Roopa Gururaj Column: ಶತಪದಿ ಹುಳದ ನೂರು ಕಾಲುಗಳ ಲೆಕ್ಕ
ನಮಗೆ ಸಮಸ್ಯೆ ಎನಿಸುವ ಕೆಲವು ವಿಚಾರಗಳು ಬೇರೆಯವರಿಗೆ ವಿಷಯವೇ ಅಲ್ಲ. ಸರಿಯಾಗಿ ಮತ್ತೊ ಬ್ಬರ ಕಷ್ಟಗಳನ್ನು ನೋಡಿದಾಗ ನಮ್ಮ ಅರ್ಧ ಸಮಸ್ಯೆಗಳು ನಾವೇ ಸೃಷ್ಟಿಸಿಕೊಂಡ ತಲೆನೋವುಗಳು ಎಂದು ಅರ್ಥವಾಗುತ್ತದೆ. ಅವುಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ, ಎದುರಾದ ಚಿಕ್ಕಪುಟ್ಟ ಸಮಸ್ಯೆ ಗಳನ್ನು ಅಲ್ಲೇ ಪರಿಹರಿಸಿ ಕೊಳ್ಳುತ್ತಾ ಮುಂದೆ ಸಾಗಿದರೆ ಈಗ ಇರುವ ಅರ್ಧ ತಲೆ ನೋವುಗಳು ಇರುವುದೇ ಇಲ್ಲ


ಒಂದೊಳ್ಳೆ ಮಾತು
rgururaj628@gmail.com
ಶತಪದಿ ಹುಳವೊಂದು (ಒನಕೆ ಹುಳ) ತನ್ನ ಪಾಡಿಗೆ ತಾನು ನಡೆದು ಹೋಗುತ್ತಿತ್ತು. ಒಂದು ಮೊಲ ಅದನ್ನು ನೋಡಿತು, ಅದಕ್ಕೆ ಆಶ್ಚರ್ಯವಾಯಿತು. ಅಬ್ಬಾ ಇದಕ್ಕೆ ನೂರು ಕಾಲು,ನೆಡೆಯುವಾಗ, ಯಾವ ಕಾಲನ್ನು ಮೊದಲಿಡುವುದು,ನಂತರ ಯಾವುದನ್ನು ಇಡುವುದು, ಹೀಗೆ ನೂರು ಕಾಲನ್ನು ಹೇಗೆ ಸಂಭಾಳಿಸುವುದು ಎಂದು. ‘ಏ ಒನಕೆ ಹುಳವೇ ಸ್ವಲ್ಪ ನಿಲ್ಲು, ನಿನಗೆ ನೂರು ಕಾಲು ಇದೆ ಯಲ್ಲಾ, ಇದನ್ನು ನೀನು ಹೇಗೆ ಸಂಭಾಳಿಸಿಕೊಂಡು ನೆಡೆಯುತ್ತಿರುವೆ? ಮೊದಲು ಯಾವ ಕಾಲನ್ನು ಇಡುವೆ, ಆಮೇಲೆ ಯಾವ ಕಾಲು ಇಡುವೆ, ನನಗಂತೂ ಇದನ್ನು ಯೋಚನೆ ಮಾಡಿದರೇ ತಲೆ ಕೆಡುತ್ತಿದೆ’ ಎಂದು ಮೊಲ ಹೇಳಿತು.
ಪಾಪ, ಒನಕೆ ಹುಳಕ್ಕೆ ಇದುವರೆಗೂ ಈ ಯೋಚನೆಯೇ ಬಂದಿರಲಿಲ್ಲ. ತನ್ನ ಪಾಡಿಗೆ ತಾನು ಓಡಾಡುತ್ತಿತ್ತು,ಒಮ್ಮೆ ಬಾಗಿ ತನ್ನನ್ನೇ ತಾನು ನೋಡಿಕೊಂಡು ಅದಕ್ಕೂ ಗಾಬರಿಯಾಯಿತು. ನೂರು ಕಾಲೇ ನನಗಂತೂ ಅದನ್ನು ಎಣಿಸಲಿಕ್ಕೂ ಬರುವುದಿಲ್ಲ, ಇದು ನನಗೆ ಗೊತ್ತೇ ಇರಲಿಲ್ಲ, ಈಗ ನೀನು ಹೇಳಿದ್ದಕ್ಕೇ ನನಗೆ ಗೊತ್ತಾಗಿದ್ದು, ಇದನ್ನೆಲ್ಲಾ ,ಚೆನ್ನಾಗಿ ಯೋಚಿಸಿ ನಿನಗೆ ಆಮೇಲೆ ತಿಳಿಸುತ್ತೇನೆ ಎಂದು ಹೇಳಿತು.
ಇದನ್ನೂ ಓದಿ: Roopa Gururaj Column: ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ
ಮೊಲ ಹೇಳಿದ ವಿಷಯವನ್ನೇ ಚಿಂತಿಸುತ್ತಾ ಶತಪದಿ ನೆಡೆಯಲು ಹೋಯಿತು, ಕಸಿವಿಸಿಯಾಗಿ ಮುಗ್ಗರಿಸಿ ಬಿದ್ದು ಬಿಟ್ಟಿತು. ನೂರು ಕಾಲನ್ನು ಸಂಭಾಳಿಸಿಕೊಂಡು ನಡೆಯುವುದು ಸುಲಭವೇ? ಅದನ್ನು ಯೋಚಿಸಿ, ಹೆಜ್ಜೆ ಹೆಜ್ಜೆಗೂ ಬೀಳುತ್ತಿದೆ. ಕಡೆಗೆ ಬಳಲಿ ಬೆಂಡಾಗಿ ಹೇಳಿತು, ಅಯ್ಯೋ ದುಷ್ಟ ಮೊಲವೇ ನನಗೆ ನೀನು ಎಂಥಹ ಕಷ್ಟ ತಂದು ಬಿಟ್ಟೆ, ನನಗಿನ್ನು ನಡೆಯಲು ಆಗದು, ನೂರು ಕಾಲುಗಳ ಪ್ರಶ್ನೆ ಭೂತದಂತೆ ಕಾಡುತ್ತಿದೆ ಎಂದು ಒಂದೆಡೆ ಸುರುಳಿ ಸುತ್ತಿಕೊಂಡು ಕೂತಿತು, ನಂತರ ಹೊಟ್ಟೆ ಹಸಿಯಲು ಸುರುಳಿ ಬಿಚ್ಚಿ ಸೆಟೆದು ಮೊಲ ಹೇಳಿದ ನೂರು ಕಾಲುಗಳ ವಿಷಯವನ್ನು ಮರೆತು ಹಿಂದಿನಂತೆ ನೆಡೆಯತೊಡಗಿತು.
ಇದು ಮನುಷ್ಯನ ಬುದ್ಧಿಗೆ ಸಂಬಂಧ ಪಟ್ಟ ವಿಚಾರ. ಅವರಪಾಡಿಗೆ ಅವರು ಹೇಗೋ ಇದ್ದ ಮನುಷ್ಯರಿಗೆ, ಮೊಲ ಮಾಡಿದ ಹಾಗೆ ಇಲ್ಲ ಸಲ್ಲದ ವಿಚಾರಗಳನ್ನು ಅವರ ತಲೆಯಲ್ಲಿ ತುರುಕಿ, ಚಿಂತೆಯಿಂದ ಒದ್ದಾಡುವ ಹಾಗೆ ಮಾಡುವುದು ಮನುಷ್ಯನ ಗುಣ. ಯಾವ ವಿಚಾರವಾಗಿ ಯಾದರೂ ಚಿಂತೆ ಶುರುವಾಯಿತೆಂದರೆ, ಭೂತದ ರೀತಿಯಲ್ಲಿ ನಮ್ಮನ್ನು ಕಾಡುವುದು. ಒನಕೆ ಹುಳವೇನೋ ಅದರಿಂದ ಬಿಡಿಸಿಕೊಂಡಿತು, ಆದರೆ ಮನುಷ್ಯ ಚಿಂತೆಯಿಂದ ಹೊರಬರುವುದು ಬಹಳ ಕಷ್ಟ. ಬದುಕಿನಲ್ಲಿ ಎಲ್ಲಾ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಆದರೂ ಕೆಲವರು ಅನಗತ್ಯ ವಾಗಿ ಇಲ್ಲ ಸಲ್ಲದ ದೂರುಗಳನ್ನು ಹೇಳಿಕೊಳ್ಳುತ್ತ ಓಡಾಡುವುದು, ಏನು ಇಲ್ಲದೆ ಮುಗ್ಗರಿಸಿ ಬಿದ್ದ ಶತಪದಿ ಹುಳುವಿನ ಕಥೆಯಂತೆ. ಯಾರ ಬದುಕು ಕೂಡ ಸಂಪೂರ್ಣವಾಗಿ ಚಿಂತೆಗಳಿಂದ ಮುಕ್ತ ವಾಗಿರುವುದಿಲ್ಲ.
ಎಲ್ಲಿಯವರೆಗೆ ನಾವು ಚಿಂತೆಗಳ ಬಗ್ಗೆ ಗಮನ ಹರಿಸುತ್ತೇವೆ ಅಲ್ಲಿ ನೂರಾ ಒಂದು ಚಿಂತೆಗಳು ಹುಟ್ಟಿಕೊಳ್ಳುತ್ತವೆ. ನಾವು ಅದರ ಬದಲು ನಮ್ಮ ಬದುಕಿನಲ್ಲಿರುವ ಒಳಿತಿನ ಬಗ್ಗೆ ಹೆಚ್ಚು ಮಾತ ನಾಡುತ್ತಾ ಯೋಚಿಸುತ್ತಾ ಕಾಲ ಕಳೆದರೆ ಒಳ್ಳೆಯ ವಿಚಾರಗಳು ಮತ್ತಷ್ಟು ಹೆಚ್ಚಾಗುತ್ತಾ ಹೋಗು ತ್ತದೆ.
ನಮಗೆ ಸಮಸ್ಯೆ ಎನಿಸುವ ಕೆಲವು ವಿಚಾರಗಳು ಬೇರೆಯವರಿಗೆ ವಿಷಯವೇ ಅಲ್ಲ. ಸರಿಯಾಗಿ ಮತ್ತೊಬ್ಬರ ಕಷ್ಟಗಳನ್ನು ನೋಡಿದಾಗ ನಮ್ಮ ಅರ್ಧ ಸಮಸ್ಯೆಗಳು ನಾವೇ ಸೃಷ್ಟಿಸಿಕೊಂಡ ತಲೆನೋವುಗಳು ಎಂದು ಅರ್ಥವಾಗುತ್ತದೆ. ಅವುಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ, ಎದುರಾದ ಚಿಕ್ಕಪುಟ್ಟ ಸಮಸ್ಯೆ ಗಳನ್ನು ಅಲ್ಲೇ ಪರಿಹರಿಸಿಕೊಳ್ಳುತ್ತಾ ಮುಂದೆ ಸಾಗಿದರೆ ಈಗ ಇರುವ ಅರ್ಧ ತಲೆ ನೋವುಗಳು ಇರುವುದೇ ಇಲ್ಲ. ಆದ್ದರಿಂದಲೇ ಹೆಚ್ಚು ಯೋಚಿಸದೆ ಒಂದೊಂದೇ ದಿನವನ್ನು ಚಂದವಾಗಿಸಿ ಕೊಳ್ಳುತ್ತಾ ಬದುಕಿ ಬಿಡೋಣ.