ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ

ಕೃಷಿ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ದೇವಕಿ ಅಮ್ಮನಿಗೆ ಬಾಲ್ಯದಿಂದಲೇ ಗಿಡಮರಗಳ ಬಗ್ಗೆ ಅಪಾರ ಒಲವಿತ್ತು. ಆದರೆ ಕಾಲಿಗೆ ತೀವ್ರವಾಗಿ ಪೆಟ್ಟಾದ ಕಾರಣ ಅವರಿಗೆ ಕೃಷಿ ಕೆಲಸಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ನಿರಾಶೆಯನ್ನು ಮೆಟ್ಟಿ ನಿಲ್ಲಲು, ಅವರು 1980ರ ದಶಕ ದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿದ್ದ ಐದು ಎಕರೆ ಬಂಜರು ಭೂಮಿಯಲ್ಲಿ ಒಂದೊಂದೇ ಸಸಿಗಳನ್ನು ನೆಡಲು ಪ್ರಾರಂಭಿಸಿದರು.

ಒಂದೊಳ್ಳೆ ಮಾತು

92 ವರ್ಷದ ದೇವಕಿ ಅಮ್ಮ ಅವರು, ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಜಗತ್ತಿನಲ್ಲಿ ಎಂತಹ ಅದ್ಭುತ ಮತ್ತು ಶಾಶ್ವತ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಯಾಗಿದ್ದಾರೆ. ಕೇರಳದ ಆಲಪ್ಪುಳ ಜಿಲ್ಲೆಯ ಮುತ್ತುಕುಲಂ ಎಂಬ ಪುಟ್ಟ ಹಳ್ಳಿಯ ಈ ಅಜ್ಜಿ, ಇಂದು ‘ಕೇರಳದ ಅರಣ್ಯ ಮಾತೆ’ ಎಂದೇ ಪ್ರಸಿದ್ಧರಾಗಿದ್ದಾರೆ.

ಒಂದು ಕಾಲದಲ್ಲಿ ಸಂಪೂರ್ಣ ಬಂಜರಾಗಿದ್ದ ಭೂಮಿಯನ್ನು ತಮ್ಮ ದಶಕಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಒಂದು ದಟ್ಟವಾದ ಹಾಗೂ ಸಮೃದ್ಧವಾದ ಕಾಡಾಗಿ ಪರಿವರ್ತಿಸಿದ ಹೆಗ್ಗಳಿಕೆ ಇವರದ್ದು.

ಕೃಷಿ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ದೇವಕಿ ಅಮ್ಮನಿಗೆ ಬಾಲ್ಯದಿಂದಲೇ ಗಿಡಮರಗಳ ಬಗ್ಗೆ ಅಪಾರ ಒಲವಿತ್ತು. ಆದರೆ ಕಾಲಿಗೆ ತೀವ್ರವಾಗಿ ಪೆಟ್ಟಾದ ಕಾರಣ ಅವರಿಗೆ ಕೃಷಿ ಕೆಲಸಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ನಿರಾಶೆಯನ್ನು ಮೆಟ್ಟಿ ನಿಲ್ಲಲು, ಅವರು 1980ರ ದಶಕ ದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿದ್ದ ಐದು ಎಕರೆ ಬಂಜರು ಭೂಮಿಯಲ್ಲಿ ಒಂದೊಂದೇ ಸಸಿಗಳನ್ನು ನೆಡಲು ಪ್ರಾರಂಭಿಸಿದರು.

ಇದನ್ನೂ ಓದಿ: Roopa Gururaj Column: ಕರ್ಣನ ದ್ವಿಮುಖ ವ್ಯಕ್ತಿತ್ವ, ದಾನಮುಖ ಮತ್ತು ದಾನವ ಗುಣದ ವೈರುಧ್ಯ

ಅಂದು ಅವರು ನೆಟ್ಟ ಆ ಮೊದಲ ಸಸಿಗಳು, ಇಂದು ಒಂದು ಬೃಹತ್ ಹಸಿರು ಸಾಮ್ರಾಜ್ಯವಾಗಿ ಬೆಳೆದು ನಿಂತಿವೆ. ಕೇವಲ ಒಂದು ವೈಯಕ್ತಿಕ ಆಸಕ್ತಿಯಾಗಿ ಶುರುವಾದ ಈ ಕೆಲಸ, ವರ್ಷಗಳು ರುಳಿದಂತೆ ಒಂದು ಬೃಹತ್ ಪರಿಸರ ವ್ಯವಸ್ಥೆಯಾಗಿ ಮಾರ್ಪಟ್ಟಿತು. ಇಂದು ದೇವಕಿ ಅಮ್ಮನವರ ಈ ಕಾಡಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮರಗಳಿವೆ.

ಇಲ್ಲಿ ತೇಗ, ಮಹಾಗನಿ, ಮಾವು, ಹಲಸು, ಮತ್ತು ಪೈನ್ ಮರಗಳಷ್ಟೇ ಅಲ್ಲದೆ, ಔಷಧಿಯ ಗಿಡ ಮೂಲಿಕೆಗಳು ಹಾಗೂ ಅಳಿವಿನಂಚಿನಲ್ಲಿರುವ ಅನೇಕ ಅಪರೂಪದ ಸಸ್ಯ ಪ್ರಭೇದಗಳಿವೆ. ಇದು ಕೇವಲ ಮರಗಳ ತೋಪಲ್ಲ; ನೂರಾರು ಜಾತಿಯ ಪಕ್ಷಿಗಳು, ಚಿಟ್ಟೆಗಳು, ಕೀಟಗಳು ಮತ್ತು ಸಣ್ಣಪುಟ್ಟ ವನ್ಯಜೀವಿಗಳಿಗೆ ಆಶ್ರಯ ನೀಡುವ ಸುರಕ್ಷಿತ ತಾಣವಾಗಿದೆ.

ಪರಿಸರ ಸಂರಕ್ಷಣೆ ಎಂದರೆ ಕೇವಲ ಸರಕಾರ ಅಥವಾ ದೊಡ್ಡ ಸಂಸ್ಥೆಗಳ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂಬುದನ್ನು ದೇವಕಿ ಅಮ್ಮ ನಿರೂಪಿಸಿದ್ದಾರೆ. ಯಾವುದೇ ಸರಕಾರದ ನೆರವು, ಯಂತ್ರೋಪಕರಣಗಳು ಅಥವಾ ದೊಡ್ಡ ಸಂಸ್ಥೆಗಳ ಆರ್ಥಿಕ ಸಹಾಯವಿಲ್ಲದೆ, ಕೇವಲ ತಮ್ಮ ಸ್ವಂತ ಕೈಯಿಂದ ಪ್ರತಿದಿನ ಗಿಡಗಳಿಗೆ ನೀರು ಹಾಕಿ, ಪೋಷಿಸಿ ಈ ಸಾಧನೆ ಮಾಡಿ ದ್ದಾರೆ.

ಈಗ ಅವರಿಗೆ 92 ವರ್ಷ ವಯಸ್ಸಾಗಿದ್ದರೂ, ಅವರ ಉತ್ಸಾಹ ಮತ್ತು ಪ್ರಕೃತಿಯ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಈ ನಿಸ್ವಾರ್ಥ ಪರಿಸರ ಸೇವೆಯನ್ನು ಗುರುತಿಸಿ ಭಾರತ ಸರಕಾರವು ಅವರಿಗೆ ‘ನಾರಿ ಶಕ್ತಿ ಪುರಸ್ಕಾರ’ (2018) ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ದೇವಕಿ ಅಮ್ಮನವರ ಪರಂಪರೆಯು ಅವರು ನೆಟ್ಟ ಪ್ರತಿಯೊಂದು ಮರದಲ್ಲೂ ಎದ್ದು ಕಾಣುತ್ತದೆ. ಅವರು ಸೃಷ್ಟಿಸಿದ ಈ ಕಾಡು ಮುಂಬರುವ ಅನೇಕ ತಲೆಮಾರುಗಳಿಗೆ ಶುದ್ಧ ಗಾಳಿ, ನೆರಳು ಮತ್ತು ಜೀವಸಂಕುಲಕ್ಕೆ ಆಶ್ರಯವನ್ನು ನೀಡುತ್ತದೆ. ಪರಿಸರ ನಾಶದ ಬಗ್ಗೆ ಕೇವಲ ಮಾತನಾಡುತ್ತಾ ಕೂರುವ ಬದಲು, ಕಾರ್ಯರೂಪಕ್ಕೆ ಇಳಿದರೆ ಏನನ್ನು ಸಾಧಿಸಬಹುದು ಎನ್ನುವುದಕ್ಕೆ ದೇವಕಿ ಅಮ್ಮನವರ ಈ ಸಾಧನೆಯೇ ಸಾಕ್ಷಿ.

ಮನೆಯಲ್ಲಿ ನಾಲ್ಕು ರೀತಿಯ ಹಿಂದಿನ ಗಿಡಗಳನ್ನು ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸಿ ನಾವು ಪರಿಸರವಾದಿಗಳು ಎಂದು ಭ್ರಮೆಯಲ್ಲಿರುತ್ತೇವೆ. ಪರಿಸರದ ಸಂರಕ್ಷಣೆಗೆ ನಿಜವಾದ ಕಾಳಜಿ ಇದ್ದಾಗ ನಮಗೆ ನಾವು ಹೋಗುವ ಪ್ರತಿ ತಳದಲ್ಲಿ ಬದುಕುವ ಪ್ರತಿ ಊರಿನಲ್ಲೂ ಪರಿಸರವನ್ನು ಕಾಯ್ದುಕೊಳ್ಳುವ ನೂರೊಂದು ದಾರಿಗಳು ಕಾಣುತ್ತವೆ.

ಕಾರಿನಲ್ಲಿ ಮನೆಗಳಲ್ಲಿ ನಿರಂತರವಾಗಿ ಏರ್ ಕಂಡೀಶನ್‌ನಲ್ಲಿ ಕುಳಿತು, ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವುದು ಢಾಂಬಿಕತೆ ಎನಿಸುತ್ತದೆ. ಪರಿಸರದ ಬಗ್ಗೆ ಕಾಳಜಿ ಇದ್ದರೆ ನಾವು ಮಾಡುವ ಪ್ರತಿ ಕೆಲಸದಲ್ಲೂ, ನೋಡುವ ಪ್ರತಿ ನೋಟದಲ್ಲೂ ಯೋಚನೆಯಲ್ಲೂ ಬದಲಾವಣೆಯಾಗಬೇಕು. ಚಿಕ್ಕ ಚಿಕ್ಕ ಹೆಜ್ಜೆಗಳು ದೊಡ್ಡ ಬದಲಾವಣೆ ತರುತ್ತವೆ. ಪರಿಸರ ಬದಲಾವಣೆಯೂ ನಮ್ಮಿಂದಲೇ, ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗಬೇಕು.

ರೂಪಾ ಗುರುರಾಜ್

View all posts by this author