ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohan Vishwa Column: ಕಾಂಗ್ರೆಸ್ಸಿನ ಮುಸ್ಲಿಂ ವೋಟ್‌ ಬ್ಯಾಂಕ್‌ ಆಟಕ್ಕೆ ತೆರೆ !

ಕಾಂಗ್ರೆಸ್ ಅವಧಿಯಲ್ಲಿ ದಶಕಗಳ ಕಾಲ ಮುಸ್ಲಿಂ ಯುವಕರು ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಕ ಉದ್ಯೋಗಾವಕಾಶಗಳಿಂದ ವಂಚಿತರಾದರು, ಉದ್ದೇಶಪೂರ್ವಕವಾಗಿ ಈ ಕೆಲಸ ವನ್ನು ಕಾಂಗ್ರೆಸ್ ಮಾಡಿತ್ತು. ಅವರ ಪರಿಸ್ಥಿತಿಯನ್ನು ಬದಲಾಯಿಸಲು ಯಾವುದೇ ದೀರ್ಘ ಕಾಲೀನ ದೃಷ್ಟಿಕೋನವನ್ನು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ತೋರಿಸಲಿಲ್ಲ.

ವೀಕೆಂಡ್‌ ವಿತ್‌ ಮೋಹನ್

ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ದಶಕಗಳ ಕಾಲ ಒಂದೇ ರೀತಿಯ ರಾಜಕೀಯ ನಾಟಕವನ್ನು ದೇಶದ ಮೇಲೆ ಹೇರಲಾಗುತ್ತಿದೆ. ಮುಸ್ಲಿಮರನ್ನು ಸದಾ ಅಪಾಯದಲ್ಲಿರುವ ಸಮುದಾಯ ಎಂದು ಬಿಂಬಿಸಿ, ಅವರ ಭಯವನ್ನು ಮತಗಳಾಗಿ ಪರಿವರ್ತಿಸುವ ರಾಜಕೀಯ ಸತತವಾಗಿ ದಶಕಗಳಿಂದ ನಡೆಯುತ್ತಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷವನ್ನು ಗುಮ್ಮನಂತೆ ಮುಸಲ್ಮಾನರ ಎದುರು ಬಿಂಬಿಸಿ ಸುಳ್ಳು ಸುದ್ದಿಗಳನ್ನು ಹರಡಿ ಆ ಸಮುದಾಯವನ್ನು ಹೆದರಿಸಲಾಗುತ್ತಿದೆ. ಈ ರಾಜಕೀಯದ ಹಿಂದಿರುವ ಪ್ರಮುಖ ವಕ್ತಾರರಾಗಿರುವುದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಎಂಬುದನ್ನು ಇಂದಿನ ನೆಲಮಟ್ಟದ ವಾಸ್ತವತೆ ಸ್ಪಷ್ಟಪಡಿಸುತ್ತದೆ.

ಚುನಾವಣೆ ಸಮೀಪಿಸಿದಾಗ ನಿಮಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದಿಂದ ಅಪಾಯ ಇದೆ ಎಂದು ಸುಳ್ಳು ಹೇಳಿ, ಚುನಾವಣೆ ಮುಗಿದ ನಂತರ ಆ ಸಮುದಾಯದ ಮೂಲಭೂತ ಸಮಸ್ಯೆಗಳನ್ನು ಮರೆತು ಬಿಡುವುದು ಕಾಂಗ್ರೆಸ್ ರಾಜಕೀಯದ ಸ್ಥಿರ ಮಾದರಿಯಾಗಿದೆ.

2006ರಲ್ಲಿ ಹೊರ ಬಂದ ಸಾಚಾರ್‌ ಸಮಿತಿ ವರದಿ ಸಮಾಜದಲ್ಲಿ ಮುಸ್ಲಿಮರ ಹಿಂದುಳಿತ ವನ್ನು ಬಯಲಿಗೆಳೆದರೂ, ಅದನ್ನುಸುಧಾರಿಸಲು ಬೇಕಾದ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಫಲವಾದವು. ಇದರಿಂದ ಅರ್ಥ ಮಾಡಿಕೊಳ್ಳಬೇಕಾದ ಕಠಿಣ ಸತ್ಯವೆಂದರೆ, ಪರಿಹಾರಕ್ಕಿಂತ ಸಮಸ್ಯೆಯ ಅಸ್ತಿತ್ವವೇ ಅವರಿಗೆ ರಾಜಕೀಯ ಲಾಭ ತರುತ್ತಿತ್ತು.

ಇದನ್ನೂ ಓದಿ: Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

ನೆಹರು ಕಾಲದಿಂದಲೂ ಮುಸಲ್ಮಾನರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಮಾಡಲಿಲ್ಲ, ಬದಲಾಗಿ ಅವರನ್ನು ಒಂದೆಡೆಗೆ ಮಾತ್ರ ಸೀಮಿತ ಮಾಡುವ ರಾಜಕೀಯವನ್ನು ಮಾಡುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕೀಯ ವಾಸ್ತವದಲ್ಲಿ ಸಮುದಾಯದ ಸಬಲೀಕರಣಕ್ಕೆ ನೆರವಾಗಲಿಲ್ಲ; ಬದಲಾಗಿ, ಅದು ಕೆಲವರ ಪ್ರತಿನಿಧಿತ್ವವನ್ನು ದೊಡ್ಡಸಾಧನೆ ಎಂದು ತೋರಿಸಿ, ಸಾಮಾನ್ಯಮುಸ್ಲಿಂರ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡಿತು.

ಕಾಂಗ್ರೆಸ್ ಅವಧಿಯಲ್ಲಿ ದಶಕಗಳ ಕಾಲ ಮುಸ್ಲಿಂ ಯುವಕರು ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಕ ಉದ್ಯೋಗಾವಕಾಶಗಳಿಂದ ವಂಚಿತರಾದರು, ಉದ್ದೇಶಪೂರ್ವಕವಾಗಿ ಈ ಕೆಲಸ ವನ್ನು ಕಾಂಗ್ರೆಸ್ ಮಾಡಿತ್ತು. ಅವರ ಪರಿಸ್ಥಿತಿಯನ್ನು ಬದಲಾಯಿಸಲು ಯಾವುದೇ ದೀರ್ಘ ಕಾಲೀನ ದೃಷ್ಟಿಕೋನವನ್ನು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ತೋರಿಸಲಿಲ್ಲ. ಅವರ ರಾಜಕೀಯದ ಮೂಲತತ್ವವೇ ಸ್ಪಷ್ಟವಾಗಿತ್ತು, ಭಯವನ್ನು ಜೀವಂತವಾಗಿಟ್ಟು ಕೊಂಡರೆ ಮುಸಲ್ಮಾನರ ಮತಗಳು ಖಚಿತ.

ಈ ಓಲೈಕೆ ರಾಜಕೀಯದ ಅತ್ಯಂತ ಸ್ಪಷ್ಟ ಉದಾಹರಣೆಯಾಗಿ ‘ಶಾಬಾನೋ’ ಪ್ರಕರಣ ವನ್ನು ಉಲ್ಲೇಖಿಸಬಹುದು. 1985ರಲ್ಲಿ ಸುಪ್ರೀಂಕೋರ್ಟ್ ಶಾಬಾನೋ ಅವರಿಗೆ ಪೋಷಣೆ ಯ ಹಕ್ಕನ್ನು ನೀಡಿದಾಗ, ಅದು ಮುಸ್ಲಿಂ ಮಹಿಳೆಯರ ನ್ಯಾಯ ಮತ್ತು ಗೌರವದ ದಿಕ್ಕಿನಲ್ಲಿ ಮಹತ್ವದ ತೀರ್ಪಾಗಿತ್ತು. ಆದರೆ, ಅಂದಿನ ಪ್ರಧಾನಮಂತ್ರಿಯಾಗಿದ್ದ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಮತಬ್ಯಾಂಕ್ ರಾಜಕೀಯದ ಒತ್ತಡಕ್ಕೆ ಒಳಗಾಗಿ, ನ್ಯಾಯಾಲಯದ ತೀರ್ಪನ್ನು ನಿಷ್ಕ್ರಿಯಗೊಳಿಸಲು ಕಾನೂನು ತಿದ್ದುಪಡಿ ಮಾಡಿತು.

ಅದರ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡು, ಧಾರ್ಮಿಕ ರಾಜಕೀಯಕ್ಕೆ ಮಣಿದಿರುವುದು ಸ್ಪಷ್ಟವಾಗಿತ್ತು. ಕಾಂಗ್ರೆಸ್ ಮಾಡಿದ ಈ ಕೆಲಸ ಮುಸ್ಲಿಂ ಮಹಿಳೆಯರ ನ್ಯಾಯಕ್ಕಿಂತ ಮತಗಳ ಲೆಕ್ಕಾಚಾರವೇ ಮುಖ್ಯಎಂಬುದನ್ನು ದೇಶದ ಮುಂದೆ ಬಹಿರಂಗಪಡಿಸಿದ ಘಟನೆಯಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ಪಾರದರ್ಶಕತೆ ತರುವ‌ ನಿಟ್ಟಿನಲ್ಲಿ ತಿದ್ದುಪಡಿಗಳನ್ನು ಮಾಡಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಾಗ, ಮುಸಲ್ಮಾನರ ಆಸ್ತಿಯನ್ನು ಕೇಂದ್ರ ಸರಕಾರ ಕಸಿದುಕೊಳ್ಳಲಾಗುತ್ತಿದೆಯೆಂಬ ಸುಳ್ಳನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಮುನ್ನೆಲೆಗೆ ತಂದವು.

ಸತ್ಯವೇನೆಂದರೆ ವಕ್ಫ್ ಮಂಡಳಿ ಆಸ್ತಿಯನ್ನು ಕಬಳಿಸಿದ ಕಾಂಗ್ರೆಸ್ ನಾಯಕರ ಹೆಸರನ್ನು ‘ಅನ್ವರ್ಮಾಣಿಪ್ಪಾಡಿ’ ವರದಿ ಹೇಳಿತ್ತು. ಅನ್ವರ್ಮಣಿಪ್ಪಾಡಿ ಯವರು ಹೇಳಿರುವಂತೆ ವರದಿ ಯಲ್ಲಿರುವ ಕಾಂಗ್ರೆಸ್ ನಾಯಕರ ಹೆಸರನ್ನು ಗಮನಿಸಿದರೆ ವಕ್ಫ್ ಮಂಡಳಿಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರದ ಹಿಂದಿದ್ದದ್ದು ಕಾಂಗ್ರೆಸ್ ಎಂಬುದು ಸ್ಪಷ್ಟವಾಗುತ್ತದೆ.

ವಕ್ಫ್ ಮಂಡಳಿ ದೇವರ ಹೆಸರಿನಲ್ಲಿ ಮುಸಲ್ಮಾನರಿಗೆ ನೀಡಿದ ಜಾಗದ ದಾನವೆಂದು ವಾದ ಮಾಡುವ ಕಾಂಗ್ರೆಸ್ ನಾಯಕರಿಗೆ, ಮಂಡಳಿಯಲ್ಲಿರುವ ಜಾಗವನ್ನು ಬಡಮುಸಲ್ಮಾನರಿಗೆ ಯಾಕೆ ನೀಡುತ್ತಿಲ್ಲ? ಕೋಗಿಲುವಿನಲ್ಲಿ ಅಕ್ರಮವಾಗಿ ಶೆಡ್ಹಾಕಿದವರ ಪರವಾಗಿ ಸಹಾನು ಭೂತಿ ತೋರಿದ ಕಾಂಗ್ರೆಸ್ಸಿಗರು ವಕ್ಫ್ ಮಂಡಳಿಯಲ್ಲಿರುವ ಜಾಗವನ್ನು ಮುಸಲ್ಮಾನರಿಗೆ ನೀಡಲು ಯಾಕೆ ಮನಸ್ಸು ಮಾಡಲಿಲ್ಲ.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ಸಬ್ಕಾಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ತತ್ವದೊಂದಿಗೆ ಆಡಳಿತ ನಡೆಸಲು ಪ್ರಾರಂಭಿಸಿದಾಗ, ರಾಜಕೀಯದ ದಿಕ್ಕು ಬದಲಾಗಿದೆ. ಧರ್ಮದ ಬೇಧವಿಲ್ಲದೆ, ಬಡತನವೇ ಮಾನದಂಡವಾಯಿತು, ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಮೂಲಕ ಕೋಟ್ಯಾಂತರ ಬಡವರಿಗೆ ಉಚಿತ ಅನ್ನ ಒದಗಿಸಲಾಯಿತು, ಇದರಿಂದ ಅನೇಕ ಮುಸ್ಲಿಂ ಕುಟುಂಬಗಳು ನೇರವಾಗಿ ಲಾಭ ಪಡೆದವು.

ಉಜ್ವಲ ಯೋಜನೆ ಮೂಲಕ ಮುಸ್ಲಿಂ ಮಹಿಳೆಯರ ಆರೋಗ್ಯಮತ್ತು ಜೀವನಮಟ್ಟದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿತು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಮನೆ ನೀಡಲಾಗಿದ್ದು, ಜನಧನ್ ಯೋಜನೆಯ ಮೂಲಕ ಲಕ್ಷಾಂತರ ಮುಸ್ಲಿಂ ಕುಟುಂಬಗಳು ಮೊದಲ ಬಾರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿವೆ. ಈ ಎಲ್ಲಾ ಯೋಜನೆಗಳು ಧರ್ಮದ ಆಧಾರದ ಮೇಲೆ ಅಲ್ಲ, ಅಗತ್ಯದ ಆಧಾರದ ಮೇಲೆ ಜಾರಿಗೊಂಡವು, ಇದು ನಿಜವಾದ ಸಮಾನತೆಯ ಆಡಳಿತವನ್ನು ಎತ್ತಿ ತೋರಿಸಿತ್ತು.

ಅಂಕಿ-ಅಂಶಗಳೂ ಕೂಡ ಈ ಬದಲಾವಣೆಯನ್ನು ದೃಢಪಡಿಸುತ್ತವೆ, 2015 ರಿಂದ 2021 ರವರೆಗೆ ಬಡಮುಸ್ಲಿಂ ಕುಟುಂಬಗಳಲ್ಲಿ ವಿದ್ಯುತ್, ಬ್ಯಾಂಕಿಂಗ್ ಮತ್ತು ಶೌಚಾಲಯ ಸೌಲಭ್ಯಗಳ ಪ್ರವೇಶ ವೇಗವಾಗಿ ಹೆಚ್ಚಾಗಿದೆ. ಎರಡು ಕೋಟಿಗೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು ಲಭಿಸಿದೆ, ನೇರಲಾಭ ವರ್ಗಾವಣೆ ವ್ಯವಸ್ಥೆಯಿಂದ ಮಧ್ಯವರ್ತಿಗಳ ಪಾತ್ರ ಕಡಿಮೆಯಾಗಿದ್ದು, ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಕೈಗೆತಲುಪಿವೆ, ಕಾಂಗ್ರೆಸ್ ಕಾಲದಲ್ಲಿ ಕಂಡುಬಂದ ಭ್ರಷ್ಟಾಚಾರ ಮತ್ತು ಸೋರಿಕೆ ಸಮಸ್ಯೆಗೆ ಡಿಬಿಟಿ ಸ್ಪಷ್ಟ ಉತ್ತರವಾಗಿದೆ.

ರಾಜಕೀಯಮಟ್ಟದಲ್ಲಿಯೂ ಇದೇ ಬದಲಾವಣೆ ಗೋಚರಿಸುತ್ತಿದೆ, ಉತ್ತರಪ್ರದೇಶದಲ್ಲಿ ಸುಮಾರು 19% ಮುಸ್ಲಿಂ ಜನಸಂಖ್ಯೆಇದ್ದರೂ, ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಗಳಲ್ಲಿಯೂ ಬಿಜೆಪಿ ಅನೇಕ ಕಡೆ ಗೆಲುವು ಸಾಧಿಸಿರುವುದು ಗಮನಾರ್ಹ.

ಕುಂದರ್ಕಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದಶಕಗಳ ಕಾಲ ಅಸ್ತಿತ್ವದಲ್ಲಿದ್ದ ರಾಜಕೀಯ ಸಮೀಕರಣಗಳು ಬದಲಾಗಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ್ತು ಯಾದವ ಸಮುದಾಯದ ಪ್ರಭಾವಿರುವ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮತದಾರರ ಮನೋಭಾವದಲ್ಲಿ ಬದಲಾವಣೆ ಆಗುತ್ತಿರುವುದನ್ನು ಸೂಚಿಸುತ್ತಿದೆ.

ಬಿಹಾರದಲ್ಲಿಯೂ ಇದೇಪ್ರವೃತ್ತಿ ಕಂಡುಬಂದಿದ್ದು, ಮುಸ್ಲಿಂ ಮತದಾರರು ಒಂದೇ ಪಕ್ಷಕ್ಕೆ ಸೀಮಿತವಾಗದೆ ಅಭಿವೃದ್ಧಿ ಮತ್ತು ಆಡಳಿತದ ಆಧಾರದ ಮೇಲೆ ತೀರ್ಮಾನ ತೆಗೆದು ಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಸ್ಪಷ್ಟಸಂದೇಶವಾಗಿದ್ದು, ದಶಕಗಳ ಕಾಲ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ನಡೆಸಿಕೊಂಡು ಬಂದಿದ್ದ ಭಯದ ರಾಜಕೀಯ ಈಗ ಪರಿಣಾಮಕಾರಿ ಯಾಗುತ್ತಿವೆಂಬುದು ಸ್ಪಷ್ಟವಾಗುತ್ತಿದೆ.

ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಮರು ಬಹಿರಂಗವಾಗಿ ಮಾಧ್ಯಮಗಳ ಮುಂದೆ ನಿಂತು ಕಾಂಗ್ರೆಸ್ಸಿನ ಓಲೈಕೆ ರಾಜಕೀಯದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೋದಿಯವರ ಹೆಸರೇಳಿ ಕೊಂಡು ತಮ್ಮನ್ನು ಕಾಂಗ್ರೆಸ್ ಹೆದರಿಸಿದರ ಬಗ್ಗೆ ಬಹಿರಂಗವಾಗಿ ಮಾತನಾಡಿ ದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯದಲ್ಲಿ ಮುಸಲ್ಮಾನರನ್ನು ದೇಶದಿಂದ ಓಡಿಸುತ್ತಾರೆ ಎಂಬ ಸುಳ್ಳುಸುದ್ದಿ ಹಬ್ಬಿಸಿದ್ದರು. ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಒಬ್ಬ ಭಾರತೀಯ ಮುಸಲ್ಮಾನನ ಪೌರತ್ವನ್ನು ತೆಗೆದು ಹಾಕಿಲ್ಲವೆಂಬುದು ಸ್ಪಷ್ಟವಾಗಿ ತಿಳಿದು, ಕಾಂಗ್ರೆಸ್ಸಿನ ಸುಳ್ಳಿನಕೋಟೆ ಕುಸಿದಿದೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ತ್ರಿವಳಿ ತಲಾಖ್ ರದ್ದುಪಡಿಸುವ ನಿರ್ಧಾರವು ಈ ಬದಲಾವಣೆಯ ಮತ್ತೊಂದು ಪ್ರಮುಖ ಘಟ್ಟವಾಗಿದೆ. ದಶಕಗಳ ಕಾಲ ಅನ್ಯಾಯ ಅನುಭವಿಸಿದ್ದ ಮುಸ್ಲಿಂ ಮಹಿಳೆಯರಿಗೆ ಈ ಕ್ರಮ ನ್ಯಾಯ ಒದಗಿಸಿದೆ. ಆದರೆ, ಈ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ವಿರೋಧಿಸಿದ್ದು, ಅವರ ರಾಜಕೀಯದ ನಿಜಸ್ವರೂಪ ಮತ್ತೊಮ್ಮೆ ಬಯಲಿಗೆಳೆದಿತ್ತು.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಮಹಿಳೆಯರ ಹಕ್ಕುಗಳಿಗಿಂತ ಮತಗಳ ಲೆಕ್ಕಾಚಾರವೇ ಮುಖ್ಯ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿತ್ತು. ಇಂದಿನ ಭಾರತದಲ್ಲಿ ಹೊಸ ರಾಜಕೀಯ ವಾಸ್ತವತೆ ನಿರ್ಮಾಣವಾಗಿದೆ, ಮತಬ್ಯಾಂಕ್ ರಾಜಕೀಯದಿಂದ ಅಭಿವೃದ್ಧಿ ಆಧಾರಿತ ಆಡಳಿತದತ್ತ ದೇಶ ಸಾಗುತ್ತಿದೆ.

ಕಾಂಗ್ರೆಸ್ ಮಾದರಿಯ ಭಯ, ಓಲೈಕೆ ಮತ್ತು ವಿಭಜನೆಯ ರಾಜಕೀಯ ನಿಧಾನವಾಗಿ ಹಿಂಜರಿಯುತ್ತಿದ್ದರೆ, ನರೇಂದ್ರ ಮೋದಿ ಮಾದರಿಯ ಸಮಾನ ಅವಕಾಶ, ನೇರ ಲಾಭ ಮತ್ತು ಸಬಲೀಕರಣದ ಆಡಳಿತ ಬಲಪಡುತ್ತಿದೆ. ಮುಸ್ಲಿಮರು ಈಗ ಕೇವಲ ಮತಬ್ಯಾಂಕ್‌ಅಲ್ಲ; ತಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವಲ್ಲಿ ಹೆಚ್ಚು ಜಾಗೃತರಾಗುತ್ತಿದ್ದಾರೆ.

ಅಂತಿಮವಾಗಿ ಉಳಿಯುವ ಪ್ರಶ್ನೆಯೆಂದರೆ, ಮುಸ್ಲಿಮರ ಹೆಸರಿನಲ್ಲಿ ದಶಕಗಳ ಕಾಲ ರಾಜಕೀಯ ಲಾಭ ಪಡೆದವರು ಯಾರು ಮತ್ತು ಅವರ ಬದುಕಿನಲ್ಲಿ ನಿಜವಾದ ಬದಲಾ ವಣೆ ತಂದವರು ಯಾರು? ಉತ್ತರ ಸ್ಪಷ್ಟವಾಗಿದೆ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಭಯ ವನ್ನು ರಾಜಕೀಯ ಸಾಧನವಾಗಿ ಬಳಸಿದರೆ, ನರೇಂದ್ರಮೋದಿ ನೇತೃತ್ವದ ಸರಕಾರ ಎಲ್ಲರನ್ನೂ ಒಳಗೊಂಡಂತ ಅಭಿವೃದ್ಧಿಯನ್ನು ನೆಲಮಟ್ಟಕ್ಕೆ ತಲುಪಿಸಿದೆ.

ಮೋಹನ್‌ ವಿಶ್ವ

View all posts by this author