ವಿಶ್ಲೇಷಣೆ
ಡಾ.ಸತೀಶ್ ಕೆ.ಪಾಟೀಲ
ದೇಶಾದ್ಯಂತ ಕುತೂಹಲವನ್ನು ಹುಟ್ಟು ಹಾಕಿರುವ ಪಶ್ಚಿಮ ಬಂಗಾಳ ಮತ್ತು ತಮಿಳು ನಾಡು ವಿಧಾನಸಭಾ ಚುನಾವಣೆಗಳಿಗೆ ವೇದಿಕೆ ಸಿದ್ಧವಾಗಿದೆ. 294 ಸದಸ್ಯಬಲದ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ತೀವ್ರಗೊಂಡಿದೆ. ಇಲ್ಲಿ ಸತತ 15 ವರ್ಷಗಳಿಂದ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಈ ಸಲವೂ ಮತ್ತೆ ಗದ್ದುಗೆಯನ್ನು ಅಪ್ಪುವ ಹುಮ್ಮಸ್ಸಿನಲ್ಲಿದ್ದಾರೆ.
ಮತ್ತೊಂದೆಡೆ, ಈ ರಾಜ್ಯದಲ್ಲಿ ಹೇಗಾದರೂ ಮಾಡಿ ಸಿಂಹಾಸನವನ್ನು ದಕ್ಕಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ‘ಕೇಸರಿಪಕ್ಷ’ ಬಿಜೆಪಿ. ಟಿಎಂಸಿ ಪಕ್ಷವು ಅಧಿಕಾರವನ್ನು ಹಿಡಿಯುವುದಕ್ಕೆ ಅನುಕೂಲಕರವಾಗಿರುವ ಅಂಶಗಳತ್ತ ಗಮನ ಹರಿಸಿದಾಗ ಎದ್ದು ಕಾಣುವಂಥದ್ದು ಸಿಎಂ ಮಮತಾ ಬ್ಯಾನರ್ಜಿಯವರು ಈ ರಾಜ್ಯದಲ್ಲಿ ಹೊಂದಿರುವ ಜನಪ್ರಿಯತೆ. ದೀದಿಯ ವರ್ಚಸ್ಸನ್ನು ಸರಿಗಟ್ಟುವವರು ಅಥವಾ ಹಿಂದಿಕ್ಕುವವರು ವಿರೋಧಿ ಪಾಳಯದಲ್ಲಿ ಇಲ್ಲದಿರುವುದು ಟಿಎಂಸಿಗೆ ಪ್ಲಸ್ ಪಾಯಿಂಟ್ ಆಗಿದೆ.
ಮಮತಾ ಅವರು ಜಾರಿಗೆ ತಂದ ‘ಕನ್ಯಾಶ್ರೀ’ ಯೋಜನೆ, 100 ದಿನಗಳ ಉದ್ಯೋಗ ಯೋಜನೆ ಮತ್ತು ಕೂಲಿ ಕಾರ್ಮಿಕರ ವೇತನದಲ್ಲಿ ಮಾಡಿದ ಹೆಚ್ಚಳ, ಈ ಚುನಾವಣೆಗೆ ಮುಂಚೆ ಮಹಿಳೆಯರ ಮಾಸಿಕ ಭತ್ಯೆಯನ್ನು 1500 ರುಪಾಯಿಗೆ ಏರಿಕೆ ಮಾಡಿದ್ದು, 21 ರಿಂದ 41 ವರ್ಷದವರೆಗಿನ ನಿರುದ್ಯೋಗಿಗಳಿಗೆ ಮಾಸಿಕ 1500 ರು. ಭತ್ಯೆ ನೀಡುವ ಯೋಜನೆಯ ಘೋಷಣೆ ಇವೆಲ್ಲವೂ ಜನರ ಗಮನ ಸೆಳೆದಿವೆ.
ಇದನ್ನೂ ಓದಿ: Dr Sathish K Patil Column: ರಷ್ಯಾ ಮಾಡಿದ ಸಹಾಯವನ್ನು ಭಾರತ ಮರೆಯುವಂತಿಲ್ಲ
ಇಷ್ಟು ಮಾತ್ರವಲ್ಲದೆ, ಅರ್ಚಕರು ಮತ್ತು ಮೌಲ್ವಿಗಳಿಗೆ ಮಾಸಿಕ 2000 ರು. ಗೌರವಧನ ನೀಡುವ, ಶಿಕ್ಷಕರು ಸೇರಿದಂತೆ ಸರಕಾರಿ ನೌಕರರಿಗೆ, ಪಿಂಚಣಿದಾರರಿಗೆ ಬಾಕಿ ಇರುವ ತುಟ್ಟಿಭತ್ಯೆಯನ್ನು ಪಾವತಿಸುವ ಘೋಷಣೆಯೂ ಮಮತಾರಿಂದ ಹೊಮ್ಮಿದೆ. ಈ ಉಪಕ್ರಮಗಳು ಈ ಬಾರಿಯ ಚುನಾವಣೆಯಲ್ಲಿ ತಮಗೆ ಲಾಭವನ್ನು ತರಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಮಮತಾ ಬ್ಯಾನರ್ಜಿ ಹಾಗೂ ಅವರ ಟಿಎಂಸಿ ಪಕ್ಷದವರು.
ಇನ್ನು ತೀವ್ರವಾಗಿರುವ ಆಡಳಿತ-ವಿರೋಧಿ ಅಲೆಯನ್ನು ತಗ್ಗಿಸಲು 74 ಹಾಲಿ ಶಾಸಕರಿಗೆ ಈ ಸಲ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಚುನಾವಣಾ ತಂತ್ರಗಾರಿಕೆ ಮೆರೆದಿರುವ ಮಮತಾ, ಈ ಅಂಶವು ತಮಗೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.
ಜತೆಗೆ, ರಾಜ್ಯದಲ್ಲಿರುವ ಶೇ.30ರಷ್ಟು ಮುಸ್ಲಿಂ ಮತಗಳು ತಮ್ಮ ಪಕ್ಷಕ್ಕೇ ‘ಕಟ್ಟಿಟ್ಟಬುತ್ತಿ’ ಆಗಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಬಹುದು ಎಂಬ ಆಶಾಭಾವನೆಯೂ ಅವರಲ್ಲಿ ಸುಳಿದಾಡುತ್ತಿದೆ. ಈ ಸಲ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ನಡೆದಿದ್ದು, ಇದರ ಲಾಭ ಯಾರಿಗೆ ಆಗಬಹುದು ಎನ್ನುವ ಕುತೂಹಲ ಇದ್ದೇ ಇದೆ.
‘ಬಂಗಾಲದ ಅಸ್ಮಿತೆ’ ಎಂಬ ಸ್ಥಳಿಯ ಚರ್ಚಾವಿಷಯವನ್ನು ಮತ್ತೆ ತಮ್ಮ ಪ್ರಚಾರದ ಅಸ್ತ್ರ ವಾಗಿಸಿಕೊಂಡಿರುವ ಮಮತಾ, ಇದು ಚುನಾವಣೆಯಲ್ಲಿ ತಮಗೆ ‘ಪ್ಲಸ್’ ಆಗಬಹುದು ಎಂಬ ಭರವಸೆಯನ್ನು ಹೊಂದಿದ್ದಾರೆ. ಎದುರಾಳಿ ಪಕ್ಷಗಳು ಬಂಗಾಳದ ಉದ್ದಗಲಕ್ಕೂ ಟಿಎಂಸಿ ರೀತಿಯ ಗಟ್ಟಿನೆಲೆಯನ್ನು ಹೊಂದಿಲ್ಲದಿರುವುದೂ ತಮಗೆ ಪ್ರಯೋಜನಕಾರಿ ಯಾಗಬಲ್ಲದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಮಮತಾ ಬ್ಯಾನರ್ಜಿ.
ಇದು ನಿಜವೂ ಹೌದು. ಏಕೆಂದರೆ, ಒಂದು ಕಾಲಘಟ್ಟದಲ್ಲಿ ರಾಜ್ಯದಲ್ಲಿ ಭಾರಿ ಪ್ರಭಾವ ಹೊಂದಿದ್ದ ಎಡಪಕ್ಷಗಳ ಪ್ರಾಬಲ್ಯವೀಗ ಕ್ಷೀಣಿಸಿದೆ. ಆದರೆ, ಅವಕ್ಕೆ ಮೀಸಲಾಗಿದ್ದ ಮತಗಳು ಈಗ ಬಿಜೆಪಿಯೆಡೆಗೆ ನಿಧಾನವಾಗಿ ವಾಲುತ್ತಿರುವುದು ಮಮತಾರ ನಿದ್ರೆಗೆಡಿಸಿದೆ.
ಅದೂ ಅಲ್ಲದೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಅವರು ಭವಾನಿಪುರದ ಜತೆಗೆ ನಂದಿಗ್ರಾಮದಲ್ಲೂ ಸ್ಪರ್ಧಿಸಿದ್ದರು ಮತ್ತು ನಂದಿಗ್ರಾಮದಲ್ಲಿ ಅವರ ಪ್ರತಿಸ್ಪರ್ಧಿ ಯಾಗಿದ್ದ ಸುವೇಂದು ಅಧಿಕಾರಿ ಮಮತಾರನ್ನು ಸೋಲಿಸಿದ್ದರು. ಇವರು ಒಂದು ಕಾಲದಲ್ಲಿ ಮಮತಾರ ಆಪ್ತರಾಗಿದ್ದರು ಎಂಬುದು ವಿಶೇಷ. ಈ ಚುನಾವಣೆಯಲ್ಲೂ ಅವರು ತಮ್ಮ ವಿರುದ್ಧ ಸ್ಪರ್ಧಿಸುತ್ತಿರುವುದು ಮಮತಾರ ಚಿಂತೆಗೆ ಕಾರಣವಾಗಿದೆ.
ಅಲ್ಲದೆ, ಈಗ ರಾಜ್ಯದಲ್ಲಿ ನಿಧಾನವಾಗಿ ಬಲಗೊಳ್ಳುತ್ತಿರುವ ಬಿಜೆಪಿಯು ಮಮತಾರಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಿಂದುತ್ವದ ಅಜೆಂಡಾವನ್ನು ಇಟ್ಟುಕೊಂಡಿರುವ ಮತ್ತು ಕೇಂದ್ರದಲ್ಲಿ ಅಧಿಕಾರ ಗದ್ದುಗೆಯಲ್ಲಿರುವ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಅಬ್ಬರದ ಪ್ರಚಾರವನ್ನು ಮಾಡುತ್ತಿದೆ. ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಬಂಗಾಳ ವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳುತ್ತ ಬಂದಿರುವ ಮೋದಿಯವರ ತಂತ್ರಗಾರಿಕೆಯು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಫಲಿತಾಂಶವೇ ನಿರ್ಣಯಿಸಬೇಕು.
ಒಟ್ಟಾರೆಯಾಗಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್ ಪಕ್ಷದ ಕಡೆಗೇ ಫಲಿತಾಂಶದ ತಕ್ಕಡಿ ವಾಲುವ ಸಾಧ್ಯತೆಗಳು ಹೆಚ್ಚಾಗಿವೆ. ಈಗ ತಮಿಳುನಾಡಿನ ಕಡೆಗೆ ಕೊಂಚ ಗಮನ ಹರಿಸೋಣ. 234 ಸ್ಥಾನಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಈ ಸಲವೂ ಮತದಾರರು ಎಂ.ಕೆ. ಸ್ಟಾಲಿನ್ ನೇತೃತದ ಆಡಳಿತಾರೂಢ ಡಿಎಂಕೆ ಪಕ್ಷಕ್ಕೇ ‘ಉಘೇ ಉಘೇ’ ಎನ್ನುವ ಲಕ್ಷಣವೇ ಎದ್ದು ಕಾಣುತ್ತಿದೆ.
ಸ್ಟಾಲಿನ್‌ರಿಗೆ ಇರುವ ಜನಬೆಂಬಲ ಈ ಬಾರಿಯೂ ಪಕ್ಷಕ್ಕೆ ವರವಾಗಬಹುದು. ‘ರೈತರ ಸಾಲ ಮನ್ನಾ’, ‘ಪ್ರತಿವರ್ಷ ಗೃಹಿಣಿಯರಿಗೆ 6000 ರು. ಸಹಾಯಧನ’, ‘ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಪ್ರತಿವರ್ಷ 10 ಲಕ್ಷ ಉದ್ಯೋಗಸೃಷ್ಟಿ’ ಮುಂತಾದ ಘೋಷಣೆಗಳ ಮೂಲಕ ಕಳೆದ ಬಾರಿ ಅರ್ಧಿಕಾರಕ್ಕೆ ಬಂದಿದ್ದರು ಸ್ಟಾಲಿನ್; ಈ ಸಲ ಅವರು ಚುನಾವಣೆಗೆ ಮೊದಲೇ, ಪ್ರತಿ ಮಹಿಳೆಗೆ 3 ಸಾವಿರ ರು. ಸಹಾಯಧನದ ಜತೆಗೆ ‘ಬೇಸಗೆ ಖರ್ಚು’ ಎಂಬ ಹಣೆಪಟ್ಟಿ ಯಡಿ 2 ಸಾವಿರ ರು. ನೀಡುವ ಮೂಲಕ ಮಹಿಳಾ ಮತದಾರರ ಬುಟ್ಟಿಗೆ ಕೈಹಾಕಿದ್ದಾರೆ.
ಈ ಉಪಕ್ರಮವು ಚುನಾವಣೆಯಲ್ಲಿ ತಮ್ಮ ಕೈಹಿಡಿಯಲಿದೆ ಎಂಬ ಲೆಕ್ಕಾಚಾರ ಡಿಎಂಕೆ ಪಕ್ಷದ ಹುರಿಯಾಳುಗಳದ್ದು. ಹಾಗೆ ನೋಡಿದರೆ, ‘ಅಮ್ಮ’ ಹಣೆಪಟ್ಟಿಯಡಿ ದೇಶದಲ್ಲಿ ಇಂಥ ಅಗ್ಗದ ಜನಪ್ರಿಯ ಯೋಜನೆಗಳನ್ನು ದೇಶದಲ್ಲಿ ಮೊದಲು ಜಾರಿಗೆ ತಂದ ಕೀರ್ತಿ ಎಐಎಡಿ ಎಂಕೆ ಪಕ್ಷದ ಜಯಲಲಿತಾ ಅವರದ್ದು; ಅವರ ಈ ನಡೆಯನ್ನು ಈಗ ಡಿಎಂಕೆ ಪಕ್ಷವು ಅನುಕರಿಸುತ್ತಿದೆಯಷ್ಟೇ!
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಎಐಎಡಿಎಂಕೆ ಪಕ್ಷವು ಹೋಳಾ ಗಿದೆ. ಒಂದು ಕಾಲಕ್ಕೆ ಜಯಲಲಿತಾರ ಆಪ್ತ ಎನಿಸಿಕೊಂಡಿದ್ದ, ಸಿಎಂ ಗಾದಿಯನ್ನೂ ಅಲಂಕರಿಸಿದ್ದ ಪನ್ನೀರಸೆಲ್ವಂ ಅವರು ಎಐಎಡಿಎಂಕೆಯನ್ನು ತೊರೆದು ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವನ್ನು ಸೇರಿದ್ದಾರೆ. ಪನ್ನೀರಸೆಲ್ವಂರ ಬೆಂಬಲಿಗ ಹಾಗೂ ಮಾಜಿ ಸಚಿವ ಆರ್.ಮೈತಿಲಿಂಗಂ ಮತ್ತು ಇನ್ನೂ ಅನೇಕರು ಅವರ ಹಿಂದೆಯೇ ಹೆಜ್ಜೆ ಹಾಕಿರುವು ದರಿಂದ ಈ ಸಲದ ಚುನಾವಣೆಯಲ್ಲಿ ಡಿಎಂಕೆಗೆ ‘ಆನೆಬಲ’ ಬಂದಂತಾಗಿದೆ. ಈ ಬೆಳವಣಿಗೆ ಯು ಸಹಜವಾಗಿ ಎಐಎಡಿಎಂಕೆಗೆ ಆತಂಕವನ್ನು ಉಂಟುಮಾಡಿದೆ.
ಸಾಲದೆಂಬಂತೆ, ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಡಿಎಂಕೆ ಜತೆಗೆ ಈ ಬಾರಿ ಚುನಾವಣಾ ಮೈತ್ರಿಯನ್ನು ಮಾಡಿಕೊಂ ಡಿರುವುದರಿಂದ, ಅವರನ್ನು ಆರಾಧಿಸುತ್ತಿದ್ದ ಭಿಮಾನಿ ವರ್ಗವು ಈ ಮೈತ್ರಿಕೂಟವನ್ನು ಬೆಂಬಲಿಸುವ ಸಾಧ್ಯತೆಯನ್ನು ಅಲ್ಲಗಳೆಯ ಲಾಗದು.
ಇನ್ನು ಜಯಲಲಿತಾರ ಆಪ್ತಗೆಳತಿ ಶಶಿಕಲಾ ಅವರು ಹೊಸದಾಗಿ ಸ್ಥಾಪಿಸಿರುವ ಪಕ್ಷವೂ ಎಐಎಡಿಎಂಕೆ ಪಕ್ಷದ ಮತಗಳನ್ನು ವಿಭಜಿಸಲಿರುವುದರಿಂದ ಅದು ಡಿಎಂಕೆಯ ಪಾಲಿಗೆ ಪರೋಕ್ಷವಾಗಿ ಲಾಭ ತರಬಹುದು ಎಂಬ ಲೆಕ್ಕಾಚಾರವೂ ಇದೆ. ಇನ್ನು ಜಯಲಲಿತಾರ ಅನುಪಸ್ಥಿತಿಯಂತೂ ಎಐಎಡಿಎಂಕೆ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ; ಅವರಿಗಿದ್ದ ಜನಪ್ರಿಯತೆ ಪಕ್ಷದ ಈಗಿನ ಯಾವ ನಾಯಕರಲ್ಲೂ ಇಲ್ಲ. ಪಕ್ಷದ ಈಗಿನ ನಾಯಕ ಪಳನಿಸ್ವಾಮಿ ಅವರು ತಮಿಳುನಾಡಿನಲ್ಲಿ ವ್ಯಾಪಕ ಜನಪ್ರಿಯತೆಯನ್ನು ಹೊಂದಿಲ್ಲ.
ಅಲ್ಪಸಂಖ್ಯಾತ ಮುಸ್ಲಿಮರ ಮತಗಳೂ ಡಿಎಂಕೆಯ ಕಡೆಗೇ ಬಹುತೇಕ ವಾಲುತ್ತವೆ ಎಂಬ ನಿರೀಕ್ಷೆಯಿದೆ. ಈ ಎಲ್ಲ ಬೆಳವಣಿಗೆಗಳು ಸ್ಟಾಲಿನ್ ನೇತೃತ್ವದ ಡಿಎಂಕೆಯಲ್ಲಿ ಮತ್ತಷ್ಟು ಹುರುಪು ತುಂಬಲಿದೆ ಮತ್ತು ಸಿಂಹಾಸನವನ್ನು ಮತ್ತೊಮ್ಮೆ ಅಪ್ಪುವುದಕ್ಕೆ ಅದು ಕಾರಣ ವಾಗಲಿದೆ ಎನ್ನಲಾಗುತ್ತಿದೆ.
ಹೊಸದಾಗಿ ಸ್ಥಾಪನೆಯಾಗಿ ಅಬ್ಬರವನ್ನು ಮಾಡುತ್ತಿದ್ದರೂ ‘ರಾಜಕೀಯವಾಗಿ’ ಇನ್ನೂ ಅಂಬೆಗಾಲು ಇಡುತ್ತಿರುವ ಚಿತ್ರನಟ ‘ದಳಪತಿ’ ವಿಜಯ್ ಅವರ ‘ಟಿವಿಕೆ’ ಪಕ್ಷವು ಈ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ಕಾಲವಷ್ಟೇ ಹೇಳಬಲ್ಲದು.
ಸದ್ಯಕ್ಕೇನೋ ವಿಜಯ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರೂ, ಅವು ‘ಮತಗಳಾಗಿ’ ಪರಿವರ್ತನೆ ಹೊಂದಬೇಕಲ್ಲವೇ? ಒಂದೊಮ್ಮೆ ಅದು ಕೈಗೂಡಿದಲ್ಲಿ ತಮಿಳುನಾಡಿನಲ್ಲಿ ‘ಟಿವಿಕೆ’ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮ ಬಹುದು. ಈ ಕಾರಣಕ್ಕಾಗಿಯೇ ಬಿಜೆಪಿಯು ಚುನಾವಣಾ ಮೈತ್ರಿಗಾಗಿ ವಿಜಯ್ ಅವರಿಗೆ ಗಾಳ ಹಾಕುತ್ತಿದೆ ಎನ್ನಲಾಗುತ್ತಿದೆ.
ಆದರೆ ಇಂಥ ಲೆಕ್ಕಾಚಾರಗಳೆಲ್ಲವೂ ಕೈಗೂಡುವುದು ಅಂದುಕೊಂಡಷ್ಟು ಸುಲಭವಲ್ಲ; ಪ್ರತಿಪಕ್ಷಗಳಲ್ಲಿ ಹೀಗೆ ಒಮ್ಮತ ಇಲ್ಲದಿರುವುದು ಸ್ಟಾಲಿನ್ನರ ಡಿಎಂಕೆಗೆ ವರವಾಗುವ ಸಾಧ್ಯತೆ ಯಿದೆ.
ಹಾಗೆ ನೋಡಿದರೆ, ಕಾಂಗ್ರೆಸ್ ಮತ್ತು ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳು ತಮಿಳುನಾಡಿ ನಲ್ಲಿ ಮೊದಲಿನಿಂದಲೂ ‘ಆಟಕ್ಕುಂಟು, ಲೆಕ್ಕಕ್ಕಿಲ್ಲ’ ಎನ್ನುವಂತೆಯೇ ಇರುವುದು; ಪ್ರಾದೇಶಿಕ ಪಕ್ಷಗಳ ಅಬ್ಬರವೇ ಇಲ್ಲಿ ಜಾಸ್ತಿ. ಆದರೂ ಈ ಬಾರಿ ಬಿಜೆಪಿಯು ತಮಿಳುನಾಡಿ ನಲ್ಲಿ ಏನಾದರೂ ‘ವ್ಯೂಹಾತ್ಮಕ ಕಾರ್ಯತಂತ್ರ’ವನ್ನು ಮೆರೆಯಬಹುದಾ ಎಂಬ ಸಂಗತಿ ಕುತೂಹಲವನ್ನು ಹುಟ್ಟುಹಾಕಿದೆ.
ಒಟ್ಟಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಪರಸ್ಪರ ತೊಡೆ ತಟ್ಟುತ್ತಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು ‘ಏಕಮೇವಾದ್ವಿತೀಯನಾಗಿ’ ಮೆರೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ಮತದಾರ ಪ್ರಭುಗಳು ಯಾರಿಗೆ ಜೈಕಾರ ಹಾಕಲಿದ್ದಾರೆ ಎಂಬು ದನ್ನು ಕಾಣಲು ಮೇ ತಿಂಗಳ 4ರವರೆಗೆ ಕಾಯಲೇಬೇಕು...
(ಲೇಖಕರು ಪ್ರಾಧ್ಯಾಪಕರು ಹಾಗೂ ರಾಜಕೀಯ ವಿಶ್ಲೇಷಕರು)