ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಹಾಡನ್ನು ಕತ್ತರಿಸಿದ್ದರಿಂದ ಭಾರತಕ್ಕೆ ಭಾವೈಕ್ಯತೆ ಸಾಧ್ಯವಾಯ್ತಾ ?

ಶಿಷ್ಟಾಚಾರದಂತೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಧ್ವಜಾರೋಹಣ ನೆರವೇರಿಸಿದ ಮೇಲೆ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ರಾಷ್ಟ್ರಗೀತೆಯ ತರುವಾಯ ಇನ್ನೊಂದು ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡು ಶುರುವಾಯಿತು. ಎರಡು ಚರಣಗಳು ಮುಗಿಯುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.

ವಿದ್ಯಮಾನ

2024ರ ಚುನಾವಣೆಯಲ್ಲಿ ಅಗತ್ಯ ಸ್ಥಾನಗಳು ದೊರೆತದ್ದರಿಂದ ಸಂಸತ್ತಿನಲ್ಲಿ ಈಗ ಕಾಂಗ್ರೆಸ್ ಅಧಿಕೃತ ವಿರೋಧಪಕ್ಷವಾಗಿ ಗುರುತಿಸಿಕೊಂಡಿದೆ, ಈ ಅಧಿಕೃತ ವಿರೋಧಪಕ್ಷಕ್ಕೆ ಎರಡೂ ಸದನ ಗಳಲ್ಲಿ ನಾಯಕರಿದ್ದಾರೆ, ಎಲ್ಲ ನಿಜ! ಆದರೂ ವಿರೋಧಪಕ್ಷದ ನಾಯಕರು ಅಧಿಕೃತ ಸ್ವಾತಂತ್ರ್ಯೋ ತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಪಕ್ಷದ ಕಛೇರಿ ಇಂದಿರಾ ಭವದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು.

ಶಿಷ್ಟಾಚಾರದಂತೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಧ್ವಜಾರೋಹಣ ನೆರವೇರಿಸಿದ ಮೇಲೆ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ರಾಷ್ಟ್ರಗೀತೆಯ ತರುವಾಯ ಇನ್ನೊಂದು ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡು ಶುರುವಾಯಿತು. ಎರಡು ಚರಣಗಳು ಮುಗಿಯುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.

ಮೂರನೇ ಚರಣ ಪ್ರಾರಂಭವಾದೊಡನೆ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆಯವರ ಪಕ್ಕದ ನಿಂತಿದ್ದ, ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಇನ್ನಿಲ್ಲದ ಕೋಪ ಬಂತು, ಅವರ ಕೈ ಸನ್ನೆ, ಬಾಯಿ ಸನ್ನೆಗಳಿಂದ ಅವರ ಅಸಹಿಷ್ಣುತೆ ಮಿತಿಮೀರಿದೆ ಎನ್ನುವುದು ಎಲ್ಲರ ಕಣ್ಣಿಗೆ ಕಾಣುವಂತಿತ್ತು. ಅವರ ಹೇಳತೀರದ ಚಡಪಡಿಕೆ ಅಲ್ಲಿರುವ ಎಲ್ಲರನ್ನೂ ಮುಜುಗರಕ್ಕೀಡಾಗುವಂತೆ ಮಾಡಿತ್ತು. ಅಂತೂ ವಂದೇಮಾತರಂ ಗೀತೆಯ ಎಲ್ಲ ಚರಣಗಳನ್ನೂ ಹಾಡಿ ಮುಗಿಸಲಾಯಿತು.

ಇದನ್ನೂ ಓದಿ: Vinayaka M Bhat Column: ನಾನು ಯಾರು ಗೊತ್ತಾ ? ಎಂಬ ಅತ್ಯಂತ ಅಪಾಯಕಾರಿ ಪ್ರಶ್ನೆ

ವಂದೇ ಮಾತರಂ ಹಾಡನ್ನು ಪೂರ್ತಿಯಾಗಿ ಎಲ್ಲರಿಗೂ ಸ್ವಾಭಾವಿಕವಾಗಿ ಹಾಡಲಂತೂ ಬರುವು ದಿಲ್ಲ, ಅಚಲ ಮೌನ ದಿಂದ ನಿಂತು ರಾಷ್ಟ್ರಗೀತೆಗೆ ನೀಡಬೇಕಾಗಿದ್ದ ಗೌರವವನ್ನು ಶ್ರೀಮತಿ ಸೋನಿಯಾ ಗಾಂಧಿಯವರು ಅಂದು ನೀಡಲಿಲ್ಲ ಮತ್ತು ಉಳಿದ ವರಿಗೂ ನೆಮ್ಮದಿಯಾಗಿ ನಿಲ್ಲಲು ಬಿಡಲಿಲ್ಲ ಎನ್ನುವುದಂತೂ ಸತ್ಯ.

ಇಷ್ಟೆಲ್ಲಾ ಆದ ಮೇಲೆ ಕೇಳಬೇಕೆ? ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಬಿತ್ತರಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಂಕಿಮ ಚಂದ್ರರ ಈ ಗೀತೆಯನ್ನು ಅವಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅದರ ಅಧಿನಾಯಕಿ ಸೋನಿಯಾ ಗಾಂಧಿಯವರು ರಾಷ್ಟ್ರದ್ರೋಹದ ಕೆಲಸಮಾಡಿದ್ದಾರೆ.

ದೇಶ ಅವರನ್ನೂ ಎಂದೂ ಕ್ಷಮಿಸಲಾರದು ಎಂದು ಬಿಜೆಪಿ ಜರಿಯಿತು. ದೇಶಾದ್ಯಂತ ಈ ವೀಡಿಯೋ ವೈರಲ್ ಆಯ್ತು. ಯಾಕೋ ಇದು ಯಡವಟ್ಟಾಯ್ತು ಎನ್ನುವುದನ್ನರಿತ ಪಕ್ಷದ ಹಿರಿಯ ನಾಯಕರುಗಳಾದ ಜೈರಾಮ್ ರಮೆಶ ಅವರಿಂದ ಹಿಡಿದು ಹರಿಪ್ರಸಾದ್ ವರೆಗೆ, ಎಲ್ಲರೂ ಕಥೆಕಟ್ಟಿ Damage control ಕೆಲಸ ಪ್ರಾರಂಭಿಸಿದರು. ಇಲ್ಲಾ ಇಲ್ಲಾ, ಮಲ್ಲಿಕಾರ್ಜುನ ಖರ್ಗೆಯವರು ನಿಂತು ಬಹಳ ಹೊತ್ತಾಗಿತ್ತು, ಅವರಿಗೆ ಆಯಾಸವಾಗುತ್ತಿತ್ತು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವಂತೆ ಸೋನಿಯಾ ಗಾಂಧಿಯವರು ಹೇಳುತ್ತಿದ್ದರಷ್ಟೇ, ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಹೇಳಲಿಲ್ಲ, ನಾವು ನಿಲ್ಲಿಸಿಯೂ ಇಲ್ಲ, ಅಂದು ಗೀತೆಯ ಪೂರ್ಣ ಪಾಠವನ್ನು ಹಾಡಲಾಗಿದೆ ಎನ್ನುವ ಸಮಜಾಯಿಷಿಯನ್ನು ಒಬ್ಬರಾದ ಮೇಲೆ ಒಬ್ಬರು ನಾಯಕರು ನೀಡಿದರು.

71 ಒಕ

ಅಂತೂ ವಂದೇ ಮಾತರಂ ಹಾಡನ್ನು ಮಧ್ಯದಲ್ಲಿ ನಿಲ್ಲಿಸುವುದು ಸೋನಿಯಾ ಗಾಂಧಿಯವರ ಉದ್ದೇಶ ವಾಗಿರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಬಹಳ ಶ್ರಮವೇನೋ ಪಟ್ಟರು, ಆದರೆ ಇಂದಿನ ಕಾಲದಲ್ಲಿ ಜನರನ್ನು ನಂಬಿಸುವುದು ಅಷ್ಟು ಸುಲಭದ ಮಾತೆ? ಇರಲಿ, ಸ್ವಾತಂತ್ರ್ಯೋ ತ್ಸವ ಮುಗಿದು ಒಂದು ವಾರವಾಗುವಷ್ಟರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ನಡೆದು, ಅದರಲ್ಲಿ ವಂದೇ ಮಾತರಂ ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯಕ್ಕೆ ಬರಲಾಯಿತು. ಅದರ ಮುಂದುವರಿದ ಭಾಗವಾಗಿ, ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿ, ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಿತು.

ಜೈಲೇನು? ನಮ್ಮನ್ನು ಗಲ್ಲಿಗೆ ಹಾಕಿದರೂ ಸರಿ ನಾವು ಹಾಡುವುದು ಮೊದಲ ಎರಡು ಚರಣಗಳನ್ನು ಮಾತ್ರ, ನೂರು ದಿನಗಳಲ್ಲಿ ಡಿ.ಕೆ ಶಿವಕುಮಾರ ಅವರ ಸರಕಾರ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಿದ್ದರೆ ಅದು ವಂದೇ ಮಾತರಂ ಹಾಡಿನ ಎರಡೇ ಚರಣಗಳನ್ನು ಹಾಡುವ ನಿಯಮ ರೂಪಿಸಿದ್ದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.

ಒಂದು ವಾರದ ಮುಂಚೆ ಇದ್ದ ಪಕ್ಷದ ಧೋರಣೆ ಇದ್ದಕ್ಕಿದ್ದ ಹಾಗೆ ಬದಲಾಗಿ ಹೋಯಿತು. ಹೀಗೆ ಈಗ ಹಾಡಿನ ಪೂರ್ಣಪಾಠವನ್ನು ಹಾಡದಿರುವ ನಿರ್ಣಯ ತೆಗೆದುಕೊಳ್ಳಲು ಕಾಂಗ್ರೆಸ್ ನೀಡುತ್ತಿರುವ ಸಮಜಾಯಿಷಿ ಏನೆಂದರೆ, ಎಲ್ಲವನ್ನೂ ತೂಗಿ ಅಳೆದೇ 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯಕ್ಕೆ ಬಂದಿತ್ತು, ಎಲ್ಲ ಚರಣಗಳನ್ನು ಹಾಡಬೇಕು ಎನ್ನುವ ಈ ಬಿಜೆಪಿಗರೇನು ಗಾಂಧಿ, ನೆಹರುಗಿಂತ ದೊಡ್ಡವರಾ, ತಿಳಿವಳಿಕಸ್ಥರಾ? ಹಾಗಾಗಿ ಅಂದಿನ ಕಾಂಗ್ರೆಸ್ ನಾಯಕರ ನಿರ್ಣಯವನ್ನು ಗೌರವಿಸುವ ಹಿನ್ನೆಲೆಯಲ್ಲಿ ಮೊದಲ ಎರಡು ಚರಣ ಗಳನ್ನು ಮಾತ್ರ ಹಾಡುವ ಪದ್ಧತಿಯನ್ನೇ ನಾವು ಮುಂದುವರೆಸುತ್ತೇವೆ ಎನ್ನುವುದಾಗಿದೆ.

ಕಾಂಗ್ರೆಸ್ ಯಾರನ್ನು ತುಷ್ಟೀ ಕರಣ ಮಾಡುವ ಸಲುವಾಗಿ ಹಾಡನ್ನು ಹಿಂದೆ ತುಂಡರಿಸಿತ್ತೋ, ಅವರಿಗೆ ನೋವಾಗಲಿಕ್ಕೆ ಮೊದಲೆರಡು ಚರಣಗಳೇ ಬೇಕಾದಷ್ಟಾಗುತ್ತದೆ ಎನ್ನುವುದನ್ನು ಮಾತ್ರ ತಿಳಿದಿರಲಿಲ್ಲ ಅಂತ ಕಾಣುತ್ತದೆ. ಇಡೀ ಹಾಡನ್ನು ಬಿಡಿ, ಕೇವಲ ‘ವಂದೇ ಮಾತರಂ’ ಅಂತ ಹೇಳಿದರೂ ಅದು ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ.

ಆ ಜನಾಂಗಕ್ಕೆ ಭಾರತ ಓಕೆ ಆದರೆ ಭಾರತವನ್ನು ಮಾತೆ/ ತಾಯಿ ಎನ್ನುವುದು ಅಪಥ್ಯ. ಬೇಕಾದರೆ ಕೇವಲ ‘ಭಾರತ್ ಜೈ’ ಅಂತೀವಿ ಆದರೆ ‘ಭಾರತ್ ಮಾತಾ ಕಿ ಜೈ’ ಅಂತ ಮಾತ್ರ ಹೇಳೋದಿಲ್ಲ ಎನ್ನುವವರಿಗೆ ‘ವಂದೇ ಮಾತರಂ ಪೂರ್ಣ’ ಹಾಡು ಒಪ್ಪಿತವಾಗುತ್ತೆ ಅಂತ ನಿರೀಕ್ಷೆ ಮಾಡುವುದೇ ತಪ್ಪು.

ಇದರಿಂದ ಕಾಂಗ್ರೆಸ್ Status quo maintain ಮಾಡಿದ ಹಾಗಾಯಿತೇ ವಿನಃ ಹೊಸದೇನನ್ನೂ ಮಾಡಿದ ಹಾಗಾಗಲಿಲ್ಲ. ಬದಲಿಗೆ ಸಂಪೂರ್ಣ ವಂದೇ ಮಾತರಂ ಹಾಡನ್ನೇ ತಿರಸ್ಕರಿಸುವ ನಿರ್ಣಯ ಮಾಡಿದ್ದರೆ ಏನಾದರೂ ವಿಶೇಷ ಮಾಡಿದಂತಾಗುತ್ತಿತ್ತು. ಜೊತೆಗೆ, ‘ಭಾರತ್ ಮಾತಾಕಿ ಜೈ’ ಎನ್ನುವ ಘೋಷಣೆಯನ್ನೂ ಬಹಿಷ್ಕರಿಸಿದ್ದರೆ, ಅವರು ಯಾರನ್ನು ಖುಷಿಪಡಿಸಲು 75 ವರ್ಷ ಗಳಿಂದ ಸತತ ಪ್ರಯತ್ನ ಮಾಡುತ್ತಿದ್ದಾರೋ ಅವರಿಗೆ ಇನ್ನೂ ಹೆಚ್ಚು ಸಂತೋಷವಾಗುತ್ತಿತ್ತೇನೋ!

ಇಂದ ನಾಳೆ, (ಒಂದೊಮ್ಮೆ) ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಈ ಕೆಲಸ ಆಗೇ ತೀರುತ್ತದೆ, ಬರೆದಿಟ್ಟುಕೊಳ್ಳಿ! ಭಾರತ ಮಾತಾ ಅಂದರೆ ಯಾರು? ಎಲ್ಲಿದ್ದಾಳೆ ಆಕೆ? ಎಂದು ಕೇಳುವ ರಾಹುಲ್ ಗಾಂಧಿಯವರ ಪಕ್ಷದಿಂದ ಇನ್ನೇನು ನಿರೀಕ್ಷೆ ಮಡಲು ಸಾಧ್ಯ ಹೇಳಿ? ಬಂಕಿಮ ಚಂದ್ರ ಚಟರ್ಜಿ ರಚಿಸಿದ ಈ ಗೀತೆಯು, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಶಕ್ತಿಶಾಲಿ ಘೋಷಣೆಯಾಗಿ ಎಲ್ಲರನ್ನು ಒಗ್ಗೂಡಿಸಿತ್ತು.

ಆದರೆ, 1930ರ ಹೊತ್ತಿಗೆ ಕೆಲವರು ವಿವಾದ ಹುಟ್ಟುಹಾಕಿದರು. ಭಾರತದಲ್ಲಿ ಪ್ರಾಂತೀಯ ಚುನಾವಣೆಗಳು ನಡೆದು, ಹಲವು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಸಂದರ್ಭದಲ್ಲಿ ಶಾಸನ ಸಭೆಗಳ ಅಧಿವೇಶನಗಳನ್ನು ವಂದೇ ಮಾತರಂ ಗೀತೆಯೊಂದಿಗೆ ಆರಂಭಿಸಲು ನಿರ್ಧರಿಸಲಾಯಿತು.

ಇದನ್ನು ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ತೀವ್ರವಾಗಿ ವಿರೋಧಿಸಿತು. ಈ ಗೀತೆಯ ನಂತರದ ಚರಣಗಳಲ್ಲಿ ಭಾರತ ಮಾತೆಯನ್ನು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವತೆ ಗಳಿಗೆ ಹೋಲಿಸಿ ವರ್ಣಿಸಲಾಗಿರುವುದರಿಂದ ಮುಸ್ಲಿಮರು ಈ ಗೀತೆಯನ್ನು ಹಾಡುವುದು ಅವರ ನಂಬಿಕೆಗೆ ವಿರುದ್ಧವಾಗುತ್ತದೆ ಎಂದು ವಾದಿಸಲಾಯಿತು.

ವಿವಾದವು ತಾರಕಕ್ಕೇರಿದಾಗ, ಕಾಂಗ್ರೆಸ್ ನಾಯಕತ್ವವು ಈ ಕುರಿತು ಮಾರ್ಗದರ್ಶನ ನೀಡುವಂತೆ ರವೀಂದ್ರನಾಥ ಟಾಗೋರ್ ಅವರನ್ನು ವಿನಂತಿಸಿತು. ಅವರು ನೆಹರೂ ಅವರಿಗೆ ಬರೆದ ಪತ್ರದಲ್ಲಿ ವಂದೇ ಮಾತರಂ ಗೀತೆಯ ಕೇಂದ್ರಬಿಂದು ದುರ್ಗಾ ದೇವತೆಯಾಗಿದ್ದಾಳೆ. ಇದು ಸಾಹಿತ್ಯಿಕವಾಗಿ ಅತ್ಯುತ್ತಮವಾಗಿದೆ ನಿಜ, ಆದರೆ ಬಹುಧರ್ಮೀಯ ಕಲ್ಪನೆಯಲ್ಲಿ ರೂಪುಗೊಳ್ಳುತ್ತಿರುವ ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸಬೇಕಾದ ಸವಾಲಿರುವಾಗ, ಇದು ಇತರ ಧರ್ಮದವರ, ಮುಖ್ಯವಾಗಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರಬಹುದು ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂದೆ ಗಾಂಧೀಜಿಯವರು ಕೂಡ ಎರಡು ಚರಣವನ್ನು ಮಾತ್ರ ಹಾಡುವ ಈ ರಾಜಿ ಸೂತ್ರವನ್ನು ಬೆಂಬಲಿಸಿದರು. ಗಾಂಧೀಜಿಯೇನೋ ಹೇಳಿದರು, ಸರಿ, ಆದರೆ ತಾನೂ ಒಬ್ಬ ಕವಿಯಾಗಿ, ಗುರುದೇವ ರವೀಂದ್ರನಾಥ ಟಾಗೋರರು, ಅವರಿಗಿಂತ ಹಿರಿಯ ಕವಿ, ಸ್ವಾತಂತ್ರ್ಯ ಹೋರಾಟಗಾರ ಬಂಕಿಮಚಂದ್ರ ಚಟರ್ಜಿಯವರ ಹಾಡನ್ನು ಕತ್ತರಿಸುವ ಸಲಹೆಗೆ ಹೇಗೆ ಒಪ್ಪಿಗೆ ಕೊಟ್ಟರು ಎನ್ನುವುದು ಇಂದಿಗೂ ಅರ್ಥವಾಗದ ಸಂಗತಿಯಾಗಿಯೇ ಉಳಿದಿದೆ. (ಟಾಗೋರ್ ಅವರು ವಂದೇ ಮಾತರಂ ಗೀತೆಗೆ ಮೊದಲು ರಾಗ ಸಂಯೋಜನೆ ಮಾಡಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವತಃ ಹಾಡಿದ್ದವರು) ಒಂದು ಹಾಡನ್ನು ಪೂರ್ಣವಾಗಿ ನೋಡಿದಾಗ ಮಾತ್ರ ಕವಿ ಹೃದಯ ಸರಿಯಾಗಿ ಅರ್ಥವಾಗಲಿಕ್ಕೆ ಸಾಧ್ಯವಿದೆ ತಾನೆ? ರವೀಂದ್ರನಾಥ ಟಾಗೋರರ ಯಾವುದಾದರೂ ಕವಿತೆಯನ್ನು ಹೀಗೆ ಮೊಟಕುಗೊಳಿಸಿದ್ದರೆ ಅವರಿಗೆ ಏನನಿಸುತ್ತಿತ್ತು ಅಲ್ವಾ? ಹೀಗೆ ಕತ್ತರಿಸುವ ಪ್ರಸ್ತಾವನೆಗೆ ತಮ್ಮ ಒಪ್ಪಿಗೆ ಕೊಡುವ ಬದಲು, ಟಾಗೋರರು ಪೂರ್ಣ ಹಾಡನ್ನೇ ಕೈಬಿಡುವ ಸಲಹೆ ನೀಡಿದ್ದರೇ ಇನ್ನೂ ಒಳ್ಳೆಯದಿತ್ತೇನೋ!

ಒಬ್ಬ ಕವಿಯ ಕವಿತೆಯನ್ನು ಅಂಗವಿಕಲಗೊಳಿಸುವುದಕ್ಕಿಂತ ಸಾಯಿಸಿಬಿಡುವುದೇ ಹೆಚ್ಚು ಪ್ರಶಸ್ತ ವಾಗುತ್ತಿತ್ತೇನೋ! ಆದರೆ, ‘ಅಕ್ಕನೂ ಬರಬೇಕು ಆದರೆ ಅಕ್ಕಿಯೂ ಖರ್ಚಾಗಬಾರದು’ ಎನ್ನುವ ಲೆಕ್ಕಕ್ಕೆ ಬಿದ್ದು ಕಾಂಗ್ರೆಸ್ ಎರಡು ಚರಣವನ್ನು ಮಾತ್ರ ಉಳಿಸಿಕೊಳ್ಳುವ ರಾಜೀ ಸೂತ್ರವನ್ನು ಅಂಗೀಕರಿಸಿತು.

ಸ್ವಾತಂತ್ರ್ಯ ಹೋರಾಟದ ಜ್ವಾಲಾಗ್ನಿಗೆ ತೈಲವಾಗಿ ಕೆಲಸ ಮಾಡಿದ್ದ ಈ ಗೀತೆಯನ್ನೇನೋ ಸಾಮರಸ್ಯದ ಹೆಸರಿನಲ್ಲಿ ಮೊಟಕು ಮಾಡಿ ಬಂಕಿಮಚಂದ್ರರಿಗೆ ಅನ್ಯಾಯವೆಸಗಿದ್ದಾಯಿತು. ಆದರೆ ಆಮೇಲೆ ಆಗಿದ್ದೇನು? ಜಿನ್ನಾ ಬಳಗ ಜಾತ್ಯಾತೀತ ದೇಶದ ಜೊತೆ ಉಳಿಯಿತಾ? ಭಾರತವನ್ನು ಒಡೆದು ತಾವು ಬೇರೇ ಹೋದರು. ಹಾಡನ್ನು ವಿರೂಪ ಮಾಡಿದ ಮೇಲೆಯೂ ದೇಶವನ್ನು ಒಗ್ಗಟ್ಟಾಗಿಡಲಾಗಲಿಲ್ಲ ಎನ್ನುವುದು ತಿಳಿದ ಮೇಲೂ ‘ಅಪ್ಪ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಳ್ಳುವುದು’ ಅಂತ ಮತ್ತೆ ಅದೇ ನಿರ್ಣಯ ಕೈಗೊಳ್ಳುವವರಿಗೆ ಏನಂತ ಹೇಳುವುದು? ಈಗ ಪ್ರಶ್ನೆ ಇರುವುದು, ಕೇಂದ್ರ ಸರಕಾರ ಕಾನೂನನ್ನು ಜಾರಿಗೆ ತಂದಮೇಲೆ, ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ಸಿನ ಹಾಗೆ ಯಾವುದಾದರೂ ರಾಜಕೀಯ ಪಕ್ಷ ಅಥವಾ ರಾಜ್ಯ ಸರಕಾರಗಳು ನಿರ್ಣಿಯಿಸ ಬಹುದಾ? ಯಾರಿಗಾದರೂ ವಂದೇ ಮಾತರಂ ಹಾಡದೇ ಗೌರವದಿಂದ ಸುಮ್ಮನೇ ನಿಂತಿರುವ ಆಯ್ಕೆಯಿದೆಯಾ? ಈ ರಾಷ್ಟ್ರೀಯ ಸಂಕೇತಗಳನ್ನು ಅಗೌರವಿಸುವುದು ಅಂದರೆ ಏನು? ಅಗೌರವಿಸಿದರೆ ಶಿಕ್ಷೆ ಏನು? ಎನ್ನುವಂಥಾದ್ದಾಗಿದೆ.

ವಾಸ್ತವಿಕವಾಗಿ ಕೇಂದ್ರ ಸರಕಾರ ವಂದೇ ಮಾತರಂ ಹಾಡಿನ ಕುರಿತು ಯಾವುದೇ ಹೊಸ ಕಾನೂನನ್ನು ಜಾರಿಗೆ ತಂದಿಲ್ಲ. ಬದಲಿಗೆ ಈಗಾಗಲೇ ಜಾರಿಯಲ್ಲಿದ್ದ Prevention of Insults to National Honour Act ಗೆ ತಿದ್ದುಪಡಿ ತಂದಿದೆಯಷ್ಟೆ. ಇದರ ಪ್ರಕಾರ, ಈ ಗೀತೆಯನ್ನು ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಅಗೌರವ ತೋರುವುದು ಹಾಗೂ ಭಂಗಪಡಿಸು ವುದು ಮುಂತಾದವುಗಳು 3 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧ ವಾಗಿದೆ.

1985ರಲ್ಲಿ ಕೇರಳದಲ್ಲಿ ಮೂವರು ಮಕ್ಕಳನ್ನು ರಾಷ್ಟ್ರಗೀತೆಯನ್ನು ಹಾಡದಿದ್ದ ಕಾರಣಕ್ಕೆ ಶಾಲೆ ಯಿಂದ ಹೊರ ಹಾಕಲಾಯಿತು, ಆ ಮಕ್ಕಳ ಧಾರ್ಮಿಕ ನಂಬಿಕೆಯು ಪ್ರಕಾರ ಅವರ ದೇವರನ್ನು ಹೊರತುಪಡಿಸಿ ಬೇರೆ ಯಾರಿಗೂ ಸ್ತುತಿ ಮಾಡುವುದನ್ನು ನಿಷೇಧಿಸಿತ್ತು. ಹಾಗಾಗಿ ಆ ಮಕ್ಕಳು ಶಾಲೆಯ ಅಸೆಂಬ್ಲಿಯ ಸಮಯದಲ್ಲಿ, ರಾಷ್ಟ್ರಗೀತೆಯನ್ನು ಹಾಡುತ್ತಿರಲಿಲ್ಲವಾದರೂ ಯಾವಾಗಲೂ ಗೌರವಯುತವಾಗಿ ’ಸಾವಧಾನ್’ ಸ್ಥಿತಿಯಲ್ಲಿ ಮೌನವಾಗಿ ಅಲುಗಾಡದೇ ನಿಂತಿರುತ್ತಿದ್ದರು.

ಇಲಾಖಾ ಸುತ್ತೋಲೆಗಳ ಆಧಾರದ ಮೇಲೆ ಮುಖ್ಯೋಪಾಧ್ಯಾಯಿನಿ ಆ ಮಕ್ಕಳನ್ನು ಶಾಲೆಯಿಂದ ವಜಾ ಮಾಡಿದರು ಮತ್ತು ಕೇರಳ ಹೈಕೋರ್ಟಿನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳೆರಡೂ ಈ ಉಚ್ಚಾಟನೆಯ ಕ್ರಮವನ್ನು ಎತ್ತಿಹಿಡಿದವು. ವಿಷಯ ಸುಪ್ರೀಂಕೋರ್ಟಿನ ಮುಂದೆ ಬಂತು.

ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿಯವರು ಆರ್ಟಿಕಲ್ 19 (1) (ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಇರುವಂತೆ ಅದರ ಅಂತರ್ಗತವಾಗಿ ಮೌನವಾಗಿರುವ Right to be silent ಹಕ್ಕನ್ನೂ ಒಳಗೊಂಡಿದೆ ಮತ್ತು ಬಲವಂತದಿಂದ ನಿಜವಾದ ದೇಶಭಕ್ತಿ ಮತ್ತು ರಾಷ್ಟ್ರೀಯ ಗೌರವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಡುತ್ತಾ, ಹಾಡದೇ ಗೌರವದಿಂದ ಸುಮ್ಮನೇ ನಿಂತಿರುವುದು ಕಾನೂನು ರೀತ್ಯ ದುರ್ನಡತೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಕೇರಳ ಹೈಕೋರ್ಟಿನ ಆದೇಶವನ್ನು ತಳ್ಳಿಹಾಕಿತು.

ಅಲ್ಲಿಂದ ಮುಂದೆ ವಂದೇ ಮಾತರಂ ಹಾಡಿನ ಕುರಿತು ವಿವಾದವಾದಾಗೆಲ್ಲ, ಈ ತೀರ್ಪನ್ನಾಧರಿಸಿ ಯೇ ನ್ಯಾಯಾಲಯಗಳು ನಿರ್ಣಯಿಸುತ್ತಾ ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ವಂದೇ ಮಾತರಂ ಗೀತೆಗೆ ಗೌರವ ನೀಡಬೇಕು, ಅಗೌರವವಾದಾಗ ಶಿಕ್ಷಿಸಬೇಕು ಎನ್ನುವುದನ್ನು ಒಪ್ಪುತ್ತದೆ ಯಾದರೂ, ಅದನ್ನು ನಾಗರಿಕರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಮತ್ತು ಗೀತೆಯನ್ನು ಮೌನವಾಗಿದ್ದುಕೊಂಡು ಗೌರವಿಸುವುದು ಅಪರಾಧವಲ್ಲ ಎಂಬ ನಿಲುವನ್ನು ತಾಳಿದೆ ಎನ್ನುವುದು ತಿಳಿದುಬರುತ್ತೆ.

ಕೇರಳದ ಹೆಣ್ಣುಮಕ್ಕಳಂತೆ ಅಂದು ಶ್ರೀಮತಿ ಸೋನಿಯಾ ಗಾಂಧಿಯವರು ಸ್ತಬ್ಧವಾಗಿ ನಿಂತು ವಂದೇ ಮಾತರಂ ಹಾಡಿಗೆ ಗೌರವ ಸೂಚಿಸಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ. ಮತ್ತೆ ವಂದೇ ಮಾತರಂ ಗೀತೆಯ ಕುರಿತ ಪ್ರಕರಣ ಸುಪ್ರಿಂ ಕೋರ್ಟಿನ ಮೆಟ್ಟಿಲೇರಿದೆ. ಉಚ್ಚ ನ್ಯಾಯಾಲಯ ಈ ಬಾರಿ ಯಾವ ಅಭಿಪ್ರಾಯ ತಾಳುತ್ತದೆ ಎನ್ನುವುದನ್ನು ಕಾದು ನೋಡೋಣ.

ವಿನಾಯಕ ವೆಂ ಭಟ್ಟ

View all posts by this author