ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಿಡಿಎ ಕಾರ್ಯತಂತ್ರ ಅಖಿಲೇಶ್‌ ಕ್ಷೇತ್ರದಲ್ಲೇ ವಿಫಲವಾಯ್ತೇ ?

ಪಕ್ಷದ ರಾಜ್ಯಾಧ್ಯಕ್ಷ ಶ್ಯಾಮ್‌ಲಾಲ್ ಪಾಲ್ ನೇತೃತ್ವದಲ್ಲಿ ನಡೆದ ಪಿಡಿಎ ಕಾರ್ಯಕರ್ತರ ಸಮಾವೇಶ ದಲ್ಲಿ ನಿರೀಕ್ಷಿತ ಜನಸಂದಣಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಇಡೀ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, ಪ್ರಮುಖ ನಾಯಕರನ್ನು ಲಖನೌಗೆ ಕರೆಸಿ ವಿವರಣೆ ಕೇಳಿದ್ದಾರೆ.

ರಾಘವ ಶರ್ಮ ನಿಡ್ಲೆ

ಎಸ್‌ʼಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಎಂದರೆ ಮುಸ್ಲಿಂ-ಯಾದವ ಸಮೀಕರಣ. ಆದರೆ ಉತ್ತರ ಪ್ರದೇಶದಂತಹ ವಿಶಾಲ ರಾಜ್ಯದಲ್ಲಿ ಕೇವಲ ಈ ಎರಡೂ ಸಮುದಾಯಗಳ ಬೆಂಬಲದಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಬಲವಾದ ಸ್ಪರ್ಧೆ ಒಡ್ಡುವುದು ಕಷ್ಟ ಎಂಬುದನ್ನು ಅಖಿಲೇಶ್ ಯಾದವ್ ಗುರುತಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ಅವರು ಮುಂದಿಟ್ಟಿರುವುದೇ ಪಿಡಿಎ ಸೂತ್ರ. ಆದರೆ ಕನ್ನೌಜ್‌ನಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಲು ಸಾಧ್ಯವಾಗಿಲ್ಲ.

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಹೊತ್ತಿನಲ್ಲಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಕನ್ನೌಜ್ ಜಿಲ್ಲಾ ಘಟಕ ವಿಸರ್ಜನೆಯಾಗಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ಪಿಡಿಎ (ಪಿಚ್ಛಡಾ+ಪಂಡಿತ್, ದಲಿತ್, ಅಲ್ಪಸಂಖ್ಯಾಕ್) ತಂತ್ರಗಾರಿಕೆಯನ್ನು ಮುಂದಿಟ್ಟು ಕೊಂಡಿರುವ ಎಸ್‌ಪಿಗೆ, ತನ್ನದೇ ಪ್ರಮುಖ ರಾಜಕೀಯ ನೆಲೆಯಾದ ಕನ್ನೌಜ್‌ನಲ್ಲಿ ಕಾರ್ಯಕರ್ತರನ್ನು ನಿರೀಕ್ಷಿತ ಪ್ರಮಾಣದಲ್ಲಿ ಒಗ್ಗೂಡಿಸಲು ಸಾಧ್ಯವಾಗದಿರುವುದು ಸಂಘಟನೆಯ ಕಾರ್ಯವೈಖರಿಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಕ್ಷದ ರಾಜ್ಯಾಧ್ಯಕ್ಷ ಶ್ಯಾಮ್‌ಲಾಲ್ ಪಾಲ್ ನೇತೃತ್ವದಲ್ಲಿ ನಡೆದ ಪಿಡಿಎ ಕಾರ್ಯಕರ್ತರ ಸಮಾವೇಶದಲ್ಲಿ ನಿರೀಕ್ಷಿತ ಜನಸಂದಣಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಇಡೀ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, ಪ್ರಮುಖ ನಾಯಕರನ್ನು ಲಖನೌಗೆ ಕರೆಸಿ ವಿವರಣೆ ಕೇಳಿದ್ದಾರೆ.

ಇದನ್ನೂ ಓದಿ: Raghava Sharma Nidle Column: ಅಷ್ಟಕ್ಕೂ ʼರೆಜೀಮ್ ಚೇಂಜ್ʼ ಯಾರಿಗೆ ಬೇಕಿದೆ ?

ಅಖಿಲೇಶರ ಪಿಡಿಎ ತಂತ್ರವನ್ನು ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಪಕ್ಷ ಎದುರಿಸುತ್ತಿರುವ ಸಂಘಟನಾತ್ಮಕ ಸವಾಲುಗಳ ಸೂಚನೆ ಇದು ಎಂದೇ ವಿಶ್ಲೇಷಿಸಲಾಗುತ್ತಿದೆ. ಎಸ್‌ಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಎಂದರೆ ಮುಸ್ಲಿಂ-ಯಾದವ ಸಮೀಕರಣ. ದೀರ್ಘಕಾಲ ಈ ಸಾಮಾಜಿಕ ಬೆಂಬಲ ಪಕ್ಷದ ರಾಜಕೀಯದ ಪ್ರಮುಖ ಆಧಾರವಾಗಿತ್ತು. ಆದರೆ ಉತ್ತರ ಪ್ರದೇಶದಂತಹ ವಿಶಾಲ ರಾಜ್ಯದಲ್ಲಿ ಕೇವಲ ಈ ಎರಡೂ ಸಮುದಾಯಗಳ ಬೆಂಬಲದಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಬಲವಾದ ಸ್ಪರ್ಧೆ ಒಡ್ಡುವುದು ಕಷ್ಟ ಎಂಬುದನ್ನು ಅಖಿಲೇಶ್ ಯಾದವ್ ಗುರುತಿಸಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಅವರು ಮುಂದಿಟ್ಟಿರುವುದೇ ಪಿಡಿಎ ಸೂತ್ರ. ಪಿಚ್ಛ್‌ಡಾ ಎಂದರೆ ಹಿಂದುಳಿದ ವರ್ಗಗಳು, ದಲಿತ್ ಎಂದರೆ ಪರಿಶಿಷ್ಟ ಜಾತಿ/ಪಂಗಡಗಳು ಮತ್ತು ಅಲ್ಪಸಂಖ್ಯಾಕ್ ಎಂದರೆ ಅಲ್ಪಸಂಖ್ಯಾತರು. ಈ ಸಮುದಾಯಗಳನ್ನು ಸಾಮಾಜಿಕ ನ್ಯಾಯ, ಸಂವಿಧಾನಾತ್ಮಕ ಹಕ್ಕುಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರದಲ್ಲಿ ಪಾಲುದಾರಿಕೆಯ ಆಶಯದಡಿ ಒಗ್ಗೂಡಿಸುವುದು ಇದರ ಮುಖ್ಯ ಉದ್ದೇಶ.

ಪಿಡಿಎ ಕೇವಲ ಚುನಾವಣಾ ಘೋಷಣೆಯಾಗಿ ಉಳಿಯಬಾರದು, ಅದು ಅಭ್ಯರ್ಥಿಗಳ ಆಯ್ಕೆ, ಪಕ್ಷದ ಸಂಘಟನೆ, ಸ್ಥಳೀಯ ನಾಯಕತ್ವ ಮತ್ತು ಅಧಿಕಾರ ಹಂಚಿಕೆಯಲ್ಲೂ ಪ್ರತಿ-ಲಿಸಬೇಕು ಎಂಬುದು ಈ ಕಾರ್ಯತಂತ್ರದ ಭಾಗವಾಗಿದ್ದು, ಯಾದವ ಸಮುದಾಯವನ್ನು ಮೀರಿ ಕುರ್ಮಿ, ಮೌರ್ಯ, ಶಾಕ್ಯ, ಸೈನಿ, ನಿಷಾದ್, ಪಾಲ್ ಮತ್ತು ಇತರ ಹಿಂದುಳಿದ ಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಪ್ರಯತ್ನವಾಗಿದೆ. ಈ ಸಮುದಾಯಗಳ ಬೆಂಬಲ ಗಳಿಸುವುದು ಬಿಜೆಪಿಯ ಸಾಮಾಜಿಕ ನೆಲೆಯಲ್ಲೂ ಸ್ಪರ್ಧೆ ಒಡ್ಡುವ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ತಂತ್ರಗಾರಿಕೆಗೆ 2024ರ ಲೋಕಸಭಾ ಚುನಾವಣೆ ಒಂದು ಪ್ರಮುಖ ರಾಜಕೀಯ ಆಧಾರ ಒದಗಿಸಿತ್ತು.

UP akhilesh

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 37 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತ್ತು. ಒಟ್ಟಾಗಿ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ 43 ಸ್ಥಾನಗಳನ್ನು ಪಡೆದಿತ್ತು. ಈ ಫಲಿತಾಂಶದಲ್ಲಿ ಪಿಡಿಎ ಸಾಮಾಜಿಕ ಸಮೀಕರಣ, ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಳೀಯ ರಾಜಕೀಯ ಅಸಮಾಧಾನಗಳು ಪಾತ್ರವಹಿಸಿದ್ದವು.

ಖಾಲಿ ಕುರ್ಚಿಗಳೆತ್ತಿದ ಪ್ರಶ್ನೆಗಳು: ಅ.17ರಂದು ಕನ್ನೌಜ್‌ನಲ್ಲಿರುವ ಎಸ್‌ಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಶ್ಯಾಮ್‌ಲಾಲ್ ಪಾಲ್ ನೇತೃತ್ವದಲ್ಲಿ ಪಿಡಿಎ ಕಾರ್ಯಕರ್ತರ ಸಮಾವೇಶ ನಡೆದಿತ್ತು. ವೇದಿಕೆಯಲ್ಲಿ ನಾಯಕರು ಕುಳಿತಿದ್ದರೂ, ಸಭಾಂಗಣದ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಅನೇಕ ಕುರ್ಚಿಗಳು ಖಾಲಿ ಬಿದ್ದಿದ್ದವು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು ಮತ್ತು ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದವು. ಇದರ ಬೆನ್ನಲ್ಲೇ ಅ.18ರಂದು ಅಖಿಲೇಶ್ ಯಾದವ್ ಅವರು ಪಕ್ಷದ ಕನ್ನೌಜ್ ಜಿಲ್ಲಾ ಘಟಕವನ್ನು ವಿಸರ್ಜಿಸಿ, ಜಿಲ್ಲಾ ಪದಾಧಿಕಾರಿಗಳನ್ನು ಹುದ್ದೆಗಳಿಂದ ತೆಗೆದುಹಾಕಿದ್ದಾರೆ.

ಇದು ಸಾಮಾನ್ಯ ಕ್ಷೇತ್ರವಲ್ಲ: ಕನೌಜ್ ಸಮಾಜವಾದಿ ಪಕ್ಷಕ್ಕೆ ಅತ್ಯಂತ ಮಹತ್ವದ ಪ್ರದೇಶ. ಅಖಿಲೇಶ್ ಯಾದವ್ ಪ್ರಸ್ತುತ ಲೋಕಸಭೆಯಲ್ಲಿ ಪ್ರತಿನಿಧಿಸುವ ಕ್ಷೇತ್ರವಿದು. ಅವರ ಕುಟುಂಬದ ರಾಜಕೀಯ ಇತಿಹಾಸದೊಂದಿಗೂ ಕನ್ನೌಜ್‌ಗೆ ನಿಕಟ ಸಂಬಂಧವಿದೆ. ಹೀಗಾಗಿ ಇಲ್ಲಿ ನಡೆದ ಕಾರ್ಯಕ್ರಮದ ಕಳಪೆ ಹಾಜರಾತಿ ಪಕ್ಷದ ವರ್ಚಸ್ಸಿಗೆ ಸಂಬಂಧಿಸಿದ ಚರ್ಚೆಗೆ ಕಾರಣವಾಗಿದೆ. ಇಲ್ಲಿ ನಡೆದಿದ್ದ ಕಾರ್ಯಕ್ರಮದ ಉದ್ದೇಶವೇ ಪಿಡಿಎ ವಿಸ್ತರಣೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸಂಘಟಿಸುವ ಸಮಾವೇಶದಲ್ಲೇ ನಿರೀಕ್ಷಿತ ಜನಸಂದಣಿ ಕಾಣದಿರುವುದು, ಈ ಸಮುದಾಯಗಳ ನಡುವೆ ಪಕ್ಷದ ಸಂಪರ್ಕ ಎಷ್ಟರ ಮಟ್ಟಿಗೆ ಬಲವಾಗಿದೆ ಎಂಬ ಪ್ರಶ್ನೆಯನ್ನು ಎತ್ತಿದೆ.

ಬಿಜೆಪಿ ಪಾಲಿಗೆ ಅಸ್ತ್ರ: ಬಿಜೆಪಿ ನಾಯಕರು ಖಾಲಿ ಕುರ್ಚಿಗಳ ದೃಶ್ಯಗಳನ್ನು ಬಳಸಿಕೊಂಡು ಎಸ್‌ಪಿಯ ಪಿಡಿಎ ಕಾರ್ಯತಂತ್ರವನ್ನು ಪ್ರಶ್ನಿಸಿದ್ದಾರೆ. ಪಿಡಿಎಗೆ ವ್ಯಾಪಕ ಜನಬೆಂಬಲವಿದೆ ಎಂಬ ಎಸ್‌ಪಿಯ ಪ್ರತಿಪಾದನೆಗೆ ಈ ಘಟನೆ ಸವಾಲು ಎಸೆಯುತ್ತದೆ ಎಂದು ಬಿಜೆಪಿ ಅಣಕವಾಡಿದೆ. ಇದಕ್ಕೆ ಪ್ರತಿಯಾಗಿ ಎಸ್ʼಪಿ ವಕ್ತಾರ ಉದಯವೀರ್ ಸಿಂಗ್, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಕಾರ್ಯಕರ್ತರು ನಿರತರಾಗಿದ್ದರಿಂದ ಹಾಜರಾತಿ ಕಡಿಮೆಯಾಗಿರಬಹುದು ಎಂದು ಸಮರ್ಥಿಸಿ ಕೊಂಡಿದ್ದಾರೆ.

ಹಾಗಂತ ಒಂದು ಸ್ಥಳೀಯ ಸಮಾವೇಶದ ಹಾಜರಾತಿಯಿಂದ ಮಾತ್ರ ಎಸ್‌ಪಿಯ ರಾಜ್ಯವ್ಯಾಪಿ ಸಾಮಾಜಿಕ ಬೆಂಬಲದ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕನ್ನೌಜ್ ಘಟನೆಯನ್ನು ಎಸ್‌ಪಿಯ ಒಟ್ಟಾರೆ ಚುನಾವಣಾ ಸ್ಥಿತಿಗತಿಯ ಅಂತಿಮ ಸೂಚಕವಾಗಿ ನೋಡಲಾಗದು, ಆದರೆ ಪಕ್ಷದ ಘೋಷಣೆಗಳು ಮತ್ತು ಸಂಘಟನೆಯ ಕಾರ್ಯಕ್ಷಮತೆ ಯ ನಡುವೆ ಹೊಂದಾಣಿಕೆ ಇರಬೇಕೆಂಬುದನ್ನು ಇದು ನೆನಪಿಸುತ್ತದೆ. ಕನ್ನೌಜ್ ಘಟನೆಯು ಸ್ಥಳೀಯ ಸಂಘಟನಾ ಲೋಪವೇ, ಸ್ಥಳೀಯ ಬಣಗಳ ನಡುವಿನ ಭಿನ್ನಾಭಿಪ್ರಾಯದ ಪರಿಣಾಮವೇ ಅಥವಾ ಪಿಡಿಎ ವಿಸ್ತರಣೆಯಲ್ಲಿನ ಆಳವಾದ ಸಮಸ್ಯೆಯ ಸೂಚನೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕನೌಜ್ ರಾಜಕೀಯ ಇತಿಹಾಸ: ಕನ್ನೌಜ್ ಕೇವಲ ಸುಗಂಧ ದ್ರವ್ಯಗಳ ನಗರವಲ್ಲ. ಸಮಾಜವಾದಿ ಚಳವಳಿಯ ಇತಿಹಾಸ, ಯಾದವ್ ಕುಟುಂಬದ ರಾಜಕೀಯ ಪ್ರಭಾವ ಮತ್ತು ಜಾತಿ ಸಮೀಕರಣಗಳ ಮೂಲಕ ರೂಪುಗೊಂಡಿರುವ ಮಹತ್ವದ ಲೋಕಸಭಾ ಕ್ಷೇತ್ರವೂ ಹೌದು. 1990ರ ದಶಕದಲ್ಲಿ ಉತ್ತರ ಪ್ರದೇಶದ ರಾಜಕೀಯದಲ್ಲಿ ಮಂಡಲ್ ರಾಜಕೀಯ, ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಮತ್ತು ಜಾತಿ ಆಧಾರಿತ ಸಾಮಾಜಿಕ ಸಮೀಕರಣಗಳು ಪ್ರಮುಖವಾದವು. ಈ ಬದಲಾವಣೆಗಳ ನಡುವೆ ಸಮಾಜವಾದಿ ಪಕ್ಷವು ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಿತು.

1996ರಲ್ಲಿ ಕನ್ನೌಜ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದರೂ, 1998ರಲ್ಲಿ ಎಸ್‌ಪಿಯ ಪ್ರದೀಪ್ ಯಾದವ್ ಗೆಲುವು ಸಾಧಿಸಿದರು. 1999ರಲ್ಲಿ ಮುಲಾಯಂ ಸಿಂಗ್ ಯಾದವ್ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಈ ಬೆಳವಣಿಗೆಗಳು ಕನ್ನೌಜ್ ಮತ್ತು ಯಾದವ್ ಕುಟುಂಬದ ರಾಜಕೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಿದವು. ಇಲ್ಲಿಂದ ಕನ್ನೌಜ್ ಕೇವಲ ಒಂದು ಚುನಾವಣಾ ಕ್ಷೇತ್ರವಾಗಿರದೆ, ಎಸ್‌ಪಿಯ ರಾಜಕೀಯ ಶಕ್ತಿ ಮತ್ತು ಕುಟುಂಬದ ನಾಯಕತ್ವದ ಸಂಕೇತವಾಗಿಯೂ ಗುರುತಿಸಿ ಕೊಳ್ಳತೊಡಗಿತು.

ಮುಲಾಯಂ ಸಿಂಗ್ ಅವರು ಕ್ಷೇತ್ರವನ್ನು ತೆರವುಗೊಳಿಸಿದ ನಂತರ 2000ರ ಉಪಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅಖಿಲೇಶ್ 2000, 2004 ಮತ್ತು 2009ರಲ್ಲಿ ಕನ್ನೌಜ್‌ನಿಂದ ಲೋಕಸಭೆಗೆ ಆಯ್ಕೆಯಾದರು. ನಂತರ ತಮ್ಮ ಪತ್ನಿ ಡಿಂಪಲ್ ಯಾದವ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು. 2012ರ ಉಪಚುನಾವಣೆಯಲ್ಲಿ ಡಿಂಪಲ್ ಅವಿರೋಧ ವಾಗಿ ಆಯ್ಕೆಯಾದರು, 2014ರ ಲೋಕಸಭಾ ಚುನಾವಣೆಯಲ್ಲಿಯೂ ಗೆದ್ದರು. ದಶಕಗಳ ಕಾಲ ಎಸ್‌ಪಿ ಪ್ರಭಾವಕ್ಕೆ ಸಾಕ್ಷಿಯಾಗಿದ್ದ ಈ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿ ಜಯಗಳಿಸಿತು. ಆದರೆ 2024ರಲ್ಲಿ ಅಖಿಲೇಶ್ ಯಾದವ್ ಮತ್ತೆ ಗೆದ್ದು ಕ್ಷೇತ್ರವನ್ನು ಎಸ್‌ಪಿ ತೆಕ್ಕೆಗೆ ತಂದರು.

ಸಂವಿಧಾನ ದಿನದಂದು ಪ್ರಣಾಳಿಕೆ: ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ನವೆಂಬರ್ 26ರ ಸಂವಿಧಾನ ದಿನದಂದು ಬಿಡುಗಡೆ ಮಾಡುವುದಾಗಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಪ್ರಣಾಳಿಕೆಗೆ ‘ಸತ್ತಾಯೀಸ್ ಕಾ ಸಂಕಲ್ಪ್: ಪಿಡಿಎ ಕಾ ಪ್ರಣ್‌ಪತ್ರ’ (2027ರ ಸಂಕಲ್ಪ: ಪಿಡಿಎಯ ಪ್ರತಿಜ್ಞಾಪತ್ರ) ಎಂದು ಹೆಸರಿಡಲಾಗಿದೆ. ಇದನ್ನು ‘ಜನ-ಮನ ಪ್ರಣಾಳಿಕೆ’ ಎಂದೂ ಅವರು ಕರೆದಿದ್ದಾರೆ. ಸಂವಿಧಾನ ದಿನದಂದು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಎಸ್‌ಪಿ ತನ್ನ ರಾಜಕೀಯ ಸಂದೇಶವನ್ನು ಸಾಮಾಜಿಕ ನ್ಯಾಯ, ಸಮಾನತೆ, ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author