ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arun Joshi Column: ದೇಶ ರಕ್ಷಣೆ: ಅಹಿಂಸೆ ಎಂಬ ಭ್ರಮೆಗೆ ತಿಲಾಂಜಲಿ

ಬ್ರಿಟಿಷ್ ಭಾರತದ ಕಾಲದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟವು ‘ಸಶಸ್ತ್ರ’ ಮತ್ತು ‘ಅಹಿಂಸಾ’ ಎರಡೂ ಮಾರ್ಗದಲ್ಲಿ ನಡೆದಿತ್ತು. ಹೋರಾಟದ ಉದ್ದೇಶ ಒಂದೇ ಇದ್ದರೂ, ಎರಡೂ ರೀತಿಯ ಹೋರಾಟಗಳಿಗೆ ಅಷ್ಟೇ ಬೆಲೆಯಿದ್ದರೂ, ಸ್ವಾತಂತ್ರ್ಯಾನಂತರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು, “ಒಂದು ಹನಿ ರಕ್ತವನ್ನು ಹರಿಸದೆ ಪರಕೀಯರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದ ಏಕೈಕ ದೇಶ ಭಾರತ" ಎಂದು ಡಂಗುರ ಸಾರತೊಡಗಿದರು

ದೇಶ ರಕ್ಷಣೆ: ಅಹಿಂಸೆ ಎಂಬ ಭ್ರಮೆಗೆ ತಿಲಾಂಜಲಿ

Ashok Nayak Ashok Nayak Aug 8, 2025 7:57 AM

ಶಸ್ತ್ರ-ಶಾಸ್ತ್ರ

ಅರುಣ ಜೋಶಿ

ದೇಶದ ಹಲವು ಪ್ರಜ್ಞಾವಂತ ನಾಯಕರು ಕೂಡ, ‘ಯುದ್ಧ ಬೇಡ, ಶಾಂತಿ ಬೇಕು’ ಎಂದು ಭ್ರಮೆ ಹುಟ್ಟಿಸುವ ಎಡಪಂಥೀಯರೊಂದಿಗೆ ಸೇರಿಕೊಂಡು, ದೇಶದ ಜನರನ್ನು ನಿರ್ವೀರ್ಯ ರನ್ನಾಗಿ ಮಾಡಿದರು. ಈ ಕೆಲಸವು ಅಹಿಂಸೆಯ ಹೆಸರಿನಲ್ಲಿ ನಿರಂತರವಾಗಿ ನಡೆದಿತ್ತು. ಶತ್ರುಗಳಿಂದ ದೇಶ ವನ್ನು ರಕ್ಷಿಸಲು ಕಟಿಬದ್ಧರಾಗಿದ್ದ ಚಾಣಕ್ಯ, ಛತ್ರಪತಿ ಶಿವಾಜಿ, ರಾಣಾ ಪ್ರತಾಪ ಸಿಂಹ, ಕೃಷ್ಣದೇವರಾಯ, ಸಮುದ್ರಗುಪ್ತ ಮೊದಲಾದ ಆದರ್ಶ ಪುರುಷರು ಇತಿಹಾಸದ ಪುಟಗಳಲ್ಲಿ ಹಾಗೂ ನಮ್ಮ ರಾಷ್ಟ್ರೀಯ ಚಿಂತನೆಗಳಲ್ಲಿ ಹೆಚ್ಚು ಮಿಂಚಲೇ ಇಲ್ಲ.

“ಭಾರತವು ನೂರಾರು ವರ್ಷಗಳಿಂದಲೂ ಶಾಂತಿಯನ್ನು ಬಯಸುವ ರಾಷ್ಟ್ರ ಎಂದೇ ಜನಜನಿತ ವಾಗಿದೆ. ಏಕೆಂದರೆ, ನಾವು ಯಾರ ಮೇಲೂ ದಾಳಿ ಮಾಡುವುದಿರಲಿ, ಗದರಿಸುವುದು ಕೂಡ ಇಲ್ಲ. ನಮ್ಮ ಸಿದ್ಧಾಂತವೇನಿದ್ದರೂ ಪ್ರೀತಿಯಿಂದಲೇ ದ್ವೇಷವನ್ನು ಗೆಲ್ಲುವುದು. ದುಷ್ಟರು ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳವನ್ನು ಕೊಡಬೇಕು. ನಮಗೆ ಹಿಂಸೆ ಕೊಟ್ಟವರಿಗೆ ಅಹಿಂಸೆಯಿಂದಲೇ ಉತ್ತರ ಕೊಟ್ಟು ಅವರ ಮನಸ್ಸನ್ನು ಪರಿವರ್ತಿಸಬೇಕು" ಎಂಬುದನ್ನೆಲ್ಲ ಓದಲು ಕೇಳಲು ಚೆನ್ನಾಗಿರುತ್ತದೆ, ಅತಿ ಸುಂದರವಾಗಿರುತ್ತದೆ.

ಇಂಥ ವಿಷಯಗಳನ್ನು ಹೇಳಿಕೊಂಡು, ‘ಮಹಾತ್ಮ ಗಾಂಧಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇವೆ’ ಅಂದುಕೊಂಡು, ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡು ಶತ್ರುಗಳಿಂದ ಏಟು ತಿಂದು ಹೆಮ್ಮೆಪಡುತ್ತಿದ್ದ ಭಾರತವಿಂದು ಬದಲಾಗಿದೆ. ಮಹಾತ್ಮ ಗಾಂಧಿಯವರ ‘ಚಲೇಜಾವ್ ಚಳವಳಿ’ಯನ್ನು ನೋಡಿದರೆ, ಅವರು ಎಂಥ ಪ್ರಸಂಗದಲ್ಲಿ ರಾಷ್ಟ್ರ ರಕ್ಷಣೆಯ ಪರವಾಗಿ ಇದ್ದರು ಎಂಬುದು ಅರಿವಾಗುತ್ತದೆ.

ಆದರೆ ಅವರ ಹೆಸರಿನಲ್ಲಿ ಪ್ರಚಾರ ಮಾಡಿದ ‘ಅಹಿಂಸೆ’ಯು ದೇಶದ ಕ್ಷಾತ್ರತೇಜವನ್ನು ಕೊಂದ, ದೇಶವನ್ನು ಅಶಕ್ತ ಮಾಡಿದ ತಪ್ಪು ಆಚರಣೆಯಾಗಿದೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ವೈಚಾರಿಕವಾಗಿ ಮಗ್ಗಲು ಬದಲಿಸಿದೆ. ಕ್ರೂರ ಶತ್ರುಗಳ ವಿಷಯದಲ್ಲೂ ಅಹಿಂಸೆಯನ್ನು ಮೆರೆಯ ಬೇಕು ಎಂಬ ಪೊಳ್ಳು ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದೆ.

ಇದನ್ನೂ ಓದಿ:

ಬ್ರಿಟಿಷ್ ಭಾರತದ ಕಾಲದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟವು ‘ಸಶಸ್ತ್ರ’ ಮತ್ತು ‘ಅಹಿಂಸಾ’ ಎರಡೂ ಮಾರ್ಗದಲ್ಲಿ ನಡೆದಿತ್ತು. ಹೋರಾಟದ ಉದ್ದೇಶ ಒಂದೇ ಇದ್ದರೂ, ಎರಡೂ ರೀತಿಯ ಹೋರಾಟಗಳಿಗೆ ಅಷ್ಟೇ ಬೆಲೆಯಿದ್ದರೂ, ಸ್ವಾತಂತ್ರ್ಯಾನಂತರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು, “ಒಂದು ಹನಿ ರಕ್ತವನ್ನು ಹರಿಸದೆ ಪರಕೀಯರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದ ಏಕೈಕ ದೇಶ ಭಾರತ" ಎಂದು ಡಂಗುರ ಸಾರತೊಡಗಿದರು.

ಗಿಟ್ಟಿಸಿಕೊಂಡ ಅಧಿಕಾರವನ್ನು ಉಳಿಸಿಕೊಳ್ಳಲು “ನಾವೇ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ವನ್ನು ತಂದಿದ್ದೇವೆ" ಎಂದು ಹೇಳಿಕೊಳ್ಳತೊಡಗಿದರು. ತನ್ಮೂಲಕ ಇವರು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಲಿಗಳಾದ ನಾನಾ ಸಾಹೇಬ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಿಂದ ಹಿಡಿದು ತರುವಾಯದ ಸಾವರ್ಕರ್, ಫಡಕೆ, ನೇತಾಜಿ ಸುಭಾಷ್‌ಚಂದ್ರ ಬೋಸ್, ಗಲ್ಲಿಗೇರಿದ ಭಗತ್‌ಸಿಂಗ್ ಮುಂತಾದವರವರೆಗಿನ ಹೋರಾಟಗಾರರು ತಮ್ಮ ರಕ್ತ ಚೆಲ್ಲಿ ಮಾಡಿದ ಎಲ್ಲ ಸಶಸ್ತ್ರ ಹೋರಾಟಗಳನ್ನು ಮೂಲೆಗೆ ಎಸೆಯುವ ಕೆಲಸವನ್ನು ಮಾಡಿದರು.

ಇದು ದೇಶದ ಕ್ರಾಂತಿಕಾರಿಗಳಿಗೆ ಮಾಡಿದ ಅಪಮಾನವಷ್ಟೇ ಅಲ್ಲ, ಇತಿಹಾಸ ಮತ್ತು ಭವಿಷ್ಯಕ್ಕೆ ಮಾಡಿದ ಘೋರ ಅಪಚಾರವೂ ಆಗಿತ್ತು. ಸ್ವಾತಂತ್ರ್ಯಾನಂತರ ಹುಟ್ಟಿ ಬೆಳೆದ ಪೀಳಿಗೆಗಳು ಇದೇ ವಿಚಾರವನ್ನು ಕಲಿತು, ‘ಅಹಿಂಸೆಯ ಹೆಸರಿನಲ್ಲಿ ದೇಶವನ್ನು ದುರ್ಬಲಗೊಳಿಸುವುದೇ ಮಹಾನ್ ಸಾಧನೆ’ ಅಂದುಕೊಂಡಿದ್ದರು.

ಇಷ್ಟೇ ಅಲ್ಲ, ಆಡಳಿತಾರೂಢರೇ, “ನಮಗೆ ಪಂಚಶೀಲ ತತ್ವ ಮತ್ತು ಅಲಿಪ್ತ ನೀತಿಯೇ ಸಾಕು, ದೇಶಕ್ಕೆ ಸೈನ್ಯವೇ ಬೇಡ" ಎಂದು ಮಾತಾಡುವ ಮಟ್ಟಕ್ಕೆ ಅಹಿಂಸೆಯ ಭ್ರಮೆಯ ಮೂಟೆಯೊಳಗೆ ಜನರನ್ನು ತುಂಬಿದ್ದರು. ಇಂಥ ಮನಸ್ಥಿತಿಯು ದೇಶದ ಗೂಢಚರ್ಯೆ, ಸೇನಾಪಡೆ, ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಶಿಥಿಲಗೊಳಿಸಿತು.

ಭಯೋತ್ಪಾದನೆಯನ್ನು ಮಾನವ ಹಕ್ಕುಗಳ ಹೆಸರಿನಲ್ಲಿ ‘ರಾಜತಾಂತ್ರಿಕತೆ’ ಎಂದು ಬಿಂಬಿಸಿ, ಕೊಲೆ ಮತ್ತು ದೇಶದ್ರೋಹದ ಆರೋಪಿಗಳಾದ ಭಯೋತ್ಪಾದಕರಿಗೆ ದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ರಾಜೋಪಚಾರ ನೀಡಿದ್ದೂ ಆಯಿತು. ಇಂಥ ನೂರಾರು ಘಟನೆಗಳು ಮತ್ತು ನಿದರ್ಶನಗಳಿಂದಾಗಿ ಸರ್ವಶಕ್ತ ಭಾರತೀಯ ಸೇನೆಯ ಮನೋಬಲ ಕುಸಿಯುತ್ತಿತ್ತು.

ಗಡಿಯಲ್ಲಿರುವ ಸೈನಿಕರ ರುಂಡ ವನ್ನು ಕತ್ತರಿಸಿಕೊಂಡು ಹೋಗುವಷ್ಟರ ಮಟ್ಟಿಗಿನ ರಾಕ್ಷಸೀ ಕೃತ್ಯವನ್ನು ಪಾಕಿಸ್ತಾನ ಮೆರೆದಾಗ, ಸಂಸತ್ ಭವನದ ಮೇಲೆ ಉಗ್ರಗಾಮಿಗಳ ದಾಳಿಯಾದಾಗ, ಮುಂಬೈನಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ಎಸಗಿದಾಗ, ಕಂದಹಾರ್ ವಿಮಾನ ಅಪಹರಣ ವಾದಾಗ, ಧರ್ಮದ ಆಧಾರದ ಮೇಲೆ ಕಾಶ್ಮೀರದಲ್ಲಷ್ಟೇ ಅಲ್ಲದೆ ಕೇರಳದಲ್ಲಿ ಕೂಡ ಶತ್ರುರಾಷ್ಟ್ರದ ಬೆಂಬಲದಿಂದ ಕೊಲೆಗಳು ನಡೆದಾಗ ನಾವು ಶಾಂತಿಮಂತ್ರವನ್ನೇ ಜಪಿಸುತ್ತಿದ್ದೆವು.

ಇಂಥ ಸಂದರ್ಭದಲ್ಲಿ ಪ್ರತಿದಾಳಿ ಮಾಡದೆ ಕೇವಲ ರಕ್ಷಣಾತ್ಮಕವಾಗಿ ಕಾಲ ಕಳೆದಿದ್ದನ್ನು ನೋಡಿ ದೇಶವು ಸಹಿಸಿಕೊಂಡಿದೆ. ದೇಶದ ಹಲವು ಪ್ರಜ್ಞಾವಂತ ನಾಯಕರು ಕೂಡ, ‘ಯುದ್ಧ ಬೇಡ, ಶಾಂತಿ ಬೇಕು’ ಎಂದು ಭ್ರಮೆ ಹುಟ್ಟಿಸುವ ಎಡಪಂಥೀಯರೊಂದಿಗೆ ಸೇರಿಕೊಂಡು, ದೇಶದ ಜನರನ್ನು ನಿರ್ವೀರ್ಯರನ್ನಾಗಿ ಮಾಡಿದರು.

ಈ ಕೆಲಸವು ಅಹಿಂಸೆಯ ಹೆಸರಿನಲ್ಲಿ ನಿರಂತರವಾಗಿ ನಡೆದಿತ್ತು. ಶತ್ರುಗಳಿಂದ ದೇಶವನ್ನು ರಕ್ಷಿಸಲು ಕಟಿಬದ್ಧರಾಗಿದ್ದ ಚಾಣಕ್ಯ, ಛತ್ರಪತಿ ಶಿವಾಜಿ, ರಾಣಾ ಪ್ರತಾಪ ಸಿಂಹ, ಕೃಷ್ಣದೇವರಾಯ, ಸಮುದ್ರಗುಪ್ತ ಮೊದಲಾದ ಆದರ್ಶ ಪುರುಷರು ಇತಿಹಾಸದ ಪುಟಗಳಲ್ಲಿ ಹಾಗೂ ನಮ್ಮ ರಾಷ್ಟ್ರೀಯ ಚಿಂತನೆಗಳಲ್ಲಿ ಹೆಚ್ಚು ಮಿಂಚಲೇ ಇಲ್ಲ.

ನಮ್ಮ ಇಂದಿನ ಜನಾಂಗಕ್ಕೆ ಶೌರ್ಯ ತುಂಬಬಲ್ಲ ದೇಶದ ಹಿಂದಿನ ಹೋರಾಟಗಾರರ ರಣೋ ತ್ಸಾಹದ ವಿಷಯಗಳನ್ನು ನಾವು ಮುಚ್ಚಿ ಹಾಕಿದೆವು. ಇದರಿಂದಾಗಿಯೇ ಕಾರ್ಗಿಲ್ ಸಂಘರ್ಷ ದವರೆಗೂ ದೇಶದ ಒಂದು ವರ್ಗದವರು ‘ಯುದ್ಧಬೇಡ, ಶಾಂತಿ ಬೇಕು’ ಎಂದು ಊರೂರಲ್ಲಿ ಪ್ರತಿಭಟನೆ ನಡೆಸಿದ್ದರು.

ಅವರ ಪ್ರಕಾರ, ‘ಆಕ್ರಮಣ ಮಾಡಿದವರು ಏನೇ ಮಾಡಲಿ, ಅತಿರೇಕದ ಕೃತ್ಯವನ್ನು ಎಸಗಲಿ, ಅವರಿಂದ ಪೀಡಿತರಾಗುವವರು ಅಹಿಂಸೆಯನ್ನು ಪಾಲಿಸಬೇಕು. ಆಕ್ರಮಣಪೀಡಿತ ದೇಶವು ಶಾಂತಿಮಂತ್ರವನ್ನು ಪಠಿಸಬೇಕು. ಇದೇ ಗಾಂಧಿತತ್ವ’. ಇದನ್ನು ವಿರೋಧಿಸುವವರನ್ನು, ‘ಈ ದೇಶದ ತತ್ವಗಳಿಗೆ ವಿರೋಧಿಗಳು’ ಎಂಬಂತೆ ಬಿಂಬಿಸಲಾಗುತ್ತಿತ್ತು.

ಉದಾಹರಣೆಗೆ, ಅಟಲ್ ಬಿಹಾರಿ ವಾಜಪೇಯಿಯವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಕಾಲಘಟ್ಟದಲ್ಲಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಮಾಡಿದಾಗ ಅದಕ್ಕೆ ನಮ್ಮ ದೇಶದಲ್ಲೇ ವಿರೋಧವು ವ್ಯಕ್ತವಾಗಿತ್ತು.

ಭಾರತವು ತನಗೆ ವಿನಾಕಾರಣ ಕಿರಿಕಿರಿ ಉಂಟುಮಾಡುವ ಶತ್ರುರಾಷ್ಟ್ರಗಳ ಒಳಗೆ ನುಗ್ಗಿ ಶತ್ರುಗಳ ಬೇಟೆಯಾಡಬಹುದು ಎಂಬ ಪರಿಕಲ್ಪನೆಯೇ ನಮ್ಮ ದೇಶದ ಒಂದಿಷ್ಟು ತಥಾಕಥಿತ ಚಿಂತಕರಿಗೆ ಪಥ್ಯವಾಗಿರಲಿಲ್ಲ. ಹೀಗಿರುವಾಗ, ಅಸ್ಸಾಂ, ಮಣಿಪುರ ಮತ್ತು ಮಿಜೋರಾಮ್‌ಗಳಲ್ಲಿ ಹಿಂಸಾಚಾರ, ರಾಷ್ಟ್ರವಿರೋಧಿ ಕೃತ್ಯಗಳನ್ನು ಎಸಗಿ ಮ್ಯಾನ್ಮಾರ್‌ನಲ್ಲಿ ಅಡಗಿದ್ದರು ಉಗ್ರರು. ಆ ಪರರಾಷ್ಟ್ರ ದಲ್ಲಿದ್ದ ಉಗ್ರರ ನೆಲೆಗಳನ್ನೇ ಧ್ವಂಸಮಾಡಿದ್ದು ಸುಮಾರು 12 ವರ್ಷಗಳ ಹಿಂದೆ. ಅಂದಿನಿಂದ ಇಂದಿನವರೆಗೆ ಭಾರತವು ತನ್ನ ವೈಚಾರಿಕ ಮಗ್ಗಲನ್ನು ಬದಲಿಸಿ, ‘ಅಹಿಂಸೆ’ ಎಂಬ ಭ್ರಮೆಯಿಂದ ಹೊರಬಂದಿದೆ.

ಮ್ಯಾನ್ಮಾರ್‌ನೊಳಗೆ ನುಗ್ಗಿ ಉಗ್ರರನ್ನು ನಾಶಪಡಿಸಿದಾಗ ಪಾಕಿಸ್ತಾನದ ಅಂದಿನ ನಾಯಕರು, “ಪಾಕಿಸ್ತಾನವನ್ನು ಭಾರತವು ಮ್ಯಾನ್ಮಾರ್ ಎಂದು ಭ್ರಮಿಸಬಾರದು" ಎಂಬ ಸೊಕ್ಕಿನ ಹೇಳಿಕೆ ನೀಡಿದ್ದರು. ನಂತರ ಮೊದಲನೇ ‘ಸರ್ಜಿಕಲ್’ ಸೇನಾ ಕಾರ್ಯಾಚರಣೆಯನ್ನು ಭಾರತ ಕೈಗೊಂಡರು ಕೂಡ, ನಮ್ಮದೇ ದೇಶದಲ್ಲಿನ ಒಂದಿಷ್ಟು ನಾಯಕರು ಅದಕ್ಕೆ ಸಾಕ್ಷಿ ಕೇಳುವ ಉದ್ಧಟತನವನ್ನು ತೋರಿ, ದಾಳಿಯನ್ನು ಖಂಡಿಸಿದರು.

ಪುಲ್ವಾಮಾ ದಾಳಿಯ ನಂತರ 2ನೇ ವೈಮಾನಿಕ ಸರ್ಜಿಕಲ್ ದಾಳಿ ನಡೆದಾಗ, ಮತ್ತೆ ಮಾತಿನ ಅಖಾಡಕ್ಕಿಳಿದ ‘ಅಹಿಂಸಾ ಪೂಜಾರಿಗಳು’, ಸೇನಾಪಡೆಯ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಸಂಶಯ ಉಂಟಾಗುವಂಥ ಮಾತುಗಳನ್ನಾಡಿದರು ಮತ್ತು ‘ಇದು ಚುನಾವಣೆ ದೃಷ್ಟಿಯಿಂದ ಕೈಗೊಂಡ ಕಾರ್ಯಾಚರಣೆ’ ಎಂದು ಟೀಕಿಸಿದರು.

ಆದರೆ ಈ ಬಾರಿ ಇಂಥ ಉದ್ಧಟತನದ ಮಾತುಗಳು ಕೇಳಿಬರದಿರುವುದೇ ‘ಬದಲಾದ ಭಾರತ’ಕ್ಕೆ ಸಾಕ್ಷಿ. ಇತ್ತೀಚೆಗೆ ಪಹಲ್ಗಾಮ್ ಹತ್ಯಾಕಾಂಡ ನಡೆದ ನಂತರ ದೇಶಕ್ಕೆ ದೇಶವೇ ಜಾತಿ-ಮತ-ಪಂಥ-ಭಾಷೆಗಳನ್ನು ಮರೆತು ಮೈಕೊಡವಿಕೊಂಡು ಎದ್ದು ನಿಂತು, ‘ನೆರೆಯಲ್ಲಿರುವ ನರರಾಕ್ಷಸರ ಮೇಲೆ ಅವರದೇ ಗುಂಡಿನ ಭಾಷೆಯಲ್ಲಿ ಉತ್ತರಿಸಿ ಸೇಡು ತೀರಿಸಿಕೊಳ್ಳಬೇಕು’ ಎಂದು ಆಗ್ರಹಿಸಿತು; ಇದು ದೇಶವು ವೈಚಾರಿಕವಾಗಿ ಬದಲಾಗಿದ್ದಕ್ಕೆ ಒಂದು ಉದಾಹರಣೆಯಾಗಿತ್ತು.

ಏಕೆಂದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಾವ ಹಂತದಲ್ಲಿಯೂ ಜನರ ಮೇಲೆ ನಕಾರಾತ್ಮಕ ಪ್ರಭಾವ ಬೀರುವಂಥ ರೀತಿಯಲ್ಲಿ ‘ಶಾಂತಿಮಂತ್ರ’ದ ಜಪವಾಗಲಿಲ್ಲ. ಇಡೀ ದೇಶವು ಒಗ್ಗಟ್ಟಿನಿಂದ ಯುದ್ಧಕ್ಕೆ ಒತ್ತಾಸೆಯಾಗಿ ನಿಂತಿದ್ದು ಬದಲಾದ ಭಾರತೀಯರ ಮನಸ್ಥಿತಿಯ ದ್ಯೋತಕವಾಗಿತ್ತು. ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ನಂತರ ದೇಶವು ‘ಅಹಿಂಸೆ’ ಎಂಬ ಭ್ರಮಾಲೋಕ ದಿಂದ ಹೊರಬಂದು, ‘ದೇಶರಕ್ಷಣೆಗಾಗಿ ಆಕ್ರಮಣವೇ ಸರಿಯಾದ ಮಾರ್ಗ’ ಎಂದು ಒಕ್ಕೊರಲಿನಿಂದ ಹೇಳುವಂಥ ವಾತಾವರಣ ನಿರ್ಮಾಣವಾಗಿತ್ತು.

ಬರೀ ದ್ವಿಪಕ್ಷೀಯ ಮಾತುಕತೆಗಳು, ಮಾತಿನಲ್ಲಿ ಉಗ್ರವಾಗಿ ಖಂಡಿಸುವುದು ನಡೆಯಲಿಲ್ಲ. “ಅಮಾನವೀಯ ದಾಳಿಕೋರರು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಅವರನ್ನು ಶಿಕ್ಷಿಸಿಯೇ ತೀರುತ್ತೇವೆ" ಎಂದು ದೇಶದ ಪ್ರಧಾನ ಮಂತ್ರಿಗಳೇ ಬಹಿರಂಗವಾಗಿ ಹೇಳಿದ್ದನ್ನು ನಂಬಿದ ಜನರು ಶತ್ರುಗಳ ಮೇಲಿನ ದಾಳಿಗಾಗಿ ಕಾಯುತ್ತಿದ್ದರು. ದಾಳಿಯ ನಂತರದಲ್ಲಿ, ಇಡೀ ದೇಶವೇ ಎಣೆಯಿಲ್ಲ ದಂತೆ ಸಂಭ್ರಮಿಸಿತು.

ದೇಶದ ನಿಜವಾದ ಮನಸ್ಥಿತಿಯೆಂದರೆ, ಪ್ರತಿಯೊಬ್ಬ ಭಾರತೀಯರೂ ಇದೇ ಹಣಾಹಣಿಯ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಕ್ತಿ ಹಾಗೂ ಬಲೂಚಿಸ್ತಾನದ ಸ್ವಾತಂತ್ರ್ಯವೂ ತಕ್ಷಣವೇ ನೆರವೇರಲಿ ಎಂದು ಕಾಯುತ್ತಿದ್ದರು. ಕದನವಿರಾಮ ಘೋಷಿಸಿದ್ದಕ್ಕೆ ಯಾರಿಗೂ ಸಮಾಧಾನವಿರಲಿಲ್ಲ. ಅದೂ ಸಹಜವೇ. ಏಕೆಂದರೆ ಇಂಥ ಧರ್ಮಾಂಧ ಮತ್ತು ನೀಚ ರಾಷ್ಟ್ರವು ಮಗ್ಗುಲಲ್ಲಿ ಇರುವಾಗ ಕದನವಿರಾಮವು ತಾತ್ಕಾಲಿಕ ಅಂತಾರಾಷ್ಟ್ರೀಯ ಅವಶ್ಯಕತೆ ಎನಿಸುತ್ತದೆ.

‘ಮುಂದಿನ ದಿನಗಳಲ್ಲಿ ಶಕ್ತಿವಂತ ರಾಷ್ಟ್ರ ಮಾತ್ರವೇ ಶಾಂತಿಯನ್ನು ಕಾಪಾಡಲು ಸಾಧ್ಯ. ಅಶಕ್ತ ನಾಗಿ ಅಹಿಂಸೆಯನ್ನು ಬೋಧಿಸಿದರೆ ನಗೆಪಾಟಲಿಗೆ ಈಡಾಗಿ, ಸ್ವಯಂನಾಶಕ್ಕೆ ಕಾರಣ ರಾಗುತ್ತೇವೆ’ ಎಂಬ ಪಾಠವನ್ನು ದೇಶವು ಮರೆಯಬಾರದು. ಶತ್ರುಗಳೊಂದಿಗೆ ಇನ್ನೆಂದೂ ಅಹಿಂಸೆಯ ಮಾತು ಸಲ್ಲದು’ ಎಂಬ ಸತ್ಯವನ್ನು ದೇಶದ ಜನರು ಮನಗಂಡಿರುವುದು ಗಮನಾರ್ಹ ಬದಲಾವಣೆಯೇ ಸರಿ...

(ಲೇಖಕರು ಹಿರಿಯ ನ್ಯಾಯವಾದಿ ಮತ್ತು ನಿಕಟಪೂರ್ವ

ಸಾಲಿಸಿಟರ್ ಜನರಲ್, ಭಾರತ ಸರಕಾರ)