ಅಭಿಮತ
ರಾಜನಾಥ್ ಸಿಂಗ್
ಯುದ್ಧದಲ್ಲಿ ಮೊದಲು ಬಲಿಯಾಗುವುದೇ ಸತ್ಯ ಎಂಬ ಮಾತಿದೆ. ಈಗ ರಾಜಕೀಯ ಸಂಘರ್ಷ ಗಳಲ್ಲಿಯೂ ಈ ಮಾತು ಹೆಚ್ಚು ಪ್ರಸ್ತುತವಾಗುತ್ತಿದೆ. ಏಕೆಂದರೆ, ಸಾರ್ವಜನಿಕ ಚರ್ಚೆಗಳಲ್ಲಿ ‘ಸತ್ಯೋತ್ತರ ರಾಜಕಾರಣ’ (Post- Truth Politics) ಎಂಬುದು ಪ್ರಮುಖ ವಿದ್ಯಮಾನವಾಗಿ ಹೊರಹೊಮ್ಮುತ್ತಿದೆ. ಸತ್ಯೋತ್ತರ ರಾಜಕಾರಣದಲ್ಲಿ ವಸ್ತುನಿಷ್ಠ ಸತ್ಯಗಳು ಮತ್ತು ಪರಿಶೀಲಿಸ ಬಹುದಾದ ಸಾಕ್ಷ್ಯಗಳಿಗಿಂತ ಸುಳ್ಳು ಪ್ರಚಾರ, ತಿರುಚಿದ ನಿರೂಪಣೆಗಳು ಹಾಗೂ ತರ್ಕವಿಲ್ಲದ ಭಾವನಾತ್ಮಕ ಮನವಿಗಳಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತದೆ.
ತರ್ಕಬದ್ಧ ಚರ್ಚೆಯ ಸ್ಥಾನವನ್ನು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಮಾತುಗಾರಿಕೆ ಆಕ್ರಮಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಶೈಕ್ಷಣಿಕ ಚರ್ಚೆಗಳಿಗಷ್ಟೇ ಸೀಮಿತವಾಗಿದ್ದ ಸತ್ಯೋತ್ತರ ಪರಿಕಲ್ಪನೆ ಈಗ ದೈನಂದಿನ ರಾಜಕಾರಣದ ಭಾಗವಾಗಿದೆ. ಜನರ ಗ್ರಹಿಕೆಯನ್ನು ದಿಕ್ಕು ತಪ್ಪಿಸಲು ರೂಪಿಸುವ ತಪ್ಪುಮಾಹಿತಿ ಅಭಿಯಾನಗಳನ್ನು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಲು ಮಾತ್ರವಲ್ಲದೆ, ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಂದಿಸಲೂ ಹೆಚ್ಚಾಗಿ ಬಳಸ ಲಾಗುತ್ತಿದೆ.
ಆರೋಪಗಳನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಅವುಗಳನ್ನು ಮತ್ತೆ ಮತ್ತೆ ಪುನರುಚ್ಚರಿಸಲಾಗುತ್ತದೆ; ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯವು ಕೇವಲ ಮೊದಲ ಬಲಿಯಾಗುವುದಲ್ಲ, ಅಂತಿಮವಾಗಿ ಸಂಪೂರ್ಣವಾಗಿ ಬಲಿಯಾಗುವ ಅಪಾಯವೂ ಎದುರಾಗುತ್ತದೆ.
ಇದನ್ನೂ ಓದಿ: Hari Paraak Column: ದನಗಳಿಗೆ ಚಿಕಿತ್ಸೆ ಮಾಡೋ ಪಶುವೈದ್ಯ- ದನವಂತ್ರಿ
ಭಾರತದ ರಾಜಕೀಯ ಚರ್ಚೆಗಳೂ ಈ ಸತ್ಯೋತ್ತರ ವಿದ್ಯಮಾನದಿಂದ ಹೊರತಾಗಿಲ್ಲ. ವಿರೋಧ ಪಕ್ಷಗಳ ಕೆಲವು ವರ್ಗಗಳು ಕೃತಕ ಆಕ್ರೋಶವನ್ನು ಸೃಷ್ಟಿಸುವುದು, ಅಪಪ್ರಚಾರ ನಡೆಸುವುದು ಮತ್ತು ತಪ್ಪು ಮಾಹಿತಿಯನ್ನು ಅಸ್ತ್ರವಾಗಿಸಿಕೊಂಡು ಅರಾಜಕತೆ ಹರಡುವುದರಲ್ಲಿ ತೊಡಗಿರು ವಂತೆ ಕಾಣುತ್ತಿದೆ.
ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ತಮ್ಮ ಸ್ವಾರ್ಥಪರ ರಾಜಕೀಯ ಗುರಿಗಳಿಗೆ ಅವು ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ಲೇಖನದ ಉದ್ದೇಶ ವಿರೋಧ ಪಕ್ಷಗಳ ವಿರುದ್ಧ ದೀರ್ಘ ದೋಷಾರೋಪಣೆ ಮಾಡುವು ದಲ್ಲ. ಸಾಂವಿಧಾನಿಕ ಸಂಸ್ಥೆಗಳು ಟೀಕೆಗೆ ಅತೀತವಾಗಿವೆ ಎಂದು ಪ್ರತಿಪಾದಿಸುವುದೂ ಅಲ್ಲ. ಭಿನ್ನಮತವೇ ಪ್ರಜಾಪ್ರಭುತ್ವದ ಜೀವಾಳ. ಆದರೆ, ಭಿನ್ನಮತ ವ್ಯಕ್ತಪಡಿಸುವ ಸ್ವಾತಂತ್ರ್ಯವು ಸುಳ್ಳುಗಳನ್ನು ಹರಡಲು ನೀಡಿದ ಪರವಾನಗಿಯಲ್ಲ.
ಉತ್ತಮ ನೀತಿಗಳನ್ನು ರೂಪಿಸಲು ಭಿನ್ನಾಭಿಪ್ರಾಯಗಳು ಅಗತ್ಯ. ಆದರೆ, ವಾಸ್ತವಾಂಶಗಳ ಪರಿಶೀಲನೆ ಯಲ್ಲಿ ನಿಲ್ಲದ ಆರೋಪಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ವಿಶ್ವಾಸದ ಮೇಲೆ ನಿರಂತರವಾಗಿ ಪ್ರತೀಕಾರದ ದಾಳಿ ನಡೆಸಲು ಅವು ಅವಕಾಶ ನೀಡುವುದಿಲ್ಲ. ಆದ್ದರಿಂದ, ಇಂತಹ ಸುಳ್ಳುಗಳನ್ನು ಪ್ರಶ್ನಿಸುವುದು ಮತ್ತು ಕೃತಕ ಅಪನಂಬಿಕೆಯನ್ನು ಸೃಷ್ಟಿಸುವ ಸಿನಿಕ ರಾಜಕಾರಣ ದಿಂದ ಕುಂದಿರುವ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಮರು ಸ್ಥಾಪಿಸುವುದೇ ಈ ಲೇಖನದ ಉದ್ದೇಶ.
ಜನರು ತಮ್ಮನ್ನು ಪದೇಪದೆ ತಿರಸ್ಕರಿಸುತ್ತಿದ್ದಾರೆ ಎಂಬ ವಾಸ್ತವವನ್ನು ಮರೆಮಾಚಲು ವಿರೋಧ ಪಕ್ಷಗಳ ಕೆಲವು ವರ್ಗಗಳು ಚುನಾವಣಾ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಮೇಲೆ ಹೇಗೆ ದಾಳಿ ನಡೆಸುತ್ತಿವೆ ಎಂಬುದನ್ನು ಗಮನಿಸಿದಾಗ ಈ ವಿಷಯದ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರು ವಿಷಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆಯ ಕುರಿತು ಪದೇಪದೆ ಮಾಡಲಾಗುತ್ತಿರುವ ಆರೋಪಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸುತ್ತಲಿನ ವಿವಾದ ಹಾಗೂ ಭಾರತದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕುಂದಿಸಲು ನಡೆಸಲಾಗುತ್ತಿರುವ ನಿರ್ಲಜ್ಜ ಪ್ರಯತ್ನಗಳು. ಮೊದಲನೆಯದಾಗಿ, ವಿದ್ಯುನ್ಮಾನ ಮತಯಂತ್ರಗಳ ವಿಚಾರವನ್ನು ನೋಡೋಣ.
ವಿರೋಧ ಪಕ್ಷಗಳು ಇವಿಎಂಗಳಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂಬ ಆರೋಪಗಳನ್ನು ಪದೇಪದೆ ಮಾಡುತ್ತಿವೆ. ಸುಪ್ರೀಂ ಕೋರ್ಟ್ ಇಂತಹ ಆಕ್ಷೇಪಣೆಗಳನ್ನು ಹಲವು ಸಂದರ್ಭಗಳಲ್ಲಿ ಪರಿಶೀಲಿಸಿದೆ. ಅಂತಿಮವಾಗಿ, 2024ರಲ್ಲಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರ್ಸಸ್ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಸಂಬಂಧದ ಅನುಮಾನಗಳಿಗೆ ತೆರೆ ಎಳೆಯಿತು.
ಕಾಗದದ ಮತಪತ್ರಗಳ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿತು. ‘ಯಾವುದೇ ಸಮರ್ಪಕ ದಾಖಲೆ ಅಥವಾ ದತ್ತಾಂಶಗಳಿಲ್ಲದೆ ಕೇವಲ ಅನುಮಾನ ಮತ್ತು ಶಂಕೆಗಳ ಆಧಾರದಲ್ಲಿ ಪದೇಪದೆ ಸವಾಲು ಹಾಕುವುದು ಅತ್ಯಂತ ಖಂಡನೀಯ ಮತ್ತು ಅನಪೇಕ್ಷಿತ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ಆದರೆ, ನ್ಯಾಯಾಲಯದ ಈ ಸ್ಪಷ್ಟ ನಿಲುವೂ ವಿರೋಧ ಪಕ್ಷಗಳು ಅದೇ ಸುಳ್ಳುಗಳನ್ನು ಮತ್ತೆ ಮತ್ತೆ ಹೇಳುವುದನ್ನು ತಡೆಯಲಿಲ್ಲ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಥವಾ ಎಸ್ಐಆರ್ ಸುತ್ತಲಿನ ವಿವಾದವು ಸತ್ಯೋತ್ತರ ಯುಗದಲ್ಲಿ ಸಂಕುಚಿತ ರಾಜಕೀಯ ಹಿತಾಸಕ್ತಿ ಗಳಿಗಾಗಿ ಕಾನೂನು ಬದ್ಧವೂ ಆಡಳಿತಾತ್ಮಕವಾಗಿ ಸಮರ್ಥನೀಯವೂ ಆದ ಪ್ರಕ್ರಿಯೆಯನ್ನು ಹೇಗೆ ಅಪಪ್ರಚಾರಕ್ಕೆ ಗುರಿಪಡಿಸಲಾಗುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
2025ರಲ್ಲಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರ್ಸಸ್ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯೇ ಮೂಲಾಧಾರ ಎಂಬುದನ್ನು ದೃಢಪಡಿಸಿತು. ಮತದಾರರ ಪಟ್ಟಿಯ ನಿಖರತೆ, ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶವು ಕೇವಲ ಕಾನೂನುಬದ್ಧವಾದುದಷ್ಟೇ ಅಲ್ಲ, ಚುನಾವಣಾ ಆಯೋಗಕ್ಕೆ ವಹಿಸಲಾಗಿರುವ ಸಾಂವಿಧಾನಿಕ ಹೊಣೆಗಾರಿಕೆಯ ಅವಿಭಾಜ್ಯ ಅಂಗವೂ ಆಗಿದೆ ಎಂದು ನ್ಯಾಯಾಲಯ ಹೇಳಿತು.
ಮತದಾರರ ಪಟ್ಟಿಯ ಪರಿಷ್ಕರಣೆಗೆ ನೀಡಲಾಗಿರುವ ಕಾರಣಗಳು ವಿಶ್ವಾಸಾರ್ಹ ಚುನಾವಣಾ ಪ್ರಕ್ರಿಯೆ ಯನ್ನು ಕಾಪಾಡುವ ಉದ್ದೇಶದೊಂದಿಗೆ ನೇರ ಮತ್ತು ತರ್ಕಬದ್ಧ ಸಂಬಂಧ ಹೊಂದಿವೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಅಭಿಪ್ರಾಯಗಳು ಒಂದು ಮೂಲಭೂತ ತತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತವೆ. ಮತದಾನದ ಹಕ್ಕನ್ನು ರಕ್ಷಿಸುವುದೆಂದರೆ ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ಕಾಪಾಡುವುದು ಮಾತ್ರವಲ್ಲ; ಮತದಾರರ ಪಟ್ಟಿಗಳು ನಿಖರವಾಗಿ, ಸಂಪೂರ್ಣವಾಗಿ ಮತ್ತು ವಿಶ್ವಾಸಾರ್ಹ ವಾಗಿ ಇರುವುದನ್ನೂ ಖಚಿತಪಡಿಸಿಕೊಳ್ಳುವುದು.
ಇವಿಎಂ ಮತ್ತು ಎಸ್ಐಆರ್ ವಿಚಾರಗಳ ಹೊರತಾಗಿಯೂ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯ ಘನತೆಯನ್ನು ಕುಂದಿಸಲು, ಆ ಮೂಲಕ ಭಾರತದ ಚುನಾವಣಾ ಆಯೋಗವೆಂಬ ಸಂಸ್ಥೆಯ ಮೇಲಿನ ವಿಶ್ವಾಸವನ್ನು ಹಾಳು ಮಾಡಲು ನಿರಂತರ ಅಭಿಯಾನ ನಡೆಸಲಾಗುತ್ತಿದೆ. ಸುಮಾರು ಏಳು ದಶಕಗಳ ಕಾಲ ಕಾಂಗ್ರೆಸ್ ಸರ್ಕಾರಗಳು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯ ಮೇಲೆ ಕಾರ್ಯಾಂಗದ ನಿಯಂತ್ರಣವನ್ನು ಉಳಿಸಿಕೊಂಡಿದ್ದವು.
ನಮ್ಮ ಸರ್ಕಾರ ಈ ವ್ಯವಸ್ಥೆಯನ್ನು ಬದಲಾಯಿಸಿತು. ವಿರೋಧ ಪಕ್ಷದ ನಾಯಕನನ್ನೂ ಒಳಗೊಂಡ ಬಹುಸದಸ್ಯರ ಆಯ್ಕೆ ಸಮಿತಿಯ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಸಾಂಸ್ಥಿಕ ಗೊಳಿಸಿತು. ಇತರ ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ಗೌರವಿಸುವ ವಿಚಾರದಲ್ಲಿಯೂ ಕಾಂಗ್ರೆಸ್ನ ಹಿಂದಿನ ದಾಖಲೆಗಳು ಅಷ್ಟೇನೂ ಪ್ರೇರಣಾದಾಯಕವಾಗಿಲ್ಲ. 1951ರಲ್ಲಿ ಅಂದಿನ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವನ್ನು ಬದಲಾಯಿಸಲು ಮೊದಲ ಸಂವಿಧಾನ ತಿದ್ದುಪಡಿಯನ್ನು ಜಾರಿಗೆ ತಂದಿತು. ಆ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಿತು. ತುರ್ತು ಪರಿಸ್ಥಿತಿಯ ಸಂದರ್ಭ ದಲ್ಲಿ ಸಂವಿಧಾನ ತಿದ್ದುಪಡಿಗಳನ್ನೇ ಸರ್ಕಾರದ ಹಿತಾಸಕ್ತಿಗಳನ್ನು ರಕ್ಷಿಸುವ ಅಸ್ತ್ರಗಳನ್ನಾಗಿ ಬಳಸಲಾಯಿತು.
ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿಡ ಲಾಯಿತು. ಪ್ರಧಾನ ಮಂತ್ರಿಯ ಚುನಾವಣೆಯನ್ನೂ ನ್ಯಾಯಾಂಗದ ಪರಿಶೀಲನೆಗೆ ಒಳಪಡದಂತೆ ಮಾಡಲಾಯಿತು. ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರಿಗೆ ವ್ಯಾಪಕ ಕಾನೂನು ರಕ್ಷಣೆ ನೀಡಲಾಯಿತು. ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಮೊಟಕುಗೊಳಿಸಲಾಯಿತು.
ಸಾಂವಿಧಾನಿಕ ಸುಧಾರಣೆಯ ಸಾಧನವಾಗಬೇಕಿದ್ದ ತಿದ್ದುಪಡಿಯ ಅಧಿಕಾರವು ಕಾರ್ಯಾಂಗದ ಅಧಿಕಾರ ವನ್ನು ವಿಸ್ತರಿಸುವ ಸಾಧನವಾಗಿ ಮಾರ್ಪಟ್ಟಿತು. ಆ ಸಂದರ್ಭದಲ್ಲಿ ಸಂಸ್ಥೆಗಳ ಘನತೆ ಯನ್ನು ತುಳಿಯುವುದು ಮಾತ್ರವಲ್ಲ, ನಾಗರಿಕರ ಮಾನವ ಹಕ್ಕುಗಳನ್ನೂ ಉಲ್ಲಂಘಿಸ ಲಾಯಿತು. ಅಂದಿನ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ನಿರೇನ್ ಡೇ ಅವರು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಿದ ವಾದವನ್ನು ನೆನಪಿಸಿಕೊಳ್ಳಿ.
ವೈಯಕ್ತಿಕ ದ್ವೇಷದಿಂದ ಪೊಲೀಸ್ ಅಧಿಕಾರಿಯೊಬ್ಬ ನಿರಪರಾಧಿಯನ್ನು ಕೊಂದರೂ, ಆ ವ್ಯಕ್ತಿಯ ಕುಟುಂಬ ನ್ಯಾಯಾಲಯದಿಂದ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು. ಈಗ ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಿಂದ ಸಂವಿಧಾನಕ್ಕೆ ನೀಡಲಾಗುತ್ತಿರುವ ಗೌರವದೊಂದಿಗೆ ಹೋಲಿಸಿ ನೋಡಿ.
ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ ಅಂಗೀಕರಿಸಲ್ಪಟ್ಟ 99ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನಮ್ಮ ಸರ್ಕಾರ ಆ ತೀರ್ಪನ್ನು ಗೌರವಿಸಿತು. ಹಿಂಬಾಗಿಲಿನ ಶಾಸನಾತ್ಮಕ ಕ್ರಮಗಳ ಮೂಲಕ ತೀರ್ಪನ್ನು ತಲೆಕೆಳಗಾಗಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಸಂವಿಧಾನ ಮತ್ತು ಅದರ ತತ್ವಗಳ ಮೇಲಿನ ಇದೇ ಗೌರವವು ದೇಶ ಎದುರಿಸಿದ ಕೆಲವು ಅತ್ಯಂತ ಮಹತ್ವದ ವಿಷಯಗಳಲ್ಲಿಯೂ ನಮ್ಮ ನಿಲುವಿಗೆ ಮಾರ್ಗದರ್ಶನ ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೇ ರಾಮಮಂದಿರ ನಿರ್ಮಾಣ ಆರಂಭವಾಯಿತು. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ, ಸುಪ್ರೀಂ ಕೋರ್ಟ್ ಆ ನಿರ್ಧಾರವನ್ನು ಎತ್ತಿ ಹಿಡಿಯಿತು. ಆದರೂ ವಿರೋಧ ಪಕ್ಷಗಳ ಅನೇಕರು ಆ ತೀರ್ಪನ್ನು ಒಪ್ಪಿಕೊಳ್ಳಲಿಲ್ಲ. ಕಾಂಗ್ರೆಸ್ನ ದಾಳಿಯಿಂದ ಶಾಸಕಾಂಗದ ಪ್ರಕ್ರಿಯೆಗಳು ಮತ್ತು ಸಾಂವಿಧಾನಿಕ ಹುzಗಳೂ ಹೊರತಾಗಿಲ್ಲ.
ವಿರೋಧ ಪಕ್ಷದ ನಾಯಕನಿಗೆ ನಿಯಮಗಳನ್ನು ಪಾಲಿಸುವಂತೆ ಲೋಕಸಭಾಧ್ಯಕ್ಷರು ಸೂಚಿಸಿದ ಕಾರಣಕ್ಕೇ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು. ಸತ್ಯೋತ್ತರ ರಾಜಕಾರಣವು ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಷಯಗಳಿಗೂ ವ್ಯಾಪಿಸಿದೆ. 2019ರಲ್ಲಿ ರಫೇಲ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ನಾಯಕರೊಬ್ಬರು ತಪ್ಪಾಗಿ ಒಂದು ಘೋಷಣೆಯನ್ನು ಜೋಡಿಸಿದ್ದರು. ನಂತರ ನ್ಯಾಯಾಂಗ ನಿಂದನೆ ಪ್ರಕ್ರಿಯೆಯಲ್ಲಿ ಅವರು ಬೇಷರತ್ ಕ್ಷಮೆಯಾಚಿಸಿದರು.
2025ರ ಆಗಸ್ಟ್ನಲ್ಲಿ ಭಾರತೀಯ ಭೂಪ್ರದೇಶದ ಆಕ್ರಮಣದ ಕುರಿತು ರಾಹುಲ್ ಗಾಂಧಿ ಮಾಡಿದ್ದ ಹೇಳಿಕೆಗಳ ಆಧಾರವನ್ನೂ ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಆ ಆರೋಪಗಳನ್ನು ಸಮರ್ಥಿಸುವ ವಿಶ್ವಾಸಾರ್ಹ ಸಾಕ್ಷ್ಯಗಳು ಯಾವುವು ಎಂದು ನ್ಯಾಯಾಲಯ ಕೇಳಿತು. ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು ನಮ್ಮ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಂಸತ್ತು ಅಂಗೀಕರಿಸಿದ್ದ ಮೂರು ಕೃಷಿ ಕಾಯ್ದೆಗಳ ಕುರಿತು ಜನರು ಆತಂಕ ವ್ಯಕ್ತಪಡಿಸಿದಾಗ, ನಾವು ಆ ಆತಂಕಗಳಿಗೆ ಕಿವಿಗೊಟ್ಟೆವು.
ಅಷ್ಟೇ ಅಲ್ಲ, ವಿಶಾಲ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆ ಕಾಯ್ದೆಗಳನ್ನೇ ಹಿಂಪಡೆದೆವು. ಪ್ರಜಾಪ್ರಭು ತ್ವದಲ್ಲಿ ಯಾವುದೇ ನಿರ್ಧಾರವನ್ನು ಒಪ್ಪದಿರುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ, ಅಂತಹ ಭಿನ್ನಾಭಿಪ್ರಾ ಯಗಳು ಸುಳ್ಳುಗಳ ಮೇಲೆ ಆಧಾರಿತ ವಾಗಿರಬಾರದು. ಅವುಗಳ ಉದ್ದೇಶ ಅವ್ಯವಸ್ಥೆ ಮತ್ತು ಅರಾಜಕತೆಯನ್ನು ಸೃಷ್ಟಿಸುವುದಾಗಿರ ಬಾರದು.
ಸಂವಿಧಾನ ರಚನಾ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಇಲ್ಲಿ ಸ್ಮರಿಸಬೇಕು. ‘ಅರಾಜಕತೆಯ ವ್ಯಾಕರಣ’ (Grammar of Anarchy) ಎಂದು ಪ್ರಸಿದ್ಧವಾಗಿರುವ ಆ ಭಾಷಣದಲ್ಲಿ ಅಂಬೇಡ್ಕರ್ ಅವರು ಅಸಾಂವಿಧಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಉಂಟಾಗುವ ಅಪಾಯಗಳ ಕುರಿತು ಎಚ್ಚರಿಸಿದ್ದರು. ಅವರ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ವಿರೋಧ ಪಕ್ಷಗಳ ನಾಯಕರು ಆ ಐತಿಹಾಸಿಕ ಭಾಷಣವನ್ನು ಓದಬೇಕು.
ಪ್ರಜಾಪ್ರಭುತ್ವದಲ್ಲಿ ಭಿನ್ನಮತ ಮತ್ತು ಅರಾಜಕತೆಯ ನಡುವಿನ ಅತ್ಯಂತ ಮಹತ್ವದ ವ್ಯತ್ಯಾಸ ವನ್ನು ಅರ್ಥ ಮಾಡಿಕೊಳ್ಳಬೇಕು. ಸದೃಢ ಪ್ರಜಾಪ್ರಭುತ್ವದ ಅಡಿಪಾಯ ಕೇವಲ ರಾಜಕೀಯ ಸಮಾನತೆಯಲ್ಲಿಲ್ಲ; ಆರ್ಥಿಕ ಮತ್ತು ಸಾಮಾ ಜಿಕ ನ್ಯಾಯದಲ್ಲಿಯೂ ಇದೆ ಎಂಬುದು ನಮ್ಮ ನಂಬಿಕೆ. ನಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳಿಗೆ ಈ ತತ್ವವೇ ಆಧಾರವಾಗಿದೆ. ಅದೇ ಸಂದರ್ಭದಲ್ಲಿ, ಸ್ಥಿರ ಮತ್ತು ಪ್ರಬುದ್ಧ ಪ್ರಜಾಪ್ರ ಭುತ್ವಕ್ಕಾಗಿ ಭಿನ್ನಮತಗಳು ಹಾಗೂ ಆತಂಕ ಗಳನ್ನು ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ವ್ಯಕ್ತಪಡಿಸುವುದು ಅತ್ಯಂತ ಅಗತ್ಯ.
ಅಂತಹ ಸಮಸ್ಯೆಗಳನ್ನು ಅವ್ಯವಸ್ಥೆ ಸೃಷ್ಟಿಸುವ ಮೂಲಕವಲ್ಲ, ಸಂವಾದ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಬಗೆಹರಿಸಿಕೊಳ್ಳಬೇಕು. ರಾಜಕೀಯ ಸೋಲುಗಳಿಂದ ಉಂಟಾಗುವ ಹತಾಶೆಗೆ ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳಾಗಲಿ, ಭಾರತದ ಪ್ರಗತಿಯಾಗಲಿ ಒತ್ತೆಯಾಳಾಗದಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ತಮ್ಮದೇ ರಾಜಕೀಯ ಹಿನ್ನಡೆಗಳಿಗೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಇಡೀ ವ್ಯವಸ್ಥೆಯ ವಿಶ್ವಾಸಾರ್ಹತೆ ಯನ್ನು ಹಾಳು ಮಾಡಲು ಮುಂದಾಗುವವರಿಂದ ದೇಶದ ಪ್ರಗತಿಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ.
(ಲೇಖಕರು ರಕ್ಷಣಾ ಸಚಿವರು, ಕೇಂದ್ರ ಸರ್ಕಾರ)