ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ಟ್ರಂಪ್‌ ಸರ್ಕಾರಕ್ಕೆ ಭಾರತದ ಪವರ್‌ ಇದ್ದಕ್ಕಿದ್ದಂತೆ ಗೊತ್ತಾಯಿತೇ ?

ಇದ್ದಕ್ಕಿದ್ದಂತೆ ಟ್ರಂಪ್ ಸರ್ಕಾರಕ್ಕೆ ನಮ್ಮ ದೇಶದ ಈ ಪವರ್ ಗೊತ್ತಾಯಿತೇ? ಎಂದು ನಂಬುವಷ್ಟು ಮೂರ್ಖರು ಭಾರತೀಯರಲ್ಲ. ಭಾರತದ ಇಂಧನ ವಲಯದ ಅತಿ ದೊಡ್ಡ ವಿಪರ್ಯಾಸವೆಂದರೆ, ದೇಶಕ್ಕೆ ಬೇಕಾಗುವ ಕಚ್ಚಾ ತೈಲದ ಶೇಕಡಾ 90ರಷ್ಟನ್ನು ನಾವು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು.

ಮನಿ ಮೈಂಡೆಡ್

ಭಾರತವನ್ನು ಡೆಡ್ ಇಕಾನಮಿ ಎಂದು ಅವಹೇಳನ ಮಾಡಿದ್ದ ಟ್ರಂಪ್ ಇದೀಗ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳಿಸಿದ್ದಾರೆ ಮತ್ತು ಅವರು ಭಾರತವನ್ನು ರಿಫೈನಿಂಗ್ ಸೂಪರ್ ಪವರ್ ಎಂದು ಪ್ರಶಂಸಿಸಿದ್ದಾರೆ. ಇದ್ದಕ್ಕಿದ್ದಂತೆ ಟ್ರಂಪ್ ಸರ್ಕಾರಕ್ಕೆ ನಮ್ಮ ದೇಶದ ಪವರ್ ಗೊತ್ತಾಯಿತು ಎಂದು ನಂಬುವಷ್ಟು ಮೂರ್ಖರು ಭಾರತೀಯರಲ್ಲ. ವಾಸ್ತವವಾಗಿ, ಭಾರತದ ಮುನ್ನಡೆಯನ್ನು ದೊಡ್ಡ ದೇಶಗಳು ಒಪ್ಪಿಕೊಳ್ಳುತ್ತಿವೆ.

ಜಿಯೋ ಪಾಲಿಟಿಕ್ಸ್‌ನಲ್ಲಿ ಶಕ್ತಿ ಸಮತೋಲನದ ಸಮೀಕರಣ ಬದಲಾಗುತ್ತಿರುವ ಕಾಲಘಟ್ಟಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಭಾರತವನ್ನು ‘ರಿಫೈನಿಂಗ್ ಸೂಪರ್ ಪವರ್’ (ತೈಲ ಸಂಸ್ಕರಣೆಯ ಮಹಾಶಕ್ತಿ) ಎಂದು ಇತ್ತೀಚೆಗೆ ಬಣ್ಣಿಸಿರುವುದು ಸಾಮಾನ್ಯ ಹೇಳಿಕೆಯಲ್ಲ. ಇದು ಜಾಗತಿಕ ಇಂಧನ ಪೂರೈಕೆಯ ವ್ಯವಸ್ಥೆಯಲ್ಲಿ ಭಾರತದ ಅನಿವಾರ್ಯತೆಯನ್ನು ಅಮೆರಿಕ ಮನಗಂಡಿರುವುದರ ಸ್ಪಷ್ಟ ಸೂಚನೆಯಾಗಿದೆ.

ಆದರೆ, ಈ ಹೊಗಳಿಕೆಯ ಹಿಂದೆ ಅಮೆರಿಕದ ಸ್ವಾರ್ಥದ ರಾಜಕೀಯ ಮತ್ತು ಭಾರತದ ಮುಂದಿರುವ ಆರ್ಥಿಕ ಸವಾಲುಗಳ ದೊಡ್ಡ ಕಥೆಯೇ ಅಡಗಿದೆ. ಭಾರತವನ್ನು ಡೆಡ್ ಇಕಾನಮಿ ಎಂದು ಅವಹೇಳನ ಮಾಡಿದ್ದ ಅಮೆರಿಕಾಧ್ಯಕ್ಷ ಟ್ರಂಪ್ ಇದೀಗ ತಮ್ಮ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳಿಸಿದ್ದಾರೆ ಮತ್ತು ಅವರು ಭಾರತವನ್ನು ರಿಫೈನಿಂಗ್ ಸೂಪರ್ ಪವರ್ ಎಂದು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: Keshava Prasad B Column: ಅಮೆರಿಕದ ಅಬ್ಬರ, ಜಾಗತಿಕ ಸಂಚಿಗೆ ಜಗ್ಗದ ಭಾರತ !

ಇದ್ದಕ್ಕಿದ್ದಂತೆ ಟ್ರಂಪ್ ಸರ್ಕಾರಕ್ಕೆ ನಮ್ಮ ದೇಶದ ಈ ಪವರ್ ಗೊತ್ತಾಯಿತೇ? ಎಂದು ನಂಬುವಷ್ಟು ಮೂರ್ಖರು ಭಾರತೀಯರಲ್ಲ. ಭಾರತದ ಇಂಧನ ವಲಯದ ಅತಿ ದೊಡ್ಡ ವಿಪರ್ಯಾಸವೆಂದರೆ, ದೇಶಕ್ಕೆ ಬೇಕಾಗುವ ಕಚ್ಚಾ ತೈಲದ ಶೇಕಡಾ 90ರಷ್ಟನ್ನು ನಾವು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು.

ಸ್ವಂತ ನೆಲದಲ್ಲಿ ತೈಲ ನಿಕ್ಷೇಪಗಳು ಅತ್ಯಲ್ಪವಾದರೂ, ಭಾರತವು ವಿಶ್ವದ ಅತ್ಯಂತ ಬೃಹತ್ ತೈಲ ಸಂಸ್ಕರಣಾ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯ ಸಂಕೀರ್ಣವೊಂದೇ ದಿನಕ್ಕೆ 14 ಲಕ್ಷ ಬ್ಯಾರೆಲ್ ತೈಲವನ್ನು ಸಂಸ್ಕರಿಸಬಲ್ಲ ಜಗತ್ತಿನ ಅತಿ ದೊಡ್ಡ ಕೇಂದ್ರವಾಗಿದೆ.

ಪಶ್ಚಿಮ ಏಷ್ಯಾದ ಅಸ್ಥಿರತೆ ಮತ್ತು ಜಾಗತಿಕ ಯುದ್ಧಗಳ ಕಾರಣದಿಂದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಇಂದಿನ ಸನ್ನಿವೇಶದಲ್ಲಿ, ಜಗತ್ತಿಗೆ ಅನಿವಾರ್ಯವಾಗಿ ಬೇಕಾಗಿರುವ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನು (ಪೆಟ್ರೋಲ್, ಡೀಸೆಲ್, ಜೆಟ್ ಇಂಧನ) ಪೂರೈಸುವ ಏಕೈಕ ಭರವಸೆಯ ಕೇಂದ್ರವಾಗಿ ಭಾರತ ನಿಂತಿದೆ. ‌

ಅಮೆರಿಕದ ಈಗಿನ ಒಳಸಂಚು ಅಥವಾ ಕಾರ್ಯತಂತ್ರ ಬಹಳ ಸ್ಪಷ್ಟವಾಗಿದೆ. ಭಾರತವು ರಷ್ಯಾ ದಿಂದ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡಿ, ವೆನೆಜುವೆಲಾದ ಕಚ್ಚಾ ತೈಲದ ಕಡೆಗೆ ಗಮನಹರಿಸಬೇಕು ಎಂಬುದು ಟ್ರಂಪ್ ಆಡಳಿತದ ಬಯಕೆ. ವೆನೆಜುವೆಲಾದ ತೈಲವು ಘನವಾದ ( Heavy crude ) ಮತ್ತು ಸಂಕೀರ್ಣ ಗುಣಮಟ್ಟದ್ದಾಗಿದ್ದು, ಅದನ್ನು ಸಂಸ್ಕರಿಸಲು ಭಾರತದಂತಹ ಅತ್ಯಾಧುನಿಕ ರಿಫೈನರಿಗಳೇ ಬೇಕು. ಆದರೆ, ಅಮೆರಿಕದ ಈ ಪ್ರಸ್ತಾವನೆಯನ್ನು ಭಾರತವು ಸಂಪೂರ್ಣ ವ್ಯಾವಹಾರಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ಮಾತ್ರ ನೋಡಬೇಕೆ ಹೊರತು, ಯಾವುದೇ ರಾಜಕೀಯ ಒತ್ತಡಕ್ಕ ಮಣಿದು ಅಲ್ಲ.

Trup and mOdi R

ಇಲ್ಲಿ ಕಚ್ಚಾ ತೈಲದ ಮೇಲಿನ ರಿಯಾಯಿತಿ, ಸಾಗಣೆ ವೆಚ್ಚ, ಸಂಸ್ಕರಣಾ ಲಾಭ ಮತ್ತು ಹಣದ ಪಾವತಿ ಭದ್ರತೆ ಮುಖ್ಯವಾಗುತ್ತದೆಯೇ ಹೊರತು ಅಮೆರಿಕದ ಹಿತಾಸಕ್ತಿಯಲ್ಲ. ಭಾರತೀಯ ಕಂಪನಿಗಳು ಈ ಹಿಂದೆ ಅಮೆರಿಕದ ವಿದೇಶಾಂಗ ನೀತಿಯ ಏರಿಳಿತಗಳಿಂದ ದೊಡ್ಡ ಬೆಲೆ ತೆತ್ತಿವೆ. ಹಿಂದೆ ವೆನೆಜುವೆಲಾ ಮೇಲೆ ಅಮೆರಿಕ ದಿಢೀರ್ ಆರ್ಥಿಕ ದಿಗ್ಬಂಧನ ಹೇರಿದಾಗ, ಅಲ್ಲಿ ಭಾರತ ಹೂಡಿಕೆ ಮಾಡಿದ್ದ ಕೋಟ್ಯಂತರ ರೂ. ಯೋಜನೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದ್ದವು.

ಪಾವತಿಗಳು ನಿಂತು ಹೋಗಿ, ವ್ಯಾಪಾರ ಅಸ್ತವ್ಯಸ್ತವಾಗಿತ್ತು. ಅಮೆರಿಕವು ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ರಷ್ಯಾದ ಡೀಸೆಲ್ ಅನ್ನು ಬಳಸಿಕೊಳ್ಳಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎಂದಾದರೆ, ಭಾರತದ 140 ಕೋಟಿ ಜನರ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗೂ ಅಷ್ಟೇ ಪ್ರಾಮುಖ್ಯ ಸಿಗಬೇಕು. ಇಲ್ಲಿ ಭಾರತದ ನಿಲುವು ಪರಸ್ಪರ ಗೌರವ ಮತ್ತು ಸಮಾನತೆಯ ಮೇಲೆ ಆಧಾರಿತವಾಗಿರಬೇಕು. ಅಮೆರಿಕದ ಮಧ್ಯಂತರ ಚುನಾವಣೆಗಳು ಜಾಗತಿಕ ರಾಜಕಾರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಲಿವೆ. ಟ್ರಂಪ್ ಸರ್ಕಾರದ ರಾಜಕೀಯ ಲೆಕ್ಕಾಚಾರ ಗಳು ಕ್ಷಣಕ್ಷಣಕ್ಕೂ ಬದಲಾಗ ಬಹುದು. ಭಾರತವು ಅಮೆರಿಕದ ಈ ರಾಜತಂತ್ರದ ಹೊಗಳಿಕೆಗೆ ಮರುಳಾಗಿ ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಬಲಿಕೊಡಬಾರದು.

ಬದಲಾಗಿ, ತನ್ನ ‘ರಿಫೈನಿಂಗ್ ಪವರ್’ ಅನ್ನು ಬಂಡವಾಳವನ್ನಾಗಿ ಮಾಡಿಕೊಂಡು, ಅಮೆರಿಕದ ಜೊತೆ ವಾಣಿಜ್ಯ ಲಾಭವನ್ನು ಪಡೆದುಕೊಳ್ಳಬೇಕು. ಭಾರತದ ಇಂಧನ ಸ್ವಾಯತ್ತತೆ ಮತ್ತು ದೇಶೀಯ ಹಿತಾಸಕ್ತಿ ಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುವುದು ಇಂದಿನ ಅತಿ ದೊಡ್ಡ ಅವಶ್ಯಕತೆಯಾಗಿದೆ.

ಟ್ರಂಪ್ ಆಟಾಟೋಪ ಭಾರತಕ್ಕೂ ಚೆನ್ನಾಗಿ ಗೊತ್ತಿರುವುದರಿಂದ ಕೇಂದ್ರ ಸರ್ಕಾರ ಎಚ್ಚರದ ಹೆಜ್ಜೆ ಇಡಬಹುದು. ಹಾಗಾದರೆ, ಜಿಯೋ ಪಾಲಿಟಿಕ್ಸ್‌ನಲ್ಲಿ ಶಕ್ತಿ ಸಮತೋಲನ ಎಂದರೇನು? ಅದರ ಸಮೀಕರಣ ಈಗ ಹೇಗೆ ಬದಲಾಗುತ್ತಿದೆ? ಇದರಲ್ಲಿ ಭಾರತದ ಪಾತ್ರ ಇದೆಯೇ? ಎನ್ನುವ ಪ್ರಶ್ನೆಗಳು ಕುತೂಹಲಕರ. ಸರಳವಾಗಿ ಹೇಳುವುದಾದರೆ, ಶಕ್ತಿ ಸಮತೋಲನ ಎಂಬುದು ಜಾಗತಿಕ ಮಟ್ಟದಲ್ಲಿ ಯಾವುದೇ ಒಂದು ದೇಶ ಅಥವಾ ಬಣವು ಇಡೀ ವಿಶ್ವದ ಮೇಲೆ ಸಂಪೂರ್ಣ ಏಕಾಧಿಪತ್ಯ (Hegemony) ಸಾಧಿಸದಂತೆ ತಡೆಯುವ ಒಂದು ರಾಜಕೀಯ ವ್ಯವಸ್ಥೆಯಾಗಿದೆ.

ಇತಿಹಾಸದುದ್ದಕ್ಕೂ ಪ್ರಮುಖ ರಾಷ್ಟ್ರಗಳು ಸಮಸಮ ಎನ್ನುವ ಮಿಲಿಟರಿ ಬಲ, ಆರ್ಥಿಕ ಪ್ರಭಾವ, ತಂತ್ರಜ್ಞಾನ ಮತ್ತು ರಾಜತಂತ್ರದ ಮೂಲಕ ತಮ್ಮ ಶಕ್ತಿಯನ್ನು, ಪ್ರಭಾವವನ್ನು ಬೀರಲು ಅಥವಾ ದೊಡ್ಡಣ್ಣನಾಗಲು ಪ್ರಯತ್ನಿಸುತ್ತ ಬಂದಿವೆ. ಇಬ್ಬರು ಬಲಿಷ್ಠ ರಾಷ್ಟ್ರಗಳು ಅಥವಾ ಎರಡು ಬಣಗಳು (ಉದಾಹರಣೆಗೆ: ಶೀತಲ ಸಮರದ ಕಾಲದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ) ಒಂದಕ್ಕೊಂದು ಸಮಾನವಾಗಿ ನಿಂತು ಜಗತ್ತಿನಲ್ಲಿ ಯಾರೂ ಅತಿಯಾದ ಪ್ರಭಾವ ತೋರದಂತೆ ನಿಯಂತ್ರಿಸುವುದೇ ಶಕ್ತಿ ಸಮತೋಲನದ ಮೂಲತತ್ವ.

ಕಳೆದ ಕೆಲವು ದಶಕಗಳಿಂದ ಜಾಗತಿಕ ಶಕ್ತಿ ಸಮತೋಲನದಲ್ಲಿ ಮಹತ್ವದ ಬದಲಾವಣೆ ಗಳಾಗುತ್ತಿವೆ. 1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ ಅಮೆರಿಕ ಜಗತ್ತಿನ ಏಕೈಕ ‘ದೊಡ್ಡಣ್ಣ’ನಾಗಿ ( Super power) ಮೆರೆಯಿತು. ಅಮೆರಿಕ ಹೇಳಿದ್ದೇ ವೇದ, ಮಾಡಿದ್ದೇ ಕಾನೂನು ಎನ್ನುವಂತಿತ್ತು. ಈ ಏಕಧ್ರುವ ಈಗ ಕೊನೆಯಾಗುತ್ತಿದೆ.

ಕಳೆದ ಎರಡು ದಶಕಗಳಲ್ಲಿ ಚೀನಾ ತನ್ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಅಪಾರವಾಗಿ ಹೆಚ್ಚಿಸಿಕೊಂಡು ಅಮೆರಿಕಕ್ಕೆ ನೇರ ಸವಾಲಾಗಿ ನಿಂತಿತು. ಇಂದು ಬಹುಧ್ರುವಗಳ ಜಗತ್ತು ( Multipolar World) ಉದಯಿಸಿದೆ. ಸಮಕಾಲೀನ ಪ್ರಪಂಚ ಇಬ್ಬರ ನಡುವಿನ ಕದನವಾಗಿಲ್ಲ. ಬದಲಿಗೆ ಭಾರತ, ಯುರೋಪಿಯನ್ ಒಕ್ಕೂಟ, ಜಪಾನ್, ಬ್ರಿಕ್ಸ್ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾದ ಪ್ರಭಾವಿ ದೇಶಗಳು ತಮ್ಮದೇ ಆದ ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಈಗ ಅಧಿಕಾರವು ಒಂದೇ ಕಡೆ ಕೇಂದ್ರೀಕೃತವಾಗಿಲ್ಲ, ಬದಲಿಗೆ ಹಂಚಿಹೋಗಿದೆ.

ಉಕ್ರೇನ್-ರಷ್ಯಾ ಯುದ್ಧ, ಪಶ್ಚಿಮ ಏಷ್ಯಾದ ಅಸ್ಥಿರತೆ ಮತ್ತು ಪೂರೈಕೆ ಸರಪಳಿಯ (Supply Chain) ಬಿಕ್ಕಟ್ಟುಗಳು ಹಳೆಯ ಸಮೀಕರಣಗಳನ್ನು ತಲೆಕೆಳಗಾಗಿಸಿವೆ. ಅಮೆರಿಕದ ಪ್ರಭಾವ ಕುಸಿ ಯುತ್ತಿದ್ದು, ಹೊಸ ಹೊಸ ಪ್ರಾದೇಶಿಕ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಈಗಿನ ಬದಲಾಗುತ್ತಿರುವ ಶಕ್ತಿ ಸಮತೋಲನದಲ್ಲಿ ಭಾರತವು ಕೇವಲ ಮೂಕ ಪ್ರೇಕ್ಷಕನಾಗಿ ಉಳಿದಿಲ್ಲ. ಬದಲಿಗೆ ಆಟದ ದಿಕ್ಕನ್ನೇ ಬದಲಿಸಬಲ್ಲ ಪ್ರಮುಖ ಆಟಗಾರನಾಗಿ, ಪ್ರಭಾವಿಯಾಗಿದೆ. ಇದಕ್ಕೆ ಪ್ರಮುಖ ಕಾರಣವೇನು ಗೊತ್ತೇ?! ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ತನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬೇರಾವುದೇ ದೇಶದ ಹಂಗಿಲ್ಲ. ನಾವು ರಷ್ಯಾದಿಂದ ತೈಲವನ್ನು ಖರೀದಿಸುವ ಸ್ವಾತಂತ್ರ್ಯವನ್ನೂ ಇಟ್ಟುಕೊಂಡಿದ್ದೇವೆ. ಅದೇ ಸಮಯದಲ್ಲಿ ಅಮೆರಿಕದೊಂದಿಗೆ ‘ಕ್ವಾಡ್’ ಒಪ್ಪಂದದಲ್ಲಿ ಭಾಗಿಯಾಗಿ ಚೀನಾವನ್ನು ಎದುರಿಸುತ್ತದೆ. ಭಾರತದ ಈ ‘ಎರಡೂ ಕಡೆ ಸಮತೋಲನ ಕಾಯ್ದುಕೊಳ್ಳುವ’ ನೀತಿಯೇ ಜಾಗತಿಕ ಶಕ್ತಿ ಸಮತೋಲನಕ್ಕೆ ಆಧಾರವಾಗಿದೆ.

ಜಗತ್ತಿಗೆ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ, ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯವು ಜಾಗತಿಕ ಆರ್ಥಿಕತೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತಿದೆ. ಇದು ಕೇವಲ ವ್ಯಾಪಾರವಲ್ಲ, ದೊಡ್ಡ ಭೌಗೋಳಿಕ ರಾಜಕೀಯ ಅಸ್ತ್ರವಾಗಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಮುಂಚೂಣಿ ನಾಯಕನಾಗಿ ಭಾರತವು ಇಂದು ಅಮೆರಿಕ ಮತ್ತು ಪಶ್ಚಿಮದ ದೇಶಗಳ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸುತ್ತಿದೆ. ವಿಶ್ವಸಂಸ್ಥೆ ಅಥವಾ ಜಿ-20 ವೇದಿಕೆಗಳಲ್ಲಿ ಭಾರತವು ಬಡ ಮತ್ತು ಮಧ್ಯಮ ಆದಾಯದ ದೇಶಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿದೆ.

ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿ, ದಿಲ್ಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಯುದ್ಧಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಿವೆ. ಇಂಥ ಕಷ್ಟಕರ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ಭರವಸೆಯ ದೀಪ ( (Beacon of Hope ) ಎಂದು ಪೋಲೆಂಡ್ ಪ್ರಧಾನಿ ಬಣ್ಣಿಸಿದ್ದಾರೆ.

ಅಲ್ಲದೆ ಮೋದಿಯವರಂತಹ ಪ್ರಭಾವಿ ನಾಯಕನನ್ನು ತಮ್ಮ ಸ್ನೇಹಿತ ಎಂದು ಕರೆಯಲು ಹೆಮ್ಮೆಪಡುವುದಾಗಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಯುರೋಪಿಯನ್ ಒಕ್ಕೂಟದ ಪ್ರಮುಖ ನಾಯಕರೊಬ್ಬರು ಭಾರತವನ್ನು ಈ ರೀತಿಯಲ್ಲಿ ಶ್ಲಾಘಿಸಿರುವುದು, ಜಾಗತಿಕ ರಾಜಕಾರಣ ದಲ್ಲಿ ಭಾರತದ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

ರಷ್ಯಾ-ಉಕ್ರೇನ್ ಯುದ್ಧ ದಂತಹ ಸೂಕ್ಷ್ಮ ಸನ್ನಿವೇಶಗಳಲ್ಲೂ ಭಾರತವು ಯಾವುದೇ ಒಂದು ಪಕ್ಷದ ಪರವಾಗಿ ನಿಲ್ಲದೆ, ಶಾಂತಿ ಮತ್ತು ಸಂಧಾನದ ಮಾತುಕತೆಗೆ ಒತ್ತು ನೀಡುತ್ತಿರುವುದನ್ನು ಪಾಶ್ಚಿಮಾತ್ಯ ದೇಶಗಳು ಕೂಡ ಗೌರವಿಸುತ್ತಿವೆ ಮತ್ತು ಭಾರತದ ಜಾಗತಿಕ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ಉದ್ಯಮಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಸಂಸ್ಥೆಯ ಜಾಮ್‌ನಗರ ತೈಲ ಶುದ್ಧೀಕರಣ ಘಟಕವು ವಿಶ್ವದ ಅತ್ಯಂತ ದೊಡ್ಡದು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇಲ್ಲಿ ಯಾವುದೇ ಗುಣಮಟ್ಟದ, ಅಂದರೆ ಹೆಚ್ಚು ಅಥವಾ ಕಡಿಮೆ ಕಲ್ಮಶವಿರುವ, ಬೇರೆ ಬೇರೆ ದೇಶಗಳ ಕಚ್ಚಾ ತೈಲವನ್ನು ಸುಲಭವಾಗಿ ಶುದ್ಧೀಕರಿಸಬಹುದು. ಈ ವಿಶೇಷ ಸಾಮರ್ಥ್ಯದಿಂದಾಗಿ ರಿಲಯನ್ಸ್ ಸಂಸ್ಥೆಯು ಕೇವಲ ಒಂದೇ ಕಡೆಗೆ ಅವಲಂಬಿತವಾಗದೇ, ಬೇರೆ ಬೇರೆ ದೇಶಗಳಿಂದ ತೈಲವನ್ನು ತರಿಸಿಕೊಳ್ಳಲು ಸಾಧ್ಯವಾಯಿತು. ‌

ಇದರಿಂದ ಪ್ರಸ್ತುತ ಬಿಕ್ಕಟ್ಟನ್ನು ಯಶಸ್ವಿಯಾಗಿ ಎದುರಿಸಲು ಮತ್ತು ಮುಂದೆಯೂ ಎದುರಿಸಲು ಸಾಧ್ಯವಾಗುತ್ತದೆ. ಹೀಗಾಗಿಯೇ ಅಮೆರಿಕದ ವಿದೇಶಾಂಗ ಸಚಿವರೂ ಅಂಬಾನಿಯವರನ್ನು ಭೇಟಿಯಾಗಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ʼನ ವಕ್ತಾರೆ ಜೂಲಿ ಕೊಜಾಕ್ ಹೀಗೆನ್ನುತ್ತಾರೆ- ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 7.8 ರಷ್ಟು ವೃದ್ಧಿಸಿದೆ.

ಇದು ನಮ್ಮ ಸಿಬ್ಬಂದಿಯ ಮತ್ತು ಇತರರ ಅಂದಾಜಿಗಿಂತ ಹೆಚ್ಚಾಗಿತ್ತು. ಸೇವಾ ವಲಯ ಮತ್ತು ರಫ್ತು ವಲಯದಲ್ಲಿ ನಿರೀಕ್ಷೆಗಿಂತ ಬಲವಾದ ಚಟುವಟಿಕೆಗಳು ಕಂಡುಬಂದಿದ್ದೇ ಈ ಆಶ್ಚರ್ಯಕರ ಬೆಳವಣಿಗೆಗೆ ಕಾರಣ. ತೈಲ ದರದ ಹೊಡೆತದ ನಡುವೆಯೂ ಭಾರತವು ಜಗತ್ತಿನ ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿ ಮುಂದುವರಿದಿದೆ. ಇನ್ನೇನು ಬೇಕು ಸರ್ಟಿಫಿಕೇಟ್‌.

ಕೇಶವ ಪ್ರಸಾದ್​ ಬಿ

View all posts by this author