ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಸಭಾಮರ್ಯಾದೆಯನ್ನು ಸರ್ವಥಾ ಮರೆಯಬಾರದು

ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಿರುವಾಗ, ಸ್ವಾಗತ ಗೀತೆ ಹಾಡುತ್ತಿರುವಾಗ ಅಥವಾ ಇನ್ನಾವುದೋ ಕಲಾಪಗಳು ಅಲ್ಲಿ ನಡೆಯುತ್ತಿರುವಾಗ, ಅತಿಥಿಗಳು ಗಂಭೀರವಾಗಿದ್ದುಕೊಂಡು ಅದರ ಕಡೆಗೆ ಗಮನ ಕೊಡಬೇಕಾಗುತ್ತದೆ. ಅದುಬಿಟ್ಟು, ಪರಸ್ಪರರು ಮಾತನಾಡಿಕೊಳ್ಳುತ್ತಿರುವುದು ಅಥವಾ ಎದ್ದು ಅತ್ತಿಂದಿತ್ತ ಓಡಾಡುವುದು ಮಾಡಿದರೆ, ನೋಡುಗರಿಗೆ ಬಹಳ ಆಭಾಸವೆನಿಸುತ್ತದೆ.

ವಿದ್ಯಮಾನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿಯಿತ್ತಿದ್ದರು. ಅವರ ನಾಲ್ಕು ತಾಸುಗಳ ಭೇಟಿಯಲ್ಲಿ ಒಂದು ಸಭಾಕಾರ್ಯಕ್ರಮವೂ ಸೇರಿತ್ತು. ಪ್ರಧಾನಮಂತ್ರಿಗಳ ಸಭೆ ಅಂದ ಮೇಲೆ, ಅದರಲ್ಲಿ ಯಾರು ಎಲ್ಲಿ ಕುಳಿತುಕೊಳ್ಳಬೇಕು, ಯಾರಾದ ಮೇಲೆ ಯಾರು ಮಾತಾಡ ಬೇಕು, ರಾಜ್ಯದ ಪರವಾಗಿ ಅವರಿಗೆ ಸ್ಮರಣಿಕೆಯನ್ನು ಯಾರು ನೀಡಬೇಕು ಎನ್ನುವುದೆಲ್ಲ ಪೂರ್ವ ನಿರ್ಧರಿತವಾಗಿರುತ್ತದೆ. ಅವರ ಸಭೆಗಳಲ್ಲಿ ಸುರಕ್ಷತೆ ಮುಂತಾದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ.

ಆದರೆ ಅಂದು ಬೆಂಗಳೂರಿನ ವೇದಿಕೆಯಲ್ಲಿ ನಡೆದದ್ದೇ ಬೇರೆ. ಪ್ರಧಾನಮಂತ್ರಿಗಳ ಪಕ್ಕದಲ್ಲಿ ಕುಳಿತಿದ್ದ ನಮ್ಮ ಮುಖ್ಯಮಂತ್ರಿಗಳು ಭಾಷಣ ಮಾಡಲು ತಮ್ಮ ಆಸನದಿಂದೆದ್ದು ಹೋಗಿದ್ದೇ ತಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತರಾತುರಿಯಿಂದ ತಮ್ಮ ಜಾಗದಿಂದ ಎದ್ದು, ಪ್ರಧಾನಮಂತ್ರಿಗಳ ಪಕ್ಕದಲ್ಲಿ ಬಂದು ಕುಳಿತರು.

ಕೈಯಲ್ಲಿದ್ದ ಏನೋ ಕಾಗದಗಳನ್ನು ಪ್ರಧಾನಮಂತ್ರಿಗಳಿಗೆ ತೋರಿಸುತ್ತಾ ಅವರ ಜತೆಗೆ ಗುಸುಗುಸು ಮಾತಿಗಿಳಿದರು. ಪಾಪ, ಪ್ರಧಾನಮಂತ್ರಿಗಳು ಉಪಮುಖ್ಯಮಂತ್ರಿಗಳ ಮಾತುಗಳನ್ನು ಅತ್ಯಂತ ಸಹನೆಯಿಂದಲೇ ಆಲಿಸಿ, ಅವರಿಗೆ ಏನೋ ಸಮಾಧಾನ ಹೇಳಿದರು.

ಅತ್ತ ಮುಖ್ಯಮಂತ್ರಿಗಳ ಭಾಷಣ ನಡೆದೇ ಇತ್ತು. ಆದರೆ, ಸಭಾಸದರ ಗಮನವೆಲ್ಲ ಡಿ.ಕೆ. ಶಿವಕುಮಾರ್ ಮತ್ತು ಪ್ರಧಾನಮಂತ್ರಿಗಳ ನಡುವೆ ನಡೆಯುತ್ತಿದ್ದ ‘ಗುಪ್ತಸಮಾಲೋಚನೆ’ಯ ಮೇಲೆಯೇ ಇತ್ತು. ಆಮೇಲೆ, ಸಾಮಾನ್ಯವಾಗಿ ರಾಜ್ಯದ ಪರವಾಗಿ ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳು ಪ್ರಧಾನಿಗೆ ಒಂದು ಸ್ಮರಣಿಕೆಯನ್ನು ಕೊಡುವುದು ವಾಡಿಕೆ.

ಇದನ್ನೂ ಓದಿ: Vinayak V Bhat Column: ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ

ಅದರಂತೆ, ಮುಖ್ಯಮಂತ್ರಿಗಳು ಸ್ಮರಣಿಕೆಯನ್ನು ನೀಡಿದರು. ನಮ್ಮ ಉಪಮುಖ್ಯಮಂತ್ರಿಗಳು ಸುಮ್ಮನಿರಬೇಕಲ್ಲ, ಯಾರೋ ತಂದಿಟ್ಟುಕೊಂಡಿದ್ದ ಒಂದು ಬೆಳ್ಳಿಯ ಗಣಪತಿಯ ವಿಗ್ರಹವನ್ನು ತಂದು ಪ್ರಧಾನಮಂತ್ರಿಗಳಿಗೆ ನೀಡಿದರು. ಪ್ರಧಾನಿಗೆ ಆಶ್ಚರ್ಯವಾದರೂ, ನಿರುಪಾಯರಾಗಿ ಎರಡೂ ಸ್ಮರಣಿಕೆಗಳನ್ನು ಸ್ವೀಕರಿಸಿದರು.

ದೆಹಲಿಗೆ ಬಂದು ನಿಮ್ಮನ್ನು ಭೇಟಿಯಾಗಿ ಮಾತಾಡಿದರೆ ನಮ್ಮ ಪಕ್ಷದಲ್ಲಿ ಅದಕ್ಕೆ ಬೇರೆ ಬೇರೆ ಅರ್ಥ ಬಂದುಬಿಡುತ್ತದೆ, ಹಾಗಾಗಿ ನೀವು ಸಿಕ್ಕಾಗಲೇ ಮಾತಾಡಿ ಮುಗಿಸಿಬಿಡುತ್ತೇನೆ ಎನ್ನುವಂತಿದ್ದ ಉಪಮುಖ್ಯಮಂತ್ರಿಗಳ ಸಲುಗೆಯ ವರ್ತನೆ, ಸಭೆಯಲ್ಲಿದ್ದ ಎಲ್ಲರಿಗೂ ಸ್ವಲ್ಪ ಕಸಿವಿಸಿ ಉಂಟು ಮಾಡಿತು.

ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಾದ ಈ ಘಟನೆಗೆ ಸ್ವಲ್ಪ ದಿನಕ್ಕೆ ಮುಂಚೆ, ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ವೇದಿಕೆಯೊಂದರಲ್ಲಿ ಭಾಷಣ ಮಾಡುತ್ತಿರುವಾಗ, ಸಿದ್ದರಾಮಯ್ಯ ನವರು ಮತ್ತು ಅವರ ಆಪ್ತ ಸಚಿವ ಮಹದೇವಪ್ಪನವರು ಹೀಗೇ ಗುಪ್ತಸಮಾಲೋಚನೆಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಖರ್ಗೆಯವರು, “ರೀ ಮಹದೇವಪ್ಪಾ ಸ್ವಲ್ಪ ಸುಮ್ಮನಿರ್ರೀ, ಸಿದ್ದರಾಮಯ್ಯ ನನ್ನ ಭಾಷಣ ಕೇಳಿಸಿಕೊಳ್ಳಲಿ ಬಿಡ್ರೀ, ಅವರ ಕಿವಿಕಚ್ಚುತ್ತಿರಬೇಡಿ" ಎಂದು ಹೇಳಿ, ಸಾರ್ವಜನಿಕವಾಗಿ ಅವರುಗಳನ್ನು ಮುಜುಗರಕ್ಕೀಡು ಮಾಡಿದರು.

ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಿರುವಾಗ, ಸ್ವಾಗತ ಗೀತೆ ಹಾಡುತ್ತಿರುವಾಗ ಅಥವಾ ಇನ್ನಾವುದೋ ಕಲಾಪಗಳು ಅಲ್ಲಿ ನಡೆಯುತ್ತಿರುವಾಗ, ಅತಿಥಿಗಳು ಗಂಭೀರವಾಗಿದ್ದುಕೊಂಡು ಅದರ ಕಡೆಗೆ ಗಮನ ಕೊಡಬೇಕಾಗುತ್ತದೆ. ಅದುಬಿಟ್ಟು, ಪರಸ್ಪರರು ಮಾತನಾಡಿಕೊಳ್ಳುತ್ತಿರುವುದು ಅಥವಾ ಎದ್ದು ಅತ್ತಿಂದಿತ್ತ ಓಡಾಡುವುದು ಮಾಡಿದರೆ, ನೋಡುಗರಿಗೆ ಬಹಳ ಆಭಾಸವೆನಿಸುತ್ತದೆ. ಪ್ರಧಾನಿಗಳ ಬೆಂಗಳೂರಿನ ಸಭೆಯಲ್ಲಿ ನಡೆದ ಆಭಾಸದ ವರ್ತನೆಯನ್ನು ಹಾಗೂ ಖರ್ಗೆಯವರ ಭಾಷಣದ ಘಟನೆಯನ್ನು ಒಂದು ಉದಾಹರಣೆಯಾಗಿ ಮಾತ್ರ ಇಲ್ಲಿ ಹೇಳಿದ್ದೇನೆ.

ಇದೇ ರೀತಿಯ ವರ್ತನೆಗಳನ್ನು ರಾಜಕೀಯೇತರವಾದ ಸಭಾ ಕಾರ್ಯಕ್ರಮಗಳಲ್ಲಿಯೂ ನಾವು ನೋಡುತ್ತೇವೆ. ಅದು ರಾಜಕೀಯ ವೇದಿಕೆಯಾಗಿರಲಿ, ಸಂಗೀತದ ವೇದಿಕೆಯಾಗಿರಲಿ, ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ವೇದಿಕೆಯಾಗಿರಲಿ ಅಥವಾ ಪುಸ್ತಕ ಲೋಕಾರ್ಪಣೆ ಮುಂತಾದ ಸಾಹಿತ್ಯಿಕ ವೇದಿಕೆಯಾಗಿರಲಿ, ವೇದಿಕೆ ಅಂದಮೇಲೆ ಅದಕ್ಕೊಂದು ಮರ್ಯಾದೆ ಅಂತ ಇರುತ್ತದೆ. ಪ್ರೇಕ್ಷಕರಿಗೆ ವೇದಿಕೆಯ ಮೇಲಿರುವವರಿಂದ ಒಂದು ನಿರೀಕ್ಷೆ ಅಂತ ಇರುತ್ತದೆ.

ಹಾಗೆ, ಗೌರವದಿಂದ ಆ ಸಭೆಯ ಆಯೋಜಕರ ಆಶಯಕ್ಕೆ ತಕ್ಕುದಾಗಿ ಮತ್ತು ಪ್ರೇಕ್ಷಕರಿಗೆ ಮಾದರಿ ಯಾಗಿ ನಡೆದುಕೊಳ್ಳುವುದು ವೇದಿಕೆಯ ಮೇಲಿರುವವರ ಜವಾಬ್ದಾರಿಯಾಗಿರುತ್ತದೆ. ಕೆಲವರಂತೂ ತಮಗಿತ್ತ ಆಸನದಲ್ಲಿ ಭದ್ರವಾಗಿ ಕುಳಿತುಕೊಳ್ಳಲೂ ಆಗದೇ, ಸತತವಾಗಿ ನುಲಿಯುತ್ತಲೇ ಇರುತ್ತಾರೆ.

ಇನ್ನು ಕೆಲವರು ಏನನ್ನಾದರೂ ತಿನ್ನುತ್ತಿರುತ್ತಾರೆ. ವೇದಿಕೆಯ ಮೇಲೆ ಕುಳಿತವರು ಮೈಮರೆತು ನಿದ್ದೆ ಮಾಡುವುದನ್ನೂ ನಾವು ಬಹಳ ನೋಡಿದ್ದೇವೆ. ಪ್ರಧಾನಮಂತ್ರಿಗಳಾಗಿದ್ದಾಗ ದೇವೇಗೌಡರು ವೇದಿಕೆಯ ಮೇಲಿನ ತಮ್ಮ ನಿದ್ದೆಯಿಂದಾಗಿಯೇ ಬಹಳ ಟೀಕೆಗೊಳಗಾಗಿದ್ದನ್ನು ನಾವು ನೋಡಿ ದ್ದೇವೆ.

“ನಾನು ವೇದಿಕೆಯ ಮೇಲೆ ನಿದ್ದೆ ಮಾಡುವುದಲ್ಲ, ದೇಶದ ಕುರಿತು ಏಕಾಗ್ರತೆಯಿಂದ ಚಿಂತಿಸುತ್ತಿರು ತ್ತೇನೆ" ಎನ್ನುವ ಅವರ ಸಮಜಾಯಿಷಿಯನ್ನೂ ಕೇಳಿದ್ದೇವೆ. ನಿದ್ದೆಯ ವಿಷಯದಲ್ಲಿ ನಮ್ಮ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನರೂ ದೇವೇಗೌಡರಿಗಿಂತ ಹಿಂದೇನೂ ಇಲ್ಲ. ಸಿದ್ದರಾಮಯ್ಯನವರಿಗೆ ‘ಸ್ಲೀಪ್ ಆಪ್ನಿಯಾ’ ಎನ್ನುವ ಕಾಯಿಲೆಯಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಬರದೇ, ಹಗಲಿನಲ್ಲಿ ತೂಕಡಿಸುವಂತಾಗುತ್ತಿತ್ತಂತೆ. ಏನೂ ಇರಲಿ, ಪ್ರೇಕ್ಷಕನ ದೃಷ್ಟಿಯಲ್ಲಿ ವೇದಿಕೆಯ ಮೇಲಿನ ಈ ವ್ಯವಹಾರಗಳೆ ಆಭಾಸಗಳೇ ಆಗುತ್ತವೆ.

ಹೀಗೆ, ಆಭಾಸಗಳಿಗೆ-ಮುಜುಗರಗಳಿಗೆ ಅವಕಾಶವಾಗಬಾರದೆಂದು, ಆರೋಗ್ಯದ ಸಮಸ್ಯೆಯಿಂದ ಬಹಳ ಹೊತ್ತು ವೇದಿಕೆಯ ಮೇಲೆ ಕುಳಿತುಕೊಳ್ಳಲಾಗದ ವಯೋವೃದ್ಧರುಗಳು ಕಾರ್ಯಕ್ರಮ ಗಳನ್ನು ಒಪ್ಪಿಕೊಳ್ಳುವುದೇ ಇಲ್ಲ. ಒಮ್ಮೆ ಡಿ.ವಿ. ಗುಂಡಪ್ಪನವರನ್ನು (ಡಿವಿಜಿ) ಕಾರ್ಯಕ್ರಮ ವೊಂದಕ್ಕೆ ಅತಿಥಿಯಾಗಿ ಬರಬೇಕೆಂದು ಆಮಂತ್ರಿಸಲು ಹೋದವರಿಗೆ, “ನನಗೆ ಸ್ವಲ್ಪ ಅನಾರೋಗ್ಯ ವಿದೆ, ನಿಮ್ಮ ಕಾರ್ಯಕ್ರಮಕ್ಕೆ ಬರಲಿಕ್ಕಾಗದು" ಎಂದರಂತೆ.

ಕರೆಯಲು ಬಂದವರು, “ನೀವು ಗುಂಡಪ್ಪನವರಲ್ಲವೇ! ಈ ಸಣ್ಣ ಅನಾರೋಗ್ಯವನ್ನು ನಿಭಾಯಿಸ ಬಲ್ಲಿರಿ" ಎನ್ನುತ್ತಾ, ಬರಲೇಬೇಕೆಂದು ವರಾತ ಮಾಡಿದರಂತೆ. ಅದಕ್ಕೆ ಡಿವಿಜಿಯವರು, “ನಾನು ಗುಂಡಪ್ಪನಾದೊಡೇನ್ ಕುಂಡೆಯದು ನೋಯದೇ" ಎಂದು ಕಾವ್ಯಾತ್ಮಕವಾಗಿ ತಮ್ಮ ಮೂಲವ್ಯಾಧಿಯ ಸಮಸ್ಯೆಯನ್ನು ಅವರ ಮುಂದಿಟ್ಟು, ಆಮಂತ್ರಣವನ್ನು ನಿರಾಕರಿಸಿದ್ದರಂತೆ.

ಇದು ಪ್ರಾಜ್ಞರ ಲಕ್ಷಣ. ಸಾಮಾನ್ಯವಾಗಿ ವೇದಿಕೆಯ ಮೇಲೆ ಸ್ಥಾನ ಪಡೆದವರು, ಪ್ರೇಕ್ಷಕ ವರ್ಗದಲ್ಲಿ ಕುಳಿತಿರುವವರಿಗಿಂತ ಹೆಚ್ಚಿನ ಸಾಧನೆ ಮಾಡಿದವರು ಅಥವಾ ಸಮಾಜದಲ್ಲಿ ಉನ್ನತ ಸ್ಥಾನ ದಲ್ಲಿರುವವರೂ ಆಗಿರುತ್ತಾರೆ. ಹಾಗಾಗಿ, ಆ ಮೇಲ್ಮೈಯನ್ನು ಕಾಪಾಡಿಕೊಳ್ಳುವುದು ಅವರಿಗೆ ಅನಿವಾರ್ಯವಾಗಬೇಕಾಗುತ್ತದೆ.

ಇನ್ನು, ಮುಖ್ಯ ಅತಿಥಿಗಳು ತಮ್ಮ ತುರ್ತು ಕೆಲಸದ ನಿಮಿತ್ತ ಕಾರ್ಯಕ್ರಮದ ಅರ್ಧದಲ್ಲೇ ವೇದಿಕೆ ಯಿಂದ ಎದ್ದು ಹೋಗುವುದಿದೆಯಲ್ಲ, ಅದಂತೂ ಸಭೆಯ ಹಾಗೂ ಅತಿಥಿಗಳ ಮರ್ಯಾದೆಯನ್ನು ತಾವೇ ಕೈಯಾರೆ ಕೊಲೆ ಮಾಡಿದಂತೇ ಆಗುತ್ತದೆ. ಆ ವೇದಿಕೆಯ ರಸಾಭಾಸಕ್ಕೆ ಅವರ ಸಮಯ ಆಗಮನ ಅಥವಾ ಅನಿಯಂತ್ರಿತ ನಿರ್ಗಮನ ಕಾರಣವಾಗಿಬಿಡುತ್ತದೆ. ಪ್ರೇಕ್ಷಕರು ಮನಸ್ಸಿನದರೂ ಇಂಥವರನ್ನು ಬೈದುಕೊಳ್ಳದೇ ಬಿಡುವುದಿಲ್ಲ.

ಹಾಗಾಗಿ, ಅಷ್ಟು ತುರ್ತು ಕೆಲಸಗಳಿರುವ ಗಣ್ಯರುಗಳು, ಆಮಂತ್ರಣವನ್ನು ಮೊದಲೇ ನಯವಾಗಿ ತಿರಸ್ಕರಿಸಿಬಿಡುವುದೊಳಿತು. 1986ರಲ್ಲಿ ಬೆಂಗಳೂರಿನಲ್ಲಿ ‘ಸಾರ್ಕ್’ ಸಮ್ಮೇಳನದ ನಿಮಿತ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಕಲಾಕ್ಷೇತ್ರದಲ್ಲಿ ಪಂ. ಭೀಮಸೇನ ಜೋಶಿಯವರ ಗಾಯನ ಕಾರ್ಯಕ್ರಮವೂ ಇತ್ತು. ಜೋಶಿ ಯವರು ವಿಲಂಬಿತ ಲಯವನ್ನು ದಾಟಿ ಮಧ್ಯ ಲಯದಲ್ಲಿ ತಮ್ಮ ಗಾಯನವನ್ನು ಸಾದರ ಪಡಿಸುತ್ತಿದ್ದರು. ಇದ್ದಕ್ಕಿದ್ದಂತೆ ಪ್ರೇಕ್ಷಕರಲ್ಲಿ ಗುಸುಗುಸು ಪ್ರಾರಂಭವಾಯಿತು, ನೋಡಿದರೆ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಅಲ್ಲಿಗೆ ಆಗಮಿಸಿದ್ದರು.

ಕಾರ್ಯಕ್ರಮದ ಆರಂಭಕ್ಕೆ ಬರಬೇಕಾಗಿದ್ದ ಹೆಗಡೆಯವರು, ಮುಕ್ಕಾಲು ಗಂಟೆ ತಡವಾಗಿ ಆಗಮಿಸಿದ್ದರು. ಮುಂದಿನ ಸಾಲಿನಲ್ಲಿ ಕುಳಿತು ಸ್ವಲ್ಪ ಹೊತ್ತು ಜೋಶಿಯವರ ಗಾಯನವನ್ನು ಆಲಿಸಿದರು. ‘ಧ್ರುತ್ ’ ಲಯದಲ್ಲಿ ಜೋಶಿಯವರು ಅಬ್ಬರದ ತಾನುಗಳನ್ನು ತೋರಿಸುತ್ತಿರುವಾಗ, ವೇದಿಕೆಗೆ ಕೈಮುಗಿದು ತಮ್ಮ ಕಾರ್ಯಬಾಹುಳ್ಯದ ಕಾರಣದಿಂದ ಹೆಗಡೆಯವರು ಎದ್ದು ಹೊರ ನಡೆದರು.

ಅವರು ಸಭಾಂಗಣದ ಬಾಗಿಲನ್ನು ದಾಟುತ್ತಿದ್ದಂತೆ, ಜೋಶಿಯವರು ತಮ್ಮ ಗಾಯನವನ್ನು ನಿಲ್ಲಿಸಿ, “ಸಂಗೀತದಲ್ಲಿ ಆಸಕ್ತಿ ಇರದ ಅತಿಥಿಗಳನ್ನು ನೀವು ಕಾರ್ಯಕ್ರಮಕ್ಕೆ ಕರೆಯುವುದಾದರೂ ಏಕೆ? ಹೀಗೆ ಮಧ್ಯದಲ್ಲಿ ಬಂದು, ಬೇಕಾದಾಗ ಎದ್ದುಹೊರಟರೆ ಹಾಡುಗಾರನಿಗೂ ಹಾಗೂ ಕೇಳುಗನಿಗೂ ತಾಳಲಾರದ ರಸಭಂಗವಾಗುವುದಿಲ್ಲವೇ?" ಎಂದು ಆಯೋಜಕರಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ರಾಮಕೃಷ್ಣ ಹೆಗಡೆಯವರು ಅತ್ಯಂತ ಸೂಕ್ಷ್ಮತನ ಉಳ್ಳ ಅಪರೂಪದ ರಾಜಕಾರಣಿಯೇ ಆಗಿದ್ದರು. ಸಾಮಾನ್ಯವಾಗಿ ಅವರು ಇಂಥ ಮುಜುಗರಕ್ಕೆ ಅವಕಾಶವನ್ನು ಕಲ್ಪಿಸಿಕೊಡುವವರಾಗಿರಲಿಲ್ಲ, ಆದರೆ ಅಂದೇಕೋ ಹಾಗಾಗಿಹೋಗಿತ್ತು. ಇನ್ನು, ಕಾರ್ಯಕ್ರಮದ ನಿರೂಪಕರುಗಳು ವೇದಿಕೆಯ ಮೇಲೆ ಸುಖಾಸುಮ್ಮನೇ ಅತ್ತಿಂದಿತ್ತ ಓಡಾಡುವುದು, ಹಿಂದಿನಿಂದ ಬಂದು ಕುಳಿತಿರುವ ಅತಿಥಿ ಗಳನ್ನು ಮಾತಿಗೆಳೆಯುವುದು ಅಥವಾ ಭಾಷಣಕಾರ ಮಾತನಾಡುತ್ತಿರುವಾಗ ಆತನ ಹಿಂದೆಯೇ ನಿಂತಿರುವುದು ಇತ್ಯಾದಿಯನ್ನು ಮಾಡುವುದುಂಟು.

ಇಂಥ ನಡವಳಿಕೆಗಳನ್ನು ನೋಡುವಾಗ, ಪ್ರಸಿದ್ಧ ದೇವಸ್ಥಾನಗಳಲ್ಲಿ, ಕ್ಷಣಮಾತ್ರದ ದೇವರ ದರ್ಶನಕ್ಕೆ ತಾಸುಗಟ್ಟಲೇ ಸರತಿ ಸಾಲಿನ ನೂಕುನುಗ್ಗಲನ್ನು ಅನುಭವಿಸಿ ನುಜ್ಜುಗುಜ್ಜಾದ ಸ್ಥಿತಿಯಲ್ಲಿ ದೇವರ ಮುಂದೆ ಬಂದರೆ, ದೇವರನ್ನು ನೋಡುವುದಕ್ಕಿಂತ ಹೆಚ್ಚಾಗಿ, ಅಲ್ಲಿ ದೇವರ ಮುಂದೆಯೇ ಎಡೆಬಿಡದೇ ಓಡಾಡುವ ಅರ್ಚಕರ ಬೆನ್ನು ನೋಡುವಂತಾಗುವ ಸಂದರ್ಭ ನೆನಪಿಗೆ ಬರುತ್ತದೆ.

ವ್ಯವಸ್ಥಿತವಾಗಿ ಆಯೋಜಿಸಲ್ಪಡುವ ವೇದಿಕೆಗಳಲ್ಲಿ, ನಿರೂಪಕರಿಗೂ ಕುಳಿತುಕೊಳ್ಳಲು ತೆರೆಯ ಹಿಂದೆ ಆಸನದ ವ್ಯವಸ್ಥೆ ಮಾಡಿರಲಾಗುತ್ತದೆ. ಅವರು ತಮ್ಮ ಕೆಲಸ ಬರುವವರೆಗೆ ಅಲ್ಲಿ ಕುಳಿತು ಕೊಳ್ಳಬೇಕಷ್ಟೆ. ಒಂದು ಸಭಾಕಾರ್ಯಕ್ರಮದ ಯಶಸ್ಸಿನಲ್ಲಿ ನಿರೂಪಕ ನಿರ್ಣಾಯಕ ಪಾತ್ರ ವಹಿಸುತ್ತಾನೆ ಎನ್ನುವುದನ್ನು ಅವರು ಗಮನದಲ್ಲಿಡಬೇಕು.

ಸಭಾಮರ್ಯಾದೆಗೆ ಧಕ್ಕೆ ತರುವ ಈ ಎಲ್ಲ ನಡವಳಿಕೆಗಳ ನಡುವೆ, ಮಾದರಿಯೆನಿಸುವ ಘಟನೆಯೊಂದನ್ನು ಇಲ್ಲಿ ಹೇಳಬೇಕು. ನಾನು ಧಾರವಾಡದಲ್ಲಿ ಸಿಎಸ್‌ಐ ಕಾಲೇಜಿನಲ್ಲಿ ಓದುತ್ತಿರು ವಾಗ, ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿಯವರನ್ನು ಅತಿಥಿ ಯಾಗಿ ಕರೆದಿದ್ದೆವು.

ಅತಿಥಿಗಳಿಗೆ ಸ್ವಾಗತ ಕೋರುವ ಸಲುವಾಗಿ ತಾಜಾ ಹೂವಿನಿಂದ ತಯಾರಿಸಿದ ಒಂದು ಹಾರವನ್ನು ಅವರಿಗೆ ಹಾಕಲಾಯಿತು. ಸಿದ್ದಲಿಂಗ ಪಟ್ಟಣಶೆಟ್ಟಿಯವರು ಹಾರವನ್ನು ಪ್ರೀತಿಯಿಂದ ಹಾಕಿಸಿ ಕೊಂಡು ಕೈಮುಗಿದು ಕುಳಿತುಬಿಟ್ಟರು. ವಿದ್ಯಾರ್ಥಿಗಳಾದ ನಮಗೆ ಇದು ವಿಚಿತ್ರವೆನಿಸಿತು. ಸಾಮಾನ್ಯವಾಗಿ ಅತಿಥಿಗಳು ಹಾರವನ್ನು ಪೂರ್ತಿ ಕೊರಳಿಗೆ ಹಾಕಲು ಬಿಡುವುದೇ ಇಲ್ಲ.

ಹಾರ ಹಾಕಲು ಬಂದವರ ಕೈಯನ್ನು ತಡೆದು, ಆ ಹಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ವಾಡಿಕೆ. ಹೆಚ್ಚೆಂದರೆ, ಹಾರ ಹಾಕಿದ ಕೂಡಲೇ ಅದನ್ನು ಕೊರಳಿನಿಂದ ತೆಗೆದು, ತಮ್ಮ ಮುಂದಿರುವ ಮೇಜಿನಮೇಲೆ ಇಟ್ಟುಬಿಡುತ್ತಾರೆ. ಹಾಗಾಗಿ, ನಮಗೆ ಪಟ್ಟಣಶೆಟ್ಟಿಯವರ ಈ ನಡೆ ವಿಚಿತ್ರವಾಗಿ ಯೂ, ಹಾಸ್ಯಮಯವಾಗಿಯೂ ತೋರಿತು.

ನಾವು ಸುಮ್ಮನಿರಬೇಕಲ್ಲ! ‘ಹೋ..’ ಎಂದು ಅಪಹಾಸ್ಯ ಮಾಡುತ್ತಾ ಕಿರುಚಲಾರಂಭಿಸಿದೆವು. ಸಿದ್ದಲಿಂಗ ಪಟ್ಟಣಶೆಟ್ಟಿಯವರು, ಹಾಕಿದ ಹಾರವನ್ನು ತೆಗೆಯಲು ಮರೆತುಬಿಟ್ಟಿದ್ದಾರೆ ಎನ್ನುವುದು ನಮ್ಮ ಭಾವನೆಯಾಗಿತ್ತು. ಮುಂದೆ ಭಾಷಣದ ಸಮಯ ಬಂದಾಗ ಪಟ್ಟಣಶೆಟ್ಟಿಯವರು, “ನಾನು ಹಾರ ಹಾಕಿಸಿಕೊಂಡಿರುವುದು ಮರೆತು ಹಾಗೆಯೇ ಕುಳಿತಿರುವುದಲ್ಲ, ನನಗಾಗಿ ನೀವುಗಳು ಹಣ ಖರ್ಚುಮಾಡಿ ಹಾರ ತಂದಿದ್ದೀರಿ.

ನಿಮ್ಮ ಶ್ರಮವು ಸಾರ್ಥಕವಾಗಬೇಕು ಎನ್ನುವ ಕಾರಣಕ್ಕೆ ಗೌರವ ಸೂಚಕವಾಗಿ ಹಾರವನ್ನು ಕೊರಳಲ್ಲಿ ಇನ್ನೂ ಧರಿಸಿದ್ದೇನೆ. ನೀವು ತಂದ ಹಾರ, ನನ್ನ ಕೊರಳಿಗೇ ಹಾಕಲು ತಂದಿದ್ದು ಎಂದು ಭಾವಿಸಿದ್ದೇನೆ, ಕೈಗೆ ಹಾಕಲು ತಂದಿದ್ದಲ್ಲವಲ್ಲ ಅದು!

ಹಾಗಾಗಿ, ನೀವು ಪ್ರೀತಿಯಿಂದ ನನಗಾಗಿ ತಂದ ಈ ಹಾರ ಕಾರ್ಯಕ್ರಮ ಮುಗಿಯವವರೆಗೂ ನನ್ನ ಕೊರಳ ಇರಲಿದೆ. ನೀವು ನನ್ನ ಕೊರಳಲ್ಲಿರುವ ಹಾರದ ಕುರಿತು ಹೆಚ್ಚು ಚಿಂತಿಸದೇ, ನನ್ನ ಭಾಷಣದ ಕಡೆಗೆ ಗಮನಕೊಡಿ" ಎನ್ನುತ್ತಾ ತಮ್ಮ ಭಾಷಣವನ್ನು ಮುಂದುವರಿಸಿದ್ದರು. ಅವರು ಹೇಳಿದ ಹಾಗೆ ನಡೆದುಕೊಂಡರು ಕೂಡಾ. ಪಟ್ಟಣಶೆಟ್ಟಿಯವರ ಈ ನಡೆ, ವೇದಿಕೆಗಳಲ್ಲಿ ಅತಿಥಿ ಗಳಾಗುವವರಿಗೆ ಮಾದರಿಯಾಗುವ ಪ್ರಶಂಸನಾರ್ಹವಾದ ನಡೆಯಾಗಿತ್ತು.

ಇನ್ನು ಅತಿಥಿಗಳ ಭಾಷಣಗಳ ವಿಷಯಕ್ಕೆ ಬರುವುದಾದರೆ, ಅದು ಅಂದಿನ ಕಾರ್ಯಕ್ರಮಕ್ಕೆ ಪ್ರಸ್ತುತವೂ, ಸಂಕ್ಷಿಪ್ತವೂ ಮತ್ತು ಔಚಿತ್ಯಪೂರ್ಣವೂ ಆಗಿರಬೇಕಾಗುತ್ತದೆ. ಔಚಿತ್ಯವನ್ನು ಬಿಟ್ಟು ಆಡುವ ಮಾತುಗಳು, ಮಾತುಗಾರನಿಗೂ ಹಾಗೂ ಆ ಕಾರ್ಯಕ್ರಮಕ್ಕೂ ಅಗೌರವವಾಗಿ ತೋರ್ಪ ಡುತ್ತದೆ. ಕೆಲವು ಕಾರ್ಯಕ್ರಮಗಳಲ್ಲಿ ತಮಗೆ ಸಿಕ್ಕಿದ್ದೇ ಅವಕಾಶವೆಂದು ಭಾವಿಸಿ ತಾಸುಗಟ್ಟಲೇ ಕೊರೆಯುವವರನ್ನು ನಾವು ನೋಡುತ್ತೇವೆ.

ಈತ ಯಾವಾಗ ಭಾಷಣವನ್ನು ಮುಗಿಸುತ್ತಾನಪ್ಪಾ! ಎಂದು ಪ್ರೇಕ್ಷಕರು ಆಕಳಿಸುವಂತಾಗಿ ಬಿಡುತ್ತದೆ. ಇನ್ನು ಕೆಲವು ‘ಭಾಷಣಕೋರರು’ ವೇದಿಕೆಯ ಮೇಲಿರುವ ಸಹ ಅತಿಥಿಗಳಿಗೆ ಮುಜುಗರ ವಾಗುವ ಅಥವಾ ನೋವಾಗುವ ಹಾಗೆ ಮಾತಾಡುವುದೂ ಇದೆ. ಹಾಗೆ ಮುಜುಗರ ಪಟ್ಟುಕೊಂಡ ವರು ತಮ್ಮ ಪಾಳಿಬಂದಾಗ ಮೊದಲು ಮಾತಾಡಿದವರ ಕಾಲೆಳೆಯಬೇಕಾಗುತ್ತದೆ.

ಹೀಗೆ, ಸಭೆಯಲ್ಲಿ ಬೇಡದ ಮಾತುಗಳನ್ನಾಡಿ ರಾಜಕಾರಣಿಗಳು ವಿವಾದಕ್ಕೀಡಾಗುವುದನ್ನೂ ನಾವು ನಿತ್ಯ ನೋಡುತ್ತೇವೆ. ಭಾಷಣಕಾರನೊಬ್ಬ ತಿಳಿದುಕೊಳ್ಳಬೇಕಾದ ಇನ್ನೊಂದು ಪ್ರಮಖ ಸಂಗತಿ ಯೆಂದರೆ, ಪೂರ್ವತಯಾರಿ ಮಾಡಿಕೊಂಡು ಬಂದು ಮಾತಾಡಬೇಕು ಎನ್ನುವುದು. ಈ ವಿಷಯಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರು ಎಲ್ಲ ಭಾಷಣಕಾರರಿಗೂ ಮಾದರಿಯಾಗುತ್ತಾರೆ.

ಒಮ್ಮೆ ಅವರು ತಮ್ಮ ಹುಟ್ಟೂರಿಗೆ ಹೋಗಿದ್ದರಂತೆ. ಇವರು ಬಂದ ಸುದ್ದಿ ತಿಳಿದು, ಅಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಅವರನ್ನು ಕಂಡು, ಈಗಲೇ ತಮ್ಮ ಶಾಲೆಗೆ ಆಗಮಿಸಿ ಮಕ್ಕಳಿಗೆ ನಾಲ್ಕು ಹಿತವಚನಗಳನ್ನು ಹೇಳಬೇಕೆಂದು ಒತ್ತಾಯಿಸಿದರಂತೆ. ಅವರ ಒತ್ತಾಯಕ್ಕೆ ಮಣಿದು, ವಿಶ್ವೇಶ್ವರಯ್ಯನವರು ಶಾಲೆಗೆ ತೆರಳಿ ಮಕ್ಕಳಿಗೆ ನಾಲ್ಕು ಪ್ರೋತ್ಸಾಹಪೂರ್ವಕ ಮಾತುಗಳನ್ನಾಡಿದರಂತೆ. ಆದರೆ, ವಿಶ್ವೇಶ್ವರಯ್ಯನವರಿಗೇಕೋ ಸಮಾಧಾನವಾಗಲಿಲ್ಲ.

ತಾವು ಆ ಮಕ್ಕಳಿಗೆ ನ್ಯಾಯ ಸಲ್ಲಿಸಿದಂತಾಗಲಿಲ್ಲ ಎನಿಸಿತು. ಮುಖ್ಯೋಪಾಧ್ಯಾಯರನ್ನು ಕರೆದು, ಮರುದಿನ ಮತ್ತೆ ಶಾಲೆಯಲ್ಲಿ ತಮ್ಮ ಭಾಷಣವನ್ನು ಏರ್ಪಡಿಸುವಂತೆ ಸೂಚಿಸಿದರಂತೆ. ರಾತ್ರಿಯೆ ಕುಳಿತು, ಮಕ್ಕಳಿಗೆ ಹೇಳಬೇಕಾದ ವಿಚಾರಗಳನ್ನು ಅಧ್ಯಯನ ಮಾಡಿ, ಮರುದಿನ ತಮ್ಮ ಭಾಷಣ ವನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸಿದ್ದರಂತೆ. ತನ್ನ ಪ್ರೇಕ್ಷಕರ ಕುರಿತು ಭಾಷಣಕಾರನಿಗೆ ಈ ಮಟ್ಟದ ಬದ್ಧತೆ ಇರಬೇಕಾಗುತ್ತದೆ.

ಹೀಗೆ, ಒಂದು ಸಭಾಕಾರ್ಯಕ್ರಮವನ್ನು ಯೋಜಿಸಿ, ಎಲ್ಲೂ ಆಭಾಸವಾಗದೇ ಅದು ಸಾದ್ಗುಣ್ಯತೆ ಯನ್ನು ಹೊಂದುವುದು ಸುಲಭದ ಮಾತಲ್ಲ. ಉತ್ತಮ ಯೋಚನೆ ಮತ್ತು ಅಗತ್ಯ ಪೂರ್ವಯೋಜನೆ ಇರುವ ಸುಮನಸ್ಕ ಆಯೋಜಕನಿಗೆ ಮಾತ್ರ ಇದು ಸಾಧ್ಯವಾಗುವಂಥಾ ಕೆಲಸ. ಸರ್ವಾಂಗ ಸುಂದರ ವಾದ ಹಾಗೂ ಸುವ್ಯವಸ್ಥಿತವಾಗಿ ಮೂಡಿಬರುವ ಒಂದು ಸಭಾ ಕಾರ್ಯಕ್ರಮವನ್ನು ಉದಾಹರಿಸುವುದಾದರೆ, ನಮ್ಮ ವಿಶ್ವೇಶ್ವರ ಭಟ್ಟರ ಸಾರಥ್ಯದ ‘ವಿಶ್ವವಾಣಿ’ ಬಳಗದವರು ಆಯೋಜಿಸುವ ಕಾರ್ಯಕ್ರಮಗಳನ್ನು ನೋಡಬೇಕು.

ಅಲ್ಲಿ ಸಭಾಮರ್ಯಾದೆ ಅಥವಾ ಪಾವಿತ್ರ್ಯವನ್ನು ಸರ್ವಥಾ ಕಾಪಾಡಲಾಗುತ್ತದೆ. ಸಭ್ಯ ಸಭಾಸದರು ಹಾಗೂ ಪ್ರಬುದ್ಧ ಅತಿಥಿಗಳು ಭಟ್ಟರ ಕಾರ್ಯಕ್ರಮದಲ್ಲಿ ನಮಗೆ ನೋಡ ಸಿಗುತ್ತಾರೆ. ರಾಜಕಾರಣಿ ಗಳು, ಧರ್ಮಾಧಿಕಾರಿಗಳು, ಅಂಕಣಕಾರರು, ಸಾಹಿತಿಗಳು ಹಾಗೂ ಪತ್ರಕರ್ತರು ಹೀಗೆ ಎಲ್ಲರೂ ತಮ್ಮ ಭೇದ-ವೈರವನ್ನು ಮರೆತು ಅಲ್ಲಿ ಸಮಾಹಿತರಾಗುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಅಚ್ಚುಕಟ್ಟುತನ, ಆಡಂಬರ ರಹಿತವಾದ ಶಿಸ್ತು ಮತ್ತು ಆತ್ಮೀಯ ವಾತಾ ವರಣ, ಸಮಯಪಾಲನೆ, ಪ್ರೀತಿಯ ಆತಿಥ್ಯ ಅಲ್ಲಿ ನೋಡಲು ಸಿಗುತ್ತದೆ. ಈ ಕಾರ್ಯಕ್ರಮಕ್ಕೆ ಬಂದ ಉದ್ದೇಶ ಸಾರ್ಥಕವಾಯಿತು ಎನ್ನುವ ಭಾವನೆ, ಅತಿಥಿಗಳನ್ನೂ ಸೇರಿ ಕಾರ್ಯಕ್ರಮಕ್ಕೆ ಆಗಮಿಸಿದ ವರೆಲ್ಲರಲ್ಲೂ ಮೂಡುತ್ತದೆ.

ವಿನಾಯಕ ವೆಂ ಭಟ್ಟ

View all posts by this author