ ಸಣ್ಣ ಸಾರ್ವಜನಿಕ ಬದುಕಿನ ನಾಗರಿಕ ವರ್ತನೆಯು ಸಮಾಜದ, ದೇಶದ ಪ್ರಗತಿಗೆ ಕಾರಣವಾಗಬಲ್ಲದು. ಸಿವಿಕ್ ಸೆನ್ಸ್ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ, ಅದು ನಮ್ಮ ಆಲೋಚನಾ ಕ್ರಮ ಮತ್ತು ಅಭ್ಯಾಸದಿಂದ ರೂಪುಗೊಳ್ಳುತ್ತದೆ. ಸರ್ಕಾರದ ಕಾನೂನುಗಳು ಮತ್ತು ಶಿಕ್ಷೆ, ದಂಡಗಳು ನಮ್ಮನ್ನು ತಾತ್ಕಾಲಿಕವಾಗಿ ತಡೆಯಬಹುದೇ ಹೊರತು, ನಮ್ಮ ಮನಸ್ಥಿತಿ ಬದಲಾಗದ ಹೊರತು ನಿಜವಾದ ಸುಧಾರಣೆ ಅಸಾಧ್ಯ.