ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಸುದೀರ್ಘ ವಾರಸುದಾರ !

ಡೇವಿಡ್ ಕ್ಯಾಮರೂನ್ ಪ್ರಧಾನಿಯಾದಾಗ ಲ್ಯಾರಿಯನ್ನು ಕರೆತಂದರು. ಇವರ ಅವಧಿಯಲ್ಲಿ ಮೊದಲ ಬಾರಿಗೆ ಲ್ಯಾರಿ ವಿಶ್ವದ ಗಮನ ಸೆಳೆದ. ನಂತರ ಬಂದ ಐದು ಪ್ರಧಾನಿಗಳನ್ನು ಸ್ವಾಗತಿಸಿದ್ದು ಇದೇ ಬೆಕ್ಕು. ಭಾರತೀಯ ಮೂಲದ ಸುನಕ್ ಅವಧಿಯಲ್ಲೂ ಲ್ಯಾರಿ ತನ್ನ ಪ್ರಾಬಲ್ಯ ಮೆರೆದ. ಥೆರೆಸಾ ಮೇ ಕಾಲದಲ್ಲಿ ಲ್ಯಾರಿ ಮಾಧ್ಯಮಗಳ ಫೇವರಿಟ್ ಆಯಿತು.

ಸಂಪಾದಕರ ಸದ್ಯಶೋಧನೆ

ಬ್ರಿಟಿಷ್ ರಾಜಕಾರಣದ ಕೇಂದ್ರಬಿಂದು ಮತ್ತು ಪ್ರಧಾನಿಯ ಅಧಿಕೃತ ನಿವಾಸವಾದ ‘10, ಡೌನಿಂಗ್ ಸ್ಟ್ರೀಟ್’ಗೆ ಪ್ರಧಾನಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಕಳೆದ 14-15 ವರ್ಷಗಳಿಂದ ಅಲ್ಲಿ ಅಲುಗಾಡದೇ ‘ಅಧಿಕಾರ’ ಚಲಾಯಿಸುತ್ತಿರುವುದು ಮಾತ್ರ ಲ್ಯಾರಿ ಎಂಬ ಬೆಕ್ಕು ಅಂದ್ರೆ ಅಚ್ಚರಿಯಾಗಬಹುದು.

ಬ್ರಿಟಿಷ್ ರಾಜಕೀಯದ ಏರಿಳಿತಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ಆರು ಪ್ರಧಾನಿಗಳ ಬದಲಾವಣೆ ಗೆ ಸಾಕ್ಷಿಯಾಗಿರುವ ಲ್ಯಾರಿ, ಆ ದೇಶದ ಅತ್ಯಂತ ಪ್ರೀತಿಯ ಮತ್ತು ಚಿರಪರಿಚಿತ ಸಾಕುಪ್ರಾಣಿ!

ಲ್ಯಾರಿ ‘10, ಡೌನಿಂಗ್ ಸ್ಟ್ರೀಟ್’ ಪ್ರವೇಶಿಸಿದ್ದು 2011ರ ಫೆಬ್ರವರಿ 15ರಂದು. ಅಂದು ಲಂಡನ್‌ನ ಪ್ರಸಿದ್ಧ ‘ಬ್ಯಾಟರ್‌ಸೀ ಡಾಗ್ಸ್ ಆಂಡ್ ಕ್ಯಾಟ್ಸ್ ಹೋಮ್’ನಿಂದ ಇವನನ್ನು ದತ್ತು ಪಡೆಯಲಾಗಿತ್ತು. ಡೌನಿಂಗ್ ಸ್ಟ್ರೀಟ್‌ನ ಐತಿಹಾಸಿಕ ಕಟ್ಟಡದಲ್ಲಿ ಇಲಿಗಳ ಹಾವಳಿ ಹೆಚ್ಚಾದಾಗ, ಅವುಗಳನ್ನು ಹಿಡಿಯಲು ಒಂದು ಬೆಕ್ಕಿನ ಅಗತ್ಯವಿತ್ತು. ‌

ಹಾಗೆ ಲ್ಯಾರಿ ‘ಚೀಫ್ ಮೌಸರ್ ಟು ದಿ ಕ್ಯಾಬಿನೆಟ್ ಆಫೀಸ್’ ಎಂಬ ಅಧಿಕೃತ ಪದವಿಯೊಂದಿಗೆ ಅಲ್ಲಿಗೆ ಕಾಲಿಟ್ಟ. ವಿಶೇಷವೆಂದರೆ, 1735ರಿಂದ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸವಾಗಿರುವ ಈ ಕಟ್ಟಡದ ಇತಿಹಾಸದಲ್ಲಿ ‘ಚೀಫ್ ಮೌಸರ್’ ಎಂಬ ಅಧಿಕೃತ ಬಿರುದನ್ನು ಪಡೆದ ಮೊದಲ ಬೆಕ್ಕು ಲ್ಯಾರಿ. ಬ್ರಿಟಿಷ್ ರಾಜಕೀಯವು ಕಳೆದ ಒಂದು ದಶಕದಲ್ಲಿ ತೀವ್ರ ಬದಲಾವಣೆಗಳನ್ನು ಕಂಡಿದೆ.

ಇದನ್ನೂ ಓದಿ: Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

ಬ್ರೆಕ್ಸಿಟ್‌ನಿಂದ ಹಿಡಿದು ಆರ್ಥಿಕ ಕುಸಿತದವರೆಗೆ ಅನೇಕ ಘಟನೆಗಳಾಗಿವೆ. ಈ ಅವಧಿಯಲ್ಲಿ ಡೇವಿಡ್ ಕ್ಯಾಮರೂನ್, ಥೆರೆಸಾ ಮೇ, ಬೋರಿಸ್ ಜಾನ್ಸನ್, ಲಿಜ್ ಟ್ರಸ್, ರಿಷಿ ಸುನಕ್, ಕೀರ್ ಸ್ಟಾರ್ಮರ್ ಹೀಗೆ ಆರು ಪ್ರಧಾನ ಮಂತ್ರಿಗಳು ಬಂದರು. ಆದರೆ ಲ್ಯಾರಿ ಮಾತ್ರ ಹಾಗೇ ಇದ್ದಾನೆ.

ಡೇವಿಡ್ ಕ್ಯಾಮರೂನ್ ಪ್ರಧಾನಿಯಾದಾಗ ಲ್ಯಾರಿಯನ್ನು ಕರೆತಂದರು. ಇವರ ಅವಧಿಯಲ್ಲಿ ಮೊದಲ ಬಾರಿಗೆ ಲ್ಯಾರಿ ವಿಶ್ವದ ಗಮನ ಸೆಳೆದ. ನಂತರ ಬಂದ ಐದು ಪ್ರಧಾನಿಗಳನ್ನು ಸ್ವಾಗತಿಸಿದ್ದು ಇದೇ ಬೆಕ್ಕು. ಭಾರತೀಯ ಮೂಲದ ಸುನಕ್ ಅವಧಿಯಲ್ಲೂ ಲ್ಯಾರಿ ತನ್ನ ಪ್ರಾಬಲ್ಯ ಮೆರೆದ. ಥೆರೆಸಾ ಮೇ ಕಾಲದಲ್ಲಿ ಲ್ಯಾರಿ ಮಾಧ್ಯಮಗಳ ಫೇವರಿಟ್ ಆಯಿತು.

ಬ್ರಿಟಿಷ್ ಜನರಲ್ಲಿ ಒಂದು ತಮಾಷೆಯ ಮಾತಿದೆ- ‘ಪ್ರಧಾನಿಗಳು ಕೇವಲ ಬಾಡಿಗೆದಾರರು, ಆದರೆ ಲ್ಯಾರಿ ಈ ಮನೆಯ ಮಾಲೀಕ!’ ಲ್ಯಾರಿ ಕೇವಲ ಪ್ರಧಾನಿಗಳ ಜತೆಗಷ್ಟೇ ಅಲ್ಲ, ಜಗತ್ತಿನ ಪ್ರಭಾವಿ ನಾಯಕರ ಭೇಟಿಯ ಸಮಯದಲ್ಲೂ ತನ್ನ ಅಸ್ತಿತ್ವವನ್ನು ತೋರಿಸಿದ್ದಾನೆ. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಭೇಟಿ ನೀಡಿದಾಗ, ಲ್ಯಾರಿ ಅವರೊಂದಿಗೆ ಸ್ನೇಹದಿಂದಿದ್ದ. ಸಾಮಾನ್ಯವಾಗಿ ಅಪರಿಚಿತರನ್ನು ಕಂಡರೆ ದೂರ ಸರಿಯುವ ಲ್ಯಾರಿ, ಒಬಾಮಾ ಅವರಿಗೆ ಹತ್ತಿರವಾಗಿದ್ದು ಸುದ್ದಿ ಯಾಗಿತ್ತು.

ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಲ್ಯಾರಿ, ಅವರ ಭದ್ರತಾ ವಾಹನದ ಅಡಿಯಲ್ಲಿ ಹೋಗಿ ಮಲಗಿದ್ದರಿಂದ, ಟ್ರಂಪ್ ಕಾನ್ವಾಯ್ (ಬೆಂಗಾವಲು ವಾಹನಗಳು) ಸ್ವಲ್ಪ ಹೊತ್ತು ನಿಲ್ಲಬೇಕಾ ಯಿತು. ಪೋಲಿಷ್ ಅಧ್ಯಕ್ಷ ಕರೋಲ್ ನವ್ರೋಕಿ ಅವರನ್ನು ಕೀರ್ ಸ್ಟಾರ್ಮರ್ ಸ್ವಾಗತಿಸುವಾಗಲೂ ಲ್ಯಾರಿ ಗಾಂಭೀರ್ಯದಿಂದ ಕುಳಿತಿದ್ದ ಫೋಟೋಗಳು ವೈರಲ್ ಆಗಿದ್ದವು. ಈಗ ಲ್ಯಾರಿಗೆ ಹತ್ತೊಂಬತ್ತು ವರ್ಷ.

ಬೆಕ್ಕುಗಳ ಆಯಸ್ಸಿನ ಲೆಕ್ಕಾಚಾರದಲ್ಲಿ ದೀರ್ಘ ವಯಸ್ಸು. ಮುಂದಿನ ವಾರ ಲ್ಯಾರಿ, ‘10, ಡೌನಿಂಗ್ ಸ್ಟ್ರೀಟ್’ನಲ್ಲಿ 15 ವರ್ಷಗಳ ಸೇವೆಯನ್ನು ಪೂರೈಸುತ್ತಿzನೆ. ಈ ಮೈಲಿಗಲ್ಲನ್ನು ಗುರುತಿಸಲು ಲ್ಯಾರಿ‌ ಯ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಶೇಷ ಪೋಸ್ಟ್‌ಗಳನ್ನು ಹಾಕಲಾಗು ತ್ತಿದೆ. ಲಕ್ಷಾಂತರ ಜನರು ಲ್ಯಾರಿಯ ಈ ದೀರ್ಘಾಯುಷ್ಯ ಮತ್ತು ನಿಷ್ಠೆಯನ್ನು ಕೊಂಡಾಡುತ್ತಿದ್ದಾರೆ.

ಲ್ಯಾರಿ ಕೇವಲ ಬೆಕ್ಕಲ್ಲ, ಅದೊಂದು ಬ್ರ್ಯಾಂಡ್. ‘ಎಕ್ಸ್’ (ಟ್ವಿಟರ್)ನಲ್ಲಿ ಲ್ಯಾರಿಗೆ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಅಲ್ಲಿ ಲ್ಯಾರಿಯ ಹೆಸರಿನಲ್ಲಿ ಬರೆಯಲಾಗುವ ವ್ಯಂಗ್ಯ ಭರಿತ ಪೋಸ್ಟ್‌ಗಳು ಬ್ರಿಟಿಷ್ ರಾಜಕೀಯದ ಮೇಲಿನ ಲಘುಧಾಟಿಯ ಟೀಕೆಗಳಂತೆ ಇರುತ್ತವೆ. ಉದಾಹರಣೆಗೆ, ಪ್ರಧಾನಿಗಳು ರಾಜೀನಾಮೆ ನೀಡಿದಾಗ, ‘ನಾನು ಎಲ್ಲಿಗೂ ಹೋಗುತ್ತಿಲ್ಲ’ ಎಂದು ಲ್ಯಾರಿ ಪೋಸ್ಟ್ ಮಾಡುತ್ತಾನೆ! ‌

ಲ್ಯಾರಿಯ ಕೆಲಸದ ವೈಖರಿ ಹೇಗಿದೆ? ಅಧಿಕೃತವಾಗಿ ಇಲಿ ಹಿಡಿಯುವುದು ಲ್ಯಾರಿಯ ಕೆಲಸ ವಾದರೂ, ಇತ್ತೀಚಿನ ವರ್ಷಗಳಲ್ಲಿ ಅವನು ಸ್ವಲ್ಪ ‘ಸೋಮಾರಿ’ಯಾಗಿದ್ದಾನೆ ಎಂದು ಹಾಸ್ಯ ಮಾಡಲಾಗುತ್ತಿದೆ. ಆದರೂ, ಡೌನಿಂಗ್ ಸ್ಟ್ರೀಟ್‌ನ ಮುಂಭಾಗದಲ್ಲಿ ಟಿವಿ ವರದಿಗಾರರು ಲೈವ್ ನೀಡುವಾಗ ಅವರ ಕೆಮರಾ ಮುಂದೆ ಗಾಂಭೀರ್ಯದಿಂದ ನಡೆದು ಹೋಗುವುದು ಅಥವಾ ಬೀದಿ ನಾಯಿಗಳನ್ನು ಗದರಿಸಿ ಓಡಿಸುವುದು ಲ್ಯಾರಿಯ ದಿನಚರಿ. ರಾಜಕೀಯ ಅಸ್ಥಿರತೆಗಳ ನಡುವೆಯೂ ಬ್ರಿಟಿಷ್ ಜನತೆಗೆ ಲ್ಯಾರಿ ಒಂದು ಭರವಸೆಯ ಮತ್ತು ಸ್ಥಿರತೆಯ ಸಂಕೇತವಾಗಿ ಕಾಣಿಸುತ್ತಾನೆ.

ವಿಶ್ವೇಶ್ವರ ಭಟ್‌

View all posts by this author