ತಿಳಿರು ತೋರಣ
srivathsajoshi@yahoo.com
ಅಳಿಲು ಶ್ರೀರಾಮನಿಗೆ ಸಹಾಯ ಮಾಡಿತು, ಶ್ರೀರಾಮ ಅದನ್ನೆತ್ತಿಕೊಂಡು ಮುದ್ದಾಡಿದನು, ಬೆನ್ನು ನೇವರಿಸಿ ಕೃತಜ್ಞತೆ ಸಲ್ಲಿಸಿದನು. ಬೆನ್ನಮೇಲೆ ಶ್ರೀರಾಮನ ಬೆರಳಿನಚ್ಚು ಮೂಡಿ ಅದೊಂದು ಶಾಶ್ವತ ಗುರುತಾಯಿತು. ಆದರೆ ಕಾಗೆಯ ಕಥೆ ಹಾಗಲ್ಲ. ಕಾಗೆ ಸೀತೆಗೆ ಉಪದ್ರವ ಕೊಟ್ಟಿತು. ಶ್ರೀರಾಮನಿಗೆ ಸಿಟ್ಟು ಬಂತು. ಒಕ್ಕಣ್ಣನಾಗುವಂತೆ ಕಾಗೆಗೆ ಶಿಕ್ಷೆ ಕೊಟ್ಟುಬಿಟ್ಟನು!
ಅಲ್ವೇ ಮತ್ತೆ? ಹೆಂಡತಿಗೆ ಕಾಟ ಕೊಟ್ಟರೆ ಗಂಡನಾದವನು ಸುಮ್ಮನಿರುವುದಕ್ಕಾಗುತ್ತದೆಯೇ? ಶ್ರೀರಾಮ ಸಿಟ್ಟಾದದ್ದಷ್ಟೇ ಅಲ್ಲ, ಕಾಗೆಯ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿಬಿಟ್ಟನು! ಆ ಕಾಗೆ ಯೂ ಅಂಥಿಂಥದಲ್ಲ, ಇಂದ್ರನ ಮಗ ಜಯಂತನೇ ಕಾಗೆಯ ರೂಪದಲ್ಲಿ ಬಂದು ಸೀತೆಯನ್ನು ಕೆಣಕಿದ್ದು. ಆ ವಿಷಯ ಗೊತ್ತಾಗಿಯೇ ಶ್ರೀರಾಮನೂ ಶಿಕ್ಷೆ ಕೊಡುವುದಕ್ಕೆ ಮುಂದಾದದ್ದು. ಇದು ರಾಮಾಯಣದಲ್ಲೊಂದು ಸ್ವಾರಸ್ಯಕರ ಪ್ರಸಂಗ.
ವಾಲ್ಮೀಕಿ ರಾಮಾಯಣದಲ್ಲಿ ಬರುವಂಥದ್ದು. ಇಂದಿನ ಪುರಾಣಶ್ರವಣಕ್ಕೆ ಆಯ್ದುಕೊಂಡಿರುವುದು. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕುವ ಘನ ಉದ್ದೇಶದಿಂದ ಲಂಕೆಗೆ ಹಾರಿದ ಹನುಮಂತನು, ಅಲ್ಲಿ ನಿಜವಾದ ಸೀತೆಯನ್ನೇ ಭೇಟಿಯಾಗಿ ಬಂದನು ಎಂಬುದನ್ನು ಶ್ರೀರಾಮನಿಗೆ ಮನವರಿಕೆ ಮಾಡಿಕೊಡಲು ಏನಾದರೊಂದು ಚಿಹ್ನೆಯನ್ನು ಕೊಡುವಂತೆ ಸೀತೆಯನ್ನು ವಿನಂತಿಸಿ ದನು.
ಇದನ್ನೂ ಓದಿ: Srivathsa Joshi Column: ತಪಸ್ವಿನಿ ವೃದ್ಧಕನ್ಯೆ ಪ್ರಥಮರಾತ್ರಿಗಷ್ಟೇ ತರುಣಿಯಾದಳು !
ಸೀತೆ ತನ್ನ ಮುಡಿಯಲ್ಲಿದ್ದ ಚೂಡಾಮಣಿ ಆಭರಣವನ್ನು ತೆಗೆದುಕೊಟ್ಟಳು. ಅದಷ್ಟೇ ಸಾಲದೆಂದು ಹನುಮಂತ ಹೇಳಿದಾಗ ಸೀತೆ ಈ ಹಿಂದೆ ಚಿತ್ರಕೂಟ ಪರ್ವತದಲ್ಲಿ ನಡೆದಿದ್ದ ಒಂದು ಘಟನೆಯನ್ನು ಬಣ್ಣಿಸಿದಳು. ಆ ವಿವರಗಳನ್ನು ಶ್ರೀರಾಮನಿಗೆ ತಿಳಿಸಿದರೆ ಆತನಿಗೆ ಮನವರಿಕೆ ನಿಶ್ಚಿತವಾಗಿ ಆಗುವು ದೆಂದು ಹನುಮಂತನಲ್ಲಿ ವ್ಯಕ್ತಪಡಿಸಿದಳು.
ರಾಮ-ಸೀತೆ-ಲಕ್ಷ್ಮಣರು ಚಿತ್ರಕೂಟ ಪರ್ವತದ ತಪ್ಪಲಲ್ಲಿ ಮಂದಾಕಿನೀ ನದೀತೀರದ ಪ್ರದೇಶದಲ್ಲಿ ವಾಸವಾಗಿದ್ದ ದಿನಗಳವು. ಒಂದು ದಿನ ಮಧ್ಯಾಹ್ನದ ಊಟವಾದ ಬಳಿಕ ಮಿಕ್ಕಿ ಉಳಿದ ಹಣ್ಣು-ಹಂಪಲು ಗೆಡ್ಡೆ-ಗೆಣಸುಗಳನ್ನು ಕಾಯುತ್ತ ಸೀತೆ ಕುಳಿತಿದ್ದಳು. ಅವಳ ಸನಿಹದಲ್ಲೇ ಶ್ರೀರಾಮನೂ ಇದ್ದನು. ಲಕ್ಷ್ಮಣ ಯಥಾಪ್ರಕಾರ ಪರ್ಣಕುಟೀರದಿಂದ ಹೊರಗೆ ರಕ್ಷಣಾಕಾರ್ಯದಲ್ಲೋ ಆಹಾರ ಸಂಗ್ರಹಣೆಯಲ್ಲೋ ತೊಡಗಿದ್ದನಿರಬಹುದು.
ಕುಟೀರದ ಸುತ್ತಮುತ್ತ ಹಿತವಾಗಿ ತಂಗಾಳಿ ಬೀಸುತ್ತಿತ್ತು. ಪತಿಪತ್ನಿಯರಲ್ಲಿ ಮೃದುವಾಗಿ ಸರಸ ಸಲ್ಲಾಪ, ಶೃಂಗಾರ ಚೇಷ್ಟೆಗಳು ನಡೆದಿದ್ದವು. ಆಗ ಆಹಾರದ ಆಸೆಯಿಂದ ಒಂದು ಕಾಗೆ ಅಲ್ಲಿಗೆ ಬಂದಿತು. ಸೀತೆಯು ಒಂದು ಮಣ್ಣಿನ ಹೆಂಟೆಯಿಂದ ಹೊಡೆದು ಕಾಗೆಯನ್ನು ಓಡಿಸಲು ಯತ್ನಿಸಿ ದಳು. ಆದರೆ ಆ ಕಾಗೆ ಮತ್ತೆಮತ್ತೆ ಅವಳ ಹತ್ತಿರವೇ ಹಾರತೊಡಗಿತು. ಒಮ್ಮೆಯಂತೂ ಸೀತೆಯ ಮುಖವನ್ನು ತನ್ನ ಕೊಕ್ಕಿನಿಂದ ಕುಕ್ಕಿ, ಉಗುರುಗಳಿಂದ ಪರಚಿ ನೋವನ್ನುಂಟು ಮಾಡಿತು.
ಸೀತೆಗೆ ಅತಿಯಾದ ಕೋಪ ಬಂತು. ಕಾಗೆ ಇನ್ನಷ್ಟು ಉಪದ್ರವ ಕೊಟ್ಟು ಸೀತೆಯನ್ನು ಹೈರಾಣು ಮಾಡಿತು. ದಣಿದ ಸೀತೆ ವಿಶ್ರಮಿಸಲೆಂದು ಶ್ರೀರಾಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು. ಮರಕ್ಕೆ ಒರಗಿ ಕುಳಿತಿದ್ದ ಶ್ರೀರಾಮನಿಗೂ ಅಲ್ಲಿಯೇ ಜೊಂಪು ಹತ್ತಿತು.
ಆದರೆ ಕಾಗೆ ಬಿಡಬೇಕಲ್ಲ? “ಸ ತತ್ರ ಪುನರೇವಾಥ ವಾಯಸಃ ಸಮುಪಾಗಮತ್| ತತಃ ಸುಪ್ತ ಪ್ರಬುದ್ಧಾಂ ಮಾಂ ರಾಘವಾಂಕಾತ್ಸಮುತ್ಥಿತಾಮ್" ಎಂದು ಬರೆದಿದ್ದಾರೆ ವಾಲ್ಮೀಕಿ. ಅಂದರೆ, ಕಾಗೆ ಮತ್ತೆ ಅಲ್ಲಿಗೇ ಬಂತು. ಸೀತೆಗೆ ಎಚ್ಚರವಾಗಿ ಶ್ರೀರಾಮನ ತೊಡೆಯ ಮೇಲಿನಿಂದ ತಲೆಯನ್ನೆತ್ತಿ ಎದ್ದು ಬದಿಗೆ ಕುಳಿತಳು. ಒಮ್ಮೆಲೇ ಆ ಕಾಗೆಯು ಅವಳತ್ತ ಬಂದು ಅವಳ ವಕ್ಷಃ ಸ್ಥಳದ ಭಾಗವನ್ನು ಪರಚಿತು. ಎಷ್ಟು ಓಡಿಸಿದರೂ ಮತ್ತೆಮತ್ತೆ ಹಾರಿ ಬಂದು ವಕ್ಷಃಸ್ಥಳವನ್ನು ಪರಚುತ್ತಿತ್ತು.
ಸೀತೆಯ ಎದೆಯ ಭಾಗದಿಂದ ಬಿದ್ದ ರಕ್ತದ ಹನಿಗಳ ಕಾರಣ ಶ್ರೀರಾಮನು ಎಚ್ಚರಗೊಂಡನು. ಸೀತೆಯ ಸ್ತನಗಳೆರಡಕ್ಕೂ ಪರಚಿದ ಗಾಯಗಳಾಗಿರುವುದನ್ನು ಗಮನಿಸಿದ ಶ್ರೀರಾಮನು ಸಿಡಿಮಿಡಿ ಗೊಂಡನು. ಸೀತೆಯನ್ನು ಕುರಿತು “ಕೇನ ತೇ ನಾಗನಾಸೋರು ವಿಕ್ಷತಂ ವೈ ಸ್ತನಾಂತರಮ್| ಕಃ ಕ್ರೀಡತಿ ಸ ರೋಷೇಣ ಪಂಚವಕೇಣ ಭೋಗಿನಾ" ಎಂದನು. ಅಂದರೆ, “ಎಲೈ ಮುಗುದೆಯೇ, ಯಾರು ನಿನ್ನ ಸ್ತನಗಳ ಮಧ್ಯದಲ್ಲಿ ಪರಚಿದರು? ಅಂಥ ಕುಚೇಷ್ಟೆ ಮಾಡುವ ಧೈರ್ಯ ಯಾರಿಗೆ ಬಂತು?" ಹೀಗೆನ್ನುತ್ತಿದ್ದಂತೆ ಶ್ರೀರಾಮನ ದೃಷ್ಟಿಯು ಅಲ್ಲಿಯೇ ಅತ್ತಿಂದಿತ್ತ ಠಳಾಯಿಸುತ್ತಿದ್ದ ಕಾಗೆಯತ್ತ ಹೋಯಿತು.
ತತ್‌ಕ್ಷಣ ಕಾಗೆ ಒಂದು ಪೊದೆಯ ಹಿಂದೆ ಮರೆಯಾಯಿತು. “ಪುತ್ರಃ ಕಿಲ ಸ ಶಕ್ರಸ್ಯ ವಾಯಸಃ ಪತತಾಂ ವರಃ"- ಅಂದರೆ ಪಕ್ಷಿಗಳಲ್ಲಿ ಚಾಣಾಕ್ಷನೆನಿಸಿದ ಆ ಕಾಗೆಯು ಶಕ್ರನ ಮಗನೇ ಮಾರುವೇಷ ದಲ್ಲಿ ಬಂದದ್ದೆಂದು ಶ್ರೀರಾಮನಿಗೆ ಗೊತ್ತಾಯಿತು. ಕ್ರೋಧಗೊಂಡ ಶ್ರೀರಾಮನು ಬ್ರಹ್ಮಾಸದಿಂದ ಮಂತ್ರಿಸಿದ ಒಂದು ದರ್ಭೆಯನ್ನು ಆ ಕಾಗೆಯ ಮೇಲೆ ಬಿಟ್ಟನು. ಆಗ ಆ ಕಾಗೆ ಪೊದೆಯ ಮರೆ ಯಿಂದ ಹೊರಗೆ ಬಂದು ಆಕಾಶದತ್ತ ಹಾರಿತು.
ಕಾಗೆ ಹೋದತ್ತ ಆ ಮಂತ್ರಿಸಿದ ದರ್ಭೆಯೂ ಬೆನ್ನಟ್ಟಿತು. ದರ್ಭೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕಾಗೆ ಮೂರು ಲೋಕಗಳನ್ನೂ ಸುತ್ತಿತು. ಎಲ್ಲಿಯೂ ಅದಕ್ಕೆ ಆಸರೆ ಸಿಗಲಿಲ್ಲ. ಬ್ರಹ್ಮ, ಶಿವ, ಇಂದ್ರ, ಋಷಿ ಗಳು ಮುಂತಾಗಿ ಯಾರ ನೆರವನ್ನು ಕೇಳಿದರೂ ಕಾಗೆಗೆ ರಕ್ಷಣೆ ದೊರಕಲಿಲ್ಲ. ಹೋದಲ್ಲೆಲ್ಲ ದರ್ಭೆ ಯೂ ಕಾಗೆಯನ್ನು ಹಿಂಬಾಲಿಸುತ್ತಿತ್ತು. ಕೊನೆಗೂ ಆ ಕಾಗೆ ಮರಳಿಬಂದು ಶ್ರೀರಾಮನಿಗೆ ಶರಣಾ ಯಿತು. ಪ್ರಾಣವನ್ನುಳಿಸುವಂತೆ ಅವನನ್ನು ಪ್ರಾರ್ಥಿಸಿ ಅಂಗಲಾಚಿತು.
ಶರಣಾಗತರಿಗೆ ಅಭಯವನ್ನೀಯುವುದು ಶ್ರೀರಾಮನ ತತ್ತ್ವವಾದ್ದರಿಂದ, ಮತ್ತು ಕಾಗೆಯ ಬಗ್ಗೆ ಅವನಿಗೆ ಕನಿಕರ ಉಂಟಾಗಿದ್ದರಿಂದ ಅದನ್ನುದ್ದೇಶಿಸಿ ಇಂತೆಂದನು: “ಈ ಬ್ರಹ್ಮಾಸ್ತ್ರವು ಎಂದಿಗೂ ವ್ಯರ್ಥವಾಗಲಾರದು. ಅಂದಬಳಿಕ ಈ ಅಸದಿಂದ ನಿನ್ನ ಯಾವ ಭಾಗವು ನಾಶವಾಗಲಿ ಎಂಬು ದನ್ನು, ಆ ಅವಯವದ ಆಸೆಯನ್ನು ಬಿಟ್ಟು, ನೀನೇ ಹೇಳು! ಆಗಲೇ ಈ ಅಸ್ತ್ರವು ಸಫಲವಾಗು ವುದು. ನಿನ್ನ ಪ್ರಾಣವೂ ಉಳಿಯುವುದು!". ಅದಕ್ಕೆ ಕಾಗೆಯು, “ಹಾಗಿದ್ದರೆ ಈ ಅಸ್ತ್ರವನ್ನು ನನ್ನ ಒಂದು ಕಣ್ಣಿನ ಮೇಲೆ ಪ್ರಯೋಗಿಸಿ ಸಾರ್ಥಕಗೊಳಿಸು" ಎಂದು ಬೇಡಿಕೊಂಡಿತು.
ತಥಾಸ್ತು ಎಂದ ಶ್ರೀರಾಮ, ಬ್ರಹ್ಮಾಸ್ತ್ರ ಮಂತ್ರಿತ ದರ್ಭೆಯನ್ನು ಕಾಗೆಯ ಕಣ್ಣಿಗೆ ಚುಚ್ಚುವಂತೆ ಮಾಡಿದನು. ಅಂದಿನಿಂದ ಕಾಗೆ ಒಂದು ಕಣ್ಣಿನಲ್ಲಿ ಮಾತ್ರ ದೃಷ್ಟಿಯುಳ್ಳದ್ದಾಯಿತು. ಈ ಸಂದರ್ಭ ವು ಕಾಗೆ ಸಂತತಿಗೆ ಸಂದ ಶಾಪ ಎಂಬಂತೆ ಕಂಡುಬಂದರೂ ನಿಜವಾಗಿ ಶಾಪವಲ್ಲ. ಶ್ರೀರಾಮನು ಕಾಗೆಗೆ ಶಾಪ ನೀಡದೆ ಅದರ ಅಧಿಕಪ್ರಸಂಗತನಕ್ಕಾಗಿ ಶಿಕ್ಷೆಯನ್ನಷ್ಟೇ ಕೊಟ್ಟಿದ್ದಾನೆ.
ಹಾಗೆ ನೋಡಿದರೆ ಶಾಪ ಕೊಡುವ ಸಾಮರ್ಥ್ಯ ಶ್ರೀರಾಮನಿಗೆ ಇದ್ದಿತಾದರೂ ರಾಮಾಯಣದಲ್ಲಿ ಅವನು ಯಾರಿಗೂ ಶಾಪ ಕೊಟ್ಟಿದ್ದಿಲ್ಲ. ಅದೇ ರೀತಿ ಆತನಿಗೆ ಒದಗಿಬಂದ ವರಗಳನ್ನು ಸಹ ವಿನಯಪೂರ್ವಕವಾಗಿ ನಿರಾಕರಿಸಿದ್ದಾನೆ. ಒಂದೊಮ್ಮೆ ವರಗಳನ್ನು ಸ್ವೀಕರಿಸಿದ್ದರೂ ಸ್ವಂತದ ಲಾಭಕ್ಕಾಗಿ ಅಲ್ಲ, ಅವುಗಳನ್ನು ಸಮಾಜಕಾರ್ಯಕ್ಕಾಗಿ ಬಳಸಿಕೊಂಡಿದ್ದಾನೆ.
ಒಮ್ಮೆ ಸಮುದ್ರರಾಜನೊಡನೆ, ಒಮ್ಮೆ ಪ್ರಸ್ರವಣ ಪರ್ವತದೊಡನೆ, ಮತ್ತ್ಯಾವಾಗಲೋ ಒಮ್ಮೆ ಒಂದು ನದಿಯೊಡನೆ ಶ್ರೀರಾಮನೂ ಏರುದನಿಯಿಂದ ಬಿರುನುಡಿಗಳನ್ನು ಆಡಬೇಕಾದ ಸಂದರ್ಭ ಗಳು ಬಂದದ್ದಿವೆ. ಆ ಮಾತುಗಳೆಲ್ಲ ಯಾವುದೋ ಷರತ್ತಿನ ಮೇಲೆಂಬಂತೆ ಆಡಿದ್ದವು, ಷರತ್ತು ಪಾಲನೆಯಾದ ಮೇಲೆ ಶಪಿಸುವ ಪ್ರಮೇಯವೇ ಇರುತ್ತಿರಲಿಲ್ಲ. ಅದಕ್ಕೇ ಅಲ್ಲವೇ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎನ್ನುವುದು? ಇಲ್ಲಿ ವಾಲ್ಮೀಕಿ ಮಹರ್ಷಿಯ ಕಾವ್ಯಸೂಕ್ಷ್ಮತೆಯನ್ನೂ ನಾವು ಗಮನಿಸಬೇಕು, ಮೆಚ್ಚಬೇಕು.
ಕಾಗೆಯ ಪ್ರಸಂಗ ನಡೆದದ್ದು ರಾಮ-ಸೀತೆ-ಲಕ್ಷ್ಮಣರು ಚಿತ್ರಕೂಟ ಪರ್ವತದ ತಪ್ಪಲಲ್ಲಿದ್ದಾಗ. ಆದರೆ ಆದರ ವರ್ಣನೆ ಬರುವುದು ಆಮೇಲೆ ಸುಂದರಕಾಂಡದಲ್ಲಿ, ಫ್ಲ್ಯಾಷ್‌ಬ್ಯಾಕ್ ರೀತಿಯಲ್ಲಿ. ಅದಾ ದರೂ ವಿಶೇಷ ಸಂಗತಿಯೇನಲ್ಲ. ಆದರೆ ಪರಸ್ಪರ ಎಂದೂ ನೋಡಿ ಪರಿಚಯವಿಲ್ಲದ ಹನುಮಂತ ಮತ್ತು ಸೀತೆ, ಒಬ್ಬರನ್ನೊಬ್ಬರು ನಂಬುವಂತೆ, ಸಂದೇಶ ವಾಹಕನಾಗಿ ಹನುಮಂತನು ಶ್ರೀರಾಮ ಚಂದ್ರ ಮತ್ತು ಸೀತೆಯ ನಿಜ ಅಸ್ಮಿತೆಯನ್ನು ಕಾಪಾಡಿಕೊಳ್ಳುವಂತೆ ಇರುವ ಅಂಶಗಳನ್ನೂ ವಾಲ್ಮೀಕಿ ಕಥಾಹಂದರಲ್ಲಿ ನಾಜೂಕಾಗಿ ಹೆಣೆದಿದ್ದಾರೆ ಎನ್ನುವುದು ಗಮನಾರ್ಹ. ಹೇಳಿ ಕೇಳಿ ಅದು ಲಂಕೆ, ರಾಕ್ಷಸರ ಸಾಮ್ರಾಜ್ಯ. ಯಾವ್ಯಾವ ಮಾಯ-ಮಾಟ-ಮಂತ್ರಗಳಿಂದಾಗಿ ಸಾಮಾನ್ಯ ಮನುಷ್ಯರು ಭ್ರಮೆಗೊಳಗಾಗುವಂತೆ ಕಪಟಗಳು ನಡೆಯುತ್ತಿದ್ದವೋ ಯಾರಿಗೆ ಗೊತ್ತು!
ಆದ್ದರಿಂದಲೇ ಮಹೇಂದ್ರಪರ್ವತದಿಂದ ನೆಗೆದು ಲಂಕೆಯತ್ತ ಸಾಗರೋಲ್ಲಂಘನ ಮಾಡಿದಾಗ ಹನುಮಂತನು ಶ್ರೀರಾಮನ ಗುರುತೆಂದು, ಸೀತೆಗೆ ತೋರಿಸುವುದಕ್ಕೆಂದು, ಶ್ರೀರಾಮನದೊಂದು ಉಂಗುರ ಒಯ್ದಿದ್ದನು. ಅಶೋಕವನದಲ್ಲಿ ಸೀತೆಗೆ ಅದನ್ನು ತೋರಿಸಿದಾಗ ಅವಳಿಗೆ ಹನುಮಂತನ ಮೇಲೆ ವಿಶ್ವಾಸ ಮೂಡಿತ್ತು.
ಅಂತೆಯೇ, ಸೀತೆಯನ್ನು ಭೇಟಿಯಾಗಿ ಅವಳ ಗುರುತೆಂದು, ಶ್ರೀರಾಮನಿಗೆ ತೋರಿಸಲಿಕ್ಕೆಂದು, ಹನುಮಂತನು ಸೀತೆಯಿಂದ ಚೂಡಾಮಣಿಯನ್ನು ಕೇಳಿ ತಂದಿದ್ದನು. ಶ್ರೀರಾಮನಿಗೆ ಅದು ತಲುಪಿ ದಾಗ, ಹನುಮಂತ ಪತ್ತೆ ಮಾಡಿದ್ದು ಸೀತೆಯನ್ನೇ ಹೌದು ಎಂದು ಸಾಬೀತಾಗಿತ್ತು, ಮಾತ್ರವಲ್ಲ ಶ್ರೀರಾಮನಿಗಂತೂ ದುಃಖ ಉಮ್ಮಳಿಸಿ ಬಂದಿತ್ತು.
ಉಂಗುರ ಮತ್ತು ಚೂಡಾಮಣಿ ಚಿಕ್ಕ ಆಭರಣಗಳು. ಅವೇನಿದ್ದರೂ ಭೌತಿಕ ವಸ್ತುಗಳಾದುವು. ಒಂದುವೇಳೆ ಹನುಮಂತನ ಸಾಗರೋಲ್ಲಂಘನದ ವೇಳೆ ಅವು ಕಳೆದುಹೋದರೆ? ಅಥವಾ ಹನುಮಂತನಿಂದ ಯಾರಾದರೂ ಅವುಗಳನ್ನು ಅಪಹರಿಸಿದರೆ? ಉದ್ದೇಶವೇ ವಿಫಲವಾದಂತಾ ಯ್ತಲ್ಲ! ಹಾಗಾದ ಪಕ್ಷದಲ್ಲೂ, ಯಾರೇ ಅಪಹರಿಸಲಾಗದ್ದು ಏನಾದರೂ ಗುರುತಿಗಿರಲಿ ಎಂಬ ದೃಷ್ಟಿಯಿಂದಲೇ ಹನುಮಂತನು ಸೀತೆಯಿಂದ ಏನೋ ಒಂದು ವಿಶೇಷವಾದ, ತೀರ ಖಾಸಗಿಯಾದ ಘಟನೆಯನ್ನು ಕೇಳಿ ತಿಳಿದಿಟ್ಟುಕೊಂಡಿದ್ದು. ಮತ್ತು, ಹನುಮಂತನ ಆ ಕೋರಿಕೆಯನ್ನು ಮನ್ನಿಸುತ್ತ ಸೀತೆ ‘ಕಾಗೆಯ ಕಾಟ’ ಕಥೆಯನ್ನು ಅವನಿಗೆ ವರ್ಣಿಸಿದ್ದು.
ನೆನಪಿರಲಿ, ಅದು ಶ್ರೀರಾಮ ಮತ್ತು ಸೀತೆಯ ನಡುವಿನ ತೀರಾ ಅಂದರೆ ತೀರಾ ಖಾಸಗಿ ಸಮಾಚಾರ. ಲಕ್ಷ್ಮಣನಿಗೂ ಗೊತ್ತಿಲ್ಲದ್ದು. ಅಂಥದ್ದನ್ನು ಹನುಮಂತನಿಗೆ ಹೇಳಲು ಸೀತೆ ಮುಂದಾದಳೆಂದರೆ ಹನುಮಂತ ಅದೆಷ್ಟು ಮಟ್ಟದಲ್ಲಿ ಸೀತೆಯ ನಂಬಿಕೆ ವಿಶ್ವಾಸಗಳನ್ನು ಗೆದ್ದಿರಬೇಡ?! ಭೌತಿಕ ವಸ್ತು ಗಳಿಗಿಂತ ಬೌದ್ಧಿಕ ತಿಳಿವಳಿಕೆಯೇ ಹೆಚ್ಚಿನದು ಎಂದು ಸೀತೆಗೂ ಅನಿಸಿದ್ದರಿಂದಲೇ ತಾನೆ ಅವಳೂ ಇಂಥದೊಂದು ಪ್ರಸಂಗವನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟದ್ದು? ಭೌತಿಕಕ್ಕಿಂತ ಬೌದ್ಧಿಕ ಶ್ರೇಷ್ಠ ಎನ್ನುವಾಗ ಇನ್ನೊಂದು ಅಂಶವನ್ನೂ ನಾವು ಗಮನಿಸಬಹುದು. ಭಾರತೀಯ ಸನಾತನ ಸಂಸ್ಕೃತಿ ಯ ಜ್ಞಾನಭಂಡಾರ ಹಿಂದಿನಕಾಲದಿಂದಲೂ ಭೌತಿಕ ರೂಪದಲ್ಲಲ್ಲದೆ ಬೌದ್ಧಿಕ ರೂಪದಲ್ಲಷ್ಟೇ ಏಕೆ ಇರುತ್ತಿತ್ತು, ಶ್ರುತಿ-ಸ್ಮೃತಿ (ಕಿವಿಯಿಂದ ಕೇಳುವುದು ಮತ್ತು ನೆನಪಲ್ಲಿಟ್ಟುಕೊಳ್ಳುವುದು) ವಿಧಾನವೇ ಏಕೆ ಪ್ರಾಮುಖ್ಯ ಪಡೆದಿತ್ತು ಎನ್ನುವುದಕ್ಕೆ ಇಲ್ಲಿ ಉತ್ತರ ಸಿಗುತ್ತದೆ.
ನಳಂದದಂಥ ಪುರಾತನ ವಿಶ್ವವಿದ್ಯಾಲಯಗಳನ್ನೂ, ಅಲ್ಲಿನ ಗ್ರಂಥಾಲಯಗಳನ್ನೂ, ಸೂಕ್ಷ್ಮಾತಿ ಸೂಕ್ಷ್ಮ ಕುಸುರಿಕೆತ್ತನೆಗಳ ಮೂಲಕವೇ ಜ್ಞಾನಪ್ರಸರಣ ಮಾಡುತ್ತಿದ್ದ ಅನೇಕ ದೇವಾಲಯಗಳನ್ನೂ, ದಾಳಿಕೋರರು ಸುಟ್ಟು ವಿಧ್ವಂಸ ಮಾಡಿದರೂ ‘ಜ್ಞಾನ’ವನ್ನು ನಾಶಪಡಿಸುವುದು ಅವರಿಂದಾಗಲಿಲ್ಲ. ಇದು ಭಾರತೀಯರಾಗಿ ನಾವೆಲ್ಲರೂ ಗರ್ವಪಡಬೇಕಾದ ಅದ್ಭುತ ಸಂಗತಿಯೇ!
ಮತ್ತೆ ಕಾಗೆಯ ಕಥೆಗೇ ಬರುವುದಾದರೆ, ಸೀತೆಗೆ ಉಪದ್ರವ ಕೊಟ್ಟ ಆ ಕಾಗೆ ಯಃಕಶ್ಚಿತ್ ಕಾಗೆ ಅಲ್ಲ, ಇಂದ್ರನ ಮಗ ಜಯಂತನೇ ಕಾಗೆಯ ವೇಷ ಧರಿಸಿದ್ದು, ಅದರಲ್ಲೂ ಸೀತೆಯ ವಕ್ಷಃ ಸ್ಥಳಕ್ಕೇ ದಾಳಿ ಯಿಟ್ಟದ್ದು ಗಂಭೀರ ವಿಚಾರವೇ. ಮಾರುವೇಷ ಧರಿಸಿ ಬರುವುದು ಪುರಾಣಕಥೆಗಳಲ್ಲಿ ಹೊಸದೇ ನಲ್ಲ. ರಾಮಾಯಣದಲ್ಲೇ ಮಾರೀಚ ಬಂಗಾರದ ಜಿಂಕೆಯ ವೇಷದಲ್ಲಿ ಬಂದಿದ್ದನು; ಸೀತೆಯನ್ನು ಅಪಹರಿಸಲಿಕ್ಕೆಂದು ರಾವಣ ಬಡಬ್ರಾಹ್ಮಣನ ವೇಷ ಧರಿಸಿ ಬಂದಿದ್ದನು.
ಅವರೆಲ್ಲ ದುಷ್ಟರು. ದುಷ್ಟಕೃತ್ಯಕ್ಕಾಗಿ ವೇಷ ಮರೆಸಿದರು. ಆದರೆ ಇಂದ್ರನ ಮಗ ಜಯಂತ ವೇಷ ಮರೆಸಿ ಕಾಗೆಯಂತೆ ಬರುವುದೆಂದರೆ? ಅದರಲ್ಲೂ ಶ್ರೀಮನ್ನಾರಾಯಣ-ಲಕ್ಷ್ಮಿಯರ ಅವತಾರವಾದ ಶ್ರೀರಾಮ-ಸೀತೆಯರನ್ನೇ ಕೆಣಕುವುದೆಂದರೆ? ಅಧಿಕಾರದಲ್ಲಿರುವವರ, ದೊಡ್ಡವರೆನಿಸಿಕೊಂಡವರ, ಮದೋನ್ಮತ್ತ ಮಕ್ಕಳು ಏನು ಬೇಕಾದರೂ ಮಾಡಬಹುದು ಎನ್ನುವ ಉದ್ಧಟತನವನ್ನೇ ಅಲ್ಲವೇ ಜಯಂತನೂ ಪ್ರದರ್ಶಿಸಿದ್ದು? ತುಲಸೀದಾಸರು ರಾಮಚರಿತ ಮಾನಸದಲ್ಲಿ ಈ ಕಾಗೆ ಪ್ರಸಂಗವನ್ನು ಬಣ್ಣಿಸುವಾಗ ಜಯಂತನನ್ನು ಮಂದಮತಿ, ಮೂಢ, ಮೂರ್ಖ ಅಂತೆಲ್ಲ ಮೂದಲಿಸಿದ್ದಾರೆ.
“ಸುರಪತಿ ಸುತ ಧರಿ ಬಾಯಸ ಬೇಷಾ| ಸಠ ಚಾಹತ ರಘುಪತಿ ಬಲ ದೇಖಾ| ಜಿಮಿ ಪಿಪೀಲಿಕಾ ಸಾಗರ ಥಾಹಾ| ಮಹಾ ಮಂದಮತಿ ಪಾವನ ಚಾಹಾ..." (ದೇವರಾಜ ಇಂದ್ರನ ಮೂರ್ಖ ಪುತ್ರ ಜಯಂತನು ಕಾಗೆಯ ರೂಪ ಧರಿಸಿ ಶ್ರೀರಾಮನ ಬಲಪರೀಕ್ಷೆ ಮಾಡಲು ಯತ್ನಿಸಿದನು- ಸಮುದ್ರದ ಶಕ್ತಿಯನ್ನು ಪರೀಕ್ಷಿಸಲು ಹೊರಟ ಇರುವೆಯಂತೆ!) ಹಾಗಂತ, ಜಯಂತ ಒಳ್ಳೆಯ ಕೆಲಸಕ್ಕೂ ಕಾಗೆಯ ವೇಷ ಧರಿಸಿದ್ದಿದೆಯೆಂದು ಕೆಲವು ಪುರಾಣಗಳು ಬಣ್ಣಿಸುತ್ತವೆ.
ಸಮುದ್ರಮಥನದಲ್ಲಿ ಅಮೃತದ ಬಿಂದಿಗೆ ಹೊರಹೊಮ್ಮಿದಾಗ, ಅಸುರರು ಅದನ್ನು ವಶಪಡಿಸಿ ಕೊಳ್ಳಲು ಯತ್ನಿಸಿದಾಗ, ಇಂದ್ರಪುತ್ರ ಜಯಂತನೇ ಕಾಗೆಯ ವೇಷ ಧರಿಸಿ ಅಮೃತದ ಬಿಂದಿಗೆಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿದ್ದನಂತೆ. ಅಸುರರು ಬೆನ್ನಟ್ಟಿದ್ದರೂ ನಿರಂತರ ಹನ್ನೆರಡು ದಿನಗಳ ವರೆಗೆ ಹಾರಿಕೊಂಡು ಅಮೃತವನ್ನು ಸುರಕ್ಷಿತ ಸ್ಥಳಕ್ಕೆ ಒಯ್ದಿಟ್ಟಿದ್ದನಂತೆ. ಹಾಗೆ ಹಾರುವಾಗ ಪ್ರಯಾಗರಾಜ, ಹರಿದ್ವಾರ, ಉಜ್ಜೈನಿ, ಮತ್ತು ನಾಸಿಕಗಳಲ್ಲಿ ಅವನು ಕ್ಷಣಹೊತ್ತು ವಿಶ್ರಾಂತಿ ತೆಗೆದುಕೊಂಡಿದ್ದನು, ಆ ನಾಲ್ಕು ಕಡೆಗಳಲ್ಲಿ ಅಮೃತದ ಬಿಂದಿಗೆಯಿಟ್ಟಿದ್ದ ಸ್ಥಳದಲ್ಲೇ ಈಗಲೂ ಕುಂಭಮೇಳಗಳು ನಡೆಯುವುದು- ಅಂತೊಂದು ಪ್ರತೀತಿಯೂ ಇದೆ.
ಜಯಂತನಿಗೆ ಸಂಬಂಧಿಸಿದಂತೆ ಇನ್ನೆರಡು ಸ್ವಾರಸ್ಯಕರ ಕಥೆಗಳಿವೆ: ಒಮ್ಮೆ ರಾವಣನು ಇಂದ್ರನ ಮೇಲೆ ಯುದ್ಧ ಸಾರಿದ್ದಾಗ ಜಯಂತನು ರಾವಣನ ಮಗ ಮೇಘನಾದನೊಡನೆ ಸೆಣಸಿದ್ದನು. ಮೇಘನಾದನಿಂದ ಸೋತು ಪ್ರಜ್ಞಾಹೀನನಾಗಿ ಬಿದ್ದಿದ್ದ ಜಯಂತನನ್ನು ಅವನ ತಾತ, ಅಂದರೆ ಇಂದ್ರಪತ್ನಿ ಶಚಿದೇವಿಯ ತಂದೆ ಪುಲೋಮನು ಸಮುದ್ರದೊಳಗೆ ಅಡಗಿಸಿಟ್ಟಿದ್ದನು.
ಜಯಂತ ಸತ್ತೇ ಹೋದ ಎಂದುಕೊಂಡ ಇಂದ್ರ ಮತ್ತಷ್ಟು ಕೆಚ್ಚಿನಿಂದ ರಾವಣ ಮತ್ತು ಮೇಘನಾದ ರೊಡನೆ ಹೋರಾಡಿದನು. ಕೊನೆಗೂ ಮೇಘನಾದ ಇಂದ್ರನನ್ನು ಸೋಲಿಸಿದನು. ವಾಯು ಪುರಾಣ ದಲ್ಲಿ ಬರುವ ಇನ್ನೊಂದು ಕಥೆಯಲ್ಲಿ, ಒಮ್ಮೆ ಅಗಸ್ತ್ಯ ಮಹರ್ಷಿಯು ಇಂದ್ರಲೋಕಕ್ಕೆ ಭೇಟಿ ಯಿತ್ತಾಗ ಅವರ ಗೌರವಾರ್ಥ ಊರ್ವಶಿಯ ನೃತ್ಯಪ್ರದರ್ಶನ ಏರ್ಪಡಿಸಲಾಗಿತ್ತು.
ಸ್ವತಃ ನಾರದರೇ ತಮ್ಮ ಮಹತೀ ವೀಣೆಯನ್ನು ನೃತ್ಯಕ್ಕೆ ಸಂಗೀತವಾಗಿ ನುಡಿಸಿದ್ದರು. ನೃತ್ಯ ಮಾಡುತ್ತಿರುವಾಗಲೇ ಊರ್ವಶಿಯ ದೃಷ್ಟಿ ಅಲ್ಲೇ ಇದ್ದ ಸುರಸುಂದರಾಂಗ ಜಯಂತನತ್ತ ತಿರುಗಿತು. ಅವರಿಬ್ಬರ ಕಣ್ಣುಗಳು ಸಂಧಿಸಿದವು. ಜಯಂತನನ್ನು ನೋಡಿದ ಊರ್ವಶಿಗೆ ಅವನಲ್ಲಿ ಪ್ರೇಮವುಕ್ಕಿತು. ಒಂದು ಕ್ಷಣ ವಿಚಲಿತಳಾಗಿ ಆಕೆ ನೃತ್ಯದ ಹೆಜ್ಜೆ ತಪ್ಪಿದಳು.
ನಾರದರ ವೀಣಾವಾದನಕ್ಕೆ ನೃತ್ಯಭಂಗಿಗಳು ಹೊಂದಾಣಿಕೆ ಆಗಲಿಲ್ಲ. ಒಟ್ಟಿನಲ್ಲಿ ಎಲ್ಲ ತಾಳಮೇಳ ತಪ್ಪಿ ಆ ನೃತ್ಯಪ್ರದರ್ಶನ ಅಸ್ತವ್ಯಸ್ತವಾಯಿತು. ಅಗಸ್ತ್ಯರಿಗದು ಗೊತ್ತಾಯಿತು. ಅದು ಎಲ್ಲರೂ ಸೇರಿ ತನಗೆ ಮಾಡಿದ ಅವಮಾನ ಎಂದು ಸಿಟ್ಟಾದರು. ಊರ್ವಶಿಯನ್ನು ಭೂಲೋಕದಲ್ಲಿ ಮಾಧವಿ ಯೆಂಬ ಕನ್ಯೆಯಾಗಿಯೂ, ಜಯಂತನನ್ನು ವಿಂಧ್ಯಪರ್ವತದಲ್ಲಿ ಒಂದು ಬಿದಿರಿನ ಮಳೆಯಾಗಿ ಯೂ ಹುಟ್ಟುವಂತೆ ಶಪಿಸಿದರು.
ನಾರದರ ಮಹತೀ ವೀಣೆ ಮಹತ್ತ್ವ ಕಳೆದುಕೊಂಡು ಅದು ಭೂಲೋಕದಲ್ಲಿ ಜನಸಾಮಾನ್ಯರ ವೀಣೆಯಾಗಲಿ ಎಂದು ಕೂಡ ಶಾಪವಿತ್ತರು. ಒಬ್ಬ ಜಯಂತನಿಂದಾಗಿ ಏನೇನೆಲ್ಲ ಆಯ್ತು ನೋಡಿ! ಇದೇ ಶಕ್ರಪುತ್ರ ಜಯಂತನ ಉಲ್ಲೇಖ ಬರುವುದು ಜನಪ್ರಿಯ “ತಕ್ರಂ ಶಕ್ರಸ್ಯ ದುರ್ಲಭಮ್" ಸುಭಾಷಿತದ ಪೂರ್ವಾರ್ಧದಲ್ಲಿ. “ಭೋಜನಾಂತೇ ಚ ಕಿಂ ಪೇಯಂ ಜಯಂತಃ ಕಸ್ಯ ವೈ ಸುತಃ| ಕಥಂ ವಿಷ್ಣುಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಮ್" ಎಂದು ಆ ಸುಭಾಷಿತದ ಪೂರ್ಣರೂಪ.
ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು? ಜಯಂತ ಯಾರಿಗೆ ಮಗನಾಗುತ್ತಾನೆ ಗೊತ್ತೇ? ವಿಷ್ಣುಪದ ಎಲ್ಲರಿಗೂ ಸುಲಭವಾಗಿ ಸಿಗುತ್ತದೆಯೇ? ಎಂಬ ಮೂರು ಪ್ರತ್ಯೇಕ ಪ್ರಶ್ನೆಗಳಿಗೆ, ಅನುಕ್ರಮ ಉತ್ತರಗಳು ಸೇರಿಕೊಂಡು ನಾಲ್ಕನೆಯ ವಾಕ್ಯ ಆಗುವುದು- “ಮಜ್ಜಿಗೆ ಇಂದ್ರನಿಗೆ ಸಿಗುವುದಿಲ್ಲ" ಎಂದು!
ಇಂದ್ರಪದವಿಗಿಂತಲೂ ಮಜ್ಜಿಗೆ ಶ್ರೇಷ್ಠ ಅಂತಲೂ ಅದನ್ನು ಅರ್ಥೈಸಬಹುದು. ಸದ್ಯ ಶ್ರಾವಣ ಮಾಸದ ನಾಲ್ಕು ಭಾನುವಾರಗಳಂದು ತಿಳಿರುತೋರಣದಲ್ಲಿ ಪ್ರಸ್ತುತಪಡಿಸಿದ ಪುರಾಣಕಥನವೆಂಬ ರಸದೌತಣವನ್ನು ಮಜ್ಜಿಗೆಯಿಂದಲೇ ಸಂಪನ್ನಗೊಳಿಸುತ್ತಿದ್ದೇನೆ. ಓದಿದ ಕೇಳಿದ ಆನಂದಿಸಿದ ಎಲ್ಲರಿಗೂ ಸಕಲ ಸನ್ಮಂಗಳವಾಗಲಿ.