ಮೂರ್ತಿಪೂಜೆ
ತಂದೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತಮ್ಮ ಮೇಲೆ ಬಿದ್ದಿರುವ ವ್ಯವಹಾರದ ಹೊರೆಯಿಂದಾಗಿ ಬೇರೆ ಕೆಲಸಗಳನ್ನು ನಿರ್ವಹಿಸಲಾಗುತ್ತಿಲ್ಲ ಎಂಬ ಗ್ರಹಿಕೆ ಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಂತ್ರಿಗಿರಿಯಿಂದ ತಮ್ಮನ್ನು ರಿಲೀವ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರಂತೆ.
ರಾಜ್ಯದ ಗಣಿ ಮತ್ತು ಭೂಗರ್ಭ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ ಅವರು, “ಸರ್, ಮಂತ್ರಿಗಿರಿಯ ಜವಾಬ್ದಾರಿಯಿಂದ ನನ್ನನ್ನು ಬಿಡುಗಡೆ ಮಾಡಿ" ಅಂತ ಕೇಳಿಕೊಂಡಿದ್ದಾರೆ.
ಮಲ್ಲಿಕಾರ್ಜುನ್ ಅವರು ಹೀಗೆ ಏಕಾಏಕಿಯಾಗಿ ರಾಜೀನಾಮೆಗೆ ರೆಡಿಯಾಗಿದ್ದನ್ನು ಕಂಡು ವಿಸ್ಮಿತ ರಾದ ಸಿದ್ದರಾಮಯ್ಯ ಅವರು, “ಅದೇಕ್ರೀ ಮಲ್ಲಿಕಾರ್ಜುನ್, ಮಂತ್ರಿಯಾಗಿ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗುತ್ತಿದ್ದೀರಿ. ಅದರಲ್ಲೂ ನೀವು ನೋಡಿಕೊಳ್ಳುತ್ತಿರುವ ಗಣಿ ಖಾತೆ ಎಂದರೆ ವಿವಾದದ ಗೂಡು. ಅದರೆ ಅಂಥ ವಿವಾದದ ಗೂಡನ್ನೇ ತಂಟೆ-ತಕರಾರಿಲ್ಲದೆ ನಿರ್ವಹಿಸಿ ಕೊಂಡು ಹೋಗುತ್ತಿದ್ದೀರಿ. ಹೀಗಿರುವಾಗ ಮಂತ್ರಿಗಿರಿಯಿಂದ ನಿಮ್ಮನ್ನೇಕೆ ರಿಲೀವ್ ಮಾಡಲಿ? ನೋ, ನೋ, ನಿಮ್ಮ ಪಾಡಿಗೆ ನೀವು ನೆಮ್ಮದಿಯಾಗಿ ಮುಂದುವರಿಯಿರಿ" ಎಂದರಂತೆ. ಆದರೆ ಸಿದ್ದರಾಮಯ್ಯ ಅವರು ಹೀಗೆ ಹೇಳಿದಾಗ ಮಲ್ಲಿಕಾರ್ಜುನ್ ಅವರು ಅರೆಕ್ಷಣ ಸುಮ್ಮನಿದ್ದರೂ ನಂತರ ಸಾವರಿಸಿಕೊಂಡು, “ಸರ್, ಮಂತ್ರಿಗಿರಿಯಿಂದ ನನ್ನನ್ನು ರಿಲೀವ್ ಮಾಡಿ ಅಂತ ಯಾಕೆ ಹೇಳಿದೆ ಎಂದರೆ, ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ನನ್ನ ಮೇಲೆ ವ್ಯವಹಾರದ ಹೊರೆ ಬಿದ್ದಿದೆ.
ಈ ಹೊರೆ ಯಾವ ಲೆವೆಲ್ಲಿನಲ್ಲಿದೆ ಎಂದರೆ ನನಗೆ ಬೇರೆ ಕೆಲಸಗಳನ್ನು ನಿರ್ವಹಿಸಲೂ ಪುರುಸೊ ತ್ತಿಲ್ಲ ದಂತಾಗಿದೆ. ಹೀಗೆ ಪರಿಸ್ಥಿತಿಯ ಒತ್ತಡ ಮಿತಿ ಮೀರಿರುವುದರಿಂದ ನನಗೆ ಮಂತ್ರಿ ಗಿರಿಯ ಹೊರೆಯನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿ ನನಗೆ ಮಂತ್ರಿಗಿರಿ ಸಾಕು ಎನ್ನಿಸುತ್ತಿದೆ. ಹೀಗಾಗಿ ನನ್ನನ್ನು ರಿಲೀವ್ ಮಾಡಿ ಎಂಬುದು ನನ್ನ ಕೋರಿಕೆ" ಎಂದರಂತೆ.
ಇದನ್ನೂ ಓದಿ: R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?
ಆದರೆ ಮಲ್ಲಿಕಾರ್ಜುನ್ ಅವರ ಕೋರಿಕೆಯನ್ನು ಒಪ್ಪದ ಸಿದ್ದರಾಮಯ್ಯ, “ಈಗ ಅದೆಲ್ಲ ಬೇಕಿಲ್ಲ. ನಿಮ್ಮ ತಂದೆಯವರ ನಿಧನದ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹತ್ತಿರ ಬರ್ತಿದೆ. ಇಂಥ ಹೊತ್ತಿನಲ್ಲಿ ನೀವು ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟರೆ ರಾಂಗ್ ಮೆಸೇಜು ಹೋಗುತ್ತದೆ" ಅಂತ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಮೂಲಗಳ ಪ್ರಕಾರ, ಮಲ್ಲಿಕಾರ್ಜುನ್ ಅವರನ್ನು ಮಂತ್ರಿಗಿರಿಯಿಂದ ಬಿಡುಗಡೆ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ ಎಂದರೆ ಶಾಮನೂರು ಸಾಮ್ರಾಜ್ಯಕ್ಕೆ ಅವರ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಂಟ್ರಿ ಕೊಡಲು ಅವರು ತಯಾರಿಲ್ಲ. ನಮಗೇ ಟಿಕೆಟ್ ಬೇಕು ಅಂತ ಮುಸ್ಲಿಮರು ಪಟ್ಟು ಹಿಡಿದಿದ್ದರೂ ಒಪ್ಪಲು ಅವರು ಸಿದ್ದರಿಲ್ಲ.
ಇದೇ ರೀತಿ ಶಾಮನೂರು ಸಾಮ್ರಾಜ್ಯದಲ್ಲಿ ಮಲ್ಲಿಕಾರ್ಜುನ್ ಅವರು ಬಯಸದೆ ಇರುವ ನಾಯಕರು ಆಯಕಟ್ಟಿನ ಜಾಗದಲ್ಲಿ ತುಂಬ ದಿನ ಮುಂದುವರಿಯುವುದು ಕಷ್ಟ.
ರಾಹುಲ್ ಭೇಟಿಗೆ ಸಜ್ಜಾದರು ಸಿದ್ದು
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ನಿರ್ಧರಿಸಿ ದ್ದಾರೆ.
ಕಾರಣ? ಹಲವು ಕಾಲದಿಂದ ಬಗೆಹರಿಯದೆ ಉಳಿದಿರುವ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ಕೊಡಿ ಎಂದು ಕೇಳುವುದು ಈ ಭೇಟಿಯ ಉದ್ದೇಶ. ಅಂದ ಹಾಗೆ, ಸಂಪುಟ ದಲ್ಲಿರುವವರ ಪೈಕಿ ಹದಿನೈದು ಮಂದಿಯನ್ನು ತೆಗೆದು, ಖಾಲಿ ಇರುವ ಸ್ಥಾನಗಳೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.
ವಾಸ್ತವವಾಗಿ ಈ ಕೆಲಸ ಕಳೆದ ವರ್ಷಾಂತ್ಯದ ಪೂರ್ಣಗೊಳ್ಳಬೇಕಿತ್ತಾದರೂ ನಾಯಕತ್ವದ ವಿಷಯ ಮುನ್ನೆಲೆಗೆ ಬಂದು ಇಡೀ ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು. ಹೀಗಾಗಿ ಈ ವಿಷಯದಲ್ಲಿ ಕಿರಿಕಿರಿ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರನ್ನು ಖುದ್ದಾಗಿ ಭೇಟಿಯಾಗಿ ವಿಷಯ ಸೆಟ್ಲ್ ಮಾಡಲು ತೀರ್ಮಾನಿಸಿದ್ದಾರೆ.
ಮೂಲಗಳ ಪ್ರಕಾರ, ಈಗಾಗಲೇ ರಾಹುಲ್ ಗಾಂಧಿಯವರ ಭೇಟಿಗೆ ಸಮಯ ಕೇಳಿರುವ ಸಿದ್ದರಾಮ ಯ್ಯ ಅವರು ಇಂಥ ಭೇಟಿಗೆ ಅವಕಾಶ ಸಿಕ್ಕರೆ ಕೆಲ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಲು ನಿರ್ಧರಿಸಿದ್ದಾರೆ.
ಅರ್ಥಾತ್, “ಈ ಬಾರಿಯ ಬಜೆಟ್ ಅಧಿವೇಶನಕ್ಕಿಂತ ಮುಂಚೆ ಸಂಪುಟ ಪುನಾರಚಿಸಲು ಅವಕಾಶ ಕೊಡಿ. ಇಲ್ಲವೇ ನಾಯಕತ್ವದ ವಿಷಯದಲ್ಲಿ ಗೊಂದಲವಿದೆ ಎನ್ನಿಸಿದರೆ ಶಾಸಕಾಂಗ ಪಕ್ಷದಲ್ಲಿ ವಿಶ್ವಾಸ ಮತ ಯಾಚಿಸಲು ಅವಕಾಶ ಕೊಡಿ" ಅಂತ ಕೇಳಲಿದ್ದಾರೆ.
ಹೇಗಿದ್ದರೂ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ ತ್ತಲ್ಲ? ಹೀಗಾಗಿ ಮತ್ತೆ ಅನಿವಾರ್ಯವಾದರೆ ಶಾಸಕಾಂಗ ಪಕ್ಷದ ನಾಯಕನ ಮರು ಆಯ್ಕೆ ಪ್ರಕ್ರಿಯೆ ನಡೆಯಲಿ ಎಂಬುದು ಸಿದ್ದರಾಮಯ್ಯ ಅವರ ವಾದ. ಮುಂದೇನಾಗುತ್ತದೋ ಕಾದು ನೋಡಬೇಕು.
ಕೈ ಎತ್ತಿದ ನಿತಿನ್, ಚೌಹಾಣ್
ಇನ್ನು ರಾಜ್ಯ ಬಿಜೆಪಿಯಲ್ಲಿ ಉಳಿದುಕೊಂಡೇ ಬಂದಿರುವ ನಾಯಕತ್ವದ ವಿಷಯದ ಬಗ್ಗೆ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಕೈ ಎತ್ತಿದ್ದಾರೆ.
ಅಂದ ಹಾಗೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ಬದಲಿಸಲು ವರಿಷ್ಠರು ಬಯಸದಿದ್ದರೂ ಬಿಜೆಪಿಯ ಭಿನ್ನರ ಪಡೆ ಮಾತ್ರ ತನ್ನ ಅಹೋರಾತ್ರಿ ಹೋರಾಟವನ್ನು ಮುಂದುವರಿಸಿದೆ. ಅಷ್ಟೇ ಅಲ್ಲ, “ನೋಡ್ತಾ ಇರಿ, ಮೇ ತಿಂಗಳ ಹೊತ್ತಿಗೆ ವಿಜಯೇಂದ್ರ ಅವರನ್ನು ವರಿಷ್ಠರೇ ಬದಲಿಸುತ್ತಾರೆ" ಅಂತ ಹೇಳಿಕೊಳ್ಳುತ್ತಿದೆ.
ಹೀಗೆ ಮಾತೆತ್ತಿದರೆ ಭಿನ್ನರು ರವಾನಿಸುತ್ತಿರುವ ಸಂದೇಶದಿಂದ ಕಿರಿಕಿರಿ ಮಾಡಿಕೊಂಡ ಯಡಿಯೂರಪ್ಪ ಕ್ಯಾಂಪು ನೇರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಸಂಪರ್ಕಿಸಿದೆ. ಅಷ್ಟೇ ಅಲ್ಲ, “ನಾಯಕತ್ವದ ವಿಷಯದಲ್ಲಿ ಭಿನ್ನರು ಮೂಡಿಸುತ್ತಿರುವ ಗೊಂದಲ ಗಳಿಗೆ ತೆರೆ ಎಳೆಯಬೇಕು" ಅಂತ ಮನವಿ ಮಾಡಿಕೊಂಡಿದೆ. ಆದರೆ ಈ ವಿಷಯ ಬಂದಾಗ ಅಸಹಾಯಕತೆ ವ್ಯಕ್ತಪಡಿಸಿದ ನಿತಿನ್ ನಬಿನ್ ಅವರು, “ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷರ ಅಯ್ಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಅವರು ಈ ಸಂಬಂಧದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ನೀಡಿದರೆ ನಾನು ಮುಂದಿನ ಹೆಜ್ಜೆ ಇಡಬಹುದು" ಎಂದಿದ್ದಾರೆ. ಯಾವಾಗ ಅವರು ಚೆಂಡನ್ನು ಶಿವರಾಜ್ ಸಿಂಗ್ ಚೌಹಾಣ್ ಅವರ ಅಂಗಳಕ್ಕೆ ಎಸೆದರೋ, ಆಗ ಪಟ್ಟು ಬಿಡದ ಯಡಿಯೂರಪ್ಪ ಕ್ಯಾಂಪು ನೇರವಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೇ ಸಂಪರ್ಕಿಸಿದೆ.
ಆದರೆ ಈ ಸಂದರ್ಭದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು, “ಕರ್ನಾಟಕದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳುತ್ತಾರೋ ಅದೇ ಫೈನಲ್. ಅವರು ವಿಜಯೇಂದ್ರ ಅವರನ್ನು ಬದಲಿಸಿ ಅಂತ ಹೇಳಿಲ್ಲ ವಲ್ಲ? ಹೀಗಾಗಿ ನಾನು ಏನೂ ಹೇಳಲಾರೆ.
ಆದ್ದರಿಂದ ನೀವು ಅವರ ಬಳಿಯೇ ಮಾತನಾಡಬಹುದು" ಎಂದಿದ್ದಾರೆ. ಯಾವಾಗ ನಿತಿನ್ ನಬಿನ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರಿಬ್ಬರೂ ಕೈ ಎತ್ತಿದರೋ, ಆಗ ಮುಂದೇನು ಮಾಡಬೇಕೋ ತಿಳಿಯದೆ ಯಡಿಯೂರಪ್ಪ ಕ್ಯಾಂಪು ಮೌನವಾಗಿದೆ.
ಕುಮಾರಣ್ಣ ಕೇಳಿದ್ದು ಎಂಬತ್ಮೂರು
ಈ ಮಧ್ಯೆ ಜಾತ್ಯತೀತ ಜನತಾದಳದ ಕೋರ್ ಕಮಿಟಿ ಆಕ್ಟಿವ್ ಆಗಿದೆ. ಕೃಷ್ಣಾ ರೆಡ್ಡಿ ನಾಯಕತ್ವದ ಕೋರ್ ಕಮಿಟಿ ಹೀಗೆ ಆಕ್ಟಿವ್ ಆಗಲು ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಕೊಟ್ಟಿರುವ ಸಿಗ್ನಲ್ಲು ಕಾರಣ. ಮೂಲಗಳ ಪ್ರಕಾರ, ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣದ ಬಗ್ಗೆ ವಿವರ ವಾಗಿ ಚರ್ಚಿಸಿzರೆ. ಈ ಸಂದರ್ಭದಲ್ಲಿ ಕರ್ನಾಟಕದ 224 ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ 83 ಕ್ಷೇತ್ರ ಗಳನ್ನು ಬಿಟ್ಟುಕೊಡಬೇಕು ಎಂದು ಕೇಳಿದ್ದಾರೆ.
ಇದೇ ರೀತಿ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದ ನೂರೈವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೇಗೆ ಗೆಲುವು ಗಳಿಸಲಿದೆ ಎಂಬ ಕುರಿತು ಬ್ಲೂ ಪ್ರಿಂಟು ನೀಡಿzರೆ. ಹೀಗೆ ಕರ್ನಾಟಕದ ರಾಜಕೀಯದ ಕುರಿತು ಕುಮಾರಸ್ವಾಮಿ ಅವರು ನೀಡಿದ ಚಿತ್ರಣದಿಂದ ಖುಷಿಯಾದ ಪ್ರಧಾನಿ ನರೇಂದ್ರ ಮೋದಿ ಅವರು, “ನಿಮ್ಮ ಪಕ್ಷಕ್ಕೆ ಎಲ್ಲಿ ಗೆಲುವು ಖಚಿತ ಅನ್ನಿಸುತ್ತದೋ, ಅಲ್ಲ ಸ್ಪರ್ಧಿಸಿ. ನಾನು ನಿಮ್ಮ ಹಿತ ಕಾಯು ತ್ತೇನೆ" ಎಂದಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ, ಆಗ ಕುಮಾರಸ್ವಾಮಿ ಅವರು ಪಕ್ಷದ ಕೋರ್ ಕಮಿಟಿಗೆ ಸಿಗ್ನಲ್ಲು ನೀಡಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಸಿಗಲಿರುವ ಎಂಬತ್ಮೂರು ಸೀಟುಗಳ ವಿವರ ನೀಡಿ, “ಈ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಪ್ಲಸ್ಸು, ಮೈನಸ್ಸುಗಳ ಕುರಿತು ವರದಿ ನೀಡಿ" ಎಂದಿದ್ದಾರೆ. ಹೀಗೆ ಕುಮಾರಸ್ವಾಮಿ ಅವರು ಸಿಗ್ನಲ್ಲು ಕೊಟ್ಟ ನಂತರ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯ ಕೋರ್ ಕಮಿಟಿ ರಾಜ್ಯ ಪ್ರವಾಸಕ್ಕೆ ಸಜ್ಜಾಗತೊಡಗಿದೆ.
ಲಾಸ್ಟ್ ಸಿಪ್: ಅಂದ ಹಾಗೆ, 2026-27ನೇ ಸಾಲಿನ ಬಜೆಟ್ ಮಂಡನೆಗೆ ತಯಾರಿ ಅರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲಿನ ಮೇಲೆ ಸವಾಲು ಎದುರಾಗತೊಡಗಿದೆ. ಕೇಂದ್ರದ ಜಿಎಸ್‌ಟಿ ನೀತಿ, ಅನುದಾನ ಹಂಚಿಕೆಯ ರೀತಿಯಿಂದ ರಾಜ್ಯದ ಬೊಕ್ಕಸಕ್ಕೆ ಬಿದ್ದಿರುವ ಹೊಡೆತ ಒಂದು ಕಡೆಯಾದರೆ, ಮತ್ತೊಂದು ಕಡೆಯಿಂದ ಟ್ರಂಪಾಘಾತ ಶುರುವಾಗಿದೆ. ಅರ್ಥಾತ್, ಭಾರತ-ಅಮೆರಿಕದ ನಡುವಣ ವ್ಯಾಪಾರ ಒಪ್ಪಂದದ ನಂತರ ಹತ್ತಿ, ಸೋಯಾಬಿನ್ ಸೇರಿದಂತೆ ಹಲವು ಉತ್ಪನ್ನಗಳು ಶೂನ್ಯ ತೆರಿಗೆ ಬೆಂಬಲದೊಂದಿಗೆ ಭಾರತಕ್ಕೆ ಆಮದಾಗಲಿವೆ.
ಹೀಗೆ ಹತ್ತಿ ಸೇರಿದಂತೆ ಹಲವು ಉತ್ಪನ್ನಗಳು ಅಮದಾಗತೊಡಗಿದರೆ ಕರ್ನಾಟಕದ ರೈತರಿಗೆ ಹೊಡೆತ ಬೀಳುತ್ತದೆ. ದಾವಣಗೆರೆಯಿಂದ ಮುಂದೆ ಬಹುತೇಕ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿರುವ ಹತ್ತಿ ಲಕ್ಷಾಂತರ ಕುಟುಂಬಗಳಿಗೆ ಆಸರೆ ಒದಗಿಸಿದೆ. ಇಂಥ ಸಂದರ್ಭದಲ್ಲಿ ಅಗ್ಗದ ಬೆಲೆಗೆ ಅಮೆರಿಕದ ಹತ್ತಿ ಅಮದಾಗತೊಡಗಿದರೆ ಕರ್ನಾಟಕದ ಹತ್ತಿ ಬೆಳೆಗಾರರು ಬೀದಿಗೆ ಬರುತ್ತಾರೆ. ಇದು ಕೇವಲ ಹತ್ತಿ ಮಾತ್ರವಲ್ಲ, ಇಂಥ ಹಲವಾರು ಬೆಳೆಗಳನ್ನು ಉತ್ಪಾದಿಸುವ ರೈತರ ಕತೆ ಹೀಗೇ ಆಗುತ್ತದೆ.
ಇಂಥ ಸ್ಥಿತಿಯಲ್ಲಿ ಕರ್ನಾಟಕದ ರೈತರ ಹಿತ ಕಾಪಾಡಲು ಬಜೆಟ್ ಆಸರೆ ನೀಡುವುದು, ಅಮೆರಿಕ ದೊಂದಿಗಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸುವುದು ಅನಿವಾರ್ಯ ಎಂಬುದು ಸಿದ್ದು ಯೋಚನೆ.