ಕೆ.ಶಿವನಗೌಡ ನಾಯಕ, ಮಾಜಿ ಸಚಿವರು
ಕಲ್ಯಾಣ ಕರ್ನಾಟಕದ ನನ್ನ ಪ್ರೀತಿಯ ಅಣ್ಣ- ತಮ್ಮಂದಿರೇ, ಅಕ್ಕ-ತಂಗಿಯರೇ, ರೈತ ಬಂಧುಗಳೇ, ಕಾರ್ಮಿಕರೇ, ಯುವಕರೇ, ವಿದ್ಯಾರ್ಥಿಗಳೇ ಹಾಗೂ ನನ್ನ ತಾಯಂದಿರೇ... ಇಂದು ನಾನು ನಿಮ್ಮ ಮುಂದೆ ರಾಜಕಾರಣಿಯಾಗಿ ನಿಂತಿಲ್ಲ. ಈ ಮಣ್ಣಿನ ಮಗನಾಗಿ, ನಿಮ್ಮಲ್ಲೊಬ್ಬನಾಗಿ, ನಿಮ್ಮ ಮನೆಯ ಮಗನಾಗಿ ನನ್ನ ಮನದಾಳದ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿರುವೆ. ನಾನು ಅಧಿಕಾರಕ್ಕಾಗಿ ಬಂದಿಲ್ಲ, ಮತ ಕೇಳಲು ಬಂದಿಲ್ಲ. ಈ ನೆಲದ ನೋವು ನನ್ನ ನೋವಾಗಿದೆ. ನಮ್ಮ ಭಾಗದ ಜನರ ಕನಸಾಗಿದೆ. ಅದಕ್ಕಾಗಿಯೇ ನನ್ನ ಮನಸ್ಸಿನ ದುಃಖದ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಕಲ್ಯಾಣ ಕರ್ನಾಟಕದ ಜನರ ಬದುಕನ್ನು ಹಲವು ದಶಕಗಳಿಂದ ಕಾಡುತ್ತಿರುವ ಪ್ರಶ್ನೆ ಒಂದೇ. ನಮ್ಮ ಭಾಗಕ್ಕೆ ಸಮಗ್ರ ನೀರಾವರಿ ಯಾವಾಗ? ನಮ್ಮ ಭಾಗದಲ್ಲಿ ಏಮ್ಸ್ ಸ್ಥಾಪನೆ ಯಾವಾಗ? ನಮ್ಮ ನೆಲ ಯಾವಾಗ ಅಭಿವೃದ್ಧಿಯ ಹೊಸ ಹಾದಿ ಹಿಡಿಯುತ್ತದೆ? ಈ ಪ್ರಶ್ನೆಯನ್ನು ನಮ್ಮ ಅಜ್ಜ,ಮುತ್ತಜ್ಜ ಕೇಳಿದರು. ನಮ್ಮ ತಂದೆ-ತಾಯಿಯರು ಕೇಳಿದರು. ಇಂದು ನಾವು ಕೇಳುತ್ತಿದ್ದೇವೆ.
ನಾಳೆ ನಮ್ಮ ಮಕ್ಕಳು ಕೂಡ ಇದೇ ಪ್ರಶ್ನೆಯನ್ನು ಕೇಳುವರು ಅದಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಕಣ್ಣೀರಿನಿಂದ ಹೊಲ ಹಸನಾಗುವುದಿಲ್ಲ; ನೀರಿನಿಂದ ಮಾತ್ರ ಹಸನಾಗುತ್ತದೆ ಎಂಬ ಸತ್ಯವನ್ನು ನಾವು ಮರೆಯಬಾರದು. ರೈತರಿಗೆ ನೀರು ಇಲ್ಲ, ಯುವಕರಿಗೆ ಉದ್ಯೋಗ ಅವಕಾಶ ಗಳಿಲ್ಲ: ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ಕಲಬುರಗಿ ಹಾಗೂ ಬೀದರ್ ಭಾಗದ ಜನರು ದುಡಿಯುವುದರಲ್ಲಿ ಯಾರಿಗೂ ಕಡಿಮೆ ಇಲ್ಲ. ಬೆಳಗಿನ ಜಾವವೇ ಹೊಲಕ್ಕೆ ಇಳಿದು ಬೆವರು ಸುರಿಸುವ ರೈತ ನಮ್ಮವನಾಗಿದ್ದಾನೆ. ಬಿಸಿಲನ್ನೂ ಮಳೆಯನ್ನೂ ಲೆಕ್ಕಿಸದೆ ದುಡಿಯುವ ಕಾರ್ಮಿಕ ನಮ್ಮವನಾಗಿದ್ದಾನೆ.
ಇದನ್ನೂ ಓದಿ: Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?
ಉತ್ತಮ ಭವಿಷ್ಯದ ಕನಸು ಕಾಣುವ ಲಕ್ಷಾಂತರ ಯುವಕರು ಮತ್ತು ವಿದ್ಯಾರ್ಥಿಗಳು ನಮ್ಮವರೇ. ಆದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ರೈತನಿಗೆ ಸರಿಯಾಗಿ ನೀರು ಇಲ್ಲ, ಯುವಕರಿಗೆ ಉದ್ಯೋಗ ಅವಕಾಶಗಳಿಲ್ಲ, ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯ ಗಳಿಲ್ಲ. ಈ ಕಾರಣದಿಂದಲೇ ನಮ್ಮ ನಾಡಿನ ಲಕ್ಷಾಂತರ ಕುಟುಂಬಗಳು ಉದ್ಯೋಗಕ್ಕಾಗಿ ಬೆಂಗಳೂರು, ಹೈದರಾಬಾದ್, ಮುಂಬೈ, ನಗರಗಳಿಗೆ ಕೂಲಿಗಾಗಿ ಗುಳೆ ಹೋಗುವ ದುಃಖ ದುಮ್ಮಾನ ಎದುರಿಸುತ್ತಿದೇವೆ. ಈ ನಾಡಿನ ಜನರಿಗೆ ಇದೇ ಮಣ್ಣಿನಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಳು ಅವಕಾಶ ಸಿಗಬೇಕಾದರೆ ಸಮಗ್ರ ಅಭಿವೃದ್ಧಿಯೇ ಏಕೈಕ ಮಾರ್ಗ ವಾಗಿದೆ. ಸಮಗ್ರ ನೀರಾವರಿಯ ಹೋರಾಟಕ್ಕೆ ಬದ್ಧ: ನಮ್ಮ ಭಾಗದ ದುರಂತವೇನೆಂದರೆ, ಕೃಷ್ಣಾ ಮತ್ತು ತುಂಗ ಭದ್ರೆಯಂತಹ ಮಹಾನದಿಗಳು ಹರಿಯುತ್ತಿದ್ದರೂ ನಮ್ಮ ಹೊಲಗಳು ಒಣಗುತ್ತಿವೆ.
ಇದು ಪ್ರಕೃತಿಯ ತಪ್ಪಲ್ಲ. ಇದು ಯೋಜನೆಗಳನ್ನು ಪೂರ್ಣಗೊಳಿಸದ ಆಡಳಿತದ ಇಚ್ಛಾ ಶಕ್ತಿಯ ವೈಫಲ್ಯ. ಹಲವು ವರ್ಷಗಳಿಂದ ರೈತರ ಕನಸಾಗಿರುವ ನವಲಿ ಜಲಾಶಯ ಹಾಗೂ ತಿಂಥಣಿ ಬಳಿ ನಿರ್ಮಾಣವಾಗ ಬೇಕಿದ್ದ ಜಲಾಶಯಗಳು ಇನ್ನೂ ಕನಸಾಗಿಯೇ ಉಳಿದಿದೆ. ಈ ಎರಡೂ ಯೋಜನೆಗಳು ಜಾರಿಯಾದರೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಎಕರೆ ಭೂಮಿ ಹಸಿರಾಗುತ್ತದೆ. ಲಕ್ಷಾಂತರ ರೈತರ ಬದುಕು ಬದಲಾಗುತ್ತದೆ. ಈ ಕಾರಣಕ್ಕಾಗಿಯೇ ನಾನು ಸಮಗ್ರ ನೀರಾವರಿಯ ಹೋರಾಟವನ್ನು ನನ್ನ ಜೀವನದ ಸಂಕಲ್ಪವನ್ನಾಗಿ ಮಾಡಿಕೊಂಡಿದ್ದೇನೆ. ರೈತ ಬದುಕಿದರೆ ದೇಶ ಬದುಕುತ್ತದೆ: ಸಮಗ್ರ ನೀರಾವರಿ ಎಂದರೆ ಕೇವಲ ನೀರಿನ ಯೋಜನೆ ಅಲ್ಲ. ಅದು ರೈತನ ಬದುಕಿನ ಯೋಜನೆ. ಅದು ಹಸಿವನ್ನು ನೀಗಿಸುವ ಯೋಜನೆ. ಅದು ಗ್ರಾಮಗಳ ಆರ್ಥಿಕತೆಯನ್ನು ಬಲಪಡಿಸುವ ಯೋಜನೆ. ರೈತನ ಹೊಲ ಹಸಿರಾದರೆ ಅವನ ಮನೆ ಬೆಳಗುತ್ತದೆ. ರೈತನ ಮನೆ ಬೆಳಗಿದರೆ ಗ್ರಾಮ ಬೆಳೆಯುತ್ತದೆ. ಗ್ರಾಮ ಬೆಳೆದರೆ ಜಿಲ್ಲೆ ಬೆಳೆಯುತ್ತದೆ. ಜಿಲ್ಲೆ ಬೆಳೆದರೆ ರಾಜ್ಯ ಸಮೃದ್ಧಿ ಯಾಗುತ್ತದೆ. ಆದ್ದರಿಂದ ನೀರಾವರಿ ಎನ್ನುವುದು ಕೇವಲ ರೈತನ ಸಮಸ್ಯೆಯಲ್ಲ; ಅದು ಇಡೀ ಸಮಾಜದ ಅಭಿವೃದ್ಧಿಯ ಪ್ರಶ್ನೆಯಾಗಿದೆ. ನೀರು ಕೊಟ್ಟರೆ ರೈತ ಬದುಕುತ್ತಾನೆ, ರೈತ ಬದುಕಿದರೆ ದೇಶ ಬದುಕುತ್ತದೆ ಎಂಬ ಮಾತು ಎಂದಿಗೂ ಸುಳ್ಳಾಗುವುದಿಲ್ಲ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಲೇಬೇಕು: ನೀರಿನಷ್ಟೇ ಮುಖ್ಯವಾದ ಮತ್ತೊಂದು ಅಗತ್ಯ ಆರೋಗ್ಯ. ಇಂದು ಬಡ ಕುಟುಂಬದಲ್ಲಿ ಯಾರಿಗಾದರೂ ಗಂಭೀರ ಕಾಯಿಲೆ ಬಂದರೆ ಮೊದಲು ಕಣ್ಣೀರು ಬರುತ್ತದೆ. ನಂತರ ಸಾಲದ ಚಿಂತೆಯು ಆರಂಭವಾಗುತ್ತದೆ. ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಲೆದಾಡ ಬೇಕಾಗುತ್ತದೆ. ಹಣದ ಕೊರತೆಯಿಂದ ಅನೇಕ ಜೀವಗಳು ಕಳೆದುಹೋಗುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ನಮ್ಮ ತಾಯಂದಿರು, ಹಿರಿಯರು, ಮಕ್ಕಳು ಹಾಗೂ ಬಡ ಜನರು ಉತ್ತಮ ಚಿಕಿತ್ಸೆಗಾಗಿ ನೂರಾರು ಕಿಲೋಮೀಟರ್‌ದೂರ ಹೋಗಬೇಕಾದ ಅನಿವಾರ್ಯತೆ ಕೊನೆಗೊಳ್ಳಬೇಕು. ಅದಕ್ಕಾಗಿ ಕಲ್ಯಾಣ ನಾಡಿನ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಲೇಬೇಕು. ಇದು ಯಾವುದೇ ವ್ಯಕ್ತಿಯ ಬೇಡಿಕೆಯಲ್ಲ; ಇದು ನಮ್ಮ ಕಲ್ಯಾಣ ನಾಡಿನ ನಾಗರಿಕನ ಹಕ್ಕಾಗಿದೆ. ನಾವು ಎಲ್ಲರೂ ಒಂದಾಗಬೇಕು: ಕಳೆದ ಇಪ್ಪತ್ತೆಂಟು ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಒಂದು ಸತ್ಯವನ್ನು ಅರಿತುಕೊಂಡಿದ್ದೇನೆ.
ನಮ್ಮನ್ನು ಹಿಂದೆ ಹಾಕಿದ್ದು ಯಾವುದೇ ಒಂದು ಪಕ್ಷವಲ್ಲ. ನಮ್ಮೊಳಗಿನ ಒಗ್ಗಟ್ಟಿನ ಕೊರತೆ ಯೇ ನಮ್ಮ ದೊಡ್ಡ ದುರ್ಬಲತೆ. ನವಲಿ ಜಲಾಶಯ ಏಕೆ ಪೂರ್ಣಗೊಂಡಿಲ್ಲ? ತಿಂಥಣಿ ಜಲಾಶಯ ಏಕೆ ನಿರ್ಮಾಣ ವಾಗಲಿಲ್ಲ? ಸಮಗ್ರ ನೀರಾವರಿ ಏಕೆ ಸಾಕಾರವಾಗಲಿಲ್ಲ? ಇದಕ್ಕೆ ಪ್ರಮುಖ ಕಾರಣ ನಾವು ಒಗ್ಗಟ್ಟಾಗಿ ಧ್ವನಿ ಎತ್ತದಿರುವುದು. ನಾವು ಎಲ್ಲರೂ ಒಂದಾ ದರೆ ಯಾವ ಸರಕಾರವೂ ನಮ್ಮ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ. ನೆಲದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಲಿ: ಕಲ್ಯಾಣ ನಾಡಿನ ಸರ್ವರಲ್ಲಿ ನಾನು ಕೈಮುಗಿದು ಮನವಿ ಮಾಡುತ್ತೇನೆ.
ಈ ಒಂದು ವಿಷಯದಲ್ಲಿ ರಾಜಕೀಯವನ್ನು ಬದಿಗಿಡೋಣ. ಜಾತಿ, ಧರ್ಮ, ಪಕ್ಷದ ಭೇದಗಳನ್ನು ಮರೆತು ಒಂದಾಗೋಣ. ನಮ್ಮ ನೆಲದ ಅಭಿವೃದ್ಧಿಯೇ ನಮ್ಮ ಧ್ಯೇಯ ವಾಗಲಿ. ಒಗ್ಗಟ್ಟಾಗಿ ನಿಂತ ಜನರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಒಂದು ವೇಳೆ ಈ ಒಂದು ಕಾರ್ಯ ಆಗದೇ ಇದ್ದರೆ ನಾವು ಮುಂದಿನ ಪೀಳಿಗೆಗೆ ವಿಷ ಕೊಟ್ಟಂತೆ ಒಂದು ವೇಳೆ ಇದು ಸಾಧ್ಯವಾದರೆ ನಾವು ಉತ್ತಮ ಸಮಾಜವನ್ನು ಕಟ್ಟಿಕೊಟ್ಟಂತೆ ಎಂದು ಭಾವಿಸಿರುವೆ. ಕಳೆದ ಹಲವಾರು ವರ್ಷಗಳಿಂದ ಕೆ.ಎಸ್.ಎನ್. ಜನಕಲ್ಯಾಣ ಸಮಿತಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇದೇ ಸಮಿತಿಯ ನೇತೃತ್ವದಲ್ಲಿ ಸಮಗ್ರ ನೀರಾವರಿ ಹಾಗೂ ಏಮ್ಸ್ ಸ್ಥಾಪನೆಗಾಗಿ ಹೋರಾಟದ ರೂಪುರೇಷೆ ಗಳನ್ನು ಸಿದ್ಧಪಡಿಸಿದ್ದೇವೆ. ಈ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ, ಯಾವುದೇ ವ್ಯಕ್ತಿಯ ವಿರುದ್ಧವೂ ಅಲ್ಲ. ಇದು ರೈತರ ಬದುಕಿಗಾಗಿ, ಬಡವರ ಆರೋಗ್ಯಕ್ಕಾಗಿ, ಯುವಕರ ಭವಿಷ್ಯಕ್ಕಾಗಿ ಮತ್ತು ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಡೆಯುವ ಜನಾಂದೋಲನವಾಗಿದೆ.
ಜುಲೈ 14 ರಂದು ನನ್ನ ಜನ್ಮದಿನ. ಈ ಬಾರಿ ನನಗೆ ಹೂವಿನ ಹಾರ ಬೇಡ. ದೊಡ್ಡ ಬ್ಯಾನರ್ಗಳು ಬೇಡ. ಕೇಕ್ ಕತ್ತರಿಸುವ ಸಂಭ್ರಮವೂ ಬೇಡ. ನನ್ನ ಹುಟ್ಟುಹಬ್ಬವನ್ನು ಸಮಗ್ರ ನೀರಾವರಿ ಮತ್ತು ಏಮ್ಸ್ ಸ್ಥಾಪನೆಗಾಗಿ ಸಂಕಲ್ಪದ ದಿನವನ್ನಾಗಿ ಸಮರ್ಪಿಸು ತ್ತಿದ್ದೇನೆ.
ನೀವು ನನಗೆ ಕೊಡಬೇಕಾದ ದೊಡ್ಡ ಉಡುಗೊರೆ ಒಂದೇ ಸಮಗ್ರ ನೀರಾವರಿಗಾಗಿ ಹೋರಾ ಡುತ್ತೇವೆ, ಏಮ್ಸ್ ಸ್ಥಾಪನೆಗಾಗಿ ಧ್ವನಿ ಎತ್ತುತ್ತೇವೆ ಎಂಬ ಮಾತು. ಅದಕ್ಕಿಂತ ದೊಡ್ಡ ಉಡುಗೊರೆ ನನಗೆ ಬೇರೆ ಯಾವುದೂ ಇಲ್ಲ. ನನ್ನ ಹೋರಾಟ ನಿಲ್ಲುವುದಿಲ್ಲ: ಈ ಪವಿತ್ರ ಮಣ್ಣಿನ ಮುಂದೆ ನಾನು ಒಂದು ಪ್ರತಿಜ್ಞೆ ಮಾಡುತ್ತಿದ್ದೇನೆ. ಸಮಗ್ರ ನೀರಾವರಿ ಜಾರಿಯಾಗುವವರೆಗೆ, ಏಮ್ಸ್ ಸ್ಥಾಪನೆ ಯಾಗುವವರೆಗೆ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ಹಿಂದೆ ಸರಿಯುವುದಿಲ್ಲ. ನಾನು ಮೌನವಾಗುವುದಿಲ್ಲ.
ಈ ಸಂಕಲ್ಪ ಈಡೇರುವವರೆಗೂ ವಿಶ್ರಾಂತಿ ಪಡೆಯು ವುದಿಲ್ಲ. ಇದು ನನ್ನ ವೈಯಕ್ತಿಕ ಹೋರಾಟವಲ್ಲ, ಕಲ್ಯಾಣ ಕರ್ನಾಟಕದ ಕೋಟ್ಯಂತರ ಜನರ ಕನಸಿನ ಹೋರಾಟ ವಾಗಿದೆ. ಇಂದು ನಾವು ಎದ್ದು ನಿಲ್ಲದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ.
ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಇಂದು ಒಗ್ಗಟ್ಟಿನಿಂದ ಹೋರಾಡ ಬೇಕು. ಸಮಗ್ರ ನೀರಾವರಿಗಾಗಿ ಧ್ವನಿ ಎತ್ತೋಣ: ಇತಿಹಾಸವನ್ನು ಬರೆದವರು ಅಧಿಕಾರದಲ್ಲಿದ್ದವರು ಮಾತ್ರ ಅಲ್ಲ; ಜನರ ಹಕ್ಕಿಗಾಗಿ ಹೋರಾಡಿ ದವರೂ ಹೌದು. ಬನ್ನಿ, ಕೈ ಕೈ ಹಿಡಿದು ಭುಜಕ್ಕೆ ಭುಜ ಕೊಟ್ಟು ಸಾಗೋಣ. ಸಮಗ್ರ ನೀರಾವರಿಗಾಗಿ ಧ್ವನಿ ಎತ್ತೋಣ. ಏಮ್ಸ್ ಸ್ಥಾಪನೆಗಾಗಿ ಸಂಕಲ್ಪ ಮಾಡೋಣ. ನವಲಿ ಜಲಾಶಯ ನಿರ್ಮಾಣ ವಾಗುವವರೆಗೆ, ತಿಂಥಣಿ ಜಲಾಶಯ ಸಾಕಾರವಾಗು ವವರೆಗೆ, ರೈತನ ಹೊಲ ಹಸಿರಾಗುವವರೆಗೆ, ಬಡವರಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವವರೆಗೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಹೊಸ ಎತ್ತರ ತಲುಪುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದೇ ನಮ್ಮ ಜೀವನದ ಸಂಕಲ್ಪ. ಇದೇ ನಮ್ಮನಿಮ್ಮೆಲ್ಲರ ಹಕ್ಕಿನ ಹೋರಾಟವಾಗಿದೆ.