Dr N Someshwara Column: ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್ ಬ್ರೆತ್ !
“ನಾನು ನಿಮಗೆ ಒಂದೇ ಒಂದು ಡ್ರಿಂಕ್ ಕೊಡಿಸಲೇ" ಎಂದ. ಆಕೆಯು ಅವನನ್ನು ಉಪೇಕ್ಷಿಸಿದಳು. ಸರಿಯಿದ್ದ ತನ್ನ ಟೈಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡು “ಪ್ಲೀಸ್..." ಎಂದ. ಅವನ ಕಡೆ ಕುಡಿ ನೋಟವನ್ನು ಬೀರಿ “ಓಕೇ... ಬಿಯರ್ ಪ್ಲೀಸ್" ಎಂದಳು. ಅವನು ಎದ್ದೆನೋ ಬಿದ್ದೆನೋ ಎಂದು ಎರಡು ಮಗ್ ಪೂರ್ಣ ಬಿಯರ್ ತಂದ. ಮಗ್ಗನ್ನು ಎತ್ತಿಕೊಂಡು ಚಿಯರ್ಸ್ ಎಂದ. ಅವಳೂ ಮಗ್ಗನ್ನು ಎತ್ತಿ ಕೊಂಡು ಚಿಯರ್ಸ್ ಹೇಳಿದಳು.


ಹಿಂದಿರುಗಿ ನೋಡಿದಾಗ
ದಕ್ಷಿಣ ಅಮೆರಿಕದ ಕೊಲಂಬಿಯ ದೇಶ. ಅದರ ರಾಜಧಾನಿ ಬೊಗೋಟ. ಬೊಗೋಟದಲ್ಲಿ ‘ಡೇವಿಲ್ಸ್ ಕೆಫೆ’. ಡೇವಿಲ್ಸ್ ಕೆಫೆ ಎನ್ನುವುದು ಒಂದು ಸ್ಥಳದ ಹೆಸರಲ್ಲ. ಬೊಗೋಟ ನಗರದ ರಾತ್ರಿ ಗಳು, ತಮ್ಮ ಬಣ್ಣ ಬಣ್ಣಗಳನ್ನು ತೆರೆದುಕೊಂಡು ರಸಿಕರನ್ನು ಆಕರ್ಷಿಸುವ ವಿಶಿಷ್ಟ ಪ್ರದೇಶಗಳು. ಹೆಣ್ಣು, ಹೆಂಡ, ಡ್ರಗ್ಸ್, ಅಪರಾದ, ಕೊಳ್ಳೆ, ದರೋಡೆ, ಹಠಸಂಭೋಗ, ಹತ್ಯೆಗಳು ಸುಲಭವಾಗಿ ನಡೆಯುವಂಥ ಪ್ರದೇಶಗಳು. ಅವುಗಳ ಸಾಂಕೇತಿಕ ಹೆಸರು ಡೆವಿಲ್ಸ್ ಕೆಫೆ. ಅಲೀಸಿಯ 19 ವರ್ಷದ ಹುಡುಗಿ. ವಯಸ್ಸಿಗೆ ಮೀರಿದ ದೈಹಿಕ ಬೆಳವಣಿಗೆ. ಅದಕ್ಕೆ ತಕ್ಕ ಹಾಗೆ ತನ್ನ ಸೌಂದರ್ಯವನ್ನು ಉದ್ದೀಪಿಸುವಂಥ ಉಡುಗೆ, ನಡಿಗೆ ಹಾಗೂ ಮಾತುಕತೆ.
ಗಂಡು ಬಕರಾಗಳನ್ನು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚುವ ಚಾಣಾಕ್ಷತೆ. ಆ ಪ್ರದೇಶಕ್ಕೆ ಬಂದ ಹೊಸ ಬರನ್ನು ವಿಶೇಷವಾಗಿ ಪರ ಊರಿನವರನ್ನು ಗುರುತಿಸಿ, ಅವರ ಸುತ್ತಮುತ್ತಲೂ ಅಯಸ್ಕಾಂತ ದಂತೆ ಸುಳಿಯುವಳು. ಕೂಡಲೇ ಆ ಬಕರಾಗಳು ಕಬ್ಬಿಣದ ತುಂಡಿನಂತೆ ಆಕೆಯ ಕಡೆಗೆ ಆಕರ್ಷಿತರಾಗಿ, ತಮ್ಮನ್ನು ತಾವು ಬಲಿಗೊಡಲು ಪತಂಗಗಳಂತೆ, ಆಕೆಯತ್ತ ಧಾವಿಸುವುದು ಸಹಜ.
ಆ ಸಂಜೆಯೂ ಆಕೆ ತನ್ನ ಮಾದಕ ಶರೀರವನ್ನು ಪ್ರದರ್ಶಿಸುತ್ತಾ ಒಂದು ಬಾರ್‌ಗೆ ಬಂದಳು. ಬಾರ್‌ನ ಅರೆ ಬೆಳಕಿನಲ್ಲಿ ಅರ್ಧ ಬಿಳಿ ಅರ್ಧ ಕರಿ ತಲೆಗೂದಲಿನ ಮಧ್ಯ ವಯಸ್ಕ ಆಕೆಯ ಕಣ್ಣಿಗೆ ಬಿದ್ದ. ಆದರೆ ಅವನನ್ನು ಉಪೇಕ್ಷಿಸಿ ಹತ್ತಿರದಲ್ಲಿ ಖಾಲಿ ಟೇಬಲ್ಲಿನ ಮುಂದೆ ಕುಳಿತಳು. ಮಧ್ಯ ವಯಸ್ಕನು ತುಸುವೇ ಹಿಂಜರಿಯುತ್ತಾ ಆಕೆಯ ಬಳಿಗೆ ಬಂದ.
ಇದನ್ನೂ ಓದಿ: Dr N Someshwara Column: ಭಯಾನಕ ಸ್ಫೋಟಕವು ನಂಬಿಕೆಯ ಹೃದ್ರೋಗ ಔಷಧವಾದಾಗ !
“ನಾನು ನಿಮಗೆ ಒಂದೇ ಒಂದು ಡ್ರಿಂಕ್ ಕೊಡಿಸಲೇ" ಎಂದ. ಆಕೆಯು ಅವನನ್ನು ಉಪೇಕ್ಷಿಸಿದಳು. ಸರಿಯಿದ್ದ ತನ್ನ ಟೈಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡು “ಪ್ಲೀಸ್..." ಎಂದ. ಅವನ ಕಡೆ ಕುಡಿ ನೋಟವನ್ನು ಬೀರಿ “ಓಕೇ... ಬಿಯರ್ ಪ್ಲೀಸ್" ಎಂದಳು. ಅವನು ಎದ್ದೆನೋ ಬಿದ್ದೆನೋ ಎಂದು ಎರಡು ಮಗ್ ಪೂರ್ಣ ಬಿಯರ್ ತಂದ. ಮಗ್ಗನ್ನು ಎತ್ತಿಕೊಂಡು ಚಿಯರ್ಸ್ ಎಂದ. ಅವಳೂ ಮಗ್ಗನ್ನು ಎತ್ತಿಕೊಂಡು ಚಿಯರ್ಸ್ ಹೇಳಿದಳು. ಆದರೆ ಅವಳು ಬಿಯರ್ ಕುಡಿಯಲಿಲ್ಲ. ಮಧ್ಯ ವಯಸ್ಕನಂತೂ ಬಾಯಾರಿದವನಂತೆ ಒಮ್ಮೆಲೇ ಬಿಯರನ್ನು ಹೀರಲಾರಂಭಿಸಿದ. ಮುಕ್ಕಾಲು ಮಗ್ ಖಾಲಿಯಾಯಿತು. “ನಾನು ಜಾನ್... ಇಲ್ಲೇ ಕಾರುಗಳ ಮಾರಾಟವನ್ನು ಮಾಡುತ್ತೇನೆ.
ಮ್ಯಾನೇಜರ್..." ಎಂದ. ಜತೆಯಲ್ಲಿಯೇ “ನೀವೂ...?" ಎಂದ. ಆಗ ಆ ವಯ್ಯಾರಿ ತನ್ನ ಮಗ್ಗಿನಲ್ಲಿರುವ ಬಿಯರನ್ನು ವಿಸ್ಕಿ ಸೇವಿಸುವಂತೆ ಒಂದೊಂದೇ ಗುಟುಕನ್ನು ಸೇವಿಸುತ್ತಿದ್ದಳು “ನಾನು ಅಲೀಸಿಯ. ಸ್ಕೂಲ್ ಡ್ರಾಪ್ ಔಟ್. ಅಪ್ಪ ಅಮ್ಮ ಇಲ್ಲ. ಫ್ರೀ ಬರ್ಡ್..." ಎಂದಳು. ಅಷ್ಟರಲ್ಲಿ ಅವನು ತನ್ನ ಮಗ್ಗನ್ನು ಖಾಲಿ ಮಾಡಿದ. “ಇಂಟರೆಸ್ಟಿಂಗ್... ನಾನು ಮತ್ತೊಂದು ಮಗ್ ಬಿಯರ್ ತರುತ್ತೇನೆ" ಎಂದು ಎದ್ದ.

ಅವಳು ‘ಆಗಲಿ’ ಎನ್ನುವಂತೆ ಕಣ್ಣುಗಳಲ್ಲೇ ಒಪ್ಪಿಗೆಯನ್ನು ಸೂಚಿಸಿದಳು. ಅವನು ಮತ್ತೊಂದು ಬಿಯರ್ ಮಗ್ ತಂದ. ಟೇಬಲ್ಲಿನ ಮೇಲಿಟ್ಟ. “ಒಂದೇ ನಿಮಿಷ!... ನೇಚರ್ ಕಾಲ್ ಮುಗಿಸಿ ಬರ್ತೇನೆ" ಎಂದ. ತುಟಿಯಂಚಿನಲ್ಲಿ ಕಂಡೂ ಕಾಣದಂತೆ ನಗುತ್ತಾ “ಬೇಗ..." ಎಂದಳು ಮಾದಕವಾಗಿ.
“ಈಗಲೇ ಬಂದೆ" ಎಂದು ಓಡಿದ ಬಕರಾ. ಅಲೀಸಿಯ ತನ್ನ ಕೈಚೀಲದಿಂದ ಪುಟ್ಟ ಡಬ್ಬಿ ತೆಗೆದಳು. ಅದರಿಂದ ಒಂದು ಕಂದುಬಣ್ಣದ ಪುಟ್ಟ ಗುಳಿಗೆಯನ್ನು ತೆಗೆದುಕೊಂಡಳು. ಅದನ್ನು ಜಾನ್ ತಂದಿಟ್ಟ ಹೊಸ ಬಿಯರ್ ಮಗ್ಗಿನ ಒಳಗೆ ಜಾರಿ ಬಿಟ್ಟಳು. ಗುಳಿಗೆಯು ಗುಳ್ಳೆಗಳನ್ನು ಏಳಿಸುತ್ತಾ ನೋಡನೋಡುತ್ತಿರುವಂತೆಯೇ ಬಿಯರಿನಲ್ಲಿ ಲೀನವಾಯಿತು. ಜಾನ್ ಬಂದ. ಬಂದವನೇ ಒಂದೇ ಏಟಿಗೆ ಅರ್ಧ ಮಗ್ ಹೀರಿದ. ಹೀರುತ್ತಿರುವಂತೆಯೇ ಅವನಿಗೆ ತಾನೆಲ್ಲಿ ಇದ್ದೇನೆ, ಯಾರ ಜತೆಯಲ್ಲಿ ಇದ್ದೇನೆ ಎನ್ನುವುದನ್ನು ಮರೆಯಲಾರಂಬಿಸಿದ. ಅವನು ತನ್ನ ಮಗ್ ಬಿಯರನ್ನು ಮುಗಿಸುತ್ತಿರು ವಂತೆಯೇ ಪರವಶನಾದ. ಅವನ ಕಣ್ಣುಗಳಲ್ಲಿ ಶೂನ್ಯತೆ ತುಂಬಿತು. ಮುಖವು ಭಾವರಹಿತ ವಾಯಿತು.
ಅಲೀಸಿಯ ಜೇನು ಸುರಿಯುವ ಧ್ವನಿಯಲ್ಲಿ ಉಸಿರಿದಳು- “ಡಿಯರ್... ನಿನ್ನ ಮನೆ ಎಲ್ಲಿ... ಅಲ್ಲಿಗೇ ಹೋಗೋಣ ಈ ಜಾಗ ಸರಿಯಿಲ್ಲ" ಎಂದಳು. “ನಿನ್ನ ಕಾರಿನ ಕೀ ಕೊಡು" ಎಂದಳು. ಅವನು ಮರು ಮಾತಿಲ್ಲದೆ ಕಾರಿನ ಬೀಗದ ಕೈಯನ್ನು ಅವಳಿಗೆ ಕೊಟ್ಟ. ಅವನ ತೋಳನ್ನು ಹಿಡಿದುಕೊಂಡು ಹೊರ ನಡೆದಳು. ಆ ಅರೆಗತ್ತಲ ಬಾರಿನಲ್ಲಿ ಯಾರೂ ಇವಳ ಕಡೆಗೆ ಗಮನವನ್ನು ನೀಡಲಿಲ್ಲ. ಅವನ ಬ್ಯುಸಿನೆಸ್ ಕಾರ್ಡ್ ತೆಗೆದು ಓದಿಕೊಂಡಳು.
ಕಾರನ್ನು ತೆಗೆದುಕೊಂಡು ಅವನ ಅಪಾರ್ಟ್ಮೆಂಟಿಗೆ ಹೋದಳು. ಬೀಗ ತೆಗೆದು ಒಳಗೆ ಹೋಗಿ ಅವನನ್ನು ಹಾಸಿಗೆಯ ಮೇಲೆ ಕೂರಿಸಿದಳು. “ಡಿಯರ್ ಎಲ್ಲಿ ನಿನ್ನ ಮೊಬೈಲ್ ಕೊಡು" ಎಂದಳು. ಅವನು ಕೊಟ್ಟ. ಮೊಬೈಲಿನಲ್ಲಿ ಒಂದು ದೊಡ್ಡ ಮೊತ್ತವನ್ನು ಟೈಪ್ ಮಾಡಿದಳು. “ಏನು ನಿನ್ನ ಪಿನ್ ನಂಬರ್" ಎಂದಳು. ಅವನು ಟೈಪ್ ಮಾಡಿದ. ನೋಡನೋಡುತ್ತಿರುವಂತೆಯೇ ಅವನ ಅಕೌಂಟಿನಲ್ಲಿದ್ದ ಹಣವು ಅಲೀಸಿಯಳ ಅಕೌಂಟಿಗೆ ಹರಿದು ಬರಲಾರಂಭಿಸಿತು...
ಮರುದಿನ ಬೆಳಗ್ಗೆ ಜಾನ್ ಎದ್ದ. ತಾನು ತನ್ನ ಶೂ ಸಮೇತ ಹಾಸಿಗೆಯಲ್ಲಿ ಮಲಗಿರುವುದು ಅವನಿಗೆ ತುಸು ಗೊಂದಲವಾಯಿತು. ರಾತ್ರಿ ತಾನು ಎಲ್ಲಿದ್ದೆ, ಯಾವಾಗ ಮನೆಗೆ ಬಂದೆ, ಬಟ್ಟೆಯನ್ನು ಬದಲಿಸದೇ ಯಾಕೆ ಮಲಗಿದೆ... ಒಂದೂ ಅವನ ನೆನಪಿಗೆ ಬರಲಿಲ್ಲ. ಆದರೆ ತಾನು ರಾತ್ರಿ ಕನಸಿನಲ್ಲಿ ಸುರಸುಂದರಿಯ ಜತೆಯಲ್ಲಿ ಕುಳಿತು, ಬಂಗಾರದ ಸಾರೋಟಿನಲ್ಲಿ, ಮೋಡಗಳ ನಡುವೆ ಸಾಗುವಾಗ, ಅವಳು ತನ್ನನ್ನು ಅದೆಷ್ಟು ಬಾರಿಗೆ ಮುದ್ದಿಸಿದಳು!... ಮುಂದೇನಾಯಿತು... ಎಂದು ಕನಸನ್ನು ನೆನಪಿಸಿಕೊಳ್ಳಲು ಯತ್ನಿಸಿದ. ಕನಸು ಮರೆತುಹೋಗಿತ್ತು.
ನೇರವಾಗಿ ಬಾತ್ ರೂಮಿಗೆ ನುಗ್ಗಿ ತಣ್ಣೀರಿನ ಶವರ್‌ನ ಕೆಳಗೆ ನಿಂತ. ಹತ್ತು ನಿಮಿಷಗಳಲ್ಲಿ ಏನೇ ನೋ ಅರೆಬರೆ ನೆನಪುಗಳು. ಹಾಗೆಯೇ ನೇರವಾಗಿ ಹೊರಬಂದು ತನ್ನ ಮೊಬೈಲನ್ನು ತೆಗೆದು ಕೊಂಡು ನೋಡಿದ. ಅವನ ಬ್ಯಾಂಕಿನ ಅಕೌಂಟಿನಲ್ಲಿದ್ದ ಹಣವೆಲ್ಲ ಮಂಗಮಾಯವಾಗಿತ್ತು!
ಕೊಲಂಬಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಬ್ರುಗ್‌ಮ್ಯಾನ್ಷಿಯ’ ಎಂಬ ಪುಟ್ಟ ಮರ ಬೆಳೆಯುತ್ತಿತ್ತು. ಸ್ಥಳೀಯ ಭಾಷೆಯಲ್ಲಿ ಅದನ್ನು ‘ಬೊರ್ರಾಚೆರೊ’ ಎಂದು ಕರೆಯುತ್ತಿದ್ದರು. ಬೊರ್ರಾಚೆರೋ ಎಂದರೆ ‘ಕುಡಿದು ಮತ್ತಿನಿಂದ ತೂರಾಡುತ್ತಿರುವವನು’ ಎಂದರ್ಥ. ಇಂಗ್ಲಿಷಿನಲ್ಲಿ ಇದನ್ನು ‘ಏಂಜೆಲ್ಸ್ ಟ್ರಂಪೆಟ್ ಟ್ರೀ’ ಎಂದು ಕರೆಯುತ್ತಿದ್ದರು.
‘ಬುರುಡುಂಗ’ ಎಂಬ ಕೊಲಂಬಿಯದ ಸ್ಥಳೀಕ ಹೆಸರನ್ನು ಅದು ಪಡೆದಿತ್ತು. ಇದು ಸೋಲನೇಸಿ ಎಂಬ ಕುಟುಂಬಕ್ಕೆ ಸೇರಿದ ಮರ. ಇದರ ವಂಶದಲ್ಲಿ ನಮ್ಮ ಬದನೆಕಾಯಿ, ದೊಡ್ಡ ಮೆಣಸಿನ ಕಾಯಿ, ಮೆಣಸು, ಟೊಮೇಟೊ, ತಂಬಾಕು, ದತ್ತೂರಿ ಇತ್ಯಾದಿ ಗಿಡಗಳಿವೆ. ಇವು ದೊಡ್ಡದಾದ, ಸುವಾಸನಾ ಭರಿತ, ತುತ್ತೂರಿಯಾಕಾರದ, ಬಿಳಿ-ಹಳದಿ-ಕಿತ್ತಳೆ ಇತ್ಯಾದಿ ಬಣ್ಣಬಣ್ಣದ ಹೂವು ಗಳನ್ನು ಬಿಡುತ್ತದೆ.
ಇವು ರಾತ್ರಿಯ ಹೊತ್ತಿನಲ್ಲಿಯೇ ಅರಳುವುದು ಹೆಚ್ಚು. ಏಕೆಂದರೆ ಇವುಗಳ ಪರಾಗಸ್ಪರ್ಶವನ್ನು ಮಾಡುವ ಕೀಟಗಳು ನಿಶಾಚರಿಗಳು. ಸೋಲನೇಸಿ ಸದಸ್ಯರು ಮೂಲತಃ ದಕ್ಷಿಣ ಅಮೆರಿಕದ ಸಸ್ಯಗಳು. ಆದರೆ ಇವು ಭಾರತದಂಥ ಉಷ್ಣವಲಯಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯುತ್ತಿವೆ. ಎಲ್ಲ ಸಸ್ಯಗಳು ನಮ್ಮ ಸಸ್ಯಗಳೇ ಆಗಿವೆ. ಆದರೆ ಈ ಏಂಜಲ್ಸ್ ಟ್ರಂಪೆಟ್ ಮರದ ಪ್ರತಿಯೊಂದು ಭಾಗವೂ, ವಿಶೇಷವಾಗಿ ಹೂವು ಮತ್ತು ಬೀಜಗಳು ವಿಷಕಾರಿಯಾಗಿವೆ. ಇದನ್ನು ಕೊಲಂಬಿಯನ್ನರು ‘ಮೃತ್ಯುವಿನ ಉಸಿರು’- ‘ಡೆವಿಲ್ಸ್ ಬ್ರೆಥ್’- ಎಂದು ಕರೆಯಲು ಕಾರಣವಿದೆ.
ಇದರ ಪ್ರಭಾವಕ್ಕೊಳಗಾದ ಮನುಷ್ಯನು ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಾನೆ, ಆದರೆ ಪರಿಪೂರ್ಣವಾಗಿ ಎಚ್ಚರದಿಂದ ಇರುತ್ತಾನೆ. ಮತ್ತೊಬ್ಬರು ಹೇಳಿದ ಮಾತನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾನೆ. ಸ್ವಲ್ಪ ಗಂಟೆಗಳ ನಂತರ ತಾನು ಮಾಡಿದ ಒಂದೂ ಕೆಲಸವು ಅವನ ನೆನಪಿನಲ್ಲಿ ಇರುವುದಿಲ್ಲ. ಆಂಡೀಸ್ ಪರ್ವತದ ಬುಡಕಟ್ಟುಗಳ ಪುರೋಹಿತರು ಅಥವಾ ನಾಟಿವೈದ್ಯರು ಈ ಗಿಡದ ಬೀಜಗಳನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಹಾಗೂ ಚಿಕಿತ್ಸೆಯಲ್ಲಿ ಬಳಸುವುದುಂಟು.
ಬ್ರುಗ್‌ಮ್ಯಾನ್ಷಿಯದಲ್ಲಿ ‘ಆಂಟಿ-ಕೋಲಿನೆರ್ಜಿಕ್’ ರಾಸಾಯನಿಕಗಳು ಇರುತ್ತವೆ. ನಮ್ಮ ಮಿದುಳಿ ನಲ್ಲಿರುವ ಬಹುಪಾಲು ನರಕೋಶಗಳು ಕೆಲಸ ಮಾಡಲು ‘ಅಸಿಟೈಲ್ ಕೋಲಿನ್’ ಎಂಬ ರಾಸಾ ಯನಿಕವು ಬೇಕು. ಬ್ರುಗ್ ಮ್ಯಾನ್ಷಿಯದಲ್ಲಿ ಹಲವು ಆಲ್ಕಲಾಯ್ಡ್, ಸ್ಟೀರಾಯ್ಡ್, ಫೀನಾಲಿಕ್ ಕಾಂಪೌಂಡ್ಸ್, ಟೆರ್ಪೀನ್ಸ್, ಟ್ರೈಟೆರ್ಪೀನ್ಸ್ ಹಾಗೂ ಫ್ಲೆವನಾಯ್ಡ್ಸ್ ಇರುತ್ತವೆ. ಅವುಗಳಲ್ಲಿ ಅಟ್ರೋ ಪಿನ್, ಹೊಯಾಸಮಿನ್, ಸ್ಕೊಪಾಲಮಿನ್, ಸ್ಕೋಪೋಮಿನ್, ಸ್ಕೋಪಿನ್ ಇತ್ಯಾದಿ ಪಟು ರಾಸಾ ಯನಿಕಗಳು ಮುಖ್ಯವಾದವು.
ಇವುಗಳಲ್ಲಿ ಅತ್ಯಂತ ಪಟು ರಾಸಾಯನಿಕವೆಂದರೆ ಸ್ಕೊಪಾಲಮಿನ್. ಈ ಪಟು ರಾಸಾಯನಿಕಗಳು ಮಿದುಳು ಹಾಗೂ ಪರಿಧಿಯ ನರಮಂಡದಲ್ಲಿರುವ (ಪೆರಿಫೆರಲ್ ನರ್ವಸ್ ಸಿಸ್ಟಮ್) ಅಸಿಟೈಲ್ ಕೋಲಿನ್‌ನನ್ನು ಸ್ಥಗಿತಗೊಳಿಸುವ ಕಾರಣ, ವ್ಯಕ್ತಿ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ.
ಮಾನಸಿಕ ಗೊಂದಲ ತೀವ್ರವಾಗುತ್ತದೆ. ಮರೆವು ಹೆಚ್ಚಾಗುತ್ತದೆ. ಹಾಗೆಯೇ ಭ್ರಮೆಯಲ್ಲಿ ನಾನಾ ರೀತಿಯ ಅಸಾಧ್ಯ ಅನುಭವಗಳನ್ನು ಪಡೆಯುತ್ತಾನೆ. ಅವನ ನಾಗರಿಕ ಮುಖವಾಡ ಕಳಚಿ ಬೀಳು ತ್ತದೆ. ಕೇಳಿದ ಪ್ರಶ್ನೆಗೆಲ್ಲ ಪ್ರಾಮಾಣಿಕವಾಗಿ ಉತ್ತರವನ್ನು ಕೊಡುತ್ತಾನೆ. ಸುಳ್ಳು, ವಂಚನೆ, ತಟವಟ ಗಳು ಅವನಿಂದ ದೂರ ದೂರ. ಅವನನ್ನು ಹೇಗೆ ಬೇಕಾದರೆ ಹಾಗೆ ಬಳಸಿಕೊಳ್ಳಬಹುದು.
ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಅವರು ಸಂಪೂರ್ಣ ಸಹಕಾರ ವನ್ನು ನೀಡುತ್ತಾರೆ. ಬ್ರುಗ್‌ಮ್ಯಾನ್ಷಿಯದ ಪ್ರಭಾವದಿಂದ ಹೊರ ಬರುತ್ತಿರುವಂತೆಯೇ, ಅವನು ಎಲ್ಲವೆಲ್ಲವನ್ನು ಮರೆತುಬಿಡುತ್ತಾನೆ. ಅಪರಾಧಿಗಳು ಬ್ರುಗ್‌ಮ್ಯಾನ್ಷಿಯವನ್ನು ಹೇಗೆಲ್ಲ ಬಳಸುತ್ತಾರೆ ಎನ್ನುವುದಕ್ಕೆ ಕೆಲವು ಮಾಹಿತಿಗಳು ಲಭ್ಯವಿವೆ.
? ಬ್ರುಗ್‌ಮ್ಯಾನ್ಷಿಯ ಬೀಜವನ್ನು ಪುಡಿ ಮಾಡಿ ‘ಛೂ! ಮಂತ್ರಗಾಳಿ’ಯಲ್ಲಿ ಹೇಗೆ ಮುಖಕ್ಕೆ ಬೂದಿ ಯನ್ನು ಊದುತ್ತಾರೋ, ಹಾಗೆಯೇ ಬ್ರುಗ್‌ಮ್ಯಾನ್ಷಿಯ ಪುಡಿಯನ್ನೂ ಊದುತ್ತಾರೆ. ಆ ಪುಡಿಯನ್ನು ಮೂಗು ಮತ್ತು ಬಾಯಿಯ ಮೂಲಕ ಸೇವಿಸಿದರೆ ಸಾಕು, ಔಷಧಗಳು ತಮ್ಮ ಪ್ರಭಾವವನ್ನು ಆರಂಭಿಸುತ್ತವೆ.
? ಬಾರುಗಳಲ್ಲಿ, ಕ್ಲಬ್ಬುಗಳಲ್ಲಿ, ರೆಸ್ಟೋರೆಂಟುಗಳಲ್ಲಿ ಜನರು ಕುಡಿಯುವ ಪಾನೀಯಗಳಲ್ಲಿ ಬ್ರುಗ್ ಮ್ಯಾನ್ಷಿಯ ಪುಡಿ ಅಥವಾ ಗುಳಿಗೆಯನ್ನು ಕರಗಬಿಡುತ್ತಾರೆ
? ಇಂಥ ಕಡೆ ಕೆಲವರು ತಮ್ಮ ವಿಸಿಟಿಂಗ್ ಕಾರ್ಡ್ ಕೊಡಬಹುದು. ಕಾಗದ ಪತ್ರವನ್ನು ಕೊಡ ಬಹುದು ಅಥವಾ ಕರೆನ್ಸಿ ನೋಟನ್ನೆ ನೀಡಬಹುದು. ಅದನ್ನು ತೆಗೆದುಕೊಂಡರೆ ಸಾಕು, ಅದಕ್ಕೆ ಲೇಪಿಸಿರುವ ಬ್ರುಗ್ ಮ್ಯಾನ್ಷಿಯ ನಮ್ಮ ಚರ್ಮದ ಮೂಲಕ ದೇಹವನ್ನು ಸೇರುತ್ತದೆ.
ಕೊಲಂಬಿಯ ದೇಶದ ಬೊಗೋಟ, ಮೆಡೆಲ್ಲಿನ್, ಕಾರ್ಟಜೀನ ಮುಂತಾದ ನಗರಗಳಲ್ಲಿ, ಬ್ರುಗ್ ಮ್ಯಾನ್ಷಿಯವನ್ನು ಬಳಸಿಕೊಂಡು ಮುಗ್ಧರನ್ನು ದೋಚುವ ಖದೀಮರ ಕ್ರಮಬದ್ಧ ವ್ಯವಸ್ಥೆಯಿದೆ. ಹಾಗಾಗಿ ಅಮೆರಿಕನ್ ಸರಕಾರವು ಕೊಲಂಬಿಯಕ್ಕೆ ಹೋಗುವ ತನ್ನ ನಾಗರಿಕರಿಗೆ ಹೀಗೆ ಎಚ್ಚರಿಕೆ ಯನ್ನು ನೀಡುತ್ತದೆ:
? ಅಪರಿಚಿತರಿಂದ ಯಾವುದೇ ರೀತಿಯ ಆಹಾರ ಪಾನೀಯಗಳನ್ನು ಸ್ವೀಕರಿಸಬೇಡಿ.
? ನಿಮ್ಮ ಆಹಾರ ಪಾನೀಯಗಳನ್ನು ಮೇಜಿನ ಮೇಲೆ ಬಿಟ್ಟು ಹಾಗೆಯೇ ಹೋಗಬೇಡಿ.
? ಅಪರಿಚಿತರು ನೀಡುವಂಥ ಸಿಗರೇಟ್, ಸಿಗಾರ್, ಚ್ಯೂಯಿಂಗ್ ಗಮ್ ಇತ್ಯಾದಿಗಳನ್ನು ಬಳಸಬೇಡಿ.
? ಅಪರಿಚಿತ ಸ್ಥಳಗಳಿಗೆ, ಅದರಲ್ಲಿಯೂ ಕತ್ತಲೆಯಲ್ಲಿ ಒಬ್ಬರೇ ಹೋಗಬೇಡಿ. ಯಾವಾಗಲೂ ಗುಂಪಿನಲ್ಲಿಯೇ ಓಡಾಡಿ.
? ಅಧಿಕೃತ ಸಂಸ್ಥೆಗಳು ನಡೆಸುವ ಟ್ಯಾಕ್ಸಿ ಸೇವೆಯನ್ನು ಮಾತ್ರ ಬಳಸಿಕೊಳ್ಳಿ.
? ಅಪರಿಚಿತರು ನೀಡುವ ಕಾರ್ಡ್, ಕಾಗದ, ಇತ್ಯಾದಿಗಳನ್ನು ಮುಟ್ಟಬೇಡಿ.
? ಬಾರುಗಳಲ್ಲಿ ಹಾಗೂ ರಸ್ತೆಗಳಲ್ಲಿ ನಡೆದುಹೋಗುವಾಗ, ಅಪರಿಚಿತರು ಅನಗತ್ಯ ವಿಶ್ವಾಸದ ಮಾತುಗಳನ್ನು ಆಡಿ, ಅತಿಯಾದ ಸ್ನೇಹದಿಂದ ವರ್ತಿಸಿದರೆ, ಅವರಿಂದ ಕೂಡಲೇ ದೂರವಿರಿ.
? ನಿಮಗೆ ಯಾವುದೇ ಕಾರಣದಿಂದ ತಲೆಸುತ್ತು ಬಂದರೆ, ಗೊಂದಲವಾದರೆ, ತಿಳಿವು ಮಂಜು ಮಂಜಾದರೆ ಕೂಡಲೇ, ಸರಕಾರದ ಅಧಿಕೃತ ಸ್ಥಳಗಳಲ್ಲಿ ವೈದ್ಯಕೀಯ ನೆರವನ್ನು ಪಡೆಯಿರಿ.
ಬೊಗೋಟ ನಗರ ಒಂದರಲ್ಲಿಯೇ ಪ್ರತಿ ತಿಂಗಳೂ 50-70 ಪ್ರಕರಣಗಳು ವರದಿಯಾಗುತ್ತವೆಯಂತೆ. ಇನ್ನು ಕೊಲಂಬಿಯಾದ್ಯಂತ ಎಷ್ಟು ಜನರು ಡೆವಿಲ್ಸ್ ಬ್ರೆಥ್‌ಗೆ ಬಲಿಪಶುಗಳಾಗುತ್ತಿದ್ದಾರೆ ಎನ್ನು ವುದು ನಮ್ಮ ಕಲ್ಪನೆಗೆ ಬಿಟ್ಟದ್ದು.
ಬ್ರುಗ್‌ಮ್ಯಾನ್ಷಿಯ ಕೇವಲ ಕ್ರಿಮಿನಲ್ ಚಟುವಟಿಕೆಗಳಿಗಾಗಿ ಸೀಮಿತವಾಗಿದೆಯೆ ಎಂಬ ಅನುಮಾನ ವು ಓದುಗರಿಗೆ ಬರಬಹುದು. ಹಾಗೇನಿಲ್ಲ. ಇದರ ವೈದ್ಯಕೀಯ ಉಪಯೋಗಗಳು ಸಾಕಷ್ಟಿವೆ. ಆದರೆ ಬ್ರುಗ್‌ಮ್ಯಾನ್ಷಿಯ ಇತಿಹಾಸವನ್ನು ಗಮನಿಸಿದರೆ, ಮನುಷ್ಯನು ಅದನ್ನು ಅದರ ನಕಾರಾತ್ಮಕ ಉಪಯೋಗಗಳಿಗೇ ಹೆಚ್ಚು ಬಳಸಿಕೊಂಡಿದ್ದಾನೆ ಎಂದರೆ, ಆ ಮಾತು ನೂರಕ್ಕೆ ನೂರರಷ್ಟು ಸುಳ್ಳಲ್ಲ ಎನ್ನುವುದನ್ನು ನೆನಪಿನಲ್ಲಿಡೋಣ.