ಗಂಟಾಘೋಷ
ಭಾರತದ ಭೌಗೋಳಿಕ ಸುರಕ್ಷತೆ ಎಂದರೆ ಕೇವಲ ಭೂಸೀಮೆಗಳ ರಕ್ಷಣೆಯಲ್ಲ. 7500 ಕಿಮೀಗೂ ಅಧಿಕ ಉದ್ದದ ಕರಾವಳಿಯು ಭಾರತದ ಆರ್ಥಿಕ, ವ್ಯಾಪಾರ, ಶಕ್ತಿ ಮತ್ತು ಭದ್ರತಾ ವ್ಯವಸ್ಥೆಯ ಜೀವನಾಡಿಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಕರಾವಳಿ ಪ್ರದೇಶಗಳು ದೇಶದ ಸಾಫ್ಟ್ ಬಾರ್ಡರ್ ಆಗಿ ರೂಪಾಂತರಗೊಳ್ಳುತ್ತಿವೆ.
ಬಹು ಆಯಾಮದ ಭದ್ರತಾ ವ್ಯವಸ್ಥೆಯು ಕರಾವಳಿಯಲ್ಲಿ ಸಂಪೂರ್ಣ ಹೈಟೆಕ್ ತಂತ್ರಜ್ಞಾನದ ಆಧಾರಿತವಾಗಿ ಜಾರಿಯಾಗಬೇಕಿದೆ. ಈಗಿರುವ ವ್ಯವಸ್ಥೆಯಲ್ಲಿ ಎಷ್ಟೇ ಭದ್ರತೆ ಬಗ್ಗೆ ವಿವೇಚಿಸಿದರೂ ಇತ್ತೀಚಿನ ದಶಕಗಳಲ್ಲಿ ಉಗ್ರವಾದ, ಕಳ್ಳಸಾಗಣೆ, ಮಾದಕ ದ್ರವ್ಯ ವ್ಯಾಪಾರ, ಮಾನವ ಕಳ್ಳಸಾಗಣೆ, ಹಣಕಾಸು ಅಪರಾಧಗಳು ಮತ್ತು ಅಂತರಾಷ್ಟ್ರೀಯ ಅಪರಾಧ ಜಾಲಗಳ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಸುರಕ್ಷತೆ ಎಂಬ ವಿಷಯವು ಕೇವಲ ಕರಾವಳಿ ರಾಜ್ಯಗಳ ಸಮಸ್ಯೆಯಾಗದೇ, ದೇಶದ ಸಮಗ್ರ ಭದ್ರತೆಯ ಮೂಲ ಅಂಶವಾಗಿ ಪರಿಣಮಿಸಿದೆ.
ಮುಂಬೈ ಉಗ್ರ ದಾಳಿ ದೇಶಕ್ಕೆ ನೀಡಿದ ಅತ್ಯಂತ ದೊಡ್ಡ ಪಾಠವೆಂದರೆ, ಕರಾವಳಿ ಸುರಕ್ಷತೆ ಎಂದರೆ ರಾಷ್ಟ್ರೀಯ ಸುರಕ್ಷತೆ. ಈ ಹಿನ್ನಲೆಯಲ್ಲಿ, ಕರಾವಳಿ ಭದ್ರತೆಯಲ್ಲಿ ಕೋಸ್ಟಲ್ ಗಾರ್ಡ್ ವಿಭಾಗದಲ್ಲಿ, ರಾಜ್ಯ ಪೊಲೀಸ್-ಮರೈನ್ ಪೊಲೀಸ್-ಪೋರ್ಟ್ ಅಥಾರಿಟಿಸ್-ಇಂಟೆಲಿಜೆನ್ಸ್ ಏಜೆನ್ಸಿಗಳ ನಡುವೆ ಪರಿಣಾಮಕಾರಿ ಸಂಯೋಜನೆಯ ಅಗತ್ಯತೆ ತೀವ್ರವಾಗಿದೆ.
ವಿಶೇಷವಾಗಿ ಕರ್ನಾಟಕದ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ದೇಶಕ್ಕೆ ಒಂದು ಮಾದರಿ ಆಗಿ ರೂಪುಗೊಳ್ಳುವ ಅಪಾರ ಸಾಧ್ಯತೆ ಹೊಂದಿವೆ. ಕರಾವಳಿಯು ಭೂ ಸೀಮೆಗಳಂತಿಲ್ಲದೆ, ಕರಾವಳಿ ಪ್ರದೇಶಗಳು ಸದಾ ತೆರೆಯಲ್ಪಟ್ಟಂತಿವೆ. ಅಸಂಖ್ಯಾತ ಮೀನುಗಾರಿಕಾ ದೋಣಿಗಳು, ನೂರಾರು ಲ್ಯಾಂಡಿಂಗ್ ಪಾಯಿಂಟ್‌ಗಳು, ರಾತ್ರಿ ಸಮಯದ ಸಂಚಾರ, ಸ್ಥಳೀಯ ಜನರೊಂದಿಗೆ ಬೆರೆತು ಹೋಗುವ ಅಪರಾಧಿಗಳು ಕರಾವಳಿ ವ್ಯಾಪ್ತಿಯಲ್ಲಿ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: Gururaj Gantihole Column: ಯುವಜನತೆಗೆ ಅಗತ್ಯವಿರುವುದು ಉಚಿತ ಸ್ಕಿಲ್ʼನ ಗ್ಯಾರಂಟಿ !
ಭೂಸೀಮೆಗಳಲ್ಲಿ ಬಿಎಸ್‌ಎಫ್/ಐಟಿಬಿಪಿ/ ಆರ್ಮಿ ಜೊತೆಗೆ ಫೆನ್ಸ್, ಚೆಕ್ ಪಾಯಿಂಟ್, ನಿರಂತರ ಗಸ್ತುಗಾವಲು ಇದ್ದೇ ಇರುತ್ತದೆ. ಇದೇ ತೆರನಾಗಿ, ಕರಾವಳಿಯಲ್ಲಿ ಸೂಕ್ಷ್ಮವಾದ/ವಿವಾದಾತ್ಮಕ ಗಡಿವ್ಯಾಪ್ತಿ, ಅತಿಕ್ರಮಿಸುವ ಜವಾಬ್ದಾರಿ, ಕೊನೆ ಹಂತದ ದುರ್ಬಲ ಪೋಲಿಸ್ ವ್ಯವಸ್ಥೆ ಮುಂತಾ ದವುಗಳು ಅಪರಾಧಿಗಳಿಗೆ ಕಳ್ಳರಿಗೆ ಕಡಿಮೆ ಅಪಾಯ; ಹೆಚ್ಚು ಲಾಭ ಕೊಡುವ ರಹದಾರಿಗಳಂತಾ ಗಿವೆ ಎನ್ನಬಹುದು.
ಇದು ಕರಾವಳಿ ಪ್ರದೇಶ ಹೊಂದಿರುವ ಜಗತ್ತಿನ ಎಲ್ಲ ರಾಷ್ಟ್ರಗಳ ನಿತ್ಯ ಸಮಸ್ಯೆಯೂ ಆಗಿದೆ. ಕರ್ನಾಟಕವು 320 ಕಿಲೋಮೀಟರ್‌ಗಳಷ್ಟು ಕರಾವಳಿಯನ್ನು ಹೊಂದಿರುವ ಪ್ರಮುಖ ರಾಜ್ಯ. ಅರಬ್ಬಿ ಸಮುದ್ರಕ್ಕೆ ಮುಖವಾಗಿರುವ ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳು ರಾಜ್ಯದ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜೀವನದಲ್ಲಿ ನಿರ್ಣಾಯಕವಾಗಿವೆ.
ಆದ್ದರಿಂದ ಸಮುದ್ರತೀರದ ಸುರಕ್ಷತೆಯು ಕರ್ನಾಟಕದ ಹೊಣೆಗಾರಿಕೆಯ ಜೊತೆಗೆ ಭಾರತದ ಭದ್ರತೆಯ ಬಗ್ಗೆ ಸೂಕ್ಷ್ಮಪ್ರದೇಶವೂ ಆಗಿದೆ. ಭಾರತದ ಭೂಸೀಮೆಗಳು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯಿಂದ ರಕ್ಷಿಸಲ್ಪಟ್ಟಿದ್ದರೂ, ಸಮುದ್ರದ ಮೂಲಕ ಇರುವ ಕರಾವಳಿ ಪ್ರದೇಶಗಳು ಸಹಜ ವಾಗಿ ಸಾಫ್ಟ್ ಬಾರ್ಡರ್ ಎಂದು ಪರಿಗಣಿಸಲಾಗುತ್ತದೆ.
ಇದಕ್ಕೆ, ಸಮುದ್ರದಲ್ಲಿ ನಿರಂತರ ಪಹರೆ ನಡೆಸುವುದು ಭೂಮಿಗಿಂತ ಹೆಚ್ಚು ಸಂಕೀರ್ಣ ವಾಗಿರು ವುದು, ಸಾವಿರಾರು ಮೀನುಗಾರರ ದೋಣಿಗಳು ದಿನನಿತ್ಯ ಸಮುದ್ರಕ್ಕೆ ತೆರಳುತ್ತವೆಯಾದ್ದ ರಿಂದ ರಕ್ಷಣಾ ಸೂಕ್ಷ್ಮತೆ ಹೆಚ್ಚಾಗಿರುವುದರ ಜೊತೆಗೆ, ಸಣ್ಣ ದ್ವೀಪಗಳು, ನದಿಮುಖಗಳು, ಬ್ಯಾಕ್ ವಾಟರ್ ಗಳು ಅಪರಾಧಿಗಳಿಗೆ ಅಡಗಿಕೊಳ್ಳುವ ಅವಕಾಶ ನೀಡುತ್ತವೆ.
2008ರ ಮುಂಬೈ ದಾಳಿ ಈ ಸಾಫ್ಟ್ ಬಾರ್ಡರ್ ಅಪಾಯವನ್ನು ದೇಶಕ್ಕೆ ಕಣ್ಣಿಗೆ ಕಟ್ಟುವಂತೆ ತೋರಿಸಿತು. ಸಮುದ್ರ ಮಾರ್ಗದ ಮೂಲಕ ಉಗ್ರರು ದೇಶ ಪ್ರವೇಶಿಸಿದ ಈ ಘಟನೆ ನಂತರ ಕರಾವಳಿ ಭದ್ರತೆಗೆ ರಾಷ್ಟ್ರ ಮಟ್ಟದಲ್ಲಿ ಹೊಸ ನೀತಿಗಳು ರೂಪುಗೊಂಡವು. ಕರ್ನಾಟಕದ ಕರಾವಳಿಯ ಭೌಗೋಳಿಕ ಮತ್ತು ಆರ್ಥಿಕ ಮಹತ್ವವನ್ನು ಗಮನಿಸಿದಾಗ, ಕರ್ನಾಟಕ ಕರಾವಳಿಯು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಡಿದೆ.
ಆರ್ಥಿಕ ಮಹತ್ವ ಕೂಡ ಹೆಚ್ಚು ಗಮನಾರ್ಹವಾಗಿದ್ದು, ನ್ಯೂ ಮಂಗಳೂರು ಬಂದರು ವ್ಯವಸ್ಥೆಯು ಕಬ್ಬಿಣದ ಅದಿರು, ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ಪ್ರಮುಖ ದ್ವಾರವೆಂದೇ ಗುರುತಿಸಿ ಕೊಳ್ಳುತ್ತದೆ. ಇಲ್ಲಿನ ಮೀನುಗಾರಿಕೆಯು ಲಕ್ಷಾಂತರ ಜನರ ಜೀವನಾಧಾರವಾಗಿದೆ. ಜೊತೆಗೆ, ಪ್ರವಾಸೋದ್ಯಮ ಕ್ಷೇತ್ರಗಳು, ಬೀಚ್‌ಗಳು, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಕೇಂದ್ರಗಳು ಬಹಳಷ್ಟಿದ್ದು, ಈ ಎಲ್ಲಾ ಚಟುವಟಿಕೆಗಳು ಕರಾವಳಿಯ ಭದ್ರತೆ ಕುಸಿದರೆ ನೇರವಾಗಿ ಹೊಡೆತಕ್ಕೆ ಒಳಗಾಗುತ್ತವೆ.
ಕರಾವಳಿ ಭದ್ರತೆಗೆ ಇರುವ ಅಪಾಯಗಳನ್ನು ನಾವು ಗಮನಿಸಿದಾಗ, ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ವ್ಯಾಪಾರ ವಿಚಾರವಾಗಿ, ಅಂತರಾಷ್ಟ್ರೀಯ ಡ್ರಗ್ ಕಾರ್ಟೆಲ್‌ಗಳು ಸಮುದ್ರಮಾರ್ಗವನ್ನು ಹೆಚ್ಚು ಬಳಸುತ್ತಿವೆ ಎಂಬ ವರದಿಯಿದೆ. ಕರ್ನಾಟಕ ಕರಾವಳಿ ಶ್ರೀಲಂಕಾ, ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಮಾರ್ಗಗಳಿಗೆ ಸಮೀಪದಲ್ಲಿರುವುದರಿಂದ ಅಪಾಯದ ಮಟ್ಟ ಯಾವತ್ತಿ ದ್ದರೂ ಹೆಚ್ಚಾಗಿಯೇ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.
ಉಗ್ರವಾದ ಮತ್ತು ಅತಿರೇಕ ಚಟುವಟಿಕೆಗಳು, ಸಮುದ್ರ ಮಾರ್ಗದ ಮೂಲಕ ಶಸ್ತ್ರಾಸ್ತ್ರ ಸಾಗಣೆ, ಉಗ್ರರ ನುಸುಳಿಕೆ ಸಂಭವಿಸುವ ಸಾಧ್ಯತೆ ಸದಾ ಇರುತ್ತದೆ. ಇದೆಲ್ಲದರ ನಡುವೆ, ಮಾನವ ಕಳ್ಳ ಸಾಗಣೆ, ಅಕ್ರಮ ವಲಸೆ, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಗಂಭೀರ ಸಮಸ್ಯೆಯಾಗಿದೆ ಎಂದು ಜಾಗತಿಕ ಮಾಧ್ಯಮಗಳು ಎಚ್ಚರಿಸುತ್ತಿವೆ.
ತೈಲ ಸೋರಿಕೆ, ಅಕ್ರಮ ಮರಳು ಗಣಿಗಾರಿಕೆ, ಸಮುದ್ರ ಮಾಲಿನ್ಯವೂ ಭದ್ರತೆ ಭಾಗವೇ ಆಗಿದೆ. ಹಾಗೆಯೇ, ಪರಿಸರ ಅಪಾಯಗಳನ್ನು ಯಥೇಚ್ಛವಾಗಿ ಉಂಟು ಮಾಡುತ್ತವೆ. ಭಾರತದ ಕರಾವಳಿ ಭದ್ರತಾ ವ್ಯವಸ್ಥೆಯು ಭಾರತೀಯ ನೌಕಾಪಡೆ ಮೂಲಕ ಸಮುದ್ರದ ಹೊರ ವಲಯದ ರಕ್ಷಣೆಯ ಹೊಣೆ ಹಾಗೂ ಅಂತರಾಷ್ಟ್ರೀಯ ಜಲ ಪಹರೆ ಜವಾಬ್ದಾರಿ ಹೊತ್ತಿದೆ ಎನ್ನಬಹುದು.
ಭಾರತೀಯ ಕರಾವಳಿ ರಕ್ಷಣಾ ಪಡೆಯು ಕರಾವಳಿ ಸಮೀಪದ ಭದ್ರತೆ, ಶೋಧ-ರಕ್ಷಣೆ, ಕಳ್ಳಸಾಗಣೆ ತಡೆ ವಿಚಾರಗಳ ಹೊಣೆ ಹೊತ್ತಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ಕರಾವಳಿ ಭದ್ರತಾ ವ್ಯವಸ್ಥೆ ಅಡಿಯಲ್ಲಿ ಮರೈನ್ ಪೊಲೀಸ್ ಠಾಣೆಗಳು ಬರುತ್ತಿದ್ದು, ಕರ್ನಾಟಕದಲ್ಲಿ ಹಲವಾರು ಮರೈನ್ ಪೊಲೀಸ್ ಠಾಣೆಗಳು ಸ್ಥಾಪಿತವಾಗಿವೆ.
ಆದರೆ, ಸಿಬ್ಬಂದಿ ಕೊರತೆ, ದೋಣಿಗಳ ತಾಂತ್ರಿಕ ಸಮಸ್ಯೆ, ತರಬೇತಿ ಅಭಾವದ ಸಮಸ್ಯೆಗಳು ಕಾರ್ಯ ಕ್ಷಮತೆಯನ್ನು ಕುಗ್ಗಿಸುತ್ತಿವೆ. ಇಂತಹ ವಿಚಾರದಲ್ಲಿ ಅತ್ಯಾಧುನಿಕ ವ್ಯವಸ್ಥೆ, ಸೂಕ್ತ ತರಬೇತಿ ಹಾಗೂ ಸುಸಜ್ಜಿತ ಶಸ್ತ್ರಾಸ್ತ್ರಗಳ ಅಗತ್ಯತೆ ಹೆಚ್ಚಾಗಿದೆ. ರಾಜ್ಯ ಪೊಲೀಸ್ ಮತ್ತು ಗುಪ್ತಚರ ವ್ಯವಸ್ಥೆಯು ಕರಾವಳಿ ಜಿಲ್ಲೆಗಳಲ್ಲಿ ಇಂಟೆಲಿಜೆನ್ಸ್ ಜಾಲವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ.
ಮೀನುಗಾರ ಸಮುದಾಯವು ಭದ್ರತೆಯ ಮೊದಲ ಸಾಲು ಎಂಬ ಮಾತಿದೆ. ಮೀನುಗಾರರು ಸಮುದ್ರದ ನೈಜ ಕಾವಲುಗಾರರು, ಅವರ ಸಹಕಾರವಿಲ್ಲದೆ ಕರಾವಳಿ ಭದ್ರತೆ ಸಾಧ್ಯವಿಲ್ಲ ಎಂಬುದನ್ನ ಭದ್ರತಾ ವಲಯ ಹಾಗೂ ಅದರ ಮುಖ್ಯ ನಿರ್ವಾಹಕರು ಅರಿಯಬೇಕಿದೆ.
ದಶಕಗಳ ಕಾಲ ಅವರೊಂದಿಗೆ ಒಡನಾಟ ಚೆನ್ನಾಗಿದ್ದರೂ, ಬೋಟ್ ನೋಂದಣಿ, ಜಿಪಿಎಸ್, ಟ್ರಾನ್ಸ್ ಪಾಂಡರ್ ವ್ಯವಸ್ಥೆ ಸೇರಿದಂತೆ ಭದ್ರತಾ ಅರಿವು ಕಾರ್ಯಕ್ರಮಗಳು ಹೆಚ್ಚಾಗಿ ನಡೆದಲ್ಲಿ ಇವು ಮೀನುಗಾರರನ್ನು ವ್ಯವಸ್ಥೆಯ ಭಾಗವಾಗಿಸುತ್ತವೆ.
ತಂತ್ರಜ್ಞಾನ ಮತ್ತು ಕರಾವಳಿ ಭದ್ರತೆ ಕುರಿತು, ವಿವೇಚಿಸಿದಾಗ, ಕೋಸ್ಟಲ್ ಸರ್ವೆಲೆನ್ಸ್ ರಾಡಾರ್ ಸಿಸ್ಟಮ್ (ಸಿಎಸ್‌ಆರ್ʼಎಸ್) ಮತ್ತು ಆಟೋಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಮ್ (ಎಐಎಸ್) ಜೊತೆಗೆ, ಡ್ರೋನ್ ಮತ್ತು ಸ್ಯಾಟಲೈಟ್ ಮೇಲ್ವಿಚಾರಣೆಯಂತಹ ತಂತ್ರಜ್ಞಾನಗಳು ಮಾನವ ಶಕ್ತಿಗೆ ಪೂರಕವಾಗಬೇಕು.
ಇಂತಹ ಕೆಲವು ಪ್ರಮುಖ ಕಾರ್ಯಯೋಜನೆಗಳಿಗೆ, ವಿಶೇಷ ತರಬೇತಿ ಹಾಗೂ ಸಾರ್ವಜನಿಕರ ಸಮನ್ವಯತೆ ಹೊಂದಬೇಕಾದರೆ, ಕೇಂದ್ರ-ರಾಜ್ಯ ಸಮನ್ವಯದ ಸಹಕಾರ ಅಗತ್ಯ. ಕರಾವಳಿ ಭದ್ರತೆ ಒಂದು ಸಂಯುಕ್ತ ಹೊಣೆಗಾರಿಕೆಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನೀತಿ, ರಾಜ್ಯ ಸರ್ಕಾರದ ಅನುಷ್ಠಾನದ ಜೊತೆಗೆ, ಸ್ಥಳೀಯ ಸಂಸ್ಥೆಗಳ ಸಹಕಾರ ಎಂಬ ಮೂರು ಪ್ರಮುಖ ಕೊಂಡಿಗಳು ಬೇಕೇಬೇಕು.
ಇದಕ್ಕೆ, ಕರ್ನಾಟಕದ ಹೊಣೆಗಾರಿಕೆಯ ನೀತಿ ಮತ್ತು ಕಾರ್ಯಯೋಜನೆ ವ್ಯವಸ್ಥಿತವಾಗಿರಬೇಕಿದೆ. ಇದಕ್ಕಾಗಿ, ಮರೈನ್ ಪೊಲೀಸ್ ಬಲವರ್ಧನೆ, ಬಂದರು ಭದ್ರತೆ, ಕರಾವಳಿ ಗ್ರಾಮಗಳಲ್ಲಿ ಅರಿವು, ತ್ವರಿತ ಪ್ರತಿಕ್ರಿಯಾ ಘಟಕಗಳು ಅತ್ಯಗತ್ಯ. ಈ ವಿಚಾರದಲ್ಲಿ, ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳು, ಡಿಜಿಟಲ್ ಅಪರಾಧಗಳು, ಹವಾಮಾನ ಬದಲಾವಣೆ, ಅಂತಾರಾಷ್ಟ್ರೀಯ ಸಹಕಾರದಂತಹ ಪ್ರಮುಖ ವಿಚಾರಗಳು ಮುನ್ನೆಲೆಗೆ ಬರುತ್ತವೆ.
ಕರ್ನಾಟಕ ಕರಾವಳಿ ರಕ್ಷಣೆಯ ವೈಶಿಷ್ಟ್ಯಗಳು ಮತ್ತು ಇತರ ಸಮುದ್ರತೀರ ರಾಜ್ಯಗಳಾದ ತೆಲುಗು ರಾಜ್ಯಗಳು, ತಮಿಳುನಾಡು, ಕೇರಳ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ರಕ್ಷಣಾ ವ್ಯವಸ್ಥೆಗಳ ವ್ಯತ್ಯಾಸ ಮತ್ತು ಸೌಲಭ್ಯಗಳ ಕುರಿತು ಗಮನಿಸಿದಾಗ, ಮಲ್ಟಿ ಲೇಯರ್, ಟೆಕ್ನಾಲಜಿ, ಕಮ್ಯೂನಿಟಿ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ಸೇರಿದಂತೆ ನಾಲ್ಕು ಅಂಶಗಳನ್ನು ಸಮರ್ಪಕವಾಗಿ ಹೊಂದಿರುವ ರಾಜ್ಯಗಳೇ ಅತ್ಯುತ್ತಮ ಮಾಡೆಲ್ ಎಂದು ಭಾರತದ ಸಮುದ್ರ ರಕ್ಷಣಾ ವ್ಯವಸ್ಥೆಯಲ್ಲಿ ಗುರುತಿಸ ಲಾಗಿದೆ.
ಇವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಗುಜರಾತ್. ಬಲವಾದ ಮರೈನ್ ಪೊಲೀಸ್, ಕೋಸ್ಟ್ ಗಾರ್ಡ್, ನೇವಿ ಕೋಆರ್ಡಿನೇಶನ್ ಜೊತೆಗೆ ಆಯಿಲ್, ಗ್ಯಾಸ್, ಇಂಡಸ್ಟ್ರಿ ಸೇರಿದಂತೆ ಪ್ರೈವೇಟ್ ಪೋರ್ಟ್ ಸೆಕ್ಯುರಿಟಿ ಇಂಟಿಗ್ರೇಶನ್ ಹೊಂದಿದೆ. ಶರವೇಗದ ಇಂಟರ್-ಸೆಪ್ಟರ್ ಬೋಟುಗಳು, ರಾತ್ರಿ ಕಾರ್ಯಾಚರಣೆ ಪಡೆಗಳು ಅತ್ಯಂತ ಆಧುನಿಕವಾಗಿವೆ.
ನಂತರದಲ್ಲಿ ಮಹಾರಾಷ್ಟ್ರವು ಪರಿಗಣಿಸಲ್ಪಡುತ್ತಿದ್ದು, ಮುಂಬೈ ಉಗ್ರದಾಳಿಯ ಬಳಿಕ, ಭಾರೀ ಮಟ್ಟದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಕೋಸ್ಟಲ್ ಪೋಲೀಸ್ ಠಾಣೆಗಳು ವ್ಯಾಪಕ ಹಾಗೂ ತ್ವರಿತಮಟ್ಟದಲ್ಲಿ ರಾಡಾರ್ ಸಮೂಹ ವ್ಯವಸ್ಥೆ, ಆಧುನಿಕ ಸಾಧನಗಳೊಂದಿಗೆ ಹೈ-ರೆಡಿನೆಸ್ ಮಟ್ಟದಲ್ಲಿ ಪಡೆಗಳಿವೆ ಎನ್ನಬಹುದು. ಪಕ್ಕದ ತಮಿಳುನಾಡು ರಾಜ್ಯವು ಮರೈನ್ ಎಲೈಟ್ ಫೋರ್ಸ್ (ಎಂಇಎಫ್) ಎಂಬ ಅತ್ಯಾಧುನಿಕ ರಕ್ಷಣಾ ಪಡೆಗಳೊಂದಿಗೆ ಕಡಲು ಕಾವಲಿಗೆ ನಿಂತಿದೆ.
ಇವುಗಳಿಗೆ ಹೋಲಿಸಿದಲ್ಲಿ, ನಮ್ಮ ಕರ್ನಾಟಕ ಕರಾವಳಿಯ ಸುರಕ್ಷತೆ ಬಗ್ಗೆ ತಳೆದಿರುವ ನಿಲುವು, ಹೊಂದಿರುವ ಸುರಕ್ಷಾ ಸಾಧನಗಳು ಏನೇನೂ ಅಲ್ಲವೇನೋ ಎಂದೆನಿಸುತ್ತದೆ. ಭಾರತೀಯ ನೌಕಾ ಪಡೆಯ ಅಂತಾರಾಷ್ಟ್ರೀಯ ಸಮುದ್ರದ ಗಡಿಯನ್ನು ರಕ್ಷಣೆ, ಭಾರತೀಯ ಕರಾವಳಿ ರಕ್ಷಾದಳದಿಂದ ಎಕ್ಸ್ʼಕ್ಲೂಸಿವ್ ಎಕನಾಮಿಕ್ ಝೋನ್ ತನಕ ರಕ್ಷಣಾ-ತಡೆಗಟ್ಟುವ ಕಾರ್ಯ ಮತ್ತು ರಾಜ್ಯಮಟ್ಟದ ಸಮುದ್ರ ಮರಿನ್ ಪೊಲೀಸ್, ಸಮುದ್ರ ತೀರದ ಹೊರಗಿನ ನೀರು ಪ್ರದೇಶಗಳಲ್ಲಿ ತಡೆ ಮತ್ತು ಸಣ್ಣ ರಿಪ್ಲ್ಯೂಟೇಷನ್ ಕಾರ್ಯ ಸೇರಿದಂತೆ ಈ ಬಹು ಆಯಾಮದ ವ್ಯವಸ್ಥೆಯಲ್ಲಿ ಐಸಿಜಿ ಮತ್ತು ರಾಜ್ಯ ಮರಿನ್ ಪೊಲೀಸ್ʼಗಳ ಸಹಕಾರದಲ್ಲಿಯೇ ಕಾರ್ಯ ನಿರ್ವಹಿಸುತ್ತವೆ.
ಇತರ ಸಮುದ್ರ ರಾಜ್ಯಗಳ ರಕ್ಷಣಾ ವ್ಯವಸ್ಥೆ ಹಾಗೂ ವ್ಯತ್ಯಾಸ ಗಮನಿಸಿದಾಗ, ಆಂಧ್ರಪ್ರದೇಶವು 1000 ಕಿಮೀಗೂ ಅಧಿಕ ಕರಾವಳಿಯನ್ನು ಹೊಂದಿದೆ. ಆದರೆ ನೌಕಾ ಬೋಟ್‌ಗಳ ನಿರ್ವಹಣೆ, ಫಾಸ್ಟ್ ಇಂಟರ್‌ಸೆಪ್ಟರ್ ಬೋಟ್ಸ್ ಬಳಕೆ ಸೇರಿದಂತೆ ಇತರೆ ಹೆಚ್ಚಿನ ಸೌಕರ್ಯಗಳ ಅಭಾವವೂ ಇದೆ ಎನ್ನಲಾಗಿದೆ.
ಕೇರಳ ರಾಜ್ಯವು 569 ಕಿಮೀ ದಕ್ಷಿಣ-ಪಶ್ಚಿಮ ಕರಾವಳಿ ಹೊಂದಿದ್ದು, ಐಸಿಜಿಯೊಂದಿಗೆ ಹೊಸ ವಿಳಿಂಜಮ-ಜೆಟ್ಟಿ ಪರಿಕಲ್ಪನೆ ಮೂಲಕ ವಾಯವ್ಯ ಸಮುದ್ರದಿಂದ ಪೆಟ್ರೋಲ್ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಗುಜರಾತ್ ತೀರಪ್ರದೇಶಕ್ಕೆ ಹೊಂದಿಕೊಂಡಂತೆ ದೊಡ್ಡ ಉದ್ಯಮ, ತೈಲ-ಗ್ಯಾಸ್ ಸೇರಿದಂತೆ ಇಲ್ಲಿ ಹಲವಾರು ಬೃಹತ್ ಉದ್ಯಮ ಪ್ರದೇಶಗಳಿವೆ.
ಇಲ್ಲಿಯ ಮೆರಿನ್ ಪೊಲೀಸ್, ಐಸಿಜಿ, ನೌಕಾಪಡೆ ಸಂಯೋಜನೆ ಅತ್ಯಂತ ಸದೃಢವಾಗಿದೆ. ಮಹಾ ರಾಷ್ಟ್ರ ಕೂಡ 650 ಕಿಮೀ ತೀರಪ್ರದೇಶ ಹೊಂದಿದ್ದು, ಮುಂಬೈ ಸೇರಿದಂತೆ ಬಹುಮುಖ್ಯ ಅಂತಾ ರಾಷ್ಟ್ರೀಯ ಬಂದರುಗಳನ್ನು, ತೈಲ-ವಾಣಿಜ್ಯ ಕೇಂದ್ರಗಳ ಪ್ರಮುಖ ಸ್ಥಾನವಾಗಿದೆ.
ಕೋಸ್ಟಲ್ ಪೋಲೀಸ್ ಸ್ಟೇಷನ್ ಜೊತೆಗೆ ಬಲವಾದ ಇಂಟರ್-ಸೆಪ್ಟರ್ ಬೋಟ್ ನೆಟ್ವರ್ಕ್ ಹೊಂದಿದೆ. ದೇಶದ ವಿವಿಧ ಸಮುದ್ರತೀರ ರಾಜ್ಯಗಳನ್ನು ನೋಡಿದಾಗ, ಕರ್ನಾಟಕ ಕರಾವಳಿ ಪ್ರದೇಶಕ್ಕೆ ಇನ್ನೂ ಹೆಚ್ಚಿನ ಆದ್ಯತೆ, ಸ್ಥಳೀಯರಿಗೆ ಅತ್ಯಗತ್ಯವಾದ ಮೂಲಸೌಕರ್ಯ, ರಾಜ್ಯ-ದೇಶದ ವ್ಯವಸ್ಥೆಯ ಮೂಲಕ ಹೆಚ್ಚಿನ ಸುರಕ್ಷತೆ, ಆಧುನಿಕ ಸಂವಹನ ಸಾಧನ ಒದಗಿಸಬೇಕಾಗಿದೆ.
ಕರಾವಳಿ ಸುರಕ್ಷತೆ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತದ ಸಮಗ್ರ ಭದ್ರತೆಗೆ ಅವಿಭಾಜ್ಯ ಅಂಗವಾ ಗಿದೆ. ಕರಾವಳಿ ಸುರಕ್ಷಿತವಾಗಿದ್ದರೆ ಮಾತ್ರ ದೇಶ ಸುರಕ್ಷಿತ. ರಾಜ್ಯ, ಕೇಂದ್ರ, ಸಮುದಾಯ ಮತ್ತು ತಂತ್ರಜ್ಞಾನ ಎಂಬ ಈ ನಾಲ್ಕು ಕಂಬಗಳ ಮೇಲೆ ನಿಂತಿರುವ ಸಮಗ್ರ ಕರಾವಳಿ ಭದ್ರತಾ ವ್ಯವಸ್ಥೆ ಯೇ ಭಾರತದ ಭದ್ರ ಭವಿಷ್ಯದ ಭರವಸೆಯಾಗಿದೆ. ಸಮುದ್ರದ ಅಲೆಗಳ ಮೇಲೆ ಕಣ್ಣಿಟ್ಟಿರುವ ದೇಶವೇ ತನ್ನ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ. ಎಂಬ ಮಾತನ್ನು ನಾವು ನೆನಪಿಡಬೇಕಿದೆ.