ಸಂಪಾದಕೀಯ ಸದ್ಯಶೋಧನೆ
ಜನತಾ ಪಕ್ಷ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅದರ ಸಾರಥ್ಯ 8 ವಹಿಸಿದ ಪ್ರಧಾನಿ ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ ವಿರುದ್ಧ ಪ್ರತೀಕಾರಕ್ಕೆ ತಕ್ಷಣಕ್ಕೆ ಮುಂದಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ಆ ವಿಷಯ ಬಂದಾಗ ಮಾತಾಡುತ್ತಿರಲಿಲ್ಲ. ಮೊದಲಿನ ಎರಡು ಸಂಪುಟ ಸಭೆಗಳಲ್ಲಿ ಅವರು ಏನಾದರೂ ಹೇಳಬಹುದು ಎಂದು ಅವರ ಸಹೋದ್ಯೋಗಿಗಳು ನಿರೀಕ್ಷಿಸಿದ್ದರು. ಆದರೆ ಮೊರಾರ್ಜಿ ಆ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಮೊರಾರ್ಜಿಯವರಿಗೆ ಇಂದಿರಾ ಬಗ್ಗೆ ಅಸಮಾಧಾನ, ಆಕ್ರೋಶವಿತ್ತು. ಆದರೆ ಅಷ್ಟೇ ಅನುಕಂಪವೂ ಇತ್ತು.
ಅಷ್ಟಕ್ಕೂ ಅವರು 1967ರಲ್ಲಿ ಇಂದಿರಾ ಸಂಪುಟದಲ್ಲಿ ಉಪಪ್ರಧಾನಿಯಾಗಿ ಕೆಲಸ ಮಾಡಿದ್ದರು. ಆದರೆ ತುರ್ತು ಪರಿಸ್ಥಿತಿ ಕರ್ಮಕಾಂಡಗಳಿಗೆ ಅವರನ್ನು ಬಂಧಿಸಿ ಶಿಕ್ಷಿಸುವುದು ಮೊರಾರ್ಜಿ ಅವರಿಗೆ ಇಷ್ಟವಿರ ಲಿಲ್ಲ. ಪ್ರಧಾನಿಯವರ ಇಂಗಿತವನ್ನು ಅರಿತ ಅವರ ಸಂಪುಟ ಸಹೋದ್ಯೋಗಿಗಳಾದ ಚರಣ್ ಸಿಂಗ್, ಜಾರ್ಜ್ ಫೆರ್ನಾಂಡೀಸ್ ಮತ್ತು ಇನ್ನಿತರರು, ಇಂದಿರಾ ವಿರುದ್ಧ ಕ್ರಮ ಜರುಗಿಸಲೇ ಬೇಕು ಎಂದು ಪಟ್ಟು ಹಿಡಿದರು. ಈ ವಿಷಯದಲ್ಲಿ ಸ್ವಲ್ಪವೂ ಸಡಿಲವಾಗುವ ಪ್ರಶ್ನೆಯೇ ಇಲ್ಲ ಎಂದು ಜನತಾ ನಾಯಕರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Vishweshwar Bhat Column: ಪದಗಳೆಂಬ ದೋಣಿ ಸದಾ ಸಣ್ಣದು, ಅನುಭವಗಳೆಂಬ ಸಾಗರ ಅನಂತ
ಇಂದಿರಾ ವಿರುದ್ಧ ಕ್ರಮ ಜರುಗಿಸದಿದ್ದರೆ, ಜನರೇ ನಮ್ಮನ್ನು ಪ್ರಶ್ನಿಸುತ್ತಾರೆ, ಅಷ್ಟಕ್ಕೂ ನಮ್ಮನ್ನು ಆರಿಸಿ ತಂದಿರುವುದೇ ಇಂದಿರಾಗೆ ಶಿಕ್ಷಿಸಲು ಎಂಬ ಧಾಟಿಯಲ್ಲಿ ವಾದ ಮಂಡಿಸಲಾರಂಭಿಸಿದರು. ಇಂದಿರಾಗೆ ಸ್ವಲ್ಪವೂ ದಯೆ ತೋರಿಸಬಾರದು ಎಂದು ಸಚಿವ ಸಂಪುಟ ಸಭೆಯಲ್ಲೂ ಅಭಿಪ್ರಾಯ ವ್ಯಕ್ತವಾಯಿತು.
ತುರ್ತುಪರಿಸ್ಥಿತಿ ಸಂದರ್ಭದಲ್ಲಿನ ಅಪರಾಧಗಳಿಗೆ ನಿಮ್ಮ ಮಗ ಸಂಜಯನಿಗೆ ಏನೂ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಪ್ರಧಾನಿ ಮೊರಾರ್ಜಿ, ಇಂದಿರಾಗೆ ಭರವಸೆ ನೀಡಿದ್ದಾರೆಂದು ಸ್ವತಃ ಅವರ ಸಹೋದ್ಯೋಗಿಗಳೇ ಮಾತಾಡಿಕೊಳ್ಳುತ್ತಿದ್ದರು. 1977ರ ಏಪ್ರಿಲ್‌ನಲ್ಲಿ, ಇಂದಿರಾ ಗಾಂಧಿ, ಸಂಜಯ ಗಾಂಧಿ, ವಿ.ಸಿ.ಶುಕ್ಲಾ, ಪ್ರಣಬ್ ಮುಖರ್ಜಿ, ಬನ್ಸಿಲಾಲ್ ಮತ್ತಿತರರ ವಿರುದ್ಧ ತನಿಖೆ ನಡೆಸಲು ಎಂಟು ಆಯೋಗಗಳನ್ನು ರಚಿಸಲು ಕೇಂದ್ರ ಸರಕಾರ ನಿರ್ಧರಿಸಿತು.
ಮಾರುತಿ ಸಂಸ್ಥೆಯಲ್ಲಿನ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ ವಿರುದ್ಧ ತನಿಖೆಗೆ ಜಸ್ಟಿಸ್ ಎಚ್.ಆರ್.ಖನ್ನಾ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಜಯಪ್ರಕಾಶ ನಾರಾಯಣ ಅವರು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿದ್ದಾಗ ಅವರಿಗೆ ಸರಿಯಾದ ಚಿಕಿತ್ಸೆ ನೀಡದೇ ಅವರ ಕಿಡ್ನಿ ವೈಫಲ್ಯದ ಕುರಿತು ವಿಚಾರಣೆ ನಡೆಸಲು ಸಹ ಒಂದು ಆಯೋಗವನ್ನು ರಚಿಸಲಾಯಿತು. 1967ರಲ್ಲಿ ರಾಮ ಮನೋಹರ ಲೋಹಿಯಾ ನಿಧನರಾದ ಸಂದರ್ಭದಲ್ಲಿ ಮೂಡಿದ ಸಂದೇಹಗಳ ಬಗ್ಗೆಯೂ ವಿಚಾರಣೆ ನಡೆಸುವಂತೆ ಸರಕಾರ ಆದೇಶಿಸಿತು.
ತುರ್ತುಪರಿಸ್ಥಿತಿ ಸಂದರ್ಭದ ಎಲ್ಲ ಅಪರಾಧಗಳ ಕುರಿತು ತನಿಖೆ ನಡೆಸಲು ರಚಿಸಿದ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಜೆ.ಸಿ.ಷಾ ನೇತೃತ್ವದ ಆಯೋಗಕ್ಕೆ ಅತಿ ಹೆಚ್ಚಿನ ಜವಾಬ್ದಾರಿ ಹೊರಿಸಲಾಯಿತು. ಆದರೆ ಆ ಆಯೋಗದ ಮುಂದೆ ಇಂದಿರಾ ಹಾಜರಾಗಲೇ ಇಲ್ಲ. ಮೂರನೇ ಸಲ ನೋಟೀಸ್ ಬಂದಾಗ, ಹಾಜರಾಗುವುದು ಅನಿವಾರ್ಯವಾಯಿತು.
‘ತುರ್ತುಪರಿಸ್ಥಿಸಿ ಸಂದರ್ಭದಲ್ಲಿ ನಾನು ಯಾವ ರೀತಿಯ ಅಕ್ರಮವನ್ನೂ ಎಸಗಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆಯೋ ಅದರಂತೆ ನಾನು ನಡೆದುಕೊಂಡಿ ದ್ದೇನೆ. ಇದು ನನ್ನೊಬ್ಬನ ನಿರ್ಧಾರ ಇಲ್ಲ. ಅವೇನಿದ್ದರೂ ಸಾಮೂಹಿಕ, ಸಾಂಕ ನಿರ್ಧಾರ’ ಎಂದು ಇಂದಿರಾ ಆಯೋಗದ ಮುಂದೆ ನುಡಿದರು. ಶಾ ಆಯೋಗ 525 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಿತು.
ಆಯೋಗ ತನ್ನ ಅಂತಿಮ ವರದಿ ಸಲ್ಲಿಸುವ ಹೊತ್ತಿಗೆ, ಜನತಾ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮುಗಿಲು ಮುಟ್ಟಿತ್ತು. 1980ರ ಜನೆವರಿಯಲ್ಲಿ ಇಂದಿರಾ ಮರಳಿ ಅಧಿಕಾರಕ್ಕೆ ಬಂದರು. ತುರ್ತು ಸ್ಥಿತಿಯ ತಪ್ಪಿತಸ್ಥರೆಂದು ಶಾ ಆಯೋಗ ಯಾರನ್ನು ದೂಷಿಸಿತ್ತೋ ಅವರೆಲ್ಲ ಇಂದಿರಾ ಸಚಿವ ಸಂಪುಟದಲ್ಲಿ ಒಳ್ಳೆಯ ಹುದ್ದೆಯನ್ನು ಪಡೆದುಕೊಂಡರು. ಶಾ ಆಯೋಗ ವರದಿ ಧೂಳು ತಿನ್ನಲಾ ರಂಭಿಸಿತು.