ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Jyothi Shankar Column: ವರ್ತಮಾನದಲ್ಲಿ ಚೈತನ್ಯ ಪ್ರಜ್ಞೆ

ಈ ಕಲಿಯುಗದಲ್ಲಿ ಮೋಕ್ಷಮಾರ್ಗವೆಂದರೆ ಹರಿನಾಮ ಮಾತ್ರ, ಬೇರಾವುದೇ ಮಾರ್ಗವಿಲ್ಲ ಎಂದು ಜಗತ್ತಿಗೆ ತಿಳಿಸಿದ ಮಹಾಸಂತರು ಶ್ರೀ ಚೈತನ್ಯ ಮಹಾಪ್ರಭುಗಳು. ಹದಿನೈದನೇ ಶತಮಾನದ ಕೊನೆಯಲ್ಲಿ 18-02-1486ರಲ್ಲಿ ನವದ್ವೀಪದಲ್ಲಿ ಜನಿಸಿ ನಲವತ್ತೆಂಟು ವರ್ಷ ಮಾತ್ರ ಜೀವಿಸಿ ಕಣ್ಮರೆಯಾದ ಶ್ರೀ ಚೈತನ್ಯರು ವಿಶ್ವದ ಜೀವಿಗಳಿಗೆ ನೀಡಿದ ಕೊಡುಗೆ ಅಪಾರ ವಾದದ್ದು.

ದಿವ್ಯ ಚೈತನ್ಯ

ಡಾ.ಜ್ಯೋತಿ ಶಂಕರ್‌

(ಇಂದು ಶ್ರೀ ಚೈತನ್ಯ ಮಹಾಪ್ರಭುಗಳ ಜಯಂತಿ)

ಹರೇರ್ನಾಮ ಹರೇರ್ನಾಮ

ಹರೇರ್ನಾಮೈವ ಕೇವಲಮ್ |

ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ ||

ಈ ಕಲಿಯುಗದಲ್ಲಿ ಮೋಕ್ಷಮಾರ್ಗವೆಂದರೆ ಹರಿನಾಮ ಮಾತ್ರ, ಬೇರಾವುದೇ ಮಾರ್ಗವಿಲ್ಲ ಎಂದು ಜಗತ್ತಿಗೆ ತಿಳಿಸಿದ ಮಹಾಸಂತರು ಶ್ರೀ ಚೈತನ್ಯ ಮಹಾಪ್ರಭುಗಳು. ಹದಿನೈದನೇ ಶತಮಾನದ ಕೊನೆಯಲ್ಲಿ 18-02-1486ರಲ್ಲಿ ನವದ್ವೀಪದಲ್ಲಿ ಜನಿಸಿ ನಲವತ್ತೆಂಟು ವರ್ಷ ಮಾತ್ರ ಜೀವಿಸಿ ಕಣ್ಮರೆಯಾದ ಶ್ರೀ ಚೈತನ್ಯರು ವಿಶ್ವದ ಜೀವಿಗಳಿಗೆ ನೀಡಿದ ಕೊಡುಗೆ ಅಪಾರವಾದದ್ದು.

ಅವರು ಬದುಕಿದ ರೀತಿಯೇ ರೋಚಕವಾದದ್ದು. ಪ್ರತಿಕ್ಷಣದಲ್ಲೂ ಮಾನವನ ಉದ್ಧಾರ ಹೇಗಾಗಬೇಕೆನ್ನುವ ಚಿಂತನೆಯಲ್ಲಿಯೇ ತೊಡಗಿಕೊಂಡಿದ್ದ ಚೈತನ್ಯ ಪ್ರಭುಗಳು, ಅಧ್ಯಾತ್ಮ -ಸಾಧನೆ ತಪಸ್ಸಿನಂಥ ಕ್ಲಿಷ್ಟವಾದ ಸಂಗತಿಗಳು, ಎಲ್ಲರಿಗೂ, ಎಲ್ಲ ಸಮಯದಲ್ಲೂ ಸಾಧ್ಯವಾಗುವುದಿಲ್ಲವೆಂಬುದನ್ನು ಕಂಡು, ಭವವನ್ನು ಸುಲಭವಾಗಿ ದಾಟಲು ಆಗುವಂಥ ‘ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ’ ಮಂತ್ರವನ್ನು ಎಲ್ಲರ ಮನದಲ್ಲಿಯೂ ಬಿತ್ತಿದರು.

ಶ್ರೀ ಚೈತನ್ಯ ಪ್ರಭುಗಳು ಸರ್ವಕಾಲಕ್ಕೂ ಆದರ್ಶವೆನಿಸುವುದಕ್ಕೆ ಕಾರಣ ಅವರು ಹುಟ್ಟು ಹಾಕಿದ ‘ಕೃಷ್ಣ ಪ್ರಜ್ಞೆ’ ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಕೋನ. ಮಹಾಪ್ರ ಭುಗಳು ತಾವು ಪ್ರತಿಪಾದಿಸುತ್ತಿದ್ದ ‘ಹರೇಕೃಷ್ಣ ಭಕ್ತಿಪಂಥ’ದ ಬಾಗಿಲನ್ನು ವಿಶ್ವದ ಎಲ್ಲ ವರ್ಗದ ಜನರಿಗೂ ತೆರೆದಿದ್ದರು.

ಇದನ್ನೂ ಓದಿ: D G Lakshman Column: ಭಕ್ತಿಮಾರ್ಗದ ಪ್ರಬಲ ಪ್ರತಿಪಾದಕ

ಅವರ ಶಿಷ್ಯರಲ್ಲಿ ಎಲ್ಲ ವರ್ಗದ ಜನರೂ, ಶೂದ್ರರು ಮತ್ತು ಮುಸ್ಲಿಮರು ಸಹ ಇದ್ದರು. ತಮ್ಮ ಪಂಥವನ್ನು ಆಶ್ರಯಿಸಿ ಬಂದ ಜನರನ್ನು, ಅವರು ಯಾವುದೇ ಜಾತಿ- ಧರ್ಮಗಳಿಗೆ ಸೇರಿದ್ದರೂ ಮಹಾ ಪ್ರಭುಗಳು ಸಮಾನವಾಗಿ ಕಾಣುತ್ತಿದ್ದರು. ಯಾರು ವೈಷ್ಣವರೋ ಅವರೆ ಲ್ಲರನ್ನೂ ಶ್ರೇಷ್ಠರೆಂದು ಮಹಾಪ್ರಭುಗಳು ಗೌರವಿಸುತ್ತಿದ್ದರು. ಅವರು ಆಶಿಸುತ್ತಿದ್ದ ಏಕೈಕ ಸಂಗತಿಯೆಂದರೆ ಅದು ಕೃಷ್ಣ ಭಕ್ತಿ ಮಾತ್ರ. ಇದರಿಂದಲೇ ಸಮಾಜದ ಎಲ್ಲರೂ ಅವರ ನಡೆ-ನುಡಿಗಳಿಂದ ಆಕರ್ಷಿತರಾಗಿ ನಾಮಜಪದ ಕಡೆಗೆ ತಮ್ಮ ಚಿತ್ತವನ್ನು ಹರಿಸಿದರು.

ಚೈತನ್ಯರ ಬಾಲ್ಯದ ಹೆಸರು ವಿಶ್ವಂಭರ. ಪುಟ್ಟ ಮಗುವಾಗಿದ್ದಾಗಲೇ ಭಾಗವತ ಪುಸ್ತಕಕ್ಕೆ ಕೈ ಚಾಚಿದವರು, ಎಳವೆಯಿಂದಲೇ ತಮ್ಮ ಸುತ್ತಲಿದ್ದವರ ಕಣ್ಣು ತೆರೆಸಲಾರಂಭಿಸಿದವರು. ಜ್ಞಾನಯೋಗವನ್ನು ವಿವರಿಸುತ್ತಿದ್ದ ಮುರಾರಿ ಗುಪ್ತರೆಂಬ ಪ್ರಸಿದ್ಧ ಪಂಡಿತರಿಗೆ “ಜ್ಞಾನ ಮತ್ತು ಕರ್ಮ ಮಾರ್ಗಗಳನ್ನು ನೀನು ತ್ಯಜಿಸು!

ಪ್ರಭು ಶ್ರೀಕೃಷ್ಣನ ಪೂಜೆಯಲ್ಲಿ ಮನವಿಡು, ಭಕ್ತಿಮಾರ್ಗದಲ್ಲಿ ಮುನ್ನಡೆದು ಆಧ್ಯಾತ್ಮಿಕ ಆನಂದವನ್ನು ಪಡೆ" ಎಂದು ತಿಳಿಹೇಳಿದರು. ಆನಂದಕ್ಕಾಗಿ ಹಂಬಲಿಸಿ, ಕೊನೆಗೆ ಸಂತೋಷವೂ ಸಿಗದೆ ವಿಷಾದಕ್ಕೆ ಒಳಗಾಗುವ ಇಂದಿನ ಪರಿಸ್ಥಿತಿಗೆ, ಮಾನಸಿಕವಾಗಿ ಒಂಟಿತನ ಖಿನ್ನತೆಗಾಗಿ ಚಿಕಿತ್ಸೆಗೆ ಒಳಗಾದರೂ, ಹೊರಬಾರದ ಸ್ಥಿತಿಯಲ್ಲಿ ಉಳಿದುಬಿಡುವ, ಧಾವಂತದ ಜಂಜಾಟದ ಜೀವನಕ್ಕೆ ಇದಕ್ಕಿಂತ ಮದ್ದು ಬೇಕಿಲ್ಲ.

ಚೈತನ್ಯ ಪ್ರಭುಗಳು ಹೇಳಿದ ಚಿದಾನಂದ ಸ್ಥಿತಿ ವ್ಯಕ್ತಿಗತವಾಗಿಯೂ, ಸಮಷ್ಟಿ ದೃಷ್ಟಿ ಯಿಂದಲೂ ಅತಿಹೆಚ್ಚು ಪ್ರಯೋಜನಕಾರಿ. ಚೈತನ್ಯರು ಬದುಕಿದ್ದ ರೀತಿಯೇ ಇಂದಿನ ಅನೇಕ ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲುತ್ತದೆ. ಭೌತಿಕವಾಗಿ ಯಾವ ಮಾರ್ಗವನ್ನು ಹಿಡಿದರೂ ಅದಕ್ಕೊಂದು ಕೊನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದೇ, ಅದರ ಹಿಂದೆಯೇ ಓಡುತ್ತಿದ್ದು ಸಾವನ್ನು ಗೆಲ್ಲಬಹುದು ಎಂದೇ ಭಾವಿಸಿದ್ದೇವೆ.

ಚೈತನ್ಯರು ತಮ್ಮ ತಂದೆ ಮರಣ ಹೊಂದಿದಾಗ “ಸಾವು ಎನ್ನುವುದು ಯಾರನ್ನೂ ಬಿಡುವು ದಿಲ್ಲ, ಬ್ರಹ್ಮನಂಥವರೂ ಒಂದು ದಿನ ಸಾಯಲೇಬೇಕು! ಬೆಟ್ಟಗುಡ್ಡಗಳು, ಪರ್ವತಗಳು ಕೂಡಾ ಒಂದು ದಿನ ನೆಲಕಚ್ಚಲಿವೆ! ಇದಕ್ಕೆ ಪರಿಹಾರವೆನ್ನುವುದು ಈ ಭೌತಿಕ ಜಗತ್ತಿನಲ್ಲಿ ಇಲ್ಲ" ಎಂದು ತಾಯಿಗೆ ಸಾಂತ್ವನ ಹೇಳುತ್ತಾರೆ.

ಪ್ರಕೃತಿಗೂ ನಾಶವಿದೆ ಎಂಬುದಾಗಿ ಇಂದು ವಿವರಿಸಲ್ಪಡುವ ವೈಜ್ಞಾನಿಕ ಸತ್ಯವನ್ನು ಚೈತನ್ಯರು ಕಿರಿಯ ವಯೋಮಾನದಲ್ಲಿಯೇ ಸಾರಿದ್ದರು. ಹಾಗೆಯೇ “ಜ್ಞಾನವನ್ನು ಪಡೆದಾತ ಭಕ್ತಿಯ ಹಿನ್ನೆಲೆಯನ್ನು ಹೊಂದಿರದಿದ್ದರೆ ಅಹಂಕಾರಿಯಾಗುತ್ತಾನೆ, ಅದು ಸಲ್ಲದು.

ದರ್ಪ, ಆಡಂಬರ ಮತ್ತು ಅಹಂಕಾರಗಳಿಗೆ ಎಂದೂ ದಾಸನಾಗಬೇಡ" ಎಂಬುದಾಗಿ ವಿದ್ಯೆಯಿಂದ ತಮ್ಮನ್ನು ಸೋಲಿಸಲು ಬಂದ ಕೇಶವ ಕಾಶ್ಮೀರಿಗೆ ಉಪದೇಶಿಸಿದರು. ಅಕ್ಷರ ವೆನ್ನುವುದು ಅಹಂ ಅನ್ನು ಹೆಚ್ಚಿಸುವುದಕ್ಕೆ ಮೂಲವಾಗದೇ, ವಿಶಾಲಾರ್ಥದ ಶಿಕ್ಷಣವನ್ನು ನೀಡಬೇಕು. ಅದು ಕೇವಲ ಓದು-ಬರಹ ಕಲಿಯುವುದಕ್ಕೆ ಸೀಮಿತವಾದುದಲ್ಲ.

ಅಂಧಾನುಕರಣೆ, ಶುಷ್ಕ ಪಾಂಡಿತ್ಯವನ್ನು ದಾಟಿದ ಮೇಲೆಯೇ ಚಿಮ್ಮುವ ಜೀವಸೆಲೆಯೇ ಅರಿವಿನ ಮೂಲ ಎನ್ನುವುದು ಅಳವಡಿಸಿಕೊಳ್ಳಲೇಬೇಕಾಗಿರುವ ಸತ್ಯ. ಅವಿದ್ಯೆಯನ್ನು ನಾಶಮಾಡುವ ಸುವಿದ್ಯೆಯೇ ಈಗ ಅಗತ್ಯವಿರುವುದು. ಇದೇ ಚೈತನ್ಯರ ಉದ್ದೇಶವಾಗಿತ್ತು. ಚೈತನ್ಯರ ಯಾತ್ರೆಯ ಕ್ರಮವೇ ಅಭೂತಪೂರ್ವವಾಗಿರುವುದು. ಪೂರ್ವ ಬಂಗಾಳದಂಥ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಅಲ್ಲಿನ ಎಲ್ಲ ವರ್ಗದ ಜನರಿಗೆ, ಅಸ್ಪೃಶ್ಯರಿಗೆ, ಚಂಡಾಲರಿಗೆ ಮತ್ತು ದುಷ್ಕರ್ಮಿಗಳಿಗೆ ಸಹ ಹರಿನಾಮವನ್ನು ಉಪದೇಶಿಸಿದ್ದು ಅವರ ಹೆಗ್ಗಳಿಕೆ.

ಜನರು ಶುದ್ಧರೋ ಅಶುದ್ಧರೋ, ಜ್ಞಾನಿಗಳೋ ಅಜ್ಞಾನಿಗಳೋ, ಪಾಪಿಗಳೋ ಪುಣ್ಯ ವಂತರೋ ಎಂದು ನೋಡದೆ, ಎಲ್ಲರಿಗೂ ಹರಿನಾಮವನ್ನೂ, ಕೃಷ್ಣ ಪ್ರೇಮವನ್ನು ಹಂಚಿದ ಮಹಾತ್ಮ ಅವರು. ಯಾವ ಪ್ರದೇಶದಲ್ಲಿ ಜನರು ಹಿಂದುಳಿದಿರುತ್ತಾರೋ, ಅಲ್ಲಿ ಆಹಾರದಷ್ಟೇ ಮುಖ್ಯವಾಗಿ ಪ್ರೇಮವನ್ನೂ ಹಂಚಬೇಕು.

ಅದೊಂದೇ ಭಾವೈಕ್ಯವನ್ನು ಭಾವಶುದ್ಧಿಯನ್ನು ತರಬಲ್ಲದು. ಚೈತನ್ಯರ ಈ ಮಾರ್ಗವು ಸಮಕಾಲೀನ ಸಂದರ್ಭದಲ್ಲೂ ಪ್ರಮುಖವಾಗಿದೆ. ಮನುಷ್ಯನ ಔನ್ನತ್ಯಕ್ಕೆ ಕಾರಣ ವಾಗುವುದು ಪ್ರೀತಿ ಮತ್ತು ಜ್ಞಾನ, ಅದನ್ನು ನೀಡಿದಾಗ ದುಷ್ಕರ್ಮ ಮಾಡುವವನೂ ಪರಿವರ್ತನೆಯಾಗಿ, ಸುಮಾರ್ಗದಲ್ಲಿ ನಡೆಯುತ್ತಾನೆ ಎನ್ನುವುದನ್ನು ಹಲವು ಬಾರಿ ತೋರಿಸಿಕೊಟ್ಟವರು ಚೈತನ್ಯ ಮಹಾಪ್ರಭುಗಳು.

ಪರಿವರ್ತನಶೀಲ ಸಮಾಜವನ್ನು ಕಟ್ಟಬೇಕೆಂದರೆ ಪ್ರೇಮ-ಭಕ್ತಿ- ಜ್ಞಾನ-ಅಧ್ಯಾತ್ಮದ ಚೌಕಟ್ಟಿದ್ದರೆ ಮಾತ್ರ ಸಾಧ್ಯವೆನ್ನುವುದನ್ನು ಸಾಕ್ಷೀಭೂತವಾಗಿ ತೋರಿಸಿದವರು ಚೈತನ್ಯ ಮಹಾಪ್ರಭುಗಳು. ಕುಡಿತದಂಥ ದುಶ್ಚಟಕ್ಕೆ ಬಲಿಯಾಗಿದ್ದ ಜಗಾಯ್ ಮತ್ತು ಮಾಧಾಯ್‌ ರಲ್ಲಿ ಪರಿವರ್ತನೆಯ ಬೆಳಕು ಚೈತನ್ಯರಿಂದ ಮೂಡಿದ್ದರಿಂದ, ಅನೇಕರು ಚೈತನ್ಯಪಥವನ್ನೇ ಅನುಸರಿಸಿದರು.

ವೈದ್ಯಕೀಯ ಚಿಕಿತ್ಸೆಗೂ ಹೊರತಾದ ದುಶ್ಚಟಗಳಿಂದ ಹೊರಬರಲು, ಕೃಷ್ಣಪ್ರಜ್ಞೆ ಇಂದಿಗೂ ಸಾಧನವಾಗಿದೆ. ಸಂಕೀರ್ತನೆ ಮಾಡುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಅನ್ಯ ಮತ-ಪಂಥಗಳಿಗೆ ಸೇರಿದಂಥ ಕಾಜಿಯವರಿಗೂ, ಇನ್ನಿತರರಿಗೂ ಧರ್ಮಶಾಸ್ತ್ರದ ತಿಳಿವನ್ನು ಮೂಡಿಸಿ.

ಸಹಿಷ್ಣುತಾಭಾವಕ್ಕೆ ಅಡಿಯಿಡುವಂತೆ ಮಾಡಿದವರು ಚೈತನ್ಯರು. “ಮಾನವ ಜನ್ಮ ದುರ್ಲಭವಾದದ್ದು, ಅದು ದೊರೆತಾಗ ಸದ್ವಿನಿಯೋಗವಾಗಬೇಕು, ಸಾರ್ಥಕವಾಗಬೇಕು. ಇಲ್ಲದಿದ್ದಲ್ಲಿ ಪಶುಸಮಾನವಾಗಿ ಬದುಕಬೇಕಾಗುತ್ತದೆ. ಅದರಿಂದ ಹೊರ ಬನ್ನಿ’ ಎಂದು ಚೈತನ್ಯರು ಕರೆ ಕೊಟ್ಟಿದ್ದಾರೆ.

ಚೈತನ್ಯರಿಗೆ ಸ್ತ್ರೀಯರನ್ನು ಕಂಡರೆ ಅಪಾರ ಗೌರವ. ತಾಯಿ ಶಚೀದೇವಿಯು ಮಗ ಸನ್ಯಾಸಿಯಾಗುತ್ತಾನೆ ಎಂದು ನೊಂದಾಗ “ಅಮ್ಮಾ, ನಿನಗೆ ಯಾವಾಗ ನನ್ನನ್ನು ನೋಡ ಬೇಕೆನಿಸುತ್ತದೋ, ಆ ಕ್ಷಣವೇ ನೀನು ನನ್ನನ್ನು ಕಾಣುವೆ" ಎಂದು ಆಶ್ವಾಸನೆ ನೀಡಿ ಅದರಂತೆಯೇ ನಡೆದುಕೊಂಡರು.

‘ಬಿಟ್ಟು ಹೋಗಬೇಡಿ’ ಎಂದು ಪತ್ನಿ ವಿಷ್ಣುಪ್ರಿಯ ಪ್ರಾರ್ಥಿಸಿದಾಗ “ದೇವಿ, ನಾನು ಈಗ ಹೇಳುವುದು ನಿನ್ನ ಒಳಿತಿಗಾಗಿ, ಲಕ್ಷ್ಯವಿಟ್ಟು ಕೇಳು. ಈ ಜಗತ್ತಿನಲ್ಲಿ ನೀನು ಕಾಣುವುದೆಲ್ಲವೂ ಮಾಯೆ. ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿ ಇವು ಕೂಡ ಮಾಯೆಯೇ. ಹಾಗೆಯೇ ಗಂಡ-ಹೆಂಡಿರ ಸಂಬಂಧವೂ ಮಾಯೆಯೇ. ಶ್ರೀಕೃಷ್ಣ ಮತ್ತು ವೈಷ್ಣವರು ಮಾತ್ರವೇ ವಾಸ್ತವ. ದಿಟವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರ ಪತಿಯೂ ಶ್ರೀಕೃಷ್ಣನೇ.

ಎಲ್ಲ ಜೀವಿಗಳು ಆತನ ಪತ್ನಿಯರು! ಈ ಸತ್ಯವು ಯಾರಿಗೂ ತಿಳಿದಿಲ್ಲ" ಎಂದರು. ಒಮ್ಮೆ ಜಗನ್ನಾಥನ ದರ್ಶನಕ್ಕೆ ಬಂದ ಹೆಣ್ಣು ಮಗಳೊಬ್ಬಳು ಉತ್ಸಾಹದಲ್ಲಿ ಆಕೆಯ ಬಳಿಯಲ್ಲಿ ನಿಂತಿದ್ದ ಮಹಾಪ್ರಭುಗಳ ಹೆಗಲ ಮೇಲೆ ಕಾಲಿರಿಸಿ ದೇವರನ್ನು ನೋಡಲು ಮುಂದಾಗುತ್ತಾಳೆ.

ಅಲ್ಲಿಯೂ ಚೈತನ್ಯರಿಗೆ ಆಕೆಯ ತನ್ಮಯತೆ ದೊಡ್ಡದಾಯಿತೇ ಹೊರತು ತಮ್ಮ ಸ್ಥಾನವಲ್ಲ. ತಾಯಿ, ಪತ್ನಿ ಅಥವಾ ಯಾವುದೇ ಹೆಣ್ಣು ಮಗಳಿಗೆ ಗೌರವ ಕೊಡುವ ಭಾವ, ತಾಯ್ತನ ವನ್ನು ಎತ್ತರಕ್ಕೇರಿಸುವ ಉನ್ನತ ಚಿಂತನೆಗಳು ನಮ್ಮ ಸಮಾಜದಲ್ಲಿ ಇದೇ ಮಾದರಿಯಲ್ಲಿ ಪ್ರವಹಿಸಿದರೆ, ಇಂದಿಗೂ ನಡೆಯುತ್ತಿರುವ ಭ್ರೂಣಹತ್ಯೆ, ಬಾಲ್ಯವಿವಾಹದಂಥ ಪಿಡುಗುಗಳು ದೂರವಾಗುತ್ತವೆ.

ಗಂಡು ಹೆಣ್ಣಿನ ಮಧ್ಯದಲ್ಲಿ ತಲೆ ಎತ್ತುವ ಅಸಮಾನತೆಯೂ ಕಂಡುಬರುವುದಿಲ್ಲ. ಗಜಪತಿ ಪ್ರತಾಪರುದ್ರ ಮಹಾರಾಜನಂಥವನಿಗೂ, “ಭಗವಂತನು ಯಾರ ಹೃದಯದಲ್ಲಿ ನೆಲೆಸುವ ಕೃಪೆ ತೋರುವನೋ ಅಂಥವರೆಲ್ಲರೂ ಮಹಾ ಅದೃಷ್ಟವಂತರು! ಅಂಥವರು ಸಾಮಾಜಿಕ ಕಟ್ಟುಪಾಡುಗಳಿಗೆ ಯಾವತ್ತೂ ಬಾಧ್ಯರಾಗಿರಬೇಕಾಗಿಲ್ಲ! ಅಂಥವರನ್ನು ವರ್ಣಾಶ್ರಮ ಭೇದವೂ ಬಾಧಿಸದು" ಎಂದು ಉಪದೇಶಿಸಿದರು.

ತನ್ಮೂಲಕ ಚೈತನ್ಯ ಮಹಾಪ್ರಭುಗಳು ಸಮಾಜದ ಒಳಗಿರುವ ಮೇಲು-ಕೀಳು, ಬಡವ-ಶ್ರೀಮಂತ ಭೇದಗಳೆಲ್ಲವನ್ನು ಪೂರ್ಣವಾಗಿ ನಿರಾಕರಿಸುವಂತೆ ಮಾಡಿದರು. ಈ ಆಶಯವೇ ಸದೃಢವಾದ ಸಮಾಜ-ರಾಷ್ಟ್ರವನ್ನು ಕಟ್ಟುವ ಭದ್ರಬುನಾದಿಯಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.

ತೀವ್ರ ಸ್ಪರ್ಧೆಯಿರುವ ಇಂದಿನ ಜಗತ್ತಿನಲ್ಲಿ ಹಿಂದಿರುಗಿಯೂ ನೋಡದೆ ನಾವೆಲ್ಲರೂ ಓಡುತ್ತಲೇ ಇದ್ದೇವೆ. ಈ ಸ್ಥಿತಿಯಲ್ಲಿ ಉದ್ಭವಿಸುವ ಸಂಘರ್ಷ-ವಿಪ್ಲವ-ದ್ವಂದ್ವಗಳಿಗೆ ಸಮಾಧಾನ ಬೇಕೆನಿಸಿದಾಗ ಅದನ್ನು ಕೊಡುವ ಶಕ್ತಿ ಇರುವುದು ಅಧ್ಯಾತ್ಮಕ್ಕೆ ಮಾತ್ರ. ನಾಮಜಪದಿಂದಲೇ ಸರ್ವವನ್ನೂ ಸಾಧಿಸಿ, ಸುವ್ಯವಸ್ಥಿತ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ ಶ್ರೇಷ್ಠ ಸಂತರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ಆವಿರ್ಭವಿಸಿ ಹಲವು ಶತಮಾನಗಳಾಗಿದ್ದರೂ, ಸಮಕಾಲೀನ ಸಂದರ್ಭಕ್ಕೂ ಸಲ್ಲುವ ಸಮನ್ವಯ ದೃಷ್ಟಿಕೋನದ ಸರ್ವೋತ್ತಮ ಸಂತರು ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕಿ ಸಹ-ಪ್ರಾಧ್ಯಾಪಕಿ, ಕರ್ನಾಟಕ ರಾಜ್ಯ

ಮುಕ್ತ ವಿಶ್ವವಿದ್ಯಾಲಯ, ಮೈಸೂರು)