ಸಂಪಾದಕರ ಸದ್ಯಶೋಧನೆ
ಪ್ರಕಾಶ ಅಯ್ಯರ್ ಬರೆದ How Come No One Told Me That? ಪುಸ್ತಕವನ್ನು ಓದುತ್ತಿದ್ದೆ. ಈ ಕೃತಿಯಲ್ಲಿ ‘ದಂತವೈದ್ಯರ ಉಪದೇಶ’ ಎಂಬ ಒಂದು ಸಣ್ಣ ಅಧ್ಯಾಯವಿದೆ. ಅದರಲ್ಲಿ ಲೇಖಕರು ಒಂದು ಸರಳ ಸಂಗತಿಯನ್ನು ವಿವರಿಸಿದ್ದಾರೆ. ಅಯ್ಯರ್ ಹೇಳುತ್ತಾರೆ - ನನ್ನ ದಂತವೈದ್ಯರು ಸ್ವಲ್ಪ ಡಿಫರೆಂಟ್. ಅವರು ಕೆಲಸ ಮಾಡುವುದಕ್ಕಿಂತ ಹೆಚ್ಚು ಮಾತನಾಡು ತ್ತಾರೆ. ಅವರ ಕೈಯಲ್ಲಿ ಡ್ರಿಲ್ಲಿಂಗ್ ಮಿಷನ್ ಇದ್ದರೂ, ಬಾಯಿ ಮಾತ್ರ ಹರಟೆಯ ಫ್ಯಾಕ್ಟರಿ. ಸಮಸ್ಯೆ ಏನೆಂದರೆ, ನಾನು ಕುರ್ಚಿಯ ಮೇಲೆ ಮಲಗಿ, ಬಾಯಿ ಅಗಲವಾಗಿ ತೆರೆದಿರುತ್ತೇನೆ. ಅವರು ಕೇಳುವ ಪ್ರಶ್ನೆಗಳಿಗೆ ‘ಹೂಂ ಅನ್ನಲೂ ಆಗದ, ಹೂಹೂಂ’ ಎಂದು ತಲೆ ಅಡಿಸಲೂ ಆಗದ ಸ್ಥಿತಿ ನನ್ನದು. ಆದರೆ ಅಂದು, ಆ ಪುದೀನಾ ರುಚಿಯ ಮೌತ್‌ವಾಶ್ ಕುಡಿದು ಬಾಯಿ ಮುಕ್ಕಳಿಸುವಾಗ ಅವರು ಹೇಳಿದ ಒಂದು ಮಾತು, ಮೌತ್‌ವಾಶ್ ರುಚಿ ಹೋದ ಮೇಲೂ ನನ್ನ ತಲೆಯಲ್ಲಿ ಉಳಿದುಬಿಟ್ಟಿತು.
ಅವರು ಹೇಳಿದ್ದು ಇಷ್ಟೇ: ‘ಬಾಯಿ ತೊಳೆಯುವಾಗ ತುಂಬಾ ನೀರು ತುಂಬಿಕೊಳ್ಳಬೇಡಿ. ಬಾಯಲ್ಲಿ ಸ್ವಲ್ಪ ಜಾಗ ಬಿಡಿ.’ ನಮಗೆಲ್ಲ ಏನೋ ಒಂದು ಉತ್ಸಾಹ. ಬಾಯಿ ತುಂಬಾ ನೀರು ತುಂಬಿಕೊಂಡು ‘ಗುಳುಗುಳು’ ಮಾಡಿದರೆ ಹಲ್ಲುಗಳೆಲ್ಲ ಫಳಫಳ ಹೊಳೆಯುತ್ತವೆ ಎಂಬ ಭ್ರಮೆ.
ಇದನ್ನೂ ಓದಿ: Vishweshwar Bhat Column: ದ ಲಾಸ್ಟ್ ಮೀಟಿಂಗ್ ಥಿಯರಿ ಎಂದರೇನು ?
ಆದರೆ ಡಾಕ್ಟರ್ ಹೇಳಿದ ಸತ್ಯ ಬೇರೆಯೇ ಇತ್ತು. ‘ಬಾಯಿ ತುಂಬಾ ನೀರಿದ್ದರೆ, ಅದನ್ನು ಆ ಕಡೆಯಿಂದ ಈ ಕಡೆಗೆ ಚಲಿಸಲು (Squish-Squish) ಜಾಗವೇ ಇರುವುದಿಲ್ಲ. ನೀರು ಕೆಲಸ ಮಾಡಬೇಕೆಂದರೆ ಅದಕ್ಕೆ ಸ್ವಲ್ಪ ಜಾಗ’ ಬೇಕು. ಕಡಿಮೆ ನೀರಿದ್ದಾಗ ಮಾತ್ರ ಅದು ಜೆಟ್ ವೇಗದಲ್ಲಿ ಹಲ್ಲಿನ ಸಂದಿ-ಸಂದಿಗಳನ್ನು ತಲುಪಲು ಸಾಧ್ಯ. ಕಡಿಮೆ ಎಂದರೆ ಹೆಚ್ಚು’ (Less is More)-ಇದು ಕೇವಲ ದಂತ ವಿಜ್ಞಾನವಲ್ಲ, ಜೀವನದ ಜ್ಞಾನವೂ ಹೌದು!
ನಾವು ಬೇರೆಯವರನ್ನು ತಿದ್ದಲು ಹೊರಟಾಗಲೂ ಇದೇ ತಪ್ಪನ್ನು ಮಾಡುತ್ತೇವೆ. ನಮ್ಮ ಸ್ನೇಹಿತನೋ, ಮಗನೋ ಅಥವಾ ಸಹೋದ್ಯೋಗಿಯೋ ಏನೋ ಒಂದು ತಪ್ಪು ಮಾಡು ತ್ತಿದ್ದಾನೆ ಎಂದ ತಕ್ಷಣ, ನಮಗೆ ಎಲ್ಲಿಲ್ಲದ ಆತುರ. ಅವನ ಇಡೀ ವ್ಯಕ್ತಿತ್ವವನ್ನೇ ಒಂದೇ ದಿನದಲ್ಲಿ ಬದಲಾಯಿಸಿಬಿಡಬೇಕು ಎಂಬ ಹಠಕ್ಕೆ ಬೀಳುತ್ತೇವೆ.
ಫಲಿತಾಂಶ? ನಾವು ಅವನಿಗೆ ನೂರು ಸಲಹೆಗಳನ್ನು ನೀಡುತ್ತೇವೆ. ಹೀಗೆ ಮಾಡಬೇಡ, ಹಾಗೆ ಮಾಡು, ಬಟ್ಟೆ ಹೀಗೆ ಧರಿಸು, ಮಾತು ಹಾಗಿರಲಿ...’ ಹೀಗೆ ಇಪ್ಪತ್ತು ಅಂಶಗಳ ದೊಡ್ಡ ಪಟ್ಟಿಯನ್ನೇ ಅವನ ಕೈಗಿಡುತ್ತೇವೆ. ಪಾಪ, ಆ ವ್ಯಕ್ತಿಗೆ ಎಲ್ಲಿಂದ ಶುರು ಮಾಡಬೇಕೆಂದೇ ತಿಳಿಯುವುದಿಲ್ಲ.
ಬಾಯಿ ತುಂಬಾ ನೀರು ತುಂಬಿಕೊಂಡವನಿಗೆ ಅದನ್ನು ಆಡಿಸಲು ಹೇಗೆ ಸಾಧ್ಯವಾಗದೋ, ಹಾಗೆಯೇ ತಲೆ ತುಂಬಾ ಸಲಹೆಗಳನ್ನು ತುಂಬಿಕೊಂಡವನಿಗೆ ಒಂದನ್ನೂ ಕಾರ್ಯಗತ ಗೊಳಿಸಲು ಸಾಧ್ಯವಾಗುವುದಿಲ್ಲ. ಉತ್ತಮ ಕೋಚ್ ಅಥವಾ ಮಾರ್ಗದರ್ಶಿ ಏನು ಮಾಡು ತ್ತಾನೆ ಗೊತ್ತಾ? ಅವನು ಹತ್ತಾರು ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಬದಲಾಗಿ, ಬದಲಾವಣೆಯ ದೊಡ್ಡ ಅಂಶ’ ಯಾವುದು ಎಂಬುದನ್ನು ಪತ್ತೆಹಚ್ಚುತ್ತಾನೆ. ಆ ಒಂದೇ ಒಂದು ಬದಲಾವಣೆಯ ಮೇಲೆ ಕೆಲಸ ಮಾಡಲು ಪ್ರೇರೇಪಿಸುತ್ತಾನೆ. ಒಂದು ಬದಲಾವಣೆ ಸುಲಭ, ಹತ್ತು ಬದಲಾವಣೆಗಳು ಗೊಂದಲದ ಗೂಡು.
ಗಾಲ್ಫ್ ಕ್ಲಬ್‌ನಲ್ಲಿ ಮೊದಲ ಬಾರಿ ಬ್ಯಾಟ್ (ಕ್ಲಬ್) ಹಿಡಿದು ನಿಂತಾಗ, ಚೆಂಡು ಹೋಗ ಬೇಕಾದ ಜಾಗ ಬಿಟ್ಟು ಎಂದರಲ್ಲಿ ಹೋಗುತ್ತದೆ. ಆಗ ಅಲ್ಲಿನ ತರಬೇತುದಾರ ಪ್ರತಿ ಶೂಟ್ ನಂತರವೂ ಒಂದೊಂದು ಹೊಸ ರೂಲ್ಸ್ ಹೇಳುತ್ತಾನೆ. ತಲೆ ಕೆಳಗೆ ಇಡಿ’, ಕೈಗಳನ್ನು ಹತ್ತಿರ ತನ್ನಿ’, ಹಿಡಿತ ಬಿಗಿಯಾಗಿರಲಿ’, ಈಗ ಸಡಿಲ ಮಾಡಿ’... ಆಗ ಅನೇಕರಿಗೆ ಆಟಕ್ಕಿಂತ ಅವನ ಸೂಚನೆಗಳೇ ದೊಡ್ಡ ಹೊರೆ ಎನಿಸುತ್ತವೆ.
ಆಗ ಆಟ ಸುಧಾರಿಸುವುದಿಲ್ಲ. ಪಳಗಿದ ಮಾರ್ಗದರ್ಶಕ ಬಂದು, ಆಟವನ್ನು ಸುಮ್ಮನೆ ಗಮನಿಸಿ, ನಿಮ್ಮ ಕೈ ಹಿಡಿತವನ್ನು (Grip) ಸ್ವಲ್ಪ ಬದಲಿಸಿ ಅಷ್ಟೇ’ ಅಂತಾನೆ. ಆ ಮಾರ್ಗ ದರ್ಶಕ ಹೇಳಿದ ಅಂಶದತ್ತ ಗಮನ ಹರಿಸಿದರೆ ಅಸಾಧಾರಣ ಬದಲಾವಣೆ ಸಾಧ್ಯ. ಎಲ್ಲವನ್ನೂ ಒಟ್ಟಿಗೆ ಸರಿಪಡಿಸಲು ಹೋದರೆ ಯಾವುದೂ ಸರಿಯಾಗುವುದಿಲ್ಲ.
ಶಕ್ತಿಯನ್ನು ಕೇಂದ್ರೀಕರಿಸುವುದು (Focus) ಮುಖ್ಯ. ನಾಯಕತ್ವದ ವಿಷಯದಲ್ಲೂ ಇದೇ ಸೂತ್ರ ಅನ್ವಯಿಸುತ್ತದೆ. ಅನೇಕ ಬಾಸ್‌ಗಳು ಅಥವಾ ಲೀಡರ್‌ಗಳು ತಮ್ಮ ಅನುಭವದ ಅಹಂನಲ್ಲಿ ಮುಳುಗಿರುತ್ತಾರೆ. ಅವರು ತಮ್ಮ ಸಹೋದ್ಯೋಗಿಗಳಿಗೆ ಕೆಲಸ ಕೊಡುವಾಗ, ‘ನಾನು ಹೇಳಿದಂತೆಯೇ, ಅಕ್ಷರಶಃ ಹೀಗೆಯೇ ಮಾಡು’ ಎಂಬ ಹುಕುಂ ಹೊರಡಿಸುತ್ತಾರೆ. ಇದು ಆ ಉದ್ಯೋಗಿಯ ಸೃಜನಶೀಲತೆಯ ಕತ್ತು ಹಿಸುಕಿದಂತೆ. ನೀವು ಅವರಿಗೆ ‘ಏನು ಮಾಡಬೇಕು’ ಮತ್ತು ‘ಅದನ್ನು ಯಾಕೆ ಮಾಡಬೇಕು’ ಎಂಬುದನ್ನು ಮಾತ್ರ ವಿವರಿಸಿ. ಅದನ್ನು ‘ಹೇಗೆ ಮಾಡಬೇಕು’ ಎಂಬುದನ್ನು ಅವರಿಗೆ ಬಿಟ್ಟುಬಿಡಿ. ‘ಬಾಯಿಯಲ್ಲಿ ನೀರು ಆಡಲು ಹೇಗೆ ಜಾಗ ಬೇಕೋ, ಹಾಗೆಯೇ ಕೆಲಸಗಾರನಿಗೆ ತನ್ನ ಕಲ್ಪನೆಯನ್ನು ಬಳಸಲು ಸ್ವಲ್ಪ ಸ್ಪೇಸ್’ ಬೇಕು.