ಸಂಪಾದಕೀಯ ಸದ್ಯಶೋಧನೆ
ವಿಮಾನಯಾನ ರಂಗದಲ್ಲಿ ಅತ್ಯುನ್ನತ ಆದ್ಯತೆಗಳೆಂದರೆ ಸುರಕ್ಷತೆ ಮತ್ತು ಶಿಸ್ತು. ವಿಮಾನದ ಕಾಕ್‌ಪಿಟ್ ಎನ್ನುವುದು ನೂರಾರು ಪ್ರಯಾಣಿಕರ ಜೀವವನ್ನು ಹೊತ್ತು ಸಾಗುವ ಪವಿತ್ರ ಹಾಗೂ ಜವಾಬ್ದಾರಿಯುತ ನಿಯಂತ್ರಣ ಕೇಂದ್ರ. ಇದನ್ನು ವಿಮಾನದ ‘ಗರ್ಭಗುಡಿ’ ಎನ್ನಬಹುದು. ಇಲ್ಲಿ ಪೈಲಟ್ ಗಳು ಅನುಸರಿಸುವ ನಡೆವಳಿಕೆ, ಸಂವಹನ, ಕಾರ್ಯವಿಧಾನ ಮತ್ತು ಶಿಸ್ತಿನ ನಿಯಮ ಗಳನ್ನು ‘ಕಾಕ್‌ಪಿಟ್ ಶಿಷ್ಟಾಚಾರ’ (Cockpit Etiquette) ಅಥವಾ ವೃತ್ತಿಪರ ನಡಾವಳಿ ಎನ್ನಲಾಗುತ್ತದೆ. ಈ ಶಿಷ್ಟಾಚಾರ ಕೇವಲ ಔಪಚಾರಿಕ ಶಿಷ್ಟಾಚಾರವಲ್ಲ.
ಇದು ವಿಮಾನದ ಪ್ರತಿಯೊಂದು ಕ್ಷಣದ ಹಾರಾಟ ಸುರಕ್ಷಿತವಾಗಿರಲು ರೂಪಿಸಲಾದ ಕಟ್ಟುನಿಟ್ಟಿನ ನಿಯಮಾವಳಿ. ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸುವ ಕ್ಷಣದಿಂದಲೇ ಶಿಷ್ಟಾಚಾರ ಆರಂಭವಾಗು ತ್ತದೆ. ಕಮಾಂಡರ್ (ಕ್ಯಾಪ್ಟನ್) ಮತ್ತು - ಆಫೀಸರ್ (ಸಹ-ಪೈಲಟ್) ನಡುವೆ ಪರಸ್ಪರ ವೃತ್ತಿಪರ ಗೌರವವಿರಬೇಕು. ಕಾಕ್‌ಪಿಟ್ ಒಳಗೆ ಪ್ರವೇಶಿಸಿದ ನಂತರ ಮೊದಲಿಗೆ ಹಾರಾಟದ ದಾಖಲೆಗಳು, ವಿಮಾನದ ಲಾಗ್‌ಬುಕ್ ಹಾಗೂ ಹವಾಮಾನ ವರದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಮನ್ವಯ ಸಾಧಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಟ್ರಂಪ್ ವಿರುದ್ಧ ಸೆಣಸಿದವಳ ಕಥೆ
ಅಧಿಕಾರದಲ್ಲಿ ಕ್ಯಾಪ್ಟನ್ ಹಿರಿಯನಾಗಿದ್ದರೂ, ಸಹ-ಪೈಲಟ್ ನ ಸಲಹೆ-ಸೂಚನೆಗಳನ್ನು ಆಲಿಸುವ ಮುಕ್ತ ವಾತಾವರಣವನ್ನು ನಿರ್ಮಿಸುವುದು ಕ್ಯಾಪ್ಟನ್‌ನ ಪ್ರಮುಖ ಜವಾಬ್ದಾರಿ. ಅತ್ಯಂತ ಕಟ್ಟುನಿಟ್ಟಿನ ನಿಯಮವಾದ ‘ಸ್ಟೆರೈಲ್ ಕಾಕ್‌ಪಿಟ್ ರೂಲ್’.
ವಿಮಾನಯಾನ ನಿಯಂತ್ರಣ ಸಂಸ್ಥೆಗಳ ಪ್ರಕಾರ, ವಿಮಾನವು ನೆಲದ ಮೇಲೆ ಟ್ಯಾಕ್ಸಿ ಮಾಡುವಾಗ, ಟೇಕಾಫ್ ಆಗುವಾಗ ಮತ್ತು ಹತ್ತು ಸಾವಿರ ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ಹಾರುವಾಗ ಅಥವಾ ಲ್ಯಾಂಡಿಂಗ್ ಹಂತದಲ್ಲಿರುವಾಗ ಈ ನಿಯಮ ಅನ್ವಯಿಸುತ್ತದೆ. ಈ ಸಮಯದಲ್ಲಿ ಯಾವುದೇ ಅನಗತ್ಯ ಮಾತುಕತೆ, ಹಾಸ್ಯ, ರಾಜಕೀಯ ಚರ್ಚೆ, ಪುಸ್ತಕ ಓದುವುದು ಅಥವಾ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದು ಕಡ್ಡಾಯವಾಗಿ ನಿಷೇಧ. ಕೇವಲ ಹಾರಾಟ ಮತ್ತು ಸುರಕ್ಷತೆಗೆ ಸಂಬಂಧಿಸಿದ ತುರ್ತು ವಿಷಯಗಳನ್ನು ಮಾತ್ರ ಸ್ಪಷ್ಟವಾಗಿ ಚರ್ಚಿಸಬೇಕು.
ಆಧುನಿಕ ವಿಮಾನಯಾನದಲ್ಲಿ ಸಂಭವಿಸುವ ಮಾನವ ತಪ್ಪುಗಳನ್ನು ತಡೆಯಲು ಕ್ರೂ ರಿಸೋರ್ಸ್ ಮ್ಯಾನೇಜ್ಮೆಂಟ್ (ಸಿಆರ್‌ಎಂ) ಶಿಷ್ಟಾಚಾರ ಅತಿ ಮುಖ್ಯ. ಹಿಂದಿನ ಕಾಲದಲ್ಲಿ ಕ್ಯಾಪ್ಟನ್‌ನ ನಿರ್ಧಾರವೇ ಅಂತಿಮವಾಗಿರುತ್ತಿತ್ತು ಮತ್ತು ಸಹ-ಪೈಲಟ್ ಗಳು ಮಾತನಾಡಲು ಹಿಂಜರಿಯು ತ್ತಿದ್ದರು. ಆದರೆ ಇಂದಿನ ಶಿಷ್ಟಾಚಾರದ ಪ್ರಕಾರ, ಜೂನಿಯರ್ ಪೈಲಟ್ ಯಾವುದೇ ಅನುಮಾನ, ತಪ್ಪು ಅಥವಾ ಅಪಾಯವನ್ನು ಕಂಡರೆ ತಕ್ಷಣವೇ ಧೈರ್ಯವಾಗಿ ಕ್ಯಾಪ್ಟನ್ ಗಮನಕ್ಕೆ ತರಬೇಕು.
ಪರಸ್ಪರ ಪಾರದರ್ಶಕತೆ, ಸಮನ್ವಯ ಮತ್ತು ಸಮಾನ ಜವಾಬ್ದಾರಿಯೇ ಈ ವ್ಯವಸ್ಥೆಯ ಜೀವಾಳ. ವಿಮಾನದ ಕಾಕ್‌ಪಿಟ್‌ನಲ್ಲಿ ಯಾವುದೇ ಕೆಲಸವನ್ನು ನೆನಪಿನ ಶಕ್ತಿಯ ಮೇಲೆ ಮಾಡುವುದಿಲ್ಲ. ಪ್ರತಿಯೊಂದಕ್ಕೂ ಲಿಖಿತ ಚೆಕ್‌ಲಿಸ್ಟ್ ಇರುತ್ತದೆ.
ಒಬ್ಬ ಪೈಲಟ್ ಚೆಕ್‌ಲಿಸ್ಟ್ ಅನ್ನು ಗಟ್ಟಿಯಾಗಿ ಓದಿದರೆ (Challenge), ಇನ್ನೊಬ್ಬ ಪೈಲಟ್ ಆ ಸ್ವಿಚ್ ಅಥವಾ ಉಪಕರಣವನ್ನು ಪರಿಶೀಲಿಸಿ ದೃಢೀಕರಿಸಿ ಉತ್ತರಿಸಬೇಕು (Response). ಉದಾಹರಣೆಗೆ ‘ಲ್ಯಾಂಡಿಂಗ್ ಗೇರ್?’ ಎಂದು ಕೇಳಿದಾಗ, ಉಪಕರಣವನ್ನು ಕಣ್ಣಾರೆ ನೋಡಿ ‘ಡೌನ್ ಆಂಡ್ ಲಾಕ್ಡ್’ ಎಂದು ದೃಢೀಕರಿಸಬೇಕು. ಈ ಧ್ವನಿ ಸಂವಹನದಲ್ಲಿ ಯಾವುದೇ ಉದಾಸೀನತೆ ಅಥವಾ ಅಸ್ಪಷ್ಟತೆಗೆ ಜಾಗವಿರುವುದಿಲ್ಲ.
ಹಾರಾಟದ ವೇಳೆ ವಿಮಾನವನ್ನು ಯಾರು ನಿಯಂತ್ರಿಸುತ್ತಿದ್ದಾರೆ (Pilot Flying) ಮತ್ತು ಯಾರು ಉಪಕರಣಗಳು ಹಾಗೂ ರೇಡಿಯೋ ಸಂವಹನವನ್ನು ಗಮನಿಸುತ್ತಿದ್ದಾರೆ (Pilot Monitoring) ಎಂಬುದು ಸ್ಪಷ್ಟವಾಗಿರಬೇಕು. ನಿಯಂತ್ರಣವನ್ನು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಯಿಸುವಾಗ ನಿರ್ದಿಷ್ಟ ಶಿಷ್ಟಾಚಾರದ ವಾಕ್ಯಗಳನ್ನು ಬಳಸಲೇಬೇಕು. ‘ಯು ಹ್ಯಾವ್ ಕಂಟ್ರೋಲ್ಸ್’ ಎಂದು ಹೇಳಿದಾಗ, ಇನ್ನೊಬ್ಬ ಪೈಲಟ್ ಸ್ಟಿಕ್ ಮುಟ್ಟಿ ‘ಐ ಹ್ಯಾವ್ ಕಂಟ್ರೋಲ್ಸ್’ ಎಂದು ಮರುನುಡಿಯ ಬೇಕು. ಈ ದ್ವಿಮುಖ ದೃಢೀಕರಣವಿಲ್ಲದೇ ನಿಯಂತ್ರಣ ಬದಲಾಯಿಸುವುದು ಗಂಭೀರ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ.
ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಥವಾ ಕಾಕ್‌ಪಿಟ್‌ನೊಳಗೆ ಮಾತನಾಡುವಾಗ ಅಂತಾರಾ ಷ್ಟ್ರೀಯ ವಾಯುಯಾನ ಭಾಷೆಯಾದ ಇಂಗ್ಲಿಷ್ ಅನ್ನು, ಅದರಲ್ಲೂ ನಿಗದಿತ ಸಂಕೇತ ಪದಗಳನ್ನು ಮಾತ್ರ ಬಳಸಬೇಕು. ‘ಎಸ್’ ಅಥವಾ ‘ನೋ’ ಎನ್ನುವ ಬದಲು ‘ಅಫರ್ಮೇಟಿವ್’ ಅಥವಾ ‘ನೆಗೆಟಿವ್’ ಎಂದೇ ನುಡಿಯಬೇಕು.
ಸಂಖ್ಯೆಗಳು ಮತ್ತು ಅಕ್ಷರಗಳನ್ನು ಫೋನೆಟಿಕ್ ಆಲಾಬೆಟ್ (ಆಲಾ, ಬ್ರಾವೋ, ಚಾರ್ಲಿ...) ಮೂಲಕವೇ ಸ್ಪಷ್ಟಪಡಿಸಬೇಕು. ಸ್ಥಳೀಯ ಆಡುಭಾಷೆ ಅಥವಾ ಗೊಂದಲ ಮೂಡಿಸುವ ಪದಬಳಕೆಯನ್ನು ಕಾಕ್‌ಪಿಟ್ ನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂದಿನ ಸ್ಮಾರ್ಟ್ಫೋನ್ ಯುಗದಲ್ಲಿ ವೈಯಕ್ತಿಕ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಗಳನ್ನು ಕಾಕ್‌ಪಿಟ್‌ನಲ್ಲಿ ಬಳಸುವುದು ಶಿಷ್ಟಾಚಾರದ ಮತ್ತು ಕಾನೂನಿನ ಪ್ರಕಾರ ಅಪರಾಧ.